ಕೆಂಚನೂರು ಕವಿತೆಗಳು
ಒಲಿದ ಸ್ವರಗಳು
ಎನ್. ಶಂಕರ ಕೆಂಚನೂರು
ಕನ್ನಡದ ಮಹತ್ವದ ಯುವ ಕವಿಯಾಗಿ ಗುರುತಿಸಿಕೊಂಡಿರುವ ಎನ್. ಶಂಕರ ಕೆಂಚನೂರು ಕುಂದಾಪುರ ಮೂಲದವರು. ಸಾಮಾಜಿಕ ಜಾಲತಾಣಗಳ ಮೂಲಕವೇ ಬೆಳಕಿಗೆ ಬಂದ ಪ್ರತಿಭಾವಂತ ಕವಿ. ವೃತ್ತಿಯಲ್ಲಿ ಸಣ್ಣ ಉದ್ದಿಮೆಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಇವರ ಮೊದಲ ಕವನ ಸಂಕಲನ ‘ಸಂತೆ ಮುಗಿದ ಬಯಲು’ ಶೀಘ್ರವೇ ಹೊರಬರಲಿದೆ.
1ಕುರುಡನಿಗೆ ಕಣ್ಣು ಕೊಡುವ ಮೊದಲು
ಯೋಚಿಸು;
ಅವನ ಕಲ್ಪನೆಯ ಲೋಕ
ನಿನ್ನ ನಿಜಕ್ಕಿಂತಲೂ
ಚಂದವಿರಬಹುದು
2ಬಸವನ ಹುಳವೇ
ತಲೆಯ ಮೇಲಿನ ಕೀರಿಟ
ಇಲ್ಲೇ ಕಳಚಿಡು.
ಬೆಟ್ಟ ಹತ್ತುವವನು
ಹಗುರವಾಗಿರಬೇಕು
3ಒಂದು ಮಾರು ಹಗ್ಗ ಹೇಗೆಲ್ಲ ಬಳಸಬಹುದೆಂದು
ಅಪ್ಪನಿಗೆ ಮಾತ್ರ ಗೊತ್ತಿತ್ತು
ಅಪ್ಪನ ಕೈಯಲ್ಲಿ ಸದಾ ಹಗ್ಗ, ಇದ್ದಿರುತ್ತಿತ್ತು
ಅಪ್ಪ ಮತ್ತು ಮಗ ಎಂದಿಗೂ ನನ್ನ ಪಾಲಿಗೆ ಬೇರೆ ಬೇರೆ ಪದಗಳಲ್ಲ
ಗದ್ದೆ ಕೆಲಸ ಮುಗಿಸಿ ಮನೆಯಲ್ಲಿನ ದನಕ್ಕೆ ಹುಲ್ಲು ತರಲು
ಮಕ್ಕಳು ತಪ್ಪು ಮಾಡಿದರೆ ಅದನ್ನೇ ಜೋಡು ಮಾಡಿಕೊಂಡು
ಬರೆ ಏಳುವಂತೆ ಬಾರಿಸಲು ಎತ್ತಿಗೆ ಹುಷಾರು ತಪ್ಪಿದಾಗ ಕಾಲು ಕಟ್ಟಿ ಮಲಗಿಸಿ ಇಲಾಜು ಮಾಡಲು
ತುಂಬಾ ಖುಷಿಯಾಗಿದ್ದಾಗ ಮಕ್ಕಳಿಗೆ ಆಡಲೆಂದು ಉಯ್ಯಾಲೆ ಕಟ್ಟಿಕೊಡಲು ಹೀಗೆ ಅಪ್ಪ ಹಗ್ಗವನ್ನು ಬಳಸಲು ಬಗೆಬಗೆಯಾಗಿ ಕಲಿತಿದ್ದರು
ಅಪ್ಪ ಕೊನೆಯ ಸಲ ಹಗ್ಗ ಕಟ್ಟಿದ್ದು
ಮರದ ಕೊಂಬೆಯೊಂದಕ್ಕೆ ಹೇಗೆ ಕಟ್ಟಿದರೆಂದು ನೋಡಿದವರಿಲ್ಲ
ಹಗ್ಗದ ಇನ್ನೊಂದು ತುದಿಯಲ್ಲಿ ಅಪ್ಪ ನೇತಾಡುತ್ತಿದ್ದನಷ್ಟೇ
ಅಪ್ಪನ ಓರಗೆಯವರು ಈಗಲೂ ಹಂಚಿಕೊಳ್ಳುತ್ತಾರೆ ನನ್ನೊಂದಿಗೆ ತೀರಿಸಲಾಗದ ಸಾಲ
ಕುತ್ತಿಗೆ ಹಿಸುಕುವಾಗ ಯಾರೂ ಒದಗದಿದ್ದಾಗ ಅಪ್ಪನಿಗೆ ಒದಗಿದ್ದು ಒಂದು ಮಾರು ಹಗ್ಗ ಮಾತ್ರ
ಈಗಲೂ ಹಗ್ಗ ನೋಡಿದಾಗ ಅಪ್ಪನೂ ಅಪ್ಪನ ನೆನಪಾದಾಗ ಹಗ್ಗವೂ ಜೊತೆಯಲ್ಲೇ ಚಿತ್ರವಾಗುತ್ತದೆ
ಈಗ ಈ ಕವಿತೆಯನ್ನೇ ತೆಗೆದುಕೊಳ್ಳಿ
ಖಂಡಿತವಾಗಿ ನಿಮಗೆ ಈ ಕವಿತೆ ಹಗ್ಗದ ಕುರಿತೋ ಅಪ್ಪನ ಕುರಿತಾಗಿಯೋ ಎನ್ನುವ ಗೊಂದಲ ಹುಟ್ಟಿಸುವ ಹಾಗಿದೆ
ಇಲ್ಲವೇ?
4ಸ್ವಾತಂತ್ರ ಕನಸುವ ಪಂಜರದ ಹಕ್ಕಿ ಬಿಡುಗಡೆಗೊಳಿಸಿದ
ಕೈಗಳ ಒಳ್ಳೆಯತನಕ್ಕೆ ಸೋತು
ಹಾರುವುದನ್ನು ಮರೆತಿದೆ
ಬಂಧನವೆನ್ನುವುದು
ಕೂಡಾ
ಒಮ್ಮಮ್ಮೆ ಸ್ವಾತಂತ್ರ
ಸ್ವಾತಂತ್ರವೂ ಒಮ್ಮಾಮ್ಮೆ ಬಂಧನ
5ಲೋಕ ಹೇಳಿದಂತೆ,
ಉಪವಾಸವೆಂದರೆ ದೇಹ ದಂಡನೆ
ದೇವರಿಗೆ ಹತ್ತಿರವಾಗಲೊಂದು ದಾರಿ ಎದುರಾಳಿಯನ್ನು ಹಣೆಯಲೊಂದು ತಂತ್ರ
ಮತ್ತೆ ಅಹಿಂಸೆಯ ಮಂತ್ರ
ಬದುಕು ಕಲಿಸಿದಂತೆ,
ಉಪವಾಸವೆಂದರೆ..
ಹಸಿವಿನ ವಿರುದ್ಧ ಹೋರಾಟದಲ್ಲಿ ಅಂದಿನ ಸೋಲು ತಿನ್ನಲಿಲ್ಲದೆ ಕಳೆದ ದಿನಕ್ಕೆ ಇನ್ನೊಂದು ದಿನದ ಸೇರ್ಪಡೆ
ಅನ್ನ ಎದುರಿಗಿದ್ದು
ಉಪವಾಸವಿರುವುದು ಎಂದೂ ಕಷ್ಟವೆನಿಸಿರಲಿಲ್ಲ ನನಗೆ
ಅನ್ಯವಿಲ್ಲದೆ ಅನಿವಾರ್ಯ ಉಪವಾಸದ ಅಭ್ಯಾಸ ಮೊದಲಿನಿಂದಲೂ ಇತ್ತು ನನಗೆ ಎಲ್ಲ ಕಳೆದುಕೊಂಡವನ ಕಣ್ಣಲ್ಲಿ ಇಣುಕಿ ನೋಡಿ ಒಮ್ಮೆ ಉಪವಾಸವೆಂದರೇನೆಂದು ತಿಳಿದೀತು
ಕತ್ತಲು ಕಳೆದರೆ ಬೆಳಕಾಗುವ ಭಯದಲ್ಲೇ ಮಲಗಿದ ತಂದೆಯಲ್ಲಿ ಕೇಳಿ ನೋಡಿ
ಒಂದು ದಿನದ ಉಪವಾಸ ವೆಂದರೇನೆಂದು ಹಸಿದ ಹೆಂಡತಿ ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದೆ
ನಿಂತಲ್ಲೇ ಕನಲುವ ಗಂಡಸನ್ನು ಕೇಳಿ ನೋಡಿ
ಉಪವಾಸವೆಂದರೇನೆಂದು ಉತ್ತರ ಸಿಕ್ಕಿದರೆ ತಿಳಿಸಿ
ಮತ್ತೆ ಮಾತಾಡುವ
ನಿಮ್ಮ ಐಷಾರಾಮಿ ಉಪವಾಸದ ಕುರಿತು
6ಸುಂದರ ಕಟ್ಟಡಗಳಲ್ಲಿ ದೇವರು ವಾಸಿಸುವುದಿಲ್ಲ
ಸುಂದರ ಪದಗಳಲ್ಲಿ ಭಾವ ತುಂಬಿರುವುದಿಲ್ಲ
ಮುಸಾಫಿರರು ಮನಸ್ಸು ಹೃದಯ ಹೊಕ್ಕು ಕುಳಿತುಬಿಡುತ್ತಾರೆ
ಆದರೆ ಅಲ್ಲೇ ನೆಲೆಸುವ ಉದ್ದೇಶವಿರುವುದಿಲ್ಲ
ಶಹರದ ತುಂಬ ಮಧುಶಾಲೆಗಳಿವೆ ನಿಜ
ಹಾಗೆಂದು ಇಲ್ಲಿ ಹೃದಯವಂತರೇ ತುಂಬಿದ್ದಾರೆಂದು ಅರ್ಥವಲ್ಲ
ಸಾಕಿ ಸದಾ ನಗುತ್ತಾ ಸುಳಿಯುತ್ತಾಳೆ ನಮ್ಮ ನಡುವೆ
ಅವಳೀಗ ನೋವು ಮರೆತಿದ್ದಾಳೆಂದಲ್ಲ ಏಕಾಂತ ಸಿಗುತ್ತಿಲ್ಲ
ಬೇರು ಒಣಗುತ್ತಿದ್ದರೂ ಗಿಡ ನಗುವ ಹೂ ಅರಳಿಸುತ್ತದೆ
ಕೊಯ್ಯುವ ಕೈಗಳೆಲ್ಲವೂ ನೀರು ಹನಿಸುವ ದಯೆ ತೋರುವುದಿಲ್ಲ.
7ಕಡಲ ಕರೆಯಲ್ಲಿ ಈ ಸಂಜೆ
ಕೆಂಪು ಬಿಸಿಲು ಕೋಲೊಂದನು
ಕದ್ದು ಕಿಸೆಯಲ್ಲಿಟ್ಟುಕೊಳ್ಳೋಣ
ಯಾರು ಕಾಣದಂತೆ ಮನೆಗೊಯ್ದು
ನಮ್ಮ ಕೋಣೆಯ ಇರುಳ ಬೆಳಗಿಸೋಣ
ಬೆಳಗು ಜಾವದ ಮುಸುಕಿನಲ್ಲಿ
ಒಂದೊಂದೇ ಚುಕ್ಕಿಯನ್ನು ನುಂಗುವಾಗ
ಕಳ್ಳ ಹಗಲನ್ನು ಯಾಮಾರಿಸಿ
ನಿನ್ನ ಸೆರಗಿನ ತುದಿಗೆ ಚಂದ ಸಿಂಗರಿಸಲು
ಒಂದಿಷ್ಟು ಚುಕ್ಕಿಯನ್ನು ಕದ್ದು ಮುಚ್ಚಿಟ್ಟುಕೊಳ್ಳೋಣ
ನಡು ಹಗಲಿನಲ್ಲಿ ಸೂರ್ಯ
ಊರ ಹೊಳೆಯಲ್ಲಿ ಬಿದ್ದು ಹೊಳೆವಾಗ
ಯಾರೂ ಕಾಣದಂತೆ ಕದ್ದು ತರೋಣ
ನಿನ್ನ ಮಿಂಚುವ ಕಣ್ಣ ಹೊಳಪು ಹೊಂದುವ
ಕೊರಳ ಹಾರ ಮಾಡೋಣ
ಸಂಜೆ ಐದರ ಶ್ರಾವಣದ ಮಳೆಗೆ
ಮೂಡಿದರೆ ಕಾಮನಬಿಲ್ಲು ಇಂದು
ಊರ ಕೊನೆಯ ಬೆಟ್ಟದಂಚನು ತಲುಪಿ
ನಿನ್ನ ಕೆನ್ನೆಯ ಬಣ್ಣ ಹಚ್ಚಿ ಬಿಲ್ಲಿಗಿನ್ನೊಂದು ಬಣ್ಣ ಕೊಡೋಣ
ಕಾರಿರುಳಿನಲಿ ಕಿರುಲುವ ಕೀಟಕ್ಕೆ
ನಿನ್ನ ಇನಿದನಿಯ ಇಂಪು ಕೇಳಿಸಿ
ಬೆಚ್ಚಗೆ ಮಲಗಿಸೋಣ
ಆ ನೀರವದಲ್ಲಿ ತಂಗಾಳಿಯೂ ನಿಂತು ಆಲಿಸುವಂತೆ
ನಾವಿಬ್ಬರೇ ಪಿಸುದನಿಯಲಿ ಮಾತಾಡೋಣ
8ಆ ಮುದುಕಿ ಎಲ್ಲಿಂದಲೋ ಬಂದವಳು
ಬಂದವಳು ಊರಿನ ಬೀದಿಗಳನ್ನು ತಿರುಗಿದಳು
ಎಲ್ಲ ಹೆಣ್ಣುಗಳಂತೆ ಅವಳಲ್ಲೂ ತಾಯಿಯೊಬ್ಬಳಿದ್ದಳು
ಆದರೆ ಆ ತಾಯಿ ನಿಯಮಗಳಿಗೊಳಪಟ್ಟಿರಲಿಲ್ಲ ಅಳುವ ಮಕ್ಕಳೆಲ್ಲ ಅವಳ ಮಕ್ಕಳೆನಿಸುತ್ತಿತ್ತು
ನಿಮಗೆ ಗೊತ್ತಿಲ್ಲವೇ?
ನೋವು, ಖಾಯಿಲೆ ಕಾಡುವಾಗ ನಾವೆಲ್ಲರೂ ಮಕ್ಕಳೇ
ಹಾಗೇ ನೋವು ತಿನ್ನುವ ಯಾರನ್ನು ಕಂಡರೂ
ಹೆಣ್ಣಿಗೆ ಅವರು ಮಕ್ಕಳಂತೆಯೇ ಕಾಣುತ್ತಾರೆ
ಹೀಗಾಗಿ ಅವಳಿಗೆ ಎಲ್ಲರೂ ಮಕ್ಕಳು
ಹೀಗೆ ಒಂದೊಂದೇ ಮಕ್ಕಳನ್ನು ಎತ್ತಿಕೊಂಡಳು
ಅವರ ಆರೈಕೆ ಮಾಡಿ ಚಿಕಿತ್ಸೆ ಮಾಡಿದಳು
ಗಾಯಗಳನ್ನು ತೊಳೆದು ಔಷಧಿ ಹಚ್ಚಿದಳು
ಒಂದಿಷ್ಟು ಮಕ್ಕಳು ವಾಸಿಯಾದರು
ಇನ್ನು ಕೆಲವರು ಸಾಂತ್ವನಗೊಂಡರು ಎಕ್ಕರೂ ತಾಯಿಯೆಂದರೂ
ಆಕೆಯ ತಾಯ್ತನಕ್ಕೆ ಮಿತಿಯಿರಲಿಲ್ಲ
ಆದರೆ ಲೋಕದ ಕಣ್ಣುಗಳಿಗೆ ಮಿತಿಯಿತ್ತು
ಅದಕ್ಕೆ ತಾಯಿಯಂತಹ ಕಣ್ಣಿಲ್ಲ
ತಂದೆಯಂತಹ ಕಣ್ಣೂ ಇಲ್ಲ
ಅದಕ್ಕಿರುವುದು ವ್ಯವಹಾರದ ಕಣ್ಣು
ಅದರಲ್ಲಿ ಕೆಲವು ಧಾರ್ಮಿಕರ ಕಣ್ಣು
ಈ ತಾಯಿಯ ಮೇಲೆ ಬಿತ್ತು
ತಾವೇ ಬೇಡವೆಂದು ರಸ್ತೆಗೆಸೆದ ಮಕ್ಕಳು
ನಗುವುದು ಅವರ ಆತ್ಮದ ಕನ್ನಡಿಯಲಿ ಪ್ರತಿಫಲಿಸುತ್ತಿತ್ತು
ಮತ್ತೆ ಮತ್ತೆ ಚುಚ್ಚುತ್ತಿತ್ತು
ಅದು ಅಪಮಾನಿಸುತ್ತಿತ್ತು
ಪ್ರಶ್ನಿಸುತ್ತಿತ್ತು
ಆ ಬೆಳಕು ಇವರನ್ನು ಎಷ್ಟು ಘಾಸಿಗೊಳಿಸಿತೆಂದರೆ ಒಂದು ದಿನ ಆ ಮುದುಕಿ ಸತ್ತರೂ ಇವರ ಆತ್ಮದ ಗಾಯಗಳು ಮಾಯಲಿಲ್ಲ ಕೊಲೆಯುತ್ತಲೇ ಇದ್ದ ಆತ್ಮದ ಜೊತೆ ನಡೆಯುವ ಇವರು ಹೋದಲ್ಲೆಲ್ಲ ಆ ಮುದುಕಿಯನ್ನು ಬಯ್ಯುತ್ತಾರೆ
ಆದರೆ ಆ ಮುದುಕಿ ಈಗಲೂ ಆ ಮಕ್ಕಳ ಎದೆಯಲ್ಲಿ ಅದೇ ಪ್ರಾಂಜಲ ನಗು ನಗುತ್ತಾಳೆ
ಬೆಳಗಿನ ಸೂರ್ಯನಂತೆ
ದೇಹದ ಗಾಯಗಳಿಗೆ ಮುಲಾಮು ಹಚ್ಚಬಹುದು
ಕೊಳೆತ ಆತ್ಮಗಳಿಗೆ ಮುಲಾಮು ಇನ್ನೂ ಸಿಕ್ಕಿಲ್ಲ ಅದನ್ನು ಹಿಡಿದು ಬರುವ ತಾಯಿ ಯಾವ ದೇಶದವಳೋ ಗೊತ್ತಿಲ್ಲ 9ಮರ
ಎತ್ತರೆತ್ತರಕ್ಕೆ ಬೆಳೆಯುತ್ತದೆ
ಮರಕ್ಕಿಂತ ಮರ ಎತ್ತರ ಇರುತ್ತೆ
ಮರದ ಎತ್ತರಕ್ಕೆ ಆಕಾಶವಷ್ಟೇ ಮಿತಿ
ಮರ ವಿಶಾಲವಾಗಿ ಬೆಳೆಯುತ್ತದೆ
ಬಾನಿಗೆ ಚಪ್ಪರ ಹಾಕಿದಂತೆ
ಮರದ ವೈಶಾಲ್ಯಕ್ಕೆ ಭೂಮಿಯ ವ್ಯಾಪ್ತಿ
ಮರ
ಆಳದವರೆಗೂ ಬೇರಿಳಿಸುತ್ತದೆ
ಎಲ್ಲವನ್ನೂ ಹೀರಿಕೊಳ್ಳುತ್ತದೆ
ಮರ ಇಳಿಯಬಲ್ಲ ಆಳಕ್ಕೆ ಪಾತಾಳವೇ ಮಿತಿ
9 ಮರ
ನೂರು ಹಕ್ಕಿಗಳ ಆಶ್ರಯ ತಾಣ
ಮರದೊಳಗಿನ ಹಕ್ಕಿಗಳ ಗೂಡು
ಮರಿ ಮೊಟ್ಟೆಗಳ ಕುರಿತು ಮರ ನಿರ್ಲಿಪ್ತ
ಹಾವು ಮೊಟ್ಟೆಯೊಡೆದು ಕುಡಿಯುವಾಗ
ಕಾಗೆ ಬಂದು ಮರಿಗಳನ್ನು ಕುಕ್ಕುವಾಗ
ಮರ ಸುಮ್ಮನೆ ನಿಂತಿರುತ್ತದೆ
ಮರ ಸುಮ್ಮನೆ ನಿಂತಿರುತ್ತದೆ
ತನ್ನದೇ ಎಲೆಗಳು ಉದುರುವಾಗ
ತನ್ನದೇ ಕೊಂಬೆಗಳು ಮುರಿದು ಬೀಳುವಾಗ
ಮರ ಬಾಗುತ್ತದೆ
ತನ್ನದೇ ಅಸ್ತಿತ್ವ ಅಳಿಸುವ ಬಿರುಗಾಳಿ ಬಂದರೆ
ಮತ್ತೆ ನಿಲ್ಲುತ್ತದೆ ನಿರ್ಲಿಪ್ತವಾಗಿ
ಮರ ಸುಮ್ಮನೆ ಉರುಳುವುದಿಲ್ಲ
ತನ್ನ ಆಶ್ರಯಿಸಿದವರನ್ನೂ ತನ್ನೊಂದಿಗೆ ಕರೆದೊಯ್ಯುತ್ತದೆ
ಹಕ್ಕಿ ಬೇರು
ಎಲೆ ಕೊಂಬೆ
ಕೊನೆಗೆ...
ಎಲ್ಲವನ್ನೂ ತನ್ನೊಂದಿಗೆ ಕೊನೆಯಾಗಿಸಿಬಿಡುತ್ತದೆ
ಮರ