ಸ್ಮಾರಕ ಗಳ ಸುತ್ತ ವಿವಾದಗಳ ಹುತ್ತ
ಕರ್ನಾಟಕದ ಜನ ಬರಗಾಲದಿಂದ ತತ್ತರಿಸಿರುವಾಗ, ಕನ್ನಡ ಶಾಲೆಗಳು ಕಟ್ಟಡಗಳಿಲ್ಲದೇ ಊರ ಮುಂದಿನ ಮರದ ಕೆಳಗೆ ನಡೆಯುತ್ತಿರುವಾಗ, ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬುದರ ಬಗ್ಗೆ ಸರಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು.
ಉತ್ತರ ಕರ್ನಾಟಕ ಮಾತ್ರವಲ್ಲ ಕರ್ನಾಟಕದ ಬಹುತೇಕ ಕಡೆ ಮಳೆಯಿಲ್ಲದೇ ಬರಗಾಲದ ಕರಾಳ ಛಾಯೆ ಕವಿದಿದೆ. ಕಲಬುರಗಿ, ಯಾದಗಿರಿ, ಬಿಜಾಪುರದಂತಹ ಜಿಲ್ಲೆಗಳಲ್ಲಿ ನೀರು ಪಾತಾಳಕ್ಕೆ ಹೋಗಿದೆ. ಎಲ್ಲಾ ಜೀವಿಗಳಿಗೆ ಜೀವಸೆಲೆಯಾಗಿದ್ದ ನದಿ, ಹಳ್ಳ, ಕೆರೆಗಳು ಬತ್ತಿ ಹೋಗಿವೆ. ಮಾಡಲು ಕೆಲಸವಿಲ್ಲದೇ ರೈತರು ಗುಳೆ ಹೊರಟಿದ್ದಾರೆ. ಅನ್ನಭಾಗ್ಯ ಮತ್ತು ರೋಜಗಾರ ಯೋಜನೆಯಿಂದಾಗಿ ಗುಳೆ ಹೋಗುವ ಪ್ರಮಾಣ ಕಡಿಮೆಯಿದ್ದರೂ ಅಲ್ಲಲ್ಲಿ ಗಂಟು ಮೂಟೆ ಹೊತ್ತುಕೊಂಡು ಹೊರಟವರು ಕಾಣುತ್ತಾರೆ. ಒಕ್ಕಲುತನದ ಕೆಲಸ ನಿಂತು ಹೋಗಿದೆ. ರೈತರು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ ತಿಂಗಳಲ್ಲೇ ಈ ಪರಿಸ್ಥಿತಿ ಉಂಟಾಗಿದ್ದರೆ, ಮುಂದಿನ ಮಳೆಗಾಲ ಬರುವವರೆಗೆ ಅಂದ್ರೆ ಇನ್ನೂ 8 ತಿಂಗಳು ಹೇಗೆ ದಿನ ದೂಡುವುದು ಎಂಬ ಆತಂಕ ಎಲ್ಲೆಡೆ ಕವಿದಿದೆ. ಈ ಬಾರಿಯ ಬೇಸಿಗೆಯನ್ನು ನೆನೆದು ದಂಗು ಬಡಿದು ಕೂತಿದ್ದಾರೆ. ಕಲಬುರಗಿ, ಬಿಜಾಪುರ ಜಿಲ್ಲೆಗಳಲ್ಲಿ ಮಾಗಿ ಚಳಿ ಮೈ ನಡುಕ ಹುಟ್ಟಿಸುವ ಕಾಲದಲ್ಲಿ ಎಲ್ಲ ಕಡೆ ಧಗೆಧಗೆ ಉಂಟಾಗಿದೆ. ಫ್ಯಾನ್ ಹಚ್ಚಿಕೊಂಡು ಮಲಗುವುದು ಅನಿವಾರ್ಯವಾಗಿದೆ. ಫ್ಯಾನು ಇಲ್ಲದವರಿಗೆ ಬಯಲು ನಿದ್ದೆಯೇ ಗತಿ. ಬೆಳಗಿನ ಜಾವ 2 ಗಂಟೆಯಾದರೂ ಚಳಿಯ ಸ್ಪರ್ಶ ಆಗುವುದಿಲ್ಲ. ತೇವಾಂಶದ ಕೊರತೆಯಿಂದಾಗಿ ಮುರುಟಿ ಹೋಗಿರುವ ಬೆಳೆಗಳು, ಎತ್ತ ನೋಡಿದರತ್ತ ಒಣ ಭೂಮಿ, ಬತ್ತಿ ಹೋದ ಬಾವಿ, ಹನಿ ನೀರಿಗಾಗಿ ಜನ ಬಾಯಿಬಾಯಿ ಬಿಡುತ್ತಿದ್ದಾರೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಮಲೆನಾಡು ಎಂದು ಪ್ರಸಿದ್ಧವಾದ ಚಿಂಚೋಳಿಯಲ್ಲೂ ಕೂಡ ಬರಗಾಲ ಆವರಿಸಿದೆ. ಅದರ ಭೀಕರತೆ ಪ್ರಖರ ವಾಗಿದೆ. ನದಿಗಳು ಬಹುತೇಕ ಒಣಗಿರುವುದರಿಂದ ನದಿ ತೀರದ ಜನರ ಬದುಕು ಅಸಹನೀಯವಾಗಿದೆ. ಜಲಚರಗಳು ವಿಲಿವಿಲಿ ಒದ್ದಾಡುತ್ತಿವೆ. 500ಕ್ಕೂ ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಹಳೆಯ ಮೈಸೂರು ಭಾಗದ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಪರಿಸ್ಥಿತಿ ಕೂಡ ಹೆಚ್ಚು ಭಿನ್ನವಾಗಿಲ್ಲ. ಇಲ್ಲಿಯೂ ಜನ ನೀರಿಗಾಗಿ ಪರದಾಡುತ್ತಿದ್ದಾರೆ. ದನಕರುಗಳು ಮೇವು ಮತ್ತು ನೀರಿಲ್ಲದೆ ವಿಲವಿಲ ಒದ್ದಾಡುತ್ತಿವೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂಥದ್ದೇ ಪರಿಸ್ಥಿತಿ ಇದೆ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರಬೇಕಾದ ನೆರವು ಬಂದಿಲ್ಲ.
ಕರ್ನಾಟಕ ಈ ರೀತಿ ಬರದ ಬೇಗೆಯಲ್ಲಿ ಬೆಂದು ಹೋಗುತ್ತಿರುವಾಗ ಬೆಂಗಳೂರಿನ ಇನ್ನೊಂದು ಜಗತ್ತಿನಲ್ಲಿ ಇರುವವರಿಗೆ ಸಿನೆಮಾ ನಟರ ಸ್ಮಾರಕ ನಿರ್ಮಿಸುವ ಚಿಂತೆ. ಈ ಸ್ಮಾರಕದ ವಿವಾದ ಈಗ ನಾನಾ ರೂಪ ತಾಳಿದೆ. ವಿಷ್ಣುವರ್ಧನ ಸ್ಮಾರಕ 10 ವರ್ಷವಾದರೂ ಅಸ್ತಿತ್ವಕ್ಕೆ ಬಂದಿಲ್ಲ ಎಂಬುದು ಅವರ ಅಳಿಯ ಮತ್ತು ಅಭಿಮಾನಿಗಳ ಆಕ್ರೋಶವಾಗಿದೆ. ರಾಜ್‌ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಸ್ಮಾರಕಗಳನ್ನು ಒಂದೇ ಕಡೆ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಕರ್ನಾಟಕದ ನಾಡು, ನುಡಿಗೆ ಮತ್ತು ಸಾಂಸ್ಕೃತಿಕ ಜಗತ್ತಿಗೆ ಕಲಾವಿದರು ನೀಡಿರುವ ಕೊಡುಗೆಗಳ ಬಗ್ಗೆ ಗೌರವವಿದೆ. ಈ ಕೊಡುಗೆಯನ್ನು ಬೇರೆ ಬೇರೆ ಕ್ಷೇತ್ರಗಳ ಜನರು ನೀಡಿದ್ದಾರೆ. ಎಲ್ಲರ ಸ್ಮಾರಕಗಳನ್ನು ಸರಕಾರವೇ ಜನರ ತೆರಿಗೆ ಹಣದಿಂದ ಮಾಡಬೇಕು ಎಂಬ ಆಗ್ರಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೀಗೆ ಸ್ಮಾರಕಗಳನ್ನು ನಿರ್ಮಿಸುತ್ತ ಹೋದರೆ, ಕಂಠೀರವ ಸ್ಟುಡಿಯೋ ತನ್ನ ಮೂಲಸ್ವರೂಪವನ್ನೇ ಕಳೆದುಕೊಳ್ಳುತ್ತದೆ ಎಂಬ ಭೀತಿಯನ್ನು ಅನೇಕರು ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಚಲನಚಿತ್ರ ಜಗತ್ತನ್ನು ಕಟ್ಟಿ ಬೆಳೆಸಿರುವುದರಲ್ಲಿ ಡಾ. ರಾಜ್‌ಕುಮಾರ್ ಪಾತ್ರ ತುಂಬಾ ಮುಖ್ಯವಾಗಿದೆ. 50ರ ದಶಕದ ಆರಂಭದ ದಿನಗಳಲ್ಲಿ ಕರ್ನಾಟಕದಲ್ಲಿ ಸ್ಟುಡಿಯೋಗಳು ಇರಲಿಲ್ಲ. ಕನ್ನಡ ಸಿನೆಮಾಗಳು ಮದ್ರಾಸಿನಲ್ಲಿ ತಯಾರಾಗುತ್ತಿದ್ದವು. ಆಗ ಡಾ. ರಾಜ್‌ಕುಮಾರ ಅಲ್ಲಿ ಹೋಗಿ, ಉಪವಾಸ-ವನವಾಸ ಬಿದ್ದು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಿ ತುಂಬಾ ಪರಿಶ್ರಮದಿಂದ ಈ ಎತ್ತರಕ್ಕೆ ಬೆಳೆದು ನಿಂತರು. ಅವರ ತಲೆಮಾರಿನ ಉದಯಕುಮಾರ್, ಕಲ್ಯಾಣಕುಮಾರ್, ಅಶ್ವತ್ಥ್, ಬಾಲಕೃಷ್ಣ ಮತ್ತು ಹನುಮಂತಾಚಾರ್ ಅಂಥವರು ಈ ರೀತಿ ಕಷ್ಟಪಟ್ಟು ಬೆಳೆದು ಬಂದವರು. ಕನ್ನಡ ಸಿನೆಮಾ ಜಗತ್ತು ಕಟ್ಟಿದವರು. ಆದರೆ, 70ರ ದಶಕದ ನಂತರ ಬಂದ ನಟರಿಗೆ ಅಂಥ ಕಷ್ಟ ಇರಲಿಲ್ಲ. ಅವರಿಗೆ ಲಕ್ಷಾಂತರ ರೂಪಾಯಿ ಕೊಡುವಷ್ಟು ಕನ್ನಡ ಸಿನೆಮಾ ಜಗತ್ತು ಬೆಳೆದಿತ್ತು.
ಡಾ. ರಾಜ್‌ಕುಮಾರ್ ಅವರನ್ನು ಹಿಡಿದು ಯಶ್‌ವರೆಗೆ ಎಲ್ಲರನ್ನೂ ಕನ್ನಡ ಜನರು ಬೆಳೆಸಿದ್ದಾರೆ. ಅಂತಲೇ ಡಾ. ರಾಜ್‌ಕುಮಾರ್ ಭಾಷಣ ಮಾಡುವಾಗ, ಜನರನ್ನು ಉದ್ದೇಶಿಸಿ, ನಮಗೆ ಅನ್ನ ಹಾಕಿದ ಅಭಿಮಾನಿ ದೇವರುಗಳೇ ಎಂದು ಸಂಬೋಧಿಸಿ ತಲೆ ಬಾಗಿ, ಮಾತನಾಡುತ್ತಿದ್ದರು. ಕನ್ನಡ ವಾಕ್‌ಚಿತ್ರ ಸ್ವರ್ಣ ಮಹೋತ್ಸವದಲ್ಲಿ ಡಾ. ರಾಜ್ ಇದೇ ರೀತಿ ಕನ್ನಡಿಗರಿಗೆ ತಲೆ ಬಾಗಿ ನಮಿಸಿದ್ದರು. ಅವರ ವಿನಯವನ್ನು ಕಾರ್ಯಕ್ರಮ ಉದ್ಘಾಟಿಸಲು ಬಂದಿದ್ದ ಖ್ಯಾತ ಹಿಂದಿ ನಿರ್ದೇಶಕ ವಿ.ಶಾಂತಾರಾಂ ಶ್ಲಾಘಿಸಿದ್ದರು.
ಇದೆಲ್ಲ ನಿಜ. ಈ ನಟರೆಲ್ಲರ ಅಭಿನಯಕ್ಕೆ ಕರ್ನಾಟಕದ ಜನ ತಮ್ಮ ಋಣ ತೀರಿಸಿದ್ದಾರೆ. ಇತ್ತೀಚೆಗೆ ಬಂದ ಹೀರೋಗಳನ್ನು ಕೋಟ್ಯಧೀಶರನ್ನಾಗಿ ಮಾಡಿದ್ದಾರೆ. ಸರಕಾರದ ಹಣದಲ್ಲಿ ಸ್ಮಾರಕ ಅಗತ್ಯವೂ ಇಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಎಕರೆಗಟ್ಟಲೆ ಜಾಗದಲ್ಲಿ ಸ್ಮಾರಕ ಮಾಡುವುದು ಮಾತ್ರವೇ ಗೌರವವಲ್ಲ. ಕರ್ನಾಟಕದ ಜನ ಬರಗಾಲದಿಂದ ತತ್ತರಿಸಿರುವಾಗ, ಕನ್ನಡ ಶಾಲೆಗಳು ಕಟ್ಟಡಗಳಿಲ್ಲದೇ ಊರ ಮುಂದಿನ ಮರದ ಕೆಳಗೆ ನಡೆಯುತ್ತಿರುವಾಗ, ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬುದರ ಬಗ್ಗೆ ಸರಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು. ಹಾಗೆ ನೋಡಿದರೆ, ನಾಡು-ನುಡಿ-ಸಂಸ್ಕೃತಿಗಾಗಿ ರಕ್ತವನ್ನು ನೀರು ಮಾಡಿಕೊಂಡು ದುಡಿದವರಿಗೆ ನಾವು ಇನ್ನೂ ಸ್ಮಾರಕಗಳನ್ನು ನಿರ್ಮಿಸಿಲ್ಲ. ಅರಮನೆಯಲ್ಲಿನ ಬಂಗಾರ ಮಾರಿ, ಕನ್ನಂಬಾಡಿ ಅಣೆಕಟ್ಟೆಯನ್ನು ಕಟ್ಟಿಸಿದ ಆಧುನಿಕ ಮೈಸೂರಿನ ಶಿಲ್ಪಿಮಾತ್ರವಲ್ಲ ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಮೊದಲ ಮೀಸಲಾತಿ ತಂದ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಸಮಾಧಿ ಅನಾಥವಾಗಿ ಬಿದ್ದಿದೆ. ಏಕೀಕರಣದ ನಂತರ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಹೀಗೆ ಯಾರಿಗೂ ಕೂಡ ಸರಕಾರವು ಎಕರೆಗಟ್ಟಲೆ ಜಮೀನು ಖರೀದಿಸಿ ಸ್ಮಾರಕ ನಿರ್ಮಿಸಿಲ್ಲ.
ಬಂಗಾರಪ್ಪಮುಖ್ಯಮಂತ್ರಿಯಾಗಿದ್ದಾಗ ತುಂಬಾ ಆಸಕ್ತಿ ವಹಿಸಿದ್ದರಿಂದ ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಿ ಗೌರವ ಸಲ್ಲಿಸಲಾಯಿತು. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ, ಕೂಡಲಸಂಗಮದಲ್ಲಿ ಬಸವಣ್ಣನವರು ಐಕ್ಯರಾದರು ಎಂಬ ಪ್ರತೀತಿ ಇರುವ ಸ್ಥಳದಲ್ಲಿ ಐಕ್ಯ ಮಂಟಪ ನಿರ್ಮಿಸಿ, ಸ್ಮಾರಕವಾಗಿಸಿದರು. ಇದು ಬಿಟ್ಟರೆ, ಕರ್ನಾಟಕದ ಸಾರ್ವಜನಿಕರ ಬದುಕಿಗೆ ಕೊಡುಗೆ ನೀಡಿದವರಿಗೆ ವಿಶೇಷ ಸ್ಮಾರಕಗಳೇನೂ ನಿರ್ಮಾಣಗೊಂಡಿಲ್ಲ. ಮಾಗಡಿ ಕೆಂಪೇಗೌಡರು ಬೆಂಗಳೂರು ನಿರ್ಮಿಸಿದವರು. ಅವರ ದೂರದೃಷ್ಟಿಯಿಂದಲೇ ಈ ನಗರ ಶತಮಾನಗಳ ಹಿಂದೆಯೇ ಅತ್ಯಂತ ಯೋಜನಾಬದ್ಧ ನಗರವಾಗಿ ರೂಪುಗೊಂಡಿತು.
ಅವರ ಗೌರವಾರ್ಥ ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿರುವುದು ಸೂಕ್ತವಾಗಿದೆ. ಬೆಂಗಳೂರಿನ ರೈಲು ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಟ್ಟಿರುವುದು ಸರಿಯಾಗಿದೆ. ಆದರೆ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ಗೆ ನ್ಯಾಯ ಒದಗಿಸಲು ನಮ್ಮಿಂದ ಇನ್ನೂ ಸಾಧ್ಯವಾಗಿಲ್ಲ. ಡಾ. ರಾಜ್‌ಕುಮಾರ್ ಎಂದಿಗೂ ಯಾವುದಕ್ಕೂ ಆಸೆಪಟ್ಟವರಲ್ಲ. ತುಂಬಾ ಸರಳ ಜೀವಿ. ಅವರು ಬಯಸಿದ್ದರೆ, ಕರ್ನಾಟಕದ ಮುಖ್ಯಮಂತ್ರಿ ಆಗಬಹುದಿತ್ತು. ಆದರೆ, ಅವರು ರಾಜಕೀಯ ಪ್ರವೇಶ ನಿರಾಕರಿಸಿದರು. ಅಂಬರೀಷ್ ಕೂಡ ರಾಜಕಾರಣದಲ್ಲಿ ಇದ್ದರೂ ಕೂಡ ಹೆಸರು ಕೆಡಿಸಿಕೊಳ್ಳಲಿಲ್ಲ. ಅವರು ಬದುಕಿದ್ದರೆ, ಸರಕಾರದ ಖರ್ಚಿನಲ್ಲಿ ಸ್ಮಾರಕ ನಿರ್ಮಿಸಿರುವುದನ್ನು ಬಹುತೇಕ ಒಪ್ಪುತ್ತಿರಲಿಲ್ಲ. ಸ್ಮಾರಕಕ್ಕಿಂತ ತಮ್ಮ ಹೆಸರಿನಲ್ಲಿ ಸಿನೆಮಾ ರಂಗದಲ್ಲಿ ಕೆಲಸ ಮಾಡುವ ಬಡ ಕಲಾವಿದರಿಗೆ ಮತ್ತು ಇತರ ಸಿಬ್ಬಂದಿಗೆ ಮಾಸಾಶನದ ವ್ಯವಸ್ಥೆ ಮಾಡಲು ಬಯಸುತ್ತಿದ್ದರು.
ಇಂಥ ಮಹಾನ್ ಕಲಾವಿದರ ನೆನಪು ನಿರಂತರವಾಗಿ ಹಸಿರಾಗಿ ಇರಬೇಕೆಂದರೆ, ಅವರಿಗೆ ಈ ರೀತಿ ಸರಕಾರದ ಖರ್ಚಿನಲ್ಲಿ ಸ್ಮಾರಕ ಮಾಡುವ ಬದಲು ಅದೇ ಹಣವನ್ನು ಚಲನಚಿತ್ರ ಉದ್ಯಮದ ಅಭಿವೃದ್ಧಿಗೆ ಬಳಸಬಹುದು. ಸ್ಮಾರಕಕ್ಕಾಗಿ ಸರಕಾರದಿಂದ ಹಣ ಪಡೆಯುವಷ್ಟು ಬಡತನ ಇವರಿಗಿಲ್ಲ. ರಾಜ್‌ಕುಮಾರ್ ಅವರನ್ನು ಬಿಟ್ಟರೆ, ನಂತರ ಬಂದವರೆಲ್ಲ ತಮ್ಮ ಅಭಿನಯಕ್ಕಾಗಿ ಸಾಕಷ್ಟು ಸಂಭಾವನೆ ಪಡೆದಿದ್ದಾರೆ. ಅವರ ಹೆಸರಿನಲ್ಲಿ ಅವರ ಕುಟುಂಬದವರೇ ಸ್ಮಾರಕಗಳನ್ನು ನಿರ್ಮಿಸಲು ಯಾರ ಅಭ್ಯಂತರವೂ ಇಲ್ಲ.
ಸರಕಾರದ ಕೆಲಸ ದೇವರ ಕೆಲಸವೆಂದು ಕೆಂಗಲ್ ಹನುಮಂತಯ್ಯನವರು ವಿಧಾನಸೌಧದ ಮೇಲೆ ಬರೆಸಿದ್ದಾರೆ. ಸರಕಾರದ ಹಣ ಜನರ ಹಣ ಅಂತಲೇ ನಮ್ಮ ಹಿಂದಿನ ರಾಜಕಾರಣಿಗಳು ಬೊಕ್ಕಸದ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು. ದೇವರಾಜ ಅರಸು ನಿಧಾನರಾದಾಗ, ಅವರ ಅಂತ್ಯಕ್ರಿಯೆ ಮಾಡಲು ಕೂಡ ಮನೆಯವರ ಬಳಿ ಹಣವಿರಲಿಲ್ಲ. ಅಂದಿನ ಮುಖ್ಯಮಂತ್ರಿ ಗುಂಡೂರಾಯರೇ ಸರಕಾರದ ಖರ್ಚಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ನಿಧನರಾದಾಗ, ಚಿಕಿತ್ಸೆ ಪಡೆದ ಆಸ್ಪತ್ರೆಗೆ ಬಿಲ್ ಕಟ್ಟಲು ಹಣವಿರಲಿಲ್ಲ. ಅಂದಿನ ಮುಖ್ಯಮಂತ್ರಿ ದೇವರಾಜ ಅರಸರೇ ಆಸ್ಪತ್ರೆಯ ಬಿಲ್ ಕಟ್ಟಿ, ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಿದರು. ಇಂಥ ಮಹಾನ್ ಚೇತನಗಳಿಗೆ ಸೂಕ್ತ ಸ್ಮಾರಕಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಸಿನೆಮಾ ನಟರು ನಿಧನ ಹೊಂದಿದಾಗ, ಪ್ರತಿಯೊಬ್ಬರಿಗೂ ಎಕರೆಗಟ್ಟಲೇ ಜಾಗದಲ್ಲಿ ಸ್ಮಾರಕ ನಿರ್ಮಿಸುವ ಪದ್ಧತಿ ಸರಿಯೋ? ತಪ್ಪೋ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ.