ತಮಿಳು ಸಾಹಿತ್ಯ ಲೋಕದಲ್ಲಿ ವೇಲ್ಪಾರಿಯ ಸಂಚಲನ
ಸಂದರ್ಶನ
ಸಾಹಿತ್ಯ ಅಕಾಡಮಿ ಪುರಸ್ಕೃತ ತಮಿಳು ಸಾಹಿತಿ ಸು. ವೆಂಕಟೇಶನ್, ಅವರ ಕೀರ್ತಿಯ ಕೀರಿಟಕ್ಕೆ ಈಗ ಇನ್ನೊಂದು ಗರಿ ಸೇರಿಕೊಂಡಿದೆ. ಅವರ ದ್ವಿತೀಯ ಕಾದಂಬರಿಯಾದ ವೀರ ಯುಗ ನಾಯಗನ್ ವೇಲ್ಪಾರಿ (ಪರಾಕ್ರಮಿ ಯುಗನಾಯಕ) ಧಾರಾವಾಹಿಯು 100 ಕಂತು ಮುಗಿಸಿದೆ.
ವೀರ ಯುಗ ನಾಯಗನ್ ವೇಲ್ಪಾರಿ ಇತಿಹಾಸ ಪ್ರಸಿದ್ಧ ತಮಿಳು ರಾಜನೊಬ್ಬನ ಬದುಕಿನ ಬಗ್ಗೆ ಹೊಸ ಬೆಳಕನ್ನು ಚೆಲ್ಲುತ್ತದೆ. ತನ್ನ ಚಿನ್ನದ ರಥಕ್ಕೆ ಸುತ್ತಿಕೊಂಡ ಮಲ್ಲಿಗೆಯ ಬಳ್ಳಿಗೆ ನೋವಾಗಬಾರದೆಂಬ ಉದ್ದೇಶದಿಂದ ಹೃದಯವಂತನಾದ ವೇಲ್ಪಾರಿ, ರಥವನ್ನು ಅಲ್ಲೇ ತೊರೆದು ಕಾಲ್ನಡಿಗೆಯಲ್ಲಿ ಅರಮನೆ ಸೇರಿದ ಕಥೆ ತಮಿಳುನಾಡಿನಲ್ಲಿ ಈಗಲೂ ಅತ್ಯಂತ ಜನಪ್ರಿಯವಾಗಿದೆ. ವೆಂಕಟೇಶನ್ ಅವರ ಕಾದಂಬರಿ ಪಾರಿ ರಾಜನ ಬದುಕಿನ ಇತರ ಮಹತ್ವದ ಅಂಶಗಳ ಬಗ್ಗೆಯೂ ಬೆಳಕು ಚೆಲ್ಲಿದೆ. ಪಾರಿ, ತಮಿಳು ರಾಜ್ಯದ ಅತ್ಯಂತ ಪರೋಪಕಾರಿ ಮಾತ್ರವಲ್ಲ, ಅತ್ಯಂತ ಬಲಿಷ್ಠ ರಾಜವಂಶಗಳಾದ ಚೇರರು, ಚೋಳರು ಹಾಗೂ ಪಾಂಡ್ಯ ರಾಜರುಗಳ ವಿರುದ್ಧ ದಿಟ್ಟ ಹೋರಾಟ ನಡೆಸಿದ ಬುಡಕಟ್ಟು ಜನಾಂಗದ ದೊರೆಯೂ ಆಗಿದ್ದ.ತಮಿಳಿನ ಖ್ಯಾತ ಸಾಪ್ತಾಹಿಕ ಪತ್ರಿಕೆ ‘ಆನಂದ ವಿಕಡನ್’ನಲ್ಲಿ 100 ಕಂತುಗಳಲ್ಲಿ ಧಾರಾವಾಹಿಯಾಗಿ ಹರಿದುಬಂದ ಬಳಿಕ ವೀರ ಯುಗ ನಾಯಗನ್ ವೇಲ್ಪಾರಿ ಈಗ ಮುಕ್ತಾಯಗೊಂಡಿದೆ. ಕಳೆದ ನಾಲ್ಕು ದಶಕಗಳಲ್ಲಿ 100 ಕಂತುಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಏಕೈಕ ತಮಿಳು ಕಾದಂಬರಿ ಎಂಬ ಇತಿಹಾಸವನ್ನು ಕೂಡಾ ವೇಲ್ಪಾರಿ ನಿರ್ಮಿಸಿದೆ. ತನ್ನ ಪ್ರಾಂತವನ್ನು ರಕ್ಷಿಸಲು ಬಲಿಷ್ಠ ಅರಸರ ವಿರುದ್ಧ ವೀರಾವೇಶದ ಹೋರಾಟ ನಡೆಸಿ, ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದ ಪಾರಿಯನ್ನು ವೆಂಕಟೇಶನ್ ಅವರು ತನ್ನ ಕಾದಂಬರಿಯ ಮೂಲಕ ಮತ್ತೆ ಹೊರಗೆಳೆದು ತಂದಿದ್ದಾರೆ.
ಇದೀಗ ತಮಿಳು ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಸು. ವೆಂಕಟೇಶನ್ ಅವರ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.
♦ ನಿಮ್ಮ ಕಾದಂಬರಿಯಲ್ಲಿ ನೀವು ಪರಿಚಯಿಸಿದಂತಹ ವೇಲ್ಪಾರಿಯು, ನಾವು ಸಾಮಾನ್ಯವಾಗಿ ಆ ದೊರೆಯ ಬಗ್ಗೆ ತಿಳಿದುಕೊಂಡಿರುವುದಕ್ಕಿಂತ ತೀರಾ ಭಿನ್ನವಾದುದಾಗಿದೆ ಅಲ್ಲವೇ?
ಸು. ವೆಂಕಟೇಶನ್: ಪಾರಿ ಬಗ್ಗೆ ತಮಿಳಿನಲ್ಲಿ ಹಲವಾರು ಕೃತಿಗಳನ್ನು ಬರೆಯಲಾಗಿದ್ದರೂ, ಅವು ಈಗ ಕಳೆದುಹೋಗಿವೆ. ಕಾಬಿಲಮ್ ಅವುಗಳಲ್ಲೊಂದಾಗಿದೆ. ಪಾರಿಯ ಆಪ್ತ ಸ್ನೇಹಿತ ಕವಿ ಕಾಬಿಲರ್ ಬರೆದಿದ್ದ ಈ ಕೃತಿಯು, ಆ ದೊರೆಯ ಕುರಿತಾದ ಮಹಾಕಾವ್ಯವಾಗುವ ಎಲ್ಲಾ ಸಾಧ್ಯತೆಗಳಿದ್ದವು. ಪಾರಿ ತಮಿಳು ನೆಲದ ಅತ್ಯಂತ ಪರೋಪಕಾರಿ ಅರಸರಲ್ಲೊಬ್ಬನೆಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಆತ ಅದಕ್ಕಿಂತಲೂ ಮಿಗಿಲಾದ ವ್ಯಕ್ತಿತ್ವವನ್ನು ಹೊಂದಿದ್ದ.
ಪಾರಿಯನ್ನು ಸೋಲಿಸಲು ಬದ್ಧವೈರಿಗಳಾದ ಚೋಳ, ಚೇರ ಹಾಗೂ ಪಾಂಡ್ಯರು ಒಂದಾದರು. ಆನಂತರ ಈ ಅರಸು ವಂಶಗಳು ತಮಿಳು ಸಾಮ್ರಾಜ್ಯವನ್ನು ಹಲವು ಶತಮಾನಗಳ ಕಾಲ ಆಳಿದರು. ಈ ಶತಮಾನಗಳ ಅವಧಿಯಲ್ಲಿ, ಪಾರಿಯ ಕುರಿತಾದ ಯಾವುದೇ ಸಾಹಿತ್ಯ ಕೃತಿಗಳನ್ನು ಅವರು ನಾಶಪಡಿಸಿರುವ ಸಾಧ್ಯತೆಗಳು ಅಧಿಕವಾಗಿವೆ. ಕರ್ಣನಂತಹ ಪೌರಾಣಿಕ ಪಾತ್ರವು, ನಮ್ಮ ನೆನಪಿನಲ್ಲಿ ಉಳಿಯಲು ಕಾರಣವೇನೆಂದರೆ ಆತನ ಬಗ್ಗೆ ಮತ್ತೆ ಮತ್ತೆ ಬರೆಯಲಾಗಿದೆ. ಪಾರಿ ಈ ನೆಲದಲ್ಲಿ ನಡೆದಾಡಿದ್ದಾನೆ. ಆತನ ಕಥೆಯನ್ನು ಹಿಂದೆಂದಿಗಿಂತಲೂ ಅತ್ಯಂತ ಶಕ್ತಿಯುತವಾಗಿ ಹೇಳಬೇಕಾದ ಅಗತ್ಯವಿದೆ.
ನನ್ನ ಪಾಲಿಗೆ ವೇಲ್ಪಾರಿ ಒಂದು ಪ್ರಯೋಗಾತ್ಮಕ ಕೃತಿಯಾಗಿದೆ. ಪಾರಿಯ ಬಗ್ಗೆ ಕಾಬಿಲರ್ ಬರೆದಿರಬಹುದಾದುದನ್ನು ಕಲ್ಪಿಸಿಕೊಂಡು ಅದನ್ನು ಮರುಸೃಷ್ಟಿಸಲು ಇಲ್ಲಿ ಯತ್ನಿಸಿದ್ದೇನೆ.
♦ ಆದಾಗ್ಯೂ ವೇಲ್ಪಾರಿ ಒಂದು ಕಾಲ್ಪನಿಕ ಕಾದಂಬರಿಯೇ ಅಥವಾ ಇತಿಹಾಸವೇ?
ಸು. ವೆಂಕಟೇಶನ್: ವೇಲ್ಪಾರಿಯು ಸಂಗಮರ ಆಳ್ವಿಕೆಯ ಕಾಲದಲ್ಲಿದ್ದ ವೆಳ್ಳಿರ್ ಬುಡಕಟ್ಟು ಪಂಗಡದ ಮುಖ್ಯಸ್ಥ. ಆತ ಒಂದು ಕಾಲ್ಪನಿಕ ವ್ಯಕ್ತಿಯಲ್ಲ. ಆತ ಪರಂಬು ಮಲೈ ಪರ್ವತ ಪ್ರದೇಶದ ರಕ್ಷಕನೂ ಆಗಿದ್ದ. ಕವಿಗಳು ಆತನ ಶೌರ್ಯ ಹಾಗೂ ಉದಾರತೆಯ ಬಗ್ಗೆ ಹಲವಾರು ತಲೆಮಾರುಗಳಿಂದ ಹಾಡುತ್ತಲೇ ಬಂದಿದ್ದಾರೆ. ಪಾರಿಯನ್ನು ಸೋಲಿಸಲು ಮೂವರು ಚಕ್ರವರ್ತಿಗಳು ನಡೆಸಿದ ಕುಟಿಲತಂತ್ರ ಹಾಗೂ ಆತನಿಗಾಗಿ ಆತನ ಮೂವರು ಪುತ್ರಿಯರು ಹರಿಸಿದ ಕಣ್ಣೀರು ತಮಿಳು ಜನಮಾನಸದಲ್ಲಿ ಈಗಲೂ ಅಚ್ಚಳಿಯದೆ ನಿಂತಿದೆ. ಪಾರಿಗಾಗಿ, ಅವನ ಆಪ್ತ ಸ್ನೇಹಿತ ಕಾಬಿಲರ್ ತನ್ನ ಪ್ರಾಣವನ್ನೇ ಬಲಿದಾನ ಮಾಡಿರುವುದಕ್ಕೆ ಐತಿಹಾಸಿಕ ಪುರಾವೆಯೂ ಇದೆ. ಪಾರಿಯ ಪಾತ್ರಕ್ಕೆ ಜೀವಂತಿಕೆಯನ್ನು ತರಲು ಇತಿಹಾಸದ ಈ ಎಲ್ಲಾ ಅಂಶಗಳನ್ನು ನಾನು ಶ್ರಮಪಟ್ಟು ಹೆಣೆದಿದ್ದೇನೆ. ಆದಾಗ್ಯೂ ನನ್ನ ವೇಲ್ಪಾರಿ ಕಾದಂಬರಿ ಒಂದು ಕಾಲ್ಪನಿಕ ಕೃತಿಯಾಗಿಯೇ ಪರಿಗಣಿಸಲ್ಪಟ್ಟಿದೆ.
♦ ನಿಮ್ಮ ಹಿಂದಿನ ಐತಿಹಾಸಿಕ ಕಾದಂಬರಿಗಳಾದ ಮದುರೈ, ಕಾವಲ್ ಕೋಟ್ಟಂನಂತೆ ವೇಲ್ಪಾರಿಗೂ ತುಂಬಾ ಅಧ್ಯಯನ ಹಾಗೂ ಪರಿಶ್ರಮದ ಅಗತ್ಯವುಂಟಾಗಿತ್ತೇ?
ಸು. ವೆಂಕಟೇಶನ್: ಪ್ರತಿಯೊಂದು ಕೃತಿಗೂ, ಅದರದ್ದೇ ಆದ ವಿಶಿಷ್ಟ ಸಂಶೋಧನೆಯ ಅಗತ್ಯವಿದೆ. ಕಾವಲ್ ಕೋಟ್ಟಂಗೆ ನಾನು ಸರಕಾರಿ ದಾಖಲೆಗಳ ಸಂಗ್ರಹಾಲಯಗಳಲ್ಲಿ ತುಂಬಾ ಸಂಶೋಧನೆ ಮಾಡಿದೆ. ಯಾಕೆಂದರೆ ಮೂಲಭೂತವಾಗಿ ಅದು ವಸಾಹತುಶಾಹಿ ಕಾಲದ ಕಥಾವಸ್ತುವನ್ನು ಹೊಂದಿದೆ. ವೇಲ್ಪಾರಿಯು ಸಂಗಮ ಕಾಲದ ಸಾಹಿತ್ಯವನ್ನು ಹೊಂದಿದೆ. ಕಾವಲ್ ಕೋಟ್ಟಂಗಾಗಿ ನಾನು, ಬಯಲುಸೀಮೆಯಲ್ಲಿ ವಾಸಿಸುವ ಮತ್ತು ಆಗಾಗ್ಗೆ ವಲಸೆ ಹೋಗುವ ಅಲೆಮಾರಿ ಜನರ ಬದುಕನ್ನು ಅಧ್ಯಯನ ಮಾಡಿದರೆ, ವೇಲ್ಪಾರಿಗಾಗಿ ನಾನು ಪಶ್ಚಿಮದ ಬೆಟ್ಟಪ್ರದೇಶಗಳಲ್ಲಿ ವಾಸವಾಗಿರುವ ಬುಡಕಟ್ಟು ಜನರ ಬಳಿಗೆ ಪ್ರಯಾಣಿಸಿದ್ದೆ.
ತಮಿಳು ಜನಾಂಗೀಯ ಅಧ್ಯಯನಕ್ಕೆ ವೇಲ್ಪಾರಿಯು ಅತ್ಯಂತ ಶ್ರೀಮಂತವಾದ ಮಾಹಿತಿ ಮೂಲವಾಗಿದೆ.
ನಿರ್ದಿಷ್ಟ ಬುಡಕಟ್ಟು ಪಂಗಡವೊಂದು ಮೂಲತಃ ವೀಳ್ಯದೆಲೆಯನ್ನು ಪತ್ತೆಹಚ್ಚಿದ ಉಲ್ಲೇಖ ಸಂಗಮಸಾಹಿತ್ಯದಲ್ಲಿ ಇದೆ. ಇದೆಂಥಾ ಅಚ್ಚರಿ, ಬುಡಕಟ್ಟು ಪಂಗಡವೊಂದು ಪತ್ತೆ ಹಚ್ಚಿದ ಗಿಡವು ಆನಂತರ ವ್ಯಾಪಕವಾಗಿ ಬಳಕೆಗೆ ಬಂದಿದ್ದನ್ನು ಕುರಿತು ಜಗತ್ತಿನಲ್ಲಿ ಯಾವುದೇ ಲಿಖಿತವಾದ ಬರಹ ಬೇರೆ ಯಾವುದಾದರೂ ಇದೆಯೇ ಎಂಬ ಬಗ್ಗೆ ನಾನು ಅಚ್ಚರಿಪಟ್ಟಿದ್ದೇನೆ. ಸಂಗಮ ಕಾಲದ ಸಾಹಿತ್ಯ ಪ್ರಕಾರವು ಪ್ರಾಥಮಿಕವಾಗಿ ಪ್ರೇಮ ಮತ್ತು ಶೌರ್ಯವನ್ನು ಆಧರಿಸಿದ್ದಾಗಿದೆ. ಅವುಗಳನ್ನು ಮತ್ತೆ ನನ್ನ ಕೃತಿಯಲ್ಲಿ ತರಲು ಉದ್ದೇಶಿಸಿದ್ದೇನೆ.
♦ ವೇಲ್ಪಾರಿಯ ಯುದ್ಧದ ಸನ್ನಿವೇಶಗಳು ಅತ್ಯಂತ ಅದ್ಭುತವಾಗಿ ಮೂಡಿಬಂದಿವೆ. ಯುದ್ಧದಲ್ಲಿ ಬಳಕೆಯಾಗುವ ತಂತ್ರಗಳ ಬಗ್ಗೆ ನೀವು ಸವಿಸ್ತಾರವಾಗಿ ವಿವರಿಸಿದ್ದೀರಿ?
ಸು. ವೆಂಕಟೇಶನ್: ತಮಿಳುನಾಡು ಶ್ರೀಮಂತ ಹಾಗೂ ವೈವಿಧ್ಯಮಯವಾದ ಸಮರಕಲೆಗಳ ನಾಡಾಗಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ದಾಖಲಿಸಲಾಗಿಲ್ಲ. ಶಿಲಪ್ಪದಿಕಾರಂ ಕೃತಿಯಲ್ಲಿ ಕೋಟೆಗಳು ಹಾಗೂ ಅರಮನೆಗಳಲ್ಲಿ ಶತ್ರುಗಳನ್ನು ಸೆರೆಹಿಡಿಯಲು ಇರಿಸಲಾಗುವ ವ್ಯೆಹಗಳ ಬಗ್ಗೆ ಉಲ್ಲೇಖಗಳಿವೆ. ಇನ್ನು ರಾಜರುಗಳ ಬಳಿ ಯಾವ್ಯಾವ ಅಸ್ತ್ರಗಳಿರಬಹುದೆಂಬುದನ್ನು ನೀವೇ ಊಹಿಸಿ. ಸಾತಾನ್ಕುಲಂ ರಾಘವನ್, ಪುಲವರ್ ಗೋವಿಂದನ್ ಹಾಗೂ ತಂಗಮ್ ಕಂದಸ್ವಾಮಿಯವರಂತಹ ವಿದ್ವಾಂಸರು ಈ ವಿಷಯವಾಗಿ ಸೀಮಿತಮಟ್ಟದ ಅಧ್ಯಯನ ಮಾಡಿದ್ದರು. ವೇಲ್ಪಾರಿಗಾಗಿ ನಾನು ವ್ಯಾಪಕವಾಗಿ ಶಸ್ತ್ರಾಸ್ತ್ರಗಳು, ಯುದ್ಧಸಿದ್ಧತೆಯ ತಂತ್ರಜ್ಞಾನ ಹಾಗೂ ಸಮರ ಕಲೆಗಳ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿದ್ದೆ.
♦ ಕಳೆದ 40 ವರ್ಷಗಳಲ್ಲಿ ತಮಿಳಲ್ಲಿ ಯಾವುದೇ ಧಾರಾವಾಹಿ ಕಾದಂಬರಿಯು, ನೂರು ಕಂತುಗಳನ್ನು ಈ ತನಕ ದಾಟಿರಲಿಲ್ಲ.?
ಸು. ವೆಂಕಟೇಶನ್: ವೇಲ್ಪಾರಿ ಧಾರಾವಾಹಿಯನ್ನು, 1980ರ ದಶಕದ ಮೊದಲು ಧಾರಾವಾಹಿಗಳನ್ನು ಓದುವ ಹವ್ಯಾಸವಿದ್ದವರು ಹಾಗೂ ಇಂದಿನ ಯುವಕರು ಇಬ್ಬರೂ ಆಸಕ್ತಿಯಿಂದ ಓದುತ್ತಿದ್ದಾರೆ. ಯಾಕೆಂದರೆ ಈ ಕಾದಂಬರಿಯು ನಮ್ಮ ಶ್ರೀಮಂತ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ನಮ್ಮ ಸಂಸ್ಕೃತಿಯ ಬೇರಿನೊಂದಿಗೆ ಈ ಕಾದಂಬರಿಯು ಅಳವಾಗಿ ಬೆಸೆದುಕೊಂಡಿದೆ.
ಜನರು ಈಗ ಡಿಜಿಟಲ್ ಯುಗದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ವೇಲ್ಪಾರಿಯ ಯಶಸ್ಸು ಸಾಹಿತ್ಯವು ಮಾತ್ರವೇ ಮಾನವನಿಗೆ ದಿವ್ಯವಾದ ಅನುಭೂತಿಯನ್ನು ತಂದುಕೊಡಬಲ್ಲದು ಎಂಬ ನನ್ನ ವಿಶ್ವಾಸವನ್ನು ದೃಢಪಡಿಸಿದೆ. ಮಾನವನ ಮನಸ್ಸಿಗೆ ಸಾಹಿತ್ಯವು ನೀಡುವ ಅನುಭವಕ್ಕೆ ಸರಿಸಾಟಿಯಾಗಲು ಇತರ ಯಾವುದೇ ತಂತ್ರಜ್ಞಾನಕ್ಕೂ ಸಾಧ್ಯವಿಲ್ಲ.
♦ ಕಮ್ಯುನಿಸ್ಟ್ ಚಳವಳಿಯ ಭಾಗವಾಗಿರುವ ನೀವು, ಸಮಕಾಲೀನ ವಿಷಯಗಳ ಬಗ್ಗೆ ಬರೆಯುತ್ತಿಲ್ಲವೆಂಬ ಟೀಕೆಗಳಿವೆ?
ಸು. ವೆಂಕಟೇಶನ್: ವೇಲ್ಪಾರಿಯ ಕಥೆಯು ತಮಿಳು ಸಮಾಜವು ವಿವಿಧ ಯುಗಗಳಲ್ಲಿ ಕಂಡಿರುವ ಪ್ರಕೃತಿ ಹಾಗೂ ಮಾನವನ ದುರಾಸೆಯ ನಡುವಿನ ಸಂಘರ್ಷದ ಕುರಿತಾದುದಾಗಿದೆ.ಈ ಕಾದಂಬರಿಯು ಪ್ರತಿಯೊಬ್ಬ ಓದುಗನಿಗೂ ಶೋಷಣಾತ್ಮಕ ರಾಜಕಾರಣದ ಬಗ್ಗೆ ಎಚ್ಚರಿಕೆ ನೀಡುತ್ತದೆ. ಪ್ರತಿಯೊಂದು ಸಾಹಿತ್ಯದಿಂದಲೂ ಈ ಕೆಲಸ ಆಗಬೇಕಾಗಿದೆಯೆಂಬುದನ್ನು ಅದು ನಮಗೆ ನೆನಪಿಸುತ್ತದೆ.
ಒಂದು ಹಂತದಲ್ಲಿ ದುಷ್ಟಶಕ್ತಿೆ ವಿಜೃಂಭಿಸಿದರೂ, ಆನಂತರ ಅದು ಪರಾಭವಗೊಳ್ಳುತ್ತದೆಯೆಂದು ಈ ಜಗತ್ತು ನಂಬುತ್ತಾ ಬಂದಿದೆ. ಹಾಗಾಗಿ ಸಾಹಿತ್ಯಕ್ಕೆ ಮಾನವನ ಮನಸ್ಸನ್ನು ಜಾಗೃತಗೊಳಿಸುವ ಶಕ್ತಿಯಿದೆಯೆಂದು ನಾನು ನಂಬಿದ್ದೇನೆ.
ಒಂದು ಸಾಹಿತ್ಯ ಕೃತಿಯ ಯಶಸ್ಸನ್ನು ಅದು ಎಷ್ಟರ ಮಟ್ಟಿಗೆ ಮಾನವನ ಮನಸ್ಸಿನ ಮೇಲೆ ಪರಿಣಾಮ ಬೀರಿದೆಯೆಂಬುದನ್ನು ಆಧರಿಸಿದೆ.
ಕೃಪೆ: scroll.in