11ನೇ ವರ್ಷಕ್ಕೆ 88 ಪದಕ ಮುಡಿಗೇರಿಸಿಕೊಂಡಿರುವ ಶಾಮಿಲ್
ಸ್ಕೇಟಿಂಗ್‌ನಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಬಾಲಕ
ಮಂಗಳೂರು, ಡಿ.12: ಎರಡೂವರೆ ವರ್ಷ ಪ್ರಾಯದ ಮಗುವಿಗೆ ‘ತುಂಟಾಟ’ ತಡೆಯಲು ತಾಯಿ ನೀಡಿದ ‘ಸ್ಕೇಟ್’ ಮುಂದೊಂದು ದಿನ ಆ ಮಗುವಿನ ಭವಿಷ್ಯವನ್ನೇ ಬದಲಿಸಬಹುದು ಎಂಬ ಕಲ್ಪನೆ ಸ್ವತಃ ತಾಯಿಗೂ ಇರಲಿಲ್ಲ. ಆ ರೀತಿಯ ಸಾಧನೆಯ ಮೂಲಕ ಮಿಂಚುತ್ತಿದ್ದಾನೆ ಹನ್ನೊಂದುವರೆ ವರ್ಷ ಪ್ರಾಯ ಮುಹಮ್ಮದ್ ಶಾಮಿಲ್ ಅರ್ಷದ್. ಮಂಗಳೂರಿನ ಮಣ್ಣಗುಡ್ಡ ನಿವಾಸಿ ಉದ್ಯಮಿ ಅರ್ಷದ್ ಹುಸೈನ್ ಎಂ.ಎಸ್. ಮತ್ತು ಉಪನ್ಯಾಸಕಿ ರಮ್ಲತ್ ಅರ್ಷದ್ ದಂಪತಿಯ ದ್ವಿತೀಯ ಪುತ್ರನಾಗಿರುವ ಮುಹಮ್ಮದ್ ಶಾಮಿಲ್ ಅರ್ಷದ್ ‘ಸ್ಕೇಟಿಂಗ್’ನಲ್ಲಿ ವಿಶೇಷ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ. ಜೆಪ್ಪಿನಮೊಗರು ಬಳಿಯ ಯೆನೆಪೊಯ ಸ್ಕೂಲ್‌ನಲ್ಲಿ 6ನೇ ತರಗತಿಯ ವಿದ್ಯಾರ್ಥಿಯಾಗಿರುವ ಶಾಮಿಲ್ ಮಂಗಳೂರಿನ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯ. ಮೋಹನ್‌ದಾಸ್ ಕೆ. ಮತ್ತು ಜಯರಾಜ್‌ರ ಗರಡಿಯಲ್ಲಿ ಪಳಗಿದ ಶಾಮಿಲ್ ತನ್ನ 5ನೇ ವಯಸ್ಸಿನಲ್ಲೇ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದ. ಶಾಮಿಲ್ ಇದುವರೆಗೆ 8 ಚಿನ್ನ, 1 ಬೆಳ್ಳಿ, 2 ಕಂಚು ಸಹಿತ ರಾಷ್ಟ್ರಮಟ್ಟದಲ್ಲಿ 11 ಪದಕ ಗಳಿಸಿದ್ದಾನೆ. 3 ಚಿನ್ನ, 4 ಬೆಳ್ಳಿ, 1 ಕಂಚು ಸಹಿತ ದಕ್ಷಿಣ ವಲಯ ಸಿಬಿಎಸ್‌ಇ ಮಟ್ಟದಲ್ಲಿ 8 ಪದಕ, 17 ಚಿನ್ನ ಮತ್ತು 1 ಬೆಳ್ಳಿ ಸಹಿತ ರಾಜ್ಯಮಟ್ಟದಲ್ಲಿ 18 ಪದಕ, 18 ಚಿನ್ನ ಮತ್ತು 1 ಬೆಳ್ಳಿ ಸಹಿತ ಜಿಲ್ಲಾ ಮಟ್ಟದಲ್ಲಿ 19 ಪದಕ, 10 ಚಿನ್ನ ಮತ್ತು 4 ಬೆಳ್ಳಿ ಸಹಿತ 14 ಅಂತರ್‌ಶಾಲಾ ಮಟ್ಟ, 18 ಬಾರಿ ವೈಯಕ್ತಿಕ ಚಾಂಪಿಯನ್... ಹೀಗೆ ಒಟ್ಟು 88 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಕಳೆದ 7ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ನಿರಂತರ ಚಿನ್ನದ ಪದಕಗಳನ್ನು ಗಳಿಸಿರುವ ಹೆಗ್ಗಳಿಕೆ ಈತನದ್ದು. ಶಾಮಿಲ್‌ನ ಸಾಧನೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಗೌರವಿಸಿವೆ. ಪ್ರಮುಖವಾಗಿ 2013ರಲ್ಲಿ ಸುಲ್ತಾನ್ ಗೋಲ್ಡ್ ಇಂಟರ್‌ನ್ಯಾಷನಲ್, 2016ರಲ್ಲಿ ಬ್ಯಾರೀಸ್ ಕಲ್ಚರಲ್ ಫೋರಂನ ಬಿಸಿಎಫ್ ಸ್ಪೋರ್ಟ್ಸ್ ಅವಾರ್ಡ್, 2017ರಲ್ಲಿ ಮಂಗಳೂರಿನ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್, 2017ರಲ್ಲಿ ರೋಟರಿ ಕ್ಲಬ್, 2017ರಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, 2017 ಮತ್ತು 2018ರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, 2017ರಲ್ಲಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಚಾರಿಟೇಬಲ್ ಟ್ರಸ್ಟ್, 2018ರಲ್ಲಿ ಯೆನೆಪೊಯ ಸ್ಕೂಲ್, 2018ರಲ್ಲಿ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ರಿ ಸಹಿತ ಅನೇಕ ಕಡೆ ಸನ್ಮಾನ, ಪ್ರಶಸ್ತಿಗಳಿಗೆ ಭಾಜನನಾಗಿದ್ದಾನೆ.
ಪುತ್ರನ ಈ ಸಾಧನೆಗೆ ಅರ್ಷದ್ ಈವರೆಗೆ ಸುಮಾರು 10 ಲಕ್ಷ ರೂ.ವಿಗೂ ಅಧಿಕ ಮೊತ್ತವನ್ನು ವ್ಯಯಿಸಿದ್ದಾರೆ. ಸರಕಾರದ ಎರಡು ಅಧೀನ ಸಂಸ್ಥೆಯಿಂದ 20 ಸಾವಿರ ರೂ. ನೆರವು ಸಿಕ್ಕಿದ್ದು ಬಿಟ್ಟರೆ ಉಳಿದ ಹಣವನ್ನು ಸ್ವತಃ ಅರ್ಷದ್ ಹುಸೈನ್‌ರೇ ಭರಿಸಿದ್ದಾರೆ. ಈ ಯುವ ಪ್ರತಿಭೆಯನ್ನು ರಾಜ್ಯ ಸರಕಾರ ಇನ್ನೂ ಗುರುತಿಸದಿರುವುದು ವಿಪರ್ಯಾಸ.
ಶಾಮಿಲ್‌ನನ್ನು ಬಾಲ್ಯದಲ್ಲೇ ಈ ಕ್ಷೇತ್ರದಲ್ಲಿ ಪಳಗಲು ನಾವು ಪ್ರೋತ್ಸಾಹ ನೀಡುತ್ತಾ ಬಂದೆವು. ಹಾಗೆಂದು ಅವನ ಮೇಲೆ ಒತ್ತಡ ಹಾಕಿಲ್ಲ. ಅವನಲ್ಲಿ ಸ್ಕೇಟಿಂಗ್ ಪ್ರತಿಭೆಯನ್ನು ಗುರುತಿಸಿದೆವು. ಅದಕ್ಕೆ ತಕ್ಕಂತೆ ತರಬೇತುಗೊಳಿಸಿದೆವು. ಅವನ ಕೋಚ್‌ಗಳ ಮತ್ತು ಶಾಲೆಯ ಶಿಕ್ಷಕ ಹಾಗೂ ಆಡಳಿತ ಮಂಡಳಿಯ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಆತ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬುದು ನಮ್ಮ ಕನಸು. ಅದನ್ನು ನನಸು ಮಾಡುತ್ತಾನೆ ಎಂಬ ವಿಶ್ವಾಸವೂ ನಮಗಿದೆ.
ಅರ್ಷದ್ ಹುಸೈನ್ -ರಮ್ಲತ್ ಅರ್ಷದ್
ಈ ಸಾಧನೆಗೆ ನನ್ನ ತಂದೆ-ತಾಯಿ, ಅಣ್ಣ ಮತ್ತು ತರಬೇತುದಾರರು, ಯೆನೆಪೊಯ ಸ್ಕೂಲ್‌ನ ಶಿಕ್ಷಕ ಮತ್ತು ಆಡಳಿತ ವರ್ಗದ ಸಹಕಾರ ಅಪಾರ. ಭವಿಷ್ಯದಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗಳಿಸುವ ಗುರಿ ಹೊಂದಿದ್ದೇನೆ. ಅಲ್ಲದೆ ಚಾಂಪಿಯನ್ ಆಗಿ ಹೊರಹೊಮ್ಮಬೇಕು ಎಂಬ ಆಸೆಯೂ ಇದೆ. ಒಲಿಂಪಿಕ್ಸ್‌ನಲ್ಲಿ ಸ್ಕೇಟಿಂಗ್ ಸೇರ್ಪಡೆಯಾದರೆ ಭಾರತವ್ನು ಪ್ರತಿನಿಧಿಸುವ ಇಚ್ಛೆ ಕೂಡಾ ಇದೆ.
ಮುಹಮ್ಮದ್ ಶಾಮಿಲ್ ಅರ್ಷದ್