ಸೋಲರಿಯದ ಸರದಾರ, ದಿಲ್ಲಿ ದರ್ಬಾರ್ನ ನಾಯಕ ಈಗ ಮಧ್ಯ ಪ್ರ ದೇಶದ ಸಿಎಂ
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನಗಳೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಮಲ್ ನಾಥ್ ರಿಗೆ ಮಧ್ಯಪ್ರದೇಶ ಸಿಎಂ ಹುದ್ದೆಯನ್ನು ಅಲಂಕರಿಸುವ ಅವಕಾಶ ಮಾಡಿಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ ಕಮಲ್ನಾಥ್ ಕೋಲ್ಕತ್ತಾ ವಿವಿಯ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು. ಲೋಕಸಭೆಯಲ್ಲಿ ಅತೀ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ ಹಿರಿಯ ಸದಸ್ಯರಲ್ಲೊಬ್ಬರಾಗಿರುವ ಕಮಲ್ ನಾಥ್ ಮಧ್ಯಪ್ರದೇಶದ ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ 9 ಬಾರಿ ಗೆದ್ದು ಇತಿಹಾಸ ನಿರ್ಮಿಸಿದವರು. ಮಧ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕಮಲ್ ನಾಥ್ ನೆಹರೂ-ಗಾಂಧಿ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಸಂಜಯ್ ಗಾಂಧಿಯವರೊಂದಿಗೆ ಅವರು ಡೂನ್ ಸ್ಕೂಲ್ನಲ್ಲಿ ಸಹಪಾಠಿಯಾಗಿದ್ದರು.
ಕಮಲ್ ನಾಥ್ 1980, 1985, 1989, 1991, 1998, 1999, 2004, 2009, 2014ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. 1991ರಲ್ಲಿ ಅವರು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವರಾಗಿ, 1995ರಿಂದ 1996ರವರೆಗೆ ಕೇಂದ್ರ ಜವುಳಿ ಖಾತೆ ರಾಜ್ಯ ಸಚಿವರಾಗಿ, 2004ರಿಂದ 2009ರವರೆಗೆ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವರಾಗಿ, 2009ರಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
2006ರಲ್ಲಿ ಜಬಲ್ಪುರ್ ರಾಣಿ ದುರ್ಗಾವತಿ ವಿವಿ ಕಮಲ್ನಾಥ್ರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 1973 ಜನವರಿ 27ರಂದು ಅಲ್ಕಾ ನಾಥ್ರನ್ನು ಕಮಲ್ ನಾಥ್ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುತ್ರರಿದ್ದಾರೆ.
ಸಿಖ್ ಹತ್ಯಾಕಾಂಡದ ಕಳಂಕ
1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಮರುದಿನ 4,000ಕ್ಕೂ ಅಧಿಕ ಜನರು ರಕಬ್ ಗಂಜ್ ಗುರುದ್ವಾರದ ಮೇಲೆ ದಾಳಿ ನಡೆಸಿದ್ದು, ಇಬ್ಬರು ಸಿಖ್ಖರನ್ನು ಜೀವಂತದಹಿಸಲಾಗಿತ್ತು. ಈ ಸಂದರ್ಭ ಕಮಲ್ ನಾಥ್ ಅದೇ ಸ್ಥಳದಲ್ಲಿದ್ದರು ಎಂದು ಸಿಖ್ ಹತ್ಯಾಕಾಂಡದ ಕುರಿತು ಮನೋಜ್ ಮಿಟ್ಟಾ ಮತ್ತು ಎಚ್. ಎಸ್. ಫೂಲ್ಕಾ ಅವರು ಬರೆದ ‘ವೆನ್ ಎ ಟ್ರೀ ಶುಕ್ ದಿಲ್ಲಿ’ ಎನ್ನುವ ಪುಸ್ತಕದಲ್ಲಿ ಆರೋಪಿಸಲಾಗಿದೆ. ಗುರುದ್ವಾರಕ್ಕೆ ಗುಂಪು ಮುತ್ತಿಗೆ ಹಾಕಿದ ಸಂದರ್ಭ ಕಮಲ್ ನಾಥ್ ಅದೇ ಸ್ಥಳದಲ್ಲಿ 2 ಗಂಟೆಗಳಿಗೂ ಕಾಲ ಅಲ್ಲಿದ್ದರು ಎಂದು ಪುಸ್ತಕದಲ್ಲಿ ಆರೋಪಿಸಲಾಗಿದೆ. ಸ್ಥಳದಲ್ಲಿದ್ದರೂ ಸಿಖ್ ವ್ಯಕ್ತಿಗಳನ್ನು ರಕ್ಷಿಸಲು ರಾಜಕೀಯ ನಾಯಕರಾಗಿ ಯಾವುದೇ ಪ್ರಯತ್ನ ಮಾಡಿಲ್ಲ ಎನ್ನುವ ಆರೋಪ ಕಮಲ್ ನಾಥ್ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಾಗಿಯೇ ಉಳಿದಿದೆ.
ಹವಾಲಾ ಹಗರಣದ ದೋಷಾರೋಪ ಪಟ್ಟಿಯಲ್ಲಿ ಅವರ ಹೆಸರು ಸೇರಿದಾಗ 1996 ರಲ್ಲಿ ಅವರಿಗೆ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಯಿತು. ಆಗ ಅವರ ಪತ್ನಿ ಅಲ್ಕಾನಾಥ್ ಛಿಂದ್ವಾರದಿಂದ ಸ್ಪರ್ಧಿಸಿ ಗೆದ್ದಿದ್ದರು ಮತ್ತೆ ಮುಂದಿನ ಚುನಾವಣೆಯಲ್ಲಿ ಕಮಲ್ನಾಥ್ ಸ್ಪರ್ಧಿಸಿ ಗೆದ್ದರು.