ಜನರ ಸ್ಥಿತಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ ದನಗಳಿಗಿಂತ ಭಿನ್ನವಲ್ಲ
ಸ್ವತಂತ್ರ ಕಾರ್ಮಿಕ ಪಕ್ಷದ ಜನಕರಾದ ಡಾ.ಅಂಬೇಡ್ಕರ್ ಅವರು ಮೆ.ಗಡಕರಿ, ಸಾವಂತ, ದೇವರೂಕರ, ಗಾಯಕವಾಡ, ಕೆ.ಬಿ. ಜಾಧವ, ಶಾಮರಾವ ಭೋಳೆ ಮುಂತಾದವರೊಂದಿಗೆ ಫಲಟಣಗೆ ಹೋಗುವಾಗ ಹಾದಿಯಲ್ಲಿ ಲೋಣದ ಎಂಬಲ್ಲಿ ಆಬಾಸಾಹೇಬ ಖರಾತ ಎನ್ನುವವರು ಅವರನ್ನು ಆದರಪೂರ್ವಕ ಸ್ವಾಗತಿಸಿ ಎಲೆತಾಂಬೂಲ ನೀಡಿದರು. ಈ ಸಮಯದಲ್ಲಿ ಸಾವಂತ ಮತ್ತು ಗಾಯಕವಾಡರು ಭಾಷಣ ಮಾಡಿದರು. ಎಲ್ಲರೂ ಪಕ್ಷದ ಸದಸ್ಯರಾಗುವಂತೆ ಕೋರಿ ಚಿಕ್ಕ ಭಾಷಣ ಮಾಡಿದರು. ಖರಾತ ಅವರು ಅಂಬೇಡ್ಕರ್ ಹಿಂದಿನ ಸಂಗತಿಗಳನ್ನೆಲ್ಲ ಮರೆತು, ತಮ್ಮ ಕೋರಿಕೆಯನ್ನು ಮನ್ನಿಸಿ ಇಲ್ಲಿಗೆ ಆಗಮಿಸಿದ್ದಕ್ಕೆ ಸಮಾಧಾನ ವ್ಯಕ್ತ ಮಾಡಿ ಮಾಲಾರ್ಪಣೆ ಮಾಡಿದರು.
ಬಳಿಕ ಡಾ.ಅಂಬೇಡ್ಕರ್ ಅವರು ಖರಾತರು ಏರ್ಪಡಿಸಿದ ಸಮಾರಂಭಕ್ಕೆ ಕೃತಜ್ಞತೆ ವ್ಯಕ್ತಮಾಡಿದರು. ‘‘ಹಿಂದೆ ಅಸೆಂಬ್ಲಿ ಚುನಾವಣೆಯ ಕಾಲಕ್ಕೆ ಸಾತಾರಾ ಜಿಲ್ಲೆಯ ಸ್ವತಂತ್ರ ಕಾರ್ಮಿಕ ಪಕ್ಷದ ಅಭ್ಯರ್ಥಿ ಖಂಡೆರಾವ್ ಸಾವಂತರ ಸಹಾಯಕ್ಕಾಗಿ ನಾನು ಬಂದಾಗ ಖರಾತರ ಜೇಷ್ಠ ಪುತ್ರ ಸಾವಂತರ ವಿರುದ್ಧ ಸ್ಪರ್ಧಿಸಿದ. ಆಗ ನಾನು ಖರಾತರ ಕುರಿತು ಟೀಕೆ ಮಾಡಿದ್ದೆ. ಹೀಗಿದ್ದರೂ ಖರಾತರು ಸಾರ್ವಜನಿಕ ಕಾರ್ಯದ ಮಹತ್ವ ಅರಿತು ಅದನ್ನೆಲ್ಲಾ ಮರೆತಿದ್ದಾರೆ. ಇದು ಸಮಾಧಾನದ ಸಂಗತಿ. ಕಾರ್ಯಕರ್ತರು ಇದು ಅನುಸರಿಸಬೇಕಾದ ಪಾಠ!’’ ಸೇರಿದ ಜನರಿಗೆ ಮಾಲಾರ್ಪಣೆ, ತಾಂಬೂಲ ನೀಡಿದ ಬಳಿಕ ಖರಾತರಲ್ಲಿ ಊಟ ಮುಗಿಸಿ ಡಾ.ಅಂಬೇಡ್ಕರ್‌ರು ದಿ: 23 ಎಪ್ರಿಲ್ 1929ರಂದು ಫಲಟಣ ತಲುಪಿದರು.
ಫಲಟಣ ಸಂಸ್ಥಾನ ಅಧಿಪತಿಯು ಡಾ.ಅಂಬೇಡ್ಕರ್ ಅವರಿಗೆ ಮೊದಲೇ ಪತ್ರ ಬರೆದು ಚಹಾ ಕೂಟಕ್ಕೆ ಆಮಂತ್ರಿಸಿದ್ದರು. ಸಂಜೆ 4ಕ್ಕೆ ಡಾ.ಅಂಬೇಡ್ಕರ್, ಗಡಕರಿ, ದೇವರೂಖರರ, ಗಾಯಕವಾಡ, ರಣಪಿಸೆ, ಸಾವಂತ, ಕೆ.ಬಿ ಜಾಧವ, ಶಾಮರಾವ್ ಭೋಳೆ ಮುಂತಾದವರು ಅಧಿಪತಿ ಕಳುಹಿಸಿದ ವಿಶೇಷ ವಾಹನದಲ್ಲಿ ಕೂತು ರಾಜವಾಡೆಗೆ ಬಂದರು. ಅಲ್ಲಿ ರಾಜೆ ಸಾಹೇಬ ಮತ್ತು ಅಂಬೇಡ್ಕರ್‌ರು ಸಾರ್ವಜನಿಕ ವಿಷಯದ ಬಗ್ಗೆ ಮಾತುಕತೆ ಮುಗಿಸಿದ ಬಳಿಕ ಚಹಾಕೂಟ ನಡೆಯಿತು. ರಾಜರೊಂದಿಗೆ ಒಂದು ಗ್ರೂಫ್ ಫೋಟೋ ತೆಗೆಯಲಾಯಿತು. ಸಂಜೆ 5ಕ್ಕೆ ರಾಜವಾಡೆಯಿಂದ ಮೆರವಣಿಗೆಯ ಮೂಲಕ ಸಭಾಮಂಟಪಕ್ಕೆ ಬಂದರು. ಸಂಸ್ಥಾನದ ಶ್ರೇಷ್ಠ ಸ್ತ್ರೀ ಪುರುಷರು ಆಗಮಿಸಿದ್ದರು. ಆರಂಭಕ್ಕೆ ಸ್ವಾಗತಗೀತೆ, ಪೋವಾಡೆ ಮುಗಿದ ಬಳಿಕ ಸ್ವಾಗತಾಧ್ಯಕ್ಷರಾದ ಶ್ರೀ ಗಾಯಕವಾಡರು ಸಭೆಗೆ ಆಗಮಿಸಿದ ಡಾ.ಅಂಬೇಡ್ಕರ್ ಮತ್ತು ಉಳಿದವರನ್ನು ಸ್ವಾಗತಿಸಿ, ತಮ್ಮ ಸಮಾಜ ಸಂಘಟಿತರಾಗುವುದು ಎಷ್ಟು ಅಗತ್ಯದ್ದು, ಮಹತ್ವದ್ದು ಎಂದೆಲ್ಲ ಹೇಳಿದರು. ಕೊನೆಗೆ ಡಾ.ಅಂಬೇಡ್ಕರ್‌ರು ಸಮ್ಮೇಳನದ ಅಧ್ಯಕ್ಷ ಸ್ಥಾನ ಸ್ವೀಕರಿಸುವಂತೆ ಕೋರಿದರು. ಜನರ ಕರತಾಡನದ ನಡುವೆ ಅಂಬೇಡ್ಕರ್ ಸ್ಥಾನಾಸನ್ನರಾಗಿದ್ದರು. ಸಭೆಗೆ ಸಂಸ್ಥಾನದ ಬಳಿ ಹೊರಗಿನಿಂದ ಸುಮಾರು 10-12 ಸಾವಿರ ಜನರು ಆಗಮಿಸಿದ್ದರು. ಸಭೆಯನ್ನು ಉದ್ದೇಶಿಸಿ ಡಾ.ಅಂಬೇಡ್ಕರ್ ಅವರು ಆಡಿದ ಮಾತು ಹೀಗಿತ್ತು:
‘‘ನಾನು ಫಲಟಣ ಸಂಸ್ಥಾನದ ಅಸ್ಪಶ್ಯರ ಸಮ್ಮೇಳನಕ್ಕಾಗಿ ಆಗಮಿಸಿದರೂ, ಸರ್ವಜನತೆಯ ಕರ್ತವ್ಯವೇನು, ಜಗತ್ತಿನಲ್ಲಿ ಏನು ನಡೆದಿದೆ ಎನ್ನುವ ಕಡೆಗೆ ನಿರ್ಲಕ್ಷಮಾಡಿದರೆ ಉಪಯೋಗವಾಗಲಾರದು. ಜನಸಾಮಾನ್ಯರು ಈಗ ಪ್ರಜಾಪ್ರಭುತ್ವದ ಭಾಷೆಯ ಬಗ್ಗೆ ಮಾತನಾಡುತ್ತಿದ್ದು, ಸಂಸ್ಥಾನದ ಹೊರಗೂ-ಒಳಗೂ ಪ್ರಜಾಪ್ರಭುತ್ವದ ತತ್ವದ ಅಡಿಯಲ್ಲಿ ಸುಧಾರಣೆ ನಡೆಯಲೆಂದು ಬಯಸುತ್ತಿದ್ದಾರೆ. ಹೀಗಾಗಿ ಸಂಸ್ಥಾನಿಕರೂ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿ ಪ್ರಜೆಗಳಿಗೆ ಸಾಧ್ಯವಾದಷ್ಟು ಹೆಚ್ಚು ಅಧಿಕಾರ ನೀಡಬೇಕು.
ಇಂದಿನ ಸಂಸ್ಥಾನಗಳು ಹಿಂದಿನ ರಾಜ್ಯದ ಅವಶೇಷಗಳು. ಹಿಂದೆ ರಾಜರಿಗೆ ನೀಡಲಾದ ಬೋಧನೆ ಏನೆಂದರೆ ಗೋ-ಬ್ರಾಹ್ಮಣರ ಪ್ರತಿಪಾಲನೆ ಮಾಡು ಇಷ್ಟೇ! ಅದೇ ರಾಜನ ಮುಖ್ಯ ಕರ್ತವ್ಯವೆಂದು ಭಾವಿಸಲಾಗುತ್ತಿತ್ತು. ದಿನಗಳಿಗೆ ಮೇವು ಹಾಕಿ, ಬ್ರಾಹ್ಮಣರ ರಕ್ಷಣೆ ಮಾಡಿದರೆ ರಾಜನಿಗೆ ಬೇರೆ ಕರ್ತವ್ಯವೇ ಇಲ್ಲವೆಂದು ಭಾವಿಸುತ್ತಿದ್ದರು. ರಾಜನು ಅದರ ಹೊರತು ಬೇರೇನೂ ಮಾಡದಿದ್ದರೂ ನಡೆಯುತ್ತಿತು. ಇಂದು ಸಂಸ್ಥಾನದಲ್ಲಿ ವಾಸಿಸುವ ಜನರ ಪರಿಸ್ಥಿತಿಯತ್ತ ನೋಡಿದರೆ, ಅವರ ಸ್ಥಿತಿಯು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ದನಗಳಿಗಿಂತ ಬೇರೆಯಿಲ್ಲ. ಈ ದೋಷ ಹಿಂದೂ ಧರ್ಮದ ಬೋಧನೆಯದು. ಚಾಣಾಕ್ಯ ನೀತಿ, ಮನುಸ್ಮತಿ ಮುಂತಾದ ಗ್ರಂಥಗಳನ್ನು ಅವಲೋಕಿಸಿದರೆ ನಿಮಗೆ ಕಂಡುಬರುವುದೇನೆಂದರೆ, ರಾಜನ ಕರ್ತವ್ಯದಲ್ಲಿ ಹಳ್ಳಿಗಳಲ್ಲಿ ಶಾಲೆ ತೆರೆದು ಜನರಿಗೆ ವಿದ್ಯೆ ನೀಡುವುದಾಗಲಿ, ಜನಹಿತರ ಕಾರ್ಯವಾಗಲಿ ಎಲ್ಲಿಯೂ ಗೋಚರಿಸುವುದಿಲ್ಲ. ಇದನ್ನೆಲ್ಲಾ ನಾವು ಆಂಗ್ಲರಿಂದ ಕಲಿತೆವು-ಎಂದು ಒಪ್ಪಿಕೊಳ್ಳಲು ನಾಚಿಕೆ ಪಡಬೇಕಿಲ್ಲ. ಪ್ರಾಚೀನ ಕಾಲದ ರಾಮಕೃಷ್ಣರಂತಹ ರಾಜರೂ ಸಹ ಜನರಲ್ಲಿ ಶಿಕ್ಷಣ ಪ್ರಸಾರವಾಗಲೆಂದು ಶಿಷ್ಯವೇತನವನ್ನೇನಾದರೂ ನೀಡಿದ್ದರೆ? ಫಲಟಣದ ನಮ್ಮ ಜನರು ಜ್ಞಾನಹೀನರೂ, ಅಧಿಕಾರ ಹೀನರೂ ಆಗಿದ್ದಾರೆ. ಜನರ ಈ ಸ್ಥಿತಿಗೆ ಧರ್ಮವೇ ಹೊಣೆಗಾರ! ದೇಶದಲ್ಲಿ ಶೇ. 90ರಷ್ಟು ಜನರು ಅಜ್ಞಾನ ಮತ್ತು ಗುಲಾಮಗಿರಿಯಲ್ಲಿ ದಿನ ಕಳೆಯುತ್ತಿದ್ದಾರೆ. ಇದಕ್ಕೆ ಹಿಂದೂ ಧರ್ಮವೇ ಮೂಲ ಕಾರಣ. ಅಷ್ಟೇ ಅಲ್ಲ, ಹಿಂದೂಸ್ಥಾನ ಸ್ವಾತಂತ್ರ ಕಳೆದುಕೊಳ್ಳಲು, ಪರಕೀಯ ರಾಜನಿಗೆ ಆಶ್ರಯ ನೀಡಿ, ಅವನಿಗೆ ಶರಣು ಹೋಗಲೂ ಸಹ ಹಿಂದೂ ಧರ್ಮವೇ ಕಾರಣ.
ಈ ಪದ್ಧತಿಯನ್ನು ನಾಶಪಡಿಸಲು ನಾವಿಂದು ಏನುಮಾಡಬೇಕು ಎನ್ನುವುದೇ ಮುಖ್ಯ ಪ್ರಶ್ನೆ. ಇದಕ್ಕೆ ರಾಮಬಾಣ ಉಪಾಯ ಹೇಳಬೇಕೆಂದರೆ, ರಾಜ್ಯದ ಸತ್ತೆಯನ್ನು ಕಸಿದುಕೊಂಡು, ಅದನ್ನು ಪ್ರಜೆಗಳ ಕೈಗೆ ನೀಡುವುದು. ಈ ಕುರಿತು ನನ್ನ ವಿಚಾರ ಕೇಳಿದರೆ ನಿಮಗೆ ವಿಚಿತ್ರವೆನಿಸಬಹುದು. ಆದರೆ ನಾನದನ್ನು ಮುಚ್ಚಿಡಲಾರೆ. ಆಂಗ್ಲರ ಆಡಳಿತ ಶುರುವಾಗಿ ಎಷ್ಟೋ ದಿನ ಕಳೆದ ಬಳಿಕ, ಜನಕಲ್ಯಾಣ ಮಾಡಬೇಕಿದ್ದರೆ, ರಾಜಕೀಯ ಸತ್ತೆಯು ಪ್ರಜೆಗಳ ಪ್ರತಿನಿಧಿಯ ಕೈಯಲ್ಲಿರುವುದು ಯೋಗ್ಯ ಎಂದೆನಿಸಲಾರಂಭಿಸಿತು. ಈ ಬಗೆಗೆ ಜನರ ಆಕಾಂಕ್ಷೆಯು ಸತತ ಬೆಳೆಯಲಾರಂಭಿಸಿತು. ಅದನ್ನು ಅನುಸರಿಸಿ ಜಾರಿಗೆ ಬಂದ ಕೆಲ ಸುಧಾರಣೆಗಳು ನಮ್ಮ ಈ ಹಿಂದೂಸ್ಥಾನದಲ್ಲಿ 1937 ಎಪ್ರಿಲ್‌ನಿಂದ ಶುರುವಾಯಿತು. ಆದರೆ ಲಭಿಸಿದ ಈ ಪ್ರಜಾಸತ್ತಾತ್ಮಕ ರಾಜ್ಯದಿಂದ ದೇಶಕ್ಕಾಗಿ ಲಾಭವಾದರೂ ಏನು? ಸತ್ಯವೆಂದರೆ, ನಿಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕ ರಾಜ್ಯಪದ್ಧತಿಯಿಂದ ಕವಡೆಯಷ್ಟೂ ವ್ಯತ್ಯಾಸವಾಗಲಿಲ್ಲ.
ವಿದೇಶಿ ಆಂಗ್ಲರ ಆಡಳಿತದಲ್ಲಿ ಅವರೇನು ಮಾಡಲಿಲ್ಲವೋ, ಅದನ್ನು ಈ ಜನರು ಮಾಡುವುದನ್ನು ಕಾಣಬಹುದು. ಯಾವ ವಿಷಯದ ಬಗೆಗೆ ಅವರಿಗೆ ನಾಚಿಕೆಯೆನಿಸುತ್ತಿತ್ತೋ, ಅದನ್ನು ಜನರ ಮತಗಳಿಂದ ಗೆದ್ದು ಬಂದ ಜನರು ಮಾಡಿದ್ದಾರೆ. ನಿಶ್ಶಸ್ತ್ರವಾಗಿರುವ ಕಾರ್ಮಿಕರ ಮೇಲೆ ಗುಂಡು ಹಾರಿಸಿ ಕೊಲ್ಲುವುದು, ಹೊಟ್ಟೆಗಾಗಿ ಮುಷ್ಕರ ಮಾಡುವುದು ಅಪರಾಧವೆಂಬ ಕಾನೂನನ್ನು ಹಿಂದಿನ ಸರಕಾರ ಮಾಡದೆ ಇರುವುದನ್ನು ಕಾಂಗ್ರೆಸ್ ಸರಕಾರ ಹಿಂಜರಿಯದೆ ಮಾಡುತ್ತ ಸಾಗಿದೆ.
ಪ್ರಾಚೀನ ಕಾಲದ ಗೋ-ಬ್ರಾಹ್ಮಣ ಪ್ರತಿಪಾಲನೆ ಎಂಬ ಬೋಧನೆಯು ಇಂದಾದರೂ ವ್ಯವಹಾರದಿಂದ ಹಿಂದೆ ಸರಿದಿದೆಯೇ? ಇಂದು ಏಳು ಪ್ರಾಂತಗಳಲ್ಲಿ ಕಾಂಗ್ರೆಸ್ ಸರಕಾರವಿದೆ. ಆ ಎಲ್ಲಾ ಪ್ರಾಂತಗಳ ಮುಖ್ಯ ಪ್ರಧಾನಿ ಬ್ರಾಹ್ಮಣರು. ಅಂದರೆ ಎಲ್ಲ ಪ್ರಾಂತಗಳ ಸತ್ತೆಯೂ ಬ್ರಾಹ್ಮಣರ ಕೈಯಲ್ಲಿ. ಇಂಥ ರಾಜ್ಯದಲ್ಲಿ ಸರ್ವರ ಕಲ್ಯಾಣವಾಗುತ್ತದೆ ಎಂದು ಹೇಳುವುದು ಕಾಡು ಹರಟೆಯಾಗುತ್ತದೆ. ಅವರಿಂದ ಸರ್ವರ ಕಲ್ಯಾಣ ಅಸಾಧ್ಯ. ಎಲ್ಲಿಯವರೆಗೆ ಈ ದೇಶದ ಬಡವರ ಹಿತ ಸಂಬಂಧವು ಶ್ರೀಮಂತರಿಗಿಂತ ಭಿನ್ನವಾಗಿದೆಯೋ, ಒಂದು ವರ್ಗದ ಹಿತದಲ್ಲಿ ಬೇರೆಯವರ ಅಹಿತವಿದೆಯೋ, ಅಂಥಲ್ಲಿ ಇಂಥ ಕಾಂಗ್ರೆಸ್ ವರ್ಗ ಇರಿಸಿಕೊಳ್ಳುವುದೆಂದರೆ, ಆ ವರ್ಗದ ಅಧೋಗತಿಯೇ ಸರಿ. ಇಂದು ಎಲ್ಲಿ ಕ್ರಯ-ವಿಕ್ರಯ ವಸ್ತುವಿನಂತೆ ತಮ್ಮ ಮತಗಳನ್ನು ಶ್ರೀಮಂತರ ಹಣದ ಲೋಭಕ್ಕೊಳಗಾಗಿ ಮಾರುತ್ತಾರೋ ಅದನ್ನು ಖರೀದಿಸಲು ಶ್ರೀಮಂತ ಮಾರವಾಡಿ ಗುಜರ್‌ನಂಥವರು ಇದ್ದಾರೋ, ಅಂಥವರ ಕೈಗೆ ಸತ್ತೆ ನೀಡಿದಾಗ ತಮ್ಮ ಹಾನಿ ಮಾಡಿಕೊಂಡು ಈ ವರ್ಗ ದೀನ ದಲಿತರ ಕಲ್ಯಾಣ ಮಾಡುತ್ತದೆ ಎನ್ನುವುದು ಎಂದಿಗೂ ಸಾಧ್ಯವಿಲ್ಲ. ಇಂಥ ಪ್ರಜಾಪ್ರಭುತ್ವಕ್ಕಿಂತ ಅನಿಯಂತ್ರಿತ ಸತ್ತೆ ಕೈಯಲ್ಲಿರುವ ರಾಜ ಪರವಾಗಿಲ್ಲ ಎಂದೆನ್ನುವ ಕಾಲ ಈಗ ಬಂದಿದೆ. ಯುರೋಪ್‌ನಲ್ಲಿ ಅಭಿವೃದ್ಧಿ ಹೊಂದಿದ ಪ್ರಾಂತಗಳೆಂದರೆ ಜರ್ಮನಿ, ಟರ್ಕಿ, ಇಟಲಿ ಮುಂತಾದವು. ‘ರಾಜ ಕಾಲಸ್ಯ ಕಾರಣಂ’ ಎಂಬಂತೆ ದೇಶದ ಏಳ್ಗೆಗೆ, ಉನ್ನತಿಗೆ ರಾಜನೇ ಕಾರಣನಗಿರುತ್ತಾನೆ. ಇಂದಂತೂ ಜರ್ಮನಿಯ ಹಿಟ್ಲರ್, ಟರ್ಕಿಯ ಮುಸಲೋನಿ ಮತ್ತು ಇಟಲಿಯ ಕೆಮಲಾಪಾಶಾ- ತಮ್ಮ ದೇಶದ ಉನ್ನತಿಗೆ ಕಾರಣರಾಗಿದ್ದಾರೆ. ಇಂಥ ರಾಜರ ಕೈಯಲ್ಲಿ ಸರ್ವಾಧಿಕಾರವಿದ್ದಾಗ ಅವರು ಪ್ರಜೆಗಳ ಕಲ್ಯಾಣ ಮಾಡುವಷ್ಟು ಕಲ್ಯಾಣವನ್ನು ಹಣಕೊಟ್ಟು ಮತ ಖರೀದಿಸುವ ಮಾರವಾಡಿ, ಗುಜಕರು ಪ್ರಜಾಪ್ರಭುತ್ವದ ಹೆಸರಿನಲ್ಲೂ ಮಾಡಲಾರರು.
ಇಲ್ಲಿಯ ರಾಜರು ಸೂಜ್ಞರಾಗಿದ್ದಾರೆ. ಅವರಿಗೆ ಪೆನ್ಶನ್ ನೀಡಿ ಸಂಸ್ಥಾನ ವನ್ನು ಅಧೀನಪಡಿಸಿಕೊಳ್ಳಲು ಅಡ್ಡಿ ಬರಬಹುದೆಂದು ನನಗನಿಸುವುದಿಲ್ಲ. ಬದಲಿಗೆ ನನ್ನ ಈ ಸೂಚನೆಯನ್ನು ಒಪ್ಪಲು ಅವರಿಗೆ ಅಡಚಣೆ ಬರಲಿಕ್ಕಿಲ್ಲ. ಈ ಸಂಸ್ಥಾನದ ಜನಸಂಖ್ಯೆ 58,000ದಷ್ಟಿದ್ದು ವಸೂಲಿ ಮಾತ್ರ ಕೇವಲ ಐದೂವರೆ ಲಕ್ಷ. ಯಾವ ಮುಂಬೈ ಪ್ರಾಂತದ ಜನಸಂಖ್ಯೆಯು ಎರಡು ಕೋಟಿ ಮತ್ತು ಆದಾಯ 12.5 ಕೋಟಿಯಷ್ಟಿದ್ದರೂ ಈ ಪ್ರಾಂತದಲ್ಲಿಯೂ ಸಹ ಶೇ. 85 ಊರುಗಳಲ್ಲಿ ಶಾಲೆಗಳಿಲ್ಲ. ಹೀಗಿದ್ದಾಗ ಇಂಥ ಅಲ್ಪ ಆದಾಯದ ಸಂಸ್ಥಾನವನ್ನು ವಶಪಡಿಸಿಕೊಂಡು ನೇಣು ಹಾಕಿ ಕೊಳ್ಳಬೇಕೇ? ಐದೂವರೆ ಲಕ್ಷದಿಂದ ಫಲಟಣ ವಿಕಸನ ಹೊಂದುವುದು ಸಾಧ್ಯವಿಲ್ಲ. ಅವರು ಈ ಪ್ರಾಂತವನ್ನು ಆಂಗ್ಲರ ಪ್ರಾಂತಕ್ಕೆ ಸೇರಿಸಬೇಕು.
ಈ ಸಂಸ್ಥಾನದಲ್ಲಿಯ ಅಸ್ಪಶ್ಯರ ಬೇಡಿಕೆಗಳನ್ನು ರಾಜನ ಎದುರಿಗಿಡಲು ಅವಕಾಶ ಸಿಗಬೇಕು. ಪ್ರಜೆಗಳ ಸಂರಕ್ಷಣೆ ಮಾಡಿ ಅವರ ಹಸಿವನ್ನು ನಿವಾರಣೆ ಮಾಡಬೇಕು. ಯಾವ ಜನರಿಗೆ ಅಸ್ಪಶ್ಯರಾಗಿರುವುದರಿಂದ ದಂಧೆ-ಉದ್ಯೋಗ ಮಾಡುವುದು ಸಾಧ್ಯವಿಲ್ಲವೋ, ಯಾರನ್ನು ಸ್ಪಶ್ಯರಾದವರು ಮನೆಗೆಲಸಕ್ಕೂ ಅವಕಾಶ ಕೊಡುವುದಿಲ್ಲವೋ ಅಂಥ ಪ್ರಜೆಗಳಿಗೆ ಸರಕಾರ ಮರಡಿ ಭೂಮಿಯನ್ನು ಊಳಿ ಬಳಸಲು ಅವಕಾಶ ಮಾಡಿಕೊಡಬೇಕು. ಶಿಕ್ಷಣ ಪಡೆಯಲು ಬೇಕಾದ ಹಣ ಈ ವರ್ಗದವರ ಹತ್ತಿರವಿಲ್ಲದಿರುವುದರಿಂದ ಸರಕಾರವೇ ಅವರಿಗೆ ಸ್ಲೇಟು, ಪುಸ್ತಕ, ಶಿಷ್ಯವೇತನ ನೀಡಿ ಸಹಾಯ ಮಾಡಬೇಕು.
ಈ ಸಂಸ್ಥಾನದಲ್ಲಿರುವ ಕಾಯ್ದೆಮಂಡಲದಲ್ಲಿ 19 ಜನರಿದ್ದಾರೆ. ಅದರಲ್ಲಿ ನಮ್ಮ ಪ್ರತಿನಿಧಿಯನ್ನು ಸೇರಿಕೊಳ್ಳ ಬೇಕು. ಹಿಂದೆ ಆಯವಳೆ ಎಂಬ ಗೃಹಸ್ಥರು 1933 ವರೆಗೆ ಕಾಯ್ದೆಮಂಡಲಿಯಲ್ಲಿದ್ದರು. ಅವರ ಸಾವಿನ ಬಳಿಕ ಬೇರೆಯವರನ್ನು ಏಕೆ ಮಾಡುತ್ತಿಲ್ಲ ಎನ್ನುವುದೇ ತಿಳಿಯುತ್ತಿಲ್ಲ. ಒಮ್ಮೆ ಪಡೆದ ಹಕ್ಕು ಮರಳಿ ಪಡೆದರೆ, ಅದನ್ನು ಅಗತ್ಯ ಮರಳಿ ಬೇಡಬೇಕು. ಹಾಗೆಯೇ ನಗರ ಪಾಲಿಕೆ, ಜಿಲ್ಲಾಬೋರ್ಡ್ ಮುಂತಾದ ಕಡೆಗಳಲ್ಲಿ ನಮ್ಮ ವರ್ಗದ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕು.
ಕೊನೆಗೆ ಒಂದು ಕಠೋರ ಸತ್ಯವನ್ನು ಹೇಳದೆ ಇರುವುದು ನನ್ನಿಂದ ಸಾಧ್ಯವಿಲ್ಲ. ನಮ್ಮ ಸಮಾಜದಲ್ಲಿ ಮೃತ ಮಾಂಸಾಹಾರ ಅನಿಷ್ಟ ಪದ್ಧತಿ ರೂಢಿಯಲ್ಲಿದೆ. ಆ ರೂಢಿಯು ನಮ್ಮ ಸಮಾಜದ ಅವನತಿಗೆ ಕಾರಣವಾಗಿದೆ. ಈ ಅಧಮ ಪದ್ಧತಿಯನ್ನು ತಕ್ಷಣ ನಿಲ್ಲಿಸಬೇಕು. ಈ ಹೊಲಸನ್ನು ಎಲ್ಲಿಯವರೆಗೆ ಕಿತ್ತೆಸೆಯುವುದಿಲ್ಲವೋ ಅಲ್ಲಿಯವರೆಗೆ ಸಮತೆಯ ಹೋರಾಟವನ್ನು ಮಾಡಲು ನಾವು ಅಪಾತ್ರರಾಗುತ್ತೇವೆ. ಆದರೂ ತಕ್ಷಣ ಈ ರೂಢಿಯನ್ನು ನಿಲ್ಲಿಸಬೇಕು.’’
ಕೊನೆಗೆ ಎಲ್ಲರೂ ಅವರ ಭಾಷಣವನ್ನು ಶಾಂತರೀತಿಯಿಂದ ಆಲಿಸಿದ್ದಕ್ಕೆ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿ ಪ್ರಚಂಡ ಕರತಾಡನದ ನಡುವೆ ಅವರು ಕೂತರು.
ಆನಂತರ ಶ್ರೀ ಭಾವೂರಾವ ಗಾಯಕವಾಡರು ಸಮ್ಮೇಳನದಲ್ಲಿ ಒಟ್ಟು ಐದು ಗೊತ್ತುವಳಿಗಳನ್ನು ಮಂಡಿಸಿ, ಇಬ್ಬರ ಅನುಮೋದನೆಯ ಮೂಲಕ ಒಮ್ಮತದಿಂದ ಅದನ್ನು ಸ್ವೀಕರಿಸಲಾಯಿತು.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)