‘‘ಹಿಂದುತ್ವಕ್ಕೆ ತೀರಾ ವಿರುದ್ಧವಾದ ಒಂದು ಹಿಂದೂ ಧರ್ಮ’’
‘ರಾಮ್ ಕೆ ನಾಮ್’ ಸಿನೆಮಾ ನಿರ್ಮಾಣದ ಕುರಿತು ಆನಂದ್ ಪಟವರ್ಧನ್
ಭಾಗ-2
ನಾವು ಹಿಡಿದ ಟ್ರೈನ್ ನಾವು ಹಿಡಿಯಬೇಕಾಗಿದ್ದ ಟ್ರೈನ್ ಆಗಿರಲಿಲ್ಲ, ಆದರೆ ಅದರಿಂದ ಕೆಳಗಿಳಿಯುವುದು ಅಸಾಧ್ಯವಾಗಿತ್ತು! ಅದು ಬಿಹಾರದ ಪಾಟ್ನಾಗೆ ಹೋಗುವ ಟ್ರೈನ್ ಆಗಿತ್ತು. ಅದೂ ನಮ್ಮ ಪಾಲಿಗೆ ಒಂದು ಅದೃಷ್ಟವೇ ಆಯಿತು. ಯಾಕೆಂದರೆ ಅಲ್ಲಿ ಬಿಹಾರದ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಮತ್ತು ಎಡರಂಗ (ಲೆಫ್ಟ್‌ಫ್ರಂಟ್) ಗಾಂಧಿ ಮೈದಾನದಲ್ಲಿ ಒಂದು ಬೃಹತ್ತಾದ ರಾಮರಥ- ವಿರೋಧಿ ರ್ಯಾಲಿ ನಡೆಸುವವರಿದ್ದರು.
ರ್ಯಾಲಿಯಲ್ಲಿ ಭಾಷಣ ಮಾಡಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಎ.ಬಿ. ಬರ್ದನ್ ಭಾರತದ ಬಹುಮುಖಿ ಸಂಸ್ಕೃತಿಯನ್ನು, ಬಹುತ್ವವನ್ನು ರಕ್ಷಿಸಬೇಕೆಂದು ವಿನಂತಿಸುತ್ತ ಅದ್ಭುತವಾದ ಒಂದು ಭಾಷಣವನ್ನು ಮಾಡಿದರು. ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಬಾಬರಿ ಮಸೀದಿಯನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದರು, ಮತ್ತು ಕರಸೇವಕರಷ್ಟೆ ಅಲ್ಲ ‘‘ಒಂದು ಹಕ್ಕಿ ಕೂಡ ಅಡ್ಡ ಹಾರದಂತೆ’’ ಅಯೋಧ್ಯೆಯನ್ನು ಒಂದು ಅಭೇದ್ಯ ಕೋಟೆಯಾಗಿ ಮಾಡಿದ್ದರು. ಆದರೆ ಅಯೋಧ್ಯೆ ಪ್ರವೇಶಿಸಲು ಕಷ್ಟವಾದದ್ದು ಪತ್ರಕರ್ತರಿಗೆ ಮತ್ತು ನನ್ನಂತಹ ಸಾಕ್ಷಚಿತ್ರ ಮಾಡುವವರಿಗೆ ಮಾತ್ರ ಎಂಬುದು ಕೊನೆಗೆ ಗೊತ್ತಾಯಿತು.
ಅಂತಿಮವಾಗಿ, ಮಸೀದಿಯ ಮೇಲೆ ಪೂರ್ವಯೋಜಿತ ದಾಳಿ ನಡೆಸುವ ದಿನಕ್ಕೆ ಎರಡು ದಿನಗಳ ಮೊದಲು ಅಕ್ಟೋಬರ್ 28ರಂದು ನಾವು ಅಯೋಧ್ಯೆ ತಲುಪಿದೆವು. ಇಲ್ಲಿ ನಾವು, 1949ರಲ್ಲಿ ರಾತ್ರಿ ವೇಳೆ ಬಾಬರಿ ಮಸೀದಿಗೆ ನುಗ್ಗಿ ಒಳಹೊಕ್ಕು ಗರ್ಭಗುಡಿಯಲ್ಲಿ ರಾಮನ ಒಂದು ಮೂರ್ತಿಯನ್ನು ಇಟ್ಟಿದ್ದ ತಂಡದ ಸದಸ್ಯರಾಗಿದ್ದ ಓರ್ವ ವೃದ್ಧ ಮಹಾಂತ (ದೇವಾಲಯದ ಅರ್ಚಕ) ಶಾಸ್ತ್ರೀಜಿಯವರನ್ನು ಭೇಟಿಯಾದವು. ಜಿಲ್ಲಾ ನ್ಯಾಯಾಧೀಶ ಕೆ.ಕೆ. ನಾಯರ್ ಆ ಮೂರ್ತಿಗಳನ್ನು ತೆಗೆಸಲು ನಿರಾಕರಿಸಿದ್ದರಿಂದ ಆ ನಿವೇಶನವು ಅಂದಿನಿಂದ ಒಂದು ವಿವಾದಿತ ಪ್ರದೇಶವಾಯಿತು. ‘ರಾಮ್‌ಕೆ ನಾಮ್’ನಲ್ಲಿ ತೋರಿಸಿದಂತೆ, ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ನಾಯರ್(ಬಿಜೆಪಿಯ ಪೂರ್ವರೂಪವಾಗಿದ್ದ) ಜನಸಂಘವನ್ನು ಸೇರಿದರು ಮತ್ತು ಸಂಸತ್ ಸದಸ್ಯರಾದರು.
ಮಹಾಂತ ಸ್ವಾಮೀಜಿ ಮಸೀದಿಯೊಳಗೆ ಮೂರ್ತಿಗಳನ್ನು ಇಟ್ಟ ಬಗ್ಗೆ ಹೆಮ್ಮೆ ಪಡುತ್ತಿದ್ದರು ಮತ್ತು ಎಲ್ಲರೂ ಆ ಮೂರ್ತಿಗಳನ್ನು ಇಡುವುದರಲ್ಲಿ ತಾನು ವಹಿಸಿದ್ದ ಪಾತ್ರವನ್ನು ಮರೆತು ಬಿಟ್ಟಿದ್ದಾರೆಂದು ಸ್ವಲ್ಪ ಸಿಡಿಮಿಡಿಗೊಂಡಿದ್ದರು. 1949ರಲ್ಲಿ ನಡೆದದ್ದು ಒಂದು ‘‘ಪವಾಡ’’; ಅಲ್ಲಿ ಶ್ರೀರಾಮ ತನ್ನ ಜನ್ಮಸ್ಥಳದಲ್ಲಿ ಕಾಣಿಸಿಕೊಂಡ ಎಂದು ಹಿಂದುತ್ವ ವೀಡಿಯೋಗಳು, ಆಡಿಯೋಗಳು ಮತ್ತು ಪ್ರಚಾರ ಸಾಹಿತ್ಯ ಘೋಷಿಸಿದವು. ಶಾಸ್ತ್ರಿಯವರನ್ನು ಬಂಧಿಸಲಾಯಿತು ಮತ್ತು ಬಳಿಕ ಜಿಲ್ಲಾ ನ್ಯಾಯಾಧೀಶರು ಅವರನ್ನು ಜಾಮೀನನ ಮೇಲೆ ಬಿಡುಗಡೆ ಮಾಡಿದರು. 41ವರ್ಷಗಳ ಬಳಿಕ ನಾವು ಅವರನ್ನು ಭೇಟಿಯಾದ ದಿನದವರೆಗೆ ಅವರು ಸ್ವತಂತ್ರರಾಗಿದ್ದರು.
ನಾವು ಸರಯೂ ನದಿಯ ಸೇತುವೆಯನ್ನು ದಾಟಿ ಅಯೋಧ್ಯೆಯ ಅವಳಿನಗರ ಫೈಝಾಬಾದ್‌ಗೆ ಹೋದೆವು. ಇಲ್ಲಿ ನಾವು ಬಾಬರಿ ಮಸೀದಿಯ ವೃದ್ಧ ಇಮಾಮ್‌ರನ್ನು ಮತ್ತು 1949ರ ಘಟನೆಯನ್ನು ಅವರು ಕಂಡಂತೆ ವಿವರಿಸಿದ ಅವರ ಮಗನನ್ನು ಭೇಟಿಯಾದೆವು. ಬಾಬರಿ ಮಸೀದಿಯನ್ನು ಹೊಕ್ಕು ಮೂರ್ತಿಗಳನ್ನು ಇಟ್ಟ ಘಟನೆ ನಡೆದ ಬಳಿಕ, ಸದ್ಯದಲ್ಲೆ ಬೇಗನೆ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲಾಗುವುದು ಮತ್ತು ಮುಂದಿನ ಶುಕ್ರವಾರದ ವೇಳೆಗೆ ಅವರು ಪ್ರಾರ್ಥನೆ ಮಾಡಲು ತಮ್ಮ ಮಸೀದಿಗೆ ಪುನಃ ಪ್ರವೇಶ ಮಾಡಬಹುದೆಂದು ಜಿಲ್ಲಾ ನ್ಯಾಯಾಧೀಶರು ಅವರಿಗೆ ಹೇಳಿದ್ದರು. ಇಮಾಮ್‌ರ ಮಗ ಹೇಳಿದ ‘‘ನಾವು ಇನ್ನೂ ಆ ಶುಕ್ರವಾರಕ್ಕಾಗಿ ಕಾಯುತ್ತಿದ್ದೇವೆ.’’
ಅಕ್ಟೋಬರ್ 30ರಂದು ನಡೆದುಕೊಂಡು ಸರಯೂ ಸೇತುವೆಗೆ ಹೋಗುತ್ತಿದ್ದಂತೆೆ, ಅಯೋಧ್ಯೆಗೆ ಯಾರೂ ಪ್ರವೇಶಿಸದಂತೆ ಅದನ್ನೊಂದು ಭದ್ರಕೋಟೆಯಾಗಿ ಮಾಡುತ್ತೇನೆಂಬ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವರ ಆಶ್ವಾಸನೆ ಸುಳ್ಳಾಗುತ್ತಿದೆ ಎಂದು ನಮಗೆ ತಿಳಿಯಿತು. ಸೇತುವೆಯ ಮೇಲೆಲ್ಲಾ ಶೂಗಳು ಹಾಗೂ ಚಪ್ಪಲಿಗಳು ಹರಡಿ ಬಿದ್ದುಕೊಂಡಿದ್ದವು. ಅದಾಗಲೇ ಪೊಲೀಸರು ಅಲ್ಲಿ ಲಾಠಿಚಾರ್ಜ್ ಮಾಡಿದ್ದರು. ಬಂಧಿಸಲ್ಪಟ್ಟ ಕರಸೇವಕರನ್ನು ಬಸ್‌ಗಳಲ್ಲಿ ತುಂಬಿ ಕರೆದೊಯ್ಯಲಾಗುತ್ತಿತ್ತು. ಸೇತುವೆಯ ಬದಿಯಲ್ಲಿ ಸಾವಿರಾರು ಮಂದಿ ‘‘ಹಿಂದು, ಹಿಂದು ಭಾಯ್ ಭಾಯ್, ಬೀಚ್ ಮೆ ವರ್ದಿ ಕಹಾಂಸೆ ಆಯಿ’’ ಎಂದು ಪೊಲೀಸರನ್ನು ಉದ್ದೇಶಿಸಿ ಘೋಷಣೆ ಕೂಗುತ್ತಿದ್ದರು.
ಹೊತ್ತು ಏರಿದಂತೆ ವಾತಾವರಣ ಬಿಗಿಯಾಗುತ್ತಾ ಸಾಗಿತು. ಕರ್ಫ್ಯೂ ಇದ್ದರೂ ಸಾವಿರಾರು ಮಂದಿ ಬಂದು ಅಲ್ಲಿ ಜಮಾಯಿಸುತ್ತಿದ್ದರಷ್ಟೇ ಅಲ್ಲ, ಹಲವು ಸ್ಥಳಗಳಲ್ಲಿ ಪೊಲೀಸರು ಮತ್ತು ಪ್ಯಾರಾಮಿಲಿಟರಿ ಪಡೆಗಳು ಮೂಕಪ್ರೇಕ್ಷಕರಾಗಿ ಜನರಿಗೆ ಸಹಕಾರ ನೀಡುತ್ತಿದ್ದರು. ಅಲ್ಲಿ ವಿಪರೀತ ಗೊಂದಲವಿತ್ತು. ಕೆಲವು ಕರ ಸೇವಕರು ಮಸೀದಿಯ ಗೋಲವನ್ನು ಹತ್ತಿ ಅಲ್ಲಿ ತಮ್ಮ ಕೇಸರಿ ಧ್ವಜವನ್ನು ಕಟ್ಟಿದರು. ಇತರರು ಗರ್ಭಗುಡಿಯೊಳಗೆ ನುಗ್ಗಿದರಾದರೂ ಮಸೀದಿಯನ್ನು ದೊಡ್ಡ ಗುಂಪೊಂದು ಧ್ವಂಸಗೊಳಿಸದಂತೆ ಪೊಲೀಸರು ಗುಂಡು ಹಾರಿಸಿ ತಡೆದರು. ಒಟ್ಟು 29 ಮಂದಿ ಮೃತಪಟ್ಟರು. ಬಳಿಕ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೊಂದು ನದಿಗೆ ಎಸೆಯಲಾಗಿದೆ ಎಂದು ವಾದಿಸಿದವು. ತಮ್ಮ ‘ಅಯೋಧ್ಯಾ ಹುತಾತ್ಮರ ಬೂದಿಯನ್ನು ಹೊತ್ತ ಇನ್ನೊಂದು ರಥಯಾತ್ರೆಯನ್ನು ಹಿಂದುತ್ವದ ಥಿಂಕ್-ಟ್ಯಾಂಕ್ ಆಯೋಜಿಸಿತು.
30ರ ರಾತ್ರಿ ನಾವು ಅಲ್ಲಿಯ ಪೂಜಾರಿ ಲಾಲ್‌ದಾಸ್‌ರನ್ನು ಭೇಟಿಯಾದೆವು. ಅವರು ನ್ಯಾಯಾಲಯದಿಂದ ನೇಮಿಸಲ್ಪಟ್ಟಿದ್ದ ವಿವಾದಿತ ರಾಮ ಜನ್ಮ ಭೂಮಿ/ ಬಾಬರಿ ಮಸೀದಿಯ ಮುಖ್ಯ ಅರ್ಚಕರಾಗಿದ್ದರು. ಲಾಲ್‌ದಾಸ್ ಓರ್ವ ಹಿಂದೂ ಅರ್ಚಕನಾಗಿದ್ದೂ ಹಿಂದುತ್ವದ ಕಟು ಟೀಕಾಕಾರರಾಗಿದ್ದರು ಮತ್ತು ಅವರಿಗೆ ಜೀವ ಬೆದರಿಕೆಗಳು ಬಂದಿದ್ದವು. ಉತ್ತರ ಪ್ರದೇಶ ಸರಕಾರ ಅವರಿಗೆ ಇಬ್ಬರು ಅಂಗರಕ್ಷಕರನ್ನು ಒದಗಿಸಿತ್ತು. ವಿಎಚ್‌ಪಿ ಮಂದಿ ಆ ನಿವೇಶನದಲ್ಲಿ ಎಂದೂ ಪ್ರಾರ್ಥನೆ ಸಲ್ಲಿಸಲಿಲ್ಲ, ಆದರೆ ಅದನ್ನು ರಾಜಕೀಯ ಹಾಗೂ ಹಣಕಾಸಿನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಂದು ಲಾಲ್‌ದಾಸ್ ವಿಎಚ್‌ಪಿ ವಿರುದ್ಧ ಕಿಡಿಕಾರಿದರು. ‘‘ಧರ್ಮವನ್ನು ಸಿನಿಕರಾಗಿ ಬಳಸಿಕೊಳ್ಳುತ್ತಿರುವ ಜನರು ದೇಶದ ಹಿಂದೂ-ಮುಸ್ಲಿಂ ಏಕತೆಯನ್ನು ಬಲಿಕೊಡುತ್ತಿದ್ದಾರೆ’’ ಎಂದ ಅವರು, ಮುಂದೆ ಭಾರೀ ಹಿಂಸೆ ನಡೆಯಬಹುದೆಂದು ಭವಿಷ್ಯ ನುಡಿದರಾದರೂ ಎಲ್ಲವೂ ಸಹಜ ಸ್ಥಿತಿಗೆ ಮರಳೀತೆಂಬ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ವಿ.ಪಿ. ಸಿಂಗ್ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿದ್ದರ ಪರಿಣಾಮವಾಗಿ ಮೇಲ್ಜಾತಿಯ ಹಿಂದೂಗಳು ಹಿಂದುತ್ವ ಹಾಗೂ ಮಂದಿರ ಚಳವಳಿಯ ಬೆಂಬಲಿಗರಾದರು. ಯುಪಿಯಲ್ಲಿ ನಾವು ಹೋದಲೆಲ್ಲಾ ದಲಿತರು ಮತ್ತು ‘ಹಿಂದುಳಿದ ಜಾತಿಗಳಿಗೆ ಸೇರಿದವರು’ ರಾಮ ಮಂದಿರ ಚಳವಳಿಯ ವಿರುದ್ಧ ಮಾತನಾಡಿದರು.
1991ರ ಅಂತ್ಯದ ವೇಳೆಗೆ, ‘ರಾಮ್ ಕೆ ನಾಮ್’ ಪೂರ್ಣ ಗೊಂಡಿತು. ಅದಕ್ಕೆ ಅತ್ಯುತ್ತಮ ಇನ್‌ವೆಸ್ಟಿಗೇಟಿವ್ ಡಾಕ್ಯುಮೆಂಟರಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿಗಳು ದೊರಕಿತು. ಆದರೆ, 2002 ಮುಂಬೈ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಯಾ ಬಚ್ಚನ್ ತೀರ್ಪುಗಾರ ಮಂಡಳಿಯ ಮುಖ್ಯಸ್ಥೆಯಾಗಿದ್ದರು. ಪ್ರಶಸ್ತಿಗಳಿಗೆ ನಾಮಕರಣಗೊಳ್ಳುವ ಚಿತ್ರಗಳ ಅಡಿಯಲ್ಲಿ, ‘ರಾಮ್ ಕೆ ನಾಮ್’ ಪ್ರಸ್ತಾಪವಾಗಲೇ ಇಲ್ಲ. ಬಾಬರಿ ಮಸೀದಿಗೆ ಏನೂ ಆಗದೆ ಅದು ಇದ್ದ ಹಾಗೆಯೇ ಇರುವುದರಿಂದ ‘ರಾಮ್ ಕೆ ನಾಮ್’ ಸತ್ತ ಒಂದು ವಿಷಯವನ್ನು ಪುನಃ ಎತ್ತುತ್ತಿವೆ ಮತ್ತು ಭಾರತಕ್ಕೆ ಅದು ವಿದೇಶದಲ್ಲಿ ಅನಗತ್ಯವಾಗಿ ಕೆಟ್ಟ ಹೆಸರು ತರುತ್ತದೆ ಎಂದು ಹಲವು ವಿಮರ್ಶಕರು ಹೇಳಿದರು. ಬಳಿಕ ಆ ತಿಂಗಳಲ್ಲಿ ‘ರಾಮ್ ಕೆ ನಾಮ್’ ಜತೆ ನಾನು ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದೆ. ಆ ಉತ್ಸವಕ್ಕೆ ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಕೂಡ ಅತಿಥಿಯಾಗಿ ಬಂದಿದ್ದರು. ‘ರಾಮ್ ಕೆ ನಾಮ್’ ನಂತಹ ಒಂದು ‘ಭಾರತ-ವಿರೋಧಿ’ ಸಿನೆಮಾವನ್ನು ಚಿತ್ರೋತ್ಸವದ ಸಂಘಟಕರು ಆಯ್ಕೆ ಮಾಡಬಾರದಾಗಿತ್ತೆಂದು ಅವರು (ಬಚ್ಚನ್‌ರವರು) ಸಂಘಟಕರಿಗೆ ಹೇಳಿದ್ದಾರೆಂದು ನನಗೆ ತಿಳಿದಾಗ ಆಘಾತವಾಯಿತು.
ರಾಷ್ಟ್ರಪ್ರಶಸ್ತಿ ಪಡೆದ ಆಧಾರದಲ್ಲಿ ನಾನು ಅದನ್ನು ಪ್ರಸಾರ ಮಾಡುವಂತೆ ಕೋರಿ ದೂರದರ್ಶನಕ್ಕೆ ಕಳುಹಿಸಿದೆ. ಸೆಕ್ಯುಲರ್ ಭಾರತದಲ್ಲಿ ನಂಬಿಕೆಯಿರುವ ಯಾವುದೇ ಸರಕಾರವಾದರೂ ಅಂತಹ ಒಂದು ಸಿನೆಮಾವನ್ನು ಹಲವಾರು ಬಾರಿ ಪ್ರಸಾರ ಮಾಡುತ್ತಿತ್ತು. ಆ ಮೂಲಕ ದೇಶದಲ್ಲಿ ಸಂಕುಚಿತ ರಾಜಕೀಯ ಹಾಗೂ ಆರ್ಥಿಕ ಲಾಭಗಳಿಗಾಗಿ ಧಾರ್ಮಿಕ ದ್ವೇಷವನ್ನು ಹೇಗೆ ಹುಟ್ಟು ಹಾಕಲಾಗುತ್ತಿದೆ ಎಂದು ದೇಶದ ಜನತೆ ಮನಗಾಣುವಂತೆ ಮಾಡುತ್ತಿತ್ತು. ಸಿನೆಮಾಕ್ಕೆ ವ್ಯಾಪಕ ಪ್ರಸಾರ ಸಿಗುತ್ತಿದ್ದಲ್ಲಿ ಮಸೀದಿಯನ್ನು ಧ್ವಂಸಗೊಳಿಸುವ ಸಾಧ್ಯತೆ ಚಳವಳಿಯನ್ನು ಅದು ಅಮುಖ್ಯಗೊಳಿಸುವ ಸಾಧ್ಯತೆಯಿತ್ತು. ಬಿಜೆಪಿ ಆಗ ಇನ್ನೂ ಅಧಿಕಾರಕ್ಕೆ ಬಂದಿರಲಿಲ್ಲ. ಆದರೂ ದೂರದರ್ಶನ, ಸಿನೆಮಾವನ್ನು ಪ್ರಸಾರ ಮಾಡಲು ನಿರಾಕರಿಸಿತು. ನಾನು ನ್ಯಾಯಾಲಯಕ್ಕೆ ಮೊರೆ ಹೋದೆ. ಐದು ವರ್ಷಗಳ ಬಳಿಕ ಮೊಕದ್ದಮೆಯಲ್ಲಿ ನಾವು ಗೆದ್ದೆವು; ದೂರದರ್ಶನದಲ್ಲಿ ಸಿನೆಮಾ ಪ್ರಸಾರವಾಯಿತು. ಆದರೆ ಅದಕ್ಕೆ ಬಹಳ ಮೊದಲೇ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು.
1990ರಲ್ಲಿ ಆಕ್ಟೋಬರ್ 30ರ ದಾಳಿ ಮತ್ತು 29ಮಂದಿ ಕರಸೇವಕರ ಸಾವಿನ ಬಳಿಕ, ಬಿಜೆಪಿ ತಾನು ವಿಪಿ ಸಿಂಗ್‌ರ ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದೆಗೆದುಕೊಂಡಿತು. ಚಂದ್ರಶೇಖರ್ ಪ್ರಧಾನಿಯಾದರು. ಸ್ವಲ್ಪವೇ ಸಮಯದಲ್ಲಿ, ರಾಜೀವ್ ಗಾಂಧಿಯವರ ಹತ್ಯೆಯ ಬಳಿಕ ಕಾಂಗ್ರೆಸ್‌ನ ಪಿ.ವಿ. ನರಸಿಂಹರಾವ್ ಪ್ರಧಾನಿಯಾದರು. ಯುಪಿಯಲ್ಲಿ ಮುಲಾಯಂ ಸಿಂಗ್‌ರ ಸರಕಾರ ಹೋಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಅದು ಮಾಡಿದ ಮೊದಲ ಕೆಲಸಗಳಲ್ಲೊಂದು ಎಂದರೆ, ಪೂಜಾರಿ ಲಾಲ್‌ದಾಸ್‌ರನ್ನು ರಾಮ್ ಜನ್ಮ ಭೂಮಿ/ ಬಾಬರಿ ಮಸೀದಿ ಮುಖ್ಯ ಅರ್ಚಕ ಸ್ಥಾನದಿಂದ ಕೆಳಗಿಳಿಸಿ, ಅವರ ಅಂಗರಕ್ಷಕರನ್ನು ಹಿಂದೆಗೆದುಕೊಂಡದ್ದು. ಭಾರೀ ದಾಳಿಗೆ ಈಗ ಪರಿಸ್ಥಿತಿಗಳು ಅನುಕೂಲಕರವಾಗಿದ್ದವು.
1992ರ ಡಿಸೆಂಬರ್ 6ರಂದು, ಯುಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಕೇಂದ್ರದಲ್ಲಿ ಪಿವಿ ನರಸಿಂಹರಾವ್ ಸರಕಾರ ವಿರುವಾಗ, ಹಿಂದುತ್ವ ಬ್ರಿಗೇಡ್ ಅಂತಿಮವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಯಿತು. ನಾನು ಸಂದರ್ಶನ ಮಾಡಿದ ವೃದ್ಧ ಇಮಾಮ್ ಮತ್ತು ಆತನ ಮಗನನ್ನು 1992ರ ಡಿಸೆಂಬರ್ 7ರಂದು ಹತ್ಯೆಗೈಯಲಾಯಿತು, ಭಾರತದ ಹಲವು ಭಾಗಗಳಲ್ಲಿ ಮುಸ್ಲಿಮರನ್ನು ವಧಿಸಲಾಯಿತು. ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಗುರಿಮಾಡಲಾಯಿತು ಹಾಗೂ ದೇವಾಲಯಗಳನ್ನು ನಾಶಪಡಿಸಲಾಯಿತು. 1993ರ ಮಾರ್ಚ್ ನಲ್ಲಿ ಭೂಗತ ಮಾಫಿಯಾದ ಮುಸ್ಲಿಂ ಸದಸ್ಯರು ಸಂಘಟಿಸಿದ ಬಾಂಬ್ ಸ್ಫೋಟಗಳಲ್ಲಿ ಮುಂಬೈಯಲ್ಲಿ 300ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರು. ಆ ದಿನಗಳಲ್ಲಿ ಆರಂಭವಾದ ಪ್ರತಿಕ್ರಿಯೆ ಇನ್ನೂ ಕಡಿಮೆಯಾಗಿಲ್ಲ, ಇನ್ನೂ ಇಳಿಮುಖ ಕಂಡಿಲ್ಲ,
1991ರಲ್ಲಿ ‘ರಾಮ್ ಕೆ ನಾಮ್’ ಪ್ರಿಮಿಯರ್ ಶೋ ಲಕ್ನೋದಲ್ಲಿ ನಡೆದಾಗ ಪೂಜಾರಿ ಲಾಲ್‌ದಾಸ್ ಬಂದಿದ್ದರು. ತನಗೆ ಸಿನೆಮಾದ ಹಲವು ಕ್ಯಾಸೆಟ್‌ಗಳು ಬೇಕೆಂದು ಹೇಳಿದ್ದರು. ಅವರ ಭದ್ರತೆಯ ಬಗ್ಗೆ ನಾನು ಕೇಳಿದಾಗ ಅವರು ನಕ್ಕು ತಾನು ಹೆದರಿದ್ದರೆ ಸತ್ಯವನ್ನು ಬಾಯಿ ಬಿಟ್ಟು ಹೇಳುತ್ತಲೆ ಇರಲಿಲ್ಲ ಎಂದರು.
ಒಂದು ವರ್ಷದ ಬಳಿಕ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಒಳ ಪುಟಗಳಲ್ಲಿ ಒಂದು ಸುದ್ದಿಯ ತುಣುಕು, ‘‘ವಿವಾದಾಸ್ಪದ ಅರ್ಚಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ’’ ಎಂದು ಪ್ರಕಟಿಸಿತು. ನಾಡ ರಿವಾಲ್ವಾರ್ ಬಳಸಿ ಪೂಜಾರಿಯನ್ನು ಹತ್ಯೆ ಮಾಡಲಾಗಿತ್ತು. ಈ ಧೈರ್ಯಶಾಲಿ ಅರ್ಚಕ ಹಿಂದುತ್ವದ ತೀರಾ ವಿರುದ್ಧದ ಒಂದು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದರೆಂಬುದೇ ನಿಜವಾದ ‘ವಿವಾದ’ವಾಗಿತ್ತೆಂದು ವರ್ತಮಾನ ಪತ್ರಿಕೆಯ ಆ ಲೇಖನ ಎಂದೂ ನಮಗೆ ಹೇಳಲೇ ಇಲ್ಲ.
ಕೃಪೆ: sabrangindia.in