ಟರ್ಕಿ ಮನೆಗಳ ಕಲಾ ವಿಲಾಸ
ಗಾಜು, ಬಟ್ಟೆ, ತಾಮ್ರದ ತಟ್ಟೆ, ಮರ ಅಥವಾ ಕಾಗದ ಹೀಗೆ ಮಾಧ್ಯಮಗಳು ಬದಲಾಗಬಹುದು, ಆದರೆ ಇವೆಲ್ಲದರ ಮೇಲೂ ಕಲೆ ಮಾತ್ರ ಒಂದೇ ಸಮಾನವಾಗಿ ಮುಂದುವರಿಯುತ್ತಿದೆ. ತಮ್ಮ ಮನೆಯ ಅಲಂಕಾರವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಯಸುವವರಿಗೆಲ್ಲ ಟರ್ಕಿಯ ಕರಕುಶಲ ವಸ್ತುಗಳು ಮನೆಯ ಆಂತರಿಕ ವಿನ್ಯಾಸದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿವೆ.
ಟರ್ಕಿಯ ಪ್ರತಿಯೊಂದು ಮನೆಯಲ್ಲೂ ಕಲೆಯು ಹಾಸು ಹೊದ್ದು ಮಲಗಿರುತ್ತದೆ, ಅದು ಆಧುನಿಕ, ಶಾಸ್ತ್ರೀಯ ಅಥವಾ ಪ್ರಾಚೀನ ಮನೆಗಳಾಗಿರಲಿ, ಸಮುದ್ರಬದಿಯ ವಿಲ್ಲಾಗಳು ಅಥವಾ ಬಂಗಲೆಗಳೇ ಆಗಿರಲಿ ಅಥವಾ ನಗರ ಪ್ರದೇಶಗಳ ಪುಟ್ಟ ಫ್ಲಾಟ್‌ಗಳೇ ಆಗಿರಲಿ. ನೆಲವನ್ನು ಬಣ್ಣ ಬಣ್ಣದ ಹಾಸುಗಳಿಂದ ಮುಚ್ಚಿದ್ದರೆ ಛಾವಣಿಯಲ್ಲಿ ವಿವಿಧ ವಿನ್ಯಾಸಗಳ ಮತ್ತು ಬೆಳಕನ್ನು ಸೂಸುವ ತರಹೇವಾರಿ ದೀಪಗಳನ್ನು ನೇತು ಹಾಕಲಾಗಿರುತ್ತದೆ. ಇವೆಲ್ಲವೂ ನಮ್ಮ ವರ್ಣಪಟಲದ ಮೇಲೆ ಬೆಳಕಿನ ಮುತ್ತುಗಳನ್ನು ಹರಡುವ ಮೂಲಕ ನಮ್ಮ ಮನಸೂರೆಗೊಳ್ಳುತ್ತದೆ.
ಆಧುನಿಕ ಅಗತ್ಯಗಳಿಗೆ ಹೊಂದುವಂತೆ ಕೈಯಿಂದ ತಯಾರಿಸಿದ ಮತ್ತು ಅಲಂಕರಿಸಲ್ಪಟ್ಟ ಪ್ರಾಚೀನ ಸಂಪ್ರದಾಯ ವನ್ನು ಪ್ರತಿನಿಧಿಸುವ ಟರ್ಕಿಯ ಕರಕುಶಲ ವಸ್ತುಗಳು ಮನೆಯ ಚಾವಡಿ, ಅಡುಗೆಕೋಣೆ, ಸ್ನಾನಗೃಹ, ಉದ್ಯಾನವನ, ಬಾಲ್ಕನಿ, ವಿಭಜಕಗಳು ಮತು ಆವರಣ ಗೋಡೆಗಳ ಅಂದವನ್ನು ಹೆಚ್ಚಿಸುತ್ತವೆ.
ಟರ್ಕಿಯು ಏಶ್ಯಾ ಮತ್ತು ಯೂರೋಪ್‌ನ ಸಂಗಮ ಸ್ಥಳದಲ್ಲಿರುವುದರಿಂದ ಭೌಗೋಳಿಕವಾಗಿವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಅದರ ಅತ್ಯಂತ ದೊಡ್ಡ ನಗರ ಮತ್ತು ಮುಖ್ಯ ಕೇಂದ್ರ ಇಸ್ತಾಂಬುಲ್ ಮರ್ಮರಾ ಜಲಸಂಧಿಯ ಎರಡೂ ಬದಿಯಲ್ಲಿ ನಿರ್ಮಿಸಲ್ಪಟ್ಟಿದೆ.
ಕೌಶಲ್ಯ ಮತ್ತು ಗುಡಿಕೈಗಾರಿಕೆ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗಿರುವ ಯೂರೋಪ್‌ನ ಏಕೈಕ ದೇಶ ಟರ್ಕಿಯಾಗಿದೆ. ಹಳ್ಳಿ ಮತ್ತು ಸಣ್ಣ ಪಟ್ಟಣ ಗಳಲ್ಲಿ ಮಹಿಳೆಯರು ಮಗ್ಗಗಳಲ್ಲಿ ನೆಲಹಾಸುಗಳನ್ನು ಮತ್ತು ಕಿಲಿಮ್‌ಗಳನ್ನು ತಯಾರಿಸಿದರೆ ಕುಂಬಾರರು, ತಾಮ್ರ ಮತ್ತು ಲೋಹದ ಕೆಲಸಗಾರರು ಮತ್ತು ಗಾಜು ತಯಾರಕರು ಬಗೆಬಗೆಯ ವಿಸ್ಮಯಗೊಳಿಸುವ ಆಲಂಕಾರಿಕ ವಸ್ತುಗಳ ಲೋಕವನ್ನೇ ನಿರ್ಮಿಸುತ್ತಾರೆ. ಕೇವಲ ಆಲಂಕಾರಿಕ ವಸ್ತುಗಳು ಮಾತ್ರವಲ್ಲ ದೈನಂದಿನ ಬಳಕೆಯ ಮಡಕೆಗಳು, ಕಾವಲಿಗಳು, ಚಿಮಟಿಕೆ, ದೊಡ್ಡ ಕಡಾಯಿಗಳು, ಬಟ್ಟಲುಗಳು, ಬೆಳ್ಳಿಯ ಕೊಂಡಿಗಳು ಹಾಗೂ ಕೆಟ್ಟ ದೃಷ್ಟಿಯನ್ನು ದೂರ ಮಾಡಲು ಮನೆಯ ಮುಂದೆ ನೇತು ಹಾಕುವ ಯಂತ್ರಗಳಂಥ ವಸ್ತುಗಳನ್ನೂ ಅತ್ಯಂತ ಸುಂದರವಾಗಿ ತಯಾರಿಸಲಾಗುತ್ತದೆ.
ಬಣ್ಣಗಳ ಮಿಶ್ರಣವಂತೂ ಅದ್ಭುತವಾಗಿರುತ್ತದೆ. ಇಸ್ತಾಂಬುಲ್ ಅಥವಾ ಅಲಂಕಾರದ ಯಾವುದೇ ಕರಕುಶಲ ಮಳಿಗೆಗೆ ಅಥವಾ ಹಳ್ಳಿ ಪ್ರದೇಶದ ಯಾವುದೇ ಅಂಗಡಿಗೆ ಹೋದರೂ ಅಲ್ಲಿ ಕಾಣಸಿಗುವ ವಸ್ತುಗಳು ಮತ್ತು ಅವುಗಳ ಬಣ್ಣಗಳು ನಮ್ಮನ್ನು ಆಶ್ಚರ್ಯದಿಂದ ಏದುಸಿರು ಬಿಡುವಂತೆ ಮಾಡುತ್ತವೆೆ. ಸಾಂಪ್ರದಾಯಿಕ ವಿನ್ಯಾಸಗಳಿಂದ ಕೂಡಿರುವ ಕೈಯಿಂದ ಹೆಣೆದು ತಯಾರಿಸಲ್ಪಟ್ಟ ನೆಲಹಾಸುಗಳು ಬಹುತೇಕ ನೆಲವನ್ನು ಮುಚ್ಚಿರುತ್ತವೆ. ಶತಮಾನಗಳ ಕಾಲ ಬೈಝೆಂಟೈನ್ ಸಾಮ್ರಾಜ್ಯ ಮತ್ತು ಒಟೊಮನ್ ಕಾಲಿಫೆಟ್‌ನ ಕೇಂದ್ರವಾಗಿದ್ದ ಟರ್ಕಿಯ ಕಲಾವಿದರು ಮತ್ತು ಕರಕುಶಲಕರ್ಮಿಗಳಿಗೆ ಈಗಲೂ ಅಲ್ಲಿನ ನೆಲದಲ್ಲಿ ಹಾಸುಹೊಕ್ಕಿರುವ ಬಹುಸಂಸ್ಕೃತಿ ಸ್ಫೂರ್ತಿ ನೀಡುತ್ತಿದೆ.
ಟರ್ಕಿಯ ಕಂಬಳಿಗಳು ಮತ್ತು ಕಿಲಿಮ್‌ಗಳು ಟರ್ಕಿ ಸಂಸ್ಕೃತಿಯ ಎರಡು ಅವಿಭಾಜ್ಯ ಅಂಗವಾಗಿದ್ದು ಪ್ರತಿ ಮನೆಗೂ ಸಮಾನವಾಗಿ ಬಣ್ಣವನ್ನು ಹರಡುತ್ತದೆ. ಕಿಲಿಮ್ ಎಂದರೆ ಉದ್ದ, ಅಡ್ಡ ಮತ್ತು ಗಂಟುಗಳನ್ನು ಹೊಂದಿರುವ ನೇಯ್ಗೆಯ ತಂತ್ರ. ಇದು ಹದಿಮೂರನೇ ಶತಮಾನದಿಂದಲೂ ಟರ್ಕಿ ಭಾಷೆಯ ಭಾಗವಾಗಿದೆ. ಕಿಲಿಮ್‌ಗಳನ್ನು ಹತ್ತಿ ಅಥವಾ ಉಣ್ಣೆಯಿಂದ ತಯಾರಿಸಲಾಗುತ್ತದೆ. ಶ್ರೀಮಂತರಿಗಾಗಿ ಇದನ್ನು ರೇಷ್ಮೆಯಿಂದಲೂ ತಯಾರಿಸಲಾಗುತ್ತದೆ.
ಬಹುತೇಕ ಕಿಲಿಮ್‌ಗಳಲ್ಲಿ ರೇಖೆಗಳು ಮತ್ತು ಆಕಾರಗಳನ್ನು ಬಳಸಲಾಗುತ್ತದೆ. ಆದರೆ ಬಣ್ಣಗಳು ಮತ್ತು ಅಲಂಕಾರದ ಮಿಶ್ರಣವನ್ನು ವಿವಿಧ ಪ್ರದೇಶಗಳಿಗೆ ಅನ್ವಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಇಲ್ಲಿನ ರಸ್ತೆಗಳು ಕಂಬಳಿ ಅಂಗಡಿಗಳಿಂದ ತುಂಬಿ ಹೋಗಿದ್ದು ಪ್ರವಾಸಿಗರನ್ನು ತಮ್ಮ ಮನಮೋಹಕ ಬಣ್ಣ ಮತ್ತು ವಿನ್ಯಾಸಗಳಿಂದ ಕೈಬೀಸಿ ಕರೆಯುತ್ತವೆ.
ಅಧಿಕೃತ ಟರ್ಕಿ ಅಲಂಕಾರದ ಮನೆಗಳು ಯಾವುದೆಂದು ತಿಳಿಯಬೇಕಾದರೆ ಅವುಗಳ ನಿರ್ಮಾಣದಲ್ಲಿ ಬಳಸಲಾಗಿರುವ ಹೊಳೆಯುವ ಪಿಂಗಾಣಿಯ ಅಂಚುಗಳು ಮತ್ತು ಒಳಗಿರುವ ಮಣ್ಣಿನ ವಸ್ತುಗಳನ್ನು ಗಮನಿಸಬೇಕು. ಸಾಧಾರಣವಾಗಿ ಎಲ್ಲ ಐತಿಹಾಸಿಕ ಕಟ್ಟಡಗಳಲ್ಲಿ ಹೊಳೆಯುವ ಪಿಂಗಾಣಿಯ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ. ಚೀನಾದಲ್ಲಿ ಹುಟ್ಟಿದ ಈ ಕಲೆಯು ಮಧ್ಯಮ ಟರ್ಕಿಯಲ್ಲಿ ತನ್ನ ಪರಾಕಾಷ್ಠೆಗೆ ತಲುಪಿತು. ಟರ್ಕೊಯ್ಸೆ ಇಲ್ಲಿ ಹೊಳಪಿಗಾಗಿ ಸಾಮಾನ್ಯವಾಗಿ ಬಳಸುವ ಬಣ್ಣವಾಗಿದೆ. ಉಳಿದಂತೆ, ಕೋಬಾಲ್ಟ್ ನೀಲಿ, ಬದನೆ ನೇರಳೆಯ ಜೊತೆಗೆ ಕಪ್ಪು ಬಣ್ಣವನ್ನೂ ಬಳಸಲಾಗುತ್ತದೆ. ಸಾಮಾನ್ಯವಾಗಿ ರೆಸಾರ್ಟ್‌ಗಳಂತೆ ಬಳಸಲ್ಪಡುವ ಹಳೆ ಕಟ್ಟಡಗಳು ಮತ್ತು ಆಧುನಿಕ ಮನೆಗಳ ಮುಂಭಾಗಕ್ಕೆ ಇಂಥ ಬಣ್ಣಗಳ ಪಿಂಗಾಣಿ ಟೈಲ್ಸ್‌ಗಳನ್ನು ಹಾಕಲಾಗಿರುತ್ತದೆ.
ಅರಮನೆಗಳು ಮತ್ತು ಬೈಝೆಂಟೈನ್‌ನ ಚರ್ಚ್‌ಗಳು ಹಾಗೂ ಒಟೊಮೊನ್ ಮಸೀದಿಗಳು ಇನ್ನಷ್ಟು ವೈಭವವಾಗಿ ಕಾಣಲು ಗಿಲ್ಡಿಂಗ್ ಮಾಡಲಾಗುತ್ತದೆ. ಒಳಂಗಾಣ ಪ್ರದೇಶಗಳಲ್ಲಿ ಈ ಅಂಚುಗಳನ್ನು ಷಟ್ಕೋನ, ತ್ರಿಕೋನ, ಚೌಕ ಮತ್ತು ಆಯತದಂಥ ರೇಖಾಗಣಿತದ ವಿನ್ಯಾಸಗಳನ್ನು ನಿರ್ಮಿಸಲು ಬಳಸಲಾಗುತ್ತದೆ.
ಇಸ್ತಾಂಬುಲ್‌ನ ಗುಲ್ಹನೆ ಪಾರ್ಕ್‌ನಲ್ಲಿರುವ ಕ್ರಿಸ್ಟಲ್ ಪೆವಿಲಿಯನ್ ಮ್ಯೂಸಿಯಂ ಅನ್ನು ಹೊಳೆಯುವ ಟೈಲ್ಸ್‌ಗಳು ಮತ್ತು ಕುಂಬಾರಿಕೆಯ ಇತಿಹಾಸವನ್ನು ವರ್ಣಿಸಲೆಂದೇ ನಿರ್ಮಿಸಲಾಗಿದೆ. ಒಟೊಮನ್ ಅವಧಿಯಲ್ಲಿದ್ದ ಕಲೆಯ ಮೂಲ ಮತ್ತು ಅಭಿವೃದ್ಧಿಯ ವರ್ಣರಂಜಿತ ಚಿತ್ರಣ ಇಲ್ಲಿ ನಮಗೆ ಸಿಗುತ್ತದೆ.
ಕುಂಬಾರಿಕೆಯ ವಿಷಯಕ್ಕೆ ಬಂದರೆ ಹೊಳಪಿನ ಮಣ್ಣು ಬಟ್ಟಲುಗಳಾಗಿ, ಬಾಟಲಿ, ಪ್ಲೇಟ್‌ಗಳು, ಜಗ್‌ಗಳು, ತಟ್ಟೆಗಳು, ಕಾಫಿ ಲೋಟಗಳು ಹಾಗೂ ಇತರ ಅನೇಕ ದಿನಬಳಕೆಯ ಮತ್ತು ಅಡುಗೆ ಕೋಣೆಯ ವಸ್ತುಗಳಾಗಿ ಬದಲಾಗುತ್ತವೆ. 16ನೇ ಶತಮಾನದ ಮಧ್ಯಭಾಗದಲ್ಲಿ ಈ ಕಲೆಯು ಮಧ್ಯ ಅನಟೋಲಿಯಾದ ಇಝ್ನಿಕ್‌ನಲ್ಲಿ ಬೆಳವಣಿಗೆ ಕಂಡಿತು. ಈ ಅವಧಿಯಲ್ಲಿ ದೊರೆ ಸುಲೈಮಾನ್‌ನ ಆಡಳಿತದಲ್ಲಿ ಅನೇಕ ಬೃಹತ್ ಅರಮನೆಗಳು, ಸೆರಾಯಿಗಳು ಮತ್ತು ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲಾಗಿತ್ತು.
ಇಸ್ತಾನ್‌ಂಲ್‌ನ ಗ್ರಾಂಡ್ ಬಝಾರ್ (ಟರ್ಕಿಶ್‌ನಲ್ಲಿ ಕಬಲಿ ಜರ್ಸಿ) ನಲ್ಲಿ ದೊರೆಯುವ ಇಝ್ನಿಕ್‌ನ ಕರಕುಶಲ ವಸ್ತುಗಳನ್ನು ಪ್ರವಾಸಿಗರು ಸ್ಮರಣಿಕೆಯಂತೆ ತಮ್ಮ ಜೊತೆ ಒಯ್ಯುತ್ತಾರೆ. 18ನೇ ಶತಮಾನದ ಕೊನೆಯ ಹೊತ್ತಿಗೆ ಇಝ್ನಿಕ್ ಕುಂಬಾರಿಕೆಯೂ ಕ್ಷೀಣಿಸುತ್ತಾ ಬಂತು. ಸದ್ಯ ಇಝ್ನಿಕ್ ಪ್ರತಿಷ್ಠಾನ ಸಂಶೋಧನೆ ಮತ್ತು ಆವಿಷ್ಕಾರದ ಮೂಲಕ ಹಾಗೂ ಕುಶಲಕರ್ಮಿಗಳಿಗೆ ಹೊಸ ವಿನ್ಯಾಸಗಳನ್ನು ನೀಡಿ ಸಹಕರಿಸುವ ಮೂಲಕ ಈ ಕಲೆಯನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸುತ್ತಿದೆ.
ಇನ್ನು ಟರ್ಕಿಯ ಕಸೂತಿ ಕಲೆ ಕೂಡಾ ಅಷ್ಟೇ ಅದ್ಭುತ ಮತ್ತು ಚಿತ್ತಾಕರ್ಷಕವಾಗಿದೆ. ಸಾಮಾನ್ಯವಾಗಿ ಇಸ್ಲೆಮೆಲರ್ ಅಥವಾ ಟರ್ಕಿಯ ಟವಲ್‌ಗಳೆಂದು ಕರೆಯಲ್ಪಡುವ ಗ್ರಾಮೀಣ ಮಹಿಳೆಯರು ಕೈಯಿಂದ ರಚಿಸುವ ಕಸೂತಿಗಳಿಂದ ತುಂಬಿರುವ ಈ ಬಟ್ಟಗಳು ಸ್ನಾನದ ನಂತರ ದೇಹ ಒರೆಸಲು ಬಳಸುವುದಕ್ಕಿಂತ ಹೆಚ್ಚಾಗಿ ವಸ್ತುಗಳು ಆಲಂಕಾರಿಕವಾಗಿ ಮುಚ್ಚಿಡಲು ಬಳಸಲ್ಪಡುತ್ತದೆ. ಇವುಗಳಲ್ಲಿ ದಪ್ಪ, ಸುಂದರವಾದ ಮತ್ತು ಪುನರಾವರ್ತಿತ ವಿನ್ಯಾಸಗಳನ್ನು ಬಳಸಲಾಗುತ್ತದೆ ಉದಾಹರಣೆಗೆ: ದಾಳಿಂಬೆಗಳು, ಟ್ಯುಲಿಪ್‌ಗಳು, ಗುಲಾಬಿಗಳು, ಹತ್ತಿಯ ಹೂ, ಚಿಟ್ಟೆಗಳು ಮತ್ತು ನಾಣ್ಯಗಳು ಇತ್ಯಾದಿ.
ಹಿಂದಿನ ಕಾಲದಲ್ಲಿ ರಾಜಮನೆತನದ ಸಮವಸ್ತ್ರಗಳು ಮತ್ತು ಮುಂಡಾಸುಗಳಲ್ಲಿ ರಚಿಸಲಾಗಿರುವ ಕಸೂತಿಯ ಗುಣಮಟ್ಟ ಸಾಮಾಜಿಕ ಸ್ಥಾನಮಾನ ಮತ್ತು ಅರಮನೆಯಲ್ಲಿ ಅವರ ಸ್ಥಾನವನ್ನು ಸೂಚಿಸುತ್ತಿತ್ತು. ಇಂದು ಅತ್ಯದ್ಭುತವಾಗಿ ಕಸೂತಿ ಮಾಡಲ್ಪಟ್ಟಿರುವ ಮೇಜಿನ ಬಟ್ಟೆಗಳು, ಕೈವಸ್ತ್ರ, ಟವಲ್‌ಗಳು ಮತ್ತು ಹಾಸಿಗೆಯ ಬಟ್ಟೆಗಳನ್ನು ಗ್ರಾಮೀಣ ಮಳಿಗೆಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನೇತು ಹಾಕಿರುವುದನ್ನು ಕಾಣಬಹುದಾಗಿದೆ. ವೆಲ್ವೆಟ್‌ಗಳು, ಚಪ್ಪಲಿಗಳು, ಮಹಿಳೆಯರ ಕೈ ಚೀಲಗಳು, ಬೆಲ್ಟ್‌ಗಳು ಮತ್ತು ಸೇನಾಧಿಕಾರಿಗಳ ಸಮವಸ್ತ್ರಗಳಲ್ಲಿ ಕಸೂತಿ ಮಾಡಲು ಲೋಹದ ನೂಲನ್ನು ಬಳಸಲಾಗುತ್ತದೆ. ಈ ರೀತಿಯ ಕಸೂತಿಗೆ ದಿವಲ್ ಎಂದು ಕರೆಯುತ್ತಾರೆ.
ಸಾವಿರ ಬಣ್ಣಗಳಲ್ಲಿ ಲಭ್ಯವಿರುವ ದೀಪಗಳನ್ನೂ ಮನೆಯ ಅಲಂಕಾರಕ್ಕೆ ಬಳಸಬಹುದಾಗಿದೆ. ನವೀನ ವಿನ್ಯಾಸಕಾರರ ಜೊತೆಗೂಡಿ ವಿವಿಧ ಉಪಯೋಗ ಮತ್ತು ಸಂದರ್ಭಗಳಿಗೆ ತಕ್ಕಂತೆ ವಿವಿಧ ಬಣ್ಣ ಮತ್ತು ಆಕಾರಗಳಲ್ಲಿ ದೀಪಗಳನ್ನು ತಯಾರಿಸುವ ಕುಶಲಕರ್ಮಿಗಳಿಗೆ ಕೈಗಾರಿಕೆಯು ಬೆಂಬಲ ನೀಡುತ್ತದೆ. ಆದರೆ ಒಣಗಿದ ಕುಂಬಳಕಾಯಿಯ ಹೊರ ಕವಚದ ಮೇಲೆ ವಿನ್ಯಾಸಗಳನ್ನು ರಚಿಸಿ ತಯಾರಿಸುವ ಗಾರ್ಡ್ ಲ್ಯಾಂಪ್ಸ್ ಟರ್ಕಿಯ ಹಿರಿಮೆಯಾಗಿದೆ. ಗೊರೆಮೆ ಎಂಬ ಪ್ರವಾಸಿ ಗ್ರಾಮದ ನಿವಾಸಿ ಹಕಿ ಮುಸ್ತಫ ಹೇಳುವಂತೆ ಇಲ್ಲಿನ ರೈತರು ಲಕ್ಷಗಟ್ಟಲೆ ಕುಂಬಳಕಾಯಿಯನ್ನು ಬೆಳೆಯುತ್ತಾರೆ. ಅವುಗಳನ್ನು ಮುಖ್ಯವಾಗಿ ಜಾನುವಾರುಗಳಿಗೆ ಮೇವಾಗಿ ಬಳಸಲಾಗುತ್ತದೆ ಮತ್ತು ಅದರ ಬೀಜವನ್ನು ಒಣ ಹಣ್ಣಿನಂತೆ ತಿನ್ನಲಾಗುತ್ತದೆ. ಆದರೆ ಅವುಗಳಲ್ಲಿ ಬಹುದೊಡ್ಡ ಭಾಗವನ್ನು ಲ್ಯಾಂಪ್‌ಗಳನ್ನು ತಯಾರಿಸಲೆಂದು ಒಣಗಿಸಲಾಗುತ್ತದೆ.
ಸ್ಥಳೀಯವಾಗಿ ಕಲಬಶ್ ಎಂದು ಕರೆಯಲ್ಪಡುವ ಗಟ್ಟಿ ಕವಚದ ಕುಂಬಳಕಾಯಿ ಕೃಷಿ ಭೂಮಿಯ ಉದ್ದಕ್ಕೂ ಹರಡಿರುವುದನ್ನು ಇಲ್ಲಿ ಕಾಣಬಹುದಾಗಿದೆ. ಅವುಗಳನ್ನು ಬಳ್ಳಿಯಿಂದ ಕಿತ್ತ ನಂತರ ತಿಂಗಳುಗಳ ಕಾಲ ಗಾಳಿಯಲ್ಲಿ ನೇತು ಹಾಕಿ ಒಣಗಿಸಲಾಗುತ್ತದೆ. ಹೀಗೆ ಒಣಗಿಸಲ್ಪಟ್ಟ ಕಾಯಿಯ ಹೊರ ಕವಚ ಮರದಂತೆ ಗಟ್ಟಿಯಾಗುತ್ತದೆ. ಆ ಮೂಲಕ ಉಳಿಯ ಪೆಟ್ಟು ಹಾಕಲು, ತುಂಡರಿಸಲು, ಕೊರೆಯಲು ಮತ್ತು ರಂಧ್ರ ಮಾಡಲು ಸಿದ್ಧವಾಗುತ್ತದೆ.
ಲೇಖಕರು ಕಪ್ಪಡೊಸಿಯಾ ಪ್ರದೇಶದಲ್ಲಿ ಭೇಟಿಯಾದ ಕುಶಲಕರ್ಮಿಗಳಾದ ಹೆಲಿತ್ ಮತ್ತು ಆಬ್ರೂ ಹೇಳುವಂತೆ, ಕುಂಬಳ ಕಾಯಿಯ ಒಳಗಿನ ಭಾಗವನ್ನು ಸ್ವಚ್ಛಗೊಳಿಸುವ ಕಾರ್ಯ ಕಿರಿಕಿರಿ ಉಂಟುಮಾಡುವಂಥದ್ದಾಗಿದ್ದು ಅದನ್ನು ಮುಖ್ಯವಾಗಿ ಹಳ್ಳಿಗಳಲ್ಲಿ ಮಾಡಲಾಗುತ್ತದೆ. ಒಮ್ಮೆ ರಂಧ್ರಗಳನ್ನು ಕೊರೆದ ನಂತರ ಈ ರಂಧ್ರಗಳಲ್ಲಿ ಗಾಜಿನ ತುಣುಕುಗಳನ್ನು ತುರುಕಿಸಿ ಅವುಗಳ ಮೂಲಕ ಬಣ್ಣಬಣ್ಣದ ಬೆಳಕುಗಳು ಹೊರಸೂಸಿ ಚಮತ್ಕಾರಿ ಪರಿಣಾಮ ಬೀರುವಂತೆ ಮಾಡಲಾಗುತ್ತದೆ. ಈ ಲ್ಯಾಂಪ್‌ಗಳ ತಯಾರಿಕೆ ಟರ್ಕಿಯ ಪಾಲಿಗೆ ವಿಶಿಷ್ಟವಾಗಿದ್ದರೂ ಕುಂಬಳಕಾಯಿಯ ಗಟ್ಟಿಯಾದ ಹೊರಕವಚವನ್ನು ಹೂಜಿಗಳಾಗಿ ಮತ್ತು ಸಂಗೀತ ಉಪಕರಣಗಳಾಗಿ ರೂಪಿಸುವ ಕಲೆಗಾರಿಕೆ ಗ್ರಾಮೀಣ ಭಾಗಗಳಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಗಾಜು, ಬಟ್ಟೆ, ತಾಮ್ರದ ತಟ್ಟೆ, ಮರ ಅಥವಾ ಕಾಗದ ಹೀಗೆ ಮಾಧ್ಯಮಗಳು ಬದಲಾಗಬಹುದು, ಆದರೆ ಇವೆಲ್ಲದರ ಮೇಲೂ ಕಲೆ ಮಾತ್ರ ಒಂದೇ ಸಮಾನವಾಗಿ ಮುಂದುವರಿಯುತ್ತಿದೆ. ತಮ್ಮ ಮನೆಯ ಅಲಂಕಾರವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಯಸುವವರಿಗೆಲ್ಲ ಟರ್ಕಿಯ ಕರಕುಶಲ ವಸ್ತುಗಳು ಮನೆಯ ಆಂತರಿಕ ವಿನ್ಯಾಸದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿವೆ.