ಮಧ್ಯಪ್ರದೇಶದ ಸಿಎಂ ಆಗಿ ಕಮಲ್ ನಾಥ್ ಪ್ರಮಾಣ
ಭೋಪಾಲ, ಡಿ. 17: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಗೆ 6 ಬಾರಿ ಸದಸ್ಯರಾಗಿ ಆಯ್ಕೆಯಾದ ಕಮಲ್ನಾಥ್ ಸೋಮವಾರ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭೋಪಾಲದ ಲಾಲ್ ಪರೇಡ್ ಮೈದಾನದಲ್ಲಿ ಅಪರಾಹ್ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ರನ್ನು ಮಣಿಸಿ ಕಮಲ್ನಾಥ್ ಅಥಿಕಾರ ಸ್ವೀಕರಿಸಿದ್ದಾರೆ. ಕಾರ್ಯಕ್ರಮಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕರಾದ ಜ್ಯೋತಿರಾದಿತ್ಯ ಸಿಂಧ್ಯ, ದಿಗ್ವಿಜಯ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಪಾಲ್ಗೊಂಡರು. ಎನ್ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಎನ್ಸಿಪಿ ವರಿಷ್ಠ ಶರದ್ ಪವಾರ್, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್, ಎಲ್ಜೆಡಿಯ ವರಿಷ್ಠ ಶರದ್ ಯಾದವ್, ಶಿವರಾಜ್ ಸಿಂಗ್ ಮೊದಲಾದವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರೊಂದಿಗೆ ಸಭೆ ನಡೆದ ದಿನದ ಬಳಿಕ ಕಮಲ್ನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಲಾಯಿತು. ‘‘ಕಳೆದ ವಾರದ ವರೆಗೆ ನನಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇರಲಿಲ್ಲ. ಆದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಬಯಕೆ ಇತ್ತು” ಎಂದು ಕಮಲ್ನಾಥ್ ಹೇಳಿದ್ದಾರೆ.