ಇಂಜಿನಿಯರಿಂಗ್ ಮಾಡಿ ಕೃಷಿ ಕ್ಷೇತ್ರದಲ್ಲಿ ಬದುಕು ಕಟ್ಟಿದ ಬಸವರಾಜ
ಇಂದು ಕಿಸಾನ್ ದಿನ
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ರೈತ ಬಸವರಾಜ ನಾವಿ ಸಾವಯವ ಕೃಷಿಯಲ್ಲಿ ಬದುಕು ಕಟ್ಟಿಕೊಂಡು ರಾಜ್ಯದ್ಯಂತ ಇತರ ರೈತರಿಗೆ ಸಾವಯವ ಕೃಷಿಯನ್ನು ಪರಿಚಯಿಸುತ್ತಿದ್ದಾರೆ. ಪ್ರಸಕ್ತ ರಾಜ್ಯ ರೈತರ ಸಲಹಾ ಸಮಿತಿ ಸದಸ್ಯರಾಗಿರುವ ಅವರೊಂದಿಗೆ ವಾರ್ತಾಭಾತಿ ನಡೆಸಿದ ಸಂದರ್ಶನ ಇಲ್ಲಿವೆ.
► ನೀವು ಮಾಡುತ್ತಿರುವ ಪ್ರಮುಖ ಕೃಷಿ ಯಾವುದು? ಎಷ್ಟು ಸಮಯದಿಂದ ಮಾಡುತ್ತಿದ್ದೀರಿ? ಇದು ನಿಮ್ಮ ಬದುಕಿಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ, ಲಾಭದಾಯಕವಾಗಿದೆ?
ಸುಮಾರು 12 ವರ್ಷಗಳಿಂದ ಸಾವಯವ ಮಿಶ್ರ ಬೇಸಾಯ ಪದ್ಧತಿಯಿಂದ ಕೃಷಿ ಮಾಡುತ್ತಿದ್ದು ವರ್ಷಕ್ಕೆ ಸುಮಾರು 10ರಿಂದ 12 ಲಕ್ಷ ರೂ. ಆದಾಯ ಗಳಿಸುತ್ತಿದ್ದೇನೆ.
► ಕೃಷಿಯನ್ನೇ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವೇನು?
ನಾನು ಓದಿದ್ದು ಸಿವಿಲ್ ಇಂಜಿನಿಯರಿಂಗ್. ಆದರೆ ಆ ಕ್ಷೇತ್ರದಲ್ಲಿ ನನಗೆ ತೃಪ್ತಿ ದೊರೆಯಲಿಲ್ಲ. ತಿಂಗಳ ಕೊನೆಯಲ್ಲಿ ಸಂಬಳ ತೆಗೆದುಕೊಂಡು ಜೀವನವನ್ನು ನಡೆಸುವುದು ನನಗೆ ಇಷ್ಟ ಇರಲಿಲ್ಲ. ಹಾಗಾಗಿ ನಮ್ಮದೇ ಎರಡೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬಹುದು. ಅಲ್ಲದೆ ಖಾಸಗಿ ಸಂಸ್ಥೆಯಲ್ಲಿ ದೊರೆಯುವ ಸಂಬಳಕ್ಕಿಂತ ಹೆಚ್ಚಿನ ಹಣವನ್ನು ಕೃಷಿಯಲ್ಲಿ ಗಳಿಸಿ ಸ್ವಾವಲಂಬಿ ಜೀವನ ಸಾಗಿಸಬಹುದು ಎಂಬ ಕಾರಣದಿಂದ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ.
► ಆರಂಭದಲ್ಲಿ ನೀವು ಎದುರಿಸಿದ ಸವಾಲುಗಳು ಏನೇನು? ಇದರ ಸೋಲು ಗೆಲುವುಗಳನ್ನು ಹಂಚಿ ಕೊಳ್ಳಿ.
ನಾನು ಖಾಸಗಿ ಕೆಲಸ ಬಿಟ್ಟು ಕೃಷಿ ಮಾಡಲು ಬಂದಾಗ ಸಾಕಷ್ಟು ಜನರು ನನ್ನನ್ನು ಗೇಲಿ ಮಾಡುತ್ತಿದ್ದರು. ಕೃಷಿ ಆರಂಭಿಸಿದಾಗ ತುಂಬಾ ಸವಾಲುಗಳನ್ನು ಎದುರಿಸಿದೆ. ಜಮೀನಿನಲ್ಲಿ ಮೊದಲಿಗೆ 1 ಎಕರೆ ರೇಷ್ಮೆ, ಇನ್ನೊಂದು ಎಕರೆಯಲ್ಲಿ ಬಾಳೆ, ಉಳಿದ 30 ಗುಂಟೆ ಜಾಗದಲ್ಲಿ ಬೀಜೋತ್ಪಾದನೆ ಪ್ರಾರಂಭಿಸಿ ತಿಂಗಳಿಗೆ 50ರಿಂದ 60 ಸಾವಿರ ರೂ. ಆದಾಯ ಪಡೆದು ಯಶಸ್ಸು ಕಂಡೆ.
► ಸಾವಯವ ಗೊಬ್ಬರಗಳನ್ನು ಬಳಸಿ ಮಾಡುವ ಕೃಷಿ ಕುರಿತು ನಿಮ್ಮ ಅನಿಸಿಕೆ?
ಇದರಿಂದ ರೈತ ಯಶಸ್ವಿಯಾಗಬಹುದೇ? ಜಮೀನಿನಲ್ಲೇ ತ್ಯಾಜ್ಯಗಳನ್ನು ಸಂಗ್ರಹಿಸಿ ಸಾವಯವ ಗೊಬ್ಬರ ತಯಾರಿಸುವುದರ ಜೊತೆಗೆ ರಾಜ್ಯಾದ್ಯಂತ ಮಾರಾಟ ಮಾಡಿ ವಾರ್ಷಿಕವಾಗಿ 2 ಲಕ್ಷ ರೂ. ಆದಾಯ ಪಡೆಯುತ್ತಿದ್ದೇನೆ. ಸಾವಯವ ಕೃಷಿಯಿಂದ ಜಮೀನಿನ ಫಲವತ್ತತೆ ಕಾಪಾಡುವ ಜೊತೆಗೆ ಗುಣಮಟ್ಟದ ಬೆಳೆ ಬೆಳೆದು ಹೆಚ್ಚು ಆದಾಯ ಗಳಿಸಬಹುದಾಗಿದೆ.
► ಸರಕಾರ ನಿಮಗೆ ಯಾವ ರೀತಿಯಲ್ಲಿ ನೆರವಾಗುತ್ತಿದೆ?
ಸರಕಾರದಿಂದ ನನಗೆ ತುಂಬಾ ಸಹಾಯವಾಗಿದೆ. ರೇಷ್ಮೆ ಕಟ್ಟಡ, ಎರೆಹುಳ ಗೊಬ್ಬರ ಘಟಕದ ನಿರ್ಮಾಣಕ್ಕೆ, ಜೀವಸಾರ ಉತ್ಪಾದನೆ ಘಟಕ ನಿರ್ಮಾಣಕ್ಕೆ ಕೃಷಿ ಇಲಾಖೆಯಿಂದ ಸಹಾಯಧನ ಪಡೆದಿದ್ದೇನೆ. ಇದು ಆರ್ಥಿಕವಾಗಿಯೂ ಸದೃಢವಾಗಲು ನೆರವಾಗಿದೆ.
► ರೈತರ ಹೆಸರಲ್ಲಿ ರೈತರಲ್ಲದವರು ಸರಕಾರದ ನೆರವನ್ನು ದೋಚುತ್ತಿದ್ದಾರೆ ಎಂಬ ಆರೋಪ ಇದೆ. ನಿಜವೇ?
ನಿಜ. ರೈತರ ಹೆಸರಿನಲ್ಲಿ ರೈತರಲ್ಲದವರು ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ. ನಕಲಿ ದಾಖಲಾತಿ ನೀಡಿ ಕೃಷಿಗೆ ಇರುವ ಸಹಾಯಧನ ಪಡೆಯುವ ಜನರು ತುಂಬಾ ಇದ್ದಾರೆ. ಹೈನುಗಾರಿಕೆ ಮಾಡಲು ಸಹಾಯಧನ ಪಡೆದು ಕೇವಲ 2-3 ತಿಂಗಳು ಮಾತ್ರ ಸಾಕಣೆ ಮಾಡಿ ಹಸುವನ್ನು ಮಾರಾಟ ಮಾಡಿದವರನ್ನು ನೋಡಿದ್ದೇನೆ. ಕೃಷಿ ಉಪಕರಣಗಳಿಗೆ ದೊರೆಯುವ ಸಹಾಯಧನವೂ ದುರ್ಬಳಕೆಯಾಗುತ್ತಿದೆ.
► ರೈತರ ಸಾಲ ಮತ್ತು ಆತ್ಮಹತ್ಯೆ ಕುರಿತು ನಿಮ್ಮ ಅಭಿಪ್ರಾಯ ಏನು?
ರೈತರು ತಂತ್ರಜ್ಞಾನವನ್ನು ಅಳವಡಿಸಲು ಟ್ರಾಕ್ಟರ್ ಸೇರಿದಂತೆ ಇತರ ಕೃಷಿ ಉಪಕರಣಗಳನ್ನು ಸಾಲ ಮಾಡಿ ಖರೀದಿಸುತ್ತಾರೆ. ಆದರೆ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡದೆ ಸಾಲದ ಕಂತು ಕಟ್ಟಲು ಸಾಧ್ಯವಾಗದೆ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ಕೈೊಳ್ಳುತ್ತಾರೆ. ಹಾಗಾಗಿ ರೈತ ಕೃಷಿಗೆ ಅವಶ್ಯ ಇರುವ ಉಪಕರಣಗಳನ್ನು ಮಾತ್ರ ಖರೀದಿಸಿ ಕೃಷಿ ಮಾಡಿದರೆ ಸಾಲಗಾರನಾಗದೆ ಜೀವನ ಸಾಗಿಸಬಹುದು.
► ಸರಕಾರದಿಂದ ಮತ್ತು ಸಮಾಜದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ.
ಸರಕಾರ ನಿರುದ್ಯೋಗಿ ಯುವಕರಿಗೆ ಒಂದು ಎಕರೆ ಜಮೀನಿನ ವೌಲ್ಯದ ಶೇ.75ರಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಿ ಕೃಷಿಯಲ್ಲಿ ತೊಡಗುವಂತೆ ಮಾಡಬೇಕು. ಇದರಿಂದ ಕೃಷಿ ಪದ್ಧತಿ ಜೀವಂತವಾಗಿರುತ್ತದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ‘ಕೃಷಿ ವಿಷಯ’ ಅಳವಡಿಸಿದರೆ ಕೃಷಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗುತ್ತದೆ. ಹಾಗೆಯೇ ನಿರುದ್ಯೋಗಿ ಯುವಕರು ಕೃಷಿಯತ್ತ ಒಲವು ತೋರಿಸಿ ಮಿಶ್ರಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡರೆ ಪ್ರತಿ ತಿಂಗಳು 30-40 ಸಾವಿರ ರೂ. ಆದಾಯ ಪಡೆಯಬಹುದು.
► ಕೃಷಿಯಿಂದ ನೀವು ಸಂತೃಪ್ತರೆ?
ಕೃಷಿಯಿಂದ ನಾನು ತುಂಬ ಸಂತೋಷದಿಂದ ಇದ್ದೇನೆ. ಸಾವಯವ ಕೃಷಿಯಿಂದ ಮಾಡಿರುವ ಸಾಧನೆ ಗುರುತಿಸಿ ನನ್ನನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದ ಸದಸ್ಯ, ರಾಜ್ಯ ರೈತರ ಸಲಹಾ ಸಮಿತಿ ಸದಸ್ಯ, ರಾಜ್ಯ ಸಮಿತಿ ಆತ್ಮಾ ಯೋಜನೆಯ ಸದಸ್ಯನನ್ನಾಗಿ ಆಯ್ಕೆ ಮಾಡಿದೆ. ಅಲ್ಲದೆ ಧಾರವಾಡ ಕೃಷಿ ವಿವಿಯಿಂದ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’, ಬಾಗಲಕೋಟೆ ವಿವಿಯಿಂದ ‘ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ’, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ‘ಸಾವಯವ ಕೃಷಿ ಸಾಧಕ ಪ್ರಶಸ್ತಿ’ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಲ್ಲಿ ನಿರ್ದೇಶಕ, ಸದಸ್ಯ, ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಈ ಕೆಲಸ ನನಗೆ ತೃಪ್ತಿ ನೀಡಿದೆ.
► ನಿಮ್ಮ ಅನಂತರ ಈ ಕೃಷಿ ಮುಂದುವರಿಯಬಹುದೇ?
ನನ್ನ ನಂತರ ಕೃಷಿಯನ್ನು ಮುಂದುವರಿಸಿಕೊಂಡು ಹೋಗಲು ನಾನು ಈಗಾಗಲೇ ನನ್ನ ಅಳಿಯನಿಗೆ (ಮಗಳ ಗಂಡ) ಕೃಷಿಗೆ ಪೂರಕ ತರಬೇತಿಗಳನ್ನು ನೀಡುತ್ತಿದ್ದು, ಕೃಷಿಯಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಎಲ್ಲ ರೀತಿಯ ಸಲಹೆಗಳನ್ನು ನೀಡಿದ್ದೇನೆ.