ದುರಂತದ ಸುತ್ತ ಸಂಘಟಿತ ಧರ್ಮದ ಹುತ್ತ
ಧಾರ್ಮಿಕ ಹಿಂಸೆ ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದಂತಹ ಅಥವಾ ಆಧುನಿಕ ಯುಗದಲ್ಲಿ ದೇಶ-ದೇಶಗಳು ನಡೆಸುವಂತಹ ನೇರಾ ನೇರ ಯುದ್ಧದಂತಲ್ಲ. ಇದು ಎರಡು ಗುಂಪುಗಳೊಳಗೆ ಪೂಜಾಸ್ಥಳವೊಂದರ ಸ್ವಾಮ್ಯಕ್ಕಾಗಿ, ಎರಡು ಭಾಷಿಕರ ಅಥವಾ ಎರಡು ಒಳ ಪಂಗಡಗಳ ನಡುವೆ ಆರ್ಥಿಕ, ಅಥವಾ ಸಾಂಸ್ಕೃತಿಕ ಕಾರಣಕ್ಕಾಗಿಯೂ ನಡೆಯಬಹುದಾದ ಹಿಂಸೆ. ಇಂತಹ ಹಿಂಸೆ, ಈಗ ಸುಳ್ವಾಡಿಯಲ್ಲಾಗಿರುವಂತೆ, ಶುದ್ಧ ಧಾರ್ಮಿಕ ಕಾರಣಗಳಿಗಿಂತ ಹೆಚ್ಚಾಗಿ ಜಾತಿ, ಪಂಗಡ ಅಥವಾ ಜನಾಂಗೀಯ ಮತ್ತು ಲೈಂಗಿಕ ಕಾರಣಗಳಿಗಾಗಿ ಕೂಡ ನಡೆದ ಸಾಕಷ್ಟು ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ.
ಧರ್ಮ ಮತ್ತು ಹಿಂಸೆ ಲಾಗಾಯ್ತಿ ನಿಂದಲೂ ಒಂದೂನ್ನೊಂದು ಬಿಡದ ಸತತ ಆಲಿಂಗನದಲ್ಲೇ ಇರುವ ಒಂದು ಜೋಡಿಯ ಹಾಗೆ ನಡೆದು ಬಂದಿದೆ. ಮೂಲತಃ ಮತಬೋಧಕರ ವೌಖಿಕ ಬೋಧನೆಗಳಲ್ಲಿ, ಪ್ರವಚನಗಳಲ್ಲಿ, ಆ ಬಳಿಕ ಪವಿತ್ರ ಗ್ರಂಥಗಳಲ್ಲಿ ದಾಖಲಾಗಿ ಇದ್ದ ನಂಬಿಕೆ ಮತ್ತು ನಂಬಿಕೆಗಳನ್ನಾಧರಿಸಿದ ಆಚರಣೆಗಳ ಮೊತ್ತವಾದ ಧರ್ಮ ಧರ್ಮೋಪದೇಶಕರ ಮತ್ತು ಅವರ ಹಿಂಬಾಲಕರ ಕಾರಣದಿಂದಾಗಿ ಒಂದು ಸಂಘಟಿತ (organized) ‘ಸ್ಥಾವರ’ವಾಯಿತು. ಆಗ ಅದು ಆಣುಸ್ಥಾವರದಲ್ಲಿ ಬಳಸುವ ಯುರೇನಿಯಂ ತಂದೊಡ್ಡುವ ಅನಾಹುತಗಳಿಗಿಂತಲೂ ಮಿಗಿಲಾದ ದುರಂತಗಳನ್ನು ತಂದೊಡ್ಡುವ ಸಮಸ್ಯಾತ್ಮಕ ಸ್ಥಾವರವಾಗಿ ಪರಿಣಮಿಸಿತು.
ಇತಿಹಾಸದ ಉದ್ದಕ್ಕೂ ಹೀಗೆ ನಾನಾರೂಪಗಳಲ್ಲಿ ಸ್ಥಾವರವಾದ ಹಲವು ಧರ್ಮಗಳಿಂದಾಗಿ ಘಟಿಸಿದ ಹಿಂಸೆ, ಹತ್ಯೆ, ನರಮೇಧಗಳ ಸರಣಿ ಉದಾಹರಣೆಗಳು ದೊರಕುತ್ತವೆ. ಸುಳ್ವಾಡಿ ವಿಷಪ್ರಸಾದ ದುರಂತ ಈ ಸರಣಿಯಲ್ಲಿ ಅತ್ಯಂತ ಇತ್ತೀಚಿನದು.
ಮನುಷ್ಯನ ಮೂಲಭೂತ ಪ್ರವೃತ್ತಿಗಳಾದ ಆಸೆ, ಹಿಂಸಾ ಪ್ರವೃತ್ತಿ, ಕ್ರೌರ್ಯ, ಪರರಿಗೆ ಕೇಡುಬಗೆದು ಸಂತೋಷಪಡುವ ಪರ ದುಃಖ ವಿನೋದಿ(Sadistie) ಸ್ವಭಾವಗಳನ್ನು ಸೋಲಿಸಿ, ಅವನನ್ನು ಸಜ್ಜನನನ್ನಾಗಿಸುವ ಉದ್ದೇಶದಿಂದ ಪ್ರಕೃತಿಯ ಸಹಜ ವಾತಾವರಣದಲ್ಲಿ ಹುಟ್ಟಿಕೊಂಡ ಉತ್ತಮ ಚಿಂತನೆಗಳ ಫಲವೇ ಧರ್ಮ. ಇಂತಹ ಧರ್ಮ ಗುಡಿಗೋಪುರ, ಮಂದಿರ, ಮಸೀದಿ, ಚರ್ಚ್ಗಳ ರೂಪ ಪಡೆದಾಗಲೇ ಅದರಲ್ಲಿ ದೌರ್ಜನ್ಯದ, ಹಿಂಸೆಯ ಮೊಳಕೆಯೊಡೆಯಲಾರಂಭಿಸಿತು.
ಧರ್ಮಕ್ಕೆ ಸಂಬಂಧಿಸಿ ನಡೆಯುವ ಹಿಂಸೆಯನ್ನು ಮಾನವ ಶಾಸ್ತ್ರಜ್ಞರು ಮನೋ ವಿಜ್ಞಾನಿಗಳು ಹಾಗೂ ಸಮಾಜಶಾಸ್ತ್ರಜ್ಞರು ವಿವರವಾಗಿ ಅಧ್ಯಯನ ಮಾಡಿದ್ದಾರೆ.
ನೇರವಾದ ದೈಹಿಕದಾಳಿ, ಗಾಯಗೊಳಿಸುವಿಕೆ ಅಥವಾ ಹತ್ಯೆಯಲ್ಲದೆ ಧರ್ಮದ ಸುತ್ತ ಹಲವು ರೀತಿಯಲ್ಲಿ ಹಿಂಸೆ ನಡೆಯುತ್ತಿರುತ್ತದೆ. ಸ್ವ-ಹಿಂಸೆ, ಇತರರಿಗೆ ನೀಡುವ ಪರೋಕ್ಷ ಹಿಂಸೆ, ಇನ್ನೊಬ್ಬನನ್ನು ಅಥವಾ ಇನ್ನೊಬ್ಬಳನ್ನು ತಾನು ಹೇಳುವ ಧಾರ್ಮಿಕ/ಲೈಂಗಿಕ ಆಚರಣೆ ಅಥವಾ ‘ವ್ರತ’ವನ್ನು ಆಚರಿಸುವಂತೆ ಬಲಾತ್ಕರಿಸುವುದು, ಆಚರಿಸದಿದ್ದಲ್ಲಿ ಆ ವ್ಯಕ್ತಿಗೆ ಅಷ್ಟರವರೆಗೆ ನೀಡುತ್ತಿದ್ದ ನೀರು ಆಹಾರ ಆಶ್ರಯ ನೀಡದೆ ಸತಾಯಿಸುವುದು, ಥಳಿಸುವುದು, ಗುರುವೊಬ್ಬ ತಾನು ಹೇಳಿದಂತೆ ಕೇಳದ ತನ್ನ ಹಿಂಬಾಲಕರಿಗೆ ಕೆಟ್ಟದಾಗಿ ಬೈಯುವುದು, ಬಹಿಷ್ಕಾರ ಹಾಕುವುದು ಅಥವಾ ಹಾಕಿಸುವುದು ಇತ್ಯಾದಿ ಹಲವಾರು ರೂಪಗಳಲ್ಲಿ ಧಾರ್ಮಿಕ ಹಿಂಸೆ ವ್ಯಕ್ತವಾಗುತ್ತಿರುತ್ತದೆ.
ಸಂಘಟಿತ ಧರ್ಮದ ಹುತ್ತದಲ್ಲಿ ಹಲವು ರೀತಿಯ, ಭಿನ್ನ ಭಿನ್ನ ಪ್ರಮಾಣದ ವಿಷದ ಹಾವುಗಳು ಬುಸುಗುಟ್ಟುತ್ತಿರುತ್ತವೆ. ಜನ ಸಾಮಾನ್ಯರ ಪಾಲಿಗೆ ನಂಬಿಕೆ, ವಿಶ್ವಾಸ, ಉಪದೇಶಗಳ, ತೀರ್ಥಕ್ಷೇತ್ರ ಪ್ರವಾಸ, ಧಾರ್ಮಿಕ ಯಾತ್ರೆಗಳ ವಿಷಯವಾಗಿರುವ ಧರ್ಮ ಸಾಂಸ್ಥಿಕ ರೂಪ ಪಡೆದಾಗ ಹಣ ಅಧಿಕಾರ ಮತ್ತು ಅಂತಸ್ತಿನ ಕೇಂದ್ರವಾಗುತ್ತದೆ. ಪುಣ್ಯ-ಪಾಪಗಳ ನೆಲೆಯಲ್ಲಿ ಭಾವುಕರಿಗೆ ಸೇವಾ ಚೀಟಿಗಳನ್ನು ನೀಡಿ ಸಂಪನ್ಮೂಲ ಸಂಗ್ರಹಿಸುವ ‘ಸ್ಟಾಕ್ ಎಕ್ಸ್ಚೇಂಜ್’ ಆಗುತ್ತದೆ. ಇಂತಹ ಹಣಕಾಸು ಕೇಂದ್ರಗಳ ಮೇಲೆ ತಮ್ಮ ತಮ್ಮ ಸ್ವಾಮ್ಯ ಸ್ಥಾಪಿಸುವುದಕ್ಕಾಗಿ ನಡೆಯುವ ಸ್ವರ್ಧೆ ಮೇಲಾಟಗಳು ಅಂತಿಮವಾಗಿ ಪ್ರತ್ಯಕ್ಷ ತೋಳ್ಬಲ ಪ್ರದರ್ಶನದ ರೂಪ ಪಡೆಯುತ್ತವೆ ಅಥವಾ ಸುಳ್ವಾಡಿಯಲ್ಲಾಗಿರುವಂತೆ ಪರೋಕ್ಷವಾಗಿ ಎದುರಾಳಿಗಳನ್ನು ಸದೆ ಬಡಿಯುವ, ಪ್ರಸಾದಕ್ಕೆ ವಿಷ ಬೆರೆಸಿ ಸಾಯಿಸುವ ‘ಗುಪ್ತ ಯುದ್ಧ’ಗಳಾಗುತ್ತವೆ. ನೂರಾರು ಕೋಟಿ ಸಂಪತ್ತುಗಳಿಸಿ ಕೆಲವು ಕೋಟಿಗಳನ್ನು ದಾನ, ಸಹಾಯಧನವಾಗಿ ವಿತರಿಸಿ ಕೀರ್ತಿಕಾಮಿನಿಯ ಹಿಂದೆ ಬೀಳುವ ಸಮಾಜ ರತ್ನರ ಆಡುಂಬೊಲಗಳಾಗುತ್ತವೆ.
ಚಾಮರಾಜ ನಗರದ ಪೊಲೀಸರ ದಕ್ಷ ಕಾರ್ಯಾಚರಣೆಯಂತಹ ಪ್ರಶಂಸಾರ್ಹ ಕಾರ್ಯಾಚರಣೆಯ ಹೊರತಾಗಿ ಇಂತಹ ಗುಪ್ತ ಯುದ್ಧಗಳ ‘ಹೀರೋ’ಗಳ ಥ್ರಿಲ್ಲರ್ ಸಿನೆಮಾದಂತಹ ನೈಜ ಘಟನೆಯ ಖಳನಾಯಕರ ಪತ್ತೆಯೇ ಆಗುವುದಿಲ್ಲ. ಭಯೋತ್ಪಾದಕರು ನೇರವಾಗಿ ಗನ್ ಅಥವಾ ಬಾಂಬ್ ಬಳಸಿ ಅಮಾಯಕರನ್ನು ಹತ್ಯೆ ಗೈದರೆ ಧಾರ್ಮಿಕ ಆತಂಕವಾದಿಗಳು ಭಕ್ತರು ತಿನ್ನುವ ಅನ್ನಕ್ಕೆ ವಿಷ ಹಾಕಿ ಮುಗ್ಧ ಭಕ್ತರನ್ನು ಸಾಯಿಸುತ್ತಾರೆ.
ಧಾರ್ಮಿಕ ಹಿಂಸೆ ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದಂತಹ ಅಥವಾ ಆಧುನಿಕ ಯುಗದಲ್ಲಿ ದೇಶ-ದೇಶಗಳು ನಡೆಸುವಂತಹ ನೇರಾ ನೇರ ಯುದ್ಧದಂತಲ್ಲ. ಇದು ಎರಡು ಗುಂಪುಗಳೊಳಗೆ ಪೂಜಾಸ್ಥಳವೊಂದರ ಸ್ವಾಮ್ಯಕ್ಕಾಗಿ, ಎರಡು ಭಾಷಿಕರ ಅಥವಾ ಎರಡು ಒಳ ಪಂಗಡಗಳ ನಡುವೆ ಆರ್ಥಿಕ, ಅಥವಾ ಸಾಂಸ್ಕೃತಿಕ ಕಾರಣಕ್ಕಾಗಿಯೂ ನಡೆಯಬಹುದಾದ ಹಿಂಸೆ. ಇಂತಹ ಹಿಂಸೆ, ಈಗ ಸುಳ್ವಾಡಿಯಲ್ಲಾಗಿರುವಂತೆ, ಶುದ್ಧ ಧಾರ್ಮಿಕ ಕಾರಣಗಳಿಗಿಂತ ಹೆಚ್ಚಾಗಿ ಜಾತಿ, ಪಂಗಡ ಅಥವಾ ಜನಾಂಗೀಯ ಮತ್ತು ಲೈಂಗಿಕ ಕಾರಣಗಳಿಗಾಗಿ ಕೂಡ ನಡೆದ ಸಾಕಷ್ಟು ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ.
‘ಸ್ಥಾವರ’ವೊಂದರ ಮೇಲೆ ನಿಯಂತ್ರಣ ಸ್ಥಾಪಿಸುವುದ ಕ್ಕಾಗಿಯೇ ಕಾನ್ಸ್ಟಂಟಿನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯನ್ ಧರ್ಮ ಆಧಿಕಾರಕ್ಕೆ ಬಂದಾಗ ತಮ್ಮ ಸಿದ್ಧಾಂತವನ್ನು ಒಪ್ಪದ ಕ್ರಿಶ್ಚಿಯನರನ್ನೂ, ಕ್ರಿಶ್ಚಿಯನೇತರರರನ್ನು ದಮನಿಸಲಾಯಿತು. ಮಧ್ಯಯುಗದಲ್ಲಿ ಕ್ರಿಶ್ಚಿಯನ್ ಧರ್ಮದ ಸೈದ್ಧಾಂತಿಕ ಹಾಗೂ ಸಾಮಾಜಿಕ ನಿಯಂತ್ರಣ ಉಳಿಸಿಕೊಳ್ಳಲಿಕ್ಕಾಗಿ ಯುರೋಪಿನ ಕ್ರಿಶ್ಚಿಯನ್ ದೇಶಗಳು 11ನೇ, 12ನೇ ಮತ್ತು 13ನೇ ಶತಮಾನಗಳಲ್ಲಿ ಮುಸ್ಲಿಮರ ವಿರುದ್ಧ ನಡೆಸಿದ ಕ್ರುಸೇಡ್ (ಧರ್ಮನಯುದ್ಧ)ಗಳಲ್ಲಿ ಸಾವಿರಾರು ಮಂದಿ ಕೊಲ್ಲಲ್ಪಟ್ಟರು.
ಇತಿಹಾಸಕಾರ ಗ್ರಾಂಟ್ಶೇಫರ್ ಹೇಳುವಂತೆ, 1099ರಲ್ಲಿ ಕ್ರುಸೇಡರ್ಗಳು ಜೆರೂಸಲೆಂ ಅನ್ನು ವಶಪಡಿಸಿಕೊಂಡಾಗ ಅವರು ಮುಸ್ಲಿಮರನ್ನು, ಯಹೂದಿಗಳನ್ನು ಮತ್ತು ಸ್ಥಳೀಯ ಕ್ರಿಶ್ಚಿಯನ್ನರನ್ನು ಬೇಕಾಬಿಟ್ಟಿಯಾಗಿ ಕೊಂದು ಹಾಕಿದರು. ಹಾಗೆಯೇ, ಹದಿನಾರನೆಯ ಶತಮಾನದಲ್ಲಿ ಪ್ರಾಟೆಸ್ಟೆಂಟ್ ಚರ್ಚುಗಳ ಸ್ಥಾಪನೆಗೆ ಕಾರಣವಾದ ಧಾರ್ಮಿಕ ಚಳವಳಿಯಾದ ‘ರಿಫಾರ್ಮೇಶನ್’ನ ಅವಧಿಯಲ್ಲಿ ಭಿನ್ನವಾದ ಅಭಿಪ್ರಾಯ ಹೊಂದಿದ್ದಕ್ಕಾಗಿ ಕ್ಯಾಥೊಲಿಕರ ಹಾಗೂ ಪ್ರಾಟೆಸ್ಟೆಂಟರ ನಡುವೆ ನಡೆದ ಘರ್ಷಣೆಗಳಲ್ಲಿ ಹಲವಾರು ಕ್ರಿಶ್ಚಿಯನ್ನರು ಕೊಲ್ಲಲ್ಪಟ್ಟರು. ಜಿಹಾದ್ ಹೆಸರಿನಲ್ಲಿ ನಡೆಯುವ ಹತ್ಯೆಗಳು, ಇಸ್ಲಾಮಿಕ್ ಮತಾಂಧ ಉಗ್ರರಿಂದ ನಡೆಯುವ ಕೊಲೆಗಳು ಧಾರ್ಮಿಕ ಹಿಂಸೆಯ ಐತಿಹಾಸಿಕ ಹಾದಿಯಲ್ಲಿ ಸಾಗಿಬಂದ ಇತ್ತೀಚಿನ ಬೆಳವಣಿಗೆಗಳು. ನಮ್ಮ ದೇಶದಲ್ಲಿ ಹಿಂಸಾಚಾರ ಹಾಗೂ ಹತ್ಯೆಗಳು, ಈಗಲೂ ಇಂತಹ ಹಿಂಸಾಚಾರಕ್ಕೆ ನಡೆಯುತ್ತಿರುವ ಮತಾಂಧ ಶಕ್ತಿಗಳ ಮಸಲತ್ತುಗಳು, ಉಗ್ರವಾದದ ಹಾಗೆಯೆ, ದೇಶವನ್ನು ಕಾಡುತ್ತಿರುವ ಸಮಸ್ಯೆಗಳಾಗಿವೆ.
ಆರ್ಥಿಕ ಪ್ರಲೋಭನಗಳಿಲ್ಲದ ಕಾಲದಲ್ಲಿ ವಿಶ್ವದ ಹಲವು ಭಾಗಗಳಲ್ಲಿ ಧರ್ಮದ ಹೆಸರಿನಲ್ಲಿ ಇನ್ನೊಂದು ರೀತಿಯ ಹಿಂಸೆ ಸಮಾಜವನ್ನು ಕಾಡುತ್ತಿತ್ತು. ಅದು ‘ಪವಿತ್ರ ವೇಶ್ಯಾವೃತ್ತಿ’, ‘ದೇವಾಲಯ ವೇಶ್ಯಾವೃತ್ತಿ’, ‘ಪಂಥ(ಕಲ್ಟ್) ವೇಶ್ಯಾವೃತ್ತಿ’, ‘ಧಾರ್ಮಿಕ ವೇಶ್ಯಾವೃತ್ತಿ’, ‘ ಪವಿತ್ರ ಕಾಮ’, ‘ ಪವಿತ್ರ ಲೈಂಗಿಕ ಆಚರಣೆಗಳು’ (rites) ಅಥವಾ ಭಾರತದಲ್ಲಿ ಇದ್ದಂತಹ ದೇವದಾಸಿ, ಬಸವಿ ಇತ್ಯಾದಿ ಹೆಸರುಗಳಲ್ಲಿ ಹರೆಯದ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ಲೈಂಗಿಕ ಹಿಂಸೆ ಮತ್ತು ದೌರ್ಜನ್ಯ. ಕ್ರಿ.ಪೂ. ಐದನೇ ಶತಮಾನದ ಇತಿಹಾಸಕಾರ ಹೆರೊಡೊಟಸ್ ಪ್ರಾಚೀನ ಬ್ಯಾಬಿಲೋನಿಯಾದಲ್ಲಿದ್ದ ಇಂತಹ ಆಚರಣೆಯನ್ನು ದಾಖಲಿಸಿದ್ದಾನೆ.
ಯಜುರ್ವೇದದ ‘ನ ತಸ್ಯ ಪ್ರತಿಮಾ ಅಸ್ತಿ’ (ಅವನಿಗೆ/ದೇವರಿಗೆ ಪ್ರತಿಮೆ/ಮೂರ್ತಿ ಎಂಬುದಿಲ್ಲ)ಎಂಬ ಮಾತು ಸ್ವಹಿತಾಸಕ್ತಿಗಾಗಿ ಆರ್ಥಿಕ ಲಾಭಕ್ಕಾಗಿ ಧಾರ್ಮಿಕ ಕೇಂದ್ರಗಳನ್ನು, ದೇವಾಲಯಗಳನ್ನು ಬಳಸಿಕೊಳ್ಳುವ ಧೂರ್ತರು, ಮತಾಂಧರು ಬರದಿರಲಿ ಎಂದು ಅಂದೇ ಊಹಿಸಿ ಹೇಳಿದಂತಿದೆ. ವೇದಗಳಲ್ಲಿ, ಉಪನಿಷತ್ತು, ಭಗವದ್ಗೀತೆಯಲ್ಲಿ ದೇವಾಲಯಗಳ ಪ್ರಸ್ತಾಪವಾಗಲಿ, ದೇವಾಲಯಗಳನ್ನು ನಿರ್ಮಿಸುವ ವಾಸ್ತುವಿವರಗಳಾಗಲಿ ಇಲ್ಲವೆಂಬುದನ್ನು ನಮ್ಮ ಅತ್ಯುತ್ಸಾಹಿ ಧರ್ಮದುರಂಧರರಿಗೆ ತಿಳಿಯಹೇಳುವವರು ಯಾರು?
ಈಶಾವಾಸ್ಯೋಪನಿಷತ್ ಹೇಳುವ ಬಹಳ ಪ್ರಸಿದ್ಧವಾದ ಮತ್ತು ವೇದೋಪನಿಷತ್ಗಳ ಬಗ್ಗೆ ಅತ್ಯಂತ ಹೆಮ್ಮೆ ಪಡುವ ಎಲ್ಲರೂ ಕೋಟ್ ಮಾಡುವ ಒಂದು ಶ್ಲೋಕ ಹೀಗಿದೆ: ‘‘ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ/ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣ ಮೇವಾವ ಶಿಷ್ಯತೇ॥
ಸುಳ್ವಾಡಿ ವಿಷ ಪ್ರಸಾದ ದುರಂತದ ಬಳಿಕ ಇನ್ನಾದರೂ ನಾವು ಸಮಾಜದಲ್ಲಿ ಪೂಜಾ ಮಂದಿರಗಳ ನಿರ್ಮಾಣ, ಸ್ಥಾನಮಾನ, ಮತ್ತು ಅವುಗಳು ಮುಗ್ಧ ಭಕ್ತರ ಪ್ರಾಣ ತೆಗೆಯುವ ಮರಣ ಶಿಬಿರ ಅಥವಾ ನಾಜಿ ಕಾನ್ಸ್ಸೆಂಟ್ರೇಶನ್ ಕ್ಯಾಂಪ್ಗಳಾಗದಂತೆ ತಡೆಯುವ ಕುರಿತು ಗಂಭಿರವಾಗಿ ಯೋಚಿಸಬೇಕಾಗಿದೆ.
(bhaskarrao599@gmail.com)