ಎಸೆಸ್ಸೆಲ್ಸಿ ಪರೀಕ್ಷೆ ಪ್ರವೇಶ ಪತ್ರ: ತಿದ್ದುಪಡಿಗೆ ಡಿ.31ವರೆಗೆ ಅವಕಾಶ
ಬೆಂಗಳೂರು, ಡಿ.26:ಎಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರ(ಹಾಲ್ ಟಿಕೆಟ್)ಗಳಲ್ಲಿ ಲೋಪದೋಷವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಡಿ.31ವರೆಗೂ ಅವಕಾಶ ಕಲ್ಪಿಸಿದೆ.
2019ನೇ ಸಾಲಿನ ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳ ಡೌನ್ಲೋಡ್ ಹಾಗೂ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲ ಸರಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನಿತ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ ಅಭ್ಯರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ, ಡಿ.31ರೊಳಗೆ ತಿದ್ದುಪಡಿ ಮಾಡಿದ ಮಾಹಿತಿಯನ್ನು ಅಪ್ಲೋಡ್ ಮಾಡುವಂತೆ ಸೂಚಿಸಿದೆ.
ತಾತ್ಕಾಲಿಕ ಪ್ರವೇಶ ಪತ್ರದಲ್ಲಿ 9 ಅಂಶಗಳನ್ನು ತಿದ್ದುಪಡಿ ಮಾಡಲು ಅವಕಾಶವಿದೆ. ಶಾಲಾ ಅಭ್ಯರ್ಥಿಗಳು, ಎಸ್ಎಟಿಎಸ್ ಸಂಖ್ಯೆ, ಖಾಸಗಿ ಅಭ್ಯರ್ಥಿಗಳ ರೆಫರೆನ್ಸ್ ಸಂಖ್ಯೆ, ಪುನಾರಾವರ್ತಿತ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನು ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬಹುದಾಗಿದೆ. ಸೂಚನೆ ನೀಡಿರುವುದನ್ನು ಹೊರತುಪಡಿಸಿ ಮಾಧ್ಯಮ, ವಿದ್ಯಾರ್ಥಿಯ ಬಗ್ಗೆ ಬದಲಾವಣೆ ಇದ್ದರೆ ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
14,796 ಶಾಲೆಗಳ ಪೈಕಿ 7328 ಶಾಲೆಗಳು ಈಗಾಗಲೇ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿದ್ದು, 7458 ಶಾಲೆಗಳು ಡೌನ್ಲೋಡ್ ಬಾಕಿ ಉಳಿಸಿಕೊಂಡಿವೆ. ಶಾಲಾ ಆಡಳಿತ ಮಂಡಳಿಗಳು www.kseesb.kar.nic.in ಈ ವೆಬ್ಸೈಟ್ಗೆ ಭೇಟಿ ನೀಡಿ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.