ಬ್ಯಾಂಕ್ಗಳಲ್ಲಿ ಸಿಬ್ಬಂದಿ ಕೊರತೆ, ಕಾರ್ಯಭಾರದ ಒತ್ತಡ: ನಾಗರಿಕರಿಗೆ ಸಮರ್ಪಕವಾಗಿ ದೊರೆಯದ ಆಧಾರ್ ಸೇವೆ
ಶಿವಮೊಗ್ಗ, ಡಿ.27: ಬ್ಯಾಂಕ್ಗಳಲ್ಲಿ ಆಧಾರ್ ಕಾರ್ಡ್ ನೋಂದಣಿ- ತಿದ್ದುಪಡಿಗೆ ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ. ಆದರೆ, ಕಾರ್ಯಭಾರದ ಒತ್ತಡ ಹಾಗೂ ಸಿಬ್ಬಂದಿ ಕೊರತೆಯ ಕಾರಣದಿಂದ, ರಾಜ್ಯದ ಕೆಲ ಬ್ಯಾಂಕ್ಗಳಲ್ಲಿ ನಾಗರಿಕರಿಗೆ ಸಮರ್ಪಕವಾಗಿ ಆಧಾರ್ ಸೇವೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಈ ಮೊದಲು ತಾಪಂ, ನಾಡ ಕಚೇರಿ, ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳ ಜೊತೆಗೆ ಕೆಲ ಖಾಸಗಿ ಸಂಸ್ಥೆಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡಿಸಲು ನಾಗರಿಕರಿಗೆ ಅವಕಾಶವಿತ್ತು. ನಾನಾ ಕಾರಣಗಳ ಹಿನ್ನೆಲೆಯಲ್ಲಿ ಖಾಸಗಿ ಕೇಂದ್ರಗಳಲ್ಲಿ ಆಧಾರ್ ಸಂಬಂಧಿತ ಸೇವೆಗಳಿಗೆ ನೀಡಿದ್ದ ಅನುಮತಿ ತಡೆಹಿಡಿಯಲಾಗಿದೆ. ಈ ನಡುವೆ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡಲು ಹಾಗೂ ಇತರ ಕೇಂದ್ರಗಳಲ್ಲಿ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಪ್ರಸ್ತುತ ವರ್ಷ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿಯೂ ಆಧಾರ್ ನೋಂದಣಿ-ತಿದ್ದುಪಡಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿತ್ತು.
ಬ್ಯಾಂಕ್ಗಳಲ್ಲಿ ಪ್ರತ್ಯೇಕ ಕಂಪ್ಯೂಟರ್, ಬಯೋಮೆಟ್ರಿಕ್ ಯಂತ್ರೋಪಕರಣಗಳನ್ನೂ ಅಳವಡಿಸಲಾಗಿದೆ. ದಿನಕ್ಕೆ ಇಂತಿಷ್ಟು ಆಧಾರ್ ನೋಂದಣಿ-ತಿದ್ದುಪಡಿ ಮಾಡಬೇಕೆಂಬ ಕಟ್ಟಳೆಯನ್ನೂ ಬ್ಯಾಂಕ್ಗಳಿಗೆ ವಿಧಿಸಲಾಗಿತ್ತು. ನಂತರ ಇದನ್ನು ಸಡಿಲಿಸಲಾಗಿತ್ತು. ಪ್ರಾರಂಭದಲ್ಲಿ ಬಹುತೇಕ ಬ್ಯಾಂಕ್ಗಳಲ್ಲಿ ನಾಗರಿಕರಿಗೆ ಆಧಾರ್ ಸಂಬಂಧಿತ ಸೇವೆಗಳು ಸುಲಭವಾಗಿ ದೊರಕುತ್ತಿತ್ತು. ಈ ಕಾರಣದಿಂದ ನಾಗರಿಕರು ತಮ್ಮ ಖಾತೆಯಿರುವ ಬ್ಯಾಂಕ್ಗಳಿಗೆ ತೆರಳಿ ಆಧಾರ್ ಸಂಬಂಧಿತ ಕೆಲಸ ಕಾರ್ಯ ಮಾಡಿಸಿಕೊಳ್ಳುತ್ತಿದ್ದರು.
ಆದರೆ, ಇತ್ತೀಚೆಗೆ ಕೆಲ ಬ್ಯಾಂಕ್ಗಳಲ್ಲಿ ಆಧಾರ್ ಸಂಬಂಧಿತ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿರುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಹೊಸದಾಗಿ ನೋಂದಣಿ ಮಾಡುವುದಿರಲಿ, ತಿದ್ದುಪಡಿಯಂತಹ ಕಾರ್ಯಗಳೂ ನಡೆಯುತ್ತಿಲ್ಲ. ಸರ್ವರ್ ಡೌನ್ ಆಗಿದೆ, ಸಾಫ್ಟ್ವೇರ್ ಬದಲಾಗಿದೆ ಎಂಬಿತ್ಯಾದಿ ನೆಪಗಳನ್ನು ಬ್ಯಾಂಕ್ನವರು ಹೇಳುತ್ತಿದ್ದಾರೆ ಹಾಗೂ ಆಧಾರ್ ಸೇವೆ ನೀಡದೆ ಸಾಗಾ ಹಾಕುತ್ತಿದ್ದಾರೆ ಎಂದು ಕೆಲ ನಾಗರಿಕರು ದೂರುತ್ತಾರೆ.
ಸದ್ಯ ಬ್ಯಾಂಕ್ ಸಿಬ್ಬಂದಿ ಮೇಲೆ ಭಾರೀ ಪ್ರಮಾಣದ ಕಾರ್ಯಭಾರದ ಒತ್ತಡವಿದೆ. ನೋಟ್ ಅಮಾನ್ಯೀಕರಣದ ನಂತರವಂತೂ ಬ್ಯಾಂಕ್ ಸೇವೆಗಳಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ. ಬ್ಯಾಂಕ್ಗಳ ಮೂಲಕ ಹೊಸ ಹೊಸ ಸೇವೆ-ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಬ್ಯಾಂಕ್ ಸಂಬಂಧಿತ ಮುಕ್ಕಾಲುಪಾಲು ಸೇವೆಗಳು ಆನ್ಲೈನ್ ಆಧಾರಿತವಾಗಿದ್ದು, ಕಾಲಮಿತಿಯಲ್ಲಿ ಸೇವೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಸಿಬ್ಬಂದಿ ಬಿಡುವಿಲ್ಲದ ಕೆಲಸದಲ್ಲಿ ತೊಡಗುವಂತಿದೆ. ಆಧಾರ್ ಸೇವೆ ಪಡೆದುಕೊಳ್ಳಲು ಆಗಮಿಸುವ ನಾಗರಿಕರ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದ್ದು, ಗ್ರಾಹಕರ ಸಂಖ್ಯೆ ಹಾಗೂ ಸೇವೆಗಳಿಗೆ ಅನುಗುಣವಾಗಿ ಸಿಬ್ಬಂದಿ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಇದರಿಂದ ಬ್ಯಾಂಕ್ಗಳ ಮೇಲಿನ ಕಾರ್ಯಭಾರದ ಒತ್ತಡ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಇಂತಹ ಸನ್ನಿವೇಶದಲ್ಲಿ ಆಧಾರ್ ಸೇವೆಯನ್ನೂ ಬ್ಯಾಂಕ್ಗಳಲ್ಲಿ ಪರಿಚಯಿಸಲಾಗಿದೆ. ಇದು ಸಿಬ್ಬಂದಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತಾಗಿದೆ ಈ ಬಗ್ಗೆ ಕೇಂದ್ರ ಸರಕಾರ ಹಾಗೂ ಆಧಾರ್ ಅಥಾರಿಟಿ ಸಂಸ್ಥೆಯು ಗಮನ ಹರಿಸಬೇಕು ಎಂದು ಸಿಬ್ಬಂದಿಯೋರ್ವರು ಸಲಹೆ ನೀಡುತ್ತಾರೆ.
ಕೆಲ ಯೋಜನೆ ಹಾಗೂ ಸೇವೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಸರಕಾರಗಳು ಹೇಳುತ್ತವೆ. ಆದರೆ, ಪ್ರಸ್ತುತ ಯಾವುದೇ ಯೋಜನೆಯ ಸೌಲಭ್ಯ ಹಾಗೂ ಕಚೇರಿಗಳಿಗೆ ತೆರಳಿದರೆ ಮೊದಲು ಆಧಾರ್ ಕಾರ್ಡ್ ಕೇಳುತ್ತಾರೆ. ಆಧಾರ್ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಯದಂತಹ ಸ್ಥಿತಿಯಿದೆ. ಯಾವ್ಯಾವ ಸರಕಾರಿ ಸೇವೆಗಳಿಗೆ ಆಧಾರ್ ಕಡ್ಡಾಯ ಹಾಗೂ ಕಡ್ಡಾಯವಲ್ಲ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ, ಸಲಹೆ, ಸೂಚನೆಗಳನ್ನು ಸರಕಾರ ನೀಡಬೇಕು.
-ಇಮ್ತಿಯಾಝ್ ಖಾನ್, ಹಿರಿಯ ಕಾಂಗ್ರೆಸ್ ಮುಖಂಡ
ಕರ್ನಾಟಕ ಒನ್ ಸೇವಾ ಕೇಂದ್ರದಡಿ ಬರುವ ಶಿವಮೊಗ್ಗ ಒನ್ನಲ್ಲಿಯೂ ಆಧಾರ್ ನೋಂದಣಿ-ತಿದ್ದುಪಡಿ ಸೇವೆ ಕಲ್ಪಿಸಲಾಗುತ್ತಿದೆ. ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ನೋಂದಣಿ-ತಿದ್ದುಪಡಿಗೆ ಸಮಯ ನಿಗದಿ ಪಡಿಸಲಾಗುತ್ತಿದೆ. ಸಂಜೆ 4 ಗಂಟೆಯ ನಂತರ ಈ ಸೇವೆ ಕಲ್ಪಿಸುವುದಿಲ್ಲವೆಂದು ಕೇಂದ್ರದ ಸಿಬ್ಬಂದಿ ಹೇಳುತ್ತಾರೆ. ಜೊತೆಗೆ ಕೆಲ ಸಿಬ್ಬಂದಿ ಸಾರ್ವಜನಿಕರ ಜೊತೆ ದರ್ಪದಿಂದ ವರ್ತಿಸುತ್ತಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಶಿವಮೊಗ್ಗ ಒನ್ ಕೇಂದ್ರ ಕಾರ್ಯನಿರ್ವಹಿಸುವ ಅವಧಿಯಲ್ಲಿ ಆಧಾರ್ ಸೇವೆ ನೀಡುವಂತೆ ಸೂಚಿಸಬೇಕು.
-ಪುರಲೆ ಮಂಜುನಾಥ್, ಪ್ರಗತಿಪರ ಹೋರಾಟಗಾರಈಗಾಗಲೇ ಬ್ಯಾಂಕ್ಗಳು ಕಾರ್ಯಭಾರ ಒತ್ತಡದಿಂದ ಬಳಲುತ್ತಿವೆ. ಈ ಕಾರಣದಿಂದ ಬ್ಯಾಂಕ್ಗಳಲ್ಲಿನ ಆಧಾರ್ ಸೇವೆ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು. ಇದರಿಂದ ನಾಗರಿಕರಿಗೆ ಸುಗಮವಾಗಿ ಸೇವೆ ಲಭ್ಯವಾಗಲಿದೆ. ಜೊತೆಗೆ ಸಾವಿರಾರು ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕೂಡ ಲಭ್ಯವಾಗಲಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವರು, ಬ್ಯಾಂಕ್ ಆಡಳಿತ ಮಂಡಳಿಗಳು ಆದ್ಯ ಗಮನ ಹರಿಸಬೇಕು.
-ವಿನ್ಸೆಂಟ್ ರೊಡ್ರಿಗಸ್, ದಿಲ್ಲಿ ಭಾರತೀಯ ಕೃಷಿಕ ಸಮಾಜದ ಶಿವಮೊಗ್ಗ ಜಿಲ್ಲಾಧ್ಯಕ್ಷ
ದಿನ ಕಳೆದಂತೆ ಬ್ಯಾಂಕ್ಗಳ ಮೇಲೆ ಕಾರ್ಯಭಾರದ ಒತ್ತಡ ಹೆಚ್ಚಾಗುತ್ತಿದೆ. ಕರ್ತವ್ಯಕ್ಕೆ ಅನುಗುಣವಾಗಿ ಬ್ಯಾಂಕ್ಗಳಿಗೆ ಅಗತ್ಯ ಸೌಕರ್ಯ, ಮಾನವ ಸಂಪನ್ಮೂಲವನ್ನು ಕಲ್ಪಿಸಬೇಕು. ಪ್ರಸ್ತುತ ಬ್ಯಾಂಕ್ಗಳಲ್ಲಿ ಆಧಾರ್ ಸೇವೆಯಲ್ಲಿನ ನ್ಯೂನತೆಗೆ ಮಾನವ ಸಂಪನ್ಮೂಲದ ಕೊರತೆಯೇ ಮುಖ್ಯ ಕಾರಣವಾಗಿದೆ. ಈ ಕಾರಣದಿಂದ ಕೇಂದ್ರ ಸರಕಾರ ಹಾಗೂ ಆರ್ಬಿಐ ಸಂಸ್ಥೆ ಬ್ಯಾಂಕ್ಗಳ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿಯೂ ಅಗತ್ಯ ಗಮನ ಹರಿಸಬೇಕಾಗಿದೆ.
-ಕೆ.ಈಶ್ವರ್, ಯುವ ಮುಖಂಡ
ಬ್ಯಾಂಕ್ಗಳಲ್ಲಿ ಆಧಾರ್ ಸಂಬಂಧಿತ ಸೇವೆಗಳು ಲಭ್ಯವಾಗುತ್ತಿದ್ದುದರಿಂದ ನಾಗ ರಿಕರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಆದರೆ, ಕೆಲ ಬ್ಯಾಂಕ್ಗಳಲ್ಲಿ ಆಧಾರ್ ಸೇವೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಆಧಾರ್ ಸೇವೆ ನೀಡಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು
-ಎನ್.ಮೂರ್ತರ್, ಸ್ಥಳೀಯ ಮುಖಂಡ