ಬೆಂಗಳೂರಿನ ಟೆಕ್ಕಿಗಳಿಂದ ಮಹಿಳಾ ಆಯೋಗಕ್ಕೆ ಐದು ಸಾವಿರಕ್ಕೂ ಹೆಚ್ಚು ದೂರು ದಾಖಲು
ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.30: ಮಹಿಳಾ ಶೋಷಣೆಯ ವಿರುದ್ಧ ದೂರು ದಾಖಲಿಸುತ್ತಿರುವ ಜನರ ಪೈಕಿ ಬೆಂಗಳೂರಿನ ಸುಶಿಕ್ಷಿತ ಮಹಿಳಾ ಟೆಕ್ಕಿಗಳೇ ಹೆಚ್ಚು ಇರುವ ಸಂಗತಿ ರಾಜ್ಯ ಮಹಿಳಾ ಆಯೋಗದ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ.
ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ಪ್ರೇಮ ವಂಚನೆ, ರಕ್ಷಣೆ ಸೇರಿದಂತೆ ಎಲ್ಲ ಬಗೆಯ ಮಹಿಳಾ ಶೋಷಣೆಗಳ ವಿರುದ್ಧ ದೂರು ದಾಖಲಿಸುವಲ್ಲಿ ನಗರದ ಟೆಕ್ಕಿಗಳು ಸಾಕಷ್ಟು ಮುಂದಿದ್ದಾರೆ. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಕಳೆದ ಎರಡು ವರ್ಷಗಳಲ್ಲಿ ಐದು ಸಾವಿರಕ್ಕೂ ಅತಿ ಹೆಚ್ಚು ದೂರುಗಳು ಬಂದಿದ್ದು, ಇವುಗಳಲ್ಲಿ ಮಹಿಳಾ ಟೆಕ್ಕಿಗಳು ನೀಡಿರುವ ದೂರುಗಳ ಸಂಖ್ಯೆ ಶೇ.60 ರಷ್ಟಿದೆ ಎನ್ನಲಾಗಿದೆ.
ನಗರದ ಮೈಸೂರು ಬ್ಯಾಂಕ್ ಸರ್ಕಲ್ ಸಮೀಪವಿರುವ ಮಹಿಳಾ ಆಯೋಗದ ಕಚೇರಿಗೆ ದಿನ ನಿತ್ಯವೂ ಒಂದಿಲ್ಲೊಂದು ನೋವು ಹೊತ್ತು ಬರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೊಂದ ಮಹಿಳೆಯರು ಬರುತ್ತಾರಾದರೂ ಹೆಚ್ಚಿನ ಸಂಖ್ಯೆಯಲ್ಲಿ ದೂರು ಹೊತ್ತು ಬರುತ್ತಿರುವುದು ಸಿಲಿಕಾನ್ ಸಿಟಿ ಮಹಿಳೆಯರು. ಗಮನಾರ್ಹವೆಂದರೆ, ಹೆಚ್ಚಿನ ಸಂಖ್ಯೆಯ ಟೆಕ್ಕಿಗಳು ತರುತ್ತಿರುವುದು ಕೌಟುಂಬಿಕ ಸಮಸ್ಯೆಗಳ ದೂರು. ಇದೇ ದೂರನ್ನು ಪೊಲೀಸ್ ಠಾಣೆಯಲ್ಲಿ ನೀಡಬಹುದಾದರೂ ಅಲ್ಲಿ ಸಮಸ್ಯೆ ಹೆಚ್ಚೆಂದು ಹಾಗೂ ಪೊಲೀಸರು ದೂರು ನಿರ್ಲಕ್ಷಿಸುತ್ತಾರೆಂದು ಆಯೋಗಕ್ಕೆ ಬರುತ್ತಿದ್ದಾರೆ.
ಮಹಿಳಾ ಆಯೋಗಕ್ಕೆ ತರುವ ಎಲ್ಲ ದೂರುಗಳನ್ನು ಸ್ವೀಕರಿಸಲಾಗುತ್ತದೆಯಾದರೂ, ದಾಖಲಿಸಿಕೊಳ್ಳುವ ದೂರುಗಳ ಸಂಖ್ಯೆ ತೀರಾ ಕಡಿಮೆ ಇದೆ. ಬಹುತೇಕ ಟೆಕ್ಕಿಗಳು ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಬಗೆಹರಿಸಿಕೊಳ್ಳಬಹುದಾದಂತ ಸಣ್ಣಪುಟ್ಟ ವಿಚಾರಗಳಿಗೂ ಆಯೋಗದ ಮೆಟ್ಟಿಲೇರುತ್ತಿದ್ದಾರೆ. ಹೀಗಾಗಿ ಸಣ್ಣಪುಟ್ಟ ಸಮಸ್ಯೆಗಳಂತ ದೂರುಗಳನ್ನು ದಾಖಲಿಸಿಕೊಳ್ಳುವ ಬದಲಿಗೆ, ಸ್ಥಳದಲ್ಲೇ ಸಂಬಂಧಿತ ವ್ಯಕ್ತಿಗಳನ್ನು ಕರೆಸಿ ಕೌನ್ಸೆಲಿಂಗ್ ಮಾಡಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ.
ಹೀಗಿದ್ದೂ ಕಳೆದೆರಡು ವರ್ಷಗಳಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ಸಾವಿರಾರು ದೂರುಗಳು ಬಂದಿದ್ದು, ಅವುಗಳಲ್ಲಿ ಸುಮಾರು ಐದು ಸಾವಿರ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. 2016ರ ನವೆಂಬರ್ ನಿಂದ 2018ರ ಸೆಪ್ಟೆಂಬರ್ ವರೆಗೆ 4,800 ದೂರುಗಳನ್ನು ದಾಖಲಿಸಿಕೊಂಡಿರುವ ಆಯೋಗ 3,925 ಪ್ರಕರಣಗಳನ್ನು ಬಗೆಹರಿಸಿ ದೂರುದಾರರ ನೆಮ್ಮದಿಯ ಕೌಟುಂಬಿಕ ಜೀವನಕ್ಕೆ ನೆರವು ನೀಡಿದೆ.
ದೂರುಗಳಿಂದ ಹಳ್ಳಿ ಮಹಿಳೆಯರು ದೂರ: ಆಯೋಗಕ್ಕೆ ಹಳ್ಳಿಗಾಡಿನಿಂದ ಬಂದಿರುವ ದೂರುಗಳ ಸಂಖ್ಯೆ ತೀರಾ ಕಡಿಮೆ. ನಗರ ಪ್ರದೇಶದಲ್ಲಿನ ಮಹಿಳೆಯರ ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದರಿಂದ ತಮಗಾಗುವ ಅನ್ಯಾಯ ಅಥವಾ ಶೋಷಣೆ ವಿರುದ್ಧ ಸಿಡಿದು ನಿಲ್ಲುತ್ತಿದ್ದಾರೆ. ಇನ್ನುಳಿದಂತೆ ಹಳ್ಳಿಗಾಡಿನ ಮಹಿಳೆಯರಿಗೆ ಅದರಲ್ಲೂ ಅಶಿಕ್ಷಿತ ಸ್ತ್ರೀಯರಿಗೆ ಮಹಿಳಾ ಆಯೋಗದ ಕುರಿತು ಸೂಕ್ತ ಮಾಹಿತಿಯೇ ಇಲ್ಲವಾದ್ದರಿಂದ ದೂರುಗಳು ವಿರಳ. ಹೀಗಿದ್ದೂ ಕಾಸರಗೋಡಿನ ವಿವಾಹಿತ ಮಹಿಳೆಯೊಬ್ಬರು ತನ್ನ ಪತಿ ಲೈಂಕಿಗವಾಗಿ ಹಿಂಸೆ ನೀಡಿದ್ದರೆಂದು 2017ರ ಡಿಸೆಂಬರ್ ನಲ್ಲಿ ತನ್ನ ಪತಿಯ ವಿರುದ್ಧವೇ ಅತ್ಯಾಚಾರ ಪ್ರಕರಣ ದಾಖಲಿಸಿದ್ದುದು ಹೆಚ್ಚು ಗಮನ ಸೆಳೆದಿತ್ತು.
ಮೀಟೂ ಅಭಿಯಾನದಿಂದ ಹೆಚ್ಚಾದ ದೂರು: ಮೀಟೂ ಅಭಿಯಾನ ಆರಂಭದ ಬಳಿಕ ರಾಜ್ಯ ಮಹಿಳಾ ಆಯೋಗದಲ್ಲಿ ದಾಖಲಿಸುವ ದೂರುಗಳ ಸಂಖ್ಯೆ ಹೆಚ್ಚಾಗಿದ್ದು ಇದುವರೆಗೂ ಮೀಟೂ ಮಾದರಿಯ 150 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಶೃತಿ ಹರಿಹರನ್ ಹಾಗೂ ದುನಿಯಾ ವಿಜಯ್ ಪತ್ನಿ ಕೂಡ ಮಹಿಳಾ ಆಯೋಗದ ನೆರವು ಕೋರಿ ಮನವಿ ಸಲ್ಲಿಸಿದ್ದಾರೆ. ಅರೆ ನ್ಯಾಯಿಕ ಪ್ರಾಧಿಕಾರವಾಗಿರುವ ಮಹಿಳಾ ಆಯೋಗಕ್ಕೆ ಸಿವಿಲ್ ಕೋರ್ಟ್ ಗೆ ನೀಡುವಷ್ಟೇ ಅಧಿಕಾರ ವ್ಯಾಪ್ತಿ ನೀಡಲಾಗಿದೆ. ಹೀಗಾಗಿಯೇ ಸುಶಿಕ್ಷಿತ ಮಹಿಳೆಯರು ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಪೊಲೀಸರಿಗಿಂತ ಆಯೋಗಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ.
ಸಿಎಂ ವಿರುದ್ಧವೂ ಆಯೋಗಕ್ಕೆ ದೂರು: ಕಳೆದ ತಿಂಗಳು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧವೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಕಬ್ಬಿನ ಬಾಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತ ಮಹಿಳೆಯೊಬ್ಬರ ವಿರುದ್ಧ ಸಿಎಂ ಹಗುರವಾಗಿ ಮಾತನಾಡಿದರೆಂದು ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ದೂರು ನೀಡಲಾಗಿತ್ತು.
ಎರಡು ವರ್ಷಗಳಲ್ಲಿ ದಾಖಲಾಗಿರುವ ದೂರುಗಳು- ದೂರುಸಂಖ್ಯೆ
ರಕ್ಷಣೆ ಕೋರಿಕೆ 1113
ಕೌಟುಂಬಿಕ ದೌರ್ಜನ್ಯ 1045
ವರದಕ್ಷಿಣೆ ಕಿರುಕುಳ 185
ಉದ್ಯೋಗ ಸ್ಥಳದಲ್ಲಿ ಕಿರುಕುಳ 182
ಪೊಲೀಸರ ನಿರ್ಲಕ್ಷ್ಯ 82
ಪ್ರೇಮ ವೈಫಲ್ಯ 32
ಲೈಂಗಿಕ ಕಿರುಕುಳ 26
ವರದಕ್ಷಿಣೆ ಸಾವು 25
ಅತ್ಯಾಚಾರ 8