ಕುವೆಂಪು, ರಾಜ್‌ಕುಮಾರ್ ಬದುಕು ಶ್ರಮ ಸಂಸ್ಕೃತಿಗೆ ಮಾದರಿ: ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ
ಬೆಂಗಳೂರು, ಡಿ.30: ರಾಷ್ಟ್ರಕವಿ ಕುವೆಂಪು ಮತ್ತು ಡಾ.ರಾಜ್ ಕುಮಾರ್ ತಮ್ಮ ದುಡಿಮೆ ಹಾಗೂ ಶ್ರಮದಿಂದಲೆ ಅವಕಾಶಗಳನ್ನು ಗಿಟ್ಟಿಸಿಕೊಂಡು, ಕನ್ನಡ ನಾಡು-ನುಡಿಯನ್ನು ಬೆಳಗಿಸಿದವರು ಎಂದು ಹಿರಿಯ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಿಸಿದರು.
ರವಿವಾರ ಜನ ಪ್ರಕಾಶನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪರವರ ‘ಜನಪದ ನಾಯಕ ಡಾ.ರಾಜ್ ಕುಮಾರ್’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸ್ವಾತಂತ್ರ ಪೂರ್ವದ ಭಾರತದಲ್ಲಿ ವ್ಯಕ್ತಿಯೊಬ್ಬ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಬೇಕಾದರೆ, ಜಾತಿ, ಹಣ ಹಾಗೂ ರಾಜಕಾರಣದ ಬೆಂಬಲ ಇರಲೇಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಹಿಂದುಳಿದ ಸಮುದಾಯದಲ್ಲಿ ಹುಟ್ಟಿದ ಕುವೆಂಪು ಹಾಗೂ ಡಾ.ರಾಜ್‌ಕುಮಾರ್ ತಮ್ಮ ಶ್ರಮದ ಮೂಲಕ ಪ್ರತಿಭಾವಂತರಾದವರು. ಹೀಗಾಗಿ ಅವರಿಬ್ಬರು ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದಾರೆ ಎಂದು ಅವರು ಹೇಳಿದರು.
ಕನ್ನಡ ನಾಡಿನ ಬೆಳಕು: ಡಾ.ರಾಜ್‌ಕುಮಾರ್ ವಿನಯ ಹಾಗೂ ವಿವೇಕಕ್ಕೆ ಅರ್ಥ ಕೊಟ್ಟವರು. ಸಿನೆಮಾದಲ್ಲಿ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ವಿನಯದ ರೀತಿಯಲ್ಲಿ ತೋರ್ಪಡಿಸಿಕೊಳ್ಳಲು ಸುಲಭ. ಆದರೆ, ನಿಜ ಜೀವನದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ತಮ್ಮ ಇಡೀ ಬದುಕನ್ನು ವಿನಯ ಹಾಗೂ ವಿವೇಕವನ್ನು ಚಾಚೂತಪ್ಪದೆ ಪಾಲಿಸಿಕೊಂಡ ಡಾ.ರಾಜ್‌ಕುಮಾರ್, ಕನ್ನಡದ ಜನತೆ ಹೇಗೆ ಬದುಕಬೇಕೆಂದು ತೋರಿಸಿಕೊಟ್ಟ ನಾಡಿನ ಬೆಳಕು ಎಂದು ಅವರು ಬಣ್ಣಿಸಿದರು.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಭಾರತೀಯ ಚಿತ್ರರಂಗದಲ್ಲೆ ಡಾ.ರಾಜ್‌ಕುಮಾರ್ ಕುರಿತು ಅತಿ ಹೆಚ್ಚು ಪುಸ್ತಕಗಳು ಹೊರ ಬಂದಿವೆ. ಆದರೂ ಬರೆದಷ್ಟು ಮತ್ತೆ, ಮತ್ತೆ ಬರೆಸಿಕೊಳ್ಳುವಂತಹ ವ್ಯಕ್ತಿತ್ವವನ್ನು ಹೊಂದಿರುವ ಮಹಾನ್ ಪ್ರತಿಭೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇವತ್ತು ಧಾರ್ಮಿಕತೆ ಎನ್ನುವುದು ಶಾಸ್ತ್ರ ಹಾಗೂ ಶಸ್ತ್ರ ಎರಡೂ ಆಗಿರುವ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್, ತಮ್ಮ ಬದುಕಿನಲ್ಲಿ ಶಾಸ್ತ್ರಗಳನ್ನು ಮೀರಿದ ಆಧ್ಯಾತ್ಮವನ್ನು ರೂಡಿಸಿಕೊಂಡವರು. ಇವರ ಬದುಕು ಕನ್ನಡ ನಾಡಿನ ಪ್ರತಿಯೊಬ್ಬರಿಗೂ ಆದರ್ಶ ಪ್ರಾಯವಾದದ್ದೆಂದು ಅವರು ಹೇಳಿದರು.
ಭಾರತದಂತಹ ಜಾತಿ ವ್ಯವಸ್ಥೆಯಲ್ಲಿ ಹಿಂದುಳಿದ ಸಮುದಾಯದ ವ್ಯಕ್ತಿಗಳು ಸಾಧಕರಾಗುವುದು ಅಷ್ಟು ಸುಲಭವಲ್ಲ. ಅಡಿ ಅಡಿಗೂ ಅವಮಾನ, ಅಪಮಾನಗಳನ್ನು ಎದುರಿಸಿ, ಅದನ್ನು ಯಾರ ಬಳಿಯೂ ಹೇಳದೆ ತಮ್ಮ ಮನಸಿನಲ್ಲಿಯೆ ನುಗ್ಗಿಕೊಂಡು ದೊಡ್ಡ ಸಾಧಕರಾಗಿ ಬೆಳೆಯುವುದು ಸುಲಭದ ಮಾತಲ್ಲ. ಹೀಗಾಗಿ ಡಾ.ರಾಜ್‌ಕುಮಾರ್ ಅವರಂತೆ ತಳ ಸಮುದಾಯದಲ್ಲಿ ಹುಟ್ಟಿ ಅಸಮಾನ್ಯವಾಗಿ ಬೆಳೆದ ವ್ಯಕ್ತಿಗಳ ಬದುಕನ್ನು ದಾಖಲಿಸುವುದು ನಮ್ಮ ಕರ್ತವ್ಯವೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ನಟಿ ತಾರಾ ಅನುರಾಧ, ನಟ ರಾಘವೇಂದ್ರ ರಾಜ್‌ಕುಮಾರ್, ಜನಪ್ರಕಾಶ ಸಂಸ್ಥೆಯ ರಾಜಶೇಖರ ಮೂರ್ತಿ ಮತ್ತಿತರರಿದ್ದರು.
ಅಪ್ಪಾಜಿ(ಡಾ.ರಾಜ್‌ಕುಮಾರ್)ಯನ್ನು ನೀವು ರಾಜಕೀಯಕ್ಕೆ ಏಕೆ ಹೋಗಲಿಲ್ಲ ಎಂದು ಕೇಳಿದ್ದೆ. ಈ ಪ್ರಶ್ನೆ ಕೇಳಿದ ಹತ್ತು ವರ್ಷಗಳ ನಂತರ ಅವರು, ನಾನು ಯಾರೊ ಒಬ್ಬರಿಗೆ ಬಾಣ ಆಗುವುದಕ್ಕೆ ಇಷ್ಟ ಪಡಲಾರೆ. ಜನತೆ ಕರೆದಾಗ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದೆ. ಮುಂದೆಯು ಜನತೆ ಕರೆದಾಗ ಹೋಗುತ್ತೇನೆ. ಈಗ ನನ್ನ ಕೆಲಸ ಬಣ್ಣ ಅಚ್ಚುವುದು, ನಟನೆ ಮಾಡುವುದು ಅಷ್ಟೆ ಎಂದು ಉತ್ತರ ನೀಡಿದ್ದರು.
-ರಾಘವೇಂದ್ರ ರಾಜ್‌ಕುಮಾರ್, ನಟ