ಓ ಮೆಣಸೇ…
ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಯಾರೇ ಮಾಡಿದರೂ ಅದು ಮಾನವ ಸಹಜ ಪ್ರಕ್ರಿಯೆ
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಪ್ರಜಾಪ್ರಭುತ್ವಕ್ಕೂ ಸಹಜ ಅನ್ನಿಸಬೇಡವೇ?
---------------------
ಕಾಂಗ್ರೆಸ್ ಪಕ್ಷದಲ್ಲಿ ಗೆದ್ದವರೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳು
- ಡಿ.ಕೆ.ಶಿವಕುಮಾರ್, ಸಚಿವ
ಸೋತವರೆಲ್ಲ ಅಶಿಸ್ತಿನ ಸಿಪಾಯಿಗಳೆಂದು ಹೇಳುತ್ತೀರಾ?
---------------------
ಅಧಿಕಾರ ಎನ್ನುವುದು ಕೆಲವರಿಗೆ ಆಮ್ಲಜನಕವಿದ್ದಂತೆ
- ನರೇಂದ್ರಮೋದಿ, ಪ್ರಧಾನಿ
ನಿಮ್ಮ ಕೈಯಲ್ಲಿ ಅದು ಸೆಯನೈಡ್ ಆಗಿ ಬದಲಾಗಿದೆ.
---------------------
ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಯಾರೇ ಆದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಪಕ್ಷ ವಿರೋಧಿ ಚಟುವಟಿಕೆ ನಡೆಸದೇ ರಾಜಕಾರಣಿಯಾಗಿ ಬೆಳೆಯಲು ಸಾಧ್ಯವೇ?
---------------------
ಪ್ರಧಾನಿ ಮೋದಿಯ ಸುಳ್ಳು ಆಶ್ವಾಸನೆಗಳ ಬತ್ತಳಿಕೆ ಈಗ ಖಾಲಿಯಾಗಿದೆ
- ವೀರಪ್ಪಮೊಯ್ಲಿ, ಸಂಸದ
ನಿಮ್ಮಲ್ಲಿ ದಾಸ್ತಾನಿರುವ ಸುಳ್ಳುಗಳನ್ನು ಅವರಿಗೆ ಹಸ್ತಾಂತರಿಸಿ.
---------------------
ಕೆಲವೊಂದು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ನಾಲ್ಕುದಿನ ನನ್ನನ್ನು ಸುಮ್ಮನೆ ಬಿಟ್ಟು ಬಿಡಿ
- ರಮೇಶ್ ಜಾರಕಿಹೊಳಿ, ಶಾಸಕ
ನಾಲ್ಕು ದಿನಗಳ ಬಳಿಕ ನೀವು ಯಾರನ್ನು ಬಿಟ್ಟು ಬಿಡಬೇಕೆಂದಿದ್ದೀರಿ?
---------------------
ಇಂಗಿಷ್‌ನ್ನು ಮೈಲಿಗೆಯಾಗಿ ನೋಡದಿರಿ
- ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಸದ್ಯಕ್ಕೆ ಕನ್ನಡವನ್ನು ಮೈಲಿಗೆಯಾಗಿ ನೋಡಲು ಶುರು ಮಾಡಿದ್ದಾರೆ.
---------------------
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸದಿದ್ದರೆ ಎನ್‌ಡಿಎಯಲ್ಲಿ ಉಳಿಯುವ ಬಗ್ಗೆ ಯೋಚಿಸಬೇಕಾಗುತ್ತದೆ - ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ
ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಶಿವಸೇನೆ ಉಳಿಯುತ್ತದೆಯೋ ಎನ್ನುವುದು ದೊಡ್ಡ ಪ್ರಶ್ನೆ.
---------------------
ಹನುಮಾನ್ ಒಬ್ಬ ಕ್ರೀಡಾಪಟು
- ಚೇತನ್ ಚೌಹಾನ್, ಮಾಜಿ ಕ್ರಿಕೆಟ್ ಆಟಗಾರ
ರಾಮಾಯಣದಲ್ಲಿ ಕ್ರಿಕೆಟ್ ಕೂಡ ಇತ್ತು ಎನ್ನುವುದು ಸಾಬೀತಾಯಿತು ಬಿಡಿ.
---------------------
ನಮಗೆ ಸಮ್ಮಿಶ್ರ ಸರಕಾರ ಉರುಳಿಸುವ ಅರ್ಜೆಂಟ್ ಇಲ್ಲ
- ಶ್ರೀರಾಮುಲು, ಶಾಸಕ
ಮೊದಲು ಸಂವಿಧಾನವನ್ನು ಉರುಳಿಸಿ ಬಳಿಕ ಸರಕಾರವನ್ನು ಉರುಳಿಸುವ ಯೋಜನೆಯಿರಬೇಕು.
---------------------
ನಮಗೆ ಹಿಂದಿನ ಯಡಿಯೂರಪ್ಪ ಬೇಕು
- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅಂದರೆ ಜೈಲಿಗೆ ಹೋದ ಯಡಿಯೂರಪ್ಪ!
---------------------
ಸಚಿವ ಸಂಪುಟದಲ್ಲಿ ನಾನು ಜಸ್ಟ್ ಪಾಸೋ, ಪಾಸೋ ಗೊತ್ತಿಲ್ಲ - ಜಯಮಾಲಾ, ಸಚಿವೆ
ಸರಕಾರವೇ ಫೇಲಾಗಿ ಕೂತಿದೆ ಎನ್ನುವುದು ಮತದಾರರ ಅಂಬೋಣ.
---------------------
ಕಾಂಗ್ರೆಸ್‌ನಲ್ಲಿ ಬಿರುಕು ಸೃಷ್ಟಿಸಲು ಯಾರಿಂದಲೂ ಸಾಧ್ಯವಿಲ್ಲ
- ಮಲ್ಲಿಕಾರ್ಜುನ ಖರ್ಗೆ, ಸಂಸದ
ಅದನ್ನು ಕಾಂಗ್ರೆಸ್ ನಾಯಕರೇ ಸೃಷ್ಟಿಸುತ್ತಾರೆ ಚಿಂತೆ ಬಿಡಿ.
---------------------
ಹೊಸವರ್ಷದ ಪಂಚಾಂಗ ನೋಡಿ ಜೆಡಿಎಸ್ ಪಾಲಿನ ಸಚಿವ ಸ್ಥಾನ ಭರ್ತಿ ಮಾಡಲಾಗುವುದು
- ಎಚ್.ಡಿ.ರೇವಣ್ಣ, ಸಚಿವ
ಪಂಚಾಂಗ ನೋಡುವುದಕ್ಕೊಂದು ಖಾತೆಯಿರಲಿ.
---------------------
ನದಿ ಜೋಡಣೆ ಆಗಿದ್ದರೆ ಭಾರತದಲ್ಲಿ ಬಡತನವೇ ಇರುತ್ತಿರಲಿಲ್ಲ
- ಎಸ್.ಎಲ್.ಭೆೈರಪ್ಪ, ಸಾಹಿತಿ
ಸಾಹಿತಿಗಳು ಹೃದಯ ಜೋಡಿಸುವ ಮಾತುಗಳಿಗೆ ಆದ್ಯತೆ ನೀಡಲಿ.
---------------------
ಆರ್‌ಬಿಐ ಗವರ್ನರ್ ಶಕ್ತಿಕಾಂತದಾಸ್ ಭ್ರಷ್ಟ
- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
ಗವರ್ನರ್ ಆಗುವುದಕ್ಕೆ ಅದೇ ಅರ್ಹತೆಯಂತೆ.
---------------------
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ
- ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ವಾನರರಂತೂ ಉತ್ತರ ಪ್ರದೇಶದಲ್ಲಿ ವಿಜೃಂಭಿಸುತ್ತಿದ್ದಾರೆ.
---------------------
ನಾನು ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇರದ ವ್ಯಕ್ತಿ
- ಬಸವರಾಜ ಹೊರಟ್ಟಿ, ವಿ.ಪ.ಸದಸ್ಯ
ಕಪ್ಪು ಚುಕ್ಕೆ ರಾಜಕೀಯ ಜೀವನಕ್ಕೆ ಅಲಂಕಾರ ಎನ್ನುವುದು ನಿಮಗೆ ಗೊತ್ತಿಲ್ಲವೇ?
---------------------
ದೇಶದ ಮುಂದಿನ ಪ್ರಧಾನಿ ಯಾರೆಂದು ಹೇಳುವುದು ಕಷ್ಟ
- ಬಾಬಾ ರಾಮ್‌ದೇವ್, ಯೋಗಗುರು
ತಾವೇ ಆದರೂ ಅಚ್ಚರಿಯೇನಿಲ್ಲ.
---------------------
ಸಮಾಜ ಏನಾಗಬೇಕು ಎನ್ನುವ ಸ್ಪಷ್ಟ ನಿರ್ಧಾರ ನಮಗಿರಬೇಕು
- ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ವಿಪಕ್ಷ್ಷ ನಾಯಕ
ಹೌದು, ನಿಮ್ಮ ನಿರ್ಧಾರದ ಫಲವಾಗಿಯೇ ಸಮಾಜದಲ್ಲಿ ಹಿಂಸೆ ಹೆಚ್ಚಿರುವುದು.
---------------------
ಮಾಜಿ ಸಿಎಂ ಸಿದ್ದರಾಮಯ್ಯ ಅತೃಪ್ತ ಆತ್ಮಗಳ ನಾಯಕ
- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ನೀವು ಆತ್ಮವೇ ಇಲ್ಲದವರ ನಾಯಕರೇ?
---------------------
ನಾನು ಬ್ರಾಹ್ಮಣರೊಂದಿಗೂ ಊಟ ಮಾಡುವುದಿಲ್ಲ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ತಾವು ಊಟವೇ ಮಾಡುವುದಿಲ್ಲ ಎಂದು ಘೋಷಿಸಿ ಈ ಸಹಪಂಕ್ತಿ ಭೋಜನದಿಂದ ಪಾರಾಗಿ.
---------------------
ಬಿ.ಎಸ್.ಯಡಿಯೂರಪ್ಪರಿಗೆ ರಾಜಕೀಯ ಅನುಭವ ಕಡಿಮೆ ಇದೆ
- ಉಮೇಶ್‌ಕತ್ತಿ, ಬಿಜೆಪಿ ಮುಖಂಡ
ಅನುಭವ ಜಾಸ್ತಿ ಇರುವ ಆ ನಾಯಕನ ಹೆಸರನ್ನು ಮುಂದಿಡಬಾರದೇ?