varthabharthi


ಕಲೆ - ಸಾಹಿತ್ಯ

ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಿರೋಧಿಸುವ ಮುನ್ನ...

ವಾರ್ತಾ ಭಾರತಿ : 31 Dec, 2018
ಮಂಜುನಾಥ ಎಂ. ಆನೇಕಲ್, ಬೆಂಗಳೂರು

ಶಿಕ್ಷಣದ ಖಾಸಗೀಕರಣ ಮತ್ತು ಇಂಗ್ಲಿಷ್ ಕಲಿತರಷ್ಟೇ ಉದ್ಯೋಗ ಎನ್ನುವ ಹೊಸ ವ್ಯವಹಾರಿ-ಸೂತ್ರದ ಸಮೀಕರಣದಿಂದಾಗಿ ಇಲ್ಲಿನ ಮೇಲ್ಜಾತಿ ಮತ್ತು ಮೇಲ್ ವರ್ಗಗಳವರೇ ಜಾಗತೀಕರಣದಿಂದ ದೊರೆಯುತ್ತಿರುವ ಲಾಭದ ದೊಡ್ಡ ಫಲಾನುಭವಿಗಳಾಗಿದ್ದಾರೆ.

ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಅನುಷ್ಠಾನಗೊಳಿಸುವ ಉತ್ಸಾಹವನ್ನು ಸರಕಾರ ತೋರಿಸಲು ಶುರುಮಾಡಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಯಾವ ಭಾಷೆಯ ಮಾಧ್ಯಮ ಕಲಿಕೆ ಬೇಕೆಂಬ ಚರ್ಚೆ ತೀರ ಹಳೆಯ ವಿಷಯವಾದರು ಆಗಾಗ ಸಂಕೀರ್ಣ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತಿದೆ.
ಸರಕಾರ, ಕಳೆದ ವಾರದಲ್ಲಿ ಸರಕಾರಿ ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಪ್ರಾಯೋಗಿಕವಾಗಿ ಒಂದು ಸಾವಿರ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎನ್ನುತ್ತಿದ್ದಂತೆ, ಕನ್ನಡದ ಪ್ರಮುಖ ಸಾಹಿತಿಗಳಾದ ಚಂಪಾ, ಸಿದ್ದಲಿಂಗಯ್ಯ, ಚಂದ್ರಶೇಖರ ಕಂಬಾರ, ಜನಪ್ರಿಯ ಲೇಖಕ ಎಸ್. ಎಲ್ ಭೆೈರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನುಬಳಿಗಾರ್‌ರಂತಹ ಗಣ್ಯ ಸಾಹಿತಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಗೋಕಾಕ್ ಮಾದರಿಯ ಚಳವಳಿ ಮಾಡುವ ಮಾತಾಡಿರುವುದು ಮಾಧ್ಯಮಗಳಲ್ಲಿ ವರದಿಯಾಯಿತು. ಭಿನ್ನ ಸೈದ್ಧಾಂತಿಕ ಮತ್ತು ವ್ಯವಹಾರದ ಸಾಹಿತಿಗಳೆಲ್ಲಾ ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುವಲ್ಲಿ ಸಮಾನ ಮನಸ್ಕರಾಗಿರುವುದು ಕ್ಲೀಷಾತ್ಮಕ ಆಶ್ಚರ್ಯವನ್ನೂ ಜೊತೆಗೆ ಅನೇಕ ಪ್ರಶ್ನೆಗಳನ್ನೂ ಸಮೂಹ ಮಾಧ್ಯಮಗಳಲ್ಲಿ, ಹುಟ್ಟುಹಾಕಿ ಪರ ವಿರೋಧದ ಚರ್ಚೆಗಳು ನಡೆದಿವೆ.
ಭಾಷಾ ಮಾಧ್ಯಮ ಯಾವುದಾಗಬೇಕೆಂಬ ಚರ್ಚೆ ಭಾರತದಲ್ಲಿ ಬ್ರಿಟಿಷ್ ಶಿಕ್ಷಣ ಪದ್ಧತಿ ಆರಂಭಿಸಿದಾಗಿನಿಂದಲೂ ಎಲ್ಲ ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಸಮಸ್ಯೆ. ಸ್ವಾತಂತ್ರ್ಯಾನಂತರ, ಭಾಷಾವಾರು ಪ್ರಾಂತಗಳಾಗಿ ರಾಜ್ಯಗಳು ಉದಯಿಸಿದ ನಂತರವೂ ಶಿಕ್ಷಣದಲ್ಲಿ ಭಾಷಾ ಮಾಧ್ಯಮ ತಮ್ಮ ಮಾತೃಭಾಷೆಗಳಲ್ಲೇ ನಡೆಯಬೇಕೆಂಬ ಒತ್ತಾಯಗಳ ಹೊರತಾಗಿಯೂ ಇಂಗ್ಲಿಷ್ ಭಾಷಾ ಮಾಧ್ಯಮ ಎಲ್ಲಾ ಕಡೆಯೂ ವ್ಯಾಪಿಸಿಕೊಂಡಿದೆ. ಭಾಷಾಕೇಂದ್ರಿತ ರಾಜ್ಯಗಳಾದ ನಂತರವೂ ಸರಕಾರಗಳು ಆಡಳಿತ ನಡೆಸಲು ಇಂಗ್ಲಿಷನ್ನು ನೆಚ್ಚಿಕೊಂಡಷ್ಟು ತಮ್ಮ ಮಾತೃಭಾಷೆಗಳನ್ನು ಪ್ರೀತಿಸಿದ್ದು ಕಡಿಮೆ. ಬ್ರಿಟಿಷರು ಬಿಟ್ಟುಹೋಗಿದ್ದ ಇಂಗ್ಲಿಷ್ ಕೇಂದ್ರಿತ ಆಡಳಿತ ಮಾದರಿಗಳನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಟ್ಟು ಸ್ವಾಯತ್ತವಾಗುವತ್ತ ಇಲ್ಲಿನ ಸರಕಾರಗಳು ತೀವ್ರವಾಗಿ ಯೋಚಿಸದೆ, ಇದ್ದ ಸವೆದ ಹಾದಿಯಲ್ಲೇ ಮುಂದಕ್ಕೋದರು, ಜೊತೆಯಲ್ಲಿ ಮಾತೃಭಾಷಾ ಶಿಕ್ಷಣದ ಪ್ರಾಮಾಣಿಕ ಅನುಷ್ಠಾನ ಮಾಡದೆ ಹೋದರು. ಜಾಗತೀಕರಣದ ನಂತರವಂತೂ ಪ್ರಾದೇಶಿಕ ಅಸ್ಮಿತೆಗಳು ಭಾಷೆಯನ್ನು ಒಳಗೊಂಡು ಎಲ್ಲ ರೀತಿಯಲ್ಲೂ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ.
ಬ್ರಿಟಿಷರ ಆಡಳಿದಲ್ಲಿ ಶುರುವಾದ ಬ್ರಿಟಿಷ್ ಪ್ರಭುತ್ವ, ಕೈಗಾರಿಕಾ ಕೇಂದ್ರಿತ ಉತ್ಪಾದನಾ ಬೆಳವಣಿಗೆಗೆ ಅನುಕೂಲ ಮಾಡುವ ಹೊಸ ಶಿಕ್ಷಣ ಪದ್ಧತಿಯ ಮೊದಲ ಫಲಾನುಭವಿಗಳಾದವರು ಇಲ್ಲಿನ ಮೇಲ್ಜಾತಿ ಮತ್ತು ಮೇಲ್ವರ್ಗದ ಜನ. ಫಲಾನುಭವಿಗಳಾದವರು ಮತ್ತು ಫಲಾನುಭವಿಗಳಷ್ಟೇ ಆದರು ಎನ್ನುವಂತೆ ಸ್ವಾತಂತ್ರ್ಯಾ ನಂತರದಿಂದ ಇಲ್ಲಿಯವರೆಗೂ ಈ ವರ್ಗಗಳು ನಿರಾತಂಕವಾಗಿ ಆಳುವ ನಿಯಂತ್ರಕ ಶಕ್ತಿಗಳೂ ಆಗಿವೆ. ಇದೇ ಸಂದರ್ಭದಲ್ಲಿಯೇ ಭಾರತದ ಸಾಮಾಜಿಕ ಶ್ರೇಣೀಕರಣದಲ್ಲಿ ತಳಸಮುದಾಯಗಳು, ಮಹಿಳೆಯರು ಇನ್ನು ಈಗಲೂ ಮೊದಲ ತಲೆಮಾರಿನವರಾಗಿ ವಿದ್ಯಾಭ್ಯಾಸಕ್ಕೆ ತೆರದುಕೊಳ್ಳುತ್ತಲೇ ಇದ್ದಾರೆ. ಈ ಸನ್ನಿವೇಶಗಳಲ್ಲಿಯೇ ಶಿಕ್ಷಣ ಎನ್ನುವುದು ಆಳುವ ಪ್ರಭುತ್ವಗಳ ನೀತಿನಿರೂಪಣೆಗಳ ಪರಿಣಾಮವಾಗಿ ಖಾಸಗೀಕರಣದತ್ತ ಮುಖಮಾಡಿದೆ. ಇಲ್ಲಿನ ಸರಕಾರಗಳು ನೀಡುವ ಮೀಸಲಾತಿಗಳ ಹೊರತಾಗಿಯೂ ಶಿಕ್ಷಣ ಪಡೆಯುತ್ತಿರುವ ತಳಸಮುದಾಯಗಳ ಪಾಲ್ಗೊಳ್ಳ್ಳುವಿಕೆ ಶಿಕ್ಷಣದಲ್ಲಿ ಈಗಲೂ ಕಡಿಮೆ ಇದೆ. ಶಿಕ್ಷಣ ಪಡೆದವರೂ ಕೂಡ ಮುಖ್ಯವಾಹಿನಿಯಲ್ಲಿ ಎಷ್ಟು ಪ್ರಮಾಣದಲ್ಲಿದ್ದಾರೆ? ಶಿಕ್ಷಣದ ಮೂಲಕ ದುರ್ಬಲರನ್ನು ಸಬಲರನ್ನಾಗಿಸುವುದೇ ಪ್ರಜಾಪ್ರಭುತ್ವದಲ್ಲಿ ಆಳುವ ಪ್ರಭುತ್ವಗಳ ಮುಖ್ಯ ಕಾಳಜಿಯೇ? ಹಾಗಿದ್ದರೆ ಇದು ಸಾಧ್ಯವಾಗಿದೆಯೇ? ಹಣವಂತರೆಲ್ಲಾ ಸರಕಾರ ನೀಡುವ ಶಿಕ್ಷಣದಿಂದ ದೂರ ಸರಿದು ದಶಕಗಳೇ ಕಳೆದಿವೆ. ಸರಕಾರಿ ಶಾಲೆಗಳಲ್ಲಿ ಓದುವವರು ಬಹುತೇಕ ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಹಿಂದುಳಿದ ಸಮುದಾಯಗಳವರೇ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುತ್ತ, ‘‘ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದೀನಿ. ಹಾಗಾದ್ರೆ ನಾನೇನು ಪೆದ್ದನಾ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ರೆ ಡಾಕ್ಟರ್, ಇಂಜಿನಿಯರ್ ಆಗ್ತಿನಿ ಅನ್ನೋದು ಭ್ರಮೆ. ಇಂಗ್ಲಿಷನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡ್ಬೇಕು. ಆದರೆ, ನಮ್ಮ ನೆಲ, ಜಲ ಪ್ರೀತಿಸಬೇಕು’’ ಎಂದಿದ್ದಾರೆ. ಭಾಷೆಯನ್ನು ಕಲಿಯುವುದಕ್ಕೂ ಜ್ಞಾನಕ್ಕೂ ಸಂಬಂಧವಿಲ್ಲ ಎನ್ನುವುದು ಒಪ್ಪಿಕೊಳ್ಳಬಹುದಾದರೂ, ಸಿದ್ದರಾಮಯ್ಯನವರ ಮಾತುಗಳಲ್ಲಿ ವಾಸ್ತವದ ಬಿಕ್ಕಟ್ಟುಗಳನ್ನು ರಮ್ಯ-ಭಾವುಕ ನೆಲೆಯಲ್ಲಿ ನೋಡಿ ಮರೆಯುವ ದೃಷ್ಟಿಯಿದೆ. ಇಂಗ್ಲಿಷ್ ಓದಿದರಷ್ಟೆ, ಇಂಗ್ಲಿಷ್‌ನಲ್ಲಿ ಓದಿದರಷ್ಟೇ ಉದ್ಯೋಗವಕಾಶಗಳೆನ್ನುವ ಕಾಲದಲ್ಲಿ, ಇಂಗ್ಲಿಷ್ ಎನ್ನುವುದು ಜ್ಞಾನ ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ನಿರ್ಧರಿಸುವ ಒಂದು ಮಾಪನವೂ ಆಗಿರುವುದು ಸಾಮಾಜಿಕ ವಾಸ್ತವ. ಇಂತಹ ಸಂದರ್ಭದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿಯಷ್ಟೇ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಓದಿಕೊಂಡು ಬರುವ ಹುಡುಗ ಹುಡುಗಿಯರು ಅನುಭವಿಸುವ ಕೀಳರಿಮೆ ಮತ್ತು ತಮ್ಮ ಮುಂದಿನ ಜೀವನದ ಅಭದ್ರತೆಗಳು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೇಡವೇ ಬೇಡ ಎಂದು ವಿರೋಧಿಸುವವರಿಗೆ ಅರ್ಥವಾಗುವುದು ಕಷ್ಟ.


ಚಂದ್ರಶೇಖರ ಪಾಟೀಲರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಕೊಡಿಸಿದ್ದಾರೆ. ಆ ಕಾರಣಕ್ಕೆ ಇಂಗ್ಲಿಷ್ ಭಾಷಾ ಮಾಧ್ಯಮವನ್ನು ವಿರೋಧಿಸುವ ಹಕ್ಕು ಅವರಿಗಿದೆ ಎನ್ನುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ಇಂದು ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುವುದು ಯಾರೋ ಒಬ್ಬರ ನೈತಿಕ ಹಕ್ಕಿನ ಪ್ರಶ್ನೆಯಲ್ಲ. ಒಟ್ಟಾರೆ ಶಿಕ್ಷಣದ ಗುಣಮಟ್ಟವೇ ಕುಸಿದಿರುವ ಈ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಉಳಿಸುವ, ಸರಕಾರಿ ಶಾಲೆಗಳನ್ನೂ ಉಳಿಸುವ ಎರಡು ಬಗೆಯ ಕಾಳಜಿಗಳು ಚಂಪಾರಂತಹವರಿಗೆ ಪ್ರಾಮಾಣಿಕವೇ ಆಗಿದ್ದರೂ, ಸಮಸ್ಯಾತ್ಮಾಕ. ದಿನನಿತ್ಯ ಕೂಲಿ ಮಾಡಿ ಹೊಟ್ಟೆಗೆ ಬಟ್ಟೆಗಾದರೇ ಸಾಕೆಂದು ಬದುಕುವವರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರುವುದಕ್ಕೂ, ಮಾಸ್ತರರೊಬ್ಬರ ಕನ್ನಡ ಭಾಷಾ ಪ್ರೇಮದ ಬದ್ಧತೆಗಾಗಿ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆಲ್ಲಾ ಕನ್ನಡ ಮಾಧ್ಯಮವನ್ನು ಪ್ರಾಥಮಿಕ ಶಿಕ್ಷಣದಲ್ಲಿಯೇ ಕೊಡಿಸಿ, ನಂತರ ಇಂಗ್ಲಿಷ್ ಮಾಧ್ಯಮದಲ್ಲಿ ಉನ್ನತ ಶಿಕ್ಷಣ ಕೊಡಿಸಿ ಅವರನ್ನು ಮುನ್ನೆಲೆಗೆ ತರುವುದಕ್ಕೂ ಖಂಡಿತ ಯಾವ ರೀತಿಯಲ್ಲೂ ಸಮಾನ ಹೋಲಿಕೆಯಿಲ್ಲ. ತಮ್ಮ ಅನುಭವಗಳ ಕಾರಣಕ್ಕಾಗಿಯೇ ಬೇರೆಯವರೂ ಹಾಗಾಗಬಹುದು ಎನ್ನುವ ಯಾವ ವಾದಗಳಾದರೂ ಹಿನ್ನೆಲೆ ಮುನ್ನೆಲೆಗಳನ್ನು ಅರಿತು ಆಡುವುದಾಗಬೇಕು. ಇಲ್ಲವಾದಲ್ಲಿ ವಾಸ್ತವಗಳನ್ನು ಎದುರಾಗದ ಭ್ರಮೆಗಳಾಗುತ್ತವೆ. ಸರಕಾರಿ ಶಾಲೆಗಳಲ್ಲಿ ಓದಲು ಬರವವರು ತೀವ್ರ ಬಡತನವಿರುವ ಮತ್ತು ಸಾಮಾಜಿಕವಾಗಿಯೂ ಹಿಂದುಳಿದ ಸಮುದಾಯಗಳ ಮೊದಲು ಮತ್ತು ಎರಡನೇ ತಲೆಮಾರಿನ ಮಕ್ಕಳು. ಇದರಲ್ಲಿ ಉನ್ನತ ಶಿಕ್ಷಣದವರೆಗೂ ತಲುಪುವವರು ತೀರ ಕಡಿಮೆಯೇ. ಒಂದು ವೇಳೆ ವಿಶ್ವವಿದ್ಯಾನಿಲಯಗಳನ್ನು ತಲುಪುತ್ತಾರೆಂದುಕೊಂಡರೂ ದೊಡ್ಡ ಪ್ರಮಾಣದಲ್ಲಿ ಕಲಾ ವಿಭಾಗದ ಯಾವುದೋ ಕೋರ್ಸ್‌ಗಳನ್ನು ಸೇರಿಕೊಂಡು ಅಲ್ಲಿಗೇ ಮುಗಿಸುತ್ತಾರೆ. ಪ್ರಾಥಮಿಕ ಹಂತದಿಂದಲೂ ಗುಣಮಟ್ಟದ ಶಿಕ್ಷಣದ ಕೊರತೆ, ಮನೆಗಳಲ್ಲಿ ಸರಿಯಾಗಿ ಸಿಗದ ಪ್ರೋತ್ಸಾಹಗಳ ಮಧ್ಯೆಯೇ ಓದುವವರಲ್ಲಿ ಎಷ್ಟು ಪ್ರಮಾಣದ ವಿದ್ಯಾರ್ಥಿಗಳು ಇಂಗ್ಲಿಷ್ ಅಭಿವೃದ್ಧಿಯ ಮಾದರಿಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಉಳಿಯಬಹುದು. ಸರಕಾರಿ ಶಾಲೆಗಳೂ ಉಳಿಯಬೇಕು, ಮಾತೃಭಾಷಾ ಮಾಧ್ಯಮವೂ ಉಳಿಯಬೇಕು ಎನ್ನುವುದು ಎಲ್ಲ ವಿಚಾರವಂತರ ಮತ್ತು ಶಿಕ್ಷಣ ತಜ್ಞರ ನಿಲುವು. ಆದಾಗ್ಯೂ ಸರಕಾರಿ ಶಾಲೆಗಳು ಉಳಿಯಬೇಕೆಂಬ ವಿಚಾರ ಮತ್ತು ಶಾಲೆಗಳಲ್ಲಿ ಕನ್ನಡ ಮಾಧ್ಯಮ ಇವೆರಡೂ ದುಸಾಧ್ಯವಾದ ಸ್ಥಿತಿಗೆ ಬಂದು ತಲುಪಿವೆ. ಇದಕ್ಕೆ ಕಾರಣಗಳಾದರೂ ಏನು? ಅನೇಕ ಸಾಹಿತಿಗಳು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಅನುಷ್ಠಾನಕ್ಕೆ ದೊಡ್ಡ ವಿರೋಧ ವ್ಯಕ್ತಪಡಿಸಿದ್ದಾರೆ. ಇವರ ವಿರೋಧದಲ್ಲಿಯೂ ಇಂಗ್ಲಿಷ್ ಅನುಷ್ಠಾನಕ್ಕೆ ಇರುವ ವಿರೋಧದ ಆಚೆಗೆ ಮತ್ಯಾವುದೇ ಪ್ರಶ್ನೆಗಳು ಕಾಣಿಸಿಲ್ಲ. ಸತತ ಮುಚ್ಚುತ್ತಿರುವ ಸರಕಾರಿ ಶಾಲೆಗಳು, ಹೆಚ್ಚುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಬಡವರನ್ನೂ, ಕನ್ನಡವನ್ನೂ ಸಮಾನವಾಗಿ ಹೊರಗಟ್ಟುತ್ತಿವೆ. ಇಂಗ್ಲಿಷ್ ಮಾಧ್ಯಮವೊಂದೇ ತಮ್ಮ ಮಕ್ಕಳ ಭವಿಷ್ಯದ ದಾರಿ ಎಂದು ನಂಬುವಂತೆ ಮಾಡಿರುವ ಆಳುವ ವ್ಯವಸ್ಥೆಗಳ ಯೋಜನೆಗಳು ಮುಂದಿರುವಾಗ, ಸರಿಯಾದ ಮೂಲಭೂತ ಸೌಕರ್ಯಗಳೂ ಇಲ್ಲದ, ಗುಣಮಟ್ಟದ ಶಿಕ್ಷಣ ಬೋಧನೆಯೂ ಇಲ್ಲದ ಸರಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ, ಕನ್ನಡ ಮಾಧ್ಯಮದಲ್ಲಿಯಷ್ಟೇ ಓದಿ, ಜಾಗತೀಕರಣದ ಸವಾಲುಗಳಿಗೆ ಎದೆಯೊಡ್ಡುವ, ಪ್ರವಾಹದ ವಿರುದ್ಧ ಈಜುವ ಆತ್ಮವಿಶ್ವಾಸವನ್ನು ಇಲ್ಲಿನ ತಳಸಮುದಾಯಗಳಿಗೆ ಇವರು ಯಾವ ಮಾಯೆಯಿಂದ ತೋರಿಸಿಯಾರು?
ಶಿಕ್ಷಣದ ಖಾಸಗೀಕರಣ ಮತ್ತು ಇಂಗ್ಲಿಷ್ ಕಲಿತರಷ್ಟೇ ಉದ್ಯೋಗ ಎನ್ನುವ ಹೊಸ ವ್ಯವಹಾರಿ-ಸೂತ್ರದ ಸಮೀಕರಣದಿಂದಾಗಿ ಇಲ್ಲಿನ ಮೇಲ್ಜಾತಿ ಮತ್ತು ಮೇಲ್ ವರ್ಗಗಳವರೇ ಜಾಗತೀಕರಣದಿಂದ ದೊರೆಯುತ್ತಿರುವ ಲಾಭದ ದೊಡ್ಡ ಫಲಾನುಭವಿಗಳಾಗಿದ್ದಾರೆ. ಕೃಷಿಕೇಂದ್ರಿತ ಆರ್ಥಿಕತೆಯಿಂದ ಕೈಗಾರಿಕಾ ಉತ್ಪಾದನಾ ಮತ್ತು ಸೇವಾ ಕೇಂದ್ರಿತ ವ್ಯವಸ್ಥೆಗಳಾಗಿ ಬದಲಾಗಿರುವ ಭಾರತದ ಬಂಡವಾಳಶಾಹಿ ಉತ್ಪಾದನಾ ಸಂಬಂಧಗಳಲ್ಲಿ ಯಾರು ಇಂಗ್ಲಿಷ್ ಮತ್ತು ಈ ಮೊದಲೇ ಯಾರು ಮೇಲ್‌ಸ್ತರದ ಸಾಮಾಜಿಕ ಸ್ಥಾನಮಾನಗಳನ್ನು ಪಡೆದಿದ್ದರೋ ಅಂತಹವರಷ್ಟೇ ಈ ಹೊಸ ಉತ್ಪಾದನಾ ಸಂಬಂಧಗಳ ಮಾನವ ಸಂಪನ್ಮೂಲಗಳಾಗಿ ದೊಡ್ಡಮಟ್ಟದ ಆರ್ಥಿಕ ಮತ್ತು ಸಾಮಾಜಿಕ ಲಾಭಗಳನ್ನು ಪಡೆದವರು.
ಚಂಪಾ, ಎಸ್.ಎಲ್. ಭೈರಪ್ಪ, ಚಂದ್ರಶೇಖರ ಕಂಬಾರ, ಮನುಬಳಿಗಾರ್‌ರಂತಹವರು ಪ್ರಶ್ನಿಸಬೇಕಿರುವುದು ಭಾರತದಲ್ಲಿ ಏಕ ಕಾಲಕ್ಕೆ ಜಾಗತೀಕರಣದ ದುರಂತ ಪರಿಣಾಮಗಳನ್ನು ಮತ್ತು ಮಾತೃಭಾಷೆಗಳನ್ನು ಉಳಿಸಬೇಕೆನ್ನುವ ಅನಿವಾರ್ಯ ಹೊಣೆಗಾರಿಕೆಗಳನ್ನು ತಳ ಸಮುದಾಯಗಳ ಹೆಗಲಮೇಲೆ ಹೊರುವಂತೆ ಮಾಡಿರುವ ಆಳುವ ವ್ಯವಸ್ಥೆಗಳ ಹುನ್ನಾರಗಳನ್ನು. ಮಾತೃಭಾಷಾ ಮಾಧ್ಯಮವೂ ಉಳಿಯಬೇಕು, ಸರಕಾರಿ ಶಾಲೆಗಳೂ ಉಳಿಯಬೇಕು ಎನ್ನುವವರು ಮೊದಲು ಭಾಷಾ ಪ್ರೇಮದ ಭಾವುಕ ನೆಲೆಯಿಂದ ಆಚೆನಿಂತು ಯೋಚಿಸಬೇಕಿದೆ. ಕನ್ನಡ ಮಾಧ್ಯಮದಲ್ಲಿ ಓದಿಕೊಂಡು ಹೋದವರಿಗೆ ಉದ್ಯೋಗಗಳಾದರೂ ಎಲ್ಲಿವೆ? (ಇಂಗ್ಲಿಷ್ ಮಾಧ್ಯಮದಲ್ಲಿ ಓದಿಕೊಂಡವರಿಗೂ ಈ ಪ್ರಶ್ನೆ ಎದುರಾಗುತ್ತಿದೆ) ಆಳುವ ಪ್ರಭುತ್ವಗಳು ರೂಪಿಸುತ್ತಿರುವ ಅಭಿವೃದ್ಧಿಯ ಮಾದರಿಗಳು, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇಂಗ್ಲಿಷ್ ಮಾಧ್ಯಮವೇ ಅನಿವಾರ್ಯ ಎನ್ನುವಂತೆ ಮಾಡಿರುವಾಗ, ಭಾಷೆಗಳನ್ನು ಉಳಿಸಲು, ಸರಕಾರಿ ಶಾಲೆಗಳನ್ನು ಒಂದೇ ತರ್ಕದಡಿ ತಂದು ಉಳಿಸಲು ಸಾಧ್ಯವೇ? ಕನ್ನಡ ಮಾಧ್ಯಮದ ಕಲಿಕೆ ಮತ್ತು ಸರಕಾರಿ ಶಾಲೆಗಳನ್ನು ಉಳಿಸಬೇಕೆನ್ನುವ ಚರ್ಚೆ ಎರಡು ಬೇರೆ ಬೇರೆಯಾಗಿಯೇ ಗ್ರಹಿಸಬೇಕೆನ್ನುವುದು ನನ್ನ ನಿಲುವು. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಸರಕಾರಿ ಶಾಲೆಗಳಿಗಷ್ಟೇ ಮೀಸಲಿಟ್ಟರೆ, ಸಾಮಾಜಿಕ ಅನ್ಯಾಯದ ಮುಂದುವರಿಕೆಯಾಗುತ್ತದೆ. ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದಾದರೆ ಇಂಗ್ಲಿಷ್ ಮಾಧ್ಯಮದ ಕಲಿಕೆ ಅನಿವಾರ್ಯ. ಸರಕಾರಿ ಶಾಲೆ ಮತ್ತು ಮಾತೃಭಾಷಾ ಮಾಧ್ಯಮದ ಕಲಿಕೆ ಇವೆರಡೂ ಏಕಕಾಲಕ್ಕೆ ಸಾಧಿತವಾಗಬೇಕಾದರೆ, ಬದಲಾಗಬೇಕಿರುವುದು ಭಾಷಾ ಮಾಧ್ಯಮಗಳಲ್ಲ, ಸರಕಾರಗಳ ಅಭಿವೃದ್ಧಿಯ ಮಾದರಿಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)