ಧರ್ಮದ ಜನದ್ವೇಷಿ ದುರ್ವ್ಯಾಖ್ಯಾನ ತಡೆಯೋಣ
‘ಇತರ ಧರ್ಮೀಯರ ಹಬ್ಬಗಳಿಗೆ ಮುಸ್ಲಿಮರು ಶುಭ ಹಾರೈಸಬಾರದು’ ಎಂಬ ವೈರಲ್ ವಿಡಿಯೋ
ಸಾಂದರ್ಭಿಕ ಚಿತ್ರ
ಕಳೆದ ಕೆಲವು ದಿನಗಳಿಂದ, ಭಾರತದ ಯಾವುದೋ ಭಾಗದಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿ ಉರ್ದು ಭಾಷೆಯಲ್ಲಿ ಒಂದು ಖಾಸಗಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹಬ್ಬಗಳ ಕುರಿತು ಹೇಳಿರುವ ಕೆಲವು ಮಾತುಗಳ ಸಂಕ್ಷಿಪ್ತ ವೀಡಿಯೊ ಕ್ಲಿಪ್ಪೊಂದು ವ್ಯಾಪಕ ಚಲಾವಣೆಯಲ್ಲಿದೆ. ಈತ ಒಂದು ಪ್ರಶ್ನೆಗೆ ಉತ್ತರವಾಗಿ ಅನ್ಯಧರ್ಮೀಯರ ಹಬ್ಬಗಳ ಸಂದರ್ಭದಲ್ಲಿ ಮುಸಲ್ಮಾನರು ಅವರಿಗೆ ಹಬ್ಬದ ಶುಭಾಶಯಗಳನ್ನು ಸಲ್ಲಿಸಬಾರದು, ಅದು ಇಸ್ಲಾಮ್ ಧರ್ಮದಲ್ಲಿ ನಿಷಿದ್ಧವಾಗಿದೆ, ಒಂದು ವೇಳೆ ಅವರು ನಿಮಗೆ ಶುಭ ಹಾರೈಸಿದರೆ 'ನಿಮಗೂ' ಎಂದಷ್ಟೇ ಹೇಳಬೇಕು ಎಂದು ಹೇಳಿದ್ದಾನೆ. ತನ್ನ ಮಾತಿಗೆ ಅವನು ಯಾವುದೇ ಆಧಾರ ಅಥವಾ ಪ್ರಮಾಣವನ್ನು ನೀಡಿಲ್ಲ.
ಈ ವ್ಯಕ್ತಿ ಗಡ್ಡ ಧಾರಿಯಾಗಿದ್ದು ತಲೆಯಲ್ಲಿ ಟೊಪ್ಪಿ ಕೂಡಾ ಧರಿಸಿರುವುದರಿಂದ, ಈತ ಯಾರೋ ಮುಸ್ಲಿಂ ವಿದ್ವಾಂಸನಿರಬಹುದು ಅಥವಾ ಮುಸ್ಲಿಂ ಸಮಾಜದ ಪ್ರತಿನಿಧಿಯಾಗಿರಬಹುದು ಎಂದು ಕೆಲವರಿಗೆ ಅಪಗ್ರಹಿಯಾಗಿದೆ. ನಿಜವಾಗಿ ಒಬ್ಬ ವ್ಯಕ್ತಿಯ ಟೊಪ್ಪಿ - ಮುಂಡಾಸು ಎಷ್ಟು ದೊಡ್ಡದಿದ್ದರೂ, ಅವನ ಗಡ್ಡ ಎಷ್ಟು ಉದ್ದವಿದ್ದರೂ, ಅವನು ಎಷ್ಟು ಚೆನ್ನಾಗಿ ಉರ್ದು ಭಾಷೆ ಮಾತನಾಡಿದರೂ ಈ ಬಗೆಯ ಹುಚ್ಚು ಹುಚ್ಚಾದ ಮಾತುಗಳನ್ನು ಆಡುವವನು ಒಬ್ಬ ಹೊಣೆಗಾರ ವಿದ್ವಾಂಸನಾಗಿರುವ ಸಾಧ್ಯತೆ ಖಂಡಿತ ಇಲ್ಲ. ಇಂಥವರನ್ನು ವಿದ್ವಾಂಸರೆನ್ನುವುದು ವಿದ್ಯೆಗೆ ಮಾಡುವ ಅಪಚಾರವಾಗಿದೆ. ಇನ್ನು ಇಂಥವರನ್ನು ಮುಸ್ಲಿಂ ಸಮಾಜದ ನಾಯಕರೆಂದು ಪರಿಗಣಿಸುವುದಂತೂ ಮುಸ್ಲಿಂ ಸಮಾಜಕ್ಕೆ ಮಾಡುವ ಘೋರ ಅನ್ಯಾಯವಾಗಿದೆ.
ಎಲ್ಲ ನಗರಗಳಲ್ಲಿ ಹುಚ್ಚಾಸ್ಪತ್ರೆ ಗಳಿರುತ್ತವೆ. ಅದರ ಅರ್ಥ ಅಂತಹ ನಗರಗಳೆಲ್ಲಾ ಹುಚ್ಚರ ನಗರಗಳೆಂದಲ್ಲ. ಹಾಗೆಯೇ ಎಲ್ಲ ಸಮುದಾಯಗಲ್ಲಿ ವಿವಿಧ ಬಗೆಯ ಅಸ್ವಾಸ್ಥ್ಯ ಗಳಿಂದ ನರಳುತ್ತಿರುವ ಕೆಲವು ಮಂದಿ ಇರುತ್ತಾರೆ. ಕೇವಲ ಆ ಕಾರಣಕ್ಕಾಗಿ ಅಂತಹ ಎಲ್ಲ ಸಮಾಜಗಳನ್ನು ಅಥವಾ ಸಮಾಜದ ಎಲ್ಲರನ್ನು ಅಸ್ವಸ್ಥರೆಂದು ಪರಿಗಣಿಸುವುದು ಸರಿಯಲ್ಲ. ಆದರೆ ಅಸ್ವಸ್ಥರ ಮೇಲೆ ಸದಾ ಕಣ್ಣಿಟ್ಟಿರುವುದು, ಯಾರಾದರೂ ಅಸ್ವಸ್ಥರಾದರೆ ಅವರಿಗೆ ಕೂಡಲೇ ಸೂಕ್ತ ಚಿಕಿತ್ಸೆ ಕೊಡಿಸುವ ಏರ್ಪಾಡು ಮಾಡಬೇಕಾದುದು, ಅಸ್ವಸ್ಥರು ಇತರರಿಗೆ ಹಾನಿ ಮಾಡಂತೆ ಮತ್ತು ತಮ್ಮ ಅಸ್ವಾಸ್ಥ್ಯವನ್ನು ಇತರರಿಗೆ ವರ್ಗಾಯಿಸದಂತೆ ನೋಡಿಕೊಳ್ಳಬೇಕಾದುದು ಎಲ್ಲ ಸಮಾಜಗಳ ಎಲ್ಲ ಸ್ವಸ್ಥ ನಾಗರಿಕರ ಸಾಮೂಹಿಕ ಕರ್ತವ್ಯವಾಗಿದೆ. ಇದು ಜನರ ಸಾಮಾಜಿಕ, ಧಾರ್ಮಿಕ ಹಾಗೂ ನಾಗರಿಕ ಕರ್ತವ್ಯವೂ ಹೌದು. ಸಮಾಜವು ಸಕಾಲದಲ್ಲಿ ತನ್ನ ಕರ್ತವ್ಯ ನಿಭಾಯಿಸದಿದ್ದರೆ ಕ್ರಮೇಣ ಅಸ್ವಸ್ಥರೇ ಸಮಾಜವನ್ನು ನಡೆಸಲಾರಂಭಿಸಬಹುದು. ಮಾತ್ರವಲ್ಲ ಈ ಅಸ್ವಸ್ಥರು ಒಂದುಗೂಡಿ ಸಮಾಜದ ಎಲ್ಲ ಸ್ವಸ್ಥರನ್ನು ಹಿಡಿದು, ಹೆಡೆಮುರಿ ಕಟ್ಟಿ ಹುಚ್ಚಾಸ್ಪತ್ರೆಗೆ ಸೇರಿಸಬಹುದು. ಪ್ರಸ್ತುತ ಭಾಷಣಗಾರನನ್ನು ಮತ್ತು ಅವನ ಮಾತುಗಳನ್ನೂ ಈ ಹಿನ್ನೆಲೆಯಲ್ಲೇ ನೋಡುವುದೊಳ್ಳೆಯದು.
ಇಸ್ಲಾಮ್ ಧರ್ಮ ನೇರ ನಿಷ್ಠುರ ನಡೆ ನುಡಿಯನ್ನು ಕಲಿಸುವ ಧರ್ಮ. ಸತ್ಯ, ನ್ಯಾಯಗಳ ವಿಷಯದಲ್ಲಿ ರಾಜಿಯಾಗಲಿ ಪಕ್ಷಪಾತವಾಗಲಿ ಸಲ್ಲದು ಎನ್ನುವ ಧರ್ಮ. ಎಲ್ಲ ಸನ್ನಿವೇಶದಲ್ಲೂ ಭಯ, ಆಮಿಷಗಳಿಗೆ ಬಾಗದೆ ನಿರ್ಭಯವಾಗಿ ಸತ್ಯವನ್ನೇ ಪ್ರತಿಪಾದಿಸಬೇಕು, ಯಾವ ಸನ್ನಿವೇಶದಲ್ಲೂ ನ್ಯಾಯದ ರೇಖೆಯಿಂದ ಕಿಂಚಿತ್ತೂ ಕದಲಬಾರದು ಎಂದು ಎಚ್ಚರಿಸುವ ಧರ್ಮ. ಆದರೆ ನೀವು ನಂಬುವ ಸತ್ಯವನ್ನು ಇನ್ನೊಬ್ಬರ ಮೇಲೆ ಹೇರಬೇಕೆಂದು ಅದು ಆದೇಶಿಸುವುದಿಲ್ಲ, ಹೇರುವ ಅನುಮತಿಯನ್ನೂ ಅದು ಕೊಡುವುದಿಲ್ಲ. ವಿಗ್ರಹಾರಾಧನೆಯನ್ನು ವಿರೋಧಿಸುವ ಇಸ್ಲಾಮ್ ಧರ್ಮ ಇನ್ನೊಬ್ಬರು ಪೂಜಿಸುವ ವಿಗ್ರಹಕ್ಕೆ ಅಪಚಾರ ಮಾಡುವುದನ್ನು ಸಮ್ಮತಿಸುವುದಿಲ್ಲ. "ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ" ಎಂಬುದು ಪ್ರತಿಯೊಬ್ಬ ಮುಸಲ್ಮಾನ ಕುರ್ ಆನ್ ನಿಂದ ಕಲಿಯುವ ವಿಶ್ವ ಮಾನ್ಯ ಧೋರಣೆಯಾಗಿದೆ. (109: 6).
ಇಂದು ಜಗತ್ತಿನ ಹೆಚ್ಚಿನೆಲ್ಲಾ ಕಡೆ ಮುಸ್ಲಿಮರು ಮತ್ತು ಇತರ ಹಲವು ಧರ್ಮ, ಸಿದ್ಧಾಂತಗಳ ಜನರು ಜೊತೆಯಾಗಿ ಬಾಳುತ್ತಾರೆ. ಈ ರೀತಿ ಮಿಶ್ರ ಸಮಾಜಗಳಲ್ಲಿ ಬದುಕುವುದು ಮುಸ್ಲಿಮರ ಪಾಲಿಗೆ ತೀರಾ ಹೊಸ ಅನುಭವವೇನೂ ಅಲ್ಲ. ಎಲ್ಲ ಕಾಲಗಳಲ್ಲೂ ಜಗತ್ತಿನ ಹೆಚ್ಚಿನೆಲ್ಲ ಭಾಗಗಳಲ್ಲೂ ಅವರು ಈ ರೀತಿ ವಿವಿಧ ಮತ ಧರ್ಮಗಳ ಜನರ ಜೊತೆ ಬದುಕುತ್ತಾ ಬಂದಿದ್ದಾರೆ. ವಿಭಿನ್ನ ನಂಬಿಕೆ, ವಿಶ್ವಾಸ ಮತ್ತು ಆಚರಣೆಗಳ ಜನರು ಜೊತೆಗೂಡಿ ಬಾಳುವಾಗ ಆ ಬಾಳು ಎಲ್ಲರ ಪಾಲಿಗೆ ಸುಖ - ಶಾಂತಿದಾಯಕವಾಗಿರಬೇಕಿದ್ದರೆ ಸಹಬಾಳ್ವೆಯ ಕೆಲವು ನಿಯಮಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಕಣ್ತೆರೆದು ನೋಡಿದರೆ ಅಂತಹ ನಿಯಮಗಳು ಮುಸ್ಲಿಮರಿಗೆ ಸ್ವತಃ ಅವರ ಧರ್ಮದಲ್ಲೇ ಧಾರಾಳವಾಗಿ ಸಿಗುತ್ತವೆ. ಇನ್ನು ಕಣ್ಣು ಮುಚ್ಚಿಕೊಂಡಿರಲು ತೀರ್ಮಾನಿಸಿದವರಿಗೆ ಅತ್ಯುಜ್ವಲ ಬೆಳಕಿನಲ್ಲೂ ಕರಾಳತೆ ಬಿಟ್ಟು ಬೇರೇನೂ ಕಾಣಿಸುವುದಿಲ್ಲ.
ಈ ನಿಟ್ಟಿನಲ್ಲಿ ಮೊದಲನೆಯದಾಗಿ, ಇಸ್ಲಾಮ್ ಧರ್ಮದ ಪ್ರಕಾರ, ಒಬ್ಬ ವ್ಯಕ್ತಿಯ ಧರ್ಮ ಅಥವಾ ನಂಬಿಕೆ ನಮ್ಮದಕ್ಕಿಂತ ಭಿನ್ನ ಅಥವಾ ಅನ್ಯವಾದ ಮಾತ್ರಕ್ಕೆ ಆ ವ್ಯಕ್ತಿ ಭಿನ್ನ ಅಥವಾ ಅನ್ಯನಾಗಿ ಬಿಡುವುದಿಲ್ಲ. ಮುಸ್ಲಿಮರ ಮಧ್ಯೆ ಸಾಮುದಾಯಿಕ ಬಂಧುತ್ವ ಘೋಷಿಸುವ ಇಸ್ಲಾಮ್ ಧರ್ಮ ಅದಕ್ಕಿಂತ ಮುಖ್ಯವಾಗಿ ಎಲ್ಲ ಮಾನವರ ಮಧ್ಯೆ ಮಾನವೀಯ ಬಂಧುತ್ವವನ್ನು ಘೋಷಿಸುತ್ತದೆ. ಮಾನವರೆಲ್ಲ ಮೂಲತಃ ಒಬ್ಬ ದಂಪತಿಯ ಮೂಲಕ ಜನಿಸಿದ ಒಂದು ಕುಟುಂಬವೆಂದು ಒಪ್ಪಿದ ಮೇಲೆ ಯಾರನ್ನೇ ಆಗಲಿ ಅನ್ಯರೆಂದು ಪರಿಗಣಿಸುವುದಕ್ಕೆ ಆಸ್ಪದವೇ ಎಲ್ಲಿದೆ?
ಎರಡನೆಯದಾಗಿ, ಮುಸ್ಲಿಮರಲ್ಲಿ 'ಮಾನವರೆಲ್ಲ ಒಂದು ಕುಟುಂಬ' ಎಂಬುದು ಯಾವುದಾದರೂ ರಾಜಕೀಯ ಅನಿವಾರ್ಯತೆ ಅಥವಾ ಸಾಮಾಜಿಕ ನಿರ್ಬಂಧದ ಪರಿಣಾಮವಾಗಿ ಮೂಡಿ ಬಂದ ಘೋಷಣೆಯಲ್ಲ. ಅದು ಅವರ ಧಾರ್ಮಿಕ ನಂಬಿಕೆಯ ಬಹಳ ಪ್ರಮುಖ ಹಾಗೂ ಅವಿಭಾಜ್ಯ ಭಾಗವಾಗಿದೆ. ಮುಸ್ಲಿಮರು ನೆಚ್ಚಿರುವ ಧರ್ಮವು ಮಾನವೀಯ ಬಂಧುತ್ವಕ್ಕೆ ತಾತ್ವಿಕ ಮಾನ್ಯತೆ ನೀಡಿರುವುದು ಮಾತ್ರವಲ್ಲ, ಅದನ್ನು ತನ್ನ ಅನುಯಾಯಿಗಳ ಖಾಸಗಿ ಹಾಗೂ ಸಾಮೂಹಿಕ ಬದುಕಿನ ತಳಹದಿಯಾಗಿಸಿದೆ. ವ್ಯಕ್ತಿಗಳು, ಒಂದು ಹಂತದಲ್ಲಿ ತಮ್ಮ ಬಳಿಯೇ ಗುಲಾಮರಾಗಿದ್ದವರನ್ನು "ಯಾ ಸಯ್ಯದೀ" (ಓ ನಮ್ಮ ನಾಯಕರೇ) ಎಂದು ಕರೆಯುವಂತೆ ಮಾಡಿದ ಧರ್ಮ ಇದು.
ಪ್ರವಾದಿವರ್ಯರ ಕಾಲದಲ್ಲಿ ಇಸ್ಲಾಮ್ ಧರ್ಮ ಸ್ವೀಕರಿಸಿದ, ಅವರ ಎಷ್ಟೋ ಅನುಯಾಯಿಗಳ ತೀರಾ ನಿಕಟ ಬಂಧುಗಳು ಮುಸ್ಲಿಮರಾಗಿರಲಿಲ್ಲ. ಆದರೆ ಅವರು ಮುಸ್ಲಿಮರಲ್ಲದ ಕಾರಣ ಅವರನ್ನು ಬಹಿಷ್ಕರಿಸಬೇಕೆಂದು ಪ್ರವಾದಿ (ಸ) ಕಲಿಸಲಿಲ್ಲ. ಮಾತ್ರವಲ್ಲ, ಅವರ ಜೊತೆ ಅತ್ಯಂತ ಸೌಜನ್ಯದೊಂದಿಗೆ ವರ್ತಿಸಬೇಕೆಂದು, ಅವರು ನಿಮಗೆ ಅನ್ಯಾಯ ಮಾಡಿದರೂ ನೀವು ಅವರಿಗೆ ಅನ್ಯಾಯ ಮಾಡಬಾರದೆಂದು, ಬಂಧುವಾಗಿ ಅವರ ಬಗೆಗಿನ ನಿಮ್ಮ ಕರ್ತವ್ಯಗಳಲ್ಲಿ ಚ್ಯುತಿ ಬರದಂತೆ ನೋಡಿಕೊಳ್ಳಿರೆಂದು ಕಲಿಸಿದರು. ಮಕ್ಕಳು ಮುಸ್ಲಿಮರಾಗಿದ್ದು ಹೆತ್ತವರು ಮುಸ್ಲಿಮರಲ್ಲವಾದರೆ ಆಗಲೂ ಹೆತ್ತವರಿಗೆ ಸಲ್ಲಬೇಕಾದ ಗೌರವ ಮತ್ತು ಸೇವೆ ಯಥಾವತ್ತಾಗಿ ಸಲ್ಲುತ್ತಲೇ ಇರಬೇಕೆಂದು ಉಪದೇಶಿಸಿದರು. ಸ್ವತಃ ಪ್ರವಾದಿಯ ಚಿಕ್ಕಪ್ಪ ಅಬೂ ತಾಲಿಬ್ ಪ್ರವಾದಿ (ಸ) ಪರಿಚಯಿಸಿದ ಧರ್ಮವನ್ನು ಒಪ್ಪಲಿಲ್ಲ. ಆದರೆ ಇದರಿಂದ ಅವರ ನಡುವಣ ಬಾಂಧವ್ಯಕ್ಕೆ ಯಾವ ಕುತ್ತೂ ಬರಲಿಲ್ಲ. ಅವರ ನಡುವೆ ಅಪಾರ ಪ್ರೀತಿ ಇತ್ತು. ಅಬೂ ತಾಲಿಬ್ ತಮ್ಮ ಕೊನೆಯುಸಿರಿನ ತನಕವೂ ಪ್ರವಾದಿಯ ರಕ್ಷಣೆಗೆ ನಿಂತರು. ಅಬೂ ತಾಲಿಬ್ ನಿಧನರಾಗಿ ಎಷ್ಟೋ ವರ್ಷಗಳ ಬಳಿಕವೂ ಅವರನ್ನು ಪ್ರವಾದಿ (ಸ) ಸ್ಮರಿಸುತ್ತಿದ್ದರು, ಬಹಳ ಆದರದೊಂದಿಗೆ ಅವರ ಕುರಿತಾದ ಘಟನೆಗಳನ್ನು ಪ್ರಸ್ತಾಪಿಸುತ್ತಿದ್ದರು, ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದರು.
ಪ್ರವಾದಿ (ಸ) ಹೇಳಿದರು:
"..... ಕೌಟುಂಬಿಕ ಬಾಂಧವ್ಯವನ್ನು ಕಡಿದುಕೊಳ್ಳಬೇಡಿ, ನಿಮ್ಮಿಂದ ದೂರಹೋದವರ ಜೊತೆಗೂ ನೀವು ಸಂಬಂಧ ಉಳಿಸಿಕೊಳ್ಳಿರಿ ಮತ್ತು ಅವರ ಜೊತೆ ಬಾಂಧವ್ಯ ಪಾಲಿಸಿರಿ, ನಿಮಗೆ ಅನ್ಯಾಯ ಮಾಡಿದವರನ್ನು ಕ್ಷಮಿಸಿರಿ...... "
ಮಾನವೀಯ ಸಂಬಂಧಗಳ ಕುರಿತಂತೆ ಕುರ್ ಆನ್ ನ ಕೆಲವು ಉಪದೇಶಗಳನ್ನು ಗಮನಿಸಿ :
"ಜನರ ಜೊತೆ ಸೌಜನ್ಯದ ಮಾತುಗಳನ್ನು ಆಡಿರಿ" (2: 83)
"ಅಲ್ಲಾಹನು ನಿಮಗೆ ನ್ಯಾಯ ಪಾಲಿಸಬೇಕೆಂದು ಮತ್ತು ಸೌಜನ್ಯ ತೋರಬೇಕೆಂದು ಆದೇಶಿಸುತ್ತಾನೆ." (16: 90).
"ಯಾರಾದರೂ ನಿಮ್ಮನ್ನು ಹರಸುವ ಮಾತುಗಳನ್ನು ಹೇಳಿದರೆ (ನಿಮಗೆ ಸಲಾಮ್ ಹೇಳಿದರೆ ) ನೀವು ಅದಕ್ಕಿಂತ ಉತ್ತಮ ಮಾತುಗಳಲ್ಲಿ (ಅವರನ್ನು) ಹರಸಿರಿ, ಅಥವಾ ಕನಿಷ್ಠ ಪಕ್ಷ ಅಷ್ಟೇ ಮಾತುಗಳನ್ನು ಮರಳಿ ಹೇಳಿರಿ.... ..... " (4: 86)
"ಧರ್ಮದ ವಿಷಯದಲ್ಲಿ ನಿಮ್ಮ ಜೊತೆ ಯುದ್ಧ ಮಾಡಿಲ್ಲದ ಮತ್ತು ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಿಲ್ಲದ ಜನರೊಡನೆ ನೀವು ಸೌಜನ್ಯ ತೋರುವುದನ್ನು ಮತ್ತು ಅವರ ಜೊತೆ ನ್ಯಾಯವಾಗಿ ವ್ಯವಹರಿಸುವುದನ್ನು ಅಲ್ಲಾಹನು ತಡೆಯುವುದಿಲ್ಲ. ನ್ಯಾಯ ಪಾಲಿಸುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ. ((60:8)
ಒಬ್ಬ ಮುಸಲ್ಮಾನನ ಹೆತ್ತವರು ಬಹುದೇವಾರಾಧಕರಾಗಿದ್ದು, ಏಕದೇವಾರಾಧನೆಯನ್ನು ಬಿಟ್ಟು ಬಹುದೇವಾರಾಧನೆ ಮಾಡುವಂತೆ ಅವರು ಆತನನ್ನು ಆಗ್ರಹಿಸುತ್ತಿದ್ದರೆ, ಅವರ ಕುರಿತು ಕುರ್ ಆನ್ ಹೀಗೆನ್ನುತ್ತದೆ; "ಒಂದು ವೇಳೆ ನಿನಗೆ (ದೇವರೆಂದು) ತಿಳಿದಿಲ್ಲದವರನ್ನು ನನ್ನಜೊತೆ (ದೇವರಾಗಿ) ಪಾಲುಗೊಳಿಸಲು ಅವರು (ಹೆತ್ತವರು) ನಿನ್ನನ್ನು ಒತ್ತಾಯಿಸಿದರೆ ಅವರಿಬ್ಬರನ್ನೂ ಅನುಸರಿಸಬೇಡ. ಆದರೂ ಈ ಲೋಕದಲ್ಲಿ ಅವರ ಜೊತೆ ಅತ್ಯುತ್ತಮವಾಗಿ ವರ್ತಿಸು ...... " (31:15)
ಅವಕಾಶವಿದ್ದರೆ, ಕುರ್ ಆನ್ ಮತ್ತು ಪ್ರವಾದಿ ವಚನಗಳಿಂದ ಈ ಬಗೆಯ ನೂರಾರು ಉಪದೇಶಗಳನ್ನು ಉದ್ಧರಿಸಬಹುದು. ಆದರೆ ಇಲ್ಲಿ ಅದರ ಅಗತ್ಯವಿಲ್ಲ. ಏಕೆಂದರೆ ಸಮಸ್ಯೆ ಇರುವುದು ಅಸ್ವಸ್ಥ ಮನಸ್ಸುಗಳಲ್ಲೇ ಹೊರತು ಧರ್ಮದ ಉಪದೇಶಗಳಲ್ಲಿ ಅಲ್ಲ. ಮನಸ್ಸು ಅಸ್ವಸ್ಥವಾಗಿದ್ದರೆ ಅದು ನೇರವಾದುದನ್ನೂ ವಕ್ರವಾಗಿ ಕಾಣುತ್ತದೆ. ಸರಳವಾದುದನ್ನು ಸಂಕೀರ್ಣಗೊಳಿಸುತ್ತದೆ.
ವಿಡಿಯೋದಲ್ಲಿ ತೋರಿಸಲಾಗಿರುವ ಭಾಷಣಗಾರನ ಸಮಸ್ಯೆಯೂ ಅದುವೇ. ಮುಸ್ಲಿಮರು, ಅನ್ಯ ಧರ್ಮೀಯರ ಹಬ್ಬಗಳ ಸಂದರ್ಭದಲ್ಲಿ ಆವರಿಗೆ ಶುಭಾಶಯ ಸಲ್ಲಿಸಬಾರದು ಮತ್ತು ಒಂದುವೇಳೆ ಅವರು ನಿಮಗೆ ಶುಭ ಕೋರಿದರೂ ಕೇವಲ "ನಿಮಗೂ" ಎಂದು ಮಾತ್ರ ಹೇಳಿ ಸುಮ್ಮನಾಗಬೇಕು ಎಂದು ಆತ ಹೇಳಿರುವುದು ನಿಜವಾಗಿ ಒಂದು ಐತಿಹಾಸಿಕ ಪ್ರಸಂಗದ ತೀರಾ ವಿಕೃತ ಹಾಗೂ ವಿನಾಶಕಾರಿ ದುರ್ವ್ಯಾಖ್ಯಾನವಾಗಿದೆ. ಮೂಲ ಪ್ರಸಂಗ ಹೀಗಿದೆ:
ಪ್ರವಾದಿ (ಸ) ಮದೀನಾದಲ್ಲಿದ್ದಾಗ ಅಲ್ಲಿನ ಹಲವು ಸಮುದಾಯಗಳ ಪೈಕಿ ಯಹೂದಿ ಸಮುದಾಯದ ಕೆಲವು ಕಿಡಿಗೇಡಿ ಮಂದಿ, ಪ್ರವಾದಿ ಮತ್ತವರ ಅನುಯಾಯಿಗಳ ವಿರುದ್ಧ ತುಂಬಾ ಪೂರ್ವಗ್ರಹ ಪೀಡಿತರಾಗಿದ್ದರು ಮತ್ತು ಹಲವು ಬಗೆಯಲ್ಲಿ ಅವರಿಗೆ ಕಿರುಕುಳ ನೀಡುತ್ತಿದ್ದರು. ಮುಸ್ಲಿಮರಲ್ಲಿ, ಯಾರಾದರೂ ಎದುರಾದರೆ "ಅಸ್ಸಲಾಮು ಅಲೈಕುಮ್" (ನಿಮಗೆ ಶಾಂತಿ ಸಿಗಲಿ) ಎಂದು ಹಾರೈಸುವ ಮತ್ತು ಯಾರಾದರೂ ತಮಗೆ "ಅಸ್ಸಲಾಮು ಅಲೈಕುಮ್" ಎಂದು ಹೇಳಿದರೆ, "ವ ಅಲೈಕುಮುಸ್ಸಲಾಮ್' (ನಿಮಗೂ ಶಾಂತಿ ಸಿಗಲಿ) ಎಂದು ಪ್ರತಿಯಾಗಿ ಹಾರೈಸುವ ಶಿಷ್ಟಾಚಾರವಿತ್ತು. ಪ್ರವಾದಿ ಕಲಿಸಿದ ಈ ಶಿಷ್ಟಾಚಾರ ಜನಪ್ರಿಯವಾದಾಗ ಪ್ರಸ್ತುತ ಕಿಡಿಗೇಡಿಗಳು ಅದನ್ನೂ ತಮ್ಮ ಕುಚೇಷ್ಟೆಯ ವಸ್ತುವಾಗಿ ಬಳಸಿಕೊಂಡರು. ಮುಸ್ಲಿಮರು ತಮಗೆ ಸಿಕ್ಕಾಗ '' ಅಸ್ಸಲಾಮು ಅಲೈಕುಮ್" ಎನ್ನುವ ಬದಲು ಸ್ವಲ್ಪ ನಾಲಿಗೆ ತಿರುಚಿ "ಅಸ್ಸಾಮು ಅಲೈಕುಮ್" (ನಿಮಗೆ ಸಾವು ಸಂಭವಿಸಲಿ) ಎಂದು ಹಾರೈಸುವ ದುಷ್ಟ ಪರಿಪಾಠವನ್ನು ಆರಂಭಿಸಿದರು. ಮೊದಮೊದಲು ಇದನ್ನು ಹೆಚ್ಚಿನವರು ಗಮನಿಸಲಿಲ್ಲ. ಆದರೆ ಬಹುಬೇಗನೆ ಈ ಕಿಡಿಗೇಡಿತನ ಬಯಲಾಯಿತು. ಕೊನೆಗೆ ವಿಷಯವನ್ನು ಪ್ರವಾದಿವರ್ಯರ ಗಮನಕ್ಕೂ ತರಲಾಯಿತು. ಈ ರೀತಿಯ ಕಿಡಿಗೇಡಿತನಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ತೋರಬೇಕು ? ಎಂದು ಅವರೊಡನೆ ವಿಚಾರಿಸಲಾಯಿತು ಆಗ ಅವರು "ಅವರಿಗೆ ಉತ್ತರವಾಗಿ ನೀವು 'ವ ಅಲೈಕುಮ್' (ನಿಮಗೂ) ಎಂದು ಮಾತ್ರ ಹೇಳಿಬಿಡಿ" ಎಂದರು.
ಹೀಗೆ ಇದು, ಕೇವಲ ಒಂದು ನಿರ್ದಿಷ್ಟವಾದ ತಾತ್ಕಾಲಿಕ ಸನ್ನಿವೇಶಕ್ಕೆ ಸಂಬಂಧಿಸಿದ ಪ್ರಸಂಗವಾಗಿತ್ತು. ಈ ಕುರಿತು ವಿದ್ವಾಂಸರ ಮಧ್ಯೆ ಸಾಕಷ್ಟು ಚರ್ಚೆ ಸಂವಾದಗಳು ನಡೆದಿವೆ. ಆದರೆ ಈ ಪ್ರಸಂಗಕ್ಕೆ ಯಾವುದೇ ಹಬ್ಬದ ಜೊತೆ ಅಥವಾ ಹಬ್ಬದ ಸಂದರ್ಭದಲ್ಲಿ ಶುಭ ಹಾರೈಸುವ ಜೊತೆ ದೂರದ ಸಂಬಂಧವೂ ಇಲ್ಲ. ನಿಜವಾಗಿ ಹಬ್ಬದ ವೇಳೆ ಶುಭಾಶಯ ಕೋರುವ ವಿಷಯ ಇಲ್ಲಿ ಚರ್ಚೆಗೆ ಬಂದೇ ಇಲ್ಲ. ಆ ರೀತಿ ಶುಭಾಶಯ ಕೋರುವುದನ್ನು ನಿಷೇಧಿಸುವ ಯಾವುದೇ ಆದೇಶ ಕುರ್ ಆನ್ ನಲ್ಲಾಗಲಿ ಪ್ರವಾದಿ ವಚನಗಳಲ್ಲಾಗಲಿ ಕಾಣಸಿಗುವುದಿಲ್ಲ. ಎಲ್ಲ ಅನ್ಯ ಮತೀಯರ ಜೊತೆ ಒಂದೇ ಬಟ್ಟಲಲ್ಲಿ ಊಟ ಮಾಡುವುದನ್ನು ಅನುಮತಿಸುವ, ಅವರ ಜೊತೆ ಸೌಜನ್ಯದ ನಡವಳಿಕೆಗೆ ಎಲ್ಲ ಬಗೆಯ ಪ್ರೋತ್ಸಾಹ ನೀಡುವ ಧರ್ಮ ಅವರಿಗೆ ಶುಭ ಹಾರೈಸಬಾರದು ಎಂಬಂತಹ ಅಸಂಬದ್ಧ ಆದೇಶ ನೀಡುತ್ತದೆಂದು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಆದ್ದರಿಂದ ಧರ್ಮವನ್ನು ವಿಕೃತವಾಗಿ ವ್ಯಾಖ್ಯಾನಿಸಿ ಸಮಾಜದಲ್ಲಿ ಅಸ್ವಾಸ್ಥ್ಯ ಹಬ್ಬುವ ಅಸ್ವಸ್ಥರು ಎಷ್ಟು ದೊಡ್ಡ ಗಡ್ಡ ಮತ್ತು ಎಷ್ಟುದ್ದದ ಪೇಟದವರಾಗಿದ್ದರೂ ಅವರನ್ನು ಹದ್ದು ಬಸ್ತಿನಲ್ಲಿಡುವುದು ಸ್ವಸ್ಥ ಸಮಾಜದ ತುರ್ತು ಕರ್ತವ್ಯವಾಗಿದೆ.
ಏಕ ದೇವತ್ವದ ವಿಷಯದಲ್ಲಿ ಇಸ್ಲಾಮ್ ಧರ್ಮ ತುಂಬಾ ಸಂವೇದನಾ ಶೀಲವಾಗಿದೆ. ಮುಸ್ಲ್ಲಿಮರು ಯಾವುದೇ ಸಂದರ್ಭದಲ್ಲಿ ಬಹುದೇವತ್ವವನ್ನು ಅಥವಾ ವಿಗ್ರಹಾರಾಧನೆಯನ್ನು ಸಮರ್ಥಿಸುವ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಮತ್ತು ಮುಸ್ಲಿಮರು ಇತರ ಧರ್ಮಗಳ ಜನರ ಧಾರ್ಮಿಕ ಆಚರಣೆಗಳನ್ನು ಅನುಕರಿಸಬಾರದು ಎಂಬ ನಿರ್ಬಂಧ ಇಸ್ಲಾಮ್ ಧರ್ಮದಲ್ಲಿ ಇದೆ. ಆದರೆ ಇದರಿಂದ ಯಾವುದೇ ಸಮಾಜಕ್ಕೆ ಸಮಸ್ಯೆಯೇನೂ ಇಲ್ಲ. ಸಮಾಜದಲ್ಲಿ ಸಾಮರಸ್ಯವಿರಬೇಕಾದರೆ ಮುಸ್ಲಿಮರು ಚರ್ಚ್ ಗಳಲ್ಲಿ ಆರಾಧನಾನಿರತರಾಗಿರಬೇಕು ಅಥವಾ ಕ್ರೈಸ್ತರು ಹಿಂದೂ ದೇವಾಲಯಗಳಿಗೆ ಹೋಗಿ ಭಜನೆ ನಡೆಸಬೇಕು ಅಥವಾ ಹಿಂದೂ ಗಳು ಮಸೀದಿಗೆ ಹೋಗಿ ನಮಾಜ್ ಮಾಡಬೇಕೆಂದು ಯಾರೂ ವಾದಿಸಿಲ್ಲ. ಪ್ರತಿಯೊಂದು ಧರ್ಮ, ಸಮುದಾಯಗಳ ಜನರು ತಮ್ಮ ತಮ್ಮ ಧರ್ಮಗಳ ಚೌಕಟ್ಟಿನಲ್ಲಿ ಇದ್ದುಕೊಂಡೇ ಇತರೆಲ್ಲ ಧರ್ಮೀಯರ ಜೊತೆ ಸೌಹಾರ್ದ, ಸಾಮರಸ್ಯದಿಂದ ಬದುಕಲು ಸಾಧ್ಯವಿದೆ.
ಸಮಸ್ಯೆ ಉಂಟಾಗುವುದು, ಜನರು ತಾವೇ ಸೃಷ್ಟಿಸಿಕೊಳ್ಳುವ ಅತಿಯಾದ ಮಡಿವಂತಿಕೆಯಿಂದಾಗಿ ಮತ್ತು ವಿಪರೀತ ಭಕ್ತಿ ಪ್ರದರ್ಶನಕ್ಕೆ ಇಳಿದಾಗ ಮಾತ್ರ. ಆಗ ಅವರು ಸಾಕ್ಷಾತ್ ಧರ್ಮವನ್ನೇ ತಿರುಚಿ ಧರ್ಮವನ್ನು ಧ್ವಂಸಗೊಳಿಸುವ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ.