ಮೆಲ್ಕಾರ್ ಮಹಿಳಾ ಪದವಿ ಪೂರ್ವ-ಪದವಿ ಕಾಲೇಜಿಗೆ ದಶಮಾನೋತ್ಸವ ಸಂಭ್ರಮ
ಬಂಟ್ವಾಳ, ಜ.2: ಸಜಿಪದಂತಹ ಗ್ರಾಮೀಣ, ಹಿಂದುಳಿದ ಪ್ರದೇಶದಲ್ಲಿ ಮಂಗಳೂರು ಎಜುಕೇಶನ್ ಎನ್ಹ್ಯಾನ್ಸ್ ಮೆಂಟ್ ಟ್ರಸ್ಟ್ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿಗೆ ದಶಮಾನೋತ್ಸವ ಸಂಭ್ರಮ.
ಮೆಲ್ಕಾರ್ನಂತಹ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಸ್ವತಂತ್ರವಾಗಿ ವಿದ್ಯಾಭ್ಯಾಸ ಪಡೆಯುವಂತಹ ವಿದ್ಯಾಕೇಂದ್ರದ ಅಗತ್ಯತೆಯನ್ನು ಮನಗಂಡ ಮಂಗಳೂರಿನ ಉದ್ಯಮಿ, ಸಮಾಜಸೇವಕ, ಎಸ್.ಎಂ.ರಶೀದ್ ಹಾಜಿ ಹಾಗೂ ಸುಮಾರು 30 ಟ್ರಸ್ಟಿಗಳ ಮುಂದಾಳತ್ವದಲ್ಲಿ 2009ರಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿದರು. ‘‘ಪ್ರಥಮವಾಗಿ (2009ರಲ್ಲಿ) ಪಾಣೆಮಂಗಳೂರು ಆಲಡ್ಕ ಮಸೀದಿಯ ಕಟ್ಟಡದಲ್ಲಿ 50 ವಿದ್ಯಾರ್ಥಿನಿಯರನ್ನೊಳಗೊಂಡ ಪ್ರಥಮ ಪಿಯು ಕಲಾ ಹಾಗೂ ವಾಣಿಜ್ಯ ವಿಭಾಗದ ತರಗತಿಗಳನ್ನು ಆರಂಭಿಸಲಾಯಿತು.
2010ನೇ ಶೈಕ್ಷಣಿಕ ವರ್ಷಾರಂಭಕ್ಕೆ ಕಾಲೇಜನ್ನು ಸಜಿಪ ಮುನ್ನೂರು ಗ್ರಾಮದ ಮಾರ್ನಬೈಲು ಪ್ರದೇಶದಲ್ಲಿ ವಿಶಾಲ ಕ್ರೀಡಾಂಗಣವನ್ನೊಳಗೊಂಡ ಸುಮಾರು 3 ಎಕರೆ ಜಾಗದಲ್ಲಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆ ಶೈಕ್ಷಣಿಕ ವರ್ಷದಿಂದ ಆರಂಭಿಸಲಾದ ವಿಜ್ಞಾನ ವಿಭಾಗ ಸಹಿತ ಕಲಾ, ವಾಣಿಜ್ಯ ವಿಭಾಗದಲ್ಲೂ ಸಂಸ್ಥೆ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದೆ. 2012ರಲ್ಲಿ ಪೋಷಕರ ಬೇಡಿಕೆಯಂತೆ ಬಿಎ ಹಾಗೂ ಬಿಕಾಂ ಪದವಿ ತರಗತಿಗಳನ್ನು ಪ್ರಾರಂಭಿಸಲಾಯಿತು. ಸದ್ಯ 600 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, 30 ಶಿಕ್ಷಕ ಹಾಗೂ ಶಿಕ್ಷಕತೇರರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಸಜ್ಜಿತ ಕಂಪ್ಯೂಟರ್, ವಿಜ್ಞಾನ ಲ್ಯಾಬ್, ಕ್ರೀಡಾ ಕೊಠಡಿಗಳನ್ನೊಳಗೊಂಡಿದೆ’’ ಎಂದು ಸಂಸ್ಥೆಯ ರೂವಾರಿ ರಶೀದ್ ಹಾಜಿ ತಿಳಿಸಿದ್ದಾರೆ.
ಇಲ್ಲಿನ ವಿದ್ಯಾರ್ಥಿನಿಯರು ಪಠ್ಯದ ಜೊತೆಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ಹತ್ತು ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರ ಪ್ರತಿಭೆ ಅನಾವರಣಕ್ಕೆ ಪೂರಕವಾದ ವಿದ್ಯಾರ್ಥಿ ಸಂಸತ್ತು, ರಾಷ್ಟ್ರೀಯ ಹಬ್ಬಗಳ ಆಚರಣೆ, ಭಾಷಣ ಸ್ಪರ್ಧೆ, ಚರ್ಚಾಕೂಟ, ರಸಪ್ರಶ್ನೆ ಇತ್ಯಾದಿ ಚಟುವಟಿಕೆಗಳನ್ನು ಆಗಾಗ್ಗೆ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿ ಕೌನ್ಸಿಲ್ ಜೊತೆಗೆ ಮಹಿಳಾ ದೌರ್ಜನ್ಯ ವಿರೋಧಿ ಸಂಘ, ಪ್ರಣತಿ ಭಿತ್ತಿಪತ್ರಿಕೆ, ಎನ್ನೆಸ್ಸೆಸ್, ಕನ್ನಡ ಮತ್ತು ಲಲಿತಾ ಕಲಾ ಸಂಘ, ಮಾನವ ಹಕ್ಕುಗಳ ರಕ್ಷಣೆ, ಆರೋಗ್ಯ ಮತ್ತು ಸುರಕ್ಷಾ ಸಮಿತಿ ಇತ್ಯಾದಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕಾಲೇಜಿನ ಪ್ರಾಂಶುಪಾಲ ಅಬ್ದುಲ್ಲತೀಫ್ ಹೇಳುತ್ತಾರೆ.
ಪ್ರತಿದಿನ 1 ಗಂಟೆ ಅವಧಿಯ ಧಾರ್ಮಿಕ ಶಿಕ್ಷಣವನ್ನೂ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಪತ್ಯೇಕ ಉಪನ್ಯಾಸಕಿಯರಿದ್ದಾರೆ. ವಾರಕ್ಕೊಮ್ಮೆ ಇಸ್ಲಾಮೀ ತರಗತಿ ಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರಶೀದ್ ಹಾಜಿ ತಿಳಿಸಿದರು.
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಎಸ್.ಎಂ.ರಶೀದ್ ಹಾಜಿ, ಖೈರಿಯಾ ಶೆಲ್ಟರ್ನ ಅಧ್ಯಕ್ಷರಾಗಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷರಾಗಿ ಡಿಕೆಎಂಎ ಇದರ ಸ್ಥಾಪಕರಾಗಿ ಹೀಗೆ ಅನೇಕ ಸಂಘ-ಸಂಸ್ಥೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದು, ಅವರ ನೇತೃತ್ವದಲ್ಲಿ ಮೆಲ್ಕಾರ್ ಮಹಿಳಾ ವಿದ್ಯಾಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಮುಂದಿನ ಯೋಜನೆಗಳು: ಮಹಿಳಾ ಬಿಎಡ್ ಪದವಿ, ಆಲಿಮಾ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿನಿಯರಿಗೆ ನಮಾಝ್ ಮಾಡಲು ಪ್ರತ್ಯೇಕ ಕೊಠಡಿ ನಿರ್ಮಿಲಾಗುವುದು ಎಂದು ರಶೀದ್ ಹಾಜಿ ಮಾಹಿತಿ ನೀಡಿದರು.
ಜ. 3-5: ದಶಮಾನೋತ್ಸವ
ಮಂಗಳೂರು ಎಜುಕೇಶನ್ ಎನ್ಹ್ಯಾನ್ಸ್ ಮೆಂಟ್ ಟ್ರಸ್ಟ್ನಡಿ ಸಜೀಪ ಮುನ್ನೂರಿನ ಮಾರ್ನಬೈಲ್ನಲ್ಲಿ ಕಾರ್ಯಾಚರಿಸುತ್ತಿರುವ 'ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿ'ನ ದಶಮಾನೋತ್ಸವ ಕಾರ್ಯಕ್ರಮ ಜ.3ರಿಂದ 5ರವರೆಗೆ ಕಾಲೇಜಿನ ವಠಾರದಲ್ಲಿ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮ
ಡಿ.3ರಂದು ಬೆಳಗ್ಗೆ 9:30ಕ್ಕೆ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಎಂ.ಅಬ್ದುಲ್ ರಹಿಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮಂಗಳೂರು ಎಜುಕೇಶನ್ ಎನ್ಹ್ಯಾನ್ಸ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡುವರು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಈಶ್ವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಬೆಂಗಳೂರು ಪ್ರೆಸಿಡೆನ್ಸಿ ಯುನಿವರ್ಸಿಟಿಯ ಅಧ್ಯಕ್ಷ ನಿಸಾರ್ ಅಹ್ಮದ್, ಎ.ಕೆ. ಗ್ರೂಪ್ ಆಫ್ ಕಂಪೆನಿಯ ಎಂ.ಡಿ. ಎ.ಕೆ.ನಿಯಾಝ್ ಗೌರವ ಅತಿಥಿಗಳಾಗಿ ಭಾಗವಹಿಸುವರು.
ಅಂದು ಅಪರಾಹ್ನ 2:30ಕ್ಕೆ ನಡೆಯುವ ಸರ್ವಧರ್ಮ ಸಮ್ಮೇಳದಲ್ಲಿ ಮಂಗಳೂರು ಎಜುಕೇಶನ್ ಎನ್ಹ್ಯಾನ್ಸ್ ಮೆಂಟ್ ಟ್ರಸ್ಟ್ನ ಕಾರ್ಯದರ್ಶಿ ಬಿ.ಎಂ.ಮಮ್ತಾಝ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡುವರು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಸನ್ ಅಧ್ಯಕ್ಷತೆ ವಹಿಸುವರು. ಟ್ರಸ್ಟಿ ಮನ್ಸೂರ್ ಅಹ್ಮದ್ ಉದ್ಘಾಟಿಸುವರು.
ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. ಮೊಗರ್ನಾಡ್ ಮದರ್ ಆಫ್ ಗಾಡ್ ಚರ್ಚ್ನ ರೆ.ಡಾ. ಮಾರ್ಕ್ ಕ್ಯಾಸ್ಟಲಿನೋ, ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾಂದ ಸ್ವಾಮೀಜಿ, ಚೊಕ್ಕಬೆಟ್ಟು ಜುಮಾ ಮಸೀದಿ ಖತೀಬ್ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಜ.4ರಂದು ಬೆಳಗ್ಗೆ 9:30ಕ್ಕೆ ಜರುಗುವ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎ.ಜೆ. ರೂರಲ್ ಹೆಲ್ತ್ ಟ್ರೈನಿಂಗ್ ಸೆಂಟರ್ ಮೆಲ್ಕಾರ್ ಇದರ ಸಿಎಚ್ಒ ಡಾ.ಜಯಮಾಲಾ ವಿಶ್ವನಾಥ್ ಉದ್ಘಾಟಿಸುವರು. ಬಿ.ಮೂಡಾ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಸರಸ್ವತಿ ಅಧ್ಯಕ್ಷತೆ ವಹಿಸುವರು. ವಕೀಲರಾದ ಸೈರಾ ಕೆ.ಝುಬೈರ್, ಶೋಭಲತಾ ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಸಭಾ ಕಾರ್ಯಕ್ರಮ
ಜ.5ರಂದು ಬೆಳಗ್ಗೆ 9:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ದೇರಳಕಟ್ಟೆ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. "ದಶಕದಿರು" ಹತ್ತರ ಹೊತ್ತಗೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅನಾವರಣಗೊಳಿಸುವರು.
ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಅರಕೆರೆ ಮಿತ್ರ ಅಕಾಡಮಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಬೆಂಗಳೂರು ಕಾರ್ಮೆಲ್ ಸ್ಕೂಲಿನ ಅಧ್ಯಕ್ಷ ಫಿರೋಝ್ ಅಹ್ಮದ್ ಗೌರವ ಅತಿಥಿಗಳಾಗಿ ಭಾಗವಹಿಸುವರು.
ಮಂಗಳೂರು ಎಜುಕೇಶನ್ ಎನ್ಹ್ಯಾನ್ಸ್ ಮೆಂಟ್ ಟ್ರಸ್ಟ್ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಅಧ್ಯಕ್ಷತೆ ವಹಿಸುವರು ಎಂದು ಕಾಲೇಜಿ ಪ್ರಾಂಶುಪಾಲ ಅಬ್ದುಲ್ಲತೀಫ್ ತಿ ಳಿಸಿದ್ದಾರೆ.
''ಗ್ರಾಮೀಣ ಮಟ್ಟದ ಹೆಣ್ಣು ಮಕ್ಕಳೆಲ್ಲರೂ ವಿದ್ಯಾವಂತರಾಗಿ ಮೌಲ್ಯಯುತ ಸಮಾಜ ನಿರ್ಮಾಣ ವಾಗಬೇಕು ಮತ್ತು ಆರ್ಥಿಕಾಭಿವೃದ್ಧಿಗೂ ಪೂರಕವಾಗಿರಬೇಕು ಎನ್ನುವುದೇ ನಮ್ಮ ಉದ್ದೇಶ. ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನಮ್ಮ ಎಲ್ಲ ನಿರೀಕ್ಷೆಗಳು ಕಾರ್ಯಗತಗೊಂಡಿದ್ದು, ಇದೇ ರೀತಿಯ ಹಲವು ಸಂಸ್ಥೆಗಳು ನಾಡಿನಾದ್ಯಂತ ಸ್ಥಾಪನೆಯಾಗಲು ಪ್ರೇರಣೆ ನೀಡಿದೆ ಎಂದು ಹೇಳಲು ಹೆಮ್ಮೆಪಡುತ್ತೇವೆ. ಈ ಸಂಸ್ಥೆಯ ಸ್ಥಾಪನೆ ಮೂಲಕ ಹೆಣ್ಣು ಮಕ್ಕಳ ಹಕ್ಕನ್ನೂ ಒದಗಿಸಿಕೊಟ್ಟ ತೃಪ್ತಿ ಇದೆ''
-ಎಸ್.ಎಂ.ರಶೀದ್ ಹಾಜಿ,
ಮಂಗಳೂರು ಎಜುಕೇಶನ್ ಎನ್ಹ್ಯಾನ್ಸ್ ಮೆಂಟ್ ಟ್ರಸ್ಟ್ ಅಧ್ಯಕ್ಷ