ಚಿಕ್ಕಮಗಳೂರು: ದೇವಾಲಯದ ಆವರಣದಲ್ಲಿ ನವಜಾತು ಗಂಡು ಮಗು ಪತ್ತೆ
ಚಿಕ್ಕಮಗಳೂರು, ಜ.2: ಮುದ್ದಾದ ನವಜಾತ ಗಂಡು ಮಗುವೊಂದನ್ನು ದೇವಾಲಯದ ಆವರಣದಲ್ಲಿ ಬಿಟ್ಟು ಹೋಗಿರುವ ಘಟನೆ ತರೀಕೆರೆ ತಾಲೂಕಿನಲ್ಲಿ ಬುಧವಾರ ಸಂಜೆ ವರದಿಯಾಗಿದೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿರುವ ಶನಿ ದೇವರ ದೇವಾಲಯದ ಆವರಣದಲ್ಲಿ ಬುಧವಾರ ಸಂಜೆ ವೇಳೆ ಗಂಡು ಮಗುವೊಂದು ಅಳುತ್ತಿದ್ದ ಧ್ವನಿ ಕೇಳಿ ಸ್ಥಳೀಯರು ದೇವಾಲಯಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ದೇವಾಲಯದ ಸಮೀಪದಲ್ಲಿ ಮುದ್ದಾದ ಗಂಡು ಮಗುವೊಂದು ಅನಾಥವಾಗಿ ಬಿದ್ದಿದ್ದ ದೃಶ್ಯ ಕಂಡು ಬಂದಿದೆ. ಕೂಡಲೇ ಸ್ಥಳೀಯರು ಲಕ್ಕವಳ್ಳಿ ಪೊಲೀಸರಿಗೆ ಸುದ್ದಿಮುಟ್ಟಿಸಿ, ಮಗುವನ್ನು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ಹೆತ್ತವರ ಬಗ್ಗೆ ಅಕ್ಕಪಕ್ಕದವರಲ್ಲಿ ವಿಚಾರಿಸಿದ್ದಾರೆ. ಆದರೆ ಪೋಷಕರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಮಗುವನ್ನು ತಾಲೂಕು ಮಕ್ಕಳ ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪೋಷಕರ ಪತ್ತೆಗಾಗಿ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.