ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ತೀರ್ಥಕೆರೆ ಫಾಲ್ಸ್
ಹಸಿರ ಸಿರಿಯ ಮಧ್ಯೆ ಜಲಧಾರೆಯ ದೃಶ್ಯವೈಭವ
ಚಿಕ್ಕಮಗಳೂರು, ಜ.3: ಕಾಫಿನಾಡು ಹಚ್ಚಹಸಿರಿನ ಆಕರ್ಷಕ ಗಿರಿಶ್ರೇಣಿಗಳ ಬೀಡಾಗಿದೆ. ಇಲ್ಲಿನ ಮುಗಿಲೆತ್ತರಕ್ಕೆ ಹಸಿರು ಹೊದ್ದು ನಿಂತಿರುವ ಬೆಟ್ಟಗುಡ್ಡಗಳ ಸಂದಿ ಗೊಂದಿಗಳಲ್ಲಿ ಲೆಕ್ಕವಿಲ್ಲದಷ್ಟು ಝರಿ, ಜಲಪಾತಗಳು ಧುಮ್ಮಿಕ್ಕುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇಂತಹ ಜಲಪಾತಗಳ ಪೈಕಿ ಕೊಪ್ಪ ತಾಲೂಕಿನ ಜಯಪುರ ಸಮೀಪದಲ್ಲಿರುವ ತೀರ್ಥಕೆರೆ ಫಾಲ್ಸ್ ತನ್ನ ಮನಮೋಹಕ ಸ್ವಚ್ಛಂಧ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರಿಂದ ದೂರ ಉಳಿದಿರುವ ಈ ಆಕರ್ಷಕ ಜಲಧಾರೆಯ ದೃಶ್ಯವೈಭವಕ್ಕೆ ಕಾಯಕಲ್ಪ ನೀಡಿದಲ್ಲಿ ಇದು ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಎರಡು ಮಾತಿಲ್ಲ.
ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿರುವ ಜಯಪುರ ಪಟ್ಟಣದಿಂದ ಶೃಂಗೇರಿಗೆ ಹೋಗುವ ಹೆದ್ದಾರಿಯಲ್ಲಿ ಜಯಪುರದಿಂದ ಕೂಗಳತೆ ದೂರದಲ್ಲಿರುವ ಮಕ್ಕಿಕೊಪ್ಪದಿಂದ ಕಳಸ ಸಂಪರ್ಕದ ರಸ್ತೆಯಲ್ಲಿ ಕೇವಲ 5 ಕೀ.ಮೀ. ಅಂತರದಲ್ಲಿ ರಸ್ತೆಗೆ ಹೊಂದಿಕೊಂಡತೆಯೇ ತೀರ್ಥಕೆರೆ ಫಾಲ್ಸ್ ಕಣ್ಣಿಗೆ ಕಾಣಿಸುತ್ತದೆ. ಶೃಂಗೇರಿಗೆ ಬರುವ ದೂರದ ಪ್ರವಾಸಿಗರು, ಯಾತ್ರಾರ್ಥಿಗಳು ಬಸರೀಕಟ್ಟೆ ಮಾರ್ಗವಾಗಿ ಕಳಸ, ಹೊರನಾಡು ಯಾತ್ರಾಸ್ಥಳಗಳಿಗೆ ಹೋಗುವ ದಾರಿ ಮಧ್ಯೆ ಸಿಗುವ ಈ ಜಲಪಾತದ ಮನಮೋಹಕ ದೃಶ್ಯವನ್ನು ಕಣ್ಣುಂಬಿಕೊಳ್ಳದೇ ಮುಂದೆ ಹೋಗಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತೀರ್ಥಕೆರೆ ಫಾಲ್ಸ್ ನ ಸೊಬಗು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಾ ದಾರಿಹೋಕರನ್ನು ಸ್ವಾಗತಿಸುತ್ತಿದೆ.
ಸುಮಾರು 50 ಅಡಿ ಎತ್ತರದಿಂದ ಕಾಡನ್ನು ಸೀಳಿಕೊಂಡು ಧರೆಗೆ ಧಮ್ಮಿಕ್ಕುವಂತೆ ಭಾಸವಾಗುವ ಈ ಜಲಪಾತದ ಹಾಲ್ನೊರೆಯಂತಹ ನೀರು ಹಂತಹಂತವಾಗಿ ವೈಯ್ಯಾರದಿಂದ ಕಲ್ಲುಗಳ ಮೇಲೆ ಇಳಿದು ಬರುವ ದೃಶ್ಯ ವರ್ಣಾನಾತೀತ. ಎತ್ತರದಲ್ಲಿ ತೆಳುವಾಗಿ ಹರಿದು ಬರುವ ನೀರು ಕಪ್ಪುಕಲ್ಲುಗಳ ಮೇಲೆ ಧುಮ್ಮಿಕ್ಕಿ ನಂತರ ಕಲ್ಲಿನ ಮೇಲೆ ಹಾಲಿನ ಎರಕ ಹುಯ್ದಂತೆ ಭಾಸವಾಗುತ್ತದೆ. ಮೇಲಿನಿಂದ ವೇಗವಾಗಿ ಚದುರಿ ಹರಿದು ಬರುವ ಜಲಧಾರೆಯ ಅಂಕುಡೊಂಕಿನ ಓಟದ ಪರಿಗೆ ನೋಡುಗರು ಮಂತ್ರಮುಗ್ಧರಾಗುವುದು ತೀರ್ಥಕರೆ ಪಾಲ್ಸ್ ನ ಆಕರ್ಷಣೆಯಾಗಿದೆ.
ಇನ್ನು ಈ ಫಾಲ್ಸ್ ಕಾಫಿತೋಟ ಹಾಗೂ ಧಟ್ಟ ಕಾಡಿನ ಮಧ್ಯೆ ಇರುವುದರಿಂದ ಇಲ್ಲಿನ ಹಚ್ಛ ಹಸಿರಿನ ಪರಿಸರ ಫಾಲ್ಸ್ ನೋಡಲು ಬರುವ ಪರಿಸರ ಪ್ರೇಮಿಗಳ ಪಾಲಿಗೆ ಸ್ವರ್ಗದಂತಹ ಅನುಭವ ನೀಡುತ್ತಿದೆ. ಪಕ್ಷಿಗಳ ಕಲರವ, ಮಂಗಗಳ ಕೀಟಲೆಯೊಂದಿಗೆ ಜಲಪಾತದಲ್ಲಿ ಭೋರ್ಗರೆಯುವ ನೀರಿನ ಸದ್ದು ನೋಡುಗರ ಕಣ್ಣು, ಕಿವಿಗಳಿಗೆ ಕಂಪು, ಇಂಪು ನೀಡುತ್ತದೆ. ಬೇಸಿಗೆಯಲ್ಲಿ ಕಾಲದಲ್ಲಿ ಈ ಜಲಪಾತದಲ್ಲಿ ನೀರಿನ ಹರಿವು ಕಡಿಮೆಯಾಗುವುದರಿಂದ ಫಾಲ್ಸ್ ನ ಮನಮೋಹಕತೆ ಕೊಂಚ ಕಡಿಮೆಯಾಗಿರುತ್ತದೆ. ಆದರೆ ಮಳೆಗಾಲದಲ್ಲಿ ಸದಾ ಭೋರ್ಗರೆಯುವ ಈ ಜಲಪಾತ ಆಗಾಗ್ಗೆ ಬಣ್ಣ ಬದಲಾಯಿಸುತ್ತ ನೋಡುಗರಲ್ಲಿ ಅಚ್ಛರಿ, ಪುಳಕಕ್ಕೆ ಕಾರಣವಾಗುವುದು ಇದರ ವಿಶೇಷತೆಯಾಗಿದೆ. ಸದ್ಯ ಜಲಪಾತದಲ್ಲಿ ನೀರಿನ ಹರಿವು ಕಡಿಮೆ ಇದ್ದರೂ ಜಲಧಾರೆಯ ದೃಶ್ಯವೈಭವ ಕಡಿಮೆಯಾಗಿಲ್ಲ.
ಇನ್ನು ಸ್ಥಳೀಯ ಆಡಳಿತ ಈ ಫಾಲ್ಸ್ ನ ಅಭಿವೃದ್ಧಿಗೆ ಆಸ್ಥೆ ವಹಿಸಿದಲ್ಲಿ ಉತ್ತಮ ಆದಾಯಗಳಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದ್ದು, ರಸ್ತೆ ಬದಿಯಲ್ಲೇ ಫಾಲ್ಸ್ ಇರುವುದರಿಂದ ಪ್ರಯಾಣಿಕರು ಫಾಲ್ಸ್ ನ ಸೌಂದರ್ಯ ಸವಿಯುತ್ತಲೇ ಕಸ ಮತ್ತಿತರ ತ್ಯಾಜ್ಯಗಳನ್ನು ಆವರಣದಲ್ಲಿಯೇ ಎಸೆಯುವುದರಿಂದ ಜಲಪಾತದ ಆವರಣ ಕಲುಷಿತ ಗೊಳ್ಳುತ್ತಿದೆ. ಇನ್ನು ಜಲಪಾತ ರಸ್ತೆಗೆ ಹೊಂದಿಕೊಂಡಿರುವುದರಿಂದ ಜಲಪಾತದ ಬದಿಯಿಂದ ತುದಿ ಏರಲು ಆಗಾಗ್ಗೆ ಪ್ರಯತ್ನಿಸುವುದು ಸಾಮಾನ್ಯವಾಗಿದ್ದು, ಈ ಬಗ್ಗೆ ಎಚ್ಚರಿಕೆ ಫಲಕಗಳು ಇಲ್ಲದಿರುವುದು ದೂರದ ಪ್ರವಾಸಿಗರ ಪ್ರಾಣಕ್ಕೆ ಕುತ್ತು ತರುವ ಸಂಭವವೂ ಹೆಚ್ಚಿದೆ.
ಒಟ್ಟಾರೆ ಜಲಪಾತಗಳ ತವರೂರಾಗಿರುವ ಮಲೆನಾಡಿನ ಮೂಲೆಯಲ್ಲಿ ಪ್ರವಾಸಿಗರಿಂದ ದೂರ ಉಳಿದಿರುವ ತೀರ್ಥಕೆರೆ ಫಾಲ್ಸ್ ಗೆ ಕಾಯಕಲ್ಪ ನೀಡಿ, ಜಲಪಾತದ ಇರುವಿಕೆಯನ್ನು ಸಾರುವ ಬಗ್ಗೆ ಅಲ್ಲಲ್ಲಿ ಫಲಕಗಳನ್ನು ಅಳವಡಿಸಿದರೆ ತೀರ್ಥಕೆರೆ ಫಾಲ್ಸ್ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಲಿದೆ.
ತೀರ್ಥಕೆರೆ ಫಾಲ್ಸ್ ಬಗ್ಗೆ ಪ್ರವಾಸಿಗರಿಗೆ ಅಷ್ಟು ಗೊತ್ತಿಲ್ಲ. ಈ ರಸ್ತೆಯಲ್ಲಿ ಕಳಸ, ಹೊರನಾಡಿಗೆ ಹೋಗುವವರು ಫಾಲ್ಸ್ ನೋಡಲು ವಾಹನಗಳನ್ನು ನಿಲ್ಲಿಸುತ್ತಾರೆ. ಮಳೆಗಾಲದಲ್ಲಿ ಫಾಲ್ಸ್ ನೋಡಲು ಅದ್ಭುತವಾಗಿರುತ್ತದೆ. ಬೇಸಿಗೆಯಲ್ಲಿ ನೀರು ಕಡಿಮೆ ಇರುತ್ತದೆ. ಆದರೂ ಪ್ರವಾಸಿಗರಿಗೆ ಇಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಬರುವವರಿಗೆ ನಿರಾಶೆಯಾಗುವುದಿಲ್ಲ. ಇಲ್ಲಿಗೆ ಬರುವವರ ಪೈಕಿ ಕೆಲವರು ಫಾಲ್ಸ್‍ನ ತುದಿ ಏರಲು ಪ್ರಯತ್ನಿಸುವುದು ಸಾಮಾನ್ಯ. ಹೀಗೆ ಫಾಲ್ಸ್ ಏರಿ ಅನೇಕ ಪ್ರವಾಸಿಗರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಫಾಲ್ಸ್ ಏರಲು ಆಗದಂತೆ ಕಂಬಿಗಳನ್ನು ಹಾಕಿ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.