ರಾಜ್ಯದ ಸರಕಾರಿ ಬಸ್ ಗಳಿಗೆ ಯಾವುದಾದರೂ ಸಂಘಟನೆಗಳು ಬಂಡವಾಳ ಹೂಡಿವೆಯೇ?
ಸರಕಾರಿ ಸ್ವತ್ತುಗಳ ಮೇಲೆ ಧಾರ್ಮಿಕ ಬರಹಗಳು ಎಷ್ಟು ಸರಿ?
ಯಾವುದೇ ಸರಕಾರಿ ಸಂಸ್ಥೆಗಳಲ್ಲಿ ಯಾವುದೇ ಧರ್ಮದ ಆಚರಣೆಗಳನ್ನು ಮಾಡಬಾರದು. ಅದು ಸಂವಿಧಾನಬಾಹಿರ ಕೃತ್ಯ. ಅದಾಗ್ಯೂ ನಮ್ಮ ಹೆಚ್ಚಿನ ಶಾಲೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಎಗ್ಗಿಲ್ಲದೇ ಮಾಡಲಾಗುತ್ತಿದೆ. ಇಂತಹವುಗಳನ್ನೆಲ್ಲಾ ವಿರೋಧಿಸಿ ಕರಾವಳಿ ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದ ಶಿಕ್ಷಣ ತಜ್ಞ, ವಿದ್ವಾಂಸ ದಿವಂಗತ ಕೃಷ್ಣ ಶಾಸ್ತ್ರಿ ಬಾಳಿಲರು ಅನೇಕ ಬಾರಿ ಲೇಖನ, ಪತ್ರಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಆದರೆ ಆಳುವ ವರ್ಗ ಅವರ ಸಂವಿಧಾನ ಪರ ಕಾಳಜಿಗೆ ಕಿಂಚಿತ್ತೂ ಬೆಲೆ ನೀಡಲಿಲ್ಲ. ಅವು ಈಗಲೂ ಹಾಗೆಯೇ ಮುಂದುವರಿದಿವೆ.
ಸುಮಾರು 4 ವರ್ಷಗಳ ಹಿಂದೆ ಬಂಟ್ವಾಳ ಕಂದಾಯ ಕಚೇರಿಯಲ್ಲಿ ಸನಾತನ ಸಂಸ್ಥೆಯ ಕ್ಯಾಲೆಂಡರ್ ಒಂದನ್ನು ನಾನು ನೋಡಿದ್ದೆ. ಅದರ ಪುಟಪುಟಗಳಲ್ಲಿ ಕೋಮು ಪ್ರಚೋದನಕಾರಿ ಸಾಲುಗಳಿದ್ದವು. ನಾನದರ ಫೋಟೋವನ್ನು ಬಹಿರಂಗವಾಗಿ ಒಮ್ಮೆ ಕ್ಲಿಕ್ಕಿಸಿದ್ದೆ. ಮರುದಿನ ನಾನು ಮತ್ತೆ ನನ್ನ ಕಂದಾಯ ಸಂಬಂಧಿ ಕೆಲಸಕ್ಕೆಂದು ಹೋದಾಗ ಆ ಕ್ಯಾಲೆಂಡರ್ ಅಲ್ಲಿರಲಿಲ್ಲ.
ಕಳೆದ ಮೂರ್ನಾಲ್ಕು ವರ್ಷಗಳಿಂದೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲವು ಬಸ್ಸುಗಳ ಹಿಂಬದಿ ಗಾಜು ಮತ್ತು ಮುಂಬದಿ ಗಾಜುಗಳ ಮೇಲೆ ಅರ್ಧ ಮುಖದ ಶಿವಾಜಿ, ಹನುಮಂತನ ಫೋಟೊಗಳನ್ನು ಅಂಟಿಸಿದ್ದನ್ನು ನಮ್ಮಲ್ಲನೇಕರು ನೋಡಿರಬಹುದು (ನನಗೆ ಶಿವಾಜಿ ಮತ್ತು ಹನುಮಂತನ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ). ಇತ್ತೀಚೆಗೆ ಒಂದು ಬಸ್ಸಿನ ಮುಂದಿನ ಗಾಜಿನ ಮೇಲೆ "ಜೈ ಶ್ರೀ ರಾಮ್" ಎಂಬ ಘೋಷಣೆ ಬರೆದಿದ್ದನ್ನೂ ನಾನು ನೋಡಿದ್ದೆ. ಏನಿದರ ಅರ್ಥ?, ಬಸ್ಸುಗಳು ಕೆಲವು ನಿರ್ದಿಷ್ಟ ಸಂಘಟನೆಗಳವರ ಸ್ವತ್ತೇ?, ಅಥವಾ ಬಸ್ಸುಗಳಿಗೆ ಆ ಸಂಘಟನೆಗಳವರೇನಾದರೂ ಬಂಡವಾಳ ಹೂಡಿದ್ದಾರಾ?...
ಈ ವಿಚಾರಗಳನ್ನು ಕೆ.ಎಸ್.ಆರ್.ಟಿ.ಸಿ. ಗಂಭೀರವಾಗಿ ಪರಿಗಣಿಸಿ ಅವುಗಳ ಹಿಂದಿರುವ ಬಸ್ಸು ಸಿಬ್ಬಂದಿಯನ್ನು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿದೆ. ಮತ್ತು ಸರಕಾರಿ ಬಸ್ಸುಗಳಲ್ಲಿ ಯಾವುದೇ ಧರ್ಮದವರು ಆರಾಧಿಸುವ ದೇವರುಗಳ, ಪುಣ್ಯಕ್ಷೇತ್ರಗಳ ಫೋಟೋಗಳನ್ನೂ ಹಾಕುವುದರ ವಿರುದ್ಧವೂ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಅದೇನಿದ್ದರೂ ನಿರ್ವಾಹಕರು ಮತ್ತು ಚಾಲಕರು ತಮ್ಮ ಮನೆಯೊಳಗಿಟ್ಟುಕೊಳ್ಳಲಿ.