ವ್ಯಾಕ್ಸಿನ್ಗಳಿಗೆ ವಿದಾಯ, ಗೋ ಮೂತ್ರಕ್ಕೆ ಸ್ವಾಗತ!
ಈ ಲಸಿಕೆಗಳನ್ನು ವಿರೋಧಿಸುವವರು ನೀಡುತ್ತಿರುವ ಸಮರ್ಥನೆ ತೀರ ಬಾಲಿಶವಾಗಿದೆ. ತಾವು ಜಾಗತೀಕರಣ ಹಾಗೂ ಲಾಭಕೋರ ಬಹುರಾಷ್ಟ್ರೀಯ ಕಂಪೆನಿಗಳನ್ನು ವಿರೋಧಿಸುತ್ತೇವೆ ಎನ್ನುವ ಅವರು ‘ಸುಳ್ಳು ಸುದ್ದಿ’ಗಳಿಗೆ ಕಿವಿಕೊಡುತ್ತಿದ್ದಾರೆ ಅನ್ನಿಸುತ್ತದೆ. ಈ ಕಂಪೆನಿಗಳು ಲಸಿಕೆಗಳನ್ನು ಮಾರಾಟ ಮಾಡುವ ಮೂಲಕ ಜನರಿಗೆ ವೈರಸ್ಗಳನ್ನು ಹರಡುತ್ತಿವೆ ಎಂಬುದೇ ಆ ಸುಳ್ಳ್ಳು ಸುದ್ದಿ.
ಉತ್ತರ ಪ್ರದೇಶದ ಮೀರತ್ ನಗರದ ಖಾಝಿ, ಜೈನಸ್ ಶಾಜಿದ್ದೀನ್ರವರು ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಜವಾಬ್ದಾರಿ ಹೊರಬೇಕಾಗಿದೆ.
ಅವರ ಪ್ರವಚನ (ತಕ್ರೀರ್) ಕೇಳುವ ಯಾರಿಗೆ ಆದರೂ ಅವರ ಪ್ರವಚನದ ಕೊನೆಯ ಭಾಗದಲ್ಲಿ ಒಂದು ಆಶ್ಚರ್ಯದ ವಿಷಯ ಕಾದಿರುತ್ತದೆ: ಅವರು ವ್ಯಾಕ್ಸಿನೇಶನ್ (ಚುಚ್ಚುಮದ್ದು)ಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿ, ನಿಗದಿತವಾದ ಸಮಯಕ್ಕೆ ವ್ಯಾಕ್ಸಿನೇಶನ್ ಕೊಡಿಸುವುದರಿಂದ ಅವರ ಮಕ್ಕಳ ಜೀವಗಳನ್ನು ಹೇಗೆ ಉಳಿಸಬಹುದೆಂದು ವಿವರಿಸಿ ಹೇಳುತ್ತಾರೆ.
ಹೀಗೆ, ಭಾಗಶಃವಾಗಿಯೂ ಒಂದು ಹೊಸ ಅವತಾರವಾಗಿ ರೂಪಾಂತರವಾಗಿರುವವರು ಈ ಖಾಝಿ ಸಾಹೇಬರೊಬ್ಬರೇ ಅಲ್ಲ. ಪಶ್ಚಿಮ ಯುಪಿಯಲ್ಲಿ ಇವರ ಹಾಗೆಯೇ ಇನ್ನೂ ಕೆಲವರಿದ್ದಾರೆ. ಆ ಪ್ರದೇಶದಲ್ಲಿ ತಮ್ಮ ಮಕ್ಕಳನ್ನು ವ್ಯಾಕ್ಸಿನೇಶನ್ನಿಂದ ದೂರ ಇಡುವಂತೆ ಕೆಲವು ಮದ್ರಸಾಗಳು ಅಲ್ಲಿಯ ಮುಸ್ಲಿಮರಿಗೆ ಕರೆ ನೀಡಿವೆ. ಮದ್ರಸಾಗಳ ಈ ನಿರ್ಧಾರವನ್ನು ಎದುರಿಸಲಿಕ್ಕಾಗಿ ಖಾಝಿಗಳು ತಮ್ಮ ಭಾಷಣಗಳಲ್ಲಿ ವ್ಯಾಕ್ಸಿನೇಶನ್ ವಿಷಯ ಮಾತನಾಡುತ್ತಾರೆ.
‘‘ವಾಟ್ಸ್ಆ್ಯಪ್ ವಿಶ್ವವಿದ್ಯಾನಿಲಯ’’ದಲ್ಲಿ ಸಕ್ರಿಯವಾಗಿರುವ ಕೆಲವು ಮಂದಿ ಮೀಸೆಲ್ಸ್, ಮಂಪ್ಸ್ ಮತ್ತು ರುಬೆಲ್ಲಾ (ಎಂಎಂಆರ್) ದಡಾರ, ಸಿತಾಳೆ ಸಿಡುಬು ವ್ಯಾಕ್ಸಿನ್ನಿಂದ ನಪುಂಸಕತ್ವ ಬರಬಹುದೆಂದು ಗಾಳಿಮಾತು ಹರಡಿದ್ದಾರೆ. ಇದೆಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ಕೆಲವು ಮದ್ರಸಾಗಳು ಪೋಷಕರಿಗೆ ಅವರ ಮಕ್ಕಳನ್ನು ಕೆಲವು ದಿನಗಳ ವರೆಗೆ ಶಾಲೆಗೆ ಕಳುಹಿಸಬೇಡಿ; ಆ ಮೂಲಕ ಶಾಲೆಗಳಿಗೆ ವ್ಯಾಕ್ಸಿನೇಶನ್ ಕೊಡಿಸಲು ಬರುವ ಆರೋಗ್ಯಾಧಿಕಾರಿಗಳನ್ನು ಹಿಂದಕ್ಕೆ ಕಳುಹಿಸಬಹುದು ಎಂದು ಸೂಚನೆ ನೀಡಿವೆ.
ಆ ಪ್ರದೇಶದ ಹಿರಿಯ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ವ್ಯಾಕ್ಸಿನ್ ನೀಡುವುದರ ಮಹತ್ವವನ್ನು, ಅದನ್ನು ನೀಡದಿದ್ದಲ್ಲಿ ಆಗುವ ಅನಾಹುತಗಳನ್ನು, ಅಪಾಯಗಳನ್ನು ವಿವರಿಸಿದ ಪರಿಣಾಮವಾಗಿ ಖಾಝಿ ಸಾಹೇಬರಂತಹವರು ಕಾರ್ಯಪ್ರವೃತ್ತರಾದರು.
2015ರಲ್ಲಿ ಮೀಸೆಲ್ಸ್(ಸಿತಾಳೆ ಸಿಡುಬು) ರೋಗದಿಂದಾಗಿ 49,000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟವೆಂದು ಸರಕಾರದ ವರದಿಗಳೇ ಹೇಳುತ್ತವೆ. ಇದು ಕೆಮ್ಮು ಮತ್ತು ಸೀನುವುದರ ಮೂಲಕ ಹರಡುವ ಕಾಯಿಲೆ. ಕೇವಲ ಒಂದು ಸರಳ ವ್ಯಾಕ್ಸಿನೇಶನ್ ಮೂಲಕ ಈ ಸಾವುಗಳನ್ನು ತಡೆಯಬಹುದಿತ್ತು.
ಒಂದು ಖಾಸಗಿ ಚರ್ಚೆಯಲ್ಲಿ ಖಾಝಿ ಸಾಹೇಬ್, ಹೇಗೆ ಕಳೆದ ಕೆಲವು ವರ್ಷಗಳಿಂದ ಜಾಗತಿಕ ಉಲೆಮಾ ಸಂಘಟನೆಗಳು ಮಕ್ಕಳಿಗೆ ಚುಚ್ಚುಮದ್ದು ಕೊಡಿಸುವುದು ಪ್ರತಿಯೊಬ್ಬ ಮುಸ್ಲಿಮರ ಕರ್ತವ್ಯವೆಂದು ಆದೇಶ ಹೊರಡಿಸಿವೆ ಎಂಬುದನ್ನು ಹೇಳುತ್ತಾರೆ. ಅವರು ಹೇಳುವ ಒಂದು ವಿಷಯವೆಂದರೆ: 1995ರಲ್ಲಿ ಕುವೈತ್ನಲ್ಲಿ ನಡೆದ, ವೈದ್ಯಕೀಯ ವಿಜ್ಞಾನಗಳ ಇಸ್ಲಾಮಿಕ್ ಸಂಘಟನೆ ಸಂಘಟಿಸಿದ್ದ ಹಾಗೂ ನೂರು ಮಂದಿ ಶ್ರೇಷ್ಠ ಇಸ್ಲಾಮಿಕ್ ವಿದ್ವಾಂಸರು ಭಾಗವಹಿಸಿದ್ದ ಒಂದು ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ವಿಷಯ. ಆ ನೂರು ಮಂದಿ ಇಸ್ಲಾಮಿಕ್ ವಿದ್ವಾಂಸರು ವ್ಯಾಕ್ಸಿನ್ಗಳಲ್ಲಿ ಬಳಸಲಾಗುವ ಗೆಲಟಿನ್ ಸಾಕಷ್ಟು ಪರಿಶುದ್ಧಗೊಳಿಸಲ್ಪಟ್ಟಿದೆಂದು ಘೋಷಿಸಿದ್ದರು.
ಈ ಪ್ರದೇಶದಲ್ಲಿ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ, ವ್ಯಾಕ್ಸಿನೇಶನ್ಗೆ ವಿರೋಧ ವ್ಯಕ್ತ ವಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ. ವ್ಯಾಕ್ಸಿನೇಶನ್ ಮೂಲಕ ಮುಸ್ಲಿಮರನ್ನು ನಪುಸಂಕರನ್ನಾಗಿ ಮಾಡಲು ‘ಪಾಶ್ಚಾತ್ಯ ಒಳಸಂಚುಗಳು’ ನಡೆಯುತ್ತಿವೆ ಎಂಬ ವದಂತಿಗಳನ್ನು ಆಗಾಗ ಹರಡಲಾಗುತ್ತಿರುತ್ತದೆ. ಆರೋಗ್ಯ ಕಾರ್ಯಕರ್ತರನ್ನು ಈ ಪ್ರದೇಶದಲ್ಲಿ ಬೆದರಿಸಲಾಗುತ್ತಿಲ್ಲ ಎಂಬುದೊಂದೇ ಇಲ್ಲಿ ಒಂದು ದೊಡ್ಡ ಸಮಾಧಾನಕರ ವಿಷಯ. ಗಡಿಯಾಚೆ ಪಾಕಿಸ್ತಾನದಲ್ಲಿ ಈ ಸಮಾಧಾನ ಪಡೆಯುವಂತಿಲ್ಲ. ಅಲ್ಲಿ ಮಕ್ಕಳಿಗೆ ನೀಡಲು ಬರುವ ಆರೋಗ್ಯ ಕಾರ್ಯಕರ್ತರ ವಿರುದ್ಧ ದಾಳಿಗಳು ನಡೆಯುತ್ತವೆ. ಹಾಗಾಗಿ ಪಾಕಿಸ್ತಾನದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಅವರ ಸಹವರ್ತಿಗಳು ತುಂಬ ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ.
ಅಲ್ಲಿ ಎಲ್ಲ ಅನಿಷ್ಟಗಳಿಗೂ ಪಾಶ್ಚಾತ್ಯ ಜಗತ್ತನ್ನೇ ದೂರುವ ಒಳಸಂಚು ಸಿದ್ಧಾಂತವಾದಿಗಳ ಪ್ರಭಾವ ಎಷ್ಟೊಂದು ವ್ಯಾಪಕವಾಗಿದೆ ಎಂದರೆ ತಾಲಿಬಾನ್ ಮತ್ತು ಅದರಂತಹ ಆತಂಕವಾದಿಗಳು, ತೀವ್ರಗಾಮಿಗಳು ಆರೋಗ್ಯಕಾರ್ಯಕರ್ತರನ್ನು ಕೊಲ್ಲಲೂ ಹಿಂದೆ ಮುಂದೆ ನೋಡುವುದಿಲ್ಲ.
ವ್ಯಾಕ್ಸಿನೇಶನ್ ಅಭಿಯಾನಗಳು ಬೇಹುಗಾರಿಕೆಯ ಒಂದು ರೂಪ ಅಥವಾ ಸಂತಾನ ಹರಣ ಮಾಡುವ ಒಂದು ಒಳಸಂಚು ಎಂಬ ವದಂತಿಗಳನ್ನು ಹಲವು ತೀವ್ರಗಾಮಿ ಗುಂಪುಗಳು ಈಗಾಗಲೇ ಹರಡಿವೆ. ಗಡಿಪ್ರದೇಶಗಳಲ್ಲಿ ಪೋಲಿಯೊ ತಂಡಗಳ ಮೇಲೆ ದಾಳಿಗಳು ನಡೆಯುವುದು ತೀರಾ ಸಾಮಾನ್ಯವಾಗಿದೆ.
2018ರ ಮಾರ್ಚ್ನಲ್ಲಿ ಅಫ್ಘಾನಿಸ್ತಾನದ ಗಡಿಭಾಗದಲ್ಲಿರುವ ಪಾಕಿಸ್ತಾನದ ಆದಿವಾಸಿ ಪ್ರದೇಶದ ಸಫಿತೆಹಸಿಲ್ನಲ್ಲಿ ಉಗ್ರಗಾಮಿಗಳು ಪೋಲಿಯೊ ತಂಡವೊಂದರ ಮೇಲೆ ದಾಳಿ ನಡೆಸಿದರು; ದಾಳಿಯಲ್ಲಿ ಮೂವರನ್ನು ಕೊಂದು ಇತರ ಮೂವರನ್ನು ಅಪಹರಿಸಿದರು ಎಂದಿದ್ದಾರೆ ಅಧಿಕಾರಿಗಳು. ಇದಕ್ಕೆ ಒಂದೂವರೆ ವರ್ಷಗಳ ಮೊದಲು ವರದಿಯಾದಂತೆ, 2012ರ ಡಿಸೆಂಬರ್ನಿಂದ ಅಂತಹ ದಾಳಿಗಳಲ್ಲಿ 100ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ.
ಖ್ಯಾತ ಭೌತವಿಜ್ಞಾನಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಪರ್ವೇಝ್ ಪಾಕಿಸ್ತಾನದಲ್ಲಿರುವ ಪರಿಸ್ಥಿತಿಯ ಬಗ್ಗೆ ಕೆಲವು ವರ್ಷಗಳ ಹಿಂದೆ ತನ್ನ ತೀವ್ರವಾದ ನೋವನ್ನು, ಆತಂಕವನ್ನು ವ್ಯಕ್ತಪಡಿಸಿದ್ದರು. ಅಲ್ಲಿ ವಿವಿಧ ಬಣಗಳಿಗೆ ಸೇರಿದ ಭಯೋತ್ಪಾದಕರು ಮುಗ್ಧರನ್ನು ಹತ್ಯೆಗೈಯುವುದು ಒಂದು ಮಾಮೂಲಿ ಸಂಗತಿಯಾಗಿದೆ. ಪೇಶಾವರದ ಮಿಲಿಟರಿ ಶಾಲೆಯಲ್ಲಿ ಭಯೋತ್ಪಾದಕರಿಂದ 132 ಮಕ್ಕಳ ನರಮೇಧ ನಡೆದ ಬಳಿಕ ಬರೆದ ಒಂದು ಲೇಖನದಲ್ಲಿ ಫರ್ವೇಝ್ ಹೀಗೆ ಬರೆದಿದ್ದರು: ‘‘ಪಾಕಿಸ್ತಾನಕ್ಕೆ ಒಂದು ಸಾಮಾಜಿಕ ಆತ್ಮಸಾಕ್ಷಿ ಇದ್ದಿದ್ದರೆ ಕೇವಲ ಒಂದು ವಿಷಯ ಅದನ್ನು ಎಚ್ಚರಗೊಳಿಸಬಹುದಿತ್ತು: ಮಾರಕವಾದ ಒಂದು ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ ಕಾರ್ಯವೆಸಗುವ ಸುಮಾರು 60 ಮಂದಿ ಮಹಿಳೆಯರು ಮತ್ತು ಪುರುಷರನ್ನು ಮತಾಂಧರು ಹತ್ಯೆ ಮಾಡಿದ್ದೇ ಆ ವಿಷಯ.’’
ಆಗಾಗ ಪಾಕಿಸ್ತಾನವು ಅಂತಹ ಭಯಾನಕ ದುರಂತಗಳಿಗೆ ಸಾಕ್ಷಿಯಾಗುತ್ತಲೇ ಇರಬೇಕಾಗಿದೆ. ಮೃದು ಗುರಿಗಳ ಮೇಲೆ ನಡೆಯುವ ದಾಳಿಗಳನ್ನು ಯಾವುದೇ ಭದ್ರತಾ ಕ್ರಮಗಳು ಎಂದೂ ತಡೆಯಲಾರವು. ಏಕೈಕ ಸಂಭಾವ್ಯ ಪರಿಹಾರವೆಂದರೆ ಜನರ ಮನೋಧರ್ಮವನ್ನು ಬದಲಾಯಿಸುವುದು.
ಲಸಿಕೆಗಳಿಗೆ ಪ್ರತಿರೋಧ ಪಾಕಿಸ್ತಾನ ಮತ್ತು ಭಾರತದ ಅಲ್ಪಸಂಖ್ಯಾತರಿಗಷ್ಟೆ ಸೀಮಿತವಾಗಿಲ್ಲ ಕೆಲವು ತಿಂಗಳುಗಳ ಹಿಂದೆ ಇಂಡೋನೇಶ್ಯಾದ ಉಲೆಮಾ ಸಮಿತಿಯು ಎಂಎಂ ಆರ್ ಲಸಿಕೆಯ ವಿರುದ್ಧ ಒಂದು ಫತ್ವಾ ಹೊರಡಿಸಿತು. ಹಂದಿಗಳಿಂದ ತೆಗೆಯಲಾಗುವ ಗೆಲಟಿನ್ ವ್ಯಾಕ್ಸಿನ್ಗಳಲ್ಲಿ ಬಳಕೆಯಾಗುತ್ತದೆ. ಎಂಬ ಅನುಮಾನ ಈ ಫತ್ವಾಕ್ಕೆ ಕಾರಣವಾಗಿತ್ತು. ಈ ಅನುಮಾನ ನಿಜವಾಗಿದ್ದಲ್ಲಿ ಲಸಿಕೆಯು ಹರಾಮ್ ಆಗುತ್ತದೆ. ಲಸಿಕೆಗಳನ್ನು ಪೂರೈಸುವ ಸೆರೈಮ್ ಇನ್ಸ್ಟ್ಟಿಟ್ಯೂಟ್ ಆಫ್ ಇಂಡಿಯಾ, ಲಸಿಕೆಯಲ್ಲಿ ಗೆಲಟಿನ್ ಬಳಸದಿರುವಂತೆ ಉಲೆಮಾ ಸಮಿತಿಯ ಸದಸ್ಯರು ಅದನ್ನು ಹೇಳಿಕೊಂಡಿದ್ದರು.
ಪ್ರಾಯಶ: ಲಸಿಕೆ ವಿರೋಧಿ ಅಭಿಯಾನಕ್ಕೆ ತುತ್ತಾಗುತ್ತಿರುವ ಅತ್ಯಂತ ಇತೀಚಿನ ‘ಮಕ್ಕಳು’ ಎಂದರೆ ಯೂರೋಪಿನ ಬಲಪಂಥೀಯ ಜನಪ್ರಿಯವಾದಿಗಳು. ಯುರೋಪ್ ಖಂಡದಲ್ಲಿ ಹೆಚ್ಚುತ್ತಿರುವ ಲಸಿಕೆ ವಿರೋಧಿ ಚಳವಳಿಯು ಜಾಗತಿಕ ಆರೋಗ್ಯ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ.ಈ ಲಸಿಕೆ ವಿರೋಧಿ ಚಳವಳಿಗೆ ಸಾಮಾಜಿಕ ಜಾಲತಾಣಗಳು ಮತ್ತು ಬಲಪಂಥೀಯ ಜನಪ್ರಿಯ ವಾದಿಗಳು (ಪಾಪ್ಯುಲಿಸ್ಟ್) ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಪರಿಣಾಮವಾಗಿ, ಅಲ್ಲಿ ಸಿತಾಳೆ ಸಿಡುಬು ಸಾಂಕ್ರಾಮಿಕಗಳು ಕಳೆದ 20 ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೆ ತಲುಪಿವೆ.
ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳನ್ನು ವಿಶ್ಲೇಷಿಸಿರುವ ‘ದಿ ಗಾರ್ಡಿಯನ್ ಪತ್ರಿಕೆಯ ಪ್ರಕಾರ, 2017ರ ಅಂಕೆ ಸಂಖ್ಯೆಗಳಿಗೆ ಹೋಲಿಸಿದಾಗ ಸಿತಾಳೆ ಸಿಡುಬಿನ ಪ್ರಕರಣಗಳು 2018ರಲ್ಲಿ ದ್ವಿಗುಣಗೊಂಡವು ಮತ್ತು ಈ ವರ್ಷ ಅವುಗಳ ಸಂಖ್ಯೆ 60,000 ಆಗಲಿದೆ. ಸಿತಾಳೆ ಸಿಡುಬಿನಿಂದಾಗಿ ಸಂಭವಿಸಿದ ಸಾವುಗಳು ಕೂಡ ದ್ವಿಗುಣಗೊಂಡಿವೆ. ಇಷ್ಟರವರೆಗೆ 72 ಸಾವುಗಳು ಸಂಭವಿಸಿವೆ.
ದಿ ಗಾರ್ಡಿಯನ್ ವರದಿ ಹೇಳುತ್ತದೆ:
ಅಮೆರಿಕದಿಂದ ಇಟಲಿ, ಪೋಲ್ಯಾಂಡ್, ಫ್ರಾನ್ಸ್ವರೆಗೆ ಜನಪ್ರಿಯವಾಗಿ (ಪಾಪ್ಯುಲಿಸ್ಟ್) ಬಲಪಂಥೀಯ ರಾಜಕಾರಣಿಗಳು ಲಸಿಕೆ-ವಿರೋಧಿ ಚಳವಳಿಗೆ ಧುಮುಕಿದ್ದಾರೆ. ಅವರು ಈಗ ಲಸಿಕೆಯನ್ನು ಅನುಮಾನದಿಂದ ನೋಡುವವರನ್ನು ಬೆಂಬಲಿಸುತ್ತಿದ್ದಾರೆ. ಯಾವ ದೇಶಗಳಲ್ಲಿ ಮಕ್ಕಳಿಗೆ ಶಾಲೆಗೆ ಸೇರಿಸುವ ಮೊದಲು ಲಸಿಕೆ ನೀಡಿಕೆ ಕಡ್ಡಾಯವೋ ಅಂತಹ ದೇಶಗಳಲ್ಲಿ ಮಕ್ಕಳಿಗೆ ಲಸಿಕೆ ನೀಡದಿರುವ ಪೋಷಕರ ಹಕ್ಕನ್ನು ಎತ್ತಿಹಿಡಿಯುತ್ತಿದ್ದಾರೆ.
ಈ ಲಸಿಕೆಗಳನ್ನು ವಿರೋಧಿಸುವವರು ನೀಡುತ್ತಿರುವ ಸಮರ್ಥನೆ ತೀರ ಬಾಲಿಶವಾಗಿದೆ. ತಾವು ಜಾಗತೀಕರಣ ಹಾಗೂ ಲಾಭಕೋರ ಬಹುರಾಷ್ಟ್ರೀಯ ಕಂಪೆನಿಗಳನ್ನು ವಿರೋಧಿಸುತ್ತೇವೆ ಎನ್ನುವ ಅವರು ‘ಸುಳ್ಳು ಸುದ್ದಿ’ಗಳಿಗೆ ಕಿವಿಕೊಡುತ್ತಿದ್ದಾರೆ ಅನ್ನಿಸುತ್ತದೆ. ಈ ಕಂಪೆನಿಗಳು ಲಸಿಕೆಗಳನ್ನು ಮಾರಾಟ ಮಾಡುವ ಮೂಲಕ ಜನರಿಗೆ ವೈರಸ್ಗಳನ್ನು ಹರಡುತ್ತಿವೆ ಎಂಬುದೇ ಆ ಸುಳ್ಳ್ಳು ಸುದ್ದಿ. ವ್ಯವಸ್ಥೆಯ ವಿರೋಧಿಗಳು ಎನ್ನಲಾದ ಇಟಲಿಯ ಫೈವ್ ಸ್ಟಾರ್ ಮೂವ್ಮೆಂಟ್ ಸದಸ್ಯರು ಮತ್ತು ಅದರ ತೀರ ಬಲ (ಫಾರ್ ರೈಟ್) ಸಂಘಟನೆಯ ಸದಸ್ಯರು ದೇಶದ ತಾಂತ್ರಿಕ, ವೈಜ್ಞಾನಿಕ ತಜ್ಞರ ಮುಖ್ಯ ಸಮಿತಿಯ ಸದಸ್ಯರನ್ನು ಕಡೆಗಣಿಸಿದರು. ಇಡೀ ಸಮಿತಿಯನ್ನೇ ಬರ್ಖಾಸ್ತುಗೊಳಿಸುವಲ್ಲಿ ಅವರು ಯಾವುದೇ ವಿವೇಚನೆಯನ್ನೂ ಮಾಡಲಿಲ್ಲ.
ಸಂಶೋಧಕರೊಬ್ಬರ ಪ್ರಕಾರ ಜನಪ್ರಿಯವಾದಿಗಳ ಮತ್ತು ಲಸಿಕೆ ವಿರೋಧಿ ಜನರ ನಡುವೆ ಕುತೂಹಲಕಾರಿಯಾದ ಒಂದು ಸಮಾನಾಂಶ ಇದೆ: ‘‘ಎರಡೂ ಬಣಗಳ ಮಂದಿ ಸರಕಾರಿ ಅಧಿಕಾರಿಗಳಲ್ಲಿ ಮತ್ತು ವೈಜ್ಞಾನಿಕ ಅಭಿಪ್ರಾಯಗಳಲ್ಲಿ ನಂಬಿಕೆ ಇಲ್ಲದವರು’’
ಭಾರತದಲ್ಲಿ ಬಹುಸಂಖ್ಯಾತ ಸಮುದಾಯವು ಹಲವು ಉದ್ದೇಶಗಳಿಗಾಗಿ ಲಸಿಕೆಗಳನ್ನು ಒಪ್ಪಿಕೊಂಡಿದೆಯಾದರೂ ‘‘ವೈಜ್ಞಾನಿಕ ಅಭಿಪ್ರಾಯಗಳನ್ನು ಹಾಗೂ ಸಲಹೆಯನ್ನು ಅನುಸರಿಸುವ ನಿಟ್ಟಿನಲ್ಲಿ ಅದರ ದಾಖಲೆ ಶೋಚನೀಯವಾಗಿದೆ.’’
ಕೇಂದ್ರದಲ್ಲಿ ಹಿಂದುತ್ವ ಪರಮವಾದಿ (ಸುಪ್ರಿಮ್ಯಾಸಿಸ್ಟ್) ಶಕ್ತಿಗಳು ಅಧಿಕಾರದಲ್ಲಿರುವ ಭಾರತದಲ್ಲಿ ಹುಸಿ ವಿಜ್ಞಾನಕ್ಕೆ ಹೊಸ ಬದ್ಧತೆಯನ್ನು ನೀಡುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಗೋ ಚಿಕಿತ್ಸೆ (ಕೌಪತಿ) ಅಥವಾ ‘ಗೋ ವಿಜ್ಞಾನ’ (ಕೌ ಸಾಯನ್ಸ್). ಇದು ಸಂಶೋಧನೆಯ ಒಂದು ಹೊಸ ಶಾಖೆಯಾಗಿ ಮೂಡಿ ಬಂದಿದೆ. ಗೋಮೂತ್ರ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಎಲ್ಲ ರೀತಿಯ ಖೋಟಾ, ಸುಳ್ಳ್ಳುವಾದಗಳನ್ನು, ಸಮರ್ಥನೆಗಳನ್ನು ನೀಡಲಾಗುತ್ತಿದೆ.
ಮಾನವನ ಮೂತ್ರ ಮತ್ತು ಗೋ ಮೂತ್ರದಲ್ಲಿ ಹಲವು ಸಮಾನ ಅಂಶಗಳಿವೆ. ಗೋ ಮೂತ್ರದಲ್ಲಿ ಬಹು ಮುಖ್ಯವಾಗಿ ನೀರು(ಶೇ. 95) ಮತ್ತು ಖನಿಜ ಲವಣಗಳಾದ ಸೋಡಿಯಂ, ಪೊಟ್ಯಾಸಿಯಂ,, ಫಾಸ್ಪರಸ್, ಕ್ರೀಟಿನಿನ್, ಸೋಡಿಯಂ ಮತ್ತು ಎಪಿತೆಲಿಯಲ್ ಜೀವಕೋಶಗಳಂತಹ ಘಟಕಗಳಿವೆ. ಇವು ಯಾವುದಕ್ಕೂ ಕ್ಯಾನ್ಸರ್ ವಿರೋಧಿ ಪರಿಣಾಮಗಳಿಲ್ಲ.
ಕಳೆದ ವರ್ಷವಷ್ಟೇ ‘‘ಸೈಂಟಿಫಿಕ್ ವ್ಯಾಲಿಡೇಶನ್ ಆ್ಯಂಡ್ ರಿಸರ್ಚ್ ಆನ್ ಪಂಚಗವ್ಯ’’ (ಎಸ್ವಿಎಆರ್ಒಪಿ) ಎಂಬ, ವೈಜ್ಞಾನಿಕ ಉದ್ದೇಶಕ್ಕಾಗಿ ಎನ್ನಲಾದ ರಾಷ್ಟ್ರೀಯ ಚಾಲನಾ ಸಮಿತಿ (ನ್ಯಾಷನಲ್ ಸ್ಟಿಯರಿಂಗ್ ಕಮಿಟಿ)ಯೊಂದನ್ನು ರಚಿಸಲಾಯಿತು. ಗೋವಿನ ವಿಸರ್ಜನೆಗಳಿಂದ ತಯಾರಿಸುವ ಹಲವು ವೈದ್ಯಕೀಯ ತಯಾರಿಕೆಗಳಲ್ಲಿ ಪಂಚಗವ್ಯ ಅತ್ಯಂತ ಮುಖ್ಯವಾದದ್ದು, ಅದು ಹಸು (ಗವ್ಯ)ವಿನ ದೇಹದಲ್ಲಿ ಉತ್ಪಾದನೆಯಾಗುವ ಐದು (ಪಂಚ) ಉತ್ಪನ್ನಗಳ ಒಂದು ಮಿಶ್ರಣ: ಹಾಲು, ಮೊಸರು, ತುಪ್ಪ, ಸೆಗಣಿ ಮತ್ತು ಮೂತ್ರ. ಅದೇನಿದ್ದರೂ, ಗೋ ಮೂತ್ರ ಮತ್ತು ಗೋವಿನ ವಿಸರ್ಜನೆಗಳ ಬಗ್ಗೆ ಮುಂದೆ ಯಾವಾಗಲಾದರೂ ವಿವರವಾಗಿ ಬರೆಯುತ್ತೇನೆ.
www.newsclick.in