ಜ.16ರಂದು ಮತದಾರರ ಪಟ್ಟಿ ಪ್ರಕಟ
ಬೆಂಗಳೂರು, ಜ.5: ಭಾರತ ಚುನಾವಣಾ ಆಯೋಗದ ನಿರ್ದೇಶದ ಅನ್ವಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜ.16ರಂದು ಕರ್ನಾಟಕ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಗಳ ಪ್ರತಿಗಳನ್ನು ಸಾರ್ವಜನಿಕರ ಹಾಗೂ ರಾಜಕೀಯ ಪಕ್ಷಗಳ ಮಾಹಿತಿಗಾಗಿ ಡಿಸಿ ಕಚೇರಿ ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲೂ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸಲಾಗುವುದು.
ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಗಳನ್ನು ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ ರಾಜ್ಯ ಇವರ ಅಧಿಕತ ಜಾಲತಾಣ www.ceokarnataka.kar.nic.in ನಲ್ಲಿ ಪಿಡಿಎಫ್ ಆವೃತ್ತಿಯನ್ನು ಜ.16ರಂದು ಪ್ರಕಟಿಸಲಾಗುವುದು. ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸುವುದು, ಸರಿಯಾದ ಹಾಗೂ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಕೋರಲಾಗಿದೆ.
ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆಯ ತರುವಾಯ, ಹೊಸ ಸೇರ್ಪಡೆ, ತಿದ್ದುಪಡಿ ಮತ್ತು ಹೆಸರು ತೆಗೆದು ಹಾಕುವ ಪ್ರಕ್ರಿಯೆ ನಿರಂತರವಾಗಿ ಕೈಗೊಳ್ಳಲಾಗುತ್ತದೆ ಎಂದು ಸಾರ್ವಜನಿಕರ ಗಮನಕ್ಕೆ ಈ ಮೂಲಕ ತರಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.