ಅಕ್ಬರ್ ಎಂಬ ದೊರೆ
ರೂಪದರ್ಶಿಗಳು
ತನ್ನ ದೇಶವನ್ನು ರಕ್ಷಿಸಿಕೊಳ್ಳುವ ದಿಟ್ಟತನ, ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಕ್ರಿಯಾಶೀಲತೆ, ಸ್ವಾವಲಂಬನೆ ಸಂಸ್ಕೃತಿಯ ಅತ್ಯಂತ ಮುಖ್ಯ ಗುಣಗಳು. ಅಂದರೆ ನನ್ನ ಪ್ರಕಾರ ನಿಜವಾದ ಸಂಸ್ಕೃತಿ ಜೀವಂತವಾದದ್ದು, ಸ್ಫೂರ್ತಿ ಉಳ್ಳದ್ದು, ಪ್ರಯೋಗಶೀಲವಾದದ್ದು ಮತ್ತು ಈ ಜಗತ್ತಿನ ಬಗ್ಗೆ ಅಖಂಡ ಕುತೂಹಲ ಉಳ್ಳದ್ದು, ಅಂಥ ಸಂಸ್ಕೃತಿಯಲ್ಲಿ ವಿಜ್ಞಾನ ಬಹುಮುಖ್ಯ ಭಾಗವಾಗಿರುತ್ತದೆ.
ಇದು ತುಂಬ ದಿನದಿಂದ ಮನಸ್ಸಿನಲ್ಲಿರುವುದರಿಂದ ಬರೆಯುತ್ತಿದ್ದೇನೆ. ಟಿಪ್ಪು ಮತ್ತು ಅವನ ಅಪ್ಪ ಹೈದರಲಿಗೆ ಇದ್ದ ವ್ಯತ್ಯಾಸವೇನು? ಅವರಲ್ಲಿ ಯಾರು ಹೆಚ್ಚು ಸುಸಂಸ್ಕೃತರು? ಮೊಗಲ್ ದೊರೆಗಳಲ್ಲಿ ಬಾಬರ್ ಮತ್ತು ಅಕ್ಬರ್ ಇವರಲ್ಲಿ ಯಾರ ವ್ಯಕ್ತಿತ್ವ ಹೆಚ್ಚು ಅರ್ಥವತ್ತಾದದ್ದು? ಅವರಲ್ಲಿ ಯಾರನ್ನು ನಿಜಕ್ಕೂ ಸುಸಂಸ್ಕೃತ ಎಂದು ಕರೆಯಲು ಸಾಧ್ಯ?
ನಾನು ಬೇಕೆಂತಲೇ ಹೊಂದದಿರುವ ವಿಷಯಗಳನ್ನು ಒಟ್ಟಿಗೇ ಇಟ್ಟು ನೋಡುತ್ತಿರುವಂತೆ ನಿಮಗೆ ಕಾಣಬಹುದು. ಹಾಗೇನಿಲ್ಲ, ಸಂಸ್ಕೃತಿಯ ಬಗ್ಗೆ ನನಗನ್ನಿಸಿದ ಎರಡು ಮಾತುಗಳನ್ನು ಹೇಳಲು ಹೀಗೆ ಶುರುಮಾಡುತ್ತಿದ್ದೇನೆ.
ನಮ್ಮ ಸಾಹಿತಿ ಮತ್ತು ಸಾರ್ವಜನಿಕ ವ್ಯಕ್ತಿ ಡಿ.ವಿ.ಜಿ. ಯವರು ಸಂಸ್ಕೃತಿ ಎಂಬ ಪುಸ್ತಕ ಬರೆದು ‘ಸಂಸ್ಕೃತಿ’ಯ ಅನೇಕ ಎಳೆಗಳನ್ನು ತೋರಿಸಿದರು. ಅವರು ಒಂದು ರೀತಿಯಲ್ಲಿ ತುಂಬ ಆತ್ಮವಿಶ್ವಾಸದ ಮನುಷ್ಯ; ದೊಡ್ಡ ಪ್ರತಿಭೆಯ ಡಿವಿಜಿ ಅನುಮಾನಪಡುತ್ತಾ ಕೂತುಕೊಳ್ಳುವ ಬದಲು ಸ್ಪಷ್ಟವಾಗಿ ಹೇಳಿಬಿಡಲು ಪ್ರಯತ್ನಿಸಿದವರು. ಇದು ತುಂಬ ಕಷ್ಟದ್ದು. ಏನು ಹೇಳಿದರೂ ಲೋಪವಿದ್ದುಕೊಂಡೇ ಇರುತ್ತದೆ ಎಂದು ಅವರು ಹಿಂಜರಿಯುವವರಲ್ಲ; ಎಲ್ಲ ಸ್ವಯಂಶಿಕ್ಷಿತರಲ್ಲಿ ಇರುವ ಕೆಟ್ಟ ಧೈರ್ಯ ಅವರಲ್ಲಿ ಇರುವಂತಿದೆ. ಆದರೆ ಎಲಿಯಟ್ ತರಹದವರು ಹಾಗಲ್ಲ. ಎಲಿಯಟ್ ಒಮ್ಮೆ ಸಂಸ್ಕೃತಿಯ ಬಗ್ಗೆ ಬರೆಯಬೇಕೆಂದು ಹೊರಟು notes towards the definition of culture ಎಂದು ತನ್ನ ಪುಸ್ತಕವನ್ನು ಕರೆದ; ಅದು ಸಂಸ್ಕೃತಿಯ ಬಗ್ಗೆ ಅಲ್ಲ, ಸಂಸ್ಕೃತಿಯ ಕುರಿತು ಟಿಪ್ಪಣಿಗಳಲ್ಲ, ಸಂಸ್ಕೃತಿಯನ್ನು ತಿಳಿದುಕೊಳ್ಳುವತ್ತ ಮಾಡಿಕೊಂಡ ಟಿಪ್ಪಣಿಗಳು. ಸಂಸ್ಕೃತಿ ಎಂಬುದರ ಜಟಿಲತೆಯನ್ನು ಅರಿತಿದ್ದ ಎಲಿಯಟ್ ಹಾಗೆ ಅಂಜಿಕೆಯಿಂದ ಚಿಂತಿಸಿದ; ತನ್ನ ಸಿದ್ಧತೆಯ ಬಗ್ಗೆ ಅನುಮಾನ ಇಟ್ಟುಕೊಂಡೇ ಧ್ಯಾನಿಸಿದ. ಆದರೆ ಯಾವ ರೀತಿಯ ಅರ್ಹತೆಯೂ ಇಲ್ಲದ ನನ್ನಂಥವರು ಅಲ್ಲಿ ಇಲ್ಲಿ ಕೇಳಿದ್ದನ್ನು ಇಲ್ಲಿ ಹೇಳಬಹುದು. ಅದನ್ನೆಲ್ಲ ಸಂಗ್ರಹವಾಗಿ ಹೇಳಿ ನಾನು ನಿಮ್ಮೆದುರು ಕಾಣಿಸಬೇಕಾಗಿರುವ ಅಂಶಗಳಿಗೆ ಬರುತ್ತೇನೆ. ತಮಿಳು ಸಂಸ್ಕೃತಿ, ಕನ್ನಡ ಸಂಸ್ಕೃತಿ ಎಂದು ಮಾತಾಡುವ ನಾವು ಕನ್ನಡಕ್ಕೆ ಭಿನ್ನವಾದ ಭಾಷೆಯಾದ ತಮಿಳು, ಸಾಹಿತ್ಯ, ಅದನ್ನು ಆಡುವವರ ಜೀವನಶೈಲಿ, ಹಬ್ಬಹರಿದಿನಗಳು ಇತ್ಯಾದಿಯ ಬಗ್ಗೆ ಹೇಳುತ್ತೇವೆ; ಭಾರತೀಯ ಸಂಸ್ಕೃತಿಯನ್ನು ಅನ್ಯ ರಾಷ್ಟ್ರಗಳ ಸಂಸ್ಕೃತಿಯ ನೆತ್ತಿಯ ಮೇಲೆ ಚಿತ್ರಿಸುವಾಗ ಇಲ್ಲಿಯ ನಂಬಿಕೆ, ಆಚರಣೆ, ಕಲೆ, ಸಾಹಿತ್ಯ ಇತ್ಯಾದಿಯ ಬಗ್ಗೆ ಹೇಳುತ್ತೇವೆ. ಆದರೆ ಟಿಬೆಟ್‌ನ ಸಂಸ್ಕೃತಿಯನ್ನು ರಶ್ಯಾದ ಕೊಸಾಕ್ಸ್‌ಗಳ ಮನೋಧರ್ಮಕ್ಕೆ ಹೋಲಿಸುವಾಗ ಟಿಬೆಟನ್ನರ ಬೌದ್ಧಧರ್ಮ, ಅಹಿಂಸೆ, ಸೋಮಾರಿತನ, ಉದಾಸೀನವನ್ನು ಕೊಸಾಕ್ಸ್‌ಗಳ ಗಟ್ಟಿಗತನ, ಕ್ರೌರ್ಯ, ಕ್ರಿಯೆ, ರೌದ್ರದ ಬಗ್ಗೆ ಹೇಳುತ್ತೇವೆ; ಇದೇ ಕೊಸಾಕ್ಸ್‌ಗಳನ್ನು ಜರ್ಮನ್ನರಿಗೆ ಹೋಲಿಸುವಾಗ ಜರ್ಮನ್ನರ ಧೈರ್ಯ, ಸಣ್ಣತನ, ಬುದ್ಧಿವಂತಿಕೆ, ಅಹಂಕಾರ ಮುಂತಾದ್ದು ಕೊಸಾಕ್ಸ್‌ಗಳ ಸರಳ, ನೇರ, ಕ್ರೂರ, ಹುಂಬ ನಡವಳಿಕೆಗೆ ವಿಭಿನ್ನವಾಗಿರುವುದನ್ನು ಗುರುತಿಸುತ್ತೇವೆ. ಹೀಗೆ ಒಂದು ದೇಶ ಅಥವಾ ಸಮುದಾಯದ ಬಗ್ಗೆ ಯೋಚಿಸಿದೊಡನೆ ಸಂಸ್ಕೃತಿ ಎಂದರೆ ಏನೆಂದು ಹೊಳೆದಂತಾಗುತ್ತದೆ; ಆದರೂ ನಾವು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಹಾಗೆ ಹೇಳಲು ಆ ಜನತೆಯನ್ನು ರೂಪಿಸಿದ ಜೀವನಶೈಲಿ, ಸಂಪ್ರದಾಯ, ನಂಬಿಕೆಗಳ ಬಗ್ಗೆ ಹೇಳಬೇಕಾಗುತ್ತದೆ. ಇವತ್ತು ಕ್ಯೂಬಾದ ಸಂಸ್ಕೃತಿ ಇಸ್ರೇಲ್ ಸಂಸ್ಕೃತಿಗಿಂತ ಬೇರೆಯಾದದ್ದು; ಇಸ್ರೇಲ್‌ನಲ್ಲೇ ಇರುವ ಯಹೂದ್ಯರು ಮತ್ತು ಮುಸ್ಲಿಮರ ನಡುವಿನ ಭಿನ್ನತೆಯನ್ನು ಅವರ ಧರ್ಮಗಳನ್ನು ನೋಡಿ ಹೇಳಬಹುದು. ಆದರೆ ಯಹೂದ್ಯರಲ್ಲೇ ಒಬ್ಬ ಸುಸಂಸ್ಕೃತನು ಇನ್ನೊಬ್ಬ ಸುಸಂಸ್ಕೃತನಲ್ಲದವನು ಇರಬಹುದು. ಆಗ ಗೊಂದಲ ಶುರುವಾಗುತ್ತದೆ. ಅಕ್ಷರ ಜ್ಞಾನಕ್ಕೂ ಶಿಕ್ಷಣಕ್ಕೂ ವ್ಯತ್ಯಾಸವಿದೆ; ಅನಕ್ಷರಸ್ಥನಾದವನು ಸುಸಂಸ್ಕೃತನಿದ್ದು ಸುಶಿಕ್ಷಿತನಾದವನು ಜಡಸ್ವಭಾವದವನಿರಬಹುದು. ಧಾರ್ಮಿಕನಾದವನು ಮೂಢ ನಂಬಿಕೆಯವನಾಗಿದ್ದು ವೈಚಾರಿಕನಾದವನು ಸುಸಂಸ್ಕೃತನಿರಬಹುದು; ಅಷ್ಟೇ ಏಕೆ, ಸಂಪ್ರದಾಯವಂತನಾದವನು ನಿರ್ಜೀವನಾಗಿದ್ದು ಪ್ರತಿಭಟಿಸುವವನು ಜೀವಂತನಾಗಿರಬಹುದು.
ಐನ್‌ಸ್ಟೈನ್
ನಾವು ಇಲ್ಲಿ ಸಂಸ್ಕೃತಿಯ ವಿವಿಧ ರೂಪು, ಫರಕುಗಳಿಗೆ ಹೋಗುವುದು ಬೇಡ; ಅದು ಒಂದು ಟಿಪ್ಪಣಿಯಲ್ಲಿ ಮುಗಿಯುವುದಿಲ್ಲ. ಜೀವಂತ ಎಂಬ ಮಾತನ್ನು ಬೇಕೆಂತಲೇ ಬಳಸಿದ್ದೇನೆ. ಜೀವಂತವಾದದ್ದು ಬದಲಾಗುತ್ತದೆ. ಬೆಳೆಯುತ್ತದೆ ಅಥವಾ ಕುಗ್ಗುತ್ತದೆ. ಆತಂಕಗೊಳ್ಳುತ್ತದೆ. ಪರಿಸರಕ್ಕೆ ಸ್ಪಂದಿಸುತ್ತದೆ. ಸವಾಲುಗಳನ್ನು ಎತ್ತಿಕೊಳ್ಳುತ್ತದೆ. ನಿರ್ಜೀವವಾದದ್ದು ಜಡವಾಗಿರುತ್ತದೆ ಮತ್ತು ನಮ್ಮ ಕುತೂಹಲವನ್ನು ಕೂಡ ಕೆರಳಿಸುವುದಿಲ್ಲ. ಈ ನಿಲುವಿನಿಂದ ನೋಡಿದಾಗ ಹೈದರ್ ಟಿಪ್ಪುವಿಗಿಂತ ಭಿನ್ನ ಮಾತ್ರವಲ್ಲ, ಹೆಚ್ಚು ಜೀವಂತ ಕೂಡ. ಚರಿತ್ರೆಯಲ್ಲಿ ನಾವು ಓದಿರುವಂತೆ ಹೈದರ್ ಆಡಳಿತದ, ಜನರನ್ನು ನಿಭಾಯಿಸುವ ಸಮಸ್ಯೆಗಳನ್ನು ಬಗೆಹರಿಸುವ ಛಾತಿ ಪಡೆದಿದ್ದ; ತಂದೆಯಿಂದ ಸಿಂಹಾಸನವನ್ನು ಪಡೆದ ಟಿಪ್ಪು ಅಷ್ಟು ಜಾಗೃತನಾಗಿರಲಿಲ್ಲ. ತಾನು ಒಪ್ಪದಿರುವ ಮಾತನ್ನು ಯಾರಾದರೂ ಆಡಿದರೆ ಅದನ್ನು ಪರಿಶೀಲಿಸುವ ಸಹನೆ ಕೂಡ ಟಿಪ್ಪುಗಿರಲಿಲ್ಲ; ಹಾಗೆಯೇ ಕ್ಷಣ ಬಾಬರ್ ಮತ್ತು ಅಕ್ಬರ್‌ನತ್ತ ನೋಡಿ. ಬಾಬರ್ ಕೆಲವೇ ಸಾವಿರ ಸೈನಿಕರೊಂದಿಗೆ ಖೈಬರ್ ಕಣಿವೆಯ ಮೂಲಕ ಭಾರತಕ್ಕೆ ಬಂದು ಇಲ್ಲಿ ಕದನವೆಂಬುದು ಜಡ ಧರ್ಮಯುದ್ಧದ ಮಟ್ಟಕ್ಕೆ ಹೋಗಿದ್ದಾಗ ಲಕ್ಷಾಂತರ ಸೈನಿಕರು ಮತ್ತು ಅವರ ಆನೆ, ಕುದುರೆ, ರಥಗಳು ಎಲ್ಲವನ್ನೂ ಧ್ವಂಸ ಮಾಡಿದವನು. ಬಾಬರ್‌ನ ಯುದ್ಧದ ವರಸೆಯಲ್ಲಿ ರಾಜಕೀಯ ನಾಯಕತ್ವ ಯುದ್ಧದ ವಿಜ್ಞಾನಗಳೆಲ್ಲ ಬೆರೆತಿವೆ. ಆತನ ಯುದ್ಧದ ರೀತಿಗೂ ಭಾವುಕ ಮನಸ್ಸಿಗೂ ಸಂಬಂಧವಿದೆ. ರಸಿಕತೆ, ಎಚ್ಚರ, ಸೂಕ್ಷ್ಮತೆ ಮತ್ತು ದಿಟ್ಟತನ-ಎಲ್ಲವನ್ನೂ ಪಡೆದ ಬಾಬರ್ ಮತ್ತು ಔದಾರ್ಯ, ಜಾಣತನ, ದಿಟ್ಟತನ ಇವನ್ನು ಹೊಂದಿದ ಅಕ್ಬರ್‌ನಿಗಿಂತ ಬೇರೆ ತರಹ ಎಂದು ಹೇಳುವುದು ಕಷ್ಟವಾಗಬಹುದು. ಆದರೆ ಬಾಬರ್‌ನಲ್ಲಿ ಇನ್ನೂ ಸಾಮಾನ್ಯ ಮನುಷ್ಯನ ಪರಿಶುದ್ಧತೆ ಮತ್ತು ಮಹತ್ತಾದದ್ದನ್ನು ಸಾಧಿಸಬೇಕಾದವನ ಆಕಾಂಕ್ಷೆ ಇವೆ; ಆತನ ಮುನ್ನಡೆಯೇ ನಮ್ಮನ್ನು ಸೆರೆಹಿಡಿದು ನಿಲ್ಲಿಸುತ್ತದೆ. ಹೊರದೇಶಗಳಿಂದ ಬಂದಿರುವ ಈತ ಯಾತ್ರಿಕ, ಯೋಧ ಮತ್ತು ನಾಯಕ. ಅಕ್ಬರ್ ಹಾಗಲ್ಲ. ತಂದೆ ಕೊಟ್ಟ ರಾಜ್ಯವನ್ನು ಎಲ್ಲರ ಸಹಕಾರದೊಂದಿಗೆ ಆಳಿ ಸುಖಿಸಲು ಇಚ್ಛಿಸುವವನು; ಅದಕ್ಕಾಗಿಯೇ ಎಲ್ಲ ಧರ್ಮಗಳನ್ನು ಒಂದುಗೂಡಿಸಿ ಹೊಸ ಧರ್ಮವನ್ನು ರೂಪಿಸಲು ಯತ್ನಿಸಿದವನು; ಹಾಗೆಯೇ ತನ್ನ ರಾಜ್ಯವನ್ನು ಅಖಂಡವಾಗಿ ಇಟ್ಟುಕೊಳ್ಳುವುದಕ್ಕಾಗಿಯೇ ನೆರೆರಾಜ್ಯಗಳನ್ನು ಆಕ್ರಮಿಸಿಕೊಳ್ಳಲು ಇಷ್ಟಪಟ್ಟವನು. ಒಂದು ರೀತಿಯಲ್ಲಿ ಸಮರ್ಪಕ ಅನ್ನಿಸಿಕೊಳ್ಳಬಲ್ಲ ಈ ಅಕ್ಬರನ ರಾಜ್ಯಭಾರ ಆತನ ವೈಭವ, ಸುಖ, ರಸಿಕತೆ ಮತ್ತು ಅರ್ಥಹೀನ ಧಾರ್ಮಿಕ ಚರ್ಚೆಯಲ್ಲಿ ನಿಂತುಹೋಗುತ್ತದೆ. ಅಕ್ಬರ್ ಮತ್ತು ಆತನ ಸಮಕಾಲೀನರಾದ ಫ್ರಾನ್ಸಿನ ಫ್ರಾನ್ಸಿಸ್, ಇಂಗ್ಲೆಂಡಿನ ಮೇರಿ ಕ್ವೀನ್ ಆಫ್ ಸ್ಕಾಟ್ಸ್, ಮೊದಲನೆಯ ಎಲಿಝಬೆತ್ ರಾಣಿ, ಇಟಲಿಯ ಕಲಾವಿದ ಮೆಕಲೆಂಜಲೋ ಮುಂತಾದವರು ಆಧುನಿಕ ಯುಗವನ್ನು ರೂಪಿಸತೊಡಗಿದ್ದರು; ಸ್ಪೇನ್, ಇಂಗ್ಲೆಂಡ್, ಇಟಲಿಯ ನಾವಿಕರು ದೇಶವಿದೇಶಗಳಿಗೆ ಹೋಗಿ ರೋಮಾಂಚಕ ಮಾಹಿತಿಗಳನ್ನು ತರತೊಡಗಿದ್ದರು; ಯೂರೋಪಿನಲ್ಲಿ ಮುದ್ರಣ ಕಲೆ, ಪುಸ್ತಕಕಲೆ ಬೆಳೆದಿದ್ದವು. ಹಳೆಯ ಮೌಲ್ಯಗಳನ್ನು, ಜೀವನ ವಿಧಾನವನ್ನು ಪ್ರಶ್ನಿಸುವುದು, ಹೊಸದಕ್ಕಾಗಿ ಕಾತರಿಸುವುದು ಶುರುವಾಗಿತ್ತು. ಅಕ್ಬರ್‌ನಂಥವನು ಎಂಥ ಸ್ವಾರ್ಥಿ ಮತ್ತು ಮೂಢ ಎಂದರೆ ತನ್ನ ಧನಕನಕಗಳೇ ಮಹಾ ಸಂಪತ್ತು ಎಂದು ತಿಳಿದು ಹುಡುಗಿಯರನ್ನು ಚೆಸ್ ಆಟಿಕೆಗಳನ್ನಾಗಿಸಿ ಲೋಲುಪ್ತ, ತೃಪ್ತ ಜೀವನ ನಡೆಸುತ್ತಿದ್ದರೆ ಇಡೀ ಪಶ್ಚಿಮದ ಜಗತ್ತು ಎಚ್ಚರಗೊಳ್ಳತೊಡಗಿತ್ತು. ತನ್ನ ತೃಪ್ತಿ ಮತ್ತು ನೆಮ್ಮದಿಯಿಂದಲೇ ಜಡವಾಗಿಹೋಗಿದ್ದ ಅಕ್ಬರ್; ತನ್ನ ರಾಜ್ಯದಿಂದ ನೂರು ಜನರ ಒಂದು ತಂಡವನ್ನು ಪಶ್ಚಿಮದ ದೇಶಗಳಿಗೆ ಕಳಿಸಬೇಕು, ಹೊಸತನ್ನು ಕಾಣಬೇಕು ಎಂಬ ಕಾತರ ಕೂಡ ಅವನಲ್ಲಿ ಉಳಿದಿರಲಿಲ್ಲ. ಆದ್ದರಿಂದಲೇ ಈತ ಬಾಬರ್‌ಗಿಂತ ಸಣ್ಣ ವ್ಯಕ್ತಿ, ಮೊಗಲ್ ಸಾಮ್ರಾಜ್ಯದ ಪತನವನ್ನು ಆರಂಭಿಸಿದವನು; ಈ ಕಾರಣಕ್ಕಾಗಿಯೇ ಬಾಬರ್ ಮತ್ತು ಅಕ್ಬರ್ ಜೀವಂತರೂ ಅಲ್ಲ, ಸ್ಫೂರ್ತಿವಂತರೂ ಸುಸಂಸ್ಕೃತರೂ ಅಲ್ಲ.
ಹೈದರಲಿ
ಸಂಸ್ಕೃತಿಯ ಬಗ್ಗೆ ಚಿಂತಿಸುವಾಗ ಈ ಜೀವಂತಿಕೆ, ಸ್ಫೂರ್ತಿ ಮತ್ತು ಬದಲಾವಣೆಯನ್ನು ಒಳಗೊಂಡು ಚರ್ಚಿಸುವವರು ಕಡಿಮೆ. ಇದು ನಿಜಕ್ಕೂ ವಿಚಿತ್ರ. ಯಾವುದು ಸ್ಥಗಿತಗೊಳ್ಳುತ್ತದೋ, ಸಂತೃಪ್ತಿಯಲ್ಲಿ ಮಲೆತುಹೋಗುತ್ತದೋ ಅದು ಜೀವಂತವಾಗಿ ಉಳಿಯುವುದಿಲ್ಲ. ಈ ದೃಷ್ಟಿಯಿಂದ ಭಾರತದ ರಾಜಕೀಯ ಅವನತಿಯು ಅದರ ಸಾಂಸ್ಕೃತಿಕ ಅವನತಿಯೊಂದಿಗೆ ತಳಕು ಹಾಕಿಕೊಂಡಿದೆ. ಹದಿನೈದು, ಹದಿನಾರನೆ ಶತಮಾನದಲ್ಲಿ ಆರಂಭವಾದ ಯೂರೋಪಿನ ಜಾಗೃತಿ ಹದಿನೆಂಟು, ಹತ್ತೊಂಭತ್ತನೇ ಶತಮಾನದಲ್ಲಿ ನಿಜವಾದ ಜ್ಞಾನೋದಯ ಅನ್ನಿಸಿಕೊಳ್ಳುವ ಮಟ್ಟವನ್ನು ಮುಟ್ಟಿತು. ಉಗಿಬಂಡಿ ಉದ್ಘಾಟಿಸಿದ ಕ್ರಾಂತಿ ಪಶ್ಚಿಮದ ಸಂಸ್ಕೃತಿಯನ್ನು ಕದಡಿದ ಯಂತ್ರವಾಯಿತು; ಹೊಸ ಹೊಸ ನೋವು, ನಲಿವು, ದುಗುಡ, ಅಚ್ಚರಿಯನ್ನು ತೋರುವ ಕಳೆದ ಮೂರು ಶತಮಾನದ ತಂತ್ರ, ವಿಜ್ಞಾನಿಗಳು ಪಶ್ಚಿಮದ ಸಂಸ್ಕೃತಿಯ ಭಾಗಗಳಾದವು. ಇದನ್ನು ಸ್ವಲ್ಪವಾದರೂ ಬಲ್ಲವರಿಗೆ ವಿವರವಾಗಿ ಹೇಳಬೇಕಾಗಿಲ್ಲ. ಹತ್ತೊಂಬತ್ತನೇ ಶತಮಾನದವರೆಗೆ ಮುದ್ರಣಯಂತ್ರಗಳನ್ನೇ ಕಾಣದಿದ್ದ ಜನತೆಯಲ್ಲಿ ಕುತೂಹಲವಾಗಲಿ ಪ್ರಯೋಗಶೀಲತೆಯಾಗಲಿ ಇರಲಿಲ್ಲ. ಬ್ಲೇಕ್ ಮತ್ತು ವರ್ಡ್ಸ್ ವರ್ತ್ ಕೈಗಾರಿಕಾ ಕ್ರಾಂತಿಯ ದುರಂತವನ್ನು ಹೇಳುವುದು ಕೂಡ ಅಲ್ಲಿಯ ಸಾಹಿತ್ಯಿಕ, ಸಾಂಸ್ಕೃತಿಕ ಕ್ರಾಂತಿಯ ಒಂದು ಭಾಗ. ಬ್ಲೇಕ್‌ನ ಸಾಂಗ್ಸ್ ಆಫ್ ಎಕ್ಸ್‌ಪೀರಿಯನ್ಸ್ ವಡ್ಸ್‌ವರ್ತ್‌ನ ಟಿಂಟರ್ನ್ ಅಬೆ ಶೂನ್ಯಾವಸ್ಥೆಯಲ್ಲಿ ಹುಟ್ಟಲು ಸಾಧ್ಯವಿಲ್ಲ. ಎಲ್ಲದಕ್ಕೂ ನೈತಿಕ ನಿಲುವು ತೆಗೆದುಕೊಂಡು ಅಳುವ ಬುದ್ಧಿಜೀವಿಗಳಿಗೆ ದೇಶಗಳ ಒಳಗಿನ ಮತ್ತು ದೇಶ ದೇಶಗಳ ನಡುವಿನ ಘರ್ಷಣೆಯ ಕಠೋರ ವಾಸ್ತವ ತಿಳಿಯುವುದಿಲ್ಲ. ಆಫ್ರಿಕಾ ಇವತ್ತು ತನ್ನ ಸುಂದರ ಸಾಂಸ್ಕೃತಿಕ ಜೀವನವನ್ನು ಮತ್ತು ಕನಸುಗಳನ್ನು ಕೆಡಿಸಿಕೊಂಡಂತೆ ಕಾಣುತ್ತಿದ್ದರೆ, ಇಂಡಿಯಾ ಇವತ್ತು ತನ್ನತನ ಕಂಡುಕೊಳ್ಳಲಾರದೆ, ವಸಾಹತುಶಾಹಿಯ ಹಿಡಿತದಲ್ಲೇ ನಲುಗಿರುವಂತೆ ಕಾಣುತ್ತಿದ್ದರೆ ಈ ಸಂಘರ್ಷವೇ ಕಾರಣ. ದೇಶ ದೇಶಗಳನ್ನು ಸಂಧಿಸಿದಾಗ ವಿನಾಶವಾದಂತೆ ಕಂಡರೂ ಕ್ರಿಯಾಶೀಲ ಮನಸ್ಸುಗಳ ಮೇಲೆ ವಿಚಿತ್ರ ಪರಿಣಾಮಗಳಾಗಿರುತ್ತವೆ. ಈಗ ನಾವು ಪ್ರಶ್ನೆ ಕೇಳಿಕೊಳ್ಳಬಹುದು, ಮೂಲಭೂತವಾಗಿ ಪಶ್ಚಿಮಪ್ರಜ್ಞೆಯವರಾಗಿದ್ದ, ಕುತೂಹಲಿಯೂ ಪ್ರಯೋಗಶೀಲರೂ ಆಗಿದ್ದ, ಕಂದಾಚಾರಿಯಂತೆ ಕಂಡರೂ ಮಹಾ ಆಧುನಿಕರಾಗಿದ್ದ ಗಾಂಧಿ ಸುಸಂಸ್ಕೃತರೋ ಎಲ್ಲ ಸಂಸ್ಕೃತಿಯ ಬಟ್ಟೆ ತೊಟ್ಟು ಜಡವಾಗಿದ್ದ ದ್ವೈತ ಅದ್ವೈತ ಏಕತಾನತೆಯಲ್ಲಿ ಮುಳುಗಿದ್ದ ಮೂರ್ಖರು ಸುಸಂಸ್ಕೃತರೋ? ಈ ಪ್ರಶ್ನೆಗೆ ಉತ್ತರ ಹೇಳುವುದು ಅನಗತ್ಯ.
ಮೆಕಲೆಂಜಲೋ
ಸಂಸ್ಕೃತಿಯ ಬಗ್ಗೆ ಮಾತಾಡಲು ಶುರುಮಾಡಿ ಜೀವಂತಿಕೆ, ಸ್ಫೂರ್ತಿ, ಪ್ರಯೋಗಶೀಲತೆಯ ಬಗ್ಗೆ ನಾನು ಹೇಳುತ್ತಿರುವುದನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು. ಗಾಂಧಿಯಂಥ ಮಹಾನ್ ಕ್ರಿಯಾಶೀಲ ವ್ಯಕ್ತಿಯನ್ನು ಜಡವಾಗಿಸಿ ಚಿತ್ರಪಟವಾಗಿಸಿ ಪೂಜಿಸುತ್ತಾ ಸ್ವಾವಲಂಬನೆ ಎನ್ನುವುದನ್ನೂ ವಿವರಿಸಬೇಕಾದಾಗಲೆಲ್ಲ ಚರಕದ ಬಗ್ಗೆ ಮಾತಾಡುವ ಮೂರ್ಖರಿಗೆ ನನ್ನ ಮಾತು ಹಿಡಿಸದೆ ಇರಬಹುದು. ಗಾಂಧೀಜಿಯವರ ಸ್ವಾವಲಂಬನೆಯ ಮಾತಿನ ಅರ್ಥವೇನಾದರೂ ಇಲ್ಲಿ ಆಗಿದ್ದರೆ ಅವರೇ ಹೇಳಿದಂತೆ ಇಲ್ಲಿಯ ಪ್ರತಿಯೊಂದು ಗ್ರಾಮವೂ ಪಟ್ಟಣವೂ ಪ್ರಯೋಗಶಾಲೆ, ಹೊಸ ಹೊಸ ಸತ್ಯದರ್ಶನದಿಂದ ವಿಜೃಂಭಿಸಬೇಕಾಗಿತ್ತು. ಇಲ್ಲಿಯ ಕಬ್ಬಿಣದ ಅದಿರಿನ ಬೆಟ್ಟಗಳು, ಚಿನ್ನದ ಗಣಿಗಳು, ಅಪಾರ ಜಲಸಂಪತ್ತು, ಅರಣ್ಯ ಸಂಪತ್ತು ಇಲ್ಲಿ ಜೀವಂತ, ಅತ್ಯಾಧುನಿಕ ಸಮಾಜವನ್ನು ನಿರ್ಮಿಸಬೇಕಾಗಿತ್ತು. ಸರಳವಾಗಿ ಹೇಳಬೇಕಾದರೆ ಇಲ್ಲಿ ಐನ್‌ಸ್ಟೈನ್‌ಗಳೂ, ವಿಟಗೆನ್‌ಸ್ಫೇನ್‌ಗಳೂ, ಟಾಲ್‌ಸ್ಟಾಯ್‌ಗಳೂ ಹುಟ್ಟುವ ಜೊತೆಗೆ ನಮ್ಮವನೇ ಆದ ಬಿಲ್ ಗೇಟ್ಸ್ ನಮ್ಮ ಜನಜೀವನಕ್ಕೆ ಹೊಸ ಚೈತನ್ಯ ತರಬೇಕಾಗಿತ್ತು. ಇಲ್ಲಿ ಬುದ್ಧಿಜೀವಿಗಳೆನ್ನಿಸಿಕೊಂಡ ಕಳ್ಳರು ಮತ್ತು ರಾಜಕಾರಣಿಗಳೆನ್ನಿಸಿಕೊಂಡ ವಂಚಕರು ಎಂಥ ವಾತಾವರಣ ನಿರ್ಮಿಸಿದ್ದಾರೆಂದರೆ ಒಬ್ಬ ಸ್ಯಾಮ್ ಪಿತ್ರೋಡನನ್ನು ಕೂಡ ಈ ವ್ಯವಸ್ಥೆ ಸಹಿಸುತ್ತಿಲ್ಲ. ಅತ್ಯಂತ ಸ್ವಾರ್ಥಿಯೂ ದುಷ್ಟವೂ ಆದ ಸಮಾಜ ಮಾತ್ರ ಇಂಥ ಭ್ರಷ್ಟ, ಸೋಗಲಾಡಿತನದ ಪರಿಸರ ಸೃಷ್ಟಿಸುತ್ತದೆ. ಭಾರತೀಯರು ಇವತ್ತು ಅಮೆರಿಕದಲ್ಲಿ ಆದಾಯ ತೆರಿಗೆಯನ್ನು ಹೇಗೆ ತಪ್ಪಿಸಿಕೊಳ್ಳುವುದು ಎಂಬುದನ್ನು ಎಲ್ಲರಿಗೆ ತೋರಿಸಿಕೊಡುತ್ತಿದ್ದಾರೆ ಎಂದು ಒಬ್ಬ ಮೊನ್ನೆ ಹೆಮ್ಮೆಯಿಂದ ಹೇಳಿದ. ನನ್ನ ಮನಸ್ಸು ವಿಹ್ವಲಗೊಂಡಿತು. ಕಾನೂನಿನಿಂದ ತಪ್ಪಿಸಿಕೊಂಡು ಮಾಡಿದ್ದೆಲ್ಲ ನೈತಿಕ ಎಂದು ತಿಳಿಯುವ ಮನುಷ್ಯನನ್ನು ಮನುಷ್ಯ ಅನ್ನಲು ಸಾಧ್ಯವೇ?
ಮಹಾತ್ಮಾ ಗಾಂಧಿ
ಅಂದರೆ, ತನ್ನ ದೇಶವನ್ನು ರಕ್ಷಿಸಿಕೊಳ್ಳುವ ದಿಟ್ಟತನ, ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಕ್ರಿಯಾಶೀಲತೆ, ಸ್ವಾವಲಂಬನೆ ಸಂಸ್ಕೃತಿಯ ಅತ್ಯಂತ ಮುಖ್ಯ ಗುಣಗಳು. ಅಂದರೆ ನನ್ನ ಪ್ರಕಾರ ನಿಜವಾದ ಸಂಸ್ಕೃತಿ ಜೀವಂತವಾದದ್ದು, ಸ್ಫೂರ್ತಿ ಉಳ್ಳದ್ದು, ಪ್ರಯೋಗಶೀಲವಾದದ್ದು ಮತ್ತು ಈ ಜಗತ್ತಿನ ಬಗ್ಗೆ ಅಖಂಡ ಕುತೂಹಲ ಉಳ್ಳದ್ದು, ಅಂಥ ಸಂಸ್ಕೃತಿಯಲ್ಲಿ ವಿಜ್ಞಾನ ಬಹುಮುಖ್ಯ ಭಾಗವಾಗಿರುತ್ತದೆ.