ನಮ್ಮ ಕಾಲದ ನಿಜಶರಣ ನೆಟ್ಟಾರು ರಾಮಚಂದ್ರಭಟ್ಟರು
ಇಸ್ಮಾಯೀಲ್ ಕುಂಞಪ್ಪ ಹಾಗೂ ರಾಮಚಂದ್ರಭಟ್ಟ
ಭಾಗ-1
ಇಸ್ಮಾಯೀಲ್ ಕುಂಞಪ್ಪ ಬೆಳ್ಳಾರೆ ಪೇಟೆಯ ಹಳೆ ತಲೆಮಾರಿನ ಮುಸಲ್ಮಾನ್ ಸಭ್ಯಗೃಹಸ್ಥ. ಅವರ ಮಗ ಬೆಳ್ಳಾರೆಯಲ್ಲಿ ಅಡಿಕೆ ಮಂಡಿ ನಡೆಸುತ್ತಿದ್ದಾರೆ. ಇವರ ಜೀವಿತದ ಕೊನೆಯ ಹತ್ತು ವರ್ಷಗಳ ಸಂದರ್ಭದಲ್ಲಿ ನೆಟ್ಟಾರು ರಾಮಚಂದ್ರಭಟ್ಟರು ಇವರ ಬದುಕಿನ ಅವಿಭಾಜ್ಯ ಅಂಗವಾದರು.
ಪುತ್ತೂರು ತಾಲೂಕಿನ ಬೆಳ್ಳಾರೆ ಇಸ್ಮಾಯೀಲ್ ಕುಂಞಪ್ಪ ಮತ್ತು ನೆಟ್ಟಾರು ರಾಮಚಂದ್ರಭಟ್ಟರು ಅವಧೂತರಂತೆ ತಿರುಗಾಡುತ್ತಾ ಕರ್ನಾಟಕದಾದ್ಯಂತ ಸುತ್ತಿದ್ದರು. ಒಮ್ಮೆ ಯಾವುದೋ ಊರಿನ ಒಂದು ಬಸ್ ನಿಲ್ದಾಣ. ಅಲ್ಲಿ ಇದ್ದಕ್ಕಿದ್ದಂತೆ ಕುಂಞಪ್ಪರ ಕೈ ಹಿಡಿದು ಭಟ್ಟರು ಅಬ್ಬರಿಸಿದರು:
‘‘ಹೇಳು ನೀನು ಯಾರು? ಹೇಳು.’’
‘‘ನಾನು ಯಾರು ನಿಮಗೆ ಗೊತ್ತಿಲ್ಲವೆ?’’
‘‘ನೀನು ಯಾರೆಂದು ಮೊದಲು ನಿನಗೆ ಗೊತ್ತಿರಬೇಕು. ಮತ್ತೆ ಬೇರೆಯವರ ವಿಷಯ. ಹೇಳು ನೀನು ಯಾರು?’’
‘‘ನಾನೊಬ್ಬ ಮುಸಲ್ಮಾನ.’’
‘‘ಹೇಳು ಮುಸಲ್ಮಾನನೆಂದರೆ ಯಾರು?’’
ಇಷ್ಟು ಹೊತ್ತಿಗೆ, ಈ ಗಲಾಟೆಗೆ ಇವರಿಬ್ಬರ ಸುತ್ತ ಜನ ಹತ್ತಿತು.ಎಲ್ಲಿಯಾದರೂ ‘ಹಿಂದೂ-ಮುಸ್ಲಿಂ’ ಆಗಿಬಿಟ್ಟರೆ?
ಭಟ್ಟರು ಅಬ್ಬರಿಸುತ್ತಲೇ ಇದ್ದರು: ‘‘ಹೇಳು ಮುಸಲ್ಮಾನನೆಂದರೆ ಯಾರು?’’
ಈಗ ನಿಜಕ್ಕೂ ಕುಂಞಪ್ಪರಿಗೆ ಗಾಬರಿಯಾಯಿತು. ಅವರು ಅದು ಹೇಗೋ ಕೈ ಕೊಸರಿಕೊಂಡು, ಜನಜಂಗುಳಿಯಲ್ಲಿ ನುಗ್ಗಿ ಎಲ್ಲಿಗೋ ಓಡಿ ಹೋದರು. ಯಾವುದೋ ಬಸ್ ಹಿಡಿದು ಮೈಸೂರಿನ ಬಸ್ ನಿಲ್ದಾಣದಲ್ಲಿ ಇಳಿದರು. ಇಳಿದು ನೋಡುತ್ತಾರೆ; ಅಲ್ಲಿ ಅದು ಹೇಗೋ ಇವರಿಗಿಂತ ಮೊದಲೇ ಬಂದಿದ್ದ ಭಟ್ಟರು ನಗು ನಗುತ್ತ ಇವರನ್ನು ನಿರೀಕ್ಷಿಸುತ್ತಿದ್ದಾರೆ.
‘‘ನೀನು ಹೆದರಿಬಿಟ್ಟೆಯೋ ಹೇಗೆ? ಅದಿರಲಿ, ಆ ಜನಗಳ ಮಧ್ಯೆ ನಮ್ಮನ್ನು ಒಬ್ಬರನ್ನು ಬಿಟ್ಟು ಬರಲು ಮನಸ್ಸಾದರೂ ಹೇಗಾಯಿತು ಕುಂಞಪ್ಪಾ?’’
ಕುಂಞಪ್ಪರ ಕಣ್ಣಲ್ಲಿ ನೀರಾಡಿತು.
ಈ ಕತೆ ಹೇಳಿದ ಗುರುಗಳನ್ನು ನಾನು ಕೇಳಿದೆ:
ಮುಸಲ್ಮಾನನೆಂದರೆ ಯಾರು ಎಂದು ಕೇಳಿದಿರಲ್ಲ. ಏನು ನಿಮ್ಮ ನಿರೀಕ್ಷೆ?
ನಮಗೊಂದು ಹಾಡು ನೆನಪಾಯಿತು. ಆ ನೆನಪಿನ ಮೇಲಿನಿಂದ ಕುಂಞಪ್ಪನನ್ನು ಹಾಗೆ ಕೇಳುವ ಹಾಗಾಯಿತು. ಆ ಹಾಡು ನಮ್ಮ ಜೀವಾಳವಾಗಿತ್ತು.
ಏನು ಹಾಡು ಗುರುಗಳೆ? ದಯವಿಟ್ಟು ಹೇಳಿ.
ಅದೋ? ನಿಜವಾದ ವೈಷ್ಣವನೆಂದರೆ ಯಾರು ಎಂದು ವಿವರಿಸಿ ಗುಜರಾತಿನ ಕವಿಯೊಬ್ಬ ಬರೆದಿದ್ದಾನಲ್ಲ - ನಿನಗೆ ನೆನಪಾಗುತ್ತಿದೆಯೇ? ನೆನಪಾದರೆ ಹೇಳು.
ಹೋ. ‘ವೈಷ್ಣವ ಜನತೋ ತೇನೇ ಕಹಿಯೆ ಯೇ ಪೀಡ ಪರಾಯಿ ಜಾಣೇರೇ’
ಏನು ಅದರರ್ಥ ಹೇಳು. ಇನ್ನೊಬ್ಬನ ನೋವು ಯಾರಿಗೆ ಅರ್ಥವಾಗುತ್ತೆ, ಅಂಥವನನ್ನು ವೈಷ್ಣವ ಅನ್ನಬಹುದು. ಈ ಹಾಡು ನಮ್ಮ ಜೀವಾಳ.
‘‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಕೂಡಲಸಂಗನ ಶರಣರೇ ಕುಲಜರು’’ ಎಂದು ಬಸವಣ್ಣನವರು ಹೇಳಿದ್ದಾರೆ.‘‘ಅತಿಮಲಿನ ಕೂಡಲಸಂಗಮದೇವ’’ ಎಂದು ಹಣ್ಣುಹಣ್ಣಾದ ಕುಷ್ಠರೋಗಿಯಲ್ಲೂ ದೇವರನ್ನು ಕಾಣುತ್ತಾರೆ.‘‘ದಯವೇ ಧರ್ಮದ ಮೂಲ’’ ಎಂದು ಹೇಳುತ್ತಾರೆ. ಇಂತಹ ಜೀವಕಾರುಣ್ಯವೇ ರಾಮಚಂದ್ರಭಟ್ಟರ ಜೀವನಾಡಿಯಾಗಿದೆ.
ಇಸ್ಮಾಯೀಲ್ ಕುಂಞಪ್ಪ ಬೆಳ್ಳಾರೆ ಪೇಟೆಯ ಹಳೆ ತಲೆಮಾರಿನ ಮುಸಲ್ಮಾನ್ ಸಭ್ಯಗೃಹಸ್ಥ. ಅವರ ಮಗ ಬೆಳ್ಳಾರೆಯಲ್ಲಿ ಅಡಿಕೆ ಮಂಡಿ ನಡೆಸುತ್ತಿದ್ದಾರೆ. ಇವರ ಜೀವಿತದ ಕೊನೆಯ ಹತ್ತು ವರ್ಷಗಳ ಸಂದರ್ಭದಲ್ಲಿ ನೆಟ್ಟಾರು ರಾಮಚಂದ್ರಭಟ್ಟರು ಇವರ ಬದುಕಿನ ಅವಿಭಾಜ್ಯ ಅಂಗವಾದರು.
ಹಿನ್ನೆಲೆ: ಒಂದು ದಿನ ಇಸ್ಮಾಯೀಲ್ ಕುಂಞಪ್ಪನೆಟ್ಟಾರು ಜಂಕ್ಸನ್ನಲ್ಲಿ ನಿಂತಿದ್ದರು. ಅಲ್ಲಿನ ಹಳ್ಳಿಯ ಹೊಟೇಲಿನ ಜಗಲಿಯ ಬಳಿಯ ಬೆಂಚ್ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ಸಹಜವಾಗಿ ನೋಡಿದರು. ಆ ವ್ಯಕ್ತಿಯೂ ನೋಡಿದರು. ನೋಟಗಳು ಬೆರೆತವು. ಇಸ್ಮಾಯೀಲ್ರ ಕೈಯಲ್ಲಿದ್ದ ಚೀಲ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿತು. ಆ ವ್ಯಕ್ತಿಯ ಕಡೆ ಧಾವಿಸಿದರು. ಅವರಿಬ್ಬರ ಮಧ್ಯೆ ಒಟನಾಟವಿಲ್ಲದಿದ್ದರೂ ಒಂದೇ ಊರಿನವರಾಗಿದ್ದರಿಂದ ಹೆಸರು, ಮುಖ ಪರಿಚಯ. ಹಾಗೆ ಕುಳಿತಿದ್ದವರು ನೆಟ್ಟಾರು ರಾಮಚಂದ್ರ ಭಟ್ಟರು. ಅವರ ದೇಹ ಅಡಿಕೆ ಮರದ ಒಣ ಹಾಳೆಯಂತೆ ಕಾಣುತ್ತಿತ್ತು. ಭಟ್ಟರನ್ನು ನೋಡಿ ಇಸ್ಮಾಯೀಲ್ ಕುಂಞಪ್ಪರ ಕಣ್ಣುಗಳು ಒದ್ದೆಯಾಗಿದ್ದವು. ‘‘ಏನಿದು ಅವಸ್ಥೆ, ನಿಮಗೇನಾಗಿದೆ’’ ಎಂದು ಕೇಳಿದರು. ‘‘ನನಗೆ ಏನು ಹೇಳಲಿಕ್ಕೂ ತೋಚುವುದಿಲ್ಲ ಕುಂಞಪ್ಪಾ’’ ಎಂದು ಅವರು ಹೇಳುವಾಗ ಎರಡೂ ಅಂಗೈಗಳು ಮೇಲ್ಮುಖವಾಗಿ ತೆರೆದುಕೊಂಡು ನಮಾಝ್ ಮಾಡುವ ಹಾಗೆ ಇತ್ತು. ಕುಂಞಪ್ಪಅವರಿಗೆ ತಾಳಲಿಕ್ಕಾಗಲಿಲ್ಲ. ಅವರನ್ನು ಎಬ್ಬಿಸಿಕೊಂಡು ಹೋದರು.
ಯಾವ ವೈದ್ಯನ ಹಿಡಿತಕ್ಕೂ ಸಿಗದ ಎದೆನೋವಿನಿಂದ ಭಟ್ಟರು ನರಳುತ್ತಿದ್ದರು. ಈ ನರಳುವಿಕೆಯಲ್ಲೇ ಭಟ್ಟರು ಆಸ್ತಿ, ಸೊತ್ತು, ಭೋಗ, ಭಾಗ್ಯಗಳ ಐಹಿಕ ಮೋಹ ಕಳಚಿಕೊಳ್ಳುತ್ತ ಅವಧೂತರ ಹಾಗೆ ಹೊಸದೊಂದು ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತಿದ್ದರು. ಅವರು ಕಷ್ಟಪಟ್ಟು ಗಳಿಸಿದ ಆಸ್ತಿ, ಮಹಡಿ ಮನೆ, ಮನೆಯವರು, ಬಂದು ಬಳಗ ಹೀಗೆ ಯಾರಿಗೂ ಈ ನೋವನ್ನು ಹಂಚಿಕೊಳ್ಳುವ ಶಕ್ತಿ ಇಲ್ಲ. ಸಂಪತ್ತಿಗೆ ಅವರ ನೋವನ್ನು ನಿವಾರಿಸುವ ಶಕ್ತಿ ಇಲ್ಲ. ಯಾವ ವೈದ್ಯನಿಗೂ ಇದರ ಮೂಲ ತಿಳಿಯಲಿಲ್ಲ! ಈ ಎದೆಹಿಂಡುವ ನೋವು ಒಂದು ರೂಪಕವಾಗಿ ಮತ್ತೆ ಮತ್ತೆ ಲಕ್ಷ್ಮೀಶ ತೋಳ್ಪಾಡಿ ಅವರ ‘‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ...’’ ಗ್ರಂಥದಲ್ಲಿ ಬಂದು ಬದುಕಿನ ಕ್ಷಣಿಕತೆ ಮತ್ತು ಲೋಕದ ನಿರಂತರತೆಯ ಬಗ್ಗೆ ಜ್ಞಾಪಿಸುತ್ತಲೇ ಇರುತ್ತದೆ. ಬದುಕಿನ ಬಗ್ಗೆ ಅದಮ್ಯ ಕಾಳಜಿಯನ್ನು ಹುಟ್ಟಿಸುತ್ತಲೇ ಇರುತ್ತದೆ. ಆದರೆ ಇವರ ಅವಸ್ಥೆ ನೋಡಿ ತಾಯಿ, ಹೆಂಡತಿ ಮತ್ತು ಮಗಳು ಕಂಗಾಲಾಗಿದ್ದರು. ಭಟ್ಟರು ಎದೆನೋವು ತಡೆಯದೆ ನೆಲಕ್ಕುರುಳಿ ಹೊರಳಾಡುತ್ತಿದ್ದರು. ದಿಕ್ಕು ತೋಚದೆ ಅಲೆಯುತ್ತಿದ್ದರು. ಹಾಗೆ ಅಲೆಯುವಾಗ ಅವರ ಊಟ ವಸತಿಯ ವ್ಯವಸ್ಥೆ ದೇವರೇ ಬಲ್ಲ. ಮನೆಯಲ್ಲಿ ದೈನಂದಿನ ಆಗು ಹೋಗುಗಳ ಜೊತೆ ಕೃಷಿ ಕಾರ್ಯ ಮತ್ತು ನೋವಿಗೆ ಮದ್ದು, ಹೀಗೆ ಎಲ್ಲ ಭಾರವನ್ನೂ ಹೊರುವುದು ಮನೆಯವರಿಗೆ ಕಷ್ಟಸಾಧ್ಯವಾಗಿತ್ತು. ಏನೆಲ್ಲ ಇದ್ದೂ ಇಲ್ಲದ ಹಾಗೆ ಅನಿಸುತ್ತಿತ್ತು!
ಈ ನೋವು ಮತ್ತು ಅಸಹಾಯಕತೆಯಿಂದಾಗಿ ಅವರ ಮನಸ್ಸು ಅರಳುತ್ತ ಅರಳುತ್ತ ವಿಶ್ವವ್ಯಾಪಿಯಾಯಿತು.ಆ ಅರಳುವಿಕೆಯಿಂದ ಉಂಟಾದ ಸುಗಂಧ ಇಡೀ ವಿಶ್ವವನ್ನೇ ವ್ಯಾಪಿಸುತ್ತಿರುವಂತೆ ಭಾಸವಾಗುವುದು. ರಾಮಚಂದ್ರಭಟ್ಟರು ಈ ನೋವನ್ನು ಹೊತ್ತುಕೊಂಡು ವಿಶ್ವದ ನೋವಿನ ನಿವಾರಣೆಗಾಗಿ ಚಿಂತಿಸುವ ಕ್ರಮವನ್ನು ಕಂಡುಕೊಂಡರು. ಆ ಚಿಂತನೆ ಎಷ್ಟೊಂದು ಆಳ ಮತ್ತು ವಿಸ್ತಾರವನ್ನು ಹೊಂದಿದೆ ಎಂದರೆ ಈ ಪೃಥ್ವಿ ಅದರೊಳಗೆ ನೆಮ್ಮದಿಯಿಂದ ಉಳಿದುಕೊಳ್ಳಬಹುದು.
ಅವರ ಮನಸ್ಸು ಅರಳಿದಾಗ ಹೊರ ಹೊಮ್ಮಿದ ಅಂತಃಕರಣದ ಪರಿಮಳ ಎಲ್ಲೆಡೆ ಹರಡುವಂತೆ ಮಾಡುವಲ್ಲಿ ಲಕ್ಷ್ಮೀಶ ತೋಳ್ಪಾಡಿ ಯಶಸ್ವಿಯಾಗಿದ್ದಾರೆ.
ತೋಳ್ಪಾಡಿ ಸಾಹಸ: ರಾಮಚಂದ್ರಭಟ್ಟರಂಥ ಅವಧೂತರನ್ನು ಸಂದರ್ಶಿಸಬೇಕಾದರೆ ವರ್ಷಗಟ್ಟಲೆ ಅವರ ಸಮಯ ಮತ್ತು ಮನಸ್ಥಿತಿಯ ಕಡೆಗೆ ಗಮನವಿರಿಸುತ್ತ ಅವಕಾಶ ಕಲ್ಪಿಸಿಕೊಂಡು ಸಂದರ್ಶಿಸಬೇಕಾಗುತ್ತದೆ. ಇಂತಹ ಕಠಿಣ ಸಾಹಸ ಮಾಡುವುದರ ಮೂಲಕ ನೆಟ್ಟಾರು ರಾಮಚಂದ್ರಭಟ್ಟ ಮತ್ತು ಬೆಳ್ಳಾರೆ ಇಸ್ಮಾಯೀಲ್ ಕುಂಞಪ್ಪರಂಥ ವ್ಯಕ್ತಿತ್ವಗಳನ್ನು ಕನ್ನಡ ಸಾರಸ್ವತ ಲೋಕದಲ್ಲಿ ಪ್ರವೇಶಿಸುವಂತೆ ಮಾಡಿದ್ದು ಲಕ್ಷ್ಮೀಶ ತೋಳ್ಪಾಡಿಯವರ ಸಾಹಸವಾಗಿದೆ. ಕನ್ನಡ ಸಾರಸ್ವತ ಲೋಕವನ್ನು ಈ ಎರಡೂ ವ್ಯಕ್ತಿತ್ವಗಳು ಇನ್ನಷ್ಟು ಶ್ರೀಮಂತಗೊಳಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಗ್ರಂಥ ನಾನು ಓದಿದ ಅತ್ಯಂತ ಮಹತ್ವದ ಗ್ರಂಥಗಳಲ್ಲಿ ಒಂದಾಗಿದೆ. ನೆಟ್ಟಾರು ರಾಮಚಂದ್ರಭಟ್ಟರ ವ್ಯಕ್ತಿತ್ವದ ಪರಿಚಯ ನನಗೆ ಈ ಗ್ರಂಥದ ಮೂಲಕ ಆಗದೆ ಹೋಗಿದ್ದರೆ ನಾನು ಬದುಕಿನಲ್ಲಿ ಬಹಳ ಮಹತ್ವದ್ದನ್ನು ಕಳೆದುಕೊಂಡವನಾಗಿರುತ್ತಿದ್ದೆ!
ನೆಟ್ಟಾರು ರಾಮಚಂದ್ರ ಭಟ್ಟರ ವ್ಯಕ್ತಿತ್ವದಲ್ಲಿ ಶರಣತ್ವವಿದೆ. ಅವರ ವ್ಯಕ್ತಿತ್ವ ಬಸವಣ್ಣನವರ ಆಶಯಗಳಿಂದ ತುಂಬಿಹೋಗಿದೆ. 12ನೇ ಶತಮಾನದ ಶರಣರ ವ್ಯಕ್ತಿತ್ವದ ದರ್ಶನ ರಾಮಚಂದ್ರಭಟ್ಟರ ಜೀವನವಿಧಾನದ ಮೂಲಕ ಇನ್ನೂ ಹೆಚ್ಚು ಸ್ಪಷ್ಟವಾಗಿ ನನ್ನ ಅರಿವಿಗೆ ಬರಲು ಸಾಧ್ಯವಾಯಿತು. ಆದ್ದರಿಂದ ಅವರ ಮಾತುಗಳಿಗೆ ಹಿನ್ನೆಲೆಯಾಗಿ ಬಸವಾದಿ ಶರಣರ ವಚನಗಳ ಸಾಲುಗಳು ನನ್ನ ಮನದಲ್ಲಿ ನಿಲ್ಲತೊಡಗಿದ ಕಾರಣ ತೋಳ್ಪಾಡಿ ಅವರ ಈ ಪುಸ್ತಕದ ಕುರಿತು ಬರೆಯಬೇಕಾಯಿತು.
‘‘ಅಧ್ಯಾತ್ಮ, ಕಾಲಕಾಲಕ್ಕೆ ನೆಮ್ಮದಿಯ ತಾಣಗಳನ್ನು ಅರಸುತ್ತ ವಲಸೆ ಹೋಗುವ ಮಾತಲ್ಲ. ಅಧ್ಯಾತ್ಮ ಎಂದರೆ ಇರುವಲ್ಲಿಯೆ ಅರಳುವುದು’’ ಎಂದು ಭಟ್ಟರು ಸಹಜವಾಗಿಯೆ ವ್ಯಾಖ್ಯಾನಿಸುತ್ತಾರೆ. ಅವರ ಅಧ್ಯಾತ್ಮ ಅನುಭವಜನ್ಯ ಆಗಿರುವುದರಿಂದ ಅದನ್ನು ಶರಣರು ಅಧ್ಯಾತ್ಮಕ್ಕೆ ಪರ್ಯಾಯವಾಗಿ ಸೃಷ್ಟಿಸಿದ ‘‘ಅನುಭಾವ’’ ಎನ್ನಲಡ್ಡಿಯಿಲ್ಲ. ಅನುಭವದ ಮೂಲಕವೇ ಅನುಭಾವದ ಎತ್ತರಕ್ಕೆ ಏರಲು ಸಾಧ್ಯ.‘‘ನಮ್ಮನ್ನು ನಾವು ನಿರ್ಲಕ್ಷ್ಯ ಮಾಡುವುದೇ ಅನುಭಾವ’’ ಎಂದು ಭಟ್ಟರು ಹೇಳುತ್ತಾರೆ.ಬಸವಣ್ಣನವರು ‘‘ನಿಮ್ಮ ನಾಮವಿಡಿದ ಅನಾಮಿಕ ನಾನು’’ ಎಂದು ಹೇಳಿದ್ದಾರೆ.ನಮ್ಮನ್ನು ಮರೆಯದೆ ಅನುಭಾವಿಯಾಗಲು ಸಾಧ್ಯವಿಲ್ಲ. ಮರೆಯುವಿಕೆಯಲ್ಲಿ ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಎಚ್ಚರಿಕೆ ಇದೆ. ‘‘ಕೂಡಲಸಂಗನ ಶರಣರು ಅಚ್ಚ ಲಿಂಗೈಕ್ಯರು’’ ಎಂದು ಬಸವಣ್ಣನವರು ಹೇಳುವಾಗ ಶರಣರು ಪರಿಪೂರ್ಣವಾಗಿ ಐಹಿಕ ಆಸೆಗಳಿಂದ ಮುಕ್ತರಾದವರು ಎಂಬುದನ್ನು ಸೂಚಿಸುತ್ತಾರೆ. ವಸ್ತುಮೋಹವನ್ನು ಕಳೆದುಕೊಂಡಾಗ ಮಾತ್ರ ಭಟ್ಟರು ಹೇಳಿದಂತೆ ನಮ್ಮನ್ನು ನಾವು ನಿರ್ಲಕ್ಷ ಮಾಡಲು ಸಾಧ್ಯವಾಗುವುದು. ಅದುವೇ ಅನುಭವದಿಂದ ಅನುಭಾವದೆಡೆಗೆ ಸಾಗಲು ಅನುವು ಮಾಡಿಕೊಡುವುದು. ಜಾತಿ, ಮತ, ಧರ್ಮ ಮತ್ತು ಕಟ್ಟಿಕೊಂಡ ಸಂಪ್ರದಾಯಗಳನ್ನೆಲ್ಲ ದೂರ ಸರಿಸಿ ಜೀವಕಾರುಣ್ಯದೊಂದಿಗೆ ಎಚ್ಚರವಾಗಿರುವುದು ಸಾಮಾನ್ಯ ಸಂಗತಿಯಲ್ಲ. ಈ ಎಚ್ಚರಿಕೆಯನ್ನು ಭಟ್ಟರು ಕೊನೆಯವರೆಗೂ ಕಾಯ್ದುಕೊಂಡು ಬಂದರು.
ಅವಧೂತ: ನೆಟ್ಟಾರು ರಾಮಚಂದ್ರ ಭಟ್ಟರು ನಮ್ಮ ಮಧ್ಯೆಯೆ ಸೂಫಿ, ಶರಣ, ದಾಸ, ಸಂತ, ಅನುಭಾವಿ ಹೀಗೆ ಎಲ್ಲವೂ ಒಳಗೊಂಡಂಥ ಅವಧೂತರಾಗಿ ಹೋದದ್ದು ಮತ್ತು ಅವರ ವ್ಯಕ್ತಿತ್ವ ನಮ್ಮ ಅರಿವಿಗೆ ಬಾರದೆ ಹೋದದ್ದು ಸಖೇದಾಶ್ಚರ್ಯದ ನೆನಪಾಗಿ ಉಳಿಯುತ್ತದೆ. ಭಟ್ಟರು ಉಪನಿಷತ್ತುಗಳನ್ನು ಮತ್ತು ವಚನಗಳನ್ನು ಓದಿದವರಲ್ಲ. ಆದರೆ ಅವರ ಪ್ರತಿ ಮಾತಿನಲ್ಲಿ ಉಪನಿಷತ್ತುಗಳ ವಿಶ್ವಪ್ರಜ್ಞೆ ಮತ್ತು ವಚನಗಳ ಅರಿವು-ಆಚಾರದ ಲೋಕಹಿತ ಪ್ರಜ್ಞೆ ಸಮ್ಮಿಳಿತವಾಗಿವೆ.
‘‘ಹ್ಹ.ಯಾರೊಬ್ಬನನ್ನಾದರೂ ನೀನು ನಿಜವಾಗಿಯೂ ಪ್ರೀತಿಸಿದ್ದಿಯೇನಯ್ಯಾ? ಪ್ರೀತಿಸಬಲ್ಲೆಯೇನು? ಒಬ್ಬನನ್ನೂ ಪ್ರೀತಿಸಲಾರದ್ದಕ್ಕೆ ನೀನು ಜನಾಂಗವನ್ನು ಪ್ರೀತಿಸುವ ಮಾತು ಆಡುತ್ತಿರುವೆ ಅಷ್ಟೆ. ಒಬ್ಬನನ್ನು ನೀನು ನಿಜವಾಗಿ ಪ್ರೀತಿಸಿದರೆ ಸಾಕು.’’ ಎಂದು ರಾಮಚಂದ್ರ ಭಟ್ಟರು ಗ್ರಂಥಕರ್ತರಿಗೆ ತಿಳಿಸುತ್ತಾರೆ.
‘‘ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು, ನೀನಲ್ಲದೆ ಮತ್ತಾರು ಇಲ್ಲಯ್ಯ ಕೂಡಲಸಂಗಮದೇವಾ, ಹಾಲಲದ್ದು, ನೀರಲದ್ದು.’’ಎಂದು ಬಸವಣ್ಣನವರು ಹೇಳಿದ್ದಾರೆ. ಇದು ಮಧುರಭಕ್ತಿಯ ಪರಾಕಾಷ್ಠೆ. ದೇವರ ಮೇಲಿನ ಪ್ರೀತಿಯನ್ನು ಮತ್ತು ನಂಬಿಕೆಯನ್ನು ಸಾಮಾಜೀಕರಣಗೊಳಿಸುವ ಪ್ರಕ್ರಿಯೆ ಇದು. ಎಲ್ಲರಲ್ಲೂ ದೇವರನ್ನೇ ಕಾಣುವುದು. ಆ ಮೂಲಕ ಎಲ್ಲರನ್ನೂ ಪ್ರೀತಿಸುವುದು. ದೇವರನ್ನಾಗಲೀ ಯಾರನ್ನಾಗಲಿ ನಿಜವಾಗಿ ಪ್ರೀತಿಸಿದಾಗ ಮಾತ್ರ ಆ ವ್ಯಕ್ತಿಯ ಪ್ರೀತಿ ವಿಶ್ವವಾಪಿಯಾಗುವುದು.
ಹೇಳುವ ಮತ್ತು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಉಪನಿಷತ್ತುಗಳ ಗುರು-ಶಿಷ್ಯರು ತಮ್ಮ ಭವಿಷ್ಯದ ಕುರಿತಾದ ಮಾತುಗಳನ್ನಾಡಿಲ್ಲ. ಇಡೀ ವಿಶ್ವಕ್ಕೆ ಬೇಕಾದ ಶಾಂತಿಯ ಮಾತುಗಳನ್ನು ಆಡಿದರು. ಅವರ ಮಧ್ಯೆ ಇಡೀ ವಿಶ್ವವೇ ಇತ್ತು. ರಾಮಚಂದ್ರಭಟ್ಟರು ಮತ್ತು ಇಸ್ಮಾಯೀಲ್ ಕುಂಞಪ್ಪ ಹೀಗೆ ಇದ್ದರು. ಅವರ ಮಧ್ಯೆ ಕೂಡ ವಿಶ್ವವೇ ಇತ್ತು.
ಇಸ್ಮಾಯೀಲ್ ಕುಂಞಪ್ಪ ಅವರಲ್ಲಿ ಈ ಒಳನೋಟ ಮೆಲ್ಲ ಮೆಲ್ಲನೆ ತೆರೆದುಕೊಳ್ಳಬೇಕೆಂಬ ಆಶಯದೊಂದಿಗೆ ರಾಮಚಂದ್ರಭಟ್ಟರು ಕುಂಞಪ್ಪ ಅವರನ್ನು ವಿಚಿತ್ರವಾಗಿ ಕಾಡುತ್ತಿದ್ದರು. ಈ ಕಾಡುವಿಕೆ ಭಕ್ತಿಪಂಥದ ಬಹುಮಹತ್ವದ ಅಂಗವಾಗಿ ವಿವಿಧ ರೂಪಗಳಲ್ಲಿ ಸಂತರ, ಸೂಫಿಸಂತರ, ದಾಸರ ಮತ್ತು ಶರಣರ ಬದುಕಿನಲ್ಲಿ ಕಾಣಿಸಿಕೊಳ್ಳುತ್ತದೆ.
ಕಾಡುವವ ದೇವರು; ಕಾಡಿಸಿಕೊಳ್ಳುವವ ಭಕ್ತ. ಈ ಕಾಡುವಿಕೆಯ ಉದ್ದೇಶ ಒಬ್ಬ ಮನುಷ್ಯನನ್ನು ಭವಿತ್ವದಿಂದ ಬಿಡಿಸಿ ಭಕ್ತನನ್ನಾಗಿಸುವುದೇ ಆಗಿದೆ. ಭವಿ ಎಂದರೆ ಪ್ರಾಪಂಚಿಕ ವಸ್ತುಗಳ ಮೋಹಕ್ಕೆ ಒಳಗಾದವನು. ಭಕ್ತ ಎಂದರೆ ಆ ಮೋಹದಿಂದ ಹೊರಬಂದವನು. ಹಾಗೆ ಹೊರಬಂದು, ಸಕಲ ಜೀವಿಗಳು ಈ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕುವ ವಾತಾವರಣದ ಸೃಷ್ಟಿಗಾಗಿ ತನ್ನನ್ನೇ ಸಮರ್ಪಿಸಿಕೊಂಡವನು. ಇದನ್ನು ತಿಳಿಸುವ ಕೆಲಸವನ್ನು ರಾಮಚಂದ್ರಭಟ್ಟರು ಮಾಡಿದ್ದಾರೆ. ಇಸ್ಮಾಯೀಲ್ ಕುಂಞಪ್ಪಎಲ್ಲವನ್ನೂ ಸಹಿಸಿಕೊಳ್ಳುತ್ತ ಭಟ್ಟರೊಡನೇ ಇರುತ್ತಾರೆ.
ಅದರದೊಂದು ಮಾದರಿ ಇದು:
‘‘ಕುಂಞಪ್ಪಾನಡಿ ಹೋಗೋಣ ಮಸೀದಿಗೆ.’’
‘‘ಮಸೀದಿಗೆ? ನೀವು?’’
‘‘ಹೌದು ಮಸೀದಿಗೆ. ಯಾಕೆ ಬರಬಾರದೆ? ನೀನಾಗಿಯೆ ಕರೆದುಕೊಂಡು ಹೋಗಬೇಕಾಗಿತ್ತು. ನೀನು ಕರೆಯಲಿಲ್ಲ. ಈಗ ನಾವಾಗಿಯೇ ಕೇಳುತ್ತಿದ್ದೇವೆ. ಕರೆದುಕೊಂಡು ಹೋಗು.’’
ಇಬ್ಬರೂ ಮಸೀದಿಗೆ ನಡೆದರು. ಅದು ನಮಾಝ್ನ ಹೊತ್ತು.
ಭಟ್ಟರು ಹೊರಗಡೆ ಜಗುಲಿಯಲ್ಲಿ ಕುಳಿತರು. ಕುಂಞಪ್ಪರಿಗೆ ಹೇಳಿದರು; ‘‘ನೀನು ಒಳಗೆ ಹೋಗಿ ನಮಾಝ್ ಮಾಡಿ ಬಾ. ನಾವಿಲ್ಲೇ ಇರುತ್ತೇವೆ.’’
ಹೀಗೆ ಬಹಳ ಕಾಲ ನಡೆಯಿತು. ಸೂಫಿಗಳ ಸ್ಮರಣೋತ್ಸವವಾದ ಉರೂಸ್ಗೆ ಇಬ್ಬರೂ ಜೊತೆಯಾಗಿ ಹೋಗುತ್ತಿದ್ದರು. ಭಟ್ಟರು ಮುಕ್ತವಾಗಿ ಇಸ್ಲಾಮಿನ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡುತ್ತಿದ್ದರು. ಆದರೆ ಇದರ ಪರಿಣಾಮ ಬೇರೆಯಾಗಿಯೇ ಕಾಣತೊಡಗಿತು. ‘ಕುಂಞಪ್ಪನೀವೇಕೆ ಅವರನ್ನು ನಮ್ಮ ಸಮಾಜಕ್ಕೆ ಕರೆತರಬಾರದು. ಅವರಿಗೆ ಇಸ್ಲಾಂ ಇಷ್ಟವಾದಂತಿದೆ. ತಾವಾಗಿ ಆಸಕ್ತಿ ತೋರಿಸುವವರನ್ನು ಕರೆದುಕೊಳ್ಳದಿದ್ದರೆ ತಪ್ಪಾಗುವುದಿಲ್ಲವೆ?’ ಎಂದು ಕುಂಞಪ್ಪರಿಗೆ ಪ್ರಶ್ನೆ ಕೇಳುವವರೂ ಕಾಣಿಸಿಕೊಂಡರು.
‘‘ಸಮಾಜದ ಈ ಪರಿಯ ಒತ್ತಡಗಳಿಗೆ ನನ್ನ ತಂದೆ ಕೊಂಚವೂ ಮಿಸುಕಾಡಲಿಲ್ಲ’’ ಎಂದು ಅವರ ಮಗ ಮೂಸಾ ಹೇಳಿದ್ದನ್ನು ತೋಳ್ಪಾಡಿ ದಾಖಲಿಸಿದ್ದಾರೆ. ‘ಮತಿಯ ಅಹಂಕಾರವೇ ಮತೀಯ ಅಹಂಕಾರ’ ಎಂದು ತೋಳ್ಪಾಡಿ ಮಾರ್ಮಿಕವಾಗಿ ಸೂಚಿಸಿದ್ದಾರೆ.
ಈ ರೋಗ ಇಡೀ ದೇಶದ ತುಂಬ ಹಬ್ಬಿದೆ. ಅಹಂಕಾರಿಗಳು ತಮ್ಮ ತಮ್ಮ ಧರ್ಮಗಳ ಹೆಸರಿನಲ್ಲಿ ಅಹಂಕಾರದ ವಿಷವನ್ನು ದೇಶದ ತುಂಬ ಹಬ್ಬಿಸುತ್ತಿದ್ದಾರೆ.
(ಮುಂದುವರಿಯುವುದು)