ಕನ್ನಡ ಸಾಹಿತ್ಯಕ್ಕೆ ಮುಂಬೈ ಕೊಡುಗೆ ಅನನ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಜ.7: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಶತಮಾನಗಳಿಂದಲೂ ನೆಲೆಸಿರುವ ಕನ್ನಡಿಗರು ಕನ್ನಡ ಭಾಷೆಯನ್ನು ಮರಾಠಿಗರೊಂದಿಗೆ ಸಮ್ಮಿಳಿತಗೊಳಿಸಿ ಅಖಂಡ ಕನ್ನಡತನಕ್ಕೆ ತಮ್ಮದೇ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಮಹಾರಾಷ್ಟ ರಾಜ್ಯದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂಬೈ ನಗರದಲ್ಲಿ ಕನ್ನಡದ ಹಲವು ಸಾಹಿತಿಗಳು ಬೆಳೆದು ಬಂದಿದ್ದು, ಅವರೆಲ್ಲರೂ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನುಪಮ. ಕನ್ನಡ ಸಾಹಿತ್ಯದಲ್ಲಿ ಮುಂಬೈನ ಪ್ರಭಾವ ತನ್ನದೇ ಅನನ್ಯತೆಯನ್ನು ಹೊಂದಿದೆ. ಇದಕ್ಕಾಗಿ ಕನ್ನಡಿಗರು ಮುಂಬೈಗೆ ಋಣಿಯಾಗಿದ್ದಾರೆಂದು ಹೇಳಿದರು.
ಅಂಧೇರಿ ಪಶ್ಚಿಮ ವಿಧಾನಸಭಾ ಶಾಸಕ ಅಮಿತ್ ಸಾಟಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬೈ ನಗರದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಸಹೋದರರಂತೆ ಬೆಳೆದು ಬಂದಿದ್ದು, ಕನ್ನಡಿಗರ ಬುದ್ದಿಶಕ್ತಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಮರಾಠಿ ಭಾಷೆ ಹಾಗೂ ಮುಂಬೈನಗರ ದೇಶದ ಎಲ್ಲ ಭಾಷಿಗರನ್ನು ಸೆಳೆದು ಎಲ್ಲ ಭಾಷೆಗಳ ಬೆಳವಣಿಗೆಗೆ ಸಹಕಾರಿ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕರ್ನಾಟಕ ಸರಕಾರವು ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ಅತಿಹೆಚ್ಚು ಅಂಕಗಳನ್ನು ಪಡೆದ 326 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ಕಸಾಪ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಉಪಾಧ್ಯ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಎಸ್‌ಎಸ್‌ಸಿ-258, ಎಚ್‌ಎಸ್‌ಸಿ 58 ಒಟ್ಟು 326 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಥಮ ಸ್ಥಾನ 12 ಸಾವಿರ ರೂ., ದ್ವಿತೀಯ 11 ಸಾವಿರ ರೂ.ಹಾಗೂ ತೃತೀಯ 10 ಸಾವಿರ ರೂ.ನಗದು ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಹಾಜರಾದ ವಿದ್ಯಾರ್ಥಿಗಳು ಹಾಗೂ ಅವರ ಇಬ್ಬರು ಪೋಷಕರಿಗೆ ಕಾರ್ಯಕ್ರಮಕ್ಕೆ ಬಂದು ಹೋಗುವ ಪ್ರಯಾಣ ವೆಚ್ಚವನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮವು ಮುಂಬೈನ ಅಂಧೇರಿಯಲ್ಲಿರುವ ಮೊಗವೀರ ಭವನದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಮುಂಬಯಿ ವಿಶ್ವ ವಿದ್ಯಾಲಯದ ಮುಖ್ಯಸ್ಥ ಡಾ.ಜಿ.ಎನ್. ಉಪಾಧ್ಯ ಮತ್ತು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಪೂರ್ಣಿಮಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪಿ.ಯು.ದಿನೇಶ್, ರತ್ನಾಕರ್ ಶೆಟ್ಟಿ, ಮೊಗವೀರ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಎಲ್.ಬಂಗೇರ, ಮೈಸೂರು ಅಸೋಸಿಯೇಷನ್ ಟ್ರಸ್ಟಿ ಡಾ. ಬಿ.ಆರ್.ಮಂಜುನಾಥ, ಮೋಗವೀರ ಪತ್ರಿಕೆ ಸಂಪಾದಕ ಅಶೋಕ್ ಸುವರ್ಣ ಹಾಗೂ ಮುಂಬಯಿ ಕನ್ನಡ ಸಂಘಟನೆಗಳ ಮುಖ್ಯಸ್ಥರು ಹಾಜರಿದ್ದರು.