ಮತ್ತೆ ಶುರುವಾಗಿದೆ ಅಡಕೆ ಬೆಲೆ ಏರಿಳಿತ: ಬೆಳೆಗಾರ ಕಂಗಾಲು
ಉತ್ತರ ಭಾರತದ ಗುಟ್ಕಾ ಕಂಪೆನಿಗಳಿಂದ ಕಡಿಮೆಯಾದ ಬೇಡಿಕೆ
ಶಿವಮೊಗ್ಗ, ಜ. 7: ಒಂದೆಡೆ ಅಡಕೆ ಕೊಯ್ಲು ನಡೆಯುತ್ತಿದ್ದು, ಮಾರುಕಟ್ಟೆಗೆ ಭಾರೀ ಪ್ರಮಾಣದ ಅಡಕೆ ಹರಿದುಬರುತ್ತಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏರಿಳಿತವಾಗಲಾರಂಭಿಸಿದೆ. ಕಳೆದ ಕೆಲ ದಿನಗಳಿಂದ ಧಾರಣೆ ಕುಸಿಯುತ್ತಿದೆ. ಇದು ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ.
ಶಿವಮೊಗ್ಗದ ಎಪಿಎಂಸಿ ಅಡಕೆ ಮಾರುಕಟ್ಟೆಯಲ್ಲಿಯೂ ಅಡಕೆ ದರ ಕುಸಿತವಾಗಲಾರಂಭಿಸಿದೆ. ಕಳೆದ ಕೆಲ ದಿನಗಳ ಹಿಂದೆ 36 ರಿಂದ 38 ಸಾವಿರ ರೂ.ಗಳಿದ್ದ ಕ್ವಿಂಟಾಲ್ ರಾಶಿ ಅಡಕೆ ಬೆಲೆ, ಪ್ರಸ್ತುತ 33,500 ರೂ. ಆಸುಪಾಸಿಗೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ದರ ಮತ್ತಷ್ಟು ಇಳಿಕೆಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ಹೇಳುತ್ತವೆ.
'ರೈತರ ಬಳಿ ಅಡಕೆ ಇಲ್ಲದಾಗ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಹೆಚ್ಚಿರುತ್ತದೆ. ಆದರೆ ರೈತರ ಬಳಿ ಅಡಕೆಯಿದ್ದಾಗ ಬೆಲೆ ಕುಸಿತವಾಗುತ್ತದೆ. ಇದು ಮಾರುಕಟ್ಟೆಯ ಗುಪ್ತ ಕಾರ್ಯತಂತ್ರವಾಗಿದೆ. ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಇದು ನಿಜಕ್ಕೂ ಖಂಡನಾರ್ಹ' ಎಂದು ರಾಜ್ಯ ರೈತ ಸಂಘಟನೆಯ ಮುಖಂಡ ಪಿ.ಡಿ.ಮಂಜಪ್ಪರವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಡಿಮೆಯಾದ ಡಿಮ್ಯಾಂಡ್: ಮಾರುಕಟ್ಟೆಗೆ ಆಗಮಿಸುತ್ತಿರುವ ಅಡಕೆಗೂ ಇಲ್ಲಿಂದ ಸಾಗಾಣೆಯಾಗುತ್ತಿರುವ ಅಡಕೆಯ ನಡುವೆ ವ್ಯತ್ಯಾಸವಿದೆ. ಆವಕ ಹೆಚ್ಚಿದ್ದರೆ, ಜಾವಕ ಕಡಿಮೆಯಿದೆ. ಅಡಕೆಗೆ ಡಿಮ್ಯಾಂಡ್ ಕಡಿಮೆಯಾಗಿರುವುದು, ಬೆಲೆ ಇಳಿಕೆಗೆ ಮುಖ್ಯ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಅಡಕೆಗೆ ಉತ್ತಮ ಧಾರಣೆ ಬರುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತವೆ.
ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚಿದೆ. ಇದರಿಂದ ಗುಟ್ಕಾ ಕಾರ್ಖಾನೆಗಳಲ್ಲಿ ಅಡಕೆ ನುರಿಯುವಿಕೆ ಕಡಿಮೆಯಾಗಿದೆ. ಇಲ್ಲಿಂದ ಸರಬರಾಜಾಗುತ್ತಿರುವ ಅಡಕೆ ಪ್ರಮಾಣ ಇಳಿಕೆಯಾಗಿದೆ. ಮತ್ತೊಂದೆಡೆ ಮಾರುಕಟ್ಟೆಗೆ ಆಗಮಿಸುತ್ತಿರುವ ಅಡಕೆ ಪ್ರಮಾಣ ಹೆಚ್ಚಿದೆ ಎಂದು ವರ್ತಕರೋರ್ವರು ತಿಳಿಸುತ್ತಾರೆ.
ಏರಿಳಿತ: ಷೇರು ಮಾರುಕಟ್ಟೆ ರೀತಿಯಲ್ಲಿ ಅಡಕೆ ಧಾರಣೆಯು ನಿರಂತರವಾಗಿ ಏರಿಳಿತ ಕಂಡುಬರುತ್ತಿದೆ. ಬೆಲೆಯಲ್ಲಿ ಸ್ಥಿರತೆಯಿಲ್ಲವಾಗಿದೆ. ಯಾವಾಗ ಬೆಲೆ ಏರುತ್ತದೆ, ಇಳಿಯುತ್ತದೆ ಎಂಬುವುದೇ ಗೊತ್ತಾಗುತ್ತಿಲ್ಲ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಷ್ಟ ಅನುಭವಿಸುವಂತಾಗಿದೆ ಎಂದು ರಾಜ್ಯ ಸರ್ಕಾರದ ಕೃಷಿ ಪಂಡಿತ ರೈತ ಪ್ರಶಸ್ತಿ ಪುರಸ್ಕೃತ, ಹಾಪ್‍ಕಾಮ್ಸ್ ನಿರ್ದೇಶಕ ಎನ್.ಎಂ.ಸೋಮಶೇಖರಪ್ಪರವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕಳಪೆ ಅಡಕೆ: ಅಡಕೆ ಬೆಲೆ ಕುಸಿತಕ್ಕೆ ಮಾರುಕಟ್ಟೆಗೆ ಅಕ್ರಮವಾಗಿ ಬರುತ್ತಿರುವ ಕಳಪೆ ಗುಣಮಟ್ಟದ ಅಡಕೆಯೂ ಕಾರಣವಾಗಿದೆ ಎಂಬ ಆರೋಪ ಬೆಳೆಗಾರರ ವಲಯದಿಂದ ಕೇಳಿಬರುತ್ತಿದೆ. ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಗೆ ಕಳಪೆ ಗುಣಮಟ್ಟದ ಅಡಕೆ ಬರುತ್ತಿದೆ. ಕಡಿಮೆ ಬೆಲೆಗೆ ಈ ಅಡಕೆಯನ್ನು ತರಿಸಿಕೊಂಡು ಉತ್ತಮ ಅಡಕೆಯ ಜೊತೆ ಮಿಶ್ರಣಗೊಳಿಸಲಾಗುತ್ತದೆ. ಇದನ್ನು ಉತ್ತರ ಭಾರತದ ಗುಟ್ಕಾ ಕಂಪೆನಿ ಸೇರಿದಂತೆ ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ. ಕಳಪೆ ಗುಣಮಟ್ಟದ ಅಡಕೆ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ಕಡಿಮೆ ಬೆಲೆಗೆ ಸಿಗುವ ಅಡಕೆಯಿಂದ ರೈತರ ಗುಣಮಟ್ಟದ ಅಡಕೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುವಂತಾಗಿದೆ ಎಂದು ಕೆಲ ಬೆಳೆಗಾರರು ಅಭಿಪ್ರಾಯಪಡುತ್ತಾರೆ.
ಒಟ್ಟಾರೆ ಇತ್ತೀಚೆಗೆ ಅಡಕೆ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ಬೆಲೆ ಅಸ್ಥಿರತೆಯೂ ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅಕ್ಷರಶಃ ಷೇರು ಮಾರುಕಟ್ಟೆಯ ರೀತಿಯಲ್ಲಿ ಅಡಕೆ ಬೆಲೆ ಏರಿಳಿತವಾಗಲಾರಂಭಿಸಿದೆ. ಬೆಲೆ ಏರಿಕೆ-ಇಳಿಕೆಯ ಹಿಂದೆ ಕೆಲ 'ಕಾಣದ ಕೈಗಳ' ಷಡ್ಯಂತ್ರವಿದೆ ಎಂಬ ಆರೋಪ ಇತ್ತೀಚೆಗೆ ಭಾರೀ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿರುವುದಂತೂ ಸತ್ಯವಾಗಿದೆ.
ಅಡಕೆ ಆವಕ ಹೆಚ್ಚಿದೆ : ಎಪಿಎಂಸಿ ಅಧ್ಯಕ್ಷ ಕೆ.ಪಿ.ದುಗ್ಗಪ್ಪಗೌಡ
ಪ್ರಸ್ತುತ ಶಿವಮೊಗ್ಗ ಮಾರುಕಟ್ಟೆಗೆ ಆಗಮಿಸುತ್ತಿರುವ ಅಡಕೆ ಹೆಚ್ಚಿದೆ. ಪ್ರತಿನಿತ್ಯ ಸುಮಾರು 3000 ದಿಂದ 4000 ಚೀಲ ಅಡಕೆ ಮಾರುಕಟ್ಟೆಗೆ ಬರುತ್ತಿದೆ. ಆದರೆ ಮಾರುಕಟ್ಟೆಯಿಂದ ಹೊರಹೋಗುತ್ತಿರುವ ಅಡಕೆ ಪ್ರಮಾಣ 2500 ರಿಂದ 3000 ಚೀಲದಷ್ಟಿದೆ. ಪೂರೈಕೆ ಜಾಸ್ತಿಯಾಗಿ ಬೇಡಿಕೆ ಕಡಿಮೆಯಾಗಿರುವುದು ಅಡಕೆ ಧಾರಣೆ ಏರಿಳಿತಕ್ಕೆ ಕಾರಣವಾಗಿರಬಹುದು. ಕಳಪೆ ಗುಣಮಟ್ಟದ ಅಡಕೆ ನಿಯಂತ್ರಣದತ್ತ ಗಮನಹರಿಸಲಾಗಿದೆ. ವರ್ತಕರಿಗೂ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಕೆ.ಪಿ.ದಗ್ಗಪ್ಪಗೌಡರವರು ತಿಳಿಸುತ್ತಾರೆ.
ಸರ್ಕಾರ ಗಮನಹರಿಸಲಿ: ನಿರ್ದೇಶಕ ಎನ್.ಎಂ.ಸೋಮಶೇಖರಪ್ಪ
ಇತ್ತೀಚೆಗೆ ಅಡಕೆ ಧಾರಣೆಯಲ್ಲಿ ಸ್ಥಿರತೆಯೇ ಇಲ್ಲವಾಗಿದೆ. ಷೇರು ಮಾರುಕಟ್ಟೆ ರೀತಿಯಲ್ಲಿ ಧಾರಣೆ ಏರಿಳಿತವಾಗುತ್ತಿದೆ. ಇದೀಗ ಅಡಕೆ ಕೊಯ್ಲು ಆರಂಭವಾಗಿದೆ. ರೈತರು ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಅಡಕೆ ತರುತ್ತಿದ್ದಾರೆ. ಆದರೆ ಬೆಲೆ ಇಳಿಕೆಯಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಅಡಕೆ ಧಾರಣೆ ಸ್ಥಿರತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ಹಾಪ್‍ಕಾಮ್ಸ್ ನಿರ್ದೇಶಕ, ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎನ್.ಎಂ.ಸೋಮಶೇಖರಪ್ಪರವರು ಆಗ್ರಹಿಸುತ್ತಾರೆ.
ಕಳಪೆ ಅಡಕೆ ಕಾರಣ: ರೈತ ಮುಖಂಡ ಪಿ.ಡಿ.ಮಂಜಪ್ಪ
ಯಾರೂ ಏನೂ ಬೇಕಾದರೂ ಹೇಳಬಹುದು. ಶಿವಮೊಗ್ಗ ಎಪಿಎಂಸಿಗೆ ಭಾರೀ ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯಗಳಿಂದ ಕಳಪೆ ಗುಣಮಟ್ಟದ ಅಡಕೆ ಅಕ್ರಮವಾಗಿ ಬರುತ್ತಿದೆ. ಅತ್ಯಲ್ಪ ಬೆಲೆಗೆ ಸಿಗುವ ಈ ಅಡಕೆಯನ್ನು ತಂದು, ಗುಣಮಟ್ಟದ ಅಡಕೆ ಜೊತೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಈ ದಂಧೆಯ ಕಾರಣದಿಂದ ಅಡಕೆಗೆ ಬೆಲೆ ಕುಸಿತವಾಗುವಂತಾಗಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಪಿ.ಡಿ.ಮಂಜಪ್ಪರವರು ಆರೋಪಿಸುತ್ತಾರೆ.