ಜಟಿಲಗೊಳ್ಳುತ್ತಲೇ ಸಾಗಿರುವ ಜಿಎಸ್‌ಟಿ ಒಗಟು
ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಕೇವಲ ಚುನಾವಣಾ ಸಂಗತಿಯಾಗುಳಿಯದೆ ಪ್ರಗತಿಯನ್ನು ಸಾಧಿಸಬಹುದೇ?
ಭಾರತದ ಸಂದರ್ಭದಲ್ಲಿ ಒಂದು ಪಕ್ಷವು ತನ್ನನ್ನು ತಾನು ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದ ಧೀರನೆಂದೂ, ಮತ್ತೊಂದು ಪಕ್ಷವು ಜಿಎಸ್‌ಟಿ ವ್ಯವಸ್ಥೆಯನ್ನು ಸೃಜನಶೀಲವಾಗಿ ಮಾರ್ಪಾಡು ಮಾಡುವ ಯೋಜನೆಯಿರುವ ಜಾಣನೆಂದೂ ಕೊಚ್ಚಿಕೊಳ್ಳುತ್ತಿದ್ದು, ಎರಡೂ ಬಣಗಳು ಇಡೀ ಜಿಎಸ್‌ಟಿ ವ್ಯವಸ್ಥೆಯನ್ನೇ ಹಿಂಪಡೆಯುವ ಧೈರ್ಯ ಮಾಡಲಾರವು. ಆದರೆ ಅದೇ ಸಮಯದಲ್ಲಿ, ಪ್ರಭುತ್ವದ ಒಕ್ಕೂಟ ತತ್ವಕ್ಕೂ ಅದು ಅಪಾಯವನ್ನೊಡ್ಡುತ್ತಿದೆ.
ಭಾರತದಲ್ಲಿ ಜಿಎಸ್‌ಟಿ ವ್ಯವಸ್ಥೆಯು 2017ರ ಜುಲೈನಲ್ಲಿ ಜಾರಿಗೆ ಬಂದ ನಂತರ ಅದು 400 ಆದೇಶಗಳಿಗೆ ಹಾಗೂ ತಿದ್ದುಪಡಿಗಳಿಗೆ ಗುರಿಯಾಗಿದೆ. ಅವುಗಳಲ್ಲಿ ಬಹುಪಾಲು ಆದೇಶ ಮತ್ತು ತಿದ್ದುಪಡಿಗಳು ಜಿಎಸ್‌ಟಿಯನ್ನು ಪಾಲಿಸುವಲ್ಲಿ ಎದುರಾದ ಜಟಿಲ ಮತ್ತು ಸಂಕೀರ್ಣಗಳನ್ನು ಸರಳೀಕರಿಸುವುದಕ್ಕೆ ಸಂಬಂಧಪಟ್ಟವೇ ಆಗಿವೆ. ಇದೀಗ 2019ರ ಚುನಾವಣೆಗಳು ಸಮೀಪ ಬರುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಗಳೆರಡೂ ಜಿಎಸ್‌ಟಿ ವ್ಯವಸ್ಥೆಯಲ್ಲಿ ಹಲವಾರು ಮಾರ್ಪಾಡುಗಳನ್ನು ತರುವ ಮಾತುಗಳನ್ನಾಡುತ್ತಿವೆ. ಬಿಜೆಪಿ ಸರಕಾರವು ಅಸ್ತಿತ್ವದಲ್ಲಿರುವ ನಲವತ್ತು ಬಗೆಯ ಸರಕು ಮತ್ತು ಸೇವೆಗಳ ವಿಸ್ತೃತ ವರ್ಗೀಕರಣದಲ್ಲಿ ಈಗಾಗಲೇ 23 ವರ್ಗೀಕರಣದಲ್ಲಿರುವ ಸರಕು ಮತ್ತು ಸೇವೆಗಳನ್ನು ಶೇ.18 ಮತ್ತು ಅದಕ್ಕಿಂತ ಕಡಿಮೆ ಸ್ತರದ ತೆರಿಗೆ ವಲಯಕ್ಕೆ ವರ್ಗಾಯಿಸಿದೆ. ಮಾಧ್ಯಮಗಳ ವರದಿಯ ಪ್ರಕಾರ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಿಎಸ್‌ಟಿಯ ಸರಳೀಕೃತ ಮಾದರಿಯನ್ನು ಮತ್ತು ಒಂದೇ ತೆರಿಗೆ ಸ್ತರದ ವ್ಯವಸ್ಥೆಯನ್ನು ಜಾರಿ ಮಾಡುವುದಾಗಿ ಭರವಸೆಯನ್ನು ನೀಡಿದೆ. ಆದರೆ ಈಗಾಗಲೇ ಜಾರಿ ಮಾಡಿರುವ ಅಥವಾ ಭರವಸೆ ನೀಡಲಾಗಿರುವ ಈ ಎಲ್ಲಾ ಮಾರ್ಪಾಡುಗಳು ಜಿಎಸ್‌ಟಿ ವ್ಯವಸ್ಥೆಯಲ್ಲೇ ಅಂತರ್ಗತವಾಗಿದೆಯೆಂದು ಆರೋಪಿತವಾಗಿರುವ ಮೂಲಭೂತ ಸಂಕೀರ್ಣತೆಯನ್ನು ಹೇಗೆ ಸರಳೀಕರಿಸ ಬಹುದೆಂಬುದು ಮಾತ್ರ ಅಸ್ಪಷ್ಟವಾಗಿಯೇ ಉಳಿದಿದೆ. ಭಾರತದ ವಿತ್ತೀಯ ಒಕ್ಕೂಟ ತತ್ವ, ಅನುಸರಣೆ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಸಂಘಟಿತ ವಲಯದ ಸಣ್ಣ ವ್ಯಾಪಾರ ಮತ್ತು ಉದ್ದಿಮೆಗಳ ಭವಿಷ್ಯವೇನೆಂಬ ಮಹತ್ವದ ವಿಷಯಗಳು ಮಾತ್ರ ಬಗೆಹರಿಯದ ಪ್ರಶ್ನೆಗಳಾಗಿಯೇ ಉಳಿದುಕೊಂಡಿವೆ.
ಚುನಾವಣಾ ಸಂದರ್ಭಗಳಲ್ಲಿ ತೆರಿಗೆ ಸುಧಾರಣೆಯ ವಿಷಯಗಳನ್ನು ಒಂದು ಚಿಮ್ಮುಹಲಗೆಯನ್ನಾಗಿ ಬಳಸಿಕೊಳ್ಳುವುದು ಹೊಸದೇನಲ್ಲ. ಇತ್ತೀಚಿನ ದಿನಗಳಲ್ಲಿ ಮಲೇಶ್ಯಾ ದೇಶವು ತನ್ನ ಸರಕಾರದ ಆದಾಯ ಗಳಿಕೆಯಲ್ಲಿ ಶೇ.20ರಷ್ಟು ಭಾಗವು ಜಿಎಸ್‌ಟಿ ಮಾದರಿ ತೆರಿಗೆ ವ್ಯವಸ್ಥೆಯಿಂದಲೇ ಗಳಿಕೆಯಾಗುತ್ತಿದ್ದರೂ, ಜನರ ಮಡುಗಟ್ಟುತ್ತಿದ್ದ ಅಸಮಾಧಾನವನ್ನು ಹೋಗಲಾಡಿಸಲು ಆ ತೆರಿಗೆ ವ್ಯವಸ್ಥೆಯನ್ನು ಹಿಂಪಡೆದಿದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆದರೆ ಭಾರತದಂತಹ ದೇಶದಲ್ಲಿ ಜಿಎಸ್‌ಟಿ ವ್ಯವಸ್ಥೆಯನ್ನು ಹಿಂಪಡೆಯುವುದಕ್ಕೆ ತೆರಬೇಕಾದ ಬೆಲೆಯೇನು ಎಂಬುದನ್ನು ಊಹಿಸಿಕೊಳ್ಳುವುದೂ ಸಹ ಕಷ್ಟ. ಭಾರತದ ಸಂದರ್ಭದಲ್ಲಿ ಒಂದು ಪಕ್ಷವು ತನ್ನನ್ನು ತಾನು ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದ ಧೀರನೆಂದೂ, ಮತ್ತೊಂದು ಪಕ್ಷವು ಜಿಎಸ್‌ಟಿ ವ್ಯವಸ್ಥೆಯನ್ನು ಸೃಜನಶೀಲವಾಗಿ ಮಾರ್ಪಾಡು ಮಾಡುವ ಯೋಜನೆಯಿರುವ ಜಾಣನೆಂದೂ ಕೊಚ್ಚಿಕೊಳ್ಳುತ್ತಿದ್ದು, ಎರಡೂ ಬಣಗಳು ಇಡೀ ಜಿಎಸ್‌ಟಿ ವ್ಯವಸ್ಥೆಯನ್ನೇ ಹಿಂಪಡೆಯುವ ಧೈರ್ಯ ಮಾಡಲಾರವು. ಆದರೆ ಅದೇ ಸಮಯದಲ್ಲಿ, ಪ್ರಭುತ್ವದ ಒಕ್ಕೂಟ ತತ್ವಕ್ಕೂ ಅದು ಅಪಾಯವನ್ನೊಡ್ಡುತ್ತಿದೆ.
ಕಾಂಗ್ರೆಸ್ ಪಕ್ಷದ ಆರ್ಥಿಕ ವಿಷಯಗಳ ವಕ್ತಾರರಾದ ಗೌರವ್ ವಲ್ಲಭ್ ಅವರ ಪ್ರಕಾರ ಜಿಎಸ್‌ಟಿ (2.0)ಯನ್ನು ಮೂಲಭೂತ ಮಾರ್ಪಾಡಿನೊಂದಿಗೆ ಜಾರಿ ಮಾಡಲು ಹೊಸದೊಂದು ಸಾಂವಿಧಾನಾತ್ಮಕ ತಿದ್ದುಪಡಿಯ ಅಗತ್ಯವಿಲ್ಲ. ಏಕೆಂದರೆ ಅಗತ್ಯವಿರುವ ಮಾರ್ಪಾಡುಗಳನ್ನು ಜಾರಿಗೆ ತರುವ ಅಧಿಕಾರ ಜಿಎಸ್‌ಟಿ ಪರಿಷತ್ತಿಗೇ ಇದೆ ಎಂಬುದು ಅವರ ಅಭಿಮತ. ಇದು ಸಹ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ರಾಜ್ಯಗಳಿಗಿರುವ ಸಂವಿಧಾನದತ್ತ ವಿತ್ತೀಯ ಸ್ವಾಯತ್ತೆಯ ಬಗ್ಗೆ ತೋರುತ್ತಲೇ ಬಂದಿರುವ ನಿರ್ಲಕ್ಷದ ಧೋರಣೆಯನ್ನೇ ಪ್ರತಿಧ್ವನಿಸುತ್ತದೆ. ಆದರೆ ಬೇರೆಬೇರೆ ರಾಜ್ಯಗಳ ಆರ್ಥಿಕ ಪರಿಸ್ಥಿತಿಗಳು ಮತ್ತು ಸಮಸ್ಯೆಗಳೂ ಸಹ ಭಿನ್ನಭಿನ್ನವಾಗಿಯೇ ಇವೆ ಎಂಬುದನ್ನು ಮರೆಯಬಾರದು. ಹೀಗಾಗಿ, ವಿದ್ಯುತ್, ರಿಯಲ್ ಎಸ್ಟೇಟ್ ಮತ್ತು ಪೆಟ್ರೋಲಿಯಂ ಇತ್ಯಾದಿಗಳನ್ನು ಜಿಎಸ್‌ಟಿ ಪರಿಧಿಯೊಳಗೆ ತರುವುದು ಮತ್ತು ಸರಕು ಮತ್ತು ಸೇವೆಗಳನ್ನು ಸಮಾನವಾದ ಸಂಯೋಜನಾ ಸ್ಕೀಮಿನೊಳಗೆ (ಕಾಂಪೊಸಿಷನ್ ಸ್ಕೀಮ್) ತಂದುಕೊಳ್ಳುವುದು ಪಂಜಾಬಿಗೆ ಅನುಕೂಲಕಾರಿಯಾಗಿರಬಹುದು. ಆದರೆ ಇತರ ರಾಜ್ಯಗಳಿಗೆ ಹಾಗೆಯೇ ಇರಬೇಕೆಂದೇನಿಲ್ಲ.
ಹಿಂದಿ ಹೃದಯಭಾಗದ ಮೂರು ರಾಜ್ಯಗಳ ಶಾಸನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಗಳಿಸಿರುವ ವಿಜಯವು ಜಿಎಸ್‌ಟಿ ಪರಿಷತ್ತಿನೊಳಗೆ ಅಧಿಕಾರದ ಸಮತೋಲನವನ್ನು ಸ್ವಲ್ಪಮಟ್ಟಿಗೆ ಬಿಜೆಪಿ/ಎನ್‌ಡಿಎಗೆ ವಿರುದ್ಧವಾಗಿಸಿದೆ. ಆದರೆ ಈ ಸಣ್ಣ ಬದಲಾವಣೆಯಿಂದಲೇ ಜಿಎಸ್‌ಟಿಯ ರಚನೆಯನ್ನು ಆಮೂಲಾಗ್ರವಾಗಿ ಬದಲಿಸುವ ಭರವಸೆ ನೀಡುವುದು ಉತ್ಪ್ರೇಕ್ಷೆಯ ಮಾತು. ಒಂದು ವೇಳೆ 2019ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದರೂ ಜಿಎಸ್‌ಟಿಯೊಳಗೆ ಯಾವುದೇ ಬದಲಾವಣೆಯನ್ನು ತರಬೇಕೆಂದರೂ ಅದಕ್ಕೆ ಜಿಎಸ್‌ಟಿ ಪರಿಷತ್ತಿನಲ್ಲಿ 3/4 ಬಹುಮತದ ಅಗತ್ಯವಿದ್ದು, ರಾಜ್ಯ ಸರಕಾರಗಳ ಪಾತ್ರವೇ ಪ್ರಮುಖವಾಗಿ ಮುಂದುವರಿಯಲಿದೆ. ಅದೇನೇ ಇದ್ದರೂ ರಾಜ್ಯ ಸರಕಾರಗಳು ಜಿಎಸ್‌ಟಿ ಕಾಯ್ದೆಯನ್ನು ತಮ್ಮ ತಮ್ಮ ಶಾಸನಸಭೆಗಳಲ್ಲಿ ಅನುಮೋದಿಸಿವೆ. ಅದರಲ್ಲೂ ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗಾಗುವ ಆದಾಯ ನಷ್ಟವನ್ನು ಕೇಂದ್ರ ಸರಕಾರವೇ ತುಂಬಿಕೊಡುವ ಭರವಸೆಯೂ ಜಿಎಸ್‌ಟಿ ಕಾಯ್ದೆಯ ಭಾಗವಾಗಿದೆ. ಹೀಗಾಗಿ ಈ ವಿಷಯದಲ್ಲಿ ಈಗಾಗಲೇ ಒಕ್ಕೂಟ ತತ್ವವು ಮಸುಕಾಗಿಬಿಟ್ಟಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಈ ರಾಜಿ ಒಪ್ಪಂದವು ಮತ್ತೊಂದು ಪರ್ಯಾಯ ಸತ್ಯವನ್ನು ಸೂಚಿಸುತ್ತಿದೆ: ಜಿಎಸ್‌ಟಿ ವ್ಯವಸ್ಥೆಯು ಉಂಟು ಮಾಡಿರುವ ಪರಿಣಾಮಗಳ ಬಗ್ಗೆ ರಾಜಕಾರಣಿಗಳಲ್ಲಿ ಮತ್ತು ಅದನ್ನು ಜಾರಿಗೆ ತಂದಿರುವವರಲ್ಲೇ (ಎನ್‌ಡಿಎ ಸರಕಾರ) ಗೊಂದಲವಿದೆ ಹಾಗೂ ಜಿಎಸ್‌ಟಿಯ ಪರಿಣಾಮಗಳ ನಿಚ್ಚಳತೆಯನ್ನು ಮರೆಮಾಡುತ್ತ ಉದ್ಭವಿಸಿರುವ ದ್ವಂದ್ವದ ಹೊರೆಯನ್ನು ತಮ್ಮ ಮತಬ್ಯಾಂಕುಗಳೇ ಹೊರುವಂತೆ ಮಾಡುವ ರಾಜಕೀಯ ತಂತ್ರವನ್ನೂ ಇದು ಸೂಚಿಸುತ್ತದೆ. ಉದಾಹರಣೆಗೆ ಜಿಎಸ್‌ಟಿ ಮತ್ತು ಸಬ್ಸಿಡಿ ಕಡಿತಗಳ ಜಂಟಿ ಪರಿಣಾಮಗಳಿಂದಾಗಿ ಪ್ರತಿಯೊಬ್ಬ ಎಲ್‌ಪಿಜಿ ಗ್ರಾಹಕರು ಪ್ರತಿ ಸಿಲಿಂಡರಿಗೆ 2017ರ ಜುಲೈನಿಂದ 32 ರೂ.ಗಳನ್ನು ಹೆಚ್ಚುವರಿಯಾಗಿ ನೀಡಬೇಕಾಯಿತು. ನಂತರ ತೆರಿಗೆ ಸರಳೀಕರಣದ ಹೆಸರಿನಲ್ಲಿ, ಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ, 2019ರ ಜನವರಿಯಿಂದ ರಿಯಾಯಿತಿ ದರದ ಸಿಲಿಂಡರಿನ ಬೆಲೆಯಲ್ಲಿ 120.50 ರೂ.ಗಳ ಮತ್ತು ರಿಯಾಯಿತಿ ರಹಿತ ಸಿಲಿಂಡರಿನ ಬೆಲೆಯಲ್ಲಿ 5.90 ರೂ.ಗಳ ಕಡಿತವನ್ನು ಘೋಷಿಸಲಾಗಿದೆ. ಇಡೀ ಆರ್ಥಿಕತೆಯನ್ನು ಮತ್ತು ಜನತೆಯನ್ನು ಒಂದೂವರೆ ವರ್ಷಗಳಕಾಲ ಜಿಎಸ್‌ಟಿ ಜಾರಿಯ ಹೊರೆಯಲ್ಲಿ ನರಳುವಂತೆ ಮಾಡಿದ ನಂತರ ಇದೀಗ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಇಡೀ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸುವ ಭರವಸೆಗಳನ್ನು ನೀಡಲಾಗುತ್ತಿದೆ. ಹಾಗೆ ನೋಡಿದರೆ, ಭಾರತದಂಥ ವೈವಿಧ್ಯಮಯ ಆರ್ಥಿಕತೆ ಮತ್ತು ರಾಜಕೀಯವಿರುವ ದೇಶದಲ್ಲಿ ಜಿಎಸ್‌ಟಿಯನ್ನು ಜಾರಿಗೊಳಿಸುವುದು ಸುಲಭದ ಕೆಲಸವೇನಲ್ಲ. ಹೀಗಾಗಿ ಅಂಥ ವ್ಯವಸ್ಥೆಯನ್ನು ಜಾರಿ ಮಾಡುವಾಗ ತಪ್ಪಾಗುವುದು ಮತ್ತು ಅದನ್ನು ಸರಿತಿದ್ದಿಕೊಳ್ಳುವುದು ಸಹಜವಾದ ಪ್ರಕ್ರಿಯೆಯೇ ಆಗಿದೆ. ಈ ನಿಟ್ಟಿನಲ್ಲಿ ಎನ್‌ಡಿಎ ಸರಕಾರದ ಧೈರ್ಯ ಮತ್ತು ಪ್ರಯತ್ನಗಳೆರಡನ್ನೂ ಮೆಚ್ಚಿಕೊಳ್ಳಬೇಕು. ಆದರೆ ಅಂಥ ಪ್ರಯೋಗಗಳ ಹಿಂದಿನ ರಾಜಕೀಯ ಉದ್ದೇಶಗಳ ಸಂಗತಿಯೇನು? ಜಿಎಸ್‌ಟಿಯಂಥ ತೆರಿಗೆ ವ್ಯವಸ್ಥೆಯು ಭಾರತದ ಪ್ರಜಾಸತ್ತೆಯ ಮೂಲಧಾರೆಗೆ ವ್ಯತಿರಿಕ್ತವಾಗಬಹುದೆಂಬ ಕಾಳಜಿಯಿಂದ ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಪಕ್ಷಗಳು ಜಿಎಸ್‌ಟಿ ಮಾದರಿ ತೆರಿಗೆ ವ್ಯವಸ್ಥೆಯನ್ನು ಜಾರಿಮಾಡುವುದನ್ನು ಮುಂದೂಡುತ್ತಲೇ ಬಂದಿದ್ದವು. ಅಂಥಾ ಸಂದರ್ಭದಲ್ಲಿ ಎನ್‌ಡಿಎ ಸರಕಾರವು ಜಿಎಸ್‌ಟಿ ವ್ಯವಸ್ಥೆಯನ್ನು ಅವಸರದಿಂದ ಜಾರಿ ಮಾಡಿದ್ದೂ ಅಲ್ಲದೆ ಅದನ್ನು ದೇಶವು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಏಕೈಕ ಮಂತ್ರದಂಡವೆಂದು ಪ್ರಚಾರಕ್ಕಿಳಿದದ್ದು ಅತ್ಯಂತ ವಿವೇಚನಾರಹಿತವಾಗಿತ್ತು. ಜಿಎಸ್‌ಟಿ ಜಾರಿಯಿಂದ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆಂದು, ಹಣದುಬ್ಬರ ಇಳಿಕೆಯಾಗುತ್ತದೆಂದೂ, ಮತ್ತು ಹೆಚ್ಚಿನ ಆರ್ಥಿಕ ಅಭಿವೃದ್ಧಿಯಾಗುತ್ತದೆಂದೂ ಸರಕಾರವು ಪ್ರಚಾರ ಮಾಡುತ್ತಾ ಬಂದಿದೆ. ಆದರೆ ಒಂದು ಆರ್ಥಿಕ ವಿವೇಚನಾ ದೃಷ್ಟಿಯಿಂದ ನೋಡಿದರೆ ಅವೆಲ್ಲವೂ ಪರಸ್ಪರ ಹೆಚ್ಚು ಸಂಬಂಧವಿರದ ವಿಷಯಗಳೇ ಆಗಿವೆ. ಇದರ ಹಿಂದೆ ಎಲ್ಲಾ ಸಮಸ್ಯೆಗಳಿಗೂ ಒಂದೇ ಬಗೆಯ ಪರಿಹಾರಗಳನ್ನು ನೀಡುವ ನೀತಿಯ ಮೂಲಕ ರಾಜಕೀಯ-ಆರ್ಥಿಕ ಯಾಜಮಾನ್ಯವನ್ನು ಸಾಧಿಸಿಕೊಳ್ಳಬೇಕೆಂದಿರುವ ಬಿಜೆಪಿಯ ಗುಪ್ತ ಉದ್ದೇಶವಿದೆ. ಇದು ಹೆಚ್ಚು ಆತಂಕಕಾರಿಯಾದ ವಿಷಯವಾಗಿದೆ. ಉದಾಹರಣೆಗೆ ಸಣ್ಣ ಉದ್ದಿಮೆಗಳು ತಮ್ಮ ಕಾರ್ಯವ್ಯಾಪ್ತಿ ಮತ್ತು ಕಾರ್ಯ ಚಟುವಟಿಕೆಗಳಲ್ಲಿ ದೊಡ್ಡ ಉದ್ದಿಮೆಗಳನ್ನೇ ಹೋಲುತ್ತವೆಯೆಂದು ಎನ್‌ಡಿಎ ಸರಕಾರದ ತಜ್ಞರು ಭಾವಿಸುತ್ತಾರೆ. ಈ ಕಾರಣದಿಂದಾಗಿ ಸಣ್ಣ ಉದ್ದಿಮೆಗಳು ಹೊರಲಾಗದಷ್ಟು ಆಡಳಿತಾತ್ಮಕ ಭಾರದಿಂದ ನರಳುವಂತಾಗಿದೆ. ಇದು ಸಣ್ಣ ಉದ್ದಿಮೆಗಳನ್ನು ನಷ್ಟಕ್ಕೆ ಗುರಿಮಾಡುತ್ತಾ ಸಂಘಟಿತ ಕ್ಷೇತ್ರಗಳ ವಿಸ್ತರಣೆಗೆ ಅನುವುಮಾಡಿಕೊಟ್ಟಿದೆ ಹಾಗೂ ಆ ಕ್ಷೇತ್ರದಲ್ಲಿ ಆದಾಯ ಮತ್ತು ನಿರುದ್ಯೋಗಗಳ ಬಗ್ಗೆ ಇದ್ದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಒಂದು ಪಕ್ಷದ ರಾಜಕೀಯ ಇಚ್ಛಾಶಕ್ತಿಯ ಬಗೆಗಿನ ವಿಶ್ವಾಸಾರ್ಹತೆಯು ಅಸ್ತಿತ್ವದಲ್ಲಿರುವ ಅನಿಶ್ಚಿತತೆಗಳನ್ನು ಅವು ಎಷ್ಟರಮಟ್ಟಿಗೆ ಬಗೆಹರಿಸಬಲ್ಲವು ಎಂಬುದರ ಮೂಲಕ ಹೆಚ್ಚಾಗಬಹುದೇ ವಿನಃ ಶಬ್ದಾಡಂಬರಗಳ ಮೂಲಕ ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದರಿಂದಲ್ಲ. ಜಿಎಸ್‌ಟಿ ವ್ಯವಸ್ಥೆ ಈಗ ಹಿಂಪಡೆಯಲು ಸಾಧ್ಯವಾಗದ ಸ್ಥಿತಿಯನ್ನು ಮುಟ್ಟಿದೆ. ಆದ್ದರಿಂದ ರಾಜಕೀಯಪಕ್ಷಗಳು ಅದರಲ್ಲೂ ಅದನ್ನು ಜಾರಿಗೆ ತಂದ ಎನ್‌ಡಿಎ ಒಕ್ಕೂಟವು ಜಿಎಸ್‌ಟಿಯು ಎಷ್ಟೇ ಅಯಶಸ್ವಿಯಾದ ಪ್ರಯೋಗವಾಗಿದ್ದರೂ ತಮ್ಮ ಶಬ್ದಾಡಂಬರಗಳ ಮೂಲಕವೇ ಅದನ್ನು ಅತ್ಯದ್ಭುತವೆಂದು ತಮ್ಮ ಮತದಾರರಿಗೆ ಒಪ್ಪಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದೆ. ಆದರೆ ನೀತಿನಿರ್ಣಯಗಳಲ್ಲಿ ಜನರ ಭಾಗೀದಾರಿಕೆಯನ್ನು ಖಾತರಿಗೊಳಿಸಿಕೊಳ್ಳಬೇಕೆಂದರೆ ಶಾಸನಗಳನ್ನು ರೂಪಿಸುವವರು ಕೆಲವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು. ವ್ಯವಸ್ಥೆಯಲ್ಲಿರುವ ಮೂಲಭೂತ ಕೊರತೆಗಳನ್ನು ನೀಗಿಸುವ ಅಂಶಗಳನ್ನೂ ಒಳಗೊಂಡಂತೆ ತೆರಿಗೆ ವಿಧಿಸಬಲ್ಲ ಮತ್ತು ರಿಯಾಯಿತಿಗಳನ್ನು ನೀಡಬೇಕಾದ ಸೂಕ್ತ ವಲಯಗಳನ್ನು ಗುರುತಿಸುವ, ತೆರಿಗೆ ದರಗಳನ್ನು ಸರಳೀಕರಿಸುವ ಇವೇ ಇನ್ನಿತ್ಯಾದಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ನಿರ್ದಿಷ್ಟ ಮತ್ತು ಸಮಗ್ರ ಧೋರಣೆಯನ್ನು ಅಳವಡಿಸಿಕೊಳ್ಳಬೇಕು.
ಕೃಪೆ: Economic and Political Weekly