ನಮ್ಮ ಕಾಲದ ನಿಜಶರಣ ನೆಟ್ಟಾರು ರಾಮಚಂದ್ರಭಟ್ಟರು
ಭಾಗ -3
ಸತ್ಯ ಸಾಮಾನ್ಯರಿಗೆ ಗೊತ್ತುಂಟು:
ಸಾಮಾನ್ಯರಿಗೆ ಗೊತ್ತಿರುವ ಸತ್ಯವೇ ಸತ್ಯ. ಶ್ರೀಮಂತರ ಸತ್ಯ ಬಡವರಲ್ಲಿ ಧಣಿಯ ಸತ್ಯ ಸೇವಕರಲ್ಲಿ ಕೇಳಬೇಕು. ಗಂಡಿನ ಸತ್ಯ ಹೆಣ್ಣಿನಲ್ಲಿ ಸಂಸ್ಕೃತಿ ಅಂತ ಹೇಳ್ತೆವಲ್ಲ ಅದರ ಸತ್ಯವನ್ನು ಆ ಕಟ್ಟಕಡೆಯ ಮನುಷ್ಯ ಜೀವ ಉಂಟಲ್ಲ ಅವನಲ್ಲಿ ಕೇಳಬೇಕು. ಕಲೆಯ ಸತ್ಯವನ್ನು ಮನೋಧರ್ಮದಲ್ಲಿ, ಹಾಗೆಯೇ ಮಾತಿನ ಸತ್ಯವನ್ನು ಜೀವನ ಸಂದರ್ಭದಲ್ಲಿ ಹುಡುಕಬೇಕಯ್ಯ - ಸಂದರ್ಭ ಬಿಟ್ಟಲ್ಲ. ಸಾಮಾನ್ಯ ಜನ ಮಾತಾಡಿದರೆ ಅದು ಪಿಸುಮಾತೇ ಅಲ್ಲವೆ?
ಅಂದರೆ?
ಎಲ್ಲರಿಗೂ ಗೊತ್ತಿದೆ. ಆದರೆ ಅದು ಬಹಿರಂಗವಾಗೋದಿಲ್ಲ. ಅದಕ್ಕೆ ಬೆಲೆಯೂ ಅಷ್ಟೇ ...
ಅಂದರೆ ಸಾಮಾನ್ಯ ಜನಕ್ಕೆ ಗೊತ್ತಿರೋದು-ಗೊತ್ತಿಲ್ಲದೆ ಇರೋದು ಈ ಎರಡರ ನಡುವೆ ಅಷ್ಟೇನು ವ್ಯತ್ಯಾಸವಿಲ್ಲ ಎಂದಾಗುತ್ತದೆ ಅಲ್ಲವೆ ಗುರುಗಳೆ?
ಲೋಕದ ದೃಷ್ಟಿಯಲ್ಲಿ ಹಾಗಿರಬಹುದು. ಆದರೆ ಗೊತ್ತಿರುವವನಿಗೆ ಗೊತ್ತಿರುತ್ತದಲ್ಲ; ಅಷ್ಟು ಸಾಕು. ಅದಕ್ಕೇ ಹೇಳೋದು: ಸತ್ಯ ಅಡಗಿಲ್ಲದಿದ್ದರೂ ಅಡಗಿದಂತೆ ಇರುತ್ತದೆ -ಅಂತ. ಗೊತ್ತಿದೆ ಮತ್ತು ಗೊತ್ತಿಲ್ಲ - ಹೀಗಾಗಿರುತ್ತದೆ ಸತ್ಯದ ಅವಸ್ಥೆ!
ಅಂತೆಯೇ ಬಸವಣ್ಣನವರು ಸತ್ಯದ ಸಾಕ್ಷಾತ್ಕಾರಕ್ಕಾಗಿ ಕೆಳಜಾತಿ ಮತ್ತು ಕೆಳವರ್ಗದ ಕಾಯಕಜೀವಿಗಳ ಕಡೆಗೆ ಹೋಗುತ್ತಾರೆ. ‘‘ಭಕ್ತಿ ಇಲ್ಲದ ಬಡವ ನಾನಯ್ಯ. ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ, ಎಲ್ಲ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ.’’ ಎಂದು ಬಸವಣ್ಣನವರು ದುಡಿಯುವ ಜನಸಮುದಾಯದ ಮಹತ್ವವನ್ನು ಸಾರಿದ್ದಾರೆ.
ಬಸವಣ್ಣನವರ ಪ್ರಕಾರ ಭಕ್ತಿ ಎಂಬುದು ಜೀವಕಾರುಣ್ಯ. ಜಗತ್ತಿನ ಅನುಭವ ಪಡೆಯದೆ ಜೀವಕಾರುಣ್ಯ ಹುಟ್ಟದು. ಜೀವಕಾರುಣ್ಯವಿಲ್ಲದೆ ಭಕ್ತನಾಗಲು ಸಾಧ್ಯವಿಲ್ಲ. ಎಲ್ಲ ಜೀವಿಗಳ ದುಃಖವನ್ನು ಅರಿತು ಆ ದುಃಖ ನಿವಾರಣೆಗಾಗಿ ಕಾರ್ಯೋನ್ಮುಖನಾಗುವವನೇ ಭಕ್ತ. ತಾನು ನಂಬಿದ ದೇವರನ್ನು ಸಕಲ ಜೀವಿಗಳಲ್ಲಿ ಕಾಣುವ ಭಕ್ತನ ಜವಾಬ್ದಾರಿ ಎಂಬುದು, ಆ ಜೀವಿಗಳ ಏಳ್ಗೆಗಾಗಿ ಸೇವಾಭಾವದಿಂದ ತೊಡಗುವುದೇ ಆಗಿದೆ. ಹೀಗಾಗಿ ಆತನದು ಸೇವಾಧರ್ಮ. ಪ್ರಧಾನಿ ಬಸವಣ್ಣನವರು ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಜೇಡರ ದಾಸಯ್ಯ ಮುಂತಾದ ಕಾಯಕಜೀವಿಗಳ ಜೀವನಾನುಭವದಿಂದ ಹೊಸ ಮಾನವೀಯ ಸಿದ್ಧಾಂತವನ್ನು ರೂಪಿಸಿದರು. ಬಡವರು ಕಂಡುಕೊಂಡ ಸತ್ಯವೇ ಸತ್ಯ ಎಂಬುದನ್ನು ಸಾಬೀತು ಪಡಿಸಿದರು.ಬಸವಣ್ಣನವರು ಅನುಭವಕ್ಕಾಗಿ ವೇದಾಗಮಗಳನ್ನು ಓದಿದವರ ಕಡೆಗೆ ಹೋಗಲಿಲ್ಲ. ಅವರು ಹೋಗಿದ್ದು ಅಸ್ಪಶ್ಯರು, ತುಳಿತಕ್ಕೊಳಗಾದವರು, ಅಪಮಾನಕ್ಕೊಳಗಾದವರು, ದುಃಖಿಗಳು ಮತ್ತು ಎಲ್ಲ ಬಡವರ ಕಡೆಗೆ. ಆ ಮೂಲಕ ಅವರಿಗೆ ಬದುಕಿನ ನಿಜಸ್ವರೂಪದ ಸಾಕ್ಷಾತ್ಕಾರವಾಯಿತು.ಜಗತ್ತಿನಲ್ಲಿ ಪ್ರಥಮಬಾರಿಗೆ ಬಡವರ ಅನುಭವದ ಮೇಲೆ ‘ಅನುಭಾವ’ ಎಂಬ ದರ್ಶನದ ಹುಟ್ಟಿಗೆ ಬಸವಣ್ಣನವರು ಕಾರಣರಾದರು. ಈ ದರ್ಶನವೇ ಬಸವಾದ್ವೈತ. ಭಟ್ಟರು ಹೇಳುವ ‘‘ಸಾಮಾನ್ಯರಿಗೆ ಗೊತ್ತಿರುವ ಸತ್ಯವೇ ಸತ್ಯ’’ ಎಂಬುದು ಎಷ್ಟೊಂದು ಮಾರ್ಮಿಕವಾಗಿದೆ! ಇದನ್ನು ಅರಿಯಲು ಬಸವಾದ್ವೈತದ ಪರಿಚಯವಾಗಬೇಕು.
‘‘ಭಕ್ತರೇ ಸಮರ್ಥರು, ಅಸಮರ್ಥರೆಂದೆನಲುಂಟೆ? ಚೆನ್ನನೆತ್ತ, ಚೋಳನೆತ್ತ? ಚೆನ್ನನೊಡನುಂಡ ಶಿವ ಆಹಾ! ಅಯ್ಯ! ಚೆನ್ನ, ಚೋಳನ ಮನೆಯ ಕಂಪಣಿಗನಯ್ಯ! ಕೂಡಲಸಂಗಮದೇವ ಭಕ್ತಿಲಂಪಟನಯ್ಯಿ!’’ ಎಂದು ಬಸವಣ್ಣನವರು ಹೇಳುವಲ್ಲಿ ಅಸ್ಪಶ್ಯರು ಮತ್ತು ಬಡವರ ಬಗ್ಗೆ ಇರುವ ಅವರ ತೀವ್ರ ಕಾಳಜಿಯು ಅರ್ಥವಾಗುತ್ತದೆ. ಮಾದಾರ ಚೆನ್ನಯ್ಯನವರು ಕರಿಕಾಲ ಚೋಳ ರಾಜನ ಕುದುರೆಗಳಿಗೆ ಹುಲ್ಲು ಹಾಕುವ ಕಾಯಕಜೀವಿ. ಆದರೆ ಭಕ್ತರ ಗೀಳು ಹಿಡಿದ ಶಿವನು ಚೋಳ ರಾಜನ ನೈವೇದ್ಯವನ್ನು ಸ್ವೀಕರಿಸದೆ ಚೆನ್ನಯ್ಯನ ಮನೆಯ ಅಂಬಲಿಯನ್ನು ಸ್ವೀಕರಿಸಿ ತೃಪ್ತನಾಗುತ್ತಾನೆ. ಹೀಗೆ ಬಸವಣ್ಣನವರ ಶಿವನು ಬಡ ಭಕ್ತರ ಪರ ಇದ್ದಾನೆ ಎಂಬುದನ್ನು ದಂತಕಥೆಯಾಗಿರುವ ಈ ಅಂಬಲಿ ಘಟನೆ ಸೂಚಿಸುತ್ತದೆ.
ಅನುಭವಿಸುವ ಕಲೆ:
‘‘ಕೂಡಲಸಂಗಯ್ಯನೆಂಬ ಶಬ್ದಮುಗ್ಧನ ಭಾವದ ಬಳಕೆಯಲ್ಲಿ ಗೆಲಬಹುದೆ ಹೇಳಾ’’ಎಂದು ಬಸವಣ್ಣನವರು ಹೇಳಿದ್ದಾರೆ. ಇಂಥ ಒಂದು ಗಹನವಾದ ವಿಚಾರವನ್ನು ರಾಮಚಂದ್ರಭಟ್ಟರು ಹೀಗೆ ಹೇಳುತ್ತಾರೆ:
ಮುಗ್ಧತೆ ಎಂದರೆ ಸ್ವ-ಪ್ರಜ್ಞೆ ಇಲ್ಲದೆ ಇರೋದು. ಪ್ರಜ್ಞೆ ಇರುತ್ತೆ. ಆದರೆ ಸ್ವ -ಇಲ್ಲ. ಆಗ ...
ಆಗ ಏನು ಗುರುಗಳೆ?
ಆಗ ಜಗತ್ತಿನ ಅನುಭವ! ಜಗತ್ತಿನ ಅನುಭವವಾದಂತೆ ನೀವು ಮುಗ್ಧರಾಗುತ್ತ ಹೋಗುತ್ತೀರಿ. ಜಗತ್ತನ್ನು ಅನುಭವಿಸುವ ಕಲೆ ಅಲ್ಲಿದೆ!
ಜಗತ್ತಿನ ಅನುಭವವೆಂದರೆ?
ಜಗತ್ತಿನ ಅನುಭವವೆಂದರೆ ‘ಪರ’ನ ಅನುಭವ ಮಹರಾಯ. ಇನ್ನೊಬ್ಬನ ಅನುಭವ. ನೀನು ನಾನಾ ಕಾರಣಗಳಿಂದ ದೂರ ಇಟ್ಟಿದ್ದೀಯಲ್ಲ -ಅವನ ಅನುಭವ. ಪರನ ಅನುಭವವಾದವನು ಪರಕೀಯನೇ ಆಗಬೇಕಲ್ಲದೆ ಬೇರೇನಾಗಲು ಸಾಧ್ಯ. ಅವನು ತನಗೆ ತಾನೇ ಪರಕೀಯ. ಅದವನ ಪಾಡು!
.. .. .. ..
ನಮ್ಮನ್ನು ಸೋಲಿಸುವವನನ್ನು ಹುಡುಕುವುದು. ಅಂಥವನೊಬ್ಬ ಸಿಕ್ಕಿದರೆ ಸಾಕು!
ಸೋಲಿಸುವುದೆಂದರೆ?
ನಿಜವಾಗಿ ಮುಗ್ಧನಾದವನು ಮಾತ್ರ ನಮ್ಮನ್ನು ಸೋಲಿಸಬಲ್ಲ. ಕ್ಷಣ ಮಾತ್ರದಲ್ಲಿ ಮತ್ತೆ ನಮ್ಮದೆಲ್ಲವೂ ಅವನದ್ದೇ. ನಾವಿಲ್ಲ ಮತ್ತೆ. ಅಂಥವನೊಬ್ಬನ್ನು ಹುಡುಕಬೇಕಾದರೆ ಹೀಗಲ್ಲದೆ ಬೇರೆ ದಾರಿ ಇಲ್ಲ ಮತ್ತೆ. (ರಾಮಚಂದ್ರಭಟ್ಟರ ಈ ಮಾತುಗಳಲ್ಲಿ ಜಗತ್ತನ್ನು ಒಂದುಗೂಡಿಸುವ ತೀವ್ರತೆ ಇದೆ. ‘ಪರ’ ಎಂದರೆ ದೇವರು ಮತ್ತು ಪರಕೀಯ. ಪರನನ್ನು ಅರಿಯಬೇಕಾದರೆ ಪರಕೀಯನನ್ನು ಅರಿತು ಎಲ್ಲವನ್ನೂ ಒಂದು ಮಾಡುವಲ್ಲಿ ತಲ್ಲೀನನಾಗಬೇಕು.ವ್ಯಷ್ಟಿ ಪ್ರಜ್ಞೆಯಿಂದ ಭೌತಿಕ ಜಗತ್ತಿಗೆ ಪರಕೀಯನಾಗಬೇಕು. ಆದರೆ ಸಮಷ್ಟಿ ಪ್ರಜ್ಞೆಯಿಂದ ಸಮತ್ವದೊಂದಿಗೆ ಭೌತಿಕ ಜಗತ್ತಿನಲ್ಲಿ ಬದುಕಬೇಕು. ಇದೆಲ್ಲ ಅವರ ಮಾತಿನ ಮರ್ಮ.)
ಆಗ ಲಕ್ಷ್ಮೀಶ ತೋಳ್ಪಾಡಿ ಅವರು ಬರೆಯುತ್ತಾರೆ:
‘‘ಗುರುಗಳು ಹೀಗೆ ಹೇಳುತ್ತಿರಬೇಕಾದರೆ ನನಗೆ ಮಹಾಭಾರತದ ಏಕಲವ್ಯನ ಕಥೆ ನೆನಪಾಗುತ್ತಿತ್ತು. ಕಥೆ ಎಲ್ಲರಿಗೆ ಗೊತ್ತಿದೆ. ಅದು ಮಣ್ಣಿನ ಮೂರ್ತಿಯೊಂದು ಜೀವಂತ ಮನುಷ್ಯನನ್ನೇ ಸೋಲಿಸಿದ ಕಥೆ. ಏಕಲವ್ಯ ಪೂಜಿಸಿದ ದ್ರೋಣನ ಮಣ್ಣಿನ ಮೂರ್ತಿ, ದ್ರೋಣ ಕೊಡಲಾರದ್ದನ್ನು ಏಕಲವ್ಯನಿಗೆ ಕೊಟ್ಟಿತು. ಏಕಲವ್ಯ ಪಡೆದದ್ದು ಏಕಲವ್ಯನದೋ? ಮಣ್ಣಿನ ಮೂರ್ತಿಯದೋ? ಅಥವಾ ದ್ರೋಣನದೋ? ಅದು ತನ್ನದಲ್ಲ ಎನ್ನುವುದು ದ್ರೋಣನಿಗೆ ಗೊತ್ತು. ಆದರೆ ಒಪ್ಪಿಕೊಳ್ಳುವುದಕ್ಕೆ ಆತನ ಆಸ್ಥಾನ ಗುರುತ್ವ ಬಿಡಲಿಲ್ಲ. ಮುಗ್ಧತೆ ಏಕಲವ್ಯನಂಥವರ ಸೊತ್ತು. ದ್ರೋಣ, ಅರ್ಜುನನಂಥವರದಲ್ಲ. ಏನಿದ್ದರೂ ಏಕಲವ್ಯನ ಹೆಬ್ಬೆರಳಿನ ಕಾಣಿಕೆ ಪಡೆದು, ದ್ರೋಣ ತಾನೇ ಒಂದು ಮಣ್ಣಿನ ವಿಗ್ರಹ; ಜಡ, ಏಕಲವ್ಯ ಪೂಜಿಸಿದ ಮಣ್ಣಿನ ಮೂರ್ತಿಯೇ ಜೀವಂತ ಎನ್ನುವುದಕ್ಕೆ ಸಾಕ್ಷಿಯಾದ. ಏಕಲವ್ಯ ಹೆಬ್ಬೆರಳನ್ನು ಕೊಟ್ಟು ಗೆದ್ದ. ದ್ರೋಣ ಅದನ್ನು ಪಡೆದು ಶಾಶ್ವತವಾಗಿ ಸೋತ. ನಾನು ಗುರುಗಳನ್ನು ಕೇಳಿದೆ: ದ್ರೋಣ ಏನು ಮಾಡಬೇಕಿತ್ತು? ನೀವೇನು ಮಾಡುತ್ತಿದ್ದಿರಿ? ಹೇಳಬೇಕು ಅನ್ನಿಸಿದ್ದರೆ ಹೇಳಿ.
ಗುರುಗಳು ನೀಡಿದ ಉತ್ತರ ಬೆಚ್ಚಿ ಬೀಳಿಸುವಂತಿತ್ತು. ಅವರು ಹೇಳಿದರು: ದ್ರೋಣ ಏನು ಮಾಡಬೇಕಿತ್ತು ಎನ್ನುವಿರಾ?
ಅವನು ತನ್ನ ಮಣ್ಣಿನ ಮೂರ್ತಿಯನ್ನು ತಾನೇ ಒಡೆಯಬೇಕಿತ್ತು. ಅದು ಅವನಿಗೆ ಮಾತ್ರ ಸಾಧ್ಯ. ಆಮೇಲೆ, ಇನ್ನು ಕಲಿಯಬೇಕಿದ್ದರೆ ಏಕಲವ್ಯನಲ್ಲಿ ಕಲಿಯಿರಿ ಎಂದು ತಾನು ಮರೆಯಾಗಬೇಕಿತ್ತು. ಅದು ಬಿಡುಗಡೆ. ಪಾಪ! ದ್ರೋಣಾಚಾರ್ಯ! ತನ್ನ ಮೂರ್ತಿ ತಾನು ಒಡೆಯಲಾರ. ಆದರೂ ಅವನ ಮೂರ್ತಿ ಒಡೆದೇ ಹೋಯಿತಲ್ಲ!’’
ದೇವರು ನಿರಾಕಾರ ಎಂದು ಬಸವಣ್ಣನವರು ಪ್ರತಿಪಾದಿಸಿದ್ದಾರೆ.ಅಗೋಚರನಾದ ಶಿವನು ನಮ್ಮಾಳಗೇ ಇದ್ದಾನೆ. ಆತನೇ ಅರಿವು.ಅರಿವೇ ಗುರುವಾದದ್ದರಿಂದ ಏಕಲವ್ಯ ಏಕಾಗ್ರತೆಯಿಂದ ಆ ಅರಿವನ್ನು ಪಡೆದು ಬಿಲ್ವಿದ್ಯೆಯನ್ನು ಕಲಿಯಲು ಸಾಧ್ಯವಾಯಿತು.ಆದರೆ ತಾನು ಮುಂದೆ ಇಟ್ಟುಕೊಂಡಿದ್ದ ದ್ರೋಣಾಚಾರ್ಯರ ಮೂರ್ತಿ ತನಗೆ ಬಿಲ್ವಿದ್ಯೆ ಕಲಿಸಿತು ಎಂಬ ಭ್ರಮೆಯನ್ನು ಆತ ಹೊಂದಿದ್ದ. ಆ ಮುಗ್ಧತೆಯ ದುರುಪಯೋಗ ಮಾಡಿಕೊಂಡ ದ್ರೋಣಾಚಾರ್ಯರು ಗುರುದಕ್ಷಿಣೆಯಾಗಿ ಆತನ ಬಲಗೈ ಹೆಬ್ಬೆರಳನ್ನು ಬೇಡಿದರು. ಆತ ಕೊಟ್ಟ. ಆಗ ಒಡೆದದ್ದು ದ್ರೋಣಾಚಾರ್ಯರ ವ್ಯಕ್ತಿತ್ವ. ಒಂದು ವೇಳೆ ಅವರು ತಮ್ಮ ಆ ಮೂರ್ತಿಯನ್ನು ಒಡೆದಿದ್ದರೆ ಅವರ ವ್ಯಕ್ತಿತ್ವ ಇಂದಿಗೂ ಒಡೆಯದೆ ಉಳಿಯುತ್ತಿತ್ತು. ಆದರೆ ಅಮರತ್ವ ಸಾಧಿಸಿದ್ದು ಏಕಾಗ್ರತೆ ಮತ್ತು ಮುಗ್ಧತೆಯಿಂದ ಕೂಡಿದ್ದ ಏಕಲವ್ಯನ ವ್ಯಕ್ತಿತ್ವ!
ಭಟ್ಟರು ತೋಳ್ಪಾಡಿ ಅವರನ್ನು ಕೇಳುತ್ತಾರೆ:
‘‘ಈ ಶೋಷಕ ಎಂದು ನೀನು ಯಾರನ್ನು ಹೇಳುತ್ತಿ, ಅವನು ತನಗೇ ಅನ್ಯಾಯ, ಹಿಂಸೆ ಮಾಡಿಕೊಳ್ಳುತ್ತಿದ್ದಾನಪ್ಪ. ಅದವನಿಗೇ ತಿಳಿದಿಲ್ಲ ಎಂದಿ ಟ್ಟುಕೋ. ತಿಳಿಯುವಂತೆ ಮಾಡಬೇಕು -ಹೇಗೆ?
ಅವನು ಬಳಸುವ ಶಸ್ತ್ರವನ್ನು ನಾವು ಬಳಸುವುದರಿಂದ ಅಲ್ಲ. ಅವನು ನಿಶಸ್ತ್ರನಾಗಬೇಕಾದರೆ ಅವನು ಮಾಡುತ್ತಿರುವ ಆಘಾತಕ್ಕೆ ನಾವು ಎದೆಗೊಡಬೇಕು. ಆ ಮೂಲಕ ಅವನ ಶಸ್ತ್ರ ನಿರುಪಯುಕ್ತ ಎಂದವನು ಮನಗಾಣಬೇಕು. ನಮ್ಮ ಮೇಲೆ ಅವನು ಮಾಡುತ್ತಿರುವ ದಬ್ಬಾಳಿಕೆ, ಅವನು ಅವನ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಎಂದು ತೋರಿಸುವ ಏಕಮಾತ್ರ ದಾರಿ ಇದು. ಆ ಮೂಲಕ ನಾವಿಬ್ಬರೂ ಒಂದೇ ಎಂದು; ಒಡಹುಟ್ಟು ಎಂದು.ಇದು ಸಹ+ಅನುಭೂತಿ; ಇದು ಅಹಿಂಸೆ.
ಹೌದು ಇದೇ ಅಹಿಂಸೆಯನ್ನು ಏಕಲವ್ಯ ಪಾಲಿಸಿದ. ಹೆಬ್ಬೊಟ್ಟು ಕೊಟ್ಟು ದ್ರೋಣಾಚಾರ್ಯರನ್ನು ನಿರುತ್ತರನಾಗಿಸಿದ. ತನ್ನ ಮೇಲೆ ದ್ರೋಣಾಚಾರ್ಯರು ಮಾಡಿದ ದಬ್ಬಾಳಿಕೆ ಕೊನಗೆ ಅವರ ಮೇಲೆಯೆ ದುಷ್ಪರಿಣಾಮ ಬೀರಿತು ಎಂಬುದು ಲೋಕಕ್ಕೇ ಅರಿವಾಯಿತು.’’
ಬಸವಣ್ಣನವರು ಕೂಡ ಇದೇ ಚಿಂತನಾ ವಿಧಾನವನ್ನು ಹೊಂದಿದ್ದರು. ‘‘ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದವರೆಂಬೆ, ಜರಿದವರೆನ್ನ ಜನ್ಮಬಂಧುಗಳೆಂಬೆ, ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ ಕೂಡಲಸಂಗಮದೇವಾ.’’ಎಂಬುದು ಬಸವಣ್ಣನವರ ಭಾವನೆಯಾಗಿತ್ತು.
ಕಾಗದದ ದೇವರು:
ಹಾಗೆ ಒಂದು ದಿನ ತೋಳ್ಪಾಡಿ ಅವರು ರಾಮಚಂದ್ರ ಭಟ್ಟರನ್ನು ಜೆಮಿನಿ ಕಾಮತರ ಬಳಿ ಕರೆದುಕೊಂಡು ಬಂದರು. ಕಾಮತರ ಮುಂದೆ ಭಟ್ಟರು ತಲೆ ತಗ್ಗಿಸಿ ಕುಳಿತರು. ಅದು ಅವರ ಭಂಗಿ. ‘‘ನೋಡಿ ಅಲ್ಲಿ ತೂಗಿ ಹಾಕಿದ ಫೋಟೊ ಕಾಣುತ್ತಿದೆಯಲ್ಲ, ಅದರಲ್ಲಿರುವ ದೇವರು ಯಾರು - ಹೇಳಬಲ್ಲಿರಾ?’’ಕಾಮತರು ಕೇಳಿದರು.
‘‘.. .. .. .. ..’’
‘‘ನಿಮ್ಮಲ್ಲೇ ಕೇಳುತ್ತಿರೋದು. ನೋಡಿ, ಗೊತ್ತಾದರೆ ಹೇಳಿ.’’
‘‘.. .. .. .. ..’’
‘‘ಯಾಕೆ ನೀವು ಮಾತಾಡುತ್ತಿಲ್ಲ? ಸರಿಯಾಗಿ ಫೋಟೊ ನೋಡಿ ಹೇಳಿಯಲ್ಲ.’’
ಈಗ ಗುರುಗಳು ತಲೆ ಎತ್ತಿದರು. ಫೋಟೊದ ಕಡೆ ಕಣ್ಣು ಹಾಯಿಸಲಿಲ್ಲ. ನೇರವಾಗಿ ಕಾಮತರನ್ನು ನೋಡುತ್ತಾ ಹೇಳಿದರು. ‘‘ಮರದ ಫ್ರೇಮಿನ ಒಳಗಡೆ ಇರುವ ಆ ಕಾಗದದ ಚಿತ್ರದಲ್ಲಿ ದೇವರು ಇರಬಹುದಾದರೆ ಜೀವಂತ ಮನುಷ್ಯರಲ್ಲಿ ದೇವರು ಇರಲಿಕ್ಕಿಲವೇ? ಸರಿಯಾಗಿ ನೋಡಿ, ಹೇಳಿ.’’
ಅಷ್ಟು ಹೇಳಿ ಗುರುಗಳು ಬೇರೆ ಮಾತೇ ಆಡದೆ ಅಂಗಡಿಯ ಮೆಟ್ಟಲಿಳಿದು ಹೊರಟು ಹೋದರು. ಆ ಮಾತಿನ ಗಾಂಭೀರ್ಯ ಬೆಚ್ಚಿಬೀಳಿಸಿತು ಎಂದರು ಕಾಮತರು.
‘‘ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ; ಆ ಪೂಜೆಯು, ಆ ಮಾಟವು ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ; ಅಪ್ಪಿದಡೆ ಸುಖವಿಲ್ಲ, ಮೆಲಿದಡೆ ರುಚಿಯಿಲ್ಲ; ಕೂಡಲಸಂಗಮದೇವಾ ನಿಜವಿಲ್ಲದವನ ಭಕ್ತಿ.’’ಎಂದು ಬಸವಣ್ಣನವರು ಸಾರಿದ್ದಾರೆ.‘‘ಉಂಬು ಜಂಗಮ ಬಂದಡೆ ನಡೆಯೆಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯೆ.’’ಎಂದು ನೋವು ವ್ಯಕ್ತಪಡಿಸಿದ್ದಾರೆ. ‘ದೇಹವೇ ದೇಗುಲ’ ಎಂದು ಬಸವಣ್ಣನವರು ಹೇಳುವಾಗ ದೇವರು ದೇಹವೆಂಬ ದೇಗುಲದಲ್ಲಿದ್ದಾನೆ ಹೊರತಾಗಿ ಚಿತ್ರಗಳಲ್ಲಿ ಅಥವಾ ಮೂರ್ತಿಗಳಲ್ಲಿ ಇಲ್ಲ ಎಂಬುದನ್ನು ಸೂಚಿಸಿದ್ದಾರೆ. ಅಂತೆಯೆ ಬಸವಧರ್ಮ ಗುಡಿ ಮತ್ತು ಮೂರ್ತಿಗಳಿಲ್ಲದ ಧರ್ಮವಾಗಿದೆ.
ದೊಡ್ಡ ಕಳ್ಳನಿಗೆ ಏನು ಹೇಳೋದು?
ಇಸ್ಮಾಯೀಲ್ ಕುಂಞಪ್ಪತೋಳ್ಪಾಡಿ ಅವರಿಗೆ ಹೇಳಿದ ಘಟನೆ ಇದು: ರಾಮಚಂದ್ರಭಟ್ಟರಿಗೆ ಹುಚ್ಚು ಹಿಡಿದಿದೆ ಎನ್ನುವುದು ಲೋಕ ಪ್ರಸಿದ್ಧವಾದ ಕಾಲ ಅದು. ಭಟ್ಟರು ಮನೆಯಲ್ಲೇ ಇದ್ದರು. ಒಂದು ದಿನ ಮನೆಮಂದಿಯೆಲ್ಲ ಊರಲ್ಲಿ ನಡೆಯುತ್ತಿರುವ ಸಮಾರಂಭವೊಂದಕ್ಕೆ ಹೋಗಿದ್ದಾರೆ. ಆ ಹಗಲು ಹೊತ್ತಿನಲ್ಲೇ ಮನೆಯ ತೋಟಕ್ಕೆ ಅಡಿಕೆ ಕಳ್ಳನೊಬ್ಬ ನುಗ್ಗಿ, ಮರ ಹತ್ತಿ, ಅಡಿಕೆ ಕೀಳುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲ ಎಂಬುದು ಅವನಿಗೆ ಗೊತ್ತಿತ್ತು. ಸ್ವಲ್ಪಹೊತ್ತು ಕಳೆದ ಮೇಲೆ ಇವರು ತೋಟಕ್ಕೆ ಹೋದರು.ಕಳ್ಳನಿಗೆ ಗಾಬರಿಯಾಯಿತು. ಅವನು ಮರದ ಮೇಲಿದ್ದ. ಇವರು ಕೆಳಗಿನಿಂದ ಕೂಗಿ ಹೇಳಿದರು. ‘‘ನಿನಗೆ ಬೇಕಾದಷ್ಟು ತೊಗೊಂಡು, ಬೇಗ ಇಳಿದು ಹೋಗು.ಮನೆಯವರು ಬರುವ ಹೊತ್ತಾಯಿತು.’’ ಕಳ್ಳ ಈ ಸೂಚನೆಯನ್ನು ಪಾಲಿಸಿರಬೇಕು!
(ಮುಂದುವರಿಯುವುದು)