ಬಿಜೆಪಿ ಮೇಲೆ ಮತ್ತೆ ಮೂರು ಈಶಾನ್ಯ ಮಿತ್ರರು ಗರಂ
ಗುವಾಹತಿ, ಜ. 9: ಪ್ರಾದೇಶಿಕ ಪಕ್ಷಗಳ ಜತೆ ಸೇರಿ ಬಿಜೆಪಿ ಅಧಿಕಾರ ಹಂಚಿಕೊಂಡಿರುವ ಮೂರು ಈಶಾನ್ಯ ರಾಜ್ಯಗಳ ಮಿತ್ರಪಕ್ಷಗಳು ಪೌರತ್ವ ಕಾಯ್ದೆ ಜಾರಿಯ ವಿರುದ್ಧ ಧ್ವನಿ ಎತ್ತಿದ್ದು, ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಈಗಾಗಲೇ ಅಸ್ಸಾಂ ಗಣ ಪರಿಷತ್ ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ನೇತೃತ್ವದ ಮೇಘಾಲಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರ ಕಳೆದ ವರ್ಷದ ಮೇ ತಿಂಗಳಲ್ಲಿ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಮಂಗಳವಾರ ಈ ಸಂಬಂಧ ಹೇಳಿಕೆ ನೀಡಿದ ಎನ್ಪಿಪಿ ಅಧ್ಯಕ್ಷ ವಿ.ಆರ್. ಖರ್ಲೂಕಿ, "ಈ ಮಸೂದೆ ಈಶಾನ್ಯ ರಾಜ್ಯಗಳಿಗೆ ಅಪಾಯಕಾರಿ. 1979ರ ಬಳಿಕ ಇಡೀ ಪ್ರದೇಶದಲ್ಲಿ ವಿದೇಶಿ ವಿರೋಧಿ ಅಭಿಯಾನ ಪ್ರಬಲವಾಗಿದ್ದರೂ, ಇದನ್ನು ಕೇಂದ್ರ ಸರ್ಕಾರ ಏಕೆ ಹೇರುತ್ತಿದೆ ಎನ್ನುವುದು ನಮಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.
ನಾಗಾಲ್ಯಾಂಡ್ನಲ್ಲಿ ಮುಖ್ಯಮಂತ್ರಿ ನೀಫು ರಿಯೊ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ ಬಿಜೆಪಿ ಜತೆ ಸೇರಿ ಅಧಿಕಾರದಲ್ಲಿದ್ದು, ಈ ಉದ್ದೇಶಿತ ಮಸೂದೆ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಕೇಂದ್ರವನ್ನು ಒತ್ತಾಯಿಸಿದೆ.
ಮಿಜೋರಾಂ ಮುಖ್ಯಮಂತ್ರಿ ಝೊರಾಂ ತಾಂಗಾ ಹೇಳಿಕೆ ನೀಡಿ, ಈ ಮಸೂದೆಗೆ ನಮ್ಮ ಸರ್ಕಾರದ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಿಜೋ ನ್ಯಾಷನಲ್ ಫ್ರಂಟ್ ಧೀರ್ಘಕಾಲದಿಂದಲೂ ಇದನ್ನು ವಿರೋಧಿಸುತ್ತಾ ಬಂದಿದೆ. ದೊಡ್ಡ ಸಂಖ್ಯೆಯಲ್ಲಿ ಬಾಂಗ್ಲಾದಿಂದ ಅನಧಿಕೃತವಾಗಿ ವಲಸೆ ಬಂದಿರುವ ಬೌದ್ಧ ಸಮುದಾಯದವರು ಇರುವ ಮಿಜೋರಾಂನಂಥ ರಾಜ್ಯಗಳಿಗೆ ಈ ಮಸೂದೆ ಮಾರಕ ಎಂದು ಬಣ್ಣಿಸಿದ್ದಾರೆ.