1990ರಿಂದ ಕೋಮು ಗಲಭೆಯೇ ನಡೆಯದ ಇಲ್ಲಿ ಹಿಂದೂ ಮುಸ್ಲಿಮರು ಸಹೋದರರು
ನಿಮಗೆ ತಿಳಿದಿರದ ‘ಅಯೋಧ್ಯೆ’ಯ ಸೌಹಾರ್ದ ಸುಧೀರ್ ಶೆಟ್ಟಿ ಕ್ಯಾಮರಾ ಕಣ್ಣಲ್ಲಿ
ಬೆಂಗಳೂರು, ಜ.11: ಅಯೋಧ್ಯೆಯಲ್ಲಿ ಸುಮಾರು 8 ಸಾವಿರ ರಾಮ ಮಂದಿರಗಳಿವೆ. ಅದರಲ್ಲಿ 4 ಸಾವಿರ ರಾಮಮಂದಿರಗಳನ್ನು ಮೊಘಲ್ ರಾಜರೇ ಕಟ್ಟಿದ್ದಾರೆ. ಹೀಗಿರುವಾಗ ಸಂಘಪರಿವಾರ ಬಾಬರಿ ಮಸೀದಿ ಧ್ವಂಸ ಮಾಡುವ ಮೂಲಕ ರಾಮಮಂದಿರ ವಿಷಯವನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡಿದೆ ಎಂಬುದನ್ನು ಛಾಯಾಗ್ರಾಹಕ ಸುಧೀರ್ ಶೆಟ್ಟಿ ತಮ್ಮ ಛಾಯಾಚಿತ್ರಗಳ ಮೂಲಕ ಸಾಬೀತು ಪಡಿಸಿದ್ದಾರೆ.
ಶುಕ್ರವಾರ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ, ಅಯೋಧ್ಯೆಯಲ್ಲಿ ಮೂಲಭೂತ ಸೌಲಭ್ಯಗಳು ಎಷ್ಟು ಕನಿಷ್ಠ ಮಟ್ಟಕ್ಕಿದೆ, ಅಲ್ಲಿನ ಮುಸ್ಲಿಮ್ ಹಾಗೂ ಹಿಂದೂಗಳ ಬಾಂಧವ್ಯ ಹೇಗಿದೆ, ನಿಜಕ್ಕೂ ಆಯೋಧ್ಯೆಯಲ್ಲಿ ವಾಸಿಸುತ್ತಿರುವ ಜನತೆಗೆ ಏನು ಬೇಕಿದೆ ಎಂಬುದನ್ನು ಸುಧೀರ್ ಶೆಟ್ಟಿ ತಮ್ಮ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿದಿದ್ದಾರೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಆಗುವುದಕ್ಕೂ ಮೊದಲು ಹಾಗೂ ನಂತರದಲ್ಲಿ ನಡೆದ ಕೋಮು ದಳ್ಳುರಿಯಲ್ಲಿ ದೇಶಾದ್ಯಂತ ಸಾವಿರಾರು ಮಂದಿ ಭೀಕರವಾಗಿ ಸಾವನ್ನಪ್ಪಿ, ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ. ಹಾಗೂ ಲಕ್ಷಾಂತರ ಮಂದಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗಿದ್ದಾರೆ.
ಆದರೆ, ಆಯೋಧ್ಯೆಯಲ್ಲಿ 1990ರಿಂದ 2018ರವರೆಗೆ ಒಂದೇ ಒಂದು ಕೋಮು ಗಲಭೆ ಆಗಿಲ್ಲ. ಅಷ್ಟರಮಟ್ಟಿಗೆ ಅಯೋಧ್ಯೆಯ ಮುಸ್ಲಿಮ್ ಹಾಗೂ ಹಿಂದೂಗಳು ಅಣ್ಣತಮ್ಮಂದಿರಂತೆ ಜೀವಿಸುತ್ತಿದ್ದಾರೆ ಎಂಬುದನ್ನು ನಿರೂಪಿಸುವ ಚಿತ್ರಗಳಿಲ್ಲಿವೆ.
ಅಯೋಧ್ಯೆ ಮುಖ್ಯರಸ್ತೆಯಲ್ಲಿರುವ ಅಯೋಧ್ಯೆ ಮುಸ್ಲಿಂ ಸಂಘದ ಅಧ್ಯಕ್ಷ ಬಾಬಾ ಖಾನ್ ಟೈಲರ್ ಅಂಗಡಿ ಇಟ್ಟು ಜೀವನ ನಡೆಸುತ್ತಿದ್ದಾರೆ. ಇವರ ಅಂಗಡಿಯಲ್ಲಿಯೆ ರಾಮನ ಮೂರ್ತಿಗೆ ಬೇಕಾದ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಇಂತಹ ಕೋಮುಸೌಹಾರ್ದತೆ ಹೊಂದಿರುವ ಪ್ರದೇಶವನ್ನು ಸಂಘಪರಿವಾರ ದ್ವೇಷದ ವಾತಾವರಣ ನಿರ್ಮಿಸಲು ಹೊರಟಿದೆ. ಬಿಜೆಪಿಗೆ ರಾಮಮಂದಿರ ಕಟ್ಟುವ ಯಾವ ಯೋಚನೆಯೂ ಇಲ್ಲವೆಂದು ಅಯೋಧ್ಯೆಯ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಗಿ ಸುಧೀರ್ ಶೆಟ್ಟಿ ಹೇಳುತ್ತಾರೆ.
ಪ್ರದರ್ಶನದಲ್ಲಿರುವ ಗುಜರಾತ್, ಬಾಂಬೆ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕೋಮುದಳ್ಳುರಿಯಿಂದ ಸಾಮಾನ್ಯ ಜನರು ಸಾವನ್ನಪ್ಪಿರುವ ಚಿತ್ರಗಳು ಮನ ಕಲಕುವಂತಿದೆ. ಒಂದು ಪಕ್ಷದ ಸ್ವಾರ್ಥ ಹಿತಾಸಕ್ತಿಗಾಗಿ ದೇಶದ ಜನತೆ ಏನೆಲ್ಲ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಹಾಗೂ ಇಲ್ಲಿವರೆಗೂ ಏನೆಲ್ಲ ಕಳೆದುಕೊಂಡಿದ್ದೇವೆ ಎಂಬುದನ್ನು ಪ್ರತಿಯೊಂದು ಛಾಯಾಚಿತ್ರವು ಸಾಕ್ಷೀಕರಿಸುತ್ತಿದೆ.
ಅಯೋಧ್ಯೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತದೆ. ಉತ್ತಮ ಆಸ್ಪತ್ರೆಗಳಿಲ್ಲ. ಶಾಲಾ ಕಾಲೇಜುಗಳಿಲ್ಲ. ಹಾಗೂ ಅಲ್ಲಿನ ಸಾವಿರಾರು ದೇವಸ್ಥಾನಗಳು ದುರಸ್ಥಿಗೊಳ್ಳದೆ ಹಾಳಾಗುತ್ತಿವೆ. ಅಲ್ಲಿನ ಜನತೆಗೆ ಸರಿಯಾದ ಉದ್ಯೋಗವಿಲ್ಲ. ಇದ್ಯಾವುದರ ಬಗೆಗೂ ಚಿಂತಿಸದ ರಾಜಕೀಯ ಪಕ್ಷಗಳು ಕೇವಲ ರಾಮಮಂದಿರವನ್ನು ರಾಜಕೀಯ ಸ್ವಾರ್ಥತೆಗೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಇಂತಹ ವಾಸ್ತವತೆಗಳನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದೇನೆ.
-ಸುಧೀರ್ ಶೆಟ್ಟಿ, ಛಾಯಾಗ್ರಾಹಕ