varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 13 Jan, 2019

ಸಿಂಗ್‌ಗೆ ಸ್ಥಾನ
ಒಳ್ಳೆಯ ಡಾಕ್ಟರ್ ಒಬ್ಬರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಸಲುವಾಗಿ ಹುಡುಕಾಟ ನಡೆದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೇಲ್ಮನೆಯಲ್ಲಿ ಪಂಜಾಬ್‌ನಿಂದ ಅವಕಾಶ ನೀಡಲಾಗುತ್ತದೆಯೇ ಅಥವಾ ತಮಿಳುನಾಡಿನಿಂದಲೇ? ಜೂನ್ 14ರಂದು ಸಿಂಗ್ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತದೆ. ತನ್ನ ಸಂಖ್ಯಾಬಲದ ಆಧಾರದಲ್ಲಿ ಅಸ್ಸಾಂನಿಂದ ಮತ್ತೊಮ್ಮೆ ಸಿಂಗ್ ಅವರನ್ನು ಚುನಾಯಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ. ಅವರ ತವರು ರಾಜ್ಯ ಪಂಜಾಬ್‌ನಲ್ಲಿ ಈ ಅವಕಾಶ ಸಿಗಬೇಕಿದ್ದರೆ, ಅಂಬಿಕಾ ಸೋನಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಆನಂದ್‌ಪುರ ಸಾಹಿಬ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಪಂಜಾಬ್‌ನಲ್ಲಿ ಆಡಳಿತ ಪಕ್ಷವಾಗಿರುವುದರಿಂದ, ಉಪಚುನಾವಣೆಯ ಮೂಲಕ ಸಂಸತ್ತಿನಲ್ಲಿ ಸಿಂಗ್ ಅವರಿಗೆ ಅವಕಾಶ ಕಲ್ಪಿಸಬಹುದಾಗಿದೆ. ತಮಿಳುನಾಡಿನಿಂದ ಈ ಮುತ್ಸದ್ದಿಗೆ ಅವಕಾಶ ನೀಡಲಾಗುತ್ತದೆ ಎಂಬ ವದಂತಿಯೂ ಕೇಳಿಬರುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಜತೆ ಸೇರಿದರೆ ಡಿಎಂಕೆ ಈ ವರ್ಷ ಆರು ರಾಜ್ಯಸಭಾ ಸ್ಥಾನಗಳ ಪೈಕಿ ಮೂರನ್ನು ಗೆಲ್ಲಬಹುದಾಗಿದೆ. ಮಹಾಘಟಬಂಧನ ಸುಸೂತ್ರವಾಗಲಿ ಎಂಬ ನಿರೀಕ್ಷೆಯಲ್ಲಿ ಬಹುಶಃ ಸಿಂಗ್ ಇರಬಹುದು!


ಜನರ ಧ್ವನಿ, ಇದು ಗಾಂಧಿ ಶೈಲಿ
ದಿಲ್ಲಿ ಕಾಂಗ್ರೆಸ್ ಮುಖ್ಯಸ್ಥರಾಗಿ ಅಜಯ್ ಮಾಕೆನ್ ಅವರ ಉತ್ತರಾಧಿಕಾರಿಯನ್ನು ನೇಮಿಸಲು ರಾಹುಲ್‌ಗಾಂಧಿ ಮೊರೆ ಹೋದದ್ದು ಆನ್‌ಲೈನ್ ಪ್ಲಾಟ್‌ಫಾರಂ ಶಕ್ತಿಯನ್ನು. ಶೀಲಾದೀಕ್ಷಿತ್ ಅವರನ್ನು ಈ ಹುದ್ದೆಗೆ ನೇಮಕ ಮಾಡುವುದು ಖಚಿತ ಎನ್ನುವುದು ಹಲವರ ನಂಬಿಕೆಯಾಗಿದ್ದರೂ, ಇಂಥದ್ದೊಂದು ಪ್ರಯತ್ನ ಪಕ್ಷದ ವಲಯದಲ್ಲಿ ನಡೆಯಿತು. ರಾಹುಲ್‌ಗಾಂಧಿ ವೈಯಕ್ತಿಕ ಆಡಿಯೊ ಸಂದೇಶವನ್ನು ದಿಲ್ಲಿಯ ಪಕ್ಷದ ಕಾರ್ಯಕರ್ತರಿಗೆ ಕಳುಹಿಸಿ, ತಮ್ಮ ಆಯ್ಕೆ ಯಾರು ಎಂಬ ಅಭಿಪ್ರಾಯ ತಿಳಿಸುವಂತೆ ಸೂಚಿಸಿದರು. ಇದರ ಮುಖ್ಯ ಉದ್ದೇಶವೆಂದರೆ ಅನಗತ್ಯ ಗದ್ದಲವನ್ನು ಹತ್ತಿಕ್ಕುವುದು ಹಾಗೂ ನಿಜವಾಗಿ ಯಾರು ಜನಪ್ರಿಯತೆ ಹೊಂದಿದ್ದಾರೆ ಹಾಗೂ ಈ ಹುದ್ದೆಗೆ ಯಾರು ಸೂಕ್ತ ಎಂದು ಪತ್ತೆ ಮಾಡುವುದು. ಪ್ಲಾಟ್‌ಫಾರಂನಲ್ಲಿ ಸಾವಿರಾರು ಮಂದಿ ನೋಂದಾಯಿಸಿಕೊಂಡಿದ್ದು, ಹಲವರು ಅಜಯ್ ಮಾಕೆನ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದ ಹಿನ್ನೆಲೆಯಲ್ಲಿ ಶೀಲಾ ಮೇಲುಗೈ ಸಾಧಿಸುತ್ತಾರೆ ಎನ್ನುವುದು ನಿಚ್ಚಳವಾಗಿತ್ತು. ಈ ಆನ್‌ಲೈನ್ ಪ್ಲಾಟ್‌ಫಾರಂ ಅನ್ನು ಈ ಮೊದಲು ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ತಿಳಿಯಲು ಬಳಸಲಾಗಿತ್ತು. ಶೀಲಾ ಅವರನ್ನು ದಿಲ್ಲಿ ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಯಿತು. ಅಂದರೆ ಜನಪ್ರಿಯ ಗಾದೆಯಂತೆ ಹಾವೂ ಸಾಯಬೇಕು; ಕೋಲೂ ಮುರಿಯಬಾರದು ಎಂಬ ತಂತ್ರವನ್ನು ಯಶಸ್ವಿಯಾಗಿ ಅನುಸರಿಸಲಾಯಿತು.


ಗಾಂಧಿ ಪ್ರಸ್ತುತತೆ
ಮಹಾತ್ಮಾ ಗಾಂಧಿಯವರ ಕನ್ನಡಕವನ್ನು ಎಲ್ಲೆಂದರಲ್ಲಿ ಪ್ರದರ್ಶಿಸುವ ಮೂಲಕ ಮೋದಿ ಸರಕಾರ, ಈ ಮಹಾತ್ಮನನ್ನು ಸ್ವಚ್ಛಭಾರತಕ್ಕೆ ಮಾತ್ರ ಸೀಮಿತಗೊಳಿಸಿರುವುದು ಸುಸ್ಪಷ್ಟ. ಆದರೆ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗಾಂಧೀಜಿ ಕುರಿತಾದ ಕೆಲ ಸ್ತಬ್ಧಚಿತ್ರಗಳಿರುತ್ತವೆ. ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರ ಪ್ರಕಾರ ಕನಿಷ್ಠ ಇಂಥ 20 ಸ್ತಬ್ಧಚಿತ್ರಗಳಿರುತ್ತವೆ. ವಿವಿಧ ರಾಜ್ಯಗಳ ಈ ಸ್ತಬ್ಧಚಿತ್ರಗಳು ಗಾಂಧೀಜಿಯವರ ದಂಡಿ ಸತ್ಯಾಗ್ರಹದಿಂದ ಹಿಡಿದು ಇತರ ಚಳವಳಿಗಳನ್ನು ಬಿಂಬಿಸಲಿವೆ. ಸಹಜವಾಗಿಯೇ ಇದಕ್ಕೆ ಕಾರಣ ಈ ವರ್ಷ ಗಾಂಧೀಜಿಯವರ 150ನೇ ಜಯಂತಿ ಇರುವುದು. ಆದರೆ ಬಿಜೆಪಿ ಆಡಳಿತದ ರಾಜ್ಯಗಳು ತಮ್ಮ ಪಕ್ಷದ ಐಕಾನ್‌ಗಳಿಗೆ ನೀಡಿದಷ್ಟು ಮಹತ್ವವನ್ನು ಗಾಂಧೀಜಿಗೆ ನೀಡದಿರುವ ಹಿನ್ನೆಲೆಯಲ್ಲಿ ಈ ರಾಜ್ಯಗಳ ಸ್ತಬ್ಧಚಿತ್ರಗಳು ಹೇಗಿರುತ್ತವೆ ಎಂಬ ಕುತೂಹಲ ಸಹಜವಾಗಿಯೇ ಇದೆ. ಆದರೆ ಒಂದಂತೂ ಸ್ಪಷ್ಟ. ಗಾಂಧಿ ಸಿದ್ಧಾಂತಗಳ ಬಗ್ಗೆ ನಿಮ್ಮ ದೃಷ್ಟಿಕೋನ ಏನೇ ಇದ್ದರೂ ನೀವು ಗಾಂಧೀಜಿಯವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ; ಇದು ದಿಲ್ಲಿಯಲ್ಲಿ ಈ ವರ್ಷದ ಗಣರಾಜ್ಯೋತ್ಸವ ಸ್ತಬ್ಧಚಿತ್ರಗಳ ಮೂಲಕ ಸಾಬೀತಾಗಲಿದೆ.


ರಾಜ್‌ಠಾಕ್ರೆಯಿಂದ ಮೋದಿಗೆ ಆಹ್ವಾನವಿಲ್ಲ
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಘಂಟಾಘೋಷವಾಗಿ ಮೋದಿ ಪರ ಹೇಳಿಕೆ ನೀಡಿದವರಲ್ಲಿ ರಾಜ್‌ಠಾಕ್ರೆ ಕೂಡಾ ಒಬ್ಬರು. ಮತದಾರರು ದೊಡ್ಡ ಸಂಖ್ಯೆಯಲ್ಲಿ ಮೋದಿಯವರನ್ನು ಬೆಂಬಲಿಸಿದರೆ, ಮೋದಿ ದೇಶದ ಅತ್ಯುತ್ತಮ ಪ್ರಧಾನಿ ಎನಿಸಿಕೊಳ್ಳುತ್ತಾರೆ ಎಂದು ಹೊಗಳುವಷ್ಟರ ಮಟ್ಟಿಗೆ ಮೋದಿ ಅಭಿಮಾನಿಯಾಗಿದ್ದವರು ರಾಜ್‌ ಠಾಕ್ರೆ. ಮೋದಿ ಕೂಡಾ ಗುಜರಾತ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭಗಳಲ್ಲಿ ರಾಜ್‌ಠಾಕ್ರೆಯವರನ್ನು ಆಹ್ವಾನಿಸಿದ್ದರು. ಆದರೆ ಈ ಪರಸ್ಪರ ಹೊಗಳಿಕೆ ಇದೀಗ ರಾಜ್‌ಠಾಕ್ರೆಯವರ ಮಟ್ಟಿಗಾದರೂ ಮುನಿಸಾಗಿ ಪರಿವರ್ತನೆಯಾಗಿದೆ. ಠಾಕ್ರೆ ಕುಟುಂಬ ಒಂದು ಸಂತಸದ ಸಮಾರಂಭಕ್ಕೆ ಸಜ್ಜಾಗುತ್ತಿದೆ. ಅದೆಂದರೆ ರಾಜ್‌ಠಾಕ್ರೆಯವರ ಪುತ್ರ ಸದ್ಯವೇ ವಿವಾಹಬಂಧನಕ್ಕೆ ಒಳಗಾಗುತ್ತಿದ್ದಾರೆ. ರಾಜ್‌ಠಾಕ್ರೆ ಈ ಸಡಗರದ ಸಂದರ್ಭಕ್ಕೆ ಅದ್ದೂರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದರೆ ಜತೆಜತೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಹಾಗೂ ಮಾಧ್ಯಮ ಜತೆಗಿನ ಸಂವಾದದಲ್ಲಿ ಮೋದಿ ವಿರುದ್ಧ ಅವಕಾಶ ಸಿಕ್ಕಿದಾಗಲೆಲ್ಲ ವಾಗ್ದಾಳಿ ನಡೆಸುತ್ತಿದ್ದಾರೆ. ಆದ್ದರಿಂದ ಮಗನ ಮದುವೆಗೆ ಯಾರನ್ನೆಲ್ಲ ಕರೆಯುತ್ತೀರಿ ಎಂಬ ಪ್ರಶ್ನೆ ರಾಜ್‌ ಠಾಕ್ರೆಗೆ ಇತ್ತೀಚೆಗೆ ಎದುರಾಯಿತು. ನೂತನ ದಂಪತಿಯನ್ನು ಹರಸಲು ಮೋದಿಯನ್ನು ಆಹ್ವಾನಿಸಲಾಗುತ್ತದೆಯೇ? ಎಂಬ ಪ್ರಶ್ನೆಗೆ ಥಟ್ಟನೆ ಠಾಕ್ರೆಯವರಿಂದ ಬಂದ ಉತ್ತರ, ‘‘ಹೇಗೆ ಸಾಧ್ಯ? ಮೋದಿಗೆ ವಿವಾಹಬಂಧನದ ಬಗ್ಗೆಯೇ ನಂಬಿಕೆ ಇಲ್ಲ.’’ ಒಂದು ಕಾಲದಲ್ಲಿ ತಮ್ಮನ್ನು ಹೊಗಳುತ್ತಿದ್ದ ಮಿತ್ರ ಹೀಗೆ ಹೇಳಿದ್ದು ಗೊತ್ತಾದರೆ ಖಂಡಿತವಾಗಿಯೂ ಮೋದಿ ನೊಂದುಕೊಳ್ಳುತ್ತಾರೆ.


ರಾಜಧಾನಿಯಲ್ಲಿ ಔತಣ ಪರ್ವ
 ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿರುವ ಔತಣಪರ್ವ ಮತ್ತು ಸಾಮಾಜಿಕ ಸಮಾವೇಶಗಳಿಗೆ ಕೊನೆಯೇ ಇಲ್ಲ. ಇದಕ್ಕೆ ಯಾವ ಪಕ್ಷವೂ ಹೊರತಲ್ಲ. ಈ ಸೀಸನ್‌ನ ಮೊದಲ ಔತಣಕೂಟ ಆಯೋಜಿಸಿದ್ದವರು ಕಾಂಗ್ರೆಸ್ ಮುಖಂಡ ಪ್ರಫುಲ್ ಪಟೇಲ್. ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ದ್ರಾವಿಡ ಮುನ್ನೇಟ್ರ ಕಳಗಂ, ಎಐಎಡಿಎಂಕೆ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್ ಹೀಗೆ ಎಲ್ಲ ವಿರೋಧ ಪಕ್ಷಗಳ ಮುಖಂಡರು ಅಂದರೆ ಮಹಾಮೈತ್ರಿಕೂಟದ ಪ್ರತಿಯೊಬ್ಬ ಗಣ್ಯರೂ ಇದಕ್ಕೆ ಸಾಕ್ಷಿಯಾದರು. ಆದರೆ ಈ ಔತಣ ರಾಜತಾಂತ್ರಿಕತೆ ವಿರೋಧ ಪಕ್ಷಗಳಿಗಷ್ಟೇ ಸೀಮಿತವಲ್ಲ. ಮರುದಿನವೇ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಹಾಜರಾತಿ ಮತ್ತು ಔತಣದ ದುಂದುವೆಚ್ಚ ಹೀಗೆ ಪ್ರತಿಯೊಂದರಲ್ಲೂ ಆಡಳಿತಾರೂಢ ಮೈತ್ರಿಕೂಟದ ಬಲ ಪ್ರದರ್ಶನ ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)