ಜ.18ರಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ
ಬೆಂಗಳೂರು, ಜ.13: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಜ.18 ರಿಂದ 27ರ ವರೆಗೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ಹೂವಿನ ಸಾಬರಮತಿ ಆಶ್ರಮವನ್ನು ಸಿದ್ಧಪಡಿಸಲಾಗುತ್ತಿದ್ದು, ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘಗಳ ನೇತೃತ್ವದಲ್ಲಿ ಈ ಪ್ರದರ್ಶನ ನಡೆಯಲಿದ್ದು, ಮಹಾತ್ಮ ಗಾಂದೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ ಈ ಬಾರಿ ‘ಗಾಂಧಿ-150’ ಶೀರ್ಷಿಕೆಯಡಿ ಪ್ರದರ್ಶನ ವನ್ನು ಗಾಂಧೀಜಿಯವರಿಗೆ ಅರ್ಪಿಸಲಾಗುತ್ತಿದೆ. ಗಾಂಧೀಜಿಯವರ ಹೂವಿನ ಮಾದರಿಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಸ್ನೀಲು ಪ್ಲವರ್ಸ್ ಸಂಸ್ಥೆಯ ಮಾಲಕ ಎಸ್.ಪಿ.ಅಗರ್‌ವಾಲ್ ಅವರು ವಹಿಸಿಕೊಂಡಿದ್ದಾರೆ.
ಸಾಬರಮತಿ ಆಶ್ರಮವು ಮುಖ್ಯ ಆಕರ್ಷಣೆ: ಸಾಬರಮತಿ ಆಶ್ರಮವು ಮುಖ್ಯ ಆಕರ್ಷಣೆಯಾಗಿದ್ದು, ಗಾಜಿನ ಮನೆಯ ಮಧ್ಯದಲ್ಲಿ ನಿರ್ಮಿಸಲಾಗುತ್ತಿದೆ. ಇದು 35 ಅಡಿ ಉದ್ದ, 20 ಅಡಿ ಅಗಲ ಹಾಗೂ 16 ಅಡಿ ಎತ್ತರವಿರಲಿದೆ. ಇದಕ್ಕೆ ಒಂದು ಬಾರಿಗೆ 1.20 ಲಕ್ಷ ಗುಲಾಬಿ ಹೂವುಗಳು (ರೆಡ್, ಆರೆಂಜ್ ಬಣ್ಣ) ಹಾಗೂ ಸುಮಾರು 1.60 ಲಕ್ಷ ಸೇವಂತಿಗೆ ಹೂವುಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಪ್ರದರ್ಶನ ಆರಂಭವಾದ ಐದು ದಿನಗಳ ನಂತರ ಹೂವುಗಳು ಬಾಡುತ್ತವೆ. ಹೀಗಾಗಿ ಮತ್ತೆ ಇಷ್ಟೇ ಸಂಖ್ಯೆಯ ಹೂವುಗಳನ್ನು ಮರು ಜೋಡಿಸಲಾಗುವುದು. ಹೀಗಾಗಿ ಒಟ್ಟಾರೆ 2.40 ಲಕ್ಷ ಗುಲಾಬಿ, 3.20 ಲಕ್ಷ ಸೇವಂತಿಗೆ ಹೂವುಗಳನ್ನು ಸಾಬರಮತಿ ಆಶ್ರಮಕ್ಕೆ ಬಳಸಲಾಗುವುದು. ಮಧ್ಯದಲ್ಲಿ ಗಾಂಧೀಜಿಯವರ ಪ್ರತಿಮೆ ಬರಲಿದೆ ಎಂದು ಎಸ್.ಪಿ.ಅಗರ್‌ವಾಲ್ ತಿಳಿಸಿದರು.
ದಂಡಿ ಸತ್ಯಾಗ್ರಹ ಯಾತ್ರೆಯ ಚಿತ್ರಣ: ಇದರ ಹಿಂಬದಿಯಲ್ಲಿ ದಂಡಿ ಸತ್ಯಾಗ್ರಹ ಯಾತ್ರೆಯ ಚಿತ್ರಣ ಮೂಡಿಬರಲಿದೆ. ಎಡ ಬದಿಯಲ್ಲಿ ಬಾಪು ಮನೆಯನ್ನು ಆರ್ಕಿಡ್ ಹೂವುಗಳಿಂದ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 250-300 ಆರ್ಕಿಡ್ ಗೊಂಚಲುಗಳು, 65 ಸಾವಿರ ಸೇವಂತಿಗೆ ಹೂವುಗಳಿಗೆ ಆರ್ಡರ್ ನೀಡಲಾಗಿದೆ. ಬಾಪುಮನೆಯು 12 ಅಡಿ ಉದ್ದ, 12 ಅಡಿ ಎತ್ತರ ಮತ್ತು 10 ಅಡಿ ಅಗಲ ಬರಲಿದೆ. ಮುಖ್ಯ ಥೀಮ್‌ಗಳಿಗೆ ಬೇಕಾದ ಹೂಗಳನ್ನು ಬೆಂಗಳೂರು ಸುತ್ತಮುತ್ತಲಿನ ಪಾಲಿಹೌಸ್‌ಗಳಲ್ಲಿ ಬುಕ್ ಮಾಡಲಾಗಿದೆ. ಇದರ ಜತೆಗೆ ಅಲಂಕಾರಿಕ ಸೊಪ್ಪು, ಹುಲ್ಲುಗಳನ್ನು ವಿತರಿಸಲಾಗುತ್ತದೆ ಎಂದರು.
ಒಂದು ವಾರದಿಂದ 12 ಮಂದಿ ಕೆಲಸ ಮಾಡುತ್ತಿದ್ದಾರೆ. ಜ.16ರ ವೇಳೆಗೆ ಶೇ.60ರಷ್ಟು ಕಾರ್ಯ ಮುಗಿಯಲಿದೆ. ಜ.17ರಂದು ಮಧ್ಯರಾತ್ರಿ ಇಲ್ಲವೇ ಬೆಳಗ್ಗೆ ಉಳಿದ ಕಾರ್ಯ ಪೂರ್ಣಗೊಳ್ಳಲಿದೆ. ಕೊನೆಯ ಮೂರು ದಿನಗಳಲ್ಲಿ ಪ್ರತಿದಿನ 50 ಮಂದಿ ಕಾರ್ಮಿಕರು ಗಾಜಿನ ಮನೆಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ಅಗರ್‌ವಾಲ್ ತಿಳಿಸಿದರು.
ಪ್ರದರ್ಶನದ ಅಂಗವಾಗಿ ಉದ್ಯಾನದಾದ್ಯಂತ ಆಯ್ದ ಭಾಗಗಳಲ್ಲಿ ಅಲಂಕಾರಿಕ ಹೂವಿನ ಗಿಡಗಳ ನೆಡುವಿಕೆ, ಸ್ವಚ್ಛತಾ ಕಾರ್ಯ, ಮುರಿದ ಕೊಂಬೆ, ರೆಂಬೆಗಳನ್ನು ತೆಗೆಯುವ ಕಾರ್ಯವನ್ನು ಲಾಲ್‌ಬಾಗ್‌ನ ಅಧಿಕಾರಿಗಳು ಕೈಗೊಂಡಿದ್ದಾರೆ. ಜತೆಗೆ ಜೇನು ನೊಣಗಳಿಂದ ಆಗುವ ಹಾನಿ ತಡೆಯಲು ಸಿಬ್ಬಂದಿಗೆ ಕಾರ್ಯಾಗಾರ ನಡೆಸಲಾಗಿದೆ. ಹಾವು, ನಾಯಿಗಳಿಂದ ರಕ್ಷಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದರು.