ಹಳದಿ ಕಾಮಾಲೆ ಅಥವಾ ಜಾಂಡೀಸ್: ನಾಟಿ ಮದ್ದು ಮತ್ತದರ ಪರಿಣಾಮಗಳು
ನಾಟಿ ಪಂಡಿತರ ಬಳಿ ಓಡುವ ಮೊದಲು ತುಸು ಯೋಚಿಸಿ
ಕಾಮಾಲೆ ಅಥವಾ ಜಾಂಡೀಸ್ ಎಂದರೆ ಅದೊಂದು ಕಾಯಿಲೆಯಲ್ಲ. ಅದೊಂದು ರೋಗಲಕ್ಷಣ.
ಕಾಮಾಲೆಗೆ ಚಿಕಿತ್ಸೆ ಕೊಡುವ ನಾಟಿ ಪಂಡಿತರು ಎಲ್ಲಾ ಊರುಗಳಲ್ಲೂ ಇರುತ್ತಾರೆ. ಸಾಮಾನ್ಯವಾಗಿ ಅವರಿಗೆ ಅದರ ಕುರಿತು ಜ್ಞಾನವೇ ಇರುವುದಿಲ್ಲ. ಆದರೆ ಜಾಂಡೀಸ್ ಸ್ಪೆಷಲಿಸ್ಟ್ ಎಂದು ಅವರು ಹೆಸರಿಟ್ಟುಕೊಂಡಿರುತ್ತಾರೆ. ಅವರು ಕೆಲವೊಂದು ಕಷಾಯಗಳನ್ನು ಕೊಡುತ್ತಾರೆ. ಸೀರಮ್ ಬಿಲಿರುಬಿನ್ ಲೆವೆಲ್ 5.00 ವರೆಗೆ ಇದ್ದಾಗ ಯಾವ ಚಿಕಿತ್ಸೆ ನೀಡದಿದ್ದರೂ ಕಾಮಾಲೆ ಎರಡರಿಂದ ಮೂರು ವಾರದೊಳಗಾಗಿ ತನ್ನಿಂತಾನೇ ಗುಣವಾಗುತ್ತದೆ. ಅದರ ಜೊತೆ ಜ್ವರ ಮತ್ತು ಬೇರೇನಾದರೂ ಚಿಕ್ಕ ಪುಟ್ಟ ಲಕ್ಷಣಗಳಿದ್ದರೆ ಅವಕ್ಕೆ ಮಾತ್ರ ಚಿಕಿತ್ಸೆ ತೆಗೆದುಕೊಂಡರೆ ಸಾಕಾಗುತ್ತದೆ. 5.00 ಒಳಗಾಗಿ ಬಿಲಿರುಬಿನ್ ಇದ್ದಾಗ ನಾಟಿ ಪಂಡಿತರ ಕಷಾಯ ತೆಗೆದುಕೊಂಡರೂ ಬಿಟ್ಟರೂ ಯಾವುದೇ ಪರಿಣಾಮವಾಗುವುದಿಲ್ಲ.
ಅಂತಹ ಪ್ರಕರಣಗಳು ಗುಣವಾಗಿದ್ದನ್ನೇ ಇಟ್ಟುಕೊಂಡು ಕಾಮಾಲೆಗೆ ನಾಟಿ ಪಂಡಿತರ ಕಷಾಯವೇ ಔಷಧಿ ಎಂಬ ಪ್ರಚಾರವನ್ನು ನಮ್ಮ ಜನ ಮಾಡುತ್ತಾ ಬಂದಿದ್ದಾರೆ. ಆದರೆ ನಮ್ಮ ಪಂಡಿತರಿಗೆ ಕಾಮಾಲೆಯೆಂದು ಮಾತ್ರ ಗೊತ್ತೇ ಹೊರತು ಅದರಾಚೆಗೆ ಅದರಿಂದಾಗುವ ಕ್ಲಿಷ್ಟತೆಯ ಅರಿವಿರುವುದಿಲ್ಲ.
ಸಾಮಾನ್ಯವಾಗಿ ನಾಟಿ ಪಂಡಿತರು ಕೆಲವು ಗಿಡಮೂಲಿಕೆಗಳನ್ನೆಲ್ಲಾ ಹಾಕಿ ಕಷಾಯ ಕಾಯಿಸುತ್ತಾರೆ. ಅದನ್ನು ಪ್ಲಾಸ್ಟಿಕ್ ಬಾಟಲಿಗೆ ಹಾಕಿ ರೋಗಿಗಳಿಗೆ ನೀಡುತ್ತಾರೆ. ನಾನು ನೋಡಿದ ಕೆಲವು ಬಾಟಲಿಗಳಂತೂ ಗುಜರಿ ಅಂಗಡಿಯಿಂದ ಕಿಲೋಗಿಷ್ಟೆಂದು ಕೊಟ್ಟು ಖರೀದಿಸಿದ ಬಾಟಲಿಗಳು. ಬಾಟಲಿ ಚೆನ್ನಾಗಿದ್ದರೂ ಇಲ್ಲದಿದ್ದರೂ ಅಡ್ಡ ಪರಿಣಾಮ ಬೀರಿಯೇ ಬೀರುತ್ತದೆ. ನಾಲ್ಕಾರು ಗಿಡಮೂಲಿಕೆಗಳನ್ನು ಒಟ್ಟು ಸೇರಿಸಿ ಬೇಯಿಸಿದಾಗ ಅಥವಾ ಒಂದೇ ಗಿಡಮೂಲಿಕೆಯನ್ನು ಬೇಯಿಸಿದಾಗಲೂ ಆಯಾ ಗಿಡಮೂಲಿಕೆಯಲ್ಲಿರುವ ಮೂಲ ರಸಾಯನಗಳು ಹೊರಬಂದೇ ಬರುತ್ತದೆ. ಅವುಗಳು ಪ್ಲಾಸ್ಟಿಕ್ ಜೊತೆ ಸೇರಿದಾಗ ಉಂಟಾಗುವ ರಸಾಯನಿಕ ಪ್ರಕ್ರಿಯೆಗಳು ಇನ್ನೊಂದು ಬೇರೆಯೇ ಸಮಸ್ಯೆಗೆ ಕಾರಣವಾಗುತ್ತದೆ. ಅದರಿಂದ ಕಾಮಾಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದಲ್ಲದೇ ಬೇರೆ ಸಮಸ್ಯೆ ಗಳಿಗೆ ಕಾರಣವಾಗಲೂಬಹುದು. ಈ ಕೆಮಿಕಲ್ ರಿಯಾಕ್ಷನ್ ಬಗ್ಗೆ ನಾಟಿ ಪಂಡಿತರಿಗೆ ತೀರ ಅರಿವಿರುವುದಿಲ್ಲ.ಕೆಲವೊಮ್ಮೆ ಅದು ಗಂಭೀರ ಅಡ್ಡಪರಿಣಾಮಗಳಿಗೆ ದಾರಿ ಮಾಡಿ ಕೊಡಬಹುದು.
ಕಾಮಾಲೆ ಎಂದ ಕೂಡಲೇ ಎಲ್ಲವೂ ಒಂದೇ ಆಗಿರುವುದಿಲ್ಲ. ಅದರಲ್ಲಿ ಹಲವು ವಿಧಗಳಿರುತ್ತವೆ. ಯಾವುದೇ ಕ್ಲಿಷ್ಟತೆಯಿಲ್ಲದ ಸಾಮಾನ್ಯ ಕಾಮಾಲೆ ಯಾವ ಔಷಧಿಯೂ ಇಲ್ಲದೇ ತನ್ನಿಂತಾನೇ ಗುಣವಾಗುತ್ತದೆ. ಅಂತಹದ್ದಕ್ಕೆ ಪಂಡಿತರು ಚಿಕಿತ್ಸೆ ನೀಡಿದರೆ ಅಭ್ಯಂತರವಿಲ್ಲ.
ಆದರೆ ಅದಕ್ಕಿಂತ ಮುಂಚೆ ಕಾಮಾಲೆ ಯಾವ ಕಾರಣಕ್ಕೆ ಬಂತು ಎನ್ನುವುದನ್ನು ಪತ್ತೆ ಹಚ್ಚುವುದು ಅತೀ ಅಗತ್ಯ. ಇಲಿ ಜ್ವರ, ಸೂಕ್ತ ಚಿಕಿತ್ಸೆ ಪಡೆಯದ ಅಥವಾ ಅರ್ಧ ಚಿಕಿತ್ಸೆ ಪಡೆದ ಮಲೇರಿಯಾ, ಕೆಲವೊಂದು ವಿಧದ ಡೆಂಗ್ ಜ್ವರ, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಇತ್ಯಾದಿಗಳಿಂದ ಸೀರಮ್ ಬಿಲಿರುಬಿನ್ ಅಂಶ ರಕ್ತದಲ್ಲಿ ಹೆಚ್ಚಾಗಬಹುದು.
ಹೊಟ್ಟೆಯ ಸುತ್ತಮುತ್ತಲಿನ ಯಾವುದೇ ಅಂಗದ ಕ್ಯಾನ್ಸರ್ ಯಕೃತ್ತಿಗೆ ಹರಡಿ ಅದರಿಂದಲೂ ರಕ್ತದ ಬಿಲಿರುಬಿನ್ ಅಂಶ ಹೆಚ್ಚಬಹುದು. ಇವು ಸಾಮಾನ್ಯವಾಗಿ ಪ್ರಾಣ ಹಾನಿಗೆ ಕಾರಣವಾಗಬಹುದು. ಓರ್ವ ನುರಿತ ಮತ್ತು ಪದವೀಧರ ವೈದ್ಯ ಇದನ್ನು ಸರಿಯಾಗಿ ನಿರ್ಧರಿಸಿ ಸೂಕ್ತ ಸಲಹೆ ನೀಡಬಲ್ಲ.
ನಮ್ಮ ಪಂಡಿತರುಗಳೂ ರಕ್ತ ಪರೀಕ್ಷೆ ಮಾಡಿಸುವುದಿದೆ. ಆದರೆ ಅವರು ಸೀರಮ್ ಬಿಲಿರುಬಿನ್ ಎಂಬ ಪರೀಕ್ಷೆ ಮಾತ್ರ ಮಾಡಿಸುತ್ತಾರೆ. ಇದು ಕೇವಲ ಸ್ಕ್ರೀನಿಂಗ್ ಪರೀಕ್ಷೆಯಷ್ಟೆ. ನಾರ್ಮಲ್ ಇದ್ದರೆ ಬೇರೆ ಪರೀಕ್ಷೆಗಳ ಅಗತ್ಯ ಬೀಳದು. ಬಿಲಿರುಬಿನ್ ಅಂಶ ಜಾಸ್ತಿಯಿದ್ದರೆ ಯಕೃತ್ತಿನ ಕಾರ್ಯಕ್ಷಮತೆಯ ಪರೀಕ್ಷೆ ಅರ್ಥಾತ್ ಲಿವರ್ ಫಂಕ್ಷನ್ ಟೆಸ್ಟ್ ಮಾಡಿಸಬೇಕು. ಅದು ಮುಂದಿನ ಪರೀಕ್ಷೆ ಬೇಕೇ ಬೇಡವೇ ಎನ್ನುವುದಕ್ಕೆ ಮಾರ್ಗಸೂಚಿ. ಅದನ್ನು ಅರಿಯಲು ಉತ್ತಮ ವೈದ್ಯಕೀಯ ಜ್ಞಾನ ಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕಾಮಾಲೆಯಿಂದ ಸಂಭವಿಸುವ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನೆಲ್ಲಾ ಸಾವುಗಳಿಗೆ ರೋಗಿಗಳ ನಿರ್ಲಕ್ಷ್ಯವೇ ಕಾರಣ.
ಜೀವ ಅಮೂಲ್ಯ. ಆದುದರಿಂದ ಕಾಮಾಲೆಯೆಂದ ಕೂಡಲೇ ನಾಟಿ ಪಂಡಿತರ ಬಳಿ ಓಡುವುದನ್ನು ನಿಲ್ಲಿಸಿ. ಎಲ್ಲಕ್ಕಿಂತ ಮೊದಲು ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿ. ನಿಜವಾಗಿಯೂ ಇಲ್ಲದ ಜಟಿಲತೆಗೆ ನಿಮ್ಮ ದೇಹವನ್ನು ಒಡ್ಡಬೇಡಿ. ನೀವಾಗಿಯೇ ಸರಳವಾದುದನ್ನು ಗಂಭೀರಗೊಳಿಸಿ ಜೀವ ಹಾನಿ ಮಾಡಿಕೊಳ್ಳಬೇಡಿ.