ಈ ಮಸೂದೆಯು ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರವೇ?
ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ 14ನೇ ವಿಧಿಯು ‘ಕಾನೂನಿನ ಕಣ್ಣಿಗೆ ಎಲ್ಲಾ ಪ್ರಜೆಗಳು ಸಮಾನರು’ ಎಂದಾಗಿದೆ . ಅದರ ಮೂಲವು ‘ಇಕ್ವಾಲಿಟಿ ಅಮೊಂಗ್ ಈಕ್ವಲ್ಸ್’ ಅಂದರೆ ‘ಸಮಾನರ ನಡುವೆ ಸಮಾನತೆ’ ಎಂದಾಗಿದೆ. ಹಾಗಿರುವಾಗ ನಮ್ಮ ಭಾರತೀಯ ಸಮಾಜದಲ್ಲಿ ತಲೆತಲಾಂತರದಿಂದ ಸಮಾಜದ ಒಂದು ವರ್ಗವು ‘ಕೀಳು’ ಎಂದು ಗುರುತಿಸಿ ಸಾವಿರಾರು ವರ್ಷಗಳಿಂದ ದಮನಿಸಲ್ಪಟ್ಟು ಅಸಾಮಾನ್ಯರಂತೆ ಜೀವಿಸುತಾ ಬಂದಿದೆ. ಅಂತಹ ವರ್ಗವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು, ಸಂವಿಧಾನದಲ್ಲಿ ಮೀಸಲಾತಿ ಎಂಬ ವಿಧಾನವನ್ನು ಪರಿಚಯಿಸಲಾಗಿದೆ. ಅಂದರೆ ಈ ಮೀಸಲಾತಿಯು ದಮನಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶವೇ ಹೂರತು, ಆರ್ಥಿಕವಾಗಿ ಹಿಂದುಳಿದವರನ್ನು ಮುಂದೆ ತರುವ ಅಸ್ತ್ರವಲ್ಲ ಎಂಬುದು ಸ್ಪಷ್ಟ.
ಹೀಗಿರುವಾಗ ಮಂಡಲ್ ಆಯೋಗವು ಅಧ್ಯಯನ ನಡೆಸಿ, ದೇಶದ ಸುಮಾರು 3,745 ಜಾತಿಗಳು ಅತೀ ಹಿಂದುಳಿದಿವೆ ಎಂದು ಅಂಕಿಅಂಶಗಳ ಸಹಿತ ವಿವರಿಸಿ, ಈ ಜಾತಿಗಳಿಗೆ ಸುಮಾರು ಶೇ. 27ರಷ್ಟು ಮೀಸಲಾತಿ ನೀಡಬೇಕೆಂದು ಸೂಚಿಸಿತ್ತು. ಅದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಈಗ ಮೇಲ್ವರ್ಗದವರಿಗೆ ಮೀಸಲಾತಿ ನೀಡಲು ಹೊರಟಿರುವ ಕೇಂದ್ರ ಸರಕಾರವು ಇಂತಹ ಯಾವುದೇ ಅಧ್ಯಯನ ನಡೆಸಲಿಲ್ಲ ಮತ್ತು ಅದರ ಬಗ್ಗೆ ಅಧ್ಯಯನ ಮಾಡಲು ಯಾವುದೇ ಆಯೋಗ ರಚಿಸಲಿಲ್ಲ. ಏಕಾಏಕಿ ಈ ಮಸೂದೆ ತಂದಿದ್ದು ನಿಜಕ್ಕೂ ಸಂವಿಧಾನ ಬಾಹಿರವೇ ಸರಿ. ಇನ್ನು ಜಾತಿಯಾಧಾರಿತವಾಗಿ ವಾರ್ಷಿಕ ಆದಾಯವನ್ನು ನೋಡಿದರೆ 5 ಲಕ್ಷಕ್ಕಿಂತ ಕಡಿಮೆ ಆದಾಯ ಎಸ್ಸಿಯಲ್ಲಿ ಶೇ. 87, ಎಸ್ಟಿಯಲ್ಲಿ ಶೇ.84, ಒಬಿಸಿಯಲ್ಲಿ ಶೇ.82 ಅದೇ ರೀತಿ ಫಾರ್ವರ್ಡ್ ಕಾಸ್ಟ್ಸ್‌ನಲ್ಲಿ ಶೇ.72. ಹಾಗೆಯೇ ವಾರ್ಷಿಕ ಆದಾಯ 10 ಲಕ್ಷಕ್ಕಿಂತ ಹೆಚ್ಚು ಹೊಂದಿರುವವರು ಎಸ್ಸಿಯಲ್ಲಿ ಶೇ. 7, ಎಸ್ಟಿಯಲ್ಲಿ ಶೇ.4, ಒಬಿಸಿಯಲ್ಲಿ ಶೇ.8 ಮತ್ತು ಫಾರ್ವರ್ಡ್ ಕಾಸ್ಟ್ಸ್‌ಗಳಲ್ಲಿ ಶೇ.16 ಇದೆ.
2014ರ ಯೂನಿಯನ್ ಪೂಬಿಲ್ಕ್ ಸರ್ವಿಸ್ ಕಮಿಷನ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ ಕೇವಲ ಒಟ್ಟು ಶೇ. 0.14ರಷ್ಟು ಆಯ್ಕೆಯಾಗಿರುವ ಯುಪಿಎಸ್ಸಿ ಅಭ್ಯರ್ಥಿಗಳ ಪೈಕಿ ಫಾರ್ವರ್ಡ್ ಕಾಸ್ಟ್ಸ್ ಮತ್ತು ಒಬಿಸಿಗಳು ಅತಿಹೆಚ್ಚು ಆಯ್ಕೆಗೊಂಡಿದ್ದಾರೆ (ಅಂದರೆ ಶೇ. 0.17) ಮತ್ತು ಎಸ್ಸಿ ಗಳು ಅತೀ ಕಡಿಮೆ (ಅಂದರೆ ಶೇ 0.08) ಮಾತ್ರ ಆಯ್ಕೆಗೊಂಡಿದ್ದಾರೆ.
ಇನ್ನು ಇಂಡಿಯನ್ ಹ್ಯೂಮನ್ ಡೆವಲಪ್ಮೆಂಟ್ ಸರ್ವೇ ಪ್ರಕಾರ ಪ್ರಾಥಮಿಕ ಶಿಕ್ಷಣ ರಂಗದಲ್ಲಿ 8-11 ವಯಸ್ಸಿನ ಮಕ್ಕಳ ಪೈಕಿ ಫಾರ್ವರ್ಡ್ ಕಾಸ್ಟ್ಸ್‌ನ ಶೇ.68ರಷ್ಟು ಮಕ್ಕಳು ಕ್ಲಾಸ್ 1 ಲೆವೆಲ್ನಲ್ಲಿದ್ದಾರೆ , ಅದೇ ಲೆಕ್ಕಾಚಾರದಲ್ಲಿ ಇತರರಲ್ಲಿ ಬಹಳ ಕಡಿಮೆ ಇದೆ. ಅಂದರೆ ಒಬಿಸಿಯಲ್ಲಿ ಶೇ.56, ಎಸ್ಸಿಗಳಲ್ಲಿ ಶೇ. 45 ಹಾಗೂ ಎಸ್ಟಿಗಳಲ್ಲಿ ಶೇ. 40 ಮಾತ್ರ ಇದೆ. ಅದೇ ರೀತಿ ‘ಯುಜಿಸಿ ವಾರ್ಷಿಕ ವರದಿ 2017’ ಪ್ರಕಾರ ಉನ್ನತ ಶಿಕ್ಷಣ ರಂಗದಲ್ಲಿ ಎಸ್ಟಿ ಕೇವಲ ಶೇ. 1ರಷ್ಟು, ಎಸ್ಸಿಗಳಲ್ಲಿ ಶೇ. 3ರಷ್ಟು, ಒಬಿಸಿ 1ರಷ್ಟು ಹಾಗೂ ಫಾರ್ವರ್ಡ್ ಕಾಸ್ಟ್ಸ್‌ನಲ್ಲಿ ಅತೀ ಹೆಚ್ಚು ಅಂದರೆ ಶೇ.95 ರಷ್ಟು ಪ್ರತಿನಿಧಿತ್ವವಿದೆ. ಹೀಗೆ ಹೇಳುತ್ತಾ ಹೋದರೆ ಎಸ್ಸಿ/ಎಸ್ಟಿ /ಒಬಿಸಿಗಳು ಹೆಚ್ಚಿನ ಎಲ್ಲ ರಂಗಗಳಲ್ಲಿಯೂ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿರುವಾಗ ಎಸ್ಸಿ/ಎಸ್ಟಿ /ಒಬಿಸಿಗಳ ಪಕ್ಷವೆಂದು ಗುರುತಿಸಿಕೊಡಿರುವ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಆರ್‌ಜೆಡಿ, ಬಿಜೆಡಿ, ಸಿಪಿಎಂ ನಂತಹ ಪಕ್ಷಗಳಿರುವಾಗ ಕೇವಲ ಎರಡೇ ದಿನದಲ್ಲಿ ಪಾರ್ಲಿಮೆಂಟಿನ ಎರಡೂ ಮನೆಗಳಲ್ಲಿ (ಲೋಕ ಸಭೆಯಲ್ಲಿ 3,233 ಹಾಗೂ ರಾಜ್ಯಸಭೆಯಲ್ಲಿ 1,653 ಅಂತರದಿಂದ) ಜಾರಿಗೆ ಬಂದು, ರಾಷ್ಟ್ರಪತಿಯವರು ಅಂಕಿತವನ್ನು ಹಾಕಿರುವಾಗ ಏಕೆ ಯಾರೂ ವಿರೋಧಿಸಲಿಲ್ಲ ಎಂಬ ಪ್ರಶ್ನೆಗೆ ‘ಚಿನ್ಮಯ ಮಹಾನಂದ್’ ಎಂಬ ದಲಿತ ಚಿಂತಕನ ಫೇಸ್‌ಬುಕ್ ವಾಲ್‌ನಲ್ಲಿ ಸರಿಯಾದ ಉತ್ತರವಿದೆ.
‘‘ಬಿಜೆಪಿ ಪಡೆದ (ಒಟ್ಟು ಶೇ.31ರಷ್ಟು ಮತಗಳ ಪೈಕಿ) ಅರ್ಧದಷ್ಟು ಮತಗಳು ಎಸ್ಸಿ/ಎಸ್ಟಿ /ಒಬಿಸಿಗೆ ಸೇರಿದ್ದರೂ ಅದು ಸವರ್ಣೀಯರ ಪರ ರಿಸ್ಕ್ ತೆಗೆದುಕೊಂಡಿದೆ, ಅದೇ ಸಮಯದಲ್ಲಿ ಎಸ್ಸಿ/ಎಸ್ಟಿ/ಒಬಿಸಿಗಳ ಶೇ.80-99ರಷ್ಟು ಮತಗಳನ್ನು ನಿರಂತರ ಪಡೆಯುತ್ತಾ ಬಂದಿರುವ ಎಸ್ಪಿ, ಬಿಎಸ್ಪಿ, ಆರ್‌ಜೆಡಿ, ಬಿಜೆಡಿ, ಸಿಪಿಎಂನಂತಹ ಪಕ್ಷಗಳು ತಾನು ಪಡೆಯುವ ಶೇ.1-10ರಷ್ಟು ಸವರ್ಣೀಯರ ಮತಗಳ ರಿಸ್ಕನ್ನು ತೆಗೆದು ‘ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿ’ ಮಸೂದೆಯನ್ನು ವಿರೋಧಿಸುವ ಧೈರ್ಯಮಾಡಲಿಲ್ಲ, ಅದರಿಂದಾಗಿ ಈ ಮಸೂದೆಯು ಕೇವಲ ಎರಡೇ ದಿನದಲ್ಲಿ ಜಾರಿಗೆ ಬಂತು. ಈ ಅದ್ಭುತ ಏಕೆ ಸಂಭವಿಸಿತೆಂದರೆ, ಶೇ.85ರಷ್ಟು ಬಹುಜನರ ಕುರಿತು ಮಾತನಾಡುವ ಪಕ್ಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಗತಿಪರ ಪಡೆಗಳು ತನ್ನ ಶೇ.1ರಷ್ಟು ಸವರ್ಣೀಯರ ಮತಗಳೊಂದಿಗೆ ಪ್ರತಿನಿಧಿಸುತ್ತಿದ್ದಾರೆ. ಅವರು ತನ್ನ ಶೇ.99ರಷ್ಟು ಬಹುಜನ ಮತಗಳನ್ನು ತಗ್ಗಿಸಿ ಮಸೂದೆಯನ್ನು ಸ್ವಾಗತಿಸುವ ಧೈರ್ಯಮಾಡುವಾಗ ಅಲ್ಪಸವರ್ಣೀಯರ ಮತಗಳನ್ನು ಕಳೆದುಕೊಳ್ಳುವವರು (ಎಸ್ಪಿ, ಬಿಎಸ್ಪಿ, ಆರ್‌ಜೆಡಿ, ಬಿಜೆಡಿ, ಸಿಪಿಎಂನಂತಹ ಪಕ್ಷಗಳು) ಏಕೆ ತಾನೇ ಅದನ್ನು ವಿರೋಧಿಸುವರು?...’’
ಅದೇನೇ ಇರಲಿ ಕೇಂದ್ರ ಸರಕಾರವು ಮೀಸಲಾತಿಯನ್ನು ಉದ್ಯೋಗ ಖಾತರಿ ಯೋಜನೆ ಮಾಡಲು ಹೊರಟಂತಿದೆ, ನಿಜವೇನೆಂದರೆ, ಮೋದಿಯವರು 2014ರ ಚುನಾವಣೆ ಸಂದರ್ಭದಲ್ಲಿ ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಆದರೆ ಏನನ್ನೂ ಮಾಡಲಾಗಲಿಲ್ಲ ಬದಲಾಗಿ ಕಳೆದ ಐದು ವರ್ಷಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಸುಮಾರು ಬಹಳಷ್ಟು ಜನರು ಉದ್ಯೋಗ ಕಳೆದು ಕೊಂಡಿದ್ದಾರೆ ಅಂತಹ ಜನರನ್ನು ತನ್ನತ್ತ ಸೆಳೆಯಲು ಈ ರೀತಿಯ ಮೀಸಲಾತಿಯನ್ನು ತಂದಿದೆ. ಆದರೆ ಪ್ರಾಯೋಗಿಕವಾಗಿ ನೋಡುವುದಾದರೆ, ಇದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ವಾದಿಸುವವರು ಹೇಳುತ್ತಾರೆ. ಈಗಾಗಲೇ ಫಾರ್ವರ್ಡ್ ಕಾಸ್ಟ್ಸ್‌ನವರು ಶೇ. 50ರಷ್ಟು ಉದ್ಯೋಗ ಮತ್ತು ದಾಖಲಾತಿಯನ್ನು ಪಡೆಯುತ್ತಿದ್ದಾರೆ. ಅಂದರೆ ಸರಕಾರವು ಅವರಿಗಿದ್ದ ಶೇ. 50ರಿಂದ ಶೇ.10 ತೆಗೆದು ಮೀಸಲಾತಿ ರೂಪದಲ್ಲಿ ಅವರಿಗೆ ನೀಡುತ್ತಿದೆ. ಅದರಿಂದಾಗಿಯೇ ಮೀಸಲಾತಿಯ ಅರ್ಹತಾ ಮಾನದಂಡವನ್ನು ವಿಸ್ತರಿಸಿದೆ(ಅಂದರೆ ಶೇ. 90ರಷ್ಟು ಜನರು ಪಡೆಯ ಬಹುದಾಗಿದೆ) ಎಂಬುದು ಸ್ಪಷ್ಟವಾಗುತ್ತದೆ ಎಂದು ವಾದಿಸುತ್ತಾರೆ. ಅದೇನೆ ಇರಲಿ ಈಗ ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಇದಕ್ಕಿಂತ ಮುಂಚೆ ಆಂಧ್ರ ಸರಕಾರವು ಜಾರಿಗೆ ತಂದ ಮುಸ್ಲಿಂ ರಿಸರ್ವೇಶನ್ ಬಿಲ್, ರಾಜಸ್ಥಾನ ಸರಕಾರದ ಜಾಟ್ ರಿಸರ್ವೇಶನ್ ಬಿಲ್ ಮತ್ತು ಗುಜರಾತ್ ಸರಕಾರದ ಮೇಲ್ಜಾತಿ ಮೀಸಲಾತಿಗಳು ಸುಪ್ರೀಂಕೋರ್ಟಿನಲ್ಲಿ ಅಂತ್ಯಕಂಡಿವೆ. ಅದೇ ರೀತಿ ಇಂದಿರಾ ಸಹನೆ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಕೇಸಿನಲ್ಲಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ‘‘ಸಂವಿಧಾನದ ಪ್ರಕಾರ ಆರ್ಥಿಕ ಮಾನದಂಡವು ಮೀಸಲಾತಿಯ ಮೂಲ ಉದ್ದೇಶಲ್ಲ’’ ಎಂದಿತು. ಅದೇನೇ ಇರಲಿ ಈ ಮಸೂದೆಯು ಸಂವಿಧಾನದ ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ಎಂಬುದು ಅರ್ಥವಾಗುತ್ತದೆ.
-ಸಂಶೋಧಕರು, ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಅನಾಲಿಸಿಸ್, ಬೆಂಗಳೂರು