ಎಳ್ಳು ಬೆಲ್ಲದ ಜೊತೆಗೆ ಮಕರ ಸಂಕ್ರಮಣ
ದೇಶದಾದ್ಯಂತ ಆಚರಿಸುವ ಹಬ್ಬಗಳಲ್ಲಿ ಮಕರಸಂಕ್ರಾಂತಿಯೂ ಒಂದು. ಇಂದಿನಿಂದ ಉತ್ತರಾಯಣ ಪ್ರಾರಂಭವಾಗುವುದು. ಎಲ್ಲರಿಗೂ ತಿಳಿದಿರುವಂತೆ ಆಯನವೆಂದರೆ ಸೂರ್ಯನು ಚಲಿಸುವಮಾರ್ಗ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ಚಲಿಸುತ್ತಾನೆ.
ಮಕರ ಸಂಕ್ರಮಣವೆಂದರೆ: ಮಕರ ರಾಶಿಯಾಗಿಯು, ಸಂಕ್ರಮಣ ಎಂದರೆ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವುದು ಎಂದರ್ಥ. (ಮೇಷ ಸಂಕ್ರಮಣ, ವೃಷಭ ಸಂಕ್ರಮಣ, ಮಿಥುನ ಸಂಕ್ರಮಣ ಹೀಗೆ....) ಹಾಗಾಗಿ ಈಗ ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡಿರುವುದರಿಂದಾಗಿ ಇಂದು ಮಕರಸಂಕ್ರಮಣ. ಯಾಕೆ ಉಳಿದೆಲ್ಲಕ್ಕಿಂತ ಇಷ್ಟು ವಿಶೇಷವೆಂದರೆ: ದೇಶದಾದ್ಯಂತ ಆಚರಿಸುವ ಹಬ್ಬಗಳಲ್ಲಿ ಮಕರಸಂಕ್ರಾಂತಿಯು ಒಂದು. ಇಂದಿನಿಂದ ಉತ್ತರಾಯಣ ಪ್ರಾರಂಭವಾಗುವುದು. ಎಲ್ಲರಿಗೂ ತಿಳಿದಿರುವಂತೆ ಆಯನವೆಂದರೆ ಸೂರ್ಯನು ಚಲಿಸುವಮಾರ್ಗ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ಚಲಿಸುತ್ತಾನೆ. ಕೊರೆಯುವ ಚಳಿ ಮಾಗಿತಿಂಗಳು ಮುಗಿದು ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ.
ರೈತರಿಗೆ ಮಕರಸಂಕ್ರಮಣವು ತುಂಬಾ ವಿಶೇಷವಾದ ಸ್ಥಾನವನ್ನು ಪಡೆಯುತ್ತದೆ. ರೈತರು ಸುಗ್ಗಿ ಹಬ್ಬವೆಂದೂ ಕರೆಯುತ್ತಾರೆ. ರೈತರು ತಮ್ಮ ಹೊಲದಲ್ಲಿಯೇ ಬೆಳೆದ ಬೆಳೆಗಳಾದ ಅವರೆಕಾಯಿ, ಕಬ್ಬು, ಸಜ್ಜೆ, ಗೆಣಸು-ಮರಗೆಣಸು, ನೆಲಗಡಲೆ, ಬದನೆಕಾಯಿ, ವಿವಿಧ ತರಕಾರಿ, ಸೇವಂತಿಗೆ, ಮಲ್ಲಿಗೆ, ಜಾಜಿ ಇನ್ನೂ ಅನೇಕ ಬಗೆಯ ಬೆಳೆಗಳನ್ನು ಕಟಾವುಮಾಡಿ, ರಾಶಿ ಹಾಕಿ ಪೂಜೆ ಮಾಡಿ ಸಿಹಿಪೊಂಗಲ್ (ಸಿಹಿಹುಗ್ಗಿ) ಮಾಡಿ ಸೂರ್ಯದೇವನಿಗೆ ನೈವೇದ್ಯವನ್ನು ಮಾಡಿ, ಹಾಗೆಯೇ ಎಳ್ಳು-ಬೆಲ್ಲವನ್ನು (ಅದರಲ್ಲಿ ಬಿಳಿಎಳ್ಳು, ಬೆಲ್ಲದ ಸಣ್ಣಸಣ್ಣ ಚೂರುಗಳು, ಕಡಲೆಪಪ್ಪು ಅಥವಾ ಬಟಾಣಿ, ಹುರಿದ ನೆಲಗಡಲೆ, ಕಬ್ಬಿನ ಚೂರುಗಳಿರುತ್ತವೆ) ಎಲ್ಲ ಬಂಧುಗಳಿಗೂ, ಸ್ನೇಹಿತರಿಗೂ ಹಂಚಿ ಬಹಳ ಹರುಷದಿಂದ, ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಸಕ್ಕರೆ ಅಚ್ಚುಗಳಿಂದ ಗೊಂಬೆಗಳನ್ನು ಮಾಡುವುದು ಶ್ರೇಷ್ಠವಾಗಿರುತ್ತದೆ.
ಅಲ್ಲದೇ ರಾತ್ರಿ ಎತ್ತುಗಳನ್ನು ಅಲಂಕರಿಸಿ ಕಿಚ್ಚು ಹಾಯಿಸಿ ಅವುಗಳಲ್ಲಿನ ಭಯವನ್ನೂ ಓಡಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಊರಿಗೆ ಊರೇ ಅಂಗಳದಲ್ಲಿ ರಂಗೋಲಿ ಬಿಡಿಸಿ ಹೂವುಗಳಿಂದ ಅಲಂಕರಿಸಿ ಸಿಹಿ ಭಕ್ಷ ಭೋಜನ ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ. ದಕ್ಷಿಣ ಕನ್ನಡದಲ್ಲಿ ದೇವಾಲಯಗಳಲ್ಲಿ ವಿಶೇಷವಾದ ಪೂಜೆಗಳನ್ನು ನಡೆಸಲಾಗುತ್ತದೆ. ಉಡುಪಿ ಶ್ರೀ ಕೃಷ್ಣ ಮಠ, ಮಾರುಕಟ್ಟೆ ಮಹಾಲಿಂಗೇಶ್ವರ ದೇವಾಲಯ, ಮಂದರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ನಾಗರಾಡಿ ಇನ್ನೂ ಅನೇಕಾನೇಕ ಕಾರಣೀಕ ಕಡೆಗಳಲ್ಲಿ ಢಕ್ಕೆಬಲಿ- ಹಾಲುಹಿಟ್ಟಿನ ಸೇವೆ, ದರ್ಶನ ಸಿಂಗಾರಹೂವು, (ನಾಗದೇವರ ನುಡಿಸೇವೆ) ತುಲಾಭಾರ ಸೇವೆ, ಹೂವಿನ ಅಲಂಕಾರ ಸೇವೆ, ಸಿಂಗಾರ ಹೂವು, ಸೇವಂತಿಗೆ ಹೂವಿನ ಅಲಂಕಾರ, ರಂಗಪೂಜೆ, ಸತ್ಯನಾರಾಯಣ ಪೂಜೆ, ರಥೋತ್ಸವ ನಡೆಯುತ್ತದೆ. ಕೇರಳದಲ್ಲಿ 45 ದಿನಗಳ ಕಾಲ ವ್ರತಾಚರಣೆಯಲ್ಲಿದ್ದ ಅಯ್ಯಪ್ಪಭಕ್ತರು ಇರುಮುಡಿ ಕಟ್ಟಿಕೊಂಡು ಶಬರಿಮಲೆಗೆ ಹೋಗುತ್ತಾರೆ. ಹಾಗೆಯೇ ರಾತ್ರಿ ಸಮಯದಲ್ಲಿ ಭಕ್ತಾದಿವೃಂದಕ್ಕೆ ಮಕರಜ್ಯೋತಿ ಕಾಣಿಸುವುದು ಇವತ್ತಿನ ಸಂಕ್ರಮಣಕ್ಕೆ. ತಮಿಳುನಾಡಿನಲ್ಲಿ ಪೊಂಗಲ್ ಆಚರಣೆ ಬಹಳ ವಿಶೇಷವಾಗಿ ನಡೆಯುತ್ತದೆ. ಆಂಧ್ರಪ್ರದೇಶ, ತೆಲಂಗಾಣದಲ್ಲಿಯೂ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ ಹಾಗೂ ಉತ್ತರ ಭಾಗದಲ್ಲಿ ಗಾಳಿಪಟ ಹಾರಿಸುವುದು ಅಲ್ಲಿನ ವಿಶೇಷತೆ. ಹನ್ನೆರಡು ವರ್ಷಗಳಿಗೊಮ್ಮೆ ಬರುವ ಕುಂಭಮೇಳ ಹರಿದ್ವಾರ, ಉಜ್ಜೈನಿ, ನಾಸಿಕ್ ಹಾಗೂ ಅಲಹಾಬಾದ್ ನಲ್ಲಿ ಜರುಗುವುದು ಈ ಸಂಕ್ರಮಣದಲ್ಲಿಯೇ. ಈ ಬಾರಿ ಕುಂಭಮೇಳ ವಿಜೃಂಭಣೆಯಿಂದ ನಡೆಸಲು ಚಾಲನೆ ನೀಡಲಾಗಿದೆ. ಹಾಗೆಯೇ ಮಾಘಮೇಳ ಪ್ರಯಾಗದಲ್ಲಿಯೂ, ಗಂಗಾಸಾಗರ ಮೇಳ ಗಂಗಾ ನದಿ ತಟದಲ್ಲಿಯೂ, ಮಕರಮೇಳ ಒಡಿಶಾದಲ್ಲಿಯೂ ನಡೆಯುತ್ತದೆ.
ಆಧ್ಯಾತ್ಮಿಕವಾಗಿ:
ಇಂದು ಕಪ್ಪು ಎಳ್ಳನ್ನು ದಾನ ಮಾಡುವುದು, ಪವಿತ್ರ ನದಿಯಲ್ಲಿ ಕಪ್ಪು ಎಳ್ಳಿನೊಂದಿಗೆ ಪುಣ್ಯಸ್ನಾನ ಮಾಡುವುದು, ದೇವಾಲಯದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚುವುದು ಇವೆಲ್ಲವೂ ಪುಣ್ಯದ ಕೆಲಸವೆಂಬುದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಉತ್ತರಾಯಣದ ಪುಣ್ಯಕಾಲದಲ್ಲಿ ನಾವು ಮಾಡಿದ ದಾನಧರ್ಮಗಳು ಜನ್ಮ ಜನ್ಮ ದಲ್ಲಿಯೂ ಸದಾ ನಮ್ಮನ್ನು ಕಾಯುವಂತೆ ಸೂರ್ಯದೇವನು ಅನುಗ್ರಹಿಸುತ್ತಾನೆ ಎಂಬುದು ವಾಡಿಕೆ. ಈ ಶುಭದಿನದಂದು ತಿಲದಾನ, ತಿಲಹೋಮ, ತಿಲಭಕ್ಷಣೆ ಒಳ್ಳೆಯದು.
ಎಳ್ಳು ಬೆಲ್ಲ ನೀಡುವುದರ ಒಳಾರ್ಥ
ಸುಗ್ಗಿ ಕಾಲದಲ್ಲಿ ಚಳಿ ಅಧಿಕವಾಗಿರುತ್ತದೆ. ಎಳ್ಳಿನಲ್ಲಿ ಎಣ್ಣೆಯ ಅಂಶವಿರುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಅದನ್ನು ಬೆಲ್ಲದೊಂದಿಗೆ ಸೇವಿಸಿದರೆ ಮೂಳೆಗಳಿಗೆ ಕ್ಯಾಲ್ಸಿಯಂ ಹಾಗೂ ಎಣ್ಣೆಯ ಅಂಶ ನಮ್ಮ ಚರ್ಮವನ್ನು ಸುಕ್ಕುಗಟ್ಟಲು ಬಿಡದೆ ಚರ್ಮದ ಕಾಂತಿ ಹೆಚ್ಚಿಸಲು ಸಹಾಯಮಾಡುತ್ತದೆ. ದೇಹವನ್ನು ಬೆಚ್ಚಗಿರಿಸುತ್ತದೆ. ಪುಷ್ಟಿ ನೀಡುತ್ತದೆ.
ಎಳ್ಳು ಬೆಲ್ಲ ತಿಂದು ಸ್ನೇಹ ಸೌಹಾರ್ದಯನ್ನು ಮೆರೆಯೋಣ.!
ಒಳ್ಳೊಳ್ಳೆಯ ಮಾತುಗಳನ್ನೇ ನುಡಿಯೋಣ.!!
ಸೂರ್ಯಕಾಂತಿ ಹೂವಿನಂತೆ ಸದಾ ಉಲ್ಲಾಸ-ಸಂತೋಷದಿಂದ ಬಾಳೋಣ.!
ಮನಸ್ಸನ್ನು ಹುಗ್ಗಿಯಂತೆ ಸಿಹಿಯಾಗಿರಿಸೋಣ.!!
ಸಿಂಧು ಭಾರ್ಗವ್. ಬೆಂಗಳೂರು