ಪ್ರಧಾನಿ ಮೋದಿಗೆ ಪ್ರಪ್ರಥಮ ಫಿಲಿಪ್ ಕೊಟ್ಲರ್ ರಾಷ್ಟ್ರಪತಿ ಪ್ರಶಸ್ತಿಯ ಗೌರವ
ಹೊಸದಿಲ್ಲಿ,ಜ.15: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವ ಮಾರುಕಟ್ಟೆ ಶೃಂಗ ಭಾರತ ನೀಡುವ ಪ್ರಪ್ರಥಮ ಫಿಲಿಪ್ ಕೊಟ್ಲರ್ ರಾಷ್ಟ್ರಪತಿ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ. ಈ ಪ್ರಶಸ್ತಿಯು ಜನರು, ಲಾಭ ಮತ್ತು ಗ್ರಹ ಎಂಬ ಮೂರು ಅಂಶಗಳ ಮೇಲೆ ಕೇಂದ್ರೀಕೃತವಾಗಿದ್ದು, ವಾರ್ಷಿಕವಾಗಿ ರಾಷ್ಟ್ರ ನಾಯಕರಿಗೆ ನೀಡಲಾಗುತ್ತದೆ ಎಂದು ಪ್ರಧಾನ ಮಂತ್ರಿಗಳ ಕಚೇರಿಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ಮೋದಿಯನ್ನು ಅವರು ರಾಷ್ಟ್ರಕ್ಕಾಗಿ ತೋರಿದ ಅದ್ಭುತ ನಾಯಕತ್ವದ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ತಿಳಿಸಲಾಗಿದೆ. ದಣಿಯವರಿಯದ ಶಕ್ತಿಯ ಜೊತೆಗೆ ಭಾರತದ ಪರ ಅವರ ನಿಸ್ವಾರ್ಥ ಸೇವೆಯ ಫಲಿತಾಂಶವಾಗಿ ದೇಶ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕವಾಗಿ ಅಭೂತಪೂರ್ವ ಪ್ರಗತಿಯನ್ನು ಕಂಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮೋದಿ ನಾಯಕತ್ವದಲ್ಲಿ ಭಾರತವು ಆವಿಷ್ಕಾರ ಮತ್ತು ಮೌಲ್ಯವರ್ಧಿತ ಉತ್ಪಾದನೆ (ಮೇಕ್ ಇನ್ ಇಂಡಿಯಾ)ದ ಕೇಂದ್ರವಾಗಿ ಹಾಗೂ ಮಾಹಿತಿ ತಂತ್ರಜ್ಞಾನ, ಲೆಕ್ಕಪತ್ರ ಮತ್ತು ಫೈನಾನ್ಸ್ ಇತ್ಯಾದಿ ವೃತ್ತಿಪರ ಸೇವೆಗಳ ಜಾಗತಿಕ ತಾಣವಾಗಿ ಗುರುತಿಸಲ್ಪಟ್ಟಿದೆ ಎಂದು ಪ್ರಶಸ್ತಿಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ಛ ಭಾರತದಂಥ ಕಾರ್ಯಕ್ರಮಗಳು ಭಾರತವನ್ನು ಜಗತ್ತಿನಲ್ಲಿ ಪ್ರಮುಖ ಉತ್ಪಾದನಾ ಮತ್ತು ವ್ಯವಹಾರ ಕೇಂದ್ರವನ್ನಾಗಿ ಮಾರ್ಪಡಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರೊ. ಫಿಲಿಪ್ ಕೊಟ್ಲರ್ ಅಮೆರಿಕದ ಇಲಿನೊಯಿಸ್ನಲ್ಲಿರುವ ನಾರ್ತ್ವೆಸ್ಟರ್ನ್ ಯುನಿವರ್ಸಿಟಿಯ ಕೆಲಾಗ್ಸ್ ಸ್ಕೂಲ್ ಆಫ್ ಮ್ಯಾನೆಜ್ಮೆಂಟ್ನ ವಿಶ್ವಪ್ರಸಿದ್ಧ ಮಾರ್ಕೆಟಿಂಗ್ ಉಪನ್ಯಾಸಕರಾಗಿದ್ದಾರೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾರ್ಜಿಯದ ಎಮೊರಿ ವಿಶ್ವವಿದ್ಯಾನಿಲಯದ ಜಗದೀಶ್ ಶೇಟ್ ಪ್ರಧಾನಿ ಮೋದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.