ಅಳುಪ ಉತ್ಸವಕ್ಕೆ ಐತಿಹಾಸಿಕ ನಗರ ಬಾರಕೂರು ಸಜ್ಜು
ರಾಜ್ಯಪಾಲರ ಕೋಟೆ, ಕಲ್ಯಾಣಿ, ಅರಮನೆಗಳ ಸ್ವಚ್ಛತೆ
ಉಡುಪಿ, ಜ.16: ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ ಆಳುಪರ ರಾಜಧಾನಿಯಾಗಿದ್ದ ಐತಿಹಾಸಿಕ ನಗರ ಬಾರಕೂರು, ಜ.25ರಿಂದ 27ರವರೆಗೆ ನಡೆಯುವ ಆಳುಪ ಉತ್ಸವಕ್ಕೆ ಸಜ್ಜಾ ಗುತ್ತಿದ್ದು, ಅದಕ್ಕಾಗಿ ಬಾರಕೂರು ಕೋಟೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.
11ನೇ ಶತಮಾನದಲ್ಲಿ ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ್ದ ಅಳುಪರು ತಮ್ಮ ರಾಜ್ಯದ ರಾಜಧಾನಿಯನ್ನು ಉದ್ಯಾವರದಿಂದ ಬಾರಕೂರಿಗೆ ವರ್ಗಾಯಿಸಿದ್ದರು. ವಿಜಯನಗರದ ಆಳ್ವಿಕೆಗೆ ಮೊದಲು ಬಾರಕೂರಿನಲ್ಲಿ ಅಳುಪರೇ ಪ್ರಧಾನ ರಾಗಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ದಲ್ಲಿ ಹಮ್ಮಿಕೊಳ್ಳಲಾಗಿರುವ ಆಳುಪ ಉತ್ಸವದ ಮೂಲಕ ಬಾರಕೂರಿನ ಗತವೈಭವ ಹಾಗೂ ಇತಿಹಾಸವನ್ನು ನೆನಪಿಸುವ ಕೆಲಸ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಜಯನಗರ ಕಾಲದ ನಂದರಾಯನ ಕೋಟೆಯನ್ನು ಶುಚಿಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಬಾರಕೂರಿನ ಗತವೈಭವ: ಬಾರಕೂರು 1336ರಿಂದ 1554ರವರೆಗೆ ವಿಜಯನಗರ ಸಾಮಾಜ್ರಕ್ಕೆ ಒಳಪಟ್ಟಿದ್ದು, ವಿಜಯನಗರ ಅರಸರು ಬಾರ ಕೂರನ್ನು ಪ್ರಾಂತೀಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಸಮೀಪದಲ್ಲಿರುವ ಹಂಗಾರಕಟ್ಟೆ ಬಂದರಿನಿಂದಾಗಿ ಬಾರಕೂರು ಇವರಿಗೆ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಅದಕ್ಕಾಗಿ ಇಲ್ಲಿ ರಾಜ್ಯಪಾಲರ ಕೋಟೆಯನ್ನೇ ನಿರ್ಮಿಸಿಕೊಳ್ಳಲಾಗಿತ್ತು.
ಅಳುಪರು ಹಾಗೂ ವಿಜಯನಗರದ ಆಳ್ವಿಕೆಯ ಮಧ್ಯೆ ಹೊಯ್ಸಳರು ಕೂಡ ಇಲ್ಲಿ ಆಳ್ವಿಕೆ ನಡೆಸಿದ್ದರು. 1554ರ ನಂತರ ಬಾರಕೂರು ವಿಜಯನಗರ ಸಾಮ್ರಾಜ್ಯದಿಂದ ಕೆಳದಿ ನಾಯಕರಿಗೆ ಅಮರ ಮಾಗಣೆಯಾಗಿ ದೊರೆಯಿತು. ಆಗ ತುಳುನಾಡಿನ ಆಡಳಿತ ಕೆಳದಿ ನಾಯಕರ ಕೈವಶವಾಯಿತು. ಮುಂದೆ ಹೈದರಾಲಿ, ಟಿಪ್ಪು ಹಾಗೂ ಬ್ರಿಟಿಷರ ಆಳ್ವಿಕೆಯಲ್ಲೂ ಬಾರಕೂರು ಪ್ರಧಾನ ಪ್ರಾಂತವಾಗಿ ಮಾರ್ಪಟಿತ್ತು.
ಸ್ವಾತಂತ್ರ ಪೂರ್ವದಲ್ಲಿ ರಾಜಧಾನಿಯಾಗಿ ಮೆರೆದಿದ್ದ ಬಾರಕೂರು ಸ್ವಾತಂತ್ರ ನಂತರ ಇತರ ಹಳ್ಳಿಗಳಂತೆ ಉಳಿದುಕೊಂಡಿತು. ಇಲ್ಲಿ ಭೂತಾಳ ಪಾಂಡ್ಯ ಆಳ್ವಿಕೆ ನಡೆಸಿದ ಎಂಬ ದಂತಕತೆ ಇದ್ದರೂ ಈವರೆಗೆ ಅದಕ್ಕೆ ಪೂರಕವಾದ ಯಾವುದೇ ಐತಿಹಾಸಿಕ ದಾಖಲೆಗಳು ದೊರೆತಿಲ್ಲ ಎನ್ನುತ್ತಾರೆ ಇತಿಹಾಸ ತಜ್ಞ ಡಾ.ಬಿ. ಜಗದೀಶ್ ಶೆಟ್ಟಿ.
ಸ್ವಚ್ಛಗೊಳ್ಳುತ್ತಿರುವ ಕೋಟೆ: ಆಳುಪ ಉತ್ಸವಕ್ಕೆ ವೇದಿಕೆಯಾಗಿ ಬಾರಕೂರಿನಲ್ಲಿರುವ ವಿಜಯನಗರ ಕಾಲದ ರಾಜ್ಯಪಾಲರ ಕೋಟೆಯನ್ನು ಸಜ್ಜುಗೊಳಿಸ ಲಾಗುತ್ತಿದೆ. ಅದಕ್ಕಾಗಿ ರಾಜಪಾಲರ ಕೋಟೆ, ಕಲ್ಯಾಣಿ, ಅರಮನೆ, ಸ್ಟೋರ್ ರೂಂ, ಕುದುರೆ ಲಾಯಗಳನ್ನು ಶುಚಿಗೊಳಿಸಲಾಗುತ್ತಿದೆ.
14.12 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೋಟೆಯಲ್ಲಿರುವ ಅರಮನೆಗೆ ಸಂಬಂಧಿಸಿದ ಐತಿಹಾಸಿಕ ಕಲ್ಯಾಣಿಯ ಹೂಳು ತೆಗೆಯಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಈ ಕಾರ್ಯ ನಡೆಯುತ್ತಿದ್ದು, ಸುಮಾರು 40 ಅಡಿ ಆಳದ ಈ ಕಲ್ಯಾಣಿಯಲ್ಲಿ ತುಂಬಿದ್ದ ಸುಮಾರು ಐದು ಅಡಿಯಷ್ಟು ಹೂಳನ್ನು ತೆಗೆಯಲಾಗಿದೆ. ಇನ್ನು ಐದು ಅಡಿಯಷ್ಟು ಹೂಳು ತೆಗೆಯುವ ಕಾರ್ಯ ನಡೆಯಲಿದೆ.
ಈ ಕಲ್ಯಾಣಿಯಲ್ಲಿ ಮೇಲಿಂದ ಕೆಳಗಿನವರೆಗೆ ಕಲ್ಲುಗಳನ್ನು ಜೋಡಿಸಿ ಇಡ ಲಾಗಿದೆ. ಈ ಕಲ್ಲುಗಳಲ್ಲಿ ಹನುಮಂತ, ಗಣಪತಿ ಸೇರಿದಂತೆ ವಿವಿಧ ಕೆತ್ತನೆ ಗಳು ಕಂಡುಬಂದಿವೆ. ಹೂಳೆತ್ತುವ ಸಂದರ್ಭ ಕೋಟೆಯ ಗತವೈಭವವನ್ನು ಹೇಳುವ ಹಲವು ಐತಿಹಾಸಿಕ ಸೊತ್ತುಗಳು ಪತ್ತೆಯಾಗುತ್ತಿವೆ.
ಅದೇ ರೀತಿ ಕೋಟೆಯೊಳಗಿರುವ ರಾಜ್ಯಪಾಲರ ಅರಮನೆಯನ್ನು ಅದರ ಮೂಲ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ಸ್ವಚ್ಚಗೊಳಿಸಲಾಗುತ್ತಿದೆ. ಗಿಡಗಂಟೆ ಹಾಗೂ ಮಣ್ಣಿನಿಂದ ಹೂತುಹೊಗಿದ್ದ ಅರಮನೆಯನ್ನು ಗೋಡೆಗಳು ಕಾಣುವ ರೀತಿ ಯಲ್ಲಿ ಸ್ವಚ್ಛ ಮಾಡಲಾಗುತ್ತಿದೆ. ಉತ್ಸವದಲ್ಲಿ ಇದಕ್ಕೊಂದು ರೂಪ ನೀಡಿ ಇಲ್ಲಿನ ಇತಿಹಾಸ ಹೇಳುವ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ವಿಜಯನಗರ ಸಾಮಾಜ್ಯಕ್ಕೆ ಸಂಬಂಧಿಸಿದ ಈ ಪ್ರದೇಶದಲ್ಲಿ ರಾಜ್ಯಪಾಲರು ಇಲ್ಲೇ ಉಳಿದುಕೊಳ್ಳುತ್ತಿದ್ದರು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕಾಗಿ ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ರಾಜ್ಯಪಾಲರನ್ನು ಬದಲಾಯಿಸ ಲಾಗುತ್ತಿತ್ತು ಇಲ್ಲವೇ ವರ್ಗಾವಣೆ ಮಾಡಲಾಗುತ್ತಿತ್ತು ಎಂದು ಇತಿಹಾಸ ತಜ್ಞ ಡಾ.ಜಗದೀಶ್ ಶೆಟ್ಟಿ ಹೇಳುತ್ತಾರೆ.
ಹಂಗಾರಕಟ್ಟೆ ಬಂದರಿನ ಮೂಲಕ ಪರ್ಸಿಯಾ, ಅರೇಬಿಯಾದಿಂದ ಬರುವ ಕುದುರೆಗಳನ್ನು ಬಾರಕೂರಿಗೆ ತಂದು ಇಲ್ಲಿಯೇ ವ್ಯವಹಾರ ಕುದುರಿ ಸಲಾಗುತ್ತಿತ್ತು. ಆ ಕುದುರೆಗಳನ್ನು ಕಟ್ಟಿ ಹಾಕುವ ಪ್ರದೇಶ ಈಗಲೂ ಇತಿಹಾಸ ವನ್ನು ಪ್ರತಿಬಿಂಬಿಸುತ್ತದೆ. ಇದನ್ನು ಕೂಡ ಶುಚಿಗೊಳಿಸಿ ಮಣ್ಣಿನಲ್ಲಿ ಹೂತು ಹೋಗಿರುವ ಕಲ್ಲು ಕಂಬಗಳ ಕೆತ್ತನೆಯನ್ನು ತೋರುವಂತೆ ಮಾಡಲಾಗುತ್ತಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಹೆರಿಟೇಜ್ ವಾಕ್ ಎಂಬ ಯೋಜನೆ ಜಾರಿಯಾಗಲಿದ್ದು, ಇದರ ಅಡಿಯಲ್ಲಿ ಬಾರಕೂರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಐತಿಹಾಸಿಕ ನಗರ ಬಾರಕೂರನ್ನು ಸಂರಕ್ಷಿಸುವ ಅಗತ್ಯ ಇದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಾರಕೂರಿಗೂ ಆಗಮಿಸುವಂತೆ ಯೋಜನೆ ರೂಪಿಸಲಾಗುವುದು.
-ಅನಿತಾ ಭಾಸ್ಕರ್, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಉಡುಪಿ
ಬಾರಕೂರು ಕೋಟೆಯನ್ನು ಅದರ ಮೂಲ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಬಾರ ದಂತೆ ಶುಚಿಗೊಳಿಸಲಾಗುತ್ತಿದೆ. ಈಗಾಗಲೇ ಕೆರೆಯ ಹೂಳೆತ್ತುವ ಕಾರ್ಯ ಆರಂಭಗೊಂಡಿದ್ದು, ಇನ್ನು ಮೂರುನಾಲ್ಕು ದಿನ ಮುಂದುವರಿಯುತ್ತದೆ. ಅದೇ ರೀತಿ ಕೋಟೆಯ ವಿಶಾಲ ಪ್ರದೇಶವನ್ನು ಸಮತಟ್ಟುಗೊಳಿಸುವ ಕೆಲಸ ಭರದಿಂದ ಸಾಗುತ್ತಿದೆ.
-ಮಂಜಯ್ಯ ಹೆಗ್ಡೆ, ಮಾರ್ಗದರ್ಶಕ