ತಾಳಿಕೋಟೆ ಕದನಕ್ಕೆ ಕೋಮುವಾದದ ಬಣ್ಣ ಬಳಿದ ಕೇಸರಿ ಇತಿಹಾಸಕಾರರು
ಭಾಗ-2
ರಕ್ಕಸಗಿಯಲ್ಲಿ ಮಹಾನ್ ಸಂಗ್ರಾಮ ನಡೆದಿರುವ ಬಗ್ಗೆ ಈಗ ಯಾವುದೇ ಸುಳಿವು ಲಭ್ಯವಿಲ್ಲ. ಅದರೆ ನದಿದಡದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಣ್ಣ ಮಸೀದಿಯೊಂದು ಕಾಣುತ್ತದೆ. ಯುದ್ಧದ ವೇಳೆ ಈ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಸುಲ್ತಾನ್‌ಶಾಹಿಗಳ ಸೇನೆ ಈ ಮಸೀದಿಯನ್ನು ನಿರ್ಮಿಸಿದೆಯೆಂದು ಗ್ರಾಮಸ್ಥರು ಹೇಳುತ್ತಾರೆ. ಮಸೀದಿಯ ಸುತ್ತಮುತ್ತಲಿನ ಜಾಗದಲ್ಲಿ ಉತ್ಖನನ ನಡೆದಿರುವಂತೆ ಮೇಲ್ನೋಟಕ್ಕೆ ಕಾಣುತ್ತದೆ ಎಂಬುದಾಗಿ ರಕ್ಕಸಗಿ ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷ ಶಂಕರ್‌ಗೌಡ ಹೇಳುತ್ತಾರೆ. ‘‘ರಕ್ಕಸಗಿ ಮೂಲಗ್ರಾಮವು ಮಸೀದಿಯ ಸುತ್ತಲೂ ಅಸ್ತಿತ್ವದಲ್ಲಿತ್ತು. ಆದರೆ 30 ವರ್ಷಗಳ ಹಿಂದೆ ಈ ಗ್ರಾಮವು ಸುಮಾರು 300 ಮೀಟರ್ ದೂರದಲ್ಲಿ ಒಳನಾಡಿಗೆ ಸ್ಥಳಾಂತರಗೊಂಡಿತ್ತು. ನಮ್ಮ ಹಳ್ಳಿಯು ಸ್ಥಳಾಂತರಗೊಂಡಾಗ, ನಮ್ಮ ಗುಡಿಸಲುಗಳನ್ನು ನೆಲಸಮಗೊಳಿಸಿದ್ದುದು ಈಗಲೂ ತನಗೆ ನೆನಪಿದೆ’’ಯೆಂದು ಅವರು ಹೇಳುತ್ತಾರೆ. ಆಗ ನೆಲದಲ್ಲಿ ನಮಗೆ ನಾಣ್ಯಗಳು ಹಾಗೂ ಯುದ್ಧಕವಚಗಳು ದೊರೆತಿದ್ದವು ಎಂದವರು ಹೇಳುತ್ತಾರೆ.
ಮಸೀದಿಯನ್ನು ಹಾದು ಹೋದಾಗ, ನದಿಯ ಉತ್ತರ ದಂಡೆಯ ಎರಡೂ ದಿಕ್ಕುಗಳಲ್ಲಿ ದಿಗಂತದವರೆಗೆ ವ್ಯಾಪಿಸಿದ ಹಾಗೆ ಕಾಣುವ ಬಯಲು ಪ್ರದೇಶವನ್ನು ಕಾಣುವಿರಿ. ಬಹುಮನಿ ಸುಲ್ತಾನರ ಸೇನೆಗಳು ಇಲ್ಲಿ ತಮ್ಮ ಡೇರೆಗಳನ್ನು ಸ್ಥಾಪಿಸಿದ್ದವು. ನದಿಯ ದಕ್ಷಿಣದ ದಂಡೆಯಲ್ಲಿ ವಿಜಯನಗರ ಸೇನೆಯು ಬೀಡುಬಿಟ್ಟಿತ್ತು. ಈಗ ಇವೆಲ್ಲವೂ ಪ್ರಶಾಂತವಾಗಿವೆ. ಶತಮಾನಗಳ ಹಿಂದೆ ಇಲ್ಲೊಂದು ಮಹಾನ್ ಯುದ್ಧ ನಡೆದಿರುವ ಗೊಡವೆ ಇಲ್ಲದೆ ಕುರುಬರು ತಮ್ಮ ಕುರಿಗಳನ್ನು ಮೇಯಿಸುತ್ತಿರುವ ದೃಶ್ಯವು ನಿಮಗೀಗ ಕಾಣಸಿಗುತ್ತದೆ.
ಅಹ್ಮದ್‌ನಗರದ ದೊರೆ ಒಂದನೇ ಹುಸೈನ್ ನಿಝಾಮ್ ಶಾ ಅವರ ಅಸ್ಥಾನದಲ್ಲಿದ್ದ ಅಫ್ತಾಬಿ ಎಂಬಾತ ಈ ಯುದ್ಧದ ಪ್ರತ್ಯಕ್ಷದರ್ಶಿಯಾಗಿದ್ದಾನೆ. ತನ್ನ ‘ತಾರೀಫಿ ಹುಸೈನ್ ಶಾ ಬಾದ್‌ಶಾ ದಖ್ಖನ್’ನಲ್ಲಿ ಅವನು ತಾಳಿಕೋಟೆ ಕದನದ ಭೀಕರತೆಯ ಬಗ್ಗೆ ಆತ ಸವಿಸ್ತಾರವಾಗಿ ಹೀಗೆ ಬರೆದಿದ್ದಾನೆ. ‘‘ವಿರುದ್ಧ ದಿಕ್ಕುಗಳಿಂದ ಧಾವಿಸಿ ಬಂದ ಎರಡು ಮೋಡಗಳು ಪರಸ್ಪರ ಢಿಕ್ಕಿ ಹೊಡೆದವು, ಬೆಂಕಿಯ ಎರಡು ಸಾಗರಗಳು ಕುದಿಯತೊಡಗಿದವು. ಎರಡೂ ಸೇನೆಗಳ ಸದ್ದು ಹಾಗೂ ರೊಚ್ಚು ಎಷ್ಟು ತೀವ್ರವಾಗಿತ್ತೆಂದರೆ, ಅದನ್ನು ಕಂಡು ರಾಕ್ಷಸ ಕೂಡಾ ಭಯದಿಂದ ಹುಚ್ಚನಾಗಿಬಿಡುತ್ತಿದ್ದ. ದಿನವಿಡೀ ಕುದುರೆಸವಾರರು ಉಕ್ಕಿನ ಬಾಣಗಳನ್ನು ಎಸೆಯುತ್ತಿದ್ದರು. ಅಲ್ಲಿ ಸಿಕ್ಕಿಹಾಕಿಕೊಂಡ ವೀರರ ದೇಹಗಳನ್ನು ಅವು ಸೀಳುತ್ತಿದ್ದವು. ಬಾಣಗಳ ಹೊಡೆತಕ್ಕೆ ಹಲವಾರು ಮಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ರೊಚ್ಚಿಗೆದ್ದ ಹಾಗೂ ಅಮಲುಪದಾರ್ಥ ಸೇವಿಸಿರುವ ಆನೆಗಳು ಬೆಟ್ಟಗಳ ಸಾಲಿನಂತೆ ಸೈನಿಕರ ಗಡಿರೇಖೆಯನ್ನು ಪ್ರವೇಶಿಸಿದವು. ಅವುಗಳ ಕಣ್ಣುಗಳ ರೆಪ್ಪೆಗಳು ಬಾಣದಂತಿದ್ದವು ಹಾಗೂ ಅವುಗಳ ಕಣ್ಣುಗಳು ಗೋಮೇದಕ ಹರಳಿನಂತೆೆ ಕೆಂಪಗಿದ್ದವು. ಸೊಂಡಿಲಿನಿಂದ ಹಿಡಿದು ಬಾಲದವರೆಗೂ ಅವುಗಳಿಗೆ ಯುದ್ಧಕವಚವನ್ನು ಹೊದಿಸಲಾಗಿತ್ತು. ಎರಡೂ ಸೈನ್ಯಗಳ ಕೂಗಾಟ ಹಾಗೂ ಗದ್ದಲಗಳು ಆಗಸವನ್ನು ಭೇದಿಸಿದವು.(ತಾರೀಫಿ ಹುಸೈನ್ ಶಾ ಬಾದ್ ಶಾ ದಖ್ಖನ್, ಸಂಪಾದಿಸಿರುವವರು: ಜಿ.ಟಿ. ಕುಲಕರ್ಣಿ ಹಾಗೂ ಎಂ. ಎಸ್. ಮೇಟ್. ಪ್ರಕಾಶಕರು, ಭಾರತ ಇತಿಹಾಸ ಸಂಶೋಧಕ ಮಂಡಳ ಪುಣೆ, 1987).
ಇನ್ನೋರ್ವ ಇತಿಹಾಸಕಾರ ಹಾಗೂ ತಾಳಿಕೋಟೆ ಯುದ್ಧ ನಡೆದ ಕೆಲವು ದಶಕಗಳ ಬಳಿಕ ಬಿಜಾಪುರದ ಆಸ್ಥಾನದಲ್ಲಿ ಉದ್ಯೋಗದಲ್ಲಿದ್ದ ಮುಹಮ್ಮದ್ ಕಾಸೀಂ ಫರಿಶ್ತಾ ಹೀಗೆ ಬರೆದಿದ್ದಾನೆ. ‘‘ಮೈತ್ರಿ ಪಡೆಗಳು ತಮ್ಮ ಸೈನ್ಯವನ್ನು ಯುದ್ಧಕ್ಕಾಗಿ ಸುಸಜ್ಜಿತಗೊಳಿಸಿವೆ. ಸೇನೆಯ ಬಲಭಾಗದ ನೇತೃತ್ವವನ್ನು ಬಿಜಾಪುರದ ಆದಿಲ್‌ಶಾಹಿ ಸೈನ್ಯಕ್ಕೆ ವಹಿಸಲಾಗಿತ್ತು, ಎಡಭಾಗದ ನೇತೃತ್ವವನ್ನು ಬೀದರ್‌ನ ಬೀರಾದ್ ಶಾ ಹಾಗೂ ಗೋಲ್ಕೊಂಡಾದ ಇಬ್ರಾಹೀಂ ಕುತುಬ್ ಶಾ ಸೈನ್ಯಕ್ಕೆ, ಮಧ್ಯಭಾಗವನ್ನು ಅಹ್ಮದ್‌ನಗರದ ಹುಸೈನ್ ನಿಝಾಮ್ ಶಾ ಸೈನ್ಯಕ್ಕೆ ವಹಿಸಲಾಗಿತ್ತು. ಬಲವಾದ ಸರಪಳಿಗಳು ಹಾಗೂ ಹಗ್ಗಗಳಿಂದ ಒಟ್ಟಾಗಿ ಜೋಡಿಸಲ್ಪಟ್ಟಿದ್ದ ಫಿರಂಗಿದಳಗಳು ಮುಂಚೂಣಿಯಲ್ಲಿದ್ದವು. ಆಯಕಟ್ಟಿನ ಸ್ಥಾನಗಳಲ್ಲಿ ಯುದ್ಧದಾನೆಗಳನ್ನು ನಿಲ್ಲಿಸಲಾಗಿತ್ತು. ಪ್ರತಿಯೊಬ್ಬ ರಾಜಕುಮಾರನೂ ತನ್ನ ಸ್ವಂತ ಸೈನ್ಯದ ಕೇಂದ್ರದಲ್ಲಿ ನಿರ್ದಿಷ್ಟವಾದ ವೇದಿಕೆಯನ್ನು ಸ್ಥಾಪಿಸಿಕೊಂಡಿದ್ದ. ಮಿತ್ರಪಡೆಗಳು ಶತ್ರುವಿನ ಸನಿಹಕ್ಕೆ ವ್ಯವಸ್ಥಿತವಾಗಿ ಸಾಗುತ್ತಿದ್ದವು. ಕುತುಬ್‌ಶಾನ ವಿರುದ್ಧ ಹೋರಾಡಲು ಆಳಿಯ ರಾಮರಾಯನು ಬಲಭಾಗದ ಸೇನಾದಳದ ನೇತೃತ್ವವನ್ನು ತನ್ನ ಸಹೋದರ ತಿರುಮಲನಿಗೆ ವಹಿಸಿದ್ದ. ಅದಿಲ್‌ಶಾನನ್ನು ಎದುರಿಸಲು ಎಡಭಾಗದ ಸೇನಾದಳದ ನೇತೃತ್ವವನ್ನು ಆತ ತನ್ನ ಸಹೋದರ ವೆಂಕಟಾದ್ರಿಗೆ ವಹಿಸಿದ್ದ. ಮಧ್ಯಭಾಗದ ಸೇನಾದಳದ ನೇತೃತ್ವವನ್ನು ಸ್ವತಃ ಅಳಿಯರಾಮರಾಯ ವಹಿಸಿಕೊಂಡಿದ್ದ. ಆತನ ಸೇನೆಯ ಮುಂಚೂಣಿಯಲ್ಲಿ ಎರಡು ಸಾವಿರ ಆನೆಗಳು ಹಾಗೂ ಒಂದು ಸಾವಿರ ಫಿರಂಗಿಗಳನ್ನು ನಿಯೋಜಿಸಲಾಗಿತ್ತು. ರಾಮರಾಯನ ಪ್ರತಿಯೊಬ್ಬ ಸಹೋದರನ ಸೇನೆಯು 20 ಸಾವಿರ ಆಶ್ವಾರೋಹಿ ದಳ, ಐನೂರು ಆನೆಗಳು, 1 ಲಕ್ಷ ಸೈನಿಕರನ್ನು ಒಳಗೊಂಡಿತ್ತು (rise of mahomedan power in india, mahomed Kasim Ferishta, volume 3).
16ನೇ ಶತಮಾನದಲ್ಲಿ ಭಾರತದ ಸೇನಾ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿ ನಡೆದಿತ್ತೆಂದು ಇತಿಹಾಸತಜ್ಞರಾದ ರಿಚರ್ಡ್ ಎಂ. ಈಟನ್ ಹಾಗೂ ಫಿಲಿಪ್ ಬಿ. ವಾಗ್ನರ್ ವಾದಿಸುತ್ತಾರೆ. ಈ ಅವಧಿಯಲ್ಲಿ ವಿಜಯನಗರ ಹಾಗೂ ಬಹುಮನಿ ಸುಲ್ತಾನರ ಸೈನ್ಯಗಳೆರಡೂ ಫಿರಂಗಿಗಳನ್ನು ಹಾಗೂ ಬಂದೂಕುಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದವು. ಆದರೆ ಬಹಮನಿ ಸೈನ್ಯವು ಈ ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಂಡಿತ್ತು ಈ ಕದನಗಳಲ್ಲಿ ಪೋರ್ಚುಗೀಸ್‌ನ ಬಾಡಿಗೆ ಹಂತಕರನ್ನು ಬಳಸಿಕೊಂಡಿರುವುದು ಕುತೂಹಲಕಾರಿಯಾಗಿದೆಯೆಂದವರು ಹೇಳಿದ್ದಾರೆ.
ಈಟರ್ ಹಾಗೂ ವ್ಯಾಗ್ನರ್ ಹೀಗೆ ಬರೆಯುತ್ತಾರೆ. ‘‘ ಖಚಿತವಾಗಿ ಹೇಳುವುದಾದರೆ, ರಾಮರಾಯನು ತನ್ನೊಂದಿಗೆ ಗಣನೀಯವಾದ ಬಂದೂಕುಸಾಮಾಗ್ರಿಯನ್ನು ಒಯ್ದು ತಂದಿದ್ದ. ಆತ 70 ಸಾವಿರ ಅಶ್ವಾರೋಹಿ ದಳಗಳನ್ನು ಹಾಗೂ 90 ಸಾವಿರ ಕಾಲಾಳುದಳವನ್ನು ನಿಯೋಜಿಸಿದ್ದ. ಉಳಿದವರು ಮುಖ್ಯವಾಗಿ ಬಂದೂಕು ಈಡುಗಾರರು ಹಾಗೂ ಬಿಲ್ಲುಗಾರರಾಗಿದ್ದರು. ಸುಮಾರು 50 ಸಾವಿರ ರಾಕೆಟ್‌ಗಳು, ಬಂದೂಕುಗಳು ಹಾಗೂ ಫಿರಂಗಿಗಳನ್ನು, ಸುಲ್ತಾನರ ಪಡೆಗಳ ಮೇಲೆ ಅವರು ಎಸೆದಿದ್ದರು. ಆದರೆ ಮಿತ್ರಪಡೆಗಳಿಂದ ಪರಿಣಾಮಕಾರಿಯಾದ ಬಂದೂಕು ಶಕ್ತಿಯ ಆಧಾರದಲ್ಲಿ ಯುದ್ಧವು ನಿರ್ಧರಿಸಲ್ಪಟ್ಟಿತ್ತು.
ಬಹುಮನಿ ಸುಲ್ತಾನರ ಪಡೆಗಳ ಸೇನಾ ವ್ಯೆಹ ರಚನೆಯ ಕೇಂದ್ರ ಭಾಗದ ದಂಡನಾಯಕನಾಗಿದ್ದ ಹುಸೈನ್ ನಿಝಾಮ್ ಶಾ ವಿಭಿನ್ನ ಮದ್ದುಗುಂಡುಗಳನ್ನು ಹೊಂದಿರುವ 600 ಫಿರಂಗಿಗಳನ್ನು ತಂದಿದ್ದನು. ಅವುಗಳನ್ನು ಮೂರು ಸಾಲುಗಳಲ್ಲಿ ಬಲಿಷ್ಠವಾದ ಸಂಕಲೆಗಳಿಂದ ಒಂದ ಕ್ಕೊಂದನ್ನು ಬಂಧಿಸಲಾಗಿತ್ತು. ಆ ಮೂಲಕ ಅಳಿಯ ರಾಮರಾಯನ ಸೈನ್ಯದ ಅಶ್ವಾರೋಹಿ ಪಡೆಯು ಬಹುಮನಿ ಪಡೆಗಳ ಸೇನಾ ವ್ಯೆಹವನ್ನು ಭೇದಿಸುವುದನ್ನು ತಡೆಯುವುದೇ ಇದರ ಉದ್ದೇಶವಾಗಿತ್ತು.
ಮೊದಲ ಸಾಲಿನಲ್ಲಿ 200 ಭಾರವಾದ ಫಿರಂಗಿಗಳನ್ನು ಇರಿಸಲಾಗಿದ್ದರೆ, ಎರಡನೆ ಸಾಲಿನಲ್ಲಿ ಮಧ್ಯಂತರ ವ್ಯಾಪ್ತಿಯ ಫಿರಂಗಿಗಳನ್ನು ಸ್ಥಾಪಿಸಲಾಗಿತ್ತು. ಮೂರನೆ ಸಾಲಿನಲ್ಲಿ ಮಧ್ಯಂತರ ವ್ಯಾಪ್ತಿಯ ಫಿರಂಗಿಗಳಿಗಿಂತ ಸಣ್ಣದಾದ ತಿರುಪುಕೀಲಿನ ಫಿರಂಗಿಗಳನ್ನು ನಿಯೋಜಿಸಲಾಗಿತ್ತು. ಯುದ್ಧರಂಗದಲ್ಲಿ ಇಡೀ ಫಿರಂಗಿದಳಕ್ಕೆ ಟರ್ಕ್ ಮೂಲದವನಾದ ಚಲಬಿ ರೂಮಿ ಖಾನ್ ಎಂಬಾತ ನೇತೃತ್ವ ವಹಿಸಿದ್ದ.
ವಿಜಯನಗರ ಸೇನೆಯಲ್ಲಿದ್ದ ಫಿರಂಗಿಗಳ ಸಂಖ್ಯೆಗಿಂತ ಕೇವಲ ಅರ್ಧದಷ್ಟು ಸಂಖ್ಯೆಯ ಫಿರಂಗಿಗಳನ್ನು ರಣಭೂಮಿಯಲ್ಲಿ ನಿಯೋಜಿಸಲು ಬಹುಮನಿ ಸುಲ್ತಾನರಿಗೆ ಸಾಧ್ಯವಾಗಿತ್ತು.ಆದರೆ ಅವರು ಅವುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಯೋಜಿಸಿದ್ದರು. ಇದರ ಜೊತೆಗೆ ಯುದ್ಧದಲ್ಲಿ ಮಾರಣಾಂತಿಕವಾದ ಪಾತ್ರವನ್ನು ವಹಿಸಿರಬಹುದಾದ 2 ಸಾವಿರ ಬಿಲ್ಲುಗಾರರನ್ನು ಕೂಡಾ ನಿಯೋಜಿಸಿದ್ದರು. ಈ ಭೀಕರ ಆಕ್ರಮಣದ ಪರಿಣಾಮವಾಗಿ 5 ಸಾವಿರ ವಿಜಯನಗರ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಪಡೆಗಳು ಭಾರೀ ಹಾನಿಯನುಭವಿಸಿದವು. ಈ ಹಂತದಲ್ಲಿ 80 ವರ್ಷದ ವಯೋವೃದ್ಧ ಅಳಿಯರಾಮರಾಯನು ತನ್ನ ಸೇನೆಯ ಮುಖ್ಯ ಘಟಕವನ್ನು ಖುದ್ದಾಗಿಯೇ ಮುನ್ನಡೆಸುತ್ತಿದ್ದ. ತನ್ನ ಸೈನಿಕರನ್ನು ಹುರಿದುಂಬಿಸಲು ಆತ ಆನೆಯಿಂದಲೇ ಇಳಿದುಬಂದಾಗ, ಶತ್ರು ಸೈನಿಕರಿಂದ ಹತನಾದನು. ಆದಾಗ್ಯೂ, ಅಳಿಯರಾಮರಾಯನ ಅಂತ್ಯದ ಬಗ್ಗೆ ಐದು ವಿಭಿನ್ನ ಆವೃತ್ತಿಗಳಿವೆ. ಆದರೆ ಆತ ಹೇಗೆ ಕೊಲ್ಲಲ್ಪಟ್ಟನೆಂಬ ಬಗ್ಗೆ ನಿಖರವಾದ ಮಾಹಿತಿಯಿಲ್ಲ.
ಗಿರೀಶ್ ಕಾರ್ನಾಡ್ ಅವರು, ಅಳಿಯರಾಮರಾಯನನ್ನು ರೂಮಿ ಖಾನ್ ಬಂಧಿಸಿದ್ದು, ನಿಝಾಮ್ ಶಾನ ಆದೇಶದ ಮೇರೆಗೆ ಆತನ ಶಿರಚ್ಛೇದ ಮಾಡಲಾಯಿತೆಂಬ ಆವೃತ್ತಿಯನ್ನು ತನ್ನ ನಾಟಕದಲ್ಲಿ ಮೂಡಿಸಿದ್ದಾರೆ. ತನ್ನ ಬದ್ಧವೈರಿಯ ಶಿರಚ್ಛೇದನಮಾಡಿದ ಬಳಿಕ ನಿಜಾಮ್ ಶಾ ‘‘ಈಗ ನನ್ನ ಸೇಡನ್ನು ತೀರಿಸಿಕೊಂಡೆ. ಈಗ ದೇವರು ನನಗೆ ಏನು ಮಾಡಲು ಬಯಸುತ್ತಾರೋ ಅದನ್ನು ಮಾಡಲಿ’’ ಎಂದು ಉದ್ಘರಿಸಿದ್ದಾಗಿ ಇನ್ನೊಂದು ಆವೃತ್ತಿ ಹೇಳುತ್ತದೆ.
ಯುದ್ಧ ನಿರತ ಸೇನೆಗಳ ಸ್ವರೂಪದಿಂದಾಗಿ, ತಾಳಿಕೋಟೆ ಕದನವು, ಸುಲಭವಾಗಿ ಕೋಮು ಬಣ್ಣವನ್ನು ಪಡೆದುಕೊಂಡಿದೆ. ಒಂದು ಕಡೆಯಲ್ಲಿ ಮುಸ್ಲಿಂ ಸೈನ್ಯ ಇನ್ನೊಂದು ಕಡೆಯಲ್ಲಿ ಹಿಂದೂ ಸೈನ್ಯ ಇದ್ದುದೇ ಇದಕ್ಕೆ ಕಾರಣ. ಮುಸ್ಲಿಂ ಸುಲ್ತಾನರ ನಡುವೆ ಗಾಢವಾದ ಭಿನ್ನಾಭಿಪ್ರಾಯಗಳಿತ್ತಾದರೂ, ವಿಜಯ ನಗರ ಸೇನೆಯ ವಿರುದ್ಧ ಹೋರಾಡಲು ತಾತ್ಕಾಲಿಕವಾಗಿ ಕದನವಿರಾಮವನ್ನು ಏರ್ಪಡಿಸಿಕೊಂಡಿದ್ದವು. ಬಹುಮನಿ ಸುಲ್ತಾನರ ಒಕ್ಕೂಟವನ್ನು ಅಹ್ಮದ್‌ನಗರದ ನಿಝಾಮ್ ಶಾ ಅತ್ಯಂತ ಜಾಗರೂಕತೆಯಿಂದ ಜಮಾವಣೆಗೊಳಿಸಿದ್ದ. ಒಂದೊಮ್ಮೆ ಆತ ಅಳಿಯ ರಾಮರಾಯನಿಂದ ಅಪಮಾನಿ ಸಲ್ಪಟ್ಟಿದ್ದ. ಆಳಿಯ ರಾಮರಾಯ, ತನ್ನ ಕೈಯಿಂದಲೇ ಆತ, ವೀಳ್ಯ ತಿನ್ನುವಂತೆ ಮಾಡಿದ್ದ. ಸುಲ್ತಾನರ ನಡುವೆ ವೈವಾಹಿಕ ಸಂಬಂಧಗಳು ಏರ್ಪಟ್ಟಿದ್ದುದು ಕೂಡಾ ವಿಜಯನಗರದ ವಿರುದ್ಧ ಅವರು ಒಗ್ಗೂಡಲು ನೆರವಾಯಿತು. ಆದರೆ ಕೆಲವು ಇತಿಹಾಸಕಾರರ ಬಣ್ಣಿಸಿದಂತೆ ತಾಳಿಕೋಟೆ ಕದನವು ನಾಗರಿಕತೆಗಳ ಸಂಘರ್ಷವೆಂದು ವ್ಯಾಖ್ಯಾನಿಸುವುದು ಎಷ್ಟು ಸರಿ?
ಮದ್ರಾಸ್ ಸಂಸ್ಥಾನದಲ್ಲಿ ನಿಯೋಜಿಸಲ್ಪಟ್ಟಿದ್ದ ಬ್ರಿಟಶ್ ಇತಿಹಾಸಕಾರ ರಾಬರ್ಟ್ ಸೆವೆಲ್ ಅವರು ಮುಸ್ಲಿಮರು ಮಹಾನ್ ವಿಜಯನಗರ ಹಿಂದೂ ಸಾಮ್ರಾಜ್ಯವನ್ನು ನಾಶಗೊಳಿಸಿದರೆಂಬ ಚಿಂತನೆಯನ್ನು ಪ್ರತಿಪಾದಿಸಿದ್ದರು. 1810ರಲ್ಲಿ ಮೈಸೂರಿನ ಇತಿಹಾಸ ಕೃತಿಯನ್ನು ಬರೆದಿರುವ ಮಾರ್ಕ್ ವಿಲ್ಕ್ಸ್‌ನಂತಹ ಇತಿಹಾಸಕಾರರು ಕೂಡಾ ಅದೇ ಧಾಟಿಯಲ್ಲಿ ಬರೆದಿದ್ದಾರೆ. ವಿ.ಎಸ್. ನೈಪಾಲ್ ಕೂಡಾ ತನ್ನ ಕೃತಿ ಇಂಡಿಯಾ: ಎ ವೂಂಡೆಡ್ ಸಿವಿಲೈಸೇಶನ್ (ಪ್ರಕಟ: 1997)ನಲ್ಲಿ ಇದೇ ವಾದವನ್ನು ಮಂಡಿಸಿದ್ದಾರೆ.
(ಮುಂದುವರಿಯುವುದು)