varthabharthi


ಭೀಮ ಚಿಂತನೆ

ಡಾ. ಬಿ. ಆರ್. ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ಸ್ತ್ರೀಯರು ತಮ್ಮ ಹಕ್ಕುಗಳಿಗಾಗಿ ಮುಂದೆ ಬರಬೇಕಾಗಿದೆ

ವಾರ್ತಾ ಭಾರತಿ : 18 Jan, 2019

ದಿನಾಂಕ 25ನೆಯ ಡಿಸೆಂಬರ್ 1952ರಂದು ಕೊಲ್ಹಾಪುರದಲ್ಲಿನ ಸ್ತ್ರೀಯರ ಬೇರೆ ಬೇರೆ ಒಂಬತ್ತು ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಲ್ಲಿನ ರಾಜಾರಾಮ ಚಿತ್ರಮಂದಿರದಲ್ಲಿ ಸೇರಿದ್ದ ಬೃಹತ್ ಸಮಾವೇಶದಲ್ಲಿ ಗೌರವಿಸಲಾಯಿತು. ಆನಂತರ ಅವರು ಸ್ತ್ರೀಯರ ವಿನಂತಿಯ ಮೇರೆಗೆ ನಮ್ಮ ಹಿಂದೂ ಕೋಡ್‌ಬಿಲ್‌ನಲ್ಲಿ ಸ್ತ್ರೀಯರಿಗೆ ಯಾವ ಯಾವ ಹಕ್ಕುಗಳನ್ನು ನೀಡಲಾಗಿದೆ ಮತ್ತು ಯಾವೆಲ್ಲ ಅನುಕೂಲಗಳನ್ನು ಮಾಡಿಕೊಡಲಾಗಿತ್ತು ಎಂಬ ವಿಷಯದ ಬಗೆಗೆ ಸಂಕ್ಷಿಪ್ತವಾಗಿದ್ದರೂ ಬಹಳ ಪ್ರಬೋಧನಕಾರಿ ರೀತಿಯಲ್ಲಿ ವಿವೇಚನೆ ಮಾಡಿದರು. ಈ ಸಮಾರಂಭದಲ್ಲಿ ಅಸಂಖ್ಯಾತ ಸ್ತ್ರೀಯರು ಮತ್ತು ಹಲವಾರು ಪುರುಷರೂ ಹಾಜರಿದ್ದರು.

ಆರಂಭದಲ್ಲಿ ಸುರೇಲ ಎಂಬ ಮಹಾರಾಷ್ಟ್ರದ ಗೀತೆಯನ್ನು ಹಾಡಿದ ಮೇಲೆ ವಿಮಲಾಬಾಯಿ ಬಾಗಲ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡುತ್ತಾ, ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಹಿಂದೂ ಕೋಡ್‌ಬಿಲ್‌ನ ವ್ಯರ್ಥತೆಯ ವಿಷಯವಾಗಿ ತಮ್ಮ ಖೇದವನ್ನು ವ್ಯಕ್ತಪಡಿಸಿದರು. ಹಾಗೆಯೇ ಈ ಬಿಲ್ ಅನುಷ್ಠಾನಗೊಳ್ಳುವವರೆಗೂ ನಾವೆಲ್ಲ ಡಾ. ಅಂಬೇಡ್ಕರ್ ಅವರ ಬೆಂಬಲಕ್ಕೆ ನಿಂತಿರಬೇಕು ಎಂಬುದಾಗಿ ಹೇಳಿದರು.

ಆನಂತರ ಅವರು ಅವರಿಗೆ ನೀಡಲು ಸಿದ್ಧಪಡಿಸಿದ್ದ ಮಾನಪತ್ರವನ್ನು ಸಭೆಗೆ ಓದಿ ತಿಳಿಸಿದ ಮೇಲೆ, ಅದನ್ನು ಅರ್ಪಿಸಿದರು. ಹಾಗೆಯೇ ಕರವೀರ ಭಗಿನಿ ಮಂಡಳ, ಶುಕ್ರವಾರ ಪೇಟೆ ಭಗಿನಿ ಮಂಡಳ, ಮಹಿಳಾ ಸೇವಾ ಮಂಡಳ, ವನಿತಾ ಸಮಾಜ, ನಾಮದೇವ ಮಹಿಳಾ ಮಂಡಳ, ಶಾರದಾ ಭಗಿನಿ ಮಂಡಳ, ಸ್ತ್ರೀ ಮಂಡಳ, ಶಿವಾಜಿ ಪೇಠ ಭಗಿನಿ ಮಂಡಳ, ಮರಾಠಾ ಮಹಿಳಾ ಮಂಡಳ ಈ ಎಲ್ಲಾ ಸಂಸ್ಥೆಗಳ ವತಿಯಿಂದ ಡಾ. ಬಾಬಾ ಸಾಹೇಬ ನಿಂಬಾಳಕರ ಅವರೂ ಕೂಡ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಹಾರಾರ್ಪಣೆ ಮಾಡಿದರು.

ಆ ನಂತರ ಈ ಕೆಳಗಿನ ಪ್ರಮುಖ ಭಾಷಣವನ್ನು ಮಾಡುತ್ತಾ ಡಾ. ಅಂಬೇಡ್ಕರ್ ಅವರು ಹೇಳಿದರು:

ಜಗತ್ತಿನಲ್ಲಿ ಇಂದು ಸಂಪತ್ತೇ ಸ್ವಾತಂತ್ರದ ಆಧಾರ ಸ್ತಂಭವಾಗಿದೆ. ಎಲ್ಲಿಯವರೆಗೆ ಸ್ತ್ರೀಯರಿಗೆ ಸಂಪತ್ತಿನ ವಾರಸುದಾರಿಕೆಯು ಸಿಗುವುದಿಲ್ಲವೋ ಅಲ್ಲಿಯವರೆಗೆ ಅವರ ಗುಲಾಗಿರಿಯೂ ಮುಗಿಯುವುದಿಲ್ಲ. ಆ ದೃಷ್ಟಿಯಿಂದಲೇ ಹಿಂದೂ ಕೋಡ್‌ಬಿಲ್‌ನಲ್ಲಿ ನಾನು ಒತ್ತಾಯವನ್ನು ಮಾಡಿದ್ದೇನೆ. ಆದರೆ ಆ ಬಿಲ್ಲು ಲೋಕಸಭೆಯಲ್ಲಿ ಮಂಜೂರಾಗಲಿಲ್ಲ. ಆದರೆ ಈಗ ಬರುವ ಬಿಲ್ ಯಾವ ಸ್ವರೂಪದಲ್ಲಿ ಇದೆ ಮತ್ತು ಅದರಲ್ಲಿ ಸ್ತ್ರೀಯರ ಸ್ವಾತಂತ್ರದ, ಹಕ್ಕುಗಳ ಬಗೆಗೆ ಏನೆಲ್ಲ ಹೇಳಿದೆ ಎಂಬುದರ ಕಡೆಗೆ ಮಹಿಳಾ ವರ್ಗವು ಬಹಳ ಜಾಗರೂಕತೆಯಿಂದ ಗಮನಿಸಬೇಕಾಗಿದೆ. ಅಷ್ಟು ಮಾತ್ರವಲ್ಲ, ನಿಮ್ಮ ಹಕ್ಕುಗಳಿಗಾಗಿ ನೀವೆಲ್ಲ ನಿಮ್ಮ ನಿಮ್ಮ ಮನೋದೌರ್ಬಲ್ಯವನ್ನು ಬಿಟ್ಟು ಟೊಂಕಕಟ್ಟಿ ಮುಂದೆ ಬರಬೇಕಾಗಿದೆ. ಹಾಗಾದಲ್ಲಿ ಮಾತ್ರವೇ ಅವರ ಪ್ರಗತಿ ಮತ್ತು ಸುಧಾರಣೆಯಾಗುವುದಕ್ಕೆ ಸಾಧ್ಯ. ಒಬ್ಬ ಸ್ತ್ರೀಯು ಹಾಲಿಗೆ ಹೆಪ್ಪು ಹಾಕಬೇಕು ಮತ್ತು ಅವಳಿಗೆ ಆ ಹೆಪ್ಪು ಇಲ್ಲದಿರುವ ಬಗೆಗೆ ತಿಳಿಯಬೇಕು. ಇಂತಹ ಗಂಭೀರ ಪರಿಸ್ಥಿತಿಗೆ ಹೋಗಿ ಸಿಲುಕಿಕೊಂಡಿದೆ ನಮ್ಮ ಹಿಂದೂ ಕೋಡ್‌ಬಿಲ್. ನಾನು ನಾಲ್ಕು ವರ್ಷಗಳ ಕಾಲ ಕರಡು ಸಿದ್ಧಪಡಿಸಿ ಯಾವ ರೀತಿಯಲ್ಲಿ ಆ ಬಿಲ್ಲನ್ನು ಸಿದ್ಧಪಡಿಸಿದ್ದೇನೋ ಅದೇ ರೀತಿಯಲ್ಲಿಯೇ ಈಗಿನ ಬಿಲ್ ಕೂಡಾ ಇರುತ್ತದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಆದರೆ ಅದರಲ್ಲಿ ಆಮೂಲಾಗ್ರ ಬದಲಾವಣೆಗಳಾಗಿರುತ್ತವೆ ಎಂಬುದಾಗಿ ಟೀಕೆ ಮಾಡಿದ್ದಾರೆ. ಆದರೆ ಹಾಗೆ ಹೇಳುತ್ತಿರುವವರಿಗೆ ನಾನು ಸವಾಲು ಹಾಕುವುದೇನೆಂದರೆ, ಅದನ್ನು ಅವರು ನನಗೆ ತೋರಿಸಿ ಕೊಡಬೇಕು.

ಹಾಗೆಯೇ ಸ್ತ್ರೀಯರಿಗೆ ವಿವಾಹ ವಿಚ್ಛೇದನದ ಅನುಕೂಲತೆಯನ್ನು ಅದರಲ್ಲಿ ಒದಗಿಸಲಾಗಿದೆ. ಬ್ರಾಹ್ಮಣ, ಕ್ಷತ್ರೀಯ ಮತ್ತು ವೈಶ್ಯ ಈ ಮೂರು ವರ್ಣದವರನ್ನು ಬಿಟ್ಟಂತೆ ಉಳಿದೆಲ್ಲ ಸಮಾಜಗಳಲ್ಲಿಯೂ ವಿವಾಹ ವಿಚ್ಛೇದನ ಅಂದರೆ ಸಂಬಂಧ ಕಡಿತದ ಕಾರ್ಯಗಳು ನಡೆಯುತ್ತಲೇ ಇವೆ. ಈ ಪರಿಸ್ಥಿತಿ ಇರುವಂತಹ ಶೇ. 10ರಷ್ಟು ಶೂದ್ರರು ಈ ಭಾರತದಲ್ಲಿ ಇದ್ದಾರೆ. ಆದರೆ ಕಾಯ್ದೆಯಲ್ಲಿ ಈ ವಿಚ್ಛೇದನದ ಸೌಲಭ್ಯವನ್ನು ಒದಗಿಸುತ್ತಲೇ ಈ ಮೇಲೆ ಹೇಳಿದ ತ್ರೈವರ್ಣೀಯರು ನನ್ನ ಮೇಲೆ ಟೀಕೆಗಳ ಪ್ರವಾಹವನ್ನೇ ಹರಿಸಿದ್ದಾರೆ.

 ಈ ಬಿಲ್‌ನಲ್ಲಿ ಸ್ತ್ರೀಯರ ಹಿತದ ದೃಷ್ಟಿಯಿಂದ ಎಲ್ಲಾ ವಿಷಯಗಳ ಯೋಜನೆಗಳೂ ಇವೆ. ಅದರಲ್ಲಿ ಇನ್ನೂ ಕೆಲವಾರು ಮಹತ್ವದ ವಿಷಯಗಳೂ ಇವೆ. ಮದುವೆಯಲ್ಲಿ ಅಥವಾ ದತ್ತಕದಲ್ಲಿ ತೆಗೆದುಕೊಳ್ಳುವ ನಿರ್ಣಯಗಳಲ್ಲಿ ಯಾವುದೇ ಜಾತಿಭೇದದ ಬಂಧನಗಳು ಇರಬಾರದು ಎಂಬ ಮಹತ್ವದ ತತ್ತ್ವವೊಂದನ್ನು ಇದರಲ್ಲಿ ಮಂಡಿಸಲಾಗಿದೆ. ಅಂದರೆ ಅದರರ್ಥ ಹೀಗಲ್ಲ, ಜಬರ್ದಸ್ತಿನಿಂದ ಅಂತರ್ಜಾತೀಯ ವಿವಾಹಗಳು ಮತ್ತು ದತ್ತಕ ಕಾರ್ಯಗಳು ನಡೆಯಬೇಕು. ಒಬ್ಬರನ್ನೊಬ್ಬರು ಪ್ರೀತಿಸಿದಾಗ ಯಾರಿಗಾದರೂ ಅಂತರ್ಜಾತೀಯ ವಿವಾಹವಾಗಬೇಕಾಗಿ ಬಂದರೆ ಅಥವಾ ಬೇರೆ ಜಾತಿಯ ಹುಡುಗನನ್ನು ದತ್ತು ತೆಗೆದುಕೊಳ್ಳುವ ಇಚ್ಛೆಯು ಇದ್ದರೆ ಹಾಗೆ ಮಾಡುವುದಕ್ಕೆ ಮನುಸ್ಮತಿಯ ಪ್ರಕಾರ ನಿರ್ಬಂಧವಿತ್ತು. ಅದನ್ನು ಈ ಬಿಲ್‌ನ ಮೂಲಕ ತೆಗೆದು ಹಾಕಲಾಗಿದೆ.

‘ಪತಿಯೇ ಪರಮೇಶ್ವರ’ ಎಂದು ಒಪ್ಪಿಕೊಂಡಿರುವ ಆರ್ಯ ಸ್ತ್ರೀಯರು ಇದ್ದಾರೆ. ಗಂಡನು ಹೇಗೆಲ್ಲಾ ನಡೆದುಕೊಂಡರೂ, ಆತ ಹೇಗಾದರೂ ಮತ್ತು ಎಷ್ಟೇ ಕೆಟ್ಟವನಾಗಿದ್ದರೂ ಕೂಡಾ ಆರ್ಯ ಸ್ತ್ರೀಯರು ಮಾತ್ರ ತಮ್ಮ ಹಳೆಯ ಶಾಸ್ತ್ರಾನುಸಾರ ಅವನನ್ನು ಮಾತ್ರ ಬಿಟ್ಟು ಹೋಗುವುದಿಲ್ಲ. ಗಂಡನಿಗೆ ಮಾತ್ರ ಎಲ್ಲಾ ಅನುಮೋದನೆಗಳು ಇವೆ. ಹಾಗಾಗಿ ಯಾವ ಸ್ತ್ರೀಯರಿಗೆ ತಂತಮ್ಮ ಗಂಡಂದಿರೊಂದಿಗೆ ಸಂಸಾರ ಮಾಡುವುದು ಒಳ್ಳೆಯದ್ದಲ್ಲ ಎನ್ನಿಸುತ್ತದೆಯೋ, ಅಂಥವರಿಗೆ ಅವರಿಂದ ವಿಚ್ಛೇದನ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.

ಅದರಂತೆಯೇ ಸ್ತ್ರೀ-ಧನದ ಯೋಜನೆಯನ್ನೂ ನಮೂದಿಸಲಾಗಿದೆ. ಪತಿಯು ಮರಣ ಹೊಂದಿದ ಮೇಲೆ ಅವನ ಆಸ್ತಿಯ ಒಡೆತನವು ಆಯಾಯ ಸ್ತ್ರೀಯರಿಗೆ ದೊರಕುವಲ್ಲಿ ನಿರ್ಬಂಧವಿತ್ತು. ಅದನ್ನು ನಾನು ತೆಗೆದು ಹಾಕಿದ್ದೆನು. ಪತಿಯ ಆಸ್ತಿಯ ಪೂರ್ಣ ಒಡೆತನದ ಹಕ್ಕು ಅವನ ಪತ್ನಿಗೆ ಸಿಕ್ಕಬೇಕು. ಹಾಗೆಯೇ ಯಾರಾದರೊಬ್ಬ ಸ್ತ್ರೀಯು ಮರಣ ಹೊಂದಿದರೆ ಅದು ಅವಳ ಮಗಳಿಗೇ ಸಿಗಬೇಕು ಎಂಬುದು ನನ್ನ ಹಟಮಯ ವಾದವಾಗಿದೆ. ತಂದೆಯು ಮರಣ ಹೊಂದಿದ ನಂತರ ಅಣ್ಣತಮ್ಮಂದಿರಷ್ಟೇ ಆಸ್ತಿಯನ್ನೆಲ್ಲ ಭಾಗ ಮಾಡಿಕೊಳ್ಳುತ್ತಾರೆ. ಆ ಸಹೋದರರೊಂದಿಗೆ ಅವರ ಸೋದರಿಯರಿಗೂ ಏಕೆ ಪಾಲು ಸಿಗಬಾರದು?

ಸ್ತ್ರೀಯರ ವಿಷಯವಾಗಿನ ಸರ್ವರ ಹಿತದ ಈ ಬಿಲ್ಲನ್ನು ಮಂಜೂರು ಮಾಡುವುದಕ್ಕಾಗಿ ಸ್ತ್ರೀಯರು ಯಾವುದೇ ರೀತಿಯಲ್ಲಿಯೂ ಹೋರಾಟ ಮಾಡದೆ ಇರುವುದು ಬಹಳ ಖೇದದ ವಿಷಯವಾಗಿದೆ. ನಾನು ಪುರುಷನಾಗಿದ್ದರೂ ಕೂಡಾ ಸ್ತ್ರೀಯರ ಹಿತಸಂಬಂಧಕ್ಕಾಗಿ ಸಂಘರ್ಷ ಮಾಡಿದೆನು. ಆದರೆ ಸ್ತ್ರೀಯರು ಇದರಲ್ಲಿ ಯಾಕೆ ಉತ್ಸುಕತೆಯನ್ನು ತೋರಿಸಲಿಲ್ಲ ಎಂಬುದೇ ತಿಳಿಯುತ್ತಿಲ್ಲ. ಈ ಬಿಲ್‌ನ ವಿಷಯವಾಗಿ ಬೆಂಬಲ ನೀಡುವುದು ಒತ್ತಟ್ಟಿಗೆ ಇರಲಿ, ಕೆಲವಾರು ಸ್ತ್ರೀಯರು ನನ್ನ ಹತ್ತಿರಕ್ಕೆ ಬಂದು ಆ ಬಿಲ್ ಸರಿಯಿಲ್ಲ ಎಂಬುದಾಗಿ ಹೇಳುವುದಕ್ಕೂ ಪ್ರಯತ್ನ ಮಾಡಿದ್ದರು. ನಾನು ದಿಲ್ಲಿಯಲ್ಲಿ ಇರುವಾಗ ಕೆಲವು ಸ್ತ್ರೀಯರ ಶಿಷ್ಟಮಂಡಲವೇ ನನ್ನ ಹತ್ತಿರಕ್ಕೆ ಬಂದಿತ್ತು. ಅವರಿಗೆ ನಾನು, ‘‘ಆ ಬಿಲ್ಲನ್ನು ಓದಿರುವಿರೇನು?’’ ಎಂಬುದಾಗಿ ಕೇಳಿದಾಗ, ಅವರು ತಾವು ಅದನ್ನು ಓದಿಲ್ಲ ಎಂಬುದಾಗಿಯೇ ಹೇಳಿದರು. ‘‘ಅಲ್ಲ ಓದದೆಯೇ ಹೀಗೇಕೆ ವಿರೋಧ ಮಾಡುತ್ತಿದ್ದೀರಿ’’ ಎಂಬುದಾಗಿ ಅವರಲ್ಲಿ ಒಬ್ಬ ಪ್ರಮುಖ ಸ್ತ್ರೀಯನ್ನು ಕರೆದು ಕೇಳಿದಾಗ ಆಕೆ ಹೀಗೆ ಹೇಳಿದಳು. ‘‘ಆ ಬಿಲ್ಲನ್ನು ನೀನು ವಿರೋಧಿಸಲೇ ಬೇಕು. ಇಲ್ಲದೆ ಇದ್ದರೆ ನಾನು ಮತ್ತೊಬ್ಬಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ ನನ್ನ ಗಂಡ. ಹಾಗಾಗಿಯೇ ಸವತಿಯನ್ನು ಒಪ್ಪಿಕೊಳ್ಳುವುದಕ್ಕಿಂತ ಈ ಬಿಲ್ಲನ್ನೇ ವಿರೋಧಿಸುವುದು ನನಗೆ ಅನಿವಾರ್ಯವಾಗಿ ಬಿಟ್ಟಿದೆ.’’ ಇದು ಸ್ತ್ರೀಯರ ಮಾನಸಿಕ ದೌರ್ಬಲ್ಯವಾಗಿದೆ; ಈ ದೌರ್ಬಲ್ಯದ ಕಾರಣವೇ ಈ ಬಿಲ್‌ನ ಘಾತವಾಯಿತು. ಸ್ತ್ರೀಯರ ಕಾಲುಗಳಲ್ಲಿ ಶಕ್ತಿ ಇದ್ದಿದ್ದರೆ ಈ ಬಿಲ್ ಹೀಗೆ ವ್ಯರ್ಥವಾಗಿ ಹೋಗುತ್ತಿರಲಿಲ್ಲ. ಪಾರ್ಲಿಮೆಂಟಿಗೆ ಆರಿಸಿ ಬಂದಿರುವಂತಹ ಸ್ತ್ರೀಯರೂ ಕೂಡಾ ಈ ಬಿಲ್‌ನ ವಿಷಯದಲ್ಲಿ ಸ್ವಲ್ಪ ಮಟ್ಟಿಗಾದರೂ ಜಾಗರೂಕತೆಯನ್ನು ವಹಿಸಲಿಲ್ಲ. ಆ ಸ್ತ್ರೀ ಸಂಸತ್ ಸದಸ್ಯರ ದೃಷ್ಟಿಯೆಲ್ಲಾ ಯುನೋ, ಐ.ಎಲ್.ಒ., ಕೊರಿಯಾ ಇಂಥ ವಿಷಯಗಳ ಕಡೆಗೇ ಇರುತ್ತಿತ್ತು. ಆದರೆ ನಾನು ಸಿದ್ಧಪಡಿಸಿದ್ದ ಬಿಲ್‌ಗೆ ಬೆಂಬಲವಾಗಿ ನಿಲ್ಲುವಂತಹ ತಯಾರಿ ಅವರಲ್ಲಿ ಕಾಣಿಸಲಿಲ್ಲ. ಕಾರಣ ಅದರಿಂದಾಗಿ ಪ್ರಧಾನ ಮಂತ್ರಿಗಳಿಗೆ ಸಂತೋಷವಾಗುವುದಿಲ್ಲ. ಪರಿಣಾಮವಾಗಿ ಅವರು ನಮ್ಮನ್ನು ಯುನೋ ಅಥವಾ ಬೇರೆಲ್ಲಿಗಾದರೂ ಹೋಗಲು ಅವಕಾಶ ಮಾಡಿಕೊಳ್ಳುವುದಿಲ್ಲ ಎಂಬುದರ ಭೀತಿ ಅವರಿಗಿತ್ತು. ಈ ರೀತಿಯ ಲೋಭೀ ಪ್ರವೃತ್ತಿಯಿಂದಾಗಿಯೇ ದೇಶಕ್ಕೆ ವಿಪರೀತ ನಷ್ಟ ಉಂಟಾಗುತ್ತಿದೆ. ಸಾರ್ವಜನಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಮನುಷ್ಯನೂ ಇಂದು ತಮಗೆ ಕಮಿಶನರ್ ಆಗುವುದಕ್ಕೆ ಸಾಧ್ಯವಿದೆಯೇ ಅಥವಾ ಮುಖ್ಯವಾದ ಸ್ಥಾನವು ಲಭ್ಯವಾಗುವುದೇ ಎಂಬ ಲೋಭದಿಂದ ಚಡಪಡಿಸುತ್ತಿದ್ದಾರೆ. ಸ್ತ್ರೀಯರಲ್ಲಂತೂ ಆ ದೋಷವು ಇನ್ನೂ ಹೆಚ್ಚಾಗಿಯೇ ಕಾಣಿಸುತ್ತಿದೆ ನನಗೆ. ಸ್ತ್ರೀಯರ ಮನಸ್ಸಿನಲ್ಲಿ ಪರಂಪರೆಯ ಪರದೆಯು ಹೆಚ್ಚಾಗಿದೆ. ಆ ಕಾರಣಕ್ಕಾಗಿ ಅವರಲ್ಲಿ ಮನೋದೌರ್ಬಲ್ಯವೂ ಇದೆ. ಅವರು ಅದನ್ನು ಕಿತ್ತು ಹಾಕಬೇಕು.

ಇಂಗ್ಲೆಂಡಿನ ಸ್ತ್ರೀಯರು ಮತದಾನದ ಹಕ್ಕನ್ನು ಪಡೆಯುವುದಕ್ಕಾಗಿ ಚಳವಳಿಯನ್ನೆ ಮಾಡಿದ್ದಾರೆ. ಅದರಿಂದ ಸ್ತ್ರೀಯರಿಗೆ ತಮ್ಮ ಸುಧಾರಣೆಯಾಗುತ್ತದೆ ಎಂಬ ಕಾರಣ. ನಮಗೆ ಸ್ವಾತಂತ್ರ ದೊರಕುವುದಕ್ಕಾಗಿ ಈ ಬಿಲ್ ಜಾರಿಗೆ ಬರಬೇಕು ಎಂಬ ಭಾವನೆ ಅವರಲ್ಲಿ ಬಂದಿದ್ದರೆ, ಅದಕ್ಕಾಗಿ ಅವರು ಚಳವಳಿಯನ್ನು ಕೈಗೊಳ್ಳಬೇಕಾಗುತ್ತದೆ. ಅಲ್ಲದೆ ಸ್ತ್ರೀಯ ಮೇಲೆ ಒತ್ತಾಯವನ್ನು ತರುವಂತಹ ಪುರುಷನು ಎಂದಿಗೂ ಅವಳ ಸುಧಾರಣೆಯನ್ನು ಮಾಡಲಾರನು. ಇಂಗ್ಲೆಂಡಿನ ಸ್ತ್ರೀಯರು ತಮ್ಮ ಇಚ್ಛೆಯ ಅನುಸಾರವೇ ವಿಚ್ಛೇದನ ಪಡೆದು ಸ್ವತಂತ್ರ ಜೀವನವನ್ನು ನಡೆಸುತ್ತಾರೆ. ಅದಕ್ಕೆ ಮೂಲ ಕಾರಣವೆಂದರೆ ಅವರಿಗೆ ಆಸ್ತಿಯ ವಾರಸುದಾರಿಕೆ ಹಕ್ಕು ಇರುವುದು. ಹಾಗೆಯೇ ಮಲಬಾರಿ ಸಮಾಜದಲ್ಲಿ ಕಳೆದ 50-60 ವರ್ಷಗಳಿಂದ ವಿಚ್ಛೇದನವು ಬಹಳಷ್ಟು ಆಗುತ್ತಿಲ್ಲ. ಅದಕ್ಕೆ ಕಾರಣ ಅಲ್ಲಿ ಅವಳಿಗೆ ವಾರಸುದಾರಿಕೆಯ ಹಕ್ಕು ಇರುವುದೇ ಆಗಿದೆ. ಆ ಕಾರಣ ಪುರುಷನು ಅವಳೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಾನೆ. ಎಂತಲೇ ಪುರುಷರ ಹಾಗೆಯೇ ನಮಗೂ ವರಸುದಾರಿಕೆಯ ಹಕ್ಕು ಸಿಗಬೇಕು ಎಂಬ ಕಾರಣವಾಗಿ ಸ್ತ್ರೀಯರು ಚಳವಳಿ ಆರಂಭಿಸಬೇಕು. ಮನೆಯಲ್ಲಿ ಕುಳಿತೋ ಇಲ್ಲವೇ ಸಭೆ, ಸಮಾರಂಭಗಳಲ್ಲಿ ಗೊತ್ತುವಳಿಗಳನ್ನು ಮಾಡುವುದರಿಂದ ಈ ವಿಚಾರವು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಸ್ತ್ರೀಯರು ಸ್ವತಃ ಚಳವಳಿ ನಡೆಸುವುದಕ್ಕೆ ಮುಂದಾಗಬೇಕು. ಹಿಂದೂ ಕೋಡ್ ಬಿಲ್‌ನ ಮುಹೂರ್ತವು ಕೂಡಿಬಂದದ್ದು 1939ರಲ್ಲಿ. ಆಗಿನಿಂದ ಅಂದರೆ ಕಳೆದ 11 ವರ್ಷಗಳಿಂದಲೂ ಆ ಬಿಲ್‌ನ ಬಗೆಗೆ ಚರ್ಚೆಗಳು ನಡೆಯುತ್ತಲೇ ಇವೆ. ಹಾಗಿರುವಾಗಲೂ ಪುನಃ ಆ ಬಿಲ್ಲನ್ನು ವಿಭಜಿಸಿ ಜನತೆಯ ಎದುರು ಅದರ ಅಪಥ್ಯವನ್ನು ಏತಕ್ಕೆ ಹಾರಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ನೀವು ಬರಲಿರುವ ಬಿಲ್‌ನ ಪ್ರತಿಯೊಂದು ಅಕ್ಷರವನ್ನೂ ಸರಿಯಾಗಿ ತಪಾಸಣೆ ಮಾಡಿ ನೋಡಿರಿ. ಕೇವಲ ಅಂತರ್ಜಾತೀಯ ವಿವಾಹದ ಸಂಗತಿಯನ್ನಷ್ಟೇ ನೋಡಿದರೆ ಸಾಕಾಗುವುದಿಲ್ಲ. ಅಷ್ಟು ಕಲಮು ಮಾತ್ರವಲ್ಲ ಮತ್ತು ಉಳಿದ ಕಾಯ್ದೆಗಳು ಹಾಗೆ ಹಳೆಯವೇ ಇದ್ದರೆ ಅನರ್ಥವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ. ಅಂತರ್ಜಾತಿಯ ಸ್ತ್ರೀ-ಪುರುಷರಿಂದ ಉಂಟಾದ ಸಂತತಿಗಳಿಗೆ ನಮ್ಮ ಹಳೆಯ ಶಾಸ್ತ್ರಗಳ ಅನುಸಾರ ಸಂಪತ್ತಿನ ಹಕ್ಕು ದೊರಕುವುದಿಲ್ಲ. ಹಾಗಾಗಿ ಅಂತಹ ಸಂತತಿಯವರನ್ನು ಕಾಯ್ದೆಬದ್ಧಗೊಳಿಸಿ ಅವರಿಗೆ ಆಸ್ತಿಯ ಹಕ್ಕನ್ನು ಒದಗಿಸಿ ಕೊಡುವ ಅಗತ್ಯತೆಯನ್ನು ಕಾಯ್ದೆಯ ಅನುಸಾರ ಕೈಗೊಳ್ಳಬೇಕಾಗುವುದು. ಈ ಬಿಲ್‌ನ ಸಂಬಂಧವಾಗಿ ಸ್ತ್ರೀಯರಿಗೆ ಕಳಕಳಿಯಿಂದ ಮತ್ತೊಮ್ಮೆ ಆದೇಶವನ್ನು ಕೊಟ್ಟು ಅವರು ತಮ್ಮ ಭಾಷಣವನ್ನು ಮುಗಿಸಿದರು.

ಕೊನೆಯಲ್ಲಿ ಊರ್ಮಿಳಾಬಾಯಿ ಸಬನೀಸ ಅವರು ತಮ್ಮ ವಂದನಾರ್ಪಣೆಯ ಭಾಷಣವನ್ನು ಮಾಡುತ್ತಾ, ಯಾವ ಛತ್ರಪತಿ ತಾರಾಬಾಯಿ ಅವರು ಕರವೀರ ರಾಜ್ಯವನ್ನು ಸ್ಥಾಪನೆ ಮಾಡಿದ್ದಳೋ, ಆ ಕರವೀರ ಪ್ರಾಂತದ ಮಹಿಳೆಯರೆಲ್ಲರೂ ಚಳವಳಿಯಲ್ಲಿ ಮಂಚೂಣಿಯಲ್ಲಿ ಇರುತ್ತಾರೆ ಎಂಬುದಾಗಿ ಹೇಳಿದರು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)