ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೈಕಲ್ ವಿತರಿಸಿ
ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ, ತಾಲೂಕು ಇಲಾಖೆಗಳಿಗೆ ಸುತ್ತೋಲೆ
ಬಂಟ್ವಾಳ, ಜ. 17: ಪ್ರಸಕ್ತ ವರ್ಷದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಸೈಕಲ್ಗಳ ಗುಣಮಟ್ಟವನ್ನು ಪರಿಶೀಲಿಸಿ, ಯೋಗ್ಯವಾದ ಸೈಕಲ್ಗಳನ್ನು ವಿತರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ ಹಾಗೂ ತಾಲೂಕು ಇಲಾಖೆಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ಕೊನೆಗೂ ಸೈಕಲ್ ಕುರಿತು ಸರಕಾರ ಗಮನ ಹರಿಸಿದೆ.
ಈಗಾಗಲೇ ವಿತರಣೆ ಮಾಡಿರುವ ಸೈಕಲ್ಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಉಪನಿರ್ದೇಶಕರು ಆನ್ಲೈನ್ ರ್ಯಾಂಡಮ್ ಪರಿಶೀಲನಾ ನಮೂನೆಯಲ್ಲಿ ಭರ್ತಿ ಮಾಡಿರುವ ಅಂಶಗಳ ಬಗ್ಗೆ ಸರಬರಾಜು ಸಂಸ್ಥೆಯವರನ್ನು ಸಂಪರ್ಕಿಸಿ, ಸರಿಪಡಿಸಿಕೊಳ್ಳಲು ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದರಲ್ಲಿ ನಮೂದಿತವಾದಂತೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ತಡೆಹಿಡಿಯಲು ಈ ಹಿಂದೆ ಸೂಚಿಸಲಾಗಿತ್ತು. ಆದರೆ, 2018-19ನೇ ಸಾಲಿನಲ್ಲಿ ಸರಕಾರಿ, ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಿಸಿ. ಆದರೆ, ಅದಕ್ಕೂ ಮುನ್ನ ಬಳಸಲು ಯೋಗ್ಯವಾಗಿದೆಯೇ ಎಂದು ಖಾತ್ರಿಪಡಿಸಬೇಕು. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಕಚೇರಿಗೆ ವರದಿ ಸಲ್ಲಿಸಲು ಇಲಾಖೆಯು ಸೂಚಿಸಿದೆ. ರಾಜ್ಯದ ಕೆಲವೆಡೆ ಈ ವರ್ಷ ವಿತರಿಸಿದ ಸೈಕಲ್ಗಳು ದೋಷಪೂರಿತ ಹಾಗೂ ಕಳಪೆ ಗುಣ ಮಟ್ಟದ ಬಗ್ಗೆ ಇಲಾಖೆಗೆ ದೂರುಗಳು ಹೋದ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲಿಸಿದ ಬಳಿಕವೆ ಸೈಕಲ್ಗಳನ್ನು ವಿತರಿಸಬೇಕೆಂದು ಸರಕಾರ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ನೀಡಿದ್ದರಿಂದ ಬಂಟ್ವಾಳ ತಾಲೂಕಿನ ಸೈಕಲ್ಗಳ ವಿತರಣೆಯನ್ನು ತಡೆಹಿಡಿಯಲಾಗಿದೆ. ಸರಕಾರದ ಆದೇಶದಂತೆ ಇಲಾಖೆಯ ತಂಡವು ಈಚೆಗೆ ಕಲ್ಲಡ್ಕ ಹಾಗೂ ಮುಡಿಪು ಶಾಲೆಗೆ ತೆರಳಿ ಸೈಕಲ್ಗಳ ಗುಣಮಟ್ಟ ಪರಿಶೀಲಿಸಿ, ಮೇಲಾಧಿಕಾರಿಗಳಿಗೆ ವರದಿ ನೀಡಿದೆ. ಸೈಕಲ್ಗಳ ವಿತರಣೆಗೆ ಸರಕಾರದ ಆದೇಶ ಬಂದ ಕೂಡಲೇ ವಿತರಣೆ ಮಾಡುವ ಕುರಿತು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ‘ವಾರ್ತಾಭಾರತಿಗೆ’ ಮಾಹಿತಿ ನೀಡಿದ್ದರು.
ಆದೇಶದಲ್ಲೇನಿದೆ?
ಪ್ರಸ್ತುತ ಸಾಲಿನಲ್ಲಿ ವಿತರಣೆ ಮಾಡಲು ಬಾಕಿ ಇದ್ದು ತಡೆಹಿಡಿಯಲಾಗಿರುವ ಬೈಸಿಕಲ್ಗಳನ್ನು ಕೂಡಲೇ ವಿತರಣೆ ಮಾಡಲು ಆದೇಶಿಸಲಾಗಿದೆ. ವಿತರಣೆ ಮಾಡುವ ಸಂದರ್ಭ, ಸಂಬಂಧಿಸಿದ ವಿಭಾಗೀಯ ಹಂತದ ಮತ್ತು ಜಿಲ್ಲಾ ಹಂತದ ಪರಿಶೀಲನಾ ತಂಡವು ಬೈಸಿಕಲ್ಗಳು ಗುಣಮಟ್ಟ ಹೊಂದಿವೆಯೇ, ಇಲ್ಲವೇ ಎಂಬುದರ ಬಗ್ಗೆ ಹಾಗೂ ಬೈಸಿಕಲ್ಗಳ ಜೋಡಣೆ ಸುಸ್ಥಿತಿಯಲ್ಲಿದ್ದು, ಮಕ್ಕಳು ಬಳಸಲು ಯೋಗ್ಯವಾಗಿದೆಯೇ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಹಾಗೂ ಈ ಕುರಿತು ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.
ಸರಬರಾಜಿಗೆ ಬಾಕಿ ಇರುವ ಸೈಕಲ್ಗಳನ್ನು ವಿತರಣೆ ಮಾಡುವ ಪೂರ್ವದಲ್ಲಿ ಪ್ರತೀ ಶಾಲಾ ಹಂತದಲ್ಲಿ ಎಸ್ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಸ್ಥಳೀಯ ಸರಕಾರಿ ನೌಕರರನ್ನು ಒಳಗೊಂಡ ತ್ರಿಸದಸ್ಯರ ಸಮಿತಿಯನ್ನು ರಚಿಸಿ ಈ ಆದೇಶದಲ್ಲಿರುವ ಅಂಶಗಳ ಬಗ್ಗೆ ಪರಿಶೀಲಿಸಿ, ಅದನ್ನು ನಮೂದಿಸಿ, ದೃಢೀಕರಿಸಿಕೊಳ್ಳಬೇಕು ಎಂದು ಸೂಚಿಸುವ ಮೂಲಕ ಗುಣಮಟ್ಟ ಪರಿಶೀಲನೆಯ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಇಲಾಖೆಗೆ ಹೊರಿಸಿದೆ.
ಬೈಸಿಕಲ್ ವಿತರಣೆ ಮುನ್ನ ಈ ಅಂಶಗಳನ್ನು ಗಮನಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ. ಬೈಸಿಕಲ್ ಗುಣಮಟ್ಟ, ಬಳಕೆಗೆ ಯೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಪಡಿಸಬೇಕು. ಫ್ರೇಮ್, ಫೋರ್ಕ್, ಹ್ಯಾಂಡಲ್, ರಿಫ್ಲೆಕ್ಟರ್, ಹ್ಯಾಂಡಲ್ ಬಾರ್ ಸರಿ ಇದೆಯೇ ಎಂದು ಪ್ರತಿ ಸೈಕಲ್ ಅನ್ನು ನೋಡಬೇಕು. ಟೂಲ್ ಕಿಟ್ ನೀಡಲಾಗಿದೆಯೇ ಎಂಬುದನ್ನು ಗಮನಿಸಬೇಕು.
ವಾರ್ತಾಭಾರತಿ ವರದಿ ಫಲಶ್ರುತಿ
ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ಮುಗಿಯುತ್ತಾ ಬಂದಿದ್ದರೂ ಸರಕಾರಿ ಶಾಲೆಗಳಿಗೆ ಈವರೆಗೂ ಸೈಕಲ್ ವಿತರಣೆಯಾಗಿರಲಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸಿತ್ತು. ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಸುಮಾರು 4 ಸಾವಿರ ಸೈಕಲ್ಗಳು ಮೂರು ತಿಂಗಳುಗಳಿಂದ ಕಲ್ಲಡ್ಕ ಹಾಗೂ ಮುಡಿಪು ಸರಕಾರಿ ಶಾಲೆಯಲ್ಲೇ ಉಳಿದುಕೊಂಡಿತ್ತು. ಈ ಬಗ್ಗೆ ಕಾಳಜಿ ವಹಿಸಿ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಇನ್ನೂ ಸಿಗದ ಸೈಕಲ್ ಭಾಗ್ಯ ಎಂಬ ಶೀರ್ಷಿಕೆಯಡಿ ಜ.7ರಂದು ‘ವಾರ್ತಾಭಾರತಿ’ಯು ವಿಶೇಷ ವರದಿ ಪ್ರಕಟಸಿತ್ತು. ಅಲ್ಲದೆ, ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನ ಸೆಳೆದಿತ್ತು.