ನಮ್ಮ ಸಂವಿಧಾನಕ್ಕೊಂದು ಪ್ರವೇಶಿಕೆ
ನಾನು ಓದಿದ ಪುಸ್ತಕ
ಕನ್ನಡ ಅಕ್ಷರ ಲೋಕದಲ್ಲಿ ಕಿರುಹೊತ್ತಿಗೆಗಳ ಹೊಸ ಟ್ರೆಂಡ್ ಶುರುವಾಗಿದೆ. ಒಂದು ಸಾಮಾಜಿಕ ಹಿತಾಸಕ್ತಿಯೊಂದಿಗೆ ತಲುಪಬೇಕಾದ ವರ್ಗವನ್ನು ವಿಭಿನ್ನ ರೀತಿಯಲ್ಲಿ ತಲುಪಿ, ಯಶಸ್ಸನ್ನು ದಕ್ಕಿಸಿಕೊಂಡಿರುವುದು ಈ ಟ್ರೆಂಡಿನ ವಿಶೇಷ! ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರ 'ಸಂವಿಧಾನ ಓದು' ಟ್ರೆಂಡ್ ಸೆಟ್ಟರ್ ಹೊತ್ತಿಗೆ. 'ಹರಪ್ಪ -ಡಿಎನ್‌ಎ ನುಡಿದ ಸತ್ಯ' ಕೂಡ ಇದೇ ರೀತಿಯಲ್ಲಿ ಬಂದ ಪುಸ್ತಕ.
ನಮ್ಮ ಸಂವಿಧಾನವನ್ನು ಓದುವುದು ಅರಿಯುವುದು ಸುಲಭ ಸಾಧ್ಯವಲ್ಲ. ಆದರೆ ಅದನ್ನು ಸಾಧ್ಯವಾಗಿಸುವ ತಿಳಿವನ್ನು, ಸಿದ್ಧತೆಯನ್ನು, ಕ್ರಮಬದ್ಧವಾಗಿ ನಿರೂಪಿಸಿ ಸಾಂವಿಧಾನಿಕ ಮನುಷ್ಯರಾಗುವ ಮಾದರಿಯನ್ನು ನ್ಯಾ. ನಾಗಮೋಹನ ದಾಸ್ ಅವರು ನಮ್ಮ ಮುಂದಿರಿಸಿದ್ದಾರೆ. ಆದಿಕಾಲದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳಿಂದ ಹಿಡಿದು ಇತ್ತೀಚಿನ ವ್ಯವಸ್ಥೆಗಳವರೆಗೆ ಸರಳವಾಗಿಯೂ ಸ್ಥೂಲವಾಗಿಯೂ ಆರಂಭದ ಭಾಗದಲ್ಲಿಯೇ ಪರಿಚಯಿಸಿರುವುದು ಮುಂದಿನ ಓದಿಗೆ ನೆರವಾಗುತ್ತದೆ. ಅಮೆರಿಕ, ಬ್ರಿಟನ್ ಮತ್ತಿತರ ದೇಶಗಳಲ್ಲಿ ಸಂವಿಧಾನಗಳು ರೂಪುಗೊಂಡು ಗಣರಾಜ್ಯವಾದ ಬಗೆ, ಕಾಲ, ಧ್ಯೇಯ, ಘೋಷಣೆಗಳ ಪೂರಕವಾದ ಮಾಹಿತಿಯಿದೆ.
ನ್ಯಾ.ನಾಗಮೋಹನ ದಾಸ್
ಪುಸ್ತಕದಲ್ಲಿರುವ ಒಟ್ಟು ಹನ್ನೊಂದು ಭಾಗಗಳಲ್ಲಿ ಮೂರನೆಯದು ವಿಸ್ತಾರವಾಗಿದೆ. ನಮ್ಮ ದೇಶದ ಜನತೆ, ಇತಿಹಾಸ, ಧರ್ಮಗಳು, ಆರ್ಥಿಕ ವ್ಯವಸ್ಥೆ, ಜಾತಿ, ಧರ್ಮ, ನ್ಯಾಯ ವಿತರಣಾ ಪದ್ಧತಿ ಮುಂತಾದವನ್ನು ವಿವರಿಸಿ ದ್ದಾರೆ. ಇದು ಇಡೀ ದೇಶದ ಒಟ್ಟಾರೆ ನೋಟವನ್ನು ಕೊಡುತ್ತದೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ಗೌಣವಾಗಿಸುವ, ಮತ್ಯಾರನ್ನೋ ಮುಂದಕ್ಕೆ ತಂದು ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ. ಅಂಬೇಡ್ಕರ್ ಅವರು ಒಂಟಿಯಾಗಿ ಕರಡನ್ನು ರಚಿಸಿದ (ಕಾರಣವಾದ ಪರಿಸ್ಥಿತಿಯನ್ನು ವಿವರಿಸಿ) ವಿಷಯವನ್ನು ಸಂವಿಧಾನ ಸಭೆಯ ಉಪಾಧ್ಯಾಕ್ಷರೂ, ಕರಡು ರಚನಾ ಸಮಿತಿ ಸದಸ್ಯರೂ ಆಗಿದ್ದ ಟಿ.ಟಿ. ಕೃಷ್ಣಮಾಚಾರಿ ಅವರ ಮಾತಿನ ಉಲ್ಲೇಖದಿಂದ ಸ್ಪಷ್ಟತೆ ದೊರಕುತ್ತದೆ. ಇಂಥ ಹಲವಾರು ಮುಖ್ಯಾಂಶಗಳು, ಕುತೂಹಲಕಾರಿ ವಿಷಯಗಳನ್ನು ಪುಸ್ತಕದುದ್ದಕ್ಕೂ ಪ್ರಸ್ತಾಪಿಸಲಾಗಿದೆ.
ಲೇಖಕರು ಆರಂಭದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಿಸಬೇಕು: ''ದೇಶದ ಕೆಲವು ವಿದ್ಯಾವಂತರು ಸಂವಿಧಾನವನ್ನು ಓದಿದ್ದಾರೆ. ಆದರೆ, ಸರಿಯಾದ ರೀತಿಯಲ್ಲಿ ಅರ್ಥೈಸಲಿಲ್ಲ. ಕೆಲವರು ಅರ್ಥೈಸಿದರೂ, ಅದರ ಆಧಾರದಂತೆ ನಡೆದುಕೊಳ್ಳಲಿಲ್ಲ. ಇದರ ಪರಿಣಾಮವಾಗಿ ಹಲವು ಸಮಸ್ಯೆಗಳು ಇನ್ನೂ ಪೂರ್ಣವಾಗಿ ಪರಿಹಾರವಾಗದೇ ಮುಂದುವರಿದಿವೆ. ಕೆಲವು ಹೊಸ ಸಮಸ್ಯೆಗಳು ಸೇರ್ಪಡೆಯಾಗುತ್ತಿವೆ. ಜೊತೆಗೆ ಹಲವು ಸವಾಲುಗಳು ಮೂಲತತ್ವಗಳನ್ನೇ ಮರುಪರಿಶೀಲನೆ ಮಾಡಬೇಕೆಂಬ ಕೂಗು ಕೇಳಿಸುತ್ತಿದೆ! ಮತ್ತೊಂದು ಕಡೆ ಸಂವಿಧಾನವನ್ನು ಬದಲಾಯಿಸಬೇಕೆಂಬ ಕೂಗು ಸಹ ಕೇಳಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಯುವಜನತೆ ಯಾವ ದಾರಿಯಲ್ಲಿ ಮುಂದುವರಿಯಬೇಕೆಂದು ತಿಳಿಯದೆ ಗೊಂದಲದಲ್ಲಿದ್ದಾರೆ. ನಮ್ಮ ಸಂವಿಧಾನವನ್ನು ಯಾವುದೇ ಭಾಷೆಯಲ್ಲಿ ಹತ್ತು ಬಾರಿ ಓದಿದರೂ ಬೇಗನೆ ಅರ್ಥವಾಗುವುದಿಲ್ಲ. ಕಾರಣ, ಅದೊಂದು ಕಥೆಯಲ್ಲ. ಅದೊಂದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮ. ಸಂವಿಧಾನ ಅರ್ಥವಾಗಲು ಅದರ ಹಿನ್ನೆಲೆ, ಪ್ರಸ್ತುತತೆ ತಿಳಿದಿರಬೇಕು. ಭಾರತ ದೇಶವನ್ನು ಅರ್ಥಮಾಡಿಕೊಳ್ಳದ ಹೊರತು, ಭಾರತ ಸಂವಿಧಾನ ಅರ್ಥವಾಗುವುದಿಲ್ಲ. ಭಾರತದ ಸಂವಿಧಾನ ಅರ್ಥ ಮಾಡಿಕೊಳ್ಳದಿದ್ದರೆ, ಅದರ ಮೂಲತತ್ವಗಳು ತಿಳಿಯುವುದಿಲ್ಲ. ಸಂವಿಧಾನದ ಮೂಲ ತತ್ವಗಳೇ ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ದಿನನಿತ್ಯದ ಕೆಲಸಗಳನ್ನು ಮುನ್ನಡೆಸುವುದು.
ಲೇಖಕರ ಈ ಮೇಲಿನ ಮಾತುಗಳು ನಮ್ಮ ದೇಶದ ಸಂಕಷ್ಟ, ಸಂದಿಗ್ಧ, ಸವಾಲುಗಳನ್ನು ಬಿಚ್ಚಿಡುತ್ತದೆ. ಇದಕ್ಕೆಲ್ಲ ಪರಿಹಾರವನ್ನು ಕಂಡುಕೊಳ್ಳವ ಏಕಮೇವ ದಾರಿಯನ್ನು ಈ ಹೊತ್ತಿಗೆಯ ಮುಖಾಂತರ ತೋರಿಸಿದ್ದಾರೆ. ವಿಷಯದ ಆಯ್ಕೆಯೇ ಪ್ರಶಂಸನಾರ್ಹ. ಅದನ್ನು ಇಷ್ಟೊಂದು ಸಂಗ್ರಹವಾಗಿ ತಿಳಿಯಾಗಿ ಕಟ್ಟಿಕೊಟ್ಟಿರುವ ಈ ಪುಸ್ತಕದ ಕರ್ತೃ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರಿಗೆ ಶರಣು ಎನ್ನಲೇಬೇಕು. ಬರಗೂರು ರಾಮಚಂದ್ರಪ್ಪನವರ ತೂಕದ ಮುನ್ನುಡಿಯ ಮಾತುಗಳು ಪುಸ್ತಕದ ಆಶಯವನ್ನು ಎತ್ತಿ ಹಿಡಿದಿದೆ. ಪ್ರಕಾಶಕರಾದ ಡಾ. ವಿಠ್ಠಲ ಭಂಡಾರಿ ಅವರು ಆರಂಭದಲ್ಲಿ ಯುವಪೀಳಿಗೆಯನ್ನು ದಿಕ್ಕುಗೆಡಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ನಮ್ಮನ್ನು ಮುನ್ನಡೆಸಬೇಕಾದ ಸಂವಿಧಾನವನ್ನು ನಾವು ಕಾಪಿಟ್ಟುಕೊಳ್ಳಬೇಕಾದ ಗಳಿಗೆಯಿದು ಎಂದು ಹೇಳಿ ಅಂತೆಯೇ ಮುಂದಡಿಯಿಟ್ಟಿದ್ದಾರೆ. ಈ ಪುಸ್ತಕ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿರುವುದು ಸಂತೋಷದ ವಿಷಯ. ಪುಸ್ತಕದ ಶೀರ್ಷಿಕೆ 'ಸಂವಿಧಾನ ಓದು - ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ' ಎಂದಿದೆಯಾದರೂ ಇದು ಪ್ರತಿಯೊಬ್ಬರಿಗೂ ಆವಶ್ಯಕವಾದ ಓದು.