ನನ್ನ ಬದುಕು ಭಗ್ನವಾಗಿದೆ; ನಿಮ್ಮ ಬೆಂಬಲದ ಅಗತ್ಯವಿದೆ: ಆನಂದ್ ತೇಲ್ತುಂಬ್ಡೆ
ಭಾಗ-2
ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿ ರುವ ಆನಂದ್ ತೇಲ್ತುಂಬ್ಡೆ, ದೇಶಾದ್ಯಂತ ಸರಕಾರದ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸುವ ಷಡ್ಯಂತ್ರ ನಡೆಯುತ್ತಿದೆಯೆಂದು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಸವಿಸ್ತಾರವಾದ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಅದರ ಭಾವಾನುವಾದ.
ಆದರೆ ಅದು ಕೇವಲ ಸಾಂಕೇತಿಕವಾದುದಾಗಿತ್ತು. ಆದರೆ ಬಿಜೆಪಿಯ ಮತಬ್ಯಾಂಕ್‌ಗೆ ಇದು ಅಪಾಯಕಾರಿಯಾಗುವ ಸಾಧ್ಯತೆಯೂ ಕಂಡುಬಂದಿತ್ತು. ಅಧಿಕಾರ ವಾಂಛೆಯ ಬಿಜೆಪಿಗೆ ಇದು ಭಯವನ್ನು ಮೂಡಿಸಿತು. ಮರಾಠರ ನಡುವೆ ವಿಭಜನೆಯನ್ನು ಸೃಷ್ಟಿಸುವ ಕೆಲಸವನ್ನು ತನ್ನ ಏಜೆಂಟರಾದ ‘ಸಮಸ್ತ ಹಿಂದುತ್ವ ಅಘಾಡಿ’ಯ ಮಿಲಿಂದ್ ಏಕ್‌ಬೊಟೆ ಹಾಗೂ ಶಿವ ಛತ್ರಪತಿ ಪ್ರತಿಷ್ಠಾನದ ಸಂಭಾಜಿ ಭಿಡೆಗೆ ವಹಿಸಿತ್ತು. ಭೀಮಾ-ಕೋರೆಗಾಂವ್‌ನಿಂದ ಕೇವಲ ನಾಲ್ಕು ಕಿ.ಮೀ. ದೂರದ ವಾಡು ಬದ್ರುಕ್‌ನಲ್ಲಿರುವ ಶಿವಾಜಿ ಪುತ್ರ ಸಂಭಾಜಿ ಮಹಾರಾಜ್‌ನ ಸಮಾಧಿಯನ್ನು ವಿವಾದವನ್ನು ಸೃಷ್ಟಿಸಲು ಬಳಸಿಕೊಳ್ಳಲಾಯಿತು.
ಔರಂಗಜೇಬನು ಸಂಭಾಜಿಯನ್ನು ಹತ್ಯೆಗೈದು, ಆತನ ಲಿಂಗಛೇದನಗೊಂಡ ಮೃತದೇಹವನ್ನು ಎಸೆದುಹಾಕಿದ್ದ. ಗೋವಿಂದ ಮಹಾರ್ ಎಂಬಾತ ಈ ಶವದ ತುಣುಕುಗಳನ್ನು ಸಂಗ್ರಹಿಸಿ, ಸಂಭಾಜಿಗೆ ಗೌರವಪೂರ್ಣವಾಗಿ ಅಂತ್ಯಸಂಸ್ಕಾರವನ್ನು ನಡೆಸಿದ್ದಾಗಿ 300 ವರ್ಷಗಳಷ್ಟು ಪುರಾತನವಾದ ಈ ಸಮಾಧಿಯ ಇತಿಹಾಸ ಹೇಳುತ್ತದೆ. ಗೋವಿಂದ ಮಹಾರ್ ತನ್ನ ಹೊಲದಲ್ಲಿ ಈ ಸಮಾಧಿಯನ್ನು ನಿರ್ಮಿಸಿದ್ದನು. ಆತ ಮೃತಪಟ್ಟ ಬಳಿಕ ಆತನ ಕುಟುಂಬಿಕರು, ಆತನ ಸ್ಮಾರಕವನ್ನು ಸಂಭಾಜಿಯ ಸ್ಮಾರಕದ ಸಮೀಪವೇ ನಿರ್ಮಿಸಿದ್ದರು.
ಆದರೆ ಏಕ್‌ಬೊಟೆ ಹಾಗೂ ಭಿಡೆ ಸಂಚುಗಾರ ಜೋಡಿಯು, ಸಂಭಾಜಿಯ ಸ್ಮಾರಕನಿರ್ಮಿಸಿರುವುದು ಮರಾಠ ಕುಟುಂಬದ ಶಿವಾಲೆ ಎಂಬಾತನೇ ಹೊರತು ಗೋವಿಂದ್ ಮಹಾರ್ ಅಲ್ಲವೆಂದು ಕಟ್ಟುಕತೆ ಸೃಷ್ಟಿಸಿದರು ಹಾಗೂ ದಲಿತರ ವಿರುದ್ಧ ಮರಾಠರನ್ನು ಪ್ರಚೋದಿಸಿದರು. ವಾಡುಭದ್ರಕ್‌ನಲ್ಲಿ ಹೊಗೆಯಾಡುತ್ತಿದ್ದ ಈ ಒಡಕನ್ನು ಬಳಸಿಕೊಂಡು, ಜನವರಿ 1ರಂದು ಭೀಮಾ ಕೋರೆಗಾಂವ್‌ನಲ್ಲಿ ಸಮಾವೇಶಗೊಳ್ಳುತ್ತಿದ್ದ ದಲಿತರ ವಿರುದ್ಧ ಮರಾಠರನ್ನು ಅವರು ಪ್ರಚೋದಿಸಬಹುದಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಪೂರ್ವಸಿದ್ಧತೆಗಳು ಸಾರ್ವಜನಿಕರಿಗೆ ಗೋಚರವಾಗಿದ್ದರೂ, ಆಡಳಿತವು ನಿರ್ಲಕ್ಷವನ್ನು ತಾಳಿತ್ತು.
ಡಿಸೆಂಬರ್ 29ರಂದು ಗೋವಿಂದ ಮಹಾರ್‌ನ ಸಮಾಧಿಯ ಛಾವಣಿ ಹಾಗೂ ಮಾಹಿತಿ ಫಲಕವು ಹಾನಿಗೀಡಾಗಿರುವುದನ್ನು ದಲಿತರು ಕಂಡರು. ಯೋಜನೆ ಹಾಕಿಕೊಂಡಂತೆಯೇ, ಈ ಘಟನೆಯು ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡಬಹುದಾಗಿತ್ತು. ಆದರೆ ಸಂಚುಗಾರರ ದುರದೃಷ್ಟಕ್ಕೆ ಮಾರನೆ ದಿನವೇ ಗ್ರಾಮಸ್ಥರು ಸಂಧಾನದ ಮೂಲಕ ಬಗೆಹರಿಸಿದರು
ಡಿಸೆಂಬರ್ 31ರಂದು ಪೂರ್ವಯೋಜಿತವಾದಂತೆ ಎಲ್ಗಾರ್ ಪರಿಷದ್ ಶನಿವಾರ್‌ವಾಡದಲ್ಲಿ ನಡೆಯಿತು. ಸಮಾವೇಶದ ಕೊನೆಗೆ ಅಲ್ಲಿ ಉಪಸ್ಥಿತರಿದ್ದ ಜನರು, ತಾವು ಎಂದಿಗೂ ಬಿಜೆಪಿಗೆ ಮತ ನೀಡುವುದಿಲ್ಲ ಹಾಗೂ ದೇಶದ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಪೂರ್ತಿ ಸಮಾವೇಶವನ್ನು ಪೊಲೀಸರು ಹಾಗೂ ಸಂಘಟಕರು ವೀಡಿಯೊದಲ್ಲಿ ಚಿತ್ರೀಕರಿಸಿಕೊಂಡಿದ್ದರು.
ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಹಾಗೂ ಎಲ್ಲಾ ಪ್ರತಿನಿಧಿಗಳು ಶಾಂತಿಯುತವಾಗಿ ಚದುರಿದ್ದರು. ನನ್ನ ಮಟ್ಟಿಗೆ ಹೇಳುವುದಾದರೆ, ನನ್ನ ಆಪ್ತಮಿತ್ರರೊಬ್ಬರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲೆಂದು ನಾನು ಡಿಸೆಂಬರ್ 31ರಂದು, ಬೆಳಗ್ಗೆ 10:55ಕ್ಕೆ ಪುಣೆಗೆ ಆಗಮಿಸಿದ್ದೆ.
ನಾವು ಶ್ರೇಯಸ್ ಹೊಟೇಲ್‌ನಲ್ಲಿ ತಂಗಿದ್ದೆವು. ಮಾರನೆ ದಿನ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು ಹಾಗೂ ಗೋವಾಗೆ ಹಿಂದಿರುಗಲು 12:40ಕ್ಕೆ ಹೊಟೇಲ್‌ನಿಂದ ನಿರ್ಗಮಿಸಿದೆವು. ಪುಣೆಗೆ ಆಗಮಿಸಿದ ನನ್ನ ಪತ್ನಿ ಆಕೆಯ ಸೋದರಳಿಯ (ಸುಜತ್ ಅಂಬೇಡ್ಕರ್) ಹಾಗೂ ಅತ್ತಿಗೆ (ಅಂಜಲಿ ಅಂಬೇಡ್ಕರ್) ಅವರನ್ನು ಶನಿವಾರ್‌ವಾಡದಲ್ಲಿ ಕಾಣಲು ಬಯಸಿದ್ದರು. ಹೀಗಾಗಿ ನಾವು 5-10 ನಿಮಿಷಗಳ ಪ್ರಯಾಣ ಬೆಳೆಸಿದೆವು ಮತ್ತು ಬಿರುಕುಬಿಟ್ಟಿದ್ದ ನನ್ನ ಕಾರಿನ ಟೈರ್‌ಗಳಲ್ಲೊಂದನ್ನು ಬದಲಾಯಿಸುವುದಕ್ಕಾಗಿ ಟಯರ್ ಅಂಗಡಿಗಳ ಹುಡುಕಾಟದಲ್ಲಿ ತೊಡಗಿದೆವು.
ಅದೃಷ್ಟವಶಾತ್, ನಾನು ಎಲ್ಗಾರ್ ಪರಿಷದ್‌ನಲ್ಲಿ ಭಾಗವಹಿಸಲಿಲ್ಲವೆಂಬುದನ್ನು ದೃಢಪಡಿಸಲು ನನ್ನ ಈ ಪ್ರಯಾಣದ ಸಮಯದ ಬಗ್ಗೆ ನನ್ನಲ್ಲಿ ಪುರಾವೆಗಳಿವೆ. ಪುಣೆಗೆ ಆಗಮಿಸಿದ ನಾನು ಕಾನ್ಫರೆನ್ಸ್ ಮುಗಿಯುವವರೆಗೆ ಉಳಿದುಕೊಳ್ಳಬಹುದಾಗಿತ್ತು. ಆದರೆ ಸಮಾವೇಶದ ಸ್ಥಳವು ನನಗೆ ಒಗ್ಗದೆ ಹೋದುದರಿಂದ ಮತ್ತು ಇನ್‌ಸ್ಟಿಟ್ಯೂಟ್‌ನಲ್ಲಿನ ನನ್ನ ಕೆಲಸವನ್ನು ನಿರ್ವಹಿಸಲು ಅಲ್ಲಿಗೆ ಬೇಗನೇ ತೆರಳಬೇಕಾಗಿದ್ದರಿಂದ ನಾನು ಆ ಸಮಾವೇಶದಲ್ಲಿ ಪಾಲ್ಗೊಳ್ಳುವುದರಿಂದ ತಪ್ಪಿಸಿಕೊಂಡೆ.
ಜನವರಿ 1ರಂದು ಭೀಮಾ-ಕೋರೆಗಾಂವ್‌ನಲ್ಲಿ ದಲಿತರು ಜಮಾವಣೆಗೊಂಡಾಗ ಕೇಸರಿ ಗೂಂಡಾಗಳು, ಓಣಿಯ ಮನೆಗಳ ಮೇಲಿನ ತಾರಸಿಯಿಂದ ಕಲ್ಲುಗಳನ್ನು ಎಸೆದು ಯೋಜಿತ ದಾಳಿಗಳನ್ನು ನಡೆಸಿದರು. ಜನರನ್ನು ಹಿಗ್ಗಾಮಗ್ಗಾ ಥಳಿಸಿದ ಅವರು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಸಾಕಷ್ಟು ಸಂಖ್ಯೆಯಲ್ಲಿರದ ಪೊಲೀಸರು ಮೂಕಪ್ರೇಕ್ಷಕರಂತೆ ಎಲ್ಲವನ್ನೂ ವೀಕ್ಷಿಸಿದರು. ಈ ಸಂಚಿನಲ್ಲಿ ಆಡಳಿತ ಕೂಡಾ ಶಾಮೀಲಾಗಿರುವುದನ್ನು ಇದು ಸ್ಪಷ್ಟವಾಗಿ ದೃಢಪಡಿಸಿದೆ.
ಸಂಭಾಜಿಯವರ ಸಮಾಧಿ ಸ್ಥಳದಲ್ಲಿ ಡಿಸೆಂಬರ್ 29ರಂದು ನಡೆದ ಘಟನೆಯು, ಈ ಊಹಾಪೋಹಗಳಿಗೆ ಪುಷ್ಟಿ ನೀಡಿತು. ಆದರೆ ಆಡಳಿತವು ಏನೂ ತಿಳಿದಿಲ್ಲವೆಂಬಂತೆ ಅದನ್ನು ನಿರ್ಲಕ್ಷಿಸುವ ಮೂಲಕ ಗಲಭೆಗಳು ನಡೆಯಲು ಆಸ್ಪದ ಮಾಡಿಕೊಟ್ಟಿತು. ವಾಟ್ಸ್ ಆ್ಯಪ್ ಸಂದೇಶಗಳ ಮೂಲಕ ಹರಿದಾಡಿದ ವೀಡಿಯೊ ತುಣುಕುಗಳಲ್ಲಿ ಕೇಸರಿಧ್ವಜವನ್ನು ಹೊತ್ತವರು ಏಕ್‌ಬೊಟೆ ಹಾಗೂ ಭಿಡೆಯವರ ಹೆಸರಿನಲ್ಲಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಮತ್ತು ತಮಗೆ ಅರಿವಿಲ್ಲದೆ ಸಿಕ್ಕಿಹಾಕಿಕೊಂಡ ದಲಿತರನ್ನು ಥಳಿಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸಿವೆ. ಹಲವಾರು ದಲಿತರು ಗಾಯಗೊಂಡರು, ಅವರ ವಾಹನಗಳು ಜಖಂಗೊಂಡವು, ಅನೇಕ ಅಂಗಡಿಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಯಿತು.
ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಏನೆಲ್ಲಾ ನಡೆಯಿತು ಎಂಬ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಜನವರಿ 1ರಂದು ನಡೆದ ದಾಳಿಯ ಘಟನೆ ಕೂಡಾ ಅಂದು ಮಧ್ಯಾಹ್ನದವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ‘ದಿ ವೈರ್’ ಸಂಪಾದಕ ಸಿದ್ಧಾರ್ಥ ವರದರಾಜನ್ ಜನವರಿ 2ರಂದು ಪ್ರಕಟಿಸಲಿರುವ ಲೇಖನದ ಕುರಿತು ಅವರು ಹಾಗೂ ನನ್ನ ನಡುವೆ ನಡೆದ ಇಮೇಲ್ ಪತ್ರವ್ಯವಹಾರದಿಂದ ಇದು ಸ್ಪಷ್ಟವಾಗಿ ದೃಢಪಡುತ್ತದೆ.
ಪೊಲೀಸರಿಗೆ ಮುಕ್ತ ಸ್ವಾತಂತ್ರ
ಜನವರಿ 2ರಂದು ಓರ್ವ ಸಾಮಾಜಿಕ ಕಾರ್ಯಕರ್ತ ಹಾಗೂ ಬಹುಜನ ರಿಪಬ್ಲಿಕನ್ ಸಮಾಜವಾದಿ ಪಕ್ಷದ ಸದಸ್ಯೆ ಅನಿತಾ ರವೀಂದ್ರ ಸಾಳ್ವೆ ಅವರು ಶಿಕಾರ್‌ಪುರ ಪೊಲೀಸ್‌ಠಾಣೆಗೆ ನೀಡಿದ ದೂರಿನಲ್ಲಿ ಏಕ್‌ಬೊಟೆ ಹಾಗೂ ಭಿಡೆ ಅವರನ್ನು ಹಿಂದಿನ ದಿನ ದಲಿತರ ಮೇಲೆ ನಡೆದ ದಾಳಿಯ ದೋಷಿಗಳೆಂದು ಆರೋಪಿಸಿದ್ದರು. ಈ ದೂರಿನಿಂದಾಗಿ ಏನೂ ಪ್ರಯೋಜನವಾಗಲಿಲ್ಲ. ಜನವರಿ 3ರಂದು ಪ್ರಕಾಶ್ ಅಂಬೇಡ್ಕರ್ ಅವರು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದ್ದರು. ಬಹುತೇಕವಾಗಿ ಅದು ಯಾವುದೇ ಅಹಿಕರ ಘಟನೆಯಿಲ್ಲದೆ ಶಾಂತಿಯುತವಾಗಿ ನಡೆಯಿತು. ಆದಾಗ್ಯೂ ಪೊಲೀಸರು ಆನಂತರ ತಾವಾಗಿಯೇ ಕಾರ್ಯಪ್ರವೃತ್ತರಾಗಿ, ಹಿಂಸಾಚಾರ ಎಸಗಿದ್ದಾರೆಂದು ನೆಪ ಹೇಳಿತ ದಲಿತ ಯುವಕರನ್ನು ಬಂಧಿಸಲಾರಂಭಿಸಿದರು.
ಜನವರಿ 8ರಂದು ಆರೆಸ್ಸೆಸ್ ಕಾರ್ಯಕರ್ತ ಹಾಗೂ ಸಂಭಾಜಿ ಭಿಡೆಯವರ ಅನುಯಾಯಿಯೆಂದು ಹೇಳಿಕೊಂಡ ತುಷಾರ್ ದಾಮ್ಗಡೆ ಅವರು ಎಲ್ಗಾರ್ ಪರಿಷದ್ ಸಂಘಟಿಸಿದ್ದಕ್ಕಾಗಿ ಕಬೀರ್ ಕಲಾ ಮಂಚ್‌ನ ಕಾರ್ಯಕರ್ತರನ್ನು ಹೆಸರಿಸಿ ಎಫ್‌ಐಆರ್ ಸಲ್ಲಿಸಿದ್ದರು. ಜನವರಿ 1ರಂದು ಎಲ್ಗಾರ್ ಪರಿಷದ್‌ನ ಮಾಡಲಾದ ಪ್ರಚೋದನಕಾರಿ ಭಾಷಣಗಳು ಜನವರಿ 1ರ ಹಿಂಸಾಚಾರಕ್ಕೆ ಕಾರಣವಾಯಿತೆಂದು ಅವರು ಆರೋಪಿಸಿದ್ದರು. ಮೇಲ್ನೋಟಕ್ಕೆ ಇದೊಂದು ಅಸಮಂಜಸ ಹೇಳಿಕೆಯಾಗಿತ್ತು.
ಮೊದಲನೆಯದಾಗಿ ಪೊಲೀಸರೇ ಖುದ್ದಾಗಿ ಎಲ್ಗಾರ್ ಪರಿಷದ್‌ನ ಕಲಾಪಗಳಿಗೆ ಸಾಕ್ಷಿಯಾಗಿದ್ದರು. ತಮ್ಮ ದಾವೆಯನ್ನು ದೃಢಪಡಿಸಲು ಅವರ ಬಳಿ ಸಂಪೂರ್ಣ ವೀಡಿಯೊ ರೆಕಾರ್ಡಿಂಗ್ ಕೂಡಾ ಇದೆ. ಒಂದು ವೇಳೆ ಯಾರಾದರೂ ಅಲ್ಲಿ ಯಾವುದೇ ಪ್ರಚೋದನಕಾರಿ ಭಾಷಣಗಳನ್ನು ಮಾಡಿರುತ್ತಿದ್ದಲ್ಲಿ ಅವರು ತಾವಾಗಿಯೇ ಎಫ್‌ಐಆರ್ ದಾಖಲಿಸಿ, ಭಾಷಣಕಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಮತ್ತ್ಯಾರೋ ಒಬ್ಬರು ಎಫ್‌ಐಆರ್ ಸಲ್ಲಿಸಲು ಅವರಿಗೆ 9 ದಿನಗಳ ಕಾಲ ಕಾಯಬೇಕಾದ ಅಗತ್ಯವಿರುತ್ತಿರಲಿಲ್ಲ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ವ್ಯಕ್ತಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದರು. ತಮಗೆ ಕೆಲವೊಂದು ಸುಳಿವುಗಳು ದೊರೆತಿವೆಯೆಂಬಂತೆ ವರ್ತಿಸಿದ ಅವರು, ಎಲ್ಗಾರ್ ಪರಿಷದ್‌ಗೆ ಮಾವೋವಾದಿಗಳು ಧನಸಹಾಯ ನೀಡುತ್ತಿದ್ದಾರೆಂದು ಅಪಪ್ರಚಾರ ಮಾಡಿದರು. ಎಲ್ಗಾರ್ ಪರಿಷದ್‌ಗೆ ಯಾವುದೇ ಹಣದ ಅಗತ್ಯವಿಲ್ಲವೆಂದು ಪರಿಷದ್‌ನ ಮುಖ್ಯ ಸಂಘಟಕರಾದ ನಿವೃತ್ತ ನ್ಯಾಯಮೂರ್ತಿ ಕೋಲ್ಶೆ-ಪಾಟೀಲ್ ಅವರು ನಿವೃತ್ತ ನ್ಯಾಯಮೂರ್ತಿ ಪಿ.ಬಿ. ಸಾವಂತ್ ಜೊತೆ ನೀಡಿದ ಬಹಿರಂಗ ಹೇಳಿಕೆಗಳನ್ನು ಕೂಡಾ ಪೊಲೀಸರು ಕಡೆಗಣಿಸಿದ್ದರು.
ಇಂದಿನವರೆಗೂ, ಈ ಘಟನೆಯನ್ನು ಮಾವೋವಾದಿಗಳ ಅತಿ ದೊಡ್ಡ ಸಂಚೆಂಬ ಹಾಗೆ ಬಿಂಬಿಸುತ್ತಾ ಬರಲಾಗುತ್ತಿದೆ ಹಾಗೂ ತನ್ನ ಸುಳ್ಳನ್ನು ನಂಬುವಂತೆ ಮಾಡಲು ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲಾಗುತ್ತದೆ. ಈ ಇಬ್ಬರು ನಿವೃತ್ತ ನ್ಯಾಯಾಧೀಶರ ಹೇಳಿಕೆಯನ್ನು ದೃಢಪಡಿಸಲು ಪೊಲೀಸರು ಅವರೊಂದಿಗೆ ವಿಚಾರಣೆಯನ್ನು ಕೂಡಾ ನಡೆಸಲಿಲ್ಲ. ದೋಷಾರೋಪಪಟ್ಟಿಯಲ್ಲಿ ಪೊಲೀಸರು ನ್ಯಾಯಮೂರ್ತಿ ಸಾವಂತ್ ನೀಡಿದ್ದರೆನ್ನಲಾದ ಹೇಳಿಕೆಯನ್ನು ಲಗತ್ತಿಸಿದ್ದರು. ಆದರೆ ನ್ಯಾ. ಸಾವಂತ್ ಅವರು ಅದನ್ನು ಬಹಿರಂಗವಾಗಿ ಅಲ್ಲಗಳೆದಿದ್ದಾರೆ. ಇಂತಹ ಘೋರ ಅಪರಾಧಗಳನ್ನು ಕೂಡಾ ನ್ಯಾಯಾಲಯಗಳು ಕಡೆಗಣಿಸಿವೆ.
ಮಾವೋವಾದಿಗಳು ಆರ್ಥಿಕ ನೆರವು ನೀಡಿದ್ದಾರೆಂಬ ಸಿದ್ಧಾಂತದ ನೆಪಹಿಡಿದು ಪೊಲೀಸರು 2018ರ ಜೂನ್ 6ರಂದು ನಾಗಪುರ, ಮುಂಬೈ ಹಾಗೂ ದಿಲ್ಲಿಗಳಲ್ಲಿ ನಿಕಟ ಸಮನ್ವಯತೆಯೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಗಳಲ್ಲಿ ಐದು ಮಂದಿ ಚಳವಳಿಗಾರರ ನಿವಾಸಗಳ ಮೇಲೆ ದಾಳಿ ನಡೆಸಿ, ಬಂಧಿಸಿದರು. ಅವರು ಯಾವ ರೀತಿಯಲ್ಲೂ ಎಲ್ಗಾರ್ ಪರಿಷದ್‌ಗೆ ಸಂಬಂಧಪಟ್ಟವರಾಗಿರಲಿಲ್ಲ.
ಬಂಧನವಾದಾಗಿನಿಂದ, ಪೊಲೀಸರು ಭೀಮಾಕೋರೆಗಾಂವ್‌ನಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿದ ಹಿಂಸಾಚಾರದ ಹಿಂದೆ ಈ ಐವರು ವ್ಯಕ್ತಿಗಳ ಕೈವಾಡವಿದೆಯೆಂದು ಘೋಷಿಸುವುದರಿಂದ ಹಿಡಿದು, ಅವರು ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆಂದು ಹೇಳುವುದರಿಂದ ಹಿಡಿದು ಅಂತಿಮವಾಗಿ ಇವರು ರಾಜೀವ್‌ಗಾಂಧಿಯವರ ಹತ್ಯೆಯ ಶೈಲಿಯಲ್ಲಿ ಪ್ರಧಾನಿ ನರೇಂದ್ರಮೋದಿಯವರನ್ನು ಕೊಲೆಗೈಯಲು ಸಂಚುಹೂಡಿದ್ದಾರೆಂಬ ಕಥೆಯನ್ನು ಕೂಡಾ ಹೆಣೆದಿದ್ದಾರೆ. ಈ ಕಥೆಗಳಿಂದಾಗಿ ಪೊಲೀಸರಿಗೆ ಆತ/ಆಕೆಯನ್ನು ಹಲವು ವರ್ಷಗಳ ಕಾಲ ಜೈಲಿಗೆ ತಳ್ಳಲು ಸಾಧ್ಯವಾಗುವಂತಹ ಮತ್ತು ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಯಾವುದೇ ಅವಕಾಶವನ್ನು ನೀಡದಂತಹ ಭಯಾನಕವಾದ ಯುಎಪಿಎ ಕಾಯ್ದೆಯನ್ನು ಹೇರುವುದಕ್ಕೆ ಒಳ್ಳೆಯ ಅಸ್ತ್ರವಾಗಿತ್ತು.
ಮೂಲಭೂತವಾಗಿ ಇಂತಹ ದಾಳಿಗಳನ್ನು ಸಂತ್ರಸ್ತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳುವುದಕ್ಕೆ ಬಳಸಲಾಗುತ್ತಿತ್ತು. ಅವುಗಳನ್ನು ಆನಂತರ ಪೊಲೀಸರು, ತಮ್ಮ ಆರೋಪವನ್ನು ಸಮರ್ಥಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಿದ್ದರು. ದಾಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಸಾಕ್ಷಿಗಳನ್ನು ಪುಣೆಯಿಂದ ದಿಲ್ಲಿ, ನಾಗಪುರ ಹಾಗೂ ಮುಂಬೈನಂತಹ ಅನತಿ ದೂರದ ಸ್ಥಳಗಳಿಗೆ ಕೊಂಡೊಯ್ಯುತ್ತಿದ್ದರು. ಆ ಮೂಲಕ ಜಾರಿಯಲ್ಲಿರುವ ಕಾನೂನು ನಿಯಮಗಳನ್ನು ಅಣಕಿಸುತ್ತಿದ್ದರು. ಮನೆಯವರನ್ನು ಒಂದು ಕೊಠಡಿಯಲ್ಲಿ ಕೂಡಿಹಾಕುತ್ತಿದ್ದರು ಹಾಗೂ ಇನ್ನೊಂದು ಕೋಣೆಯಲ್ಲಿರುವ ವಶಡಿಸಿಕೊಳ್ಳಲಾದ ಸಾಮಗ್ರಿಗಳನ್ನು ಬೀಗಮುದ್ರೆ ಹಾಕಲು ಒಯ್ಯುತ್ತಿದ್ದರು.
ಸೂಸಾನ್ ಅಬ್ರಹಾಂ ಸ್ವತಃ ನ್ಯಾಯವಾದಿಯಾಗಿದ್ದಾರೆ ಹಾಗೂ ಆಕೆಯ ಪತಿ ವೆರ್ನನ್ ಗೊನ್ಸಾಲ್ವಿಸ್‌ರನ್ನು ಬಂಧಿಸಲು ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರು ತಮ್ಮದೇ ಆದ ಕಂಪ್ಯೂಟರ್‌ಗಳು ಮತ್ತಿತರ ಸಾಮಗ್ರಿಗಳನ್ನು ತಮ್ಮಿಂದಿಗೆ ಒಯ್ದಿದ್ದಾರೆಂದು ಸೂಸಾನ್ ಅಬ್ರಹಾಂ ವಿವರಿಸಿದ್ದಾರೆ. ಸಾಮಗ್ರಿಗನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಲೋಪರಹಿತವಾಗಿ ನಡೆತೆಂಬುದೇ ಪೊಲೀಸರು ನ್ಯಾಯಾಲಯದ ಮುಂದೆ ನೀಡಿದ ಏಕೈಕ ಹೇಳಿಕೆಯಾಗಿತ್ತು. ಇಡೀ ಕಾರ್ಯಾಚರಣೆಯ ವೀಡಿಯೊ ಚಿತ್ರೀಕರಣವಾದುದರಿಂದ ನ್ಯಾಯಾಧೀಶರು ಅದನ್ನು ಪೂರ್ಣ ವಿಶ್ವಾಸದೊಂದಿಗೆ ಒಪ್ಪಿಕೊಂಡರು.
ಆದರೆ, ಇಲೆಕ್ಟ್ರಾನಿಕ್ ಸಾಧನಗಳನ್ನು, ರಿಮೋಟ್ ತಂತ್ರಜ್ಞಾನದ ಮೂಲಕವೂ ತಿರುಚಬಹುದಾಗಿದೆ ಹಾಗೂ ಸೆಕೆಂಡ್‌ಗಳ ಅವಧಿಯೊಳಗೆ ಯಾವುದೇ ಸಂಖ್ಯೆಯ ಫೈಲ್‌ಗಳನ್ನು ವರ್ಗಾಯಿಸಬಹುದೆಂಬುದನ್ನು ಅರಿತುಕೊಳ್ಳುವ ಬಗ್ಗೆ ನ್ಯಾಯಾಧೀಶರು ಗಮನಹರಿಸಲಿಲ್ಲ. ಇಲೆಕ್ಟ್ರಾನಿಕ್ ಸಾಧನಗಳ ವಿಶ್ವಸನೀಯತೆಯನ್ನು ದೃಢಪಡಿಸಲು ವೀಡಿಯೊ ಉತ್ತಮ ವಿಧಾನವಾಗಲಾರದು. ಅದು ವಂಚನಾತ್ಮಕವಾಗಬಹುದು ಎಂಬುದನ್ನು ಸ್ವತಃ ಮಾಹಿತಿ ತಂತ್ರಜ್ಞಾನದಲ್ಲಿ ಪರಿಣಿತನಾಗಿರುವ ನಾನು ಸಾಬೀತುಪಡಿಸಬಲ್ಲೆ.
ಕಂಪ್ಯೂಟರ್ ಸಾಧನಗಳ ವಿಶ್ವಸಾರ್ಹತೆಯನ್ನು ನಿರ್ದಿಷ್ಟವಾದ ಗಣಕ ಪ್ರಕ್ರಿಯೆ (ಅಲ್ಗರಿದಮ್)ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ. ಸಂತ್ರಸ್ತನು ಅದನ್ನು ಒಪ್ಪಿಕೊಳ್ಳದ ಹೊರತು ಅದನ್ನು ಎಂದೂ ನಂಬುವಂತಿಲ್ಲ.
ಪ್ರಕರಣವು ವಿಚಾರಣೆ ಪೂರ್ತಿಯಾಗಲು ಹಲವಾರು ವರ್ಷಗಳೇ ಬೇಕಾಗಬಹುದು ಹಾಗೂ ಅಲ್ಲಿಯವರೆಗೆ ಅಮಾಯಕ ಹಾಗೂ ಆತನ ಕುಟುಂಬದ ಬದುಕು ಸಂಪೂರ್ಣವಾಗಿ ಭಗ್ನಗೊಳ್ಳಬಹುದಾಗಿದೆಯೆಂದು ತಿಳಿದಿದ್ದರೂ ಕೂಡಾ ನ್ಯಾಯಾಲಯವು ಇದೊಂದು ವಿಚಾರಣಾಧೀನ ವಿಷಯವೆಂಬ ಕುರುಡು ದೃಷ್ಟಿಕೋನವನ್ನು ತಾಳುತ್ತದೆ.
ತಾವು ಬಂಧಿತರಲ್ಲೊಬ್ಬರ ಕಂಪ್ಯೂಟರ್‌ನಿಂದ ಮಾವೋವಾದಿಗಳಿಗೆ ಬರೆದಿಡಲಾಗಿತ್ತೆಂದು ಹೇಳಲಾದ ಪತ್ರಗಳನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ಹೇಳಿಕೊಳ್ಳಲಾರಂಭಿಸಿದರು (ಇಮೇಲ್‌ಪತ್ರಗಳಲ್ಲಿ- ಯಾಕೆಂದರೆ ಇಮೇಲ್‌ಗಳನ್ನು ಅಲಗಳೆಯಲು ಸಾಧ್ಯವಾಗದು). ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಪತ್ರಗಳು ವಿಚಿತ್ರವಾಗಿದ್ದವು. ಅದರಲ್ಲಿ ವ್ಯಕ್ತಿಗಳ ನೈಜ ಹೆಸರುಗಳನ್ನು ಹಾಗೂ ಅವರ ದೂರವಾಣಿ ಸಂಖ್ಯೆಗಳು ಇತ್ಯಾದಿಗಳನ್ನು ಸ್ಪಷ್ಟವಾಗಿ ಬರೆಯಲಾಗಿತ್ತು.
ಈ ಎಲ್ಲಾ ಪತ್ರಗಳನ್ನು ಪೊಲೀಸರೇ ಹೆಣೆದಿದ್ದಾರೆಂಬುದನ್ನು ಅದರಲ್ಲಿ ಬಳಸಿದ ಪದಗಳ ಶೈಲಿಯಿಂದ ಅರ್ಥವಾಗುತ್ತದೆ. ಮಾವೋವಾದಿಗಳು ಗೌಪ್ಯತೆಯನ್ನು ಕಾಯ್ದುಕೊಳ್ಳುವುದಕ್ಕೆ ಹೆಸರಾದವರು, ಅವರು ಮಾನವ ಕೊರಿಯರ್‌ಗಳ ಜಾಲವನ್ನು ಬಳಸಿಕೊಳ್ಳುತ್ತಾರೆ ಹಾಗೂ ಒಮ್ಮೆ ಒಂದು ಸಂದೇಶವನ್ನು ಓದಿದ ಬಳಿಕ ಅವರದನ್ನು ನಾಶಪಡಿಸುತ್ತಾರೆ. ಇಂತಹ ಸಂಘಟನೆಯು ಈ ಪ್ರಬಂಧದಂತಹ ಪತ್ರಗಳ ಮೂಲಕ ಇತರ ಪದಾಧಿಕಾರಿಗಳ ಜೊತೆ ಸಂವಹನ ನಡೆಸುವುದಿಲ್ಲ.
ಸಾರ್ವಜನಿಕ ಜಾಲತಾಣಗಳಲ್ಲಿ ಹಲವಾರು ಜನರು ಈ ಪತ್ರಗಳನ್ನು ವಿಶ್ಲೇಷಿಸಿದ್ದಾರೆ ಹಾಗೂ ಅವುಗಳ ನಕಲಿತನವನ್ನು ಸಾಬೀತುಪಡಿಸಿದ್ದಾರೆ. ಇಂತಹ ಸಂಘಟನೆಗಳ ಬಗ್ಗೆ ಅಧ್ಯಯನ ನಡೆಸುವ ‘ಇನ್‌ಸ್ಟಿಟ್ಯೂಟ್ ಆಫ್ ಕಾನ್‌ಫ್ಲಿಕ್ಟ್ ಮ್ಯಾನೇಜ್‌ಮೆಂಟ್’ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಅಜಯ್ ಸಹಾನಿಯಂತಹ ತಜ್ಞರು ಕೂಡಾ ಈ ಪತ್ರಗಳು ನಕಲಿಯೆಂದು ಸಾರಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ಅವರು ಪೊಲೀಸರು ದಾಖಲಿಸಿರುವ ಪ್ರಕರಣದ ಸಾಚಾತನವನ್ನು ಅಳವಾಗಿ ಪರಿಶೀಲಿಸಿದ ಏಕೈಕ ನ್ಯಾಯಾಧೀಶರಾಗಿದ್ದಾರೆ. ಅಲ್ಪಮತದ ತೀರ್ಪಿನಲ್ಲಿ ಅವರು ಈ ಪತ್ರಗಳಲ್ಲಿನ ಲೋಪವನ್ನು ಪ್ರಸ್ತಾಪಿಸಿದ್ದರು ಹಾಗೂ ರೋಮಿಲಾ ಥಾಪರ್ ಮತ್ತಿತರ ಸಾರ್ವಜನಿಕ ಕ್ಷೇತ್ರದ ಚಿಂತಕರು ನಿವೇದಿಸಿದಂತೆ ಇಡೀ ಪ್ರಕರಣದ ತನಿಖೆಯನ್ನು ಸಿಟ್ ನಡೆಸಬೇಕೆಂದು ಶಿಫಾರಸು ಮಾಡಿದ್ದರು. ಆದರೆ ಕಾನೂನಿನ ವಿಚಿತ್ರವಾದ ಪ್ರಕ್ರಿಯೆಯ ಇಂತಹ ವ್ಯತಿರಿಕ್ತವಾದ ಪುರಾವೆಗಳನ್ನು ಕದಲಿಸದು ಹಾಗೂ ತಥಾಕಥಿತ ಕಾನೂನು ಪ್ರಕ್ರಿಯೆಯ ಬಲಿವೇದಿಕೆಯಲ್ಲಿ ಅಮಾಯಕರ ಬದುಕನ್ನು ಬಲಿಗೊಡಲು ಸಿದ್ಧವಿರುವುದು. ವಾಸ್ತವದಲ್ಲಿ ಇದು ಶಿಕ್ಷೆಗಿಂತಲೂ ಅತಿ ಘೋರವಾದುದಾಗಿದೆ.
ಈ ಪತ್ರಗಳಲ್ಲಿ ರಾಹುಲ್‌ಗಾಂಧಿ, ಪ್ರಕಾಶ್ ಅಂಬೇಡ್ಕರ್, ದಿಗ್ವಿಜಯ್ ಇತ್ಯಾದಿಗಳ ಹೆಸರುಗಳಿದ್ದು, ಆ ಮೂಲಕ ಅವರು ಕೂಡಾ ಮಾವೋವಾದಿಗಳ ಸಂಚಿನಲ್ಲಿ ಸಹವರ್ತಿಗಳಾಗಿದ್ದರೆಂಬಂತೆ ಬಿಂಬಿಸಲಾಗಿದೆ. ಈ ನಾಯಕರಿಗೆ ಕಳಂಕ ಹಚ್ಚುವ ರಾಜಕೀಯ ದುರುದ್ದೇಶವಿರುವುದು ಇದರಿಂದ ಸ್ಪಷ್ಟವಾಗಿ ಬಯಲಾಗಿದೆ. ಈ ರಾಜಕೀಯ ನಾಯಕರಿಂದ ವಾಸ್ತವಾಂಶಗಳನ್ನು ಕಲೆಹಾಕಲು ಪೊಲೀಸರು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಹಾಗೂ ಈ ರಾಜಕೀಯ ವ್ಯಕ್ತಿಗಳು ಹಾಗೂ ನ್ಯಾಯಾಲಯಗಳು ಕೂಡಾ ಅದು ಯಾಕೆಂದು ಪ್ರಶ್ನಿಸಲಿಲ್ಲ?.
(ಮುಂದುವರಿಯುವುದು)