ಮಂಗಳೂರು ವಿವಿ : ಶೇಖ್ ಅಲಿ ರಸ್ತೆಗೊಂದು ಉತ್ತಮ ನಾಮಫಲಕ ಅಳವಡಿಸಿ
ಪ್ರೊ. ಶೇಖ್ ಅಲಿ ಕರ್ನಾಟಕದಲ್ಲಿ ಇತಿಹಾಸಕ್ಕೆ ಸಂಬಂಧಿಸಿದಂತೆ ದಂತಕತೆ. ಇತಿಹಾಸದ ಬಗ್ಗೆ ತಿಳಿದವರಿಗಷ್ಟೇ ಅವರ ಪಾಂಡಿತ್ಯದ ಅರಿವಿರಬಹುದು. ಮಂಗಳೂರು ವಿಶ್ವವಿದ್ಯಾನಿಲಯದ ಮೊದಲ ಉಪಕುಲಪತಿಗಳಾಗಿದ್ದ ಅವರೀಗ ಬದುಕಿನ ಶತಕದ ಸನಿಹದಲ್ಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬುನಾದಿಯನ್ನು ಗಟ್ಟಿಗೊಳಿಸಿದವರು ಇದೇ ಪ್ರೊ. ಶೇಖ್ ಅಲಿ ಸಾಹೇಬರು.
ವಿಶ್ವವಿದ್ಯಾನಿಲಯದ ಕ್ಯಾಂಪಸ್ ನ ಮುಖ್ಯ ಪ್ರವೇಶ ದ್ವಾರವಿರುವುದೇ ಶೇಖ್ ಅಲಿ ರಸ್ತೆಯಲ್ಲಾಗಿದೆ. ಸುಮಾರು 25 ವರ್ಷಗಳಿಂದ ನನಗೆ ಅದು ಚಿರಪರಿಚಿತ ರಸ್ತೆ. ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಿನಿಂದಲೂ ನಾನದನ್ನು ಶೇಖ್ ಅಲಿ ರೋಡ್ ಎಂದೇ ಹೇಳುತ್ತಿದ್ದೆ. ಆದರೆ ಈ ವರೆಗೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಬಾಯಲ್ಲಾಗಲೀ, ಸಿಬ್ಬಂದಿಗಳ ಬಾಯಲ್ಲಾಗಲೀ, ಉನ್ನತ ಮಟ್ಟದ ಪ್ರಾಧ್ಯಾಪಕರ ಬಾಯಲ್ಲಾಗಲೀ ಅದನ್ನು ಶೇಖ್ ಅಲಿ ರೋಡ್ ಎಂದಿದ್ದನ್ನು ನಾನು ಕೇಳಿಲ್ಲ. ಎಲ್ಲಾ ಬಿಡಿ ಕನಿಷ್ಠ ಇತಿಹಾಸ ವಿಭಾಗದವರ ಬಾಯಲ್ಲೋ, ಶೇಖ್ ಅಲಿಯವರ ವಿದ್ಯಾರ್ಥಿಗಳ ಬಾಯಲ್ಲೋ ನಾನಂತೂ ಶೇಖ್ ಅಲಿ ರಸ್ತೆ ಎಂಬ ಪದಗಳನ್ನು ಕೇಳಿಲ್ಲ. ಎಲ್ಲರೂ ಅದನ್ನು ಡಬಲ್ ರೋಡ್ ಎಂದೇ ಹೇಳುತ್ತಿರುತ್ತಾರೆ. ಎಲ್ಲಿಯವರೆಗೆಂದರೆ ಈ ಬರಹ ಬರೆಯುತ್ತಿರುವ ನಾನೇ ಕೆಲವರಿಗೆ ಲ್ಯಾಂಡ್ ಮಾರ್ಕ್ ಹೇಳುವಾಗ ಶೇಖ್ ಅಲಿ ರೋಡ್ ಎಂದರೆ ತಿಳಿಯಲಿಲ್ಲವೆಂದು ಡಬಲ್ ರೋಡ್ ಎಂದದ್ದೂ ಇದೆ.
ಆ ರಸ್ತೆಯನ್ನು ಶೇಖ್ ಅಲಿ ರಸ್ತೆಯೆಂಬ ಹೆಸರಿಟ್ಟ ಕಾರಣಕ್ಕೆ ಅವರು ಪ್ರಸಿದ್ಧರಲ್ಲ. ಅವರು ಭಾರತದ ಅತ್ಯಂತ ಶ್ರೇಷ್ಠ ಮತ್ತು ವಸ್ತುನಿಷ್ಠ ಇತಿಹಾಸಕಾರರೆಂಬ ಕಾರಣಕ್ಕೆ ಪ್ರಸಿದ್ಧರು.
ನಿಸ್ಸಂಶಯವಾಗಿಯೂ ಅವರು ಕನ್ನಡ ನಾಡಿನ ಅತ್ಯಂತ ಶ್ರೇಷ್ಠ ಇತಿಹಾಸಕಾರರು. ಅದಾಗ್ಯೂ ಅವರ ಹೆಸರಿರುವ ರಸ್ತೆಯನ್ನು ಯಾಕೆ ಜನರು ಡಬಲ್ ರೋಡ್ ಎನ್ನುತ್ತಾರೆ ? ಸಾಮಾನ್ಯ ಜನ ಹಾಗೆಂದರೆ ಅದೊಂದು ಸಂಗತಿಯಲ್ಲ. ಆದರೆ ಸದಾ ಅದೇ ಕ್ಯಾಂಪಸ್ ಒಳಗೇ ಅಡ್ಡಾಡುತ್ತಿರುವ, ಆ ರಸ್ತೆಯ ಮೂಲಕವೇ ದಿನನಿತ್ಯ ಸಾಗುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವೃಂದ ಮತ್ತು ಸಿಬ್ಬಂದಿ ವರ್ಗವೂ ಡಬಲ್ ರೋಡ್ ಎಂದೇ ಹೇಳುವುದು ವಿಷಾದನೀಯ. ಅಂತಹ ಮಹಾನ್ ಇತಿಹಾಸಕಾರರು ಈ ವಿಶ್ವವಿದ್ಯಾನಿಲಯದ ಪ್ರಥಮ ಉಪಕುಲಪತಿಯಾಗಿದ್ದರೆನ್ನುವುದು ಈ ವಿಶ್ವವಿದ್ಯಾನಿಲಯದ ಮಂದಿಗೆ ಹೆಮ್ಮೆಯ ವಿಷಯವಾಗಿರಬೇಕಿತ್ತು.
ಆ ರಸ್ತೆಯೂ ಸುಂದರವಾಗಿದೆ. ಮಾತ್ರವಲ್ಲ ಅದರ ಇಕ್ಕೆಲ ಮತ್ತು ರಸ್ತೆ ವಿಭಾಜಕಗಳು ಹಚ್ಚ ಹಸಿರಿನಿಂದ ಮತ್ತು ಬಣ್ಣ ಬಣ್ಣದ ಹೂವುಗಳಿಂದ ಕಣ್ಮನ ತಣಿಸುವಂತಿದೆ. ಅದೇ ಪರಿಸರದವನಾದ ನನಗೆ ಆ ರಸ್ತೆಯಲ್ಲಿ ಬರುವುದೆಂದರೆ ಸುತ್ತು ಬಳಸಿ ಒಂದರ್ಧ ಕಿಲೋ ಮೀಟರ್ ದೂರವೇ ಆಗುತ್ತದೆ. ಅದಾಗ್ಯೂ ನಾನು ಎರಡು ಕಾರಣಗಳಿಗಾಗಿ ಆಗಾಗ ಆ ರಸ್ತೆಯ ಮೂಲಕವೇ ನನ್ನ ವಾಹನದಲ್ಲಿ ಸಂಚರಿಸುತ್ತಿರುತ್ತೇನೆ. ಮೊದಲನೆಯದಾಗಿ ಶೇಖ್ ಅಲಿಯವರ ಮೇಲಿನ ಅಭಿಮಾನ, ಎರಡನೆಯದಾಗಿ ಆ ರಸ್ತೆ ಮತ್ತು ಪರಿಸರದ ಸೌಂದರ್ಯ.
ಅಲ್ಲಿ ಪ್ರತಿನಿತ್ಯ ಕನಿಷ್ಠ ನೂರು ಮಂದಿಯಾದರೂ ಫೋಟೊ, ಸೆಲ್ಫಿ ತೆಗೆಯುತ್ತಿರುತ್ತಾರೆ. ಅಲ್ಲಿ ತೆಗೆದ ಫೋಟೊ ನೋಡಿದರೆ ಇದೆಲ್ಲೋ ಸಿಂಗಾಪುರದಲ್ಲೋ, ಸ್ವಿಟ್ಝರ್ಲೆಂಡ್‌ನಲ್ಲೋ ತೆಗೆದ ಫೋಟೊ ಎನ್ನಬೇಕು. ಇಷ್ಟೆಲ್ಲಾ ಆಗಿಯೂ ಆ ರಸ್ತೆ ಯಾರ ಹೆಸರಲ್ಲಿ ನಿರ್ಮಿಸಲಾಗಿದೆಯೋ ಅವರ ಹೆಸರು ಮಾತ್ರ ಯಾರ ಬಾಯಲ್ಲೂ ಕೇಳಿ ಬರುತ್ತಿಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ.
ಮೊದಲನೆಯದಾಗಿ ಲಾಗಾಯ್ತಿನಿಂದಲೂ ಡಬಲ್ ರೋಡ್ ಎನ್ನುವುದು ವಾಡಿಕೆ. ಎರಡನೆಯದಾಗಿ ಎದ್ದು ಕಾಣುವಂತಹ ಸೂಕ್ತ ನಾಮಫಲಕವೂ ಇಲ್ಲ. ಅಲ್ಲೊಂದು ನಾಮಫಲಕವಿದೆ. ಆವರಣ ಗೋಡೆಯ ಒಂದು ಬದಿಯಲ್ಲಿ ಇಂಗ್ಲಿಷ್ ನಲ್ಲೂ ಇನ್ನೊಂದು ಬದಿಯಲ್ಲಿ ಕನ್ನಡದಲ್ಲೂ ಇದೆ. ಆದರೆ ಅದು 2×1 ಅಳತೆಯದ್ದು. ಅದು ಎದ್ದು ಕಾಣುವುದೂ ಇಲ್ಲ.
ಆದುದರಿಂದ ವಿಶ್ವವಿದ್ಯಾನಿಲಯದ ಮುಖ್ಯಸ್ಥರುಗಳಲ್ಲಿ ಇತಿಹಾಸಾಸಕ್ತನಾದ ನನ್ನದೊಂದು ವಿನೀತ ವಿನಂತಿಯೇನೆಂದರೆ "ದಯಮಾಡಿ ಪ್ರೊ. ಶೇಖ್ ಅಲಿ ರಸ್ತೆ ಎಂಬ ನಾಮಫಲಕವನ್ನು ದೊಡ್ಡದಾಗಿ ಹಾಕಿಸಿ ಅವರ ಹೆಸರನ್ನು ಅಭಿಮಾನಪೂರ್ವಕವಾಗಿ ಜನ ಹೇಳುವಂತೆ ಮಾಡಬೇಕು.