ಖಾಸಗಿ ಆಸ್ಪತ್ರೆಗಳಿಗೆ ಬೆಂಬಲ ಸಿಕ್ಕರೆ ಆರೋಗ್ಯ ಸೇವೆ ಉತ್ತಮವಾಗಬಹುದೆ?
ಭಾರತದಲ್ಲಿ ಖಾಸಗಿ ಕ್ಷೇತ್ರಕ್ಕೆ ಉಡುಗೊರೆ ನೀಡುವುದರಿಂದ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬಹುದು ಎಂಬ ಕಲ್ಪನೆ ಹುಸಿಯಾಗಿದೆ. ಉದಾಹರಣೆಗೆ, ಮಹಾರಾಷ್ಟ್ರದ ಹಲವು ಚಾರಿಟೇಬಲ್ ಆಸ್ಪತ್ರೆಗಳು ವೈದ್ಯಕೀಯ ಸಾಧನಗಳು, ಜಮೀನು, ಇತರ ಬಿಲ್‌ಗಳು ಮತ್ತು ಆದಾಯ ತೆರಿಗೆ ಮೇಲೆ ಸಾಕಷ್ಟು ವಿನಾಯಿತಿಯನ್ನು ಪಡೆದುಕೊಳ್ಳುತ್ತಿವೆ. ಆದರೆ ಇವುಗಳನ್ನು ಪಡೆಯಲು ಕನಿಷ್ಠ ಶೇ.20 ಹಾಸಿಗೆಗಳನ್ನು ಬಡವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಬೇಕು ಎಂಬ ನಿಬಂಧನೆಯನ್ನು ಈ ಆಸ್ಪತ್ರೆಗಳು ಪಾಲಿಸುತ್ತಿಲ್ಲ.
ಮೆಟ್ರೊಪಾಲಿಟನ್ ಹೊರತಾದ ನಗರಗಳಲ್ಲಿ ನಿರ್ಮಿಸಲಾಗುವ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬಯಸುವ ಖಾಸಗಿ ಆಸ್ಪತ್ರೆಗಳಿಗೆ ಏನೆಲ್ಲ ಉಡುಗೊರೆಗಳನ್ನು ನೀಡಲಾಗುವುದು ಎಂಬ ಮಾರ್ಗಸೂಚಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನವರಿ 8ರಂದು ಬಿಡುಗಡೆ ಮಾಡಿದೆ.
ಲೀಸ್ ಅಥವಾ ಬಿಡ್ಡಿಂಗ್ ಮೂಲಕ ಜಮೀನು ಪಡೆಯುವುದನ್ನು ಸುಲಭಗೊಳಿಸುವುದು, ನಿಗದಿತ ಸಮಯದೊಳಗೆ ಎಲ್ಲ ಅನುಮತಿಗಳು ಸಿಗುವಂತೆ ನೋಡಿಕೊಳ್ಳುವುದು ಮತ್ತು ಒಟ್ಟಾರೆ ಯೋಜನೆಯ ವೆಚ್ಚದ ಶೇ.40ರಷ್ಟು ಕಾರ್ಯಸಾಧ್ಯತೆಯ ಅಂತರದ ನಿಧಿಯನ್ನು ಒದಗಿಸುವುದು ಈ ಉಡುಗೊರೆಗಳಲ್ಲಿ ಪ್ರಮುಖವಾಗಿವೆ.
ಕಾರ್ಯಸಾಧ್ಯತೆ ಅಂತರ ನಿಧಿಯನ್ನು 2004ರಲ್ಲಿ ಸರಕಾರ ಆರಂಭಿಸಿದ್ದು ಇದರಲ್ಲಿ ಮೂಲಭೂತ ಸೌಕರ್ಯ ಯೋಜನೆಗಳಿಗೆ ಒಂದು ಬಾರಿಯ ಅನುದಾನವನ್ನು ನೀಡಲಾಗುತ್ತದೆ. ಈ ಯೋಜನೆಗಳು ಆರ್ಥಿಕವಾಗಿ ಸಮರ್ಥನೀಯವಾಗಿದ್ದರೂ ಲಾಭದ ವಿಷಯದಲ್ಲಿ ಕಾರ್ಯಸಾಧುವಾಗಿರುವುದು ಅನುಮಾನವಾಗಿರುತ್ತದೆ.
‘‘ಈ ರೀತಿಯ ಉಡುಗೊರೆಗಳನ್ನು ನೀಡುವ ಹಿಂದಿನ ಉದ್ದೇಶ ಆಯುಷ್ಮಾನ್ ಭಾರತ ಯೋಜನೆಯಡಿ ಘೋಷಿಸಲಾಗಿರುವ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ)ಯಡಿ ಆಸ್ಪತ್ರೆಗಳ ಒದಗುವಿಕೆಯನ್ನು ಹೆಚ್ಚುಗೊಳಿಸುವುದೇ ಆಗಿದೆ’’ ಎಂದು ಆರೋಗ್ಯ ಸಚಿವಾಲಯದ ಜಂಟಿ ನಿರ್ದೇಶಕ ಅಲೋಕ್ ಸಕ್ಸೇನಾ ತಿಳಿಸುತ್ತಾರೆ.
‘‘ಅರ್ಹ ಕುಟುಂಬಗಳಿಗೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವಾರ್ಷಿಕ ಐದು ಲಕ್ಷ ರೂ. ವಿಮೆಯನ್ನು ಒದಗಿಸುವ ಪಿಎಂಜೆಎವೈಯನ್ನು 2018ರ ಸೆಪ್ಟಂಬರ್‌ನಲ್ಲಿ ಸರಕಾರ ಆರಂಭಿಸಿದಾಗ ಮೊದಲು ಎದ್ದ ಪ್ರಶ್ನೆ ಆಸ್ಪತ್ರೆಗಳೆಲ್ಲಿ? ಎನ್ನುವುದು’’ ಎಂದು ಹೇಳುತ್ತಾರೆ ಸಕ್ಸೇನಾ.
‘‘ನಗರಗಳಲ್ಲಿ ಸೇವೆ ಮಾಡಲು ಬಯಸುವ ಕೆಲವು ವೈದ್ಯರಿಗೆ ಆಸ್ಪತ್ರೆಗಳನ್ನು ನಿರ್ಮಿಸಿ ಅನುಭವವಿಲ್ಲ. ಅಂಥವರಿಗೆ ಇದು ನೆರವಾಗಬಹುದು’’ ಎನ್ನುತ್ತಾರೆ ಸಕ್ಸೇನಾ.
ಖಾಸಗಿ ಆರೋಗ್ಯಸೇವೆಯನ್ನು ಒದಗಿಸುವ ಸಂಸ್ಥೆಗಳು ಈ ಹೊಸ ಮಾರ್ಗಸೂಚಿಗಳನ್ನು ಸ್ವಾಗತಿಸಿವೆ. ಅಸೋಸಿಯೇಶನ್ ಹೆಲ್ತ್‌ಕೇರ್ ಪ್ರೊವೈಡರ್ಸ್‌ನ ಕಾರ್ಯವಾಹಕ ನಿರ್ದೇಶಕ ಡಾ. ಅಲೆಕ್ಸಾಂಡರ್ ಥಾಮಸ್ ಹೇಳುವಂತೆ, ಈ ಯೋಜನೆಯು ಎರಡನೇ ಮತ್ತು ಮೂರನೇ ದರ್ಜೆ ನಗರಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲು ಬಹಳಷ್ಟು ಸಹಕಾರಿಯಾಗಲಿದೆ.
ಫೆಬ್ರವರಿಯಲ್ಲಿ ‘ಆಯುಷ್ಮಾನ್ ಭಾರತ’ಕ್ಕೆ ಚಾಲನೆ ದೊರೆತ ನಂತರ ಆರೋಗ್ಯ ಸಚಿವಾಲಯ ಮತ್ತು ನೀತಿ ಆಯೋಗ ಖಾಸಗಿ ಆರೋಗ್ಯಸೇವೆ ಪೂರೈಕೆದಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ.
ಆದರೆ ಸಾರ್ವಜನಿಕ ಆರೋಗ್ಯ ಸಂಶೋಧಕರು ಮತ್ತು ಹೋರಾಟಗಾರರು ಸರಕಾರದ ಈ ಕ್ರಮವನ್ನು ಟೀಕಿಸಿದ್ದಾರೆ. ಪಿಎಂಜೆಎವೈ ಮೂಲಕ ಸಾರ್ವಜನಿಕ ಸಂಪನ್ಮೂಲಗಳನ್ನು ಸರಕಾರ ಖಾಸಗಿ ಕ್ಷೇತ್ರಕ್ಕೆ ವರ್ಗಾಯಿಸುತ್ತದೆ ಎನ್ನುವುದನ್ನು ಈ ಮಾರ್ಗಸೂಚಿ ಸಾಬೀತುಪಡಿಸಿದೆ ಎಂದು ಅವರು ದೂರಿದ್ದಾರೆ.
ಇದರ ಬದಲಾಗಿ ಸರಕಾರ ಸಾರ್ವಜನಿಕ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವ ಮತ್ತು ರೋಗಗಳನ್ನು ನಿಯಂತ್ರಿಸುವುದರತ್ತ ಗಮನಹರಿಸಬೇಕು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
‘‘ಪಿಎಂಜೆಎವೈ ಖಾಸಗಿ ಕ್ಷೇತ್ರವನ್ನು ಪೋಷಿಸಲು ಒಂದು ಸಾಧನವಷ್ಟೇ. ಅಷ್ಟಕ್ಕೂ ಸರಕಾರ ಹಿಂದೆ ಯಾಕೆ ಬಾಗುತ್ತಿದೆ? ಅವರಿಗೆ ಆರೋಗ್ಯದಲ್ಲಿ ಖಾಸಗಿ ಕ್ಷೇತ್ರದ ಭಾಗೀದಾರಿಕೆ ಬೇಕೇ ಬೇಕು ಎಂದಾದಲ್ಲಿ ಮಾರುಕಟ್ಟೆಗೆ ಅದನ್ನು ಬಿಟ್ಟುಬಿಡಲಿ’’ ಎಂದು ಹೇಳುತ್ತಾರೆ ಸ್ವತಂತ್ರ ಸಂಶೋಧಕ ಮತ್ತು ಆರೋಗ್ಯ ಕಾರ್ಯಕರ್ತ ರವಿ ದುಗ್ಗಲ್.
ಭಾರತದಲ್ಲಿ ಸದ್ಯ 6.34 ಲಕ್ಷ ಆಸ್ಪತ್ರೆ ಹಾಸಿಗೆಗಳಿವೆ. ಪಿಎಂಜೆಎವೈ ಅಡಿ ಭಾರತದ ಜನಸಂಖ್ಯೆಯ ಶೇ. 40ರಷ್ಟು ಬಡವರಿಗೆ ಅಥವಾ 10 ಕೋಟಿ ಜನರಿಗೆ ಒದಗಿಸಲು ಮುಂದಿನ ಹತ್ತು ವರ್ಷಗಳಲ್ಲಿ ಈ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವಾಲಯ ಅಂದಾಜಿಸಿದೆ.
ಆದರೆ ಖಾಸಗಿ ಆಸ್ಪತ್ರೆಗಳಿಗೆ ನೀಡಲು ಕಾರ್ಯಸಾಧು ಅಂತರ ನಿಧಿಗೆ ಹಣ ಎಲ್ಲಿಂದ ಬರುತ್ತದೆ ಎನ್ನುವುದು ಎಲ್ಲೂ ಸ್ಪಷ್ಟವಾಗಿಲ್ಲ. ಪಿಎಂಜೆಎವೈಯ ಅನುಷ್ಠಾನಕ್ಕೆ ರಾಜ್ಯ ಸರಕಾರಗಳು ಜವಾಬ್ದಾರರಾಗಿವೆ. ಈ ಯೋಜನೆಯಡಿ ಒಟ್ಟು ಮೊತ್ತದಲ್ಲಿ ಕೇಂದ್ರ ಶೇ.60 ಪಾವತಿಸಿದರೆ ರಾಜ್ಯ ಸರಕಾರಗಳು ಶೇ.40 ಪಾವತಿಸಲಿವೆ. ಆದರೆ ತಾವು ಒಟ್ಟಾರೆ ವೆಚ್ಚದ ಶೇ.40 ಪಾವತಿಸಿದರೂ ಎಲ್ಲ ಪ್ರಶಂಸೆಯನ್ನು ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿದೆ ಎಂದು ರಾಜ್ಯ ಸರಕಾರಗಳ ಕೋಪಕ್ಕೆ ಕಾರಣವಾಗಿದೆ.
ಮೃದು ಸಾಲ ಮತ್ತು ಕಾರ್ಯಸಾಧು ಅಂತರ ನಿಧಿ ಪಡೆಯಲು ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳಿಗೂ ಕೈಗಾರಿಕೆ ಮಾನ್ಯತೆಯನ್ನು ನೀಡಬೇಕು ಎಂದು ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಮಾರ್ಗಸೂಚಿಯು ಮೂರು ಮಾದರಿಯ ಆಸ್ಪತ್ರೆಗಳಿಗೆ ಅನ್ವಯಿಸುತ್ತದೆ: 30ರಿಂದ 50 ಹಾಸಿಗೆಗಳ ವೈದ್ಯರ ಮಾಲಕತ್ವದ ಆಸ್ಪತ್ರೆಗಳು, ವೈದ್ಯರು-ಪ್ರಬಂಧಕರು ಜೊತೆಗಾರಿಕೆಯ 100 ಹಾಸಿಗೆಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು ಮತ್ತು 100ಕ್ಕೂ ಅಧಿಕ ಹಾಸಿಗೆಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು.
ಇದಕ್ಕೂ ಮೊದಲು 2017ರವರೆಗೆ ಆರೋಗ್ಯಸೇವೆಗೂ ಕೈಗಾರಿಕೆಯ ಮಾನ್ಯತೆ ನೀಡಲಾಗಿತ್ತು. ಆದರೆ ಯಾರೂ ನಿಧಿಯನ್ನು ಪಡೆದುಕೊಳ್ಳದ ಕಾರಣ ಈ ಮಾನ್ಯತೆಯನ್ನು ಹಿಂಪಡೆಯಲಾಗಿತ್ತು. ಈಗ ರಾಜ್ಯ ಸರಕಾರಗಳು ಆರೋಗ್ಯ ಸಚಿವಾಲಯದ ಮಾರ್ಗಸೂಚಿಯೊಂದಿಗೆ ಆರ್ಥಿಕ ವ್ಯವಹಾರಗಳ ಇಲಾಖೆಸೆಗೆ ತೆರಳಿ ಈ ಮಾನ್ಯತೆಯನ್ನು ಮರುಸ್ಥಾಪಿಸಲು ಆಗ್ರಹಿಸಬಹುದಾಗಿದೆ ಎಂದು ಹೇಳುತ್ತಾರೆ ಸಕ್ಸೇನಾ.
ಮೋದಿ ಸರಕಾರ ನಿರಂತರವಾಗಿ ಆರೋಗ್ಯಸೇವೆಯ ಖಾಸಗೀಕರಣಕ್ಕೆ ಒತ್ತು ನೀಡುತ್ತಲೇ ಬಂದಿದೆ. ಜಿಲ್ಲಾಸ್ಪತ್ರೆಗಳ ಕಟ್ಟಡಗಳ ಭಾಗಗಳನ್ನು 30 ವರ್ಷ ಲೀಸ್‌ಗೆ ಪಡೆಯಲು ಬಿಡ್‌ಗೆ ಅವಕಾಶ ಮತ್ತು 50-100 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಜಮೀನು ಒದಗಿಸುವಿಕೆ ಇತ್ಯಾದಿಗಳ ಮೂಲಕ ದೀರ್ಘಕಾಲೀನ ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ಖಾಸಗಿ ಆಸ್ಪತ್ರೆಗಳ ಪಾತ್ರವನ್ನು ಹೆಚ್ಚಿಸಲು ನೀತಿ ಆಯೋಗ ಮತ್ತು ಆರೋಗ್ಯ ಸಚಿವಾಲಯ 2017ರಲ್ಲಿ ಮಾದರಿಯೊಂದರ ಪ್ರಸ್ತಾವನೆಯನ್ನು ಇಟ್ಟಿತ್ತು. ‘ಆಯುಷ್ಮಾನ್ ಭಾರತ’ದ ಘೋಷಣೆಯ ನಂತರ ಮಾರ್ಚ್‌ನಲ್ಲಿ ನೀತಿ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಇದರಿಂದ ಆರೋಗ್ಯಸೇವೆ ಮಾರುಕಟ್ಟೆ ವಿಸ್ತಾರಗೊಳ್ಳಲಿದೆ ಎಂದು ತಿಳಿಸಿದ್ದರು.
ಆದರೆ ಭಾರತದಲ್ಲಿ ಖಾಸಗಿ ಕ್ಷೇತ್ರಕ್ಕೆ ಉಡುಗೊರೆ ನೀಡುವುದರಿಂದ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬಹುದು ಎಂಬ ಕಲ್ಪನೆ ಹುಸಿಯಾಗಿದೆ. ಉದಾಹರಣೆಗೆ, ಮಹಾರಾಷ್ಟ್ರದ ಹಲವು ಚಾರಿಟೇಬಲ್ ಆಸ್ಪತ್ರೆಗಳು ವೈದ್ಯಕೀಯ ಸಾಧನಗಳು, ಜಮೀನು, ಇತರ ಬಿಲ್‌ಗಳು ಮತ್ತು ಆದಾಯ ತೆರಿಗೆ ಮೇಲೆ ಸಾಕಷ್ಟು ವಿನಾಯಿತಿಯನ್ನು ಪಡೆದುಕೊಳ್ಳುತ್ತಿವೆ. ಆದರೆ ಇವುಗಳನ್ನು ಪಡೆಯಲು ಕನಿಷ್ಠ ಶೇ.20 ಹಾಸಿಗೆಗಳನ್ನು ಬಡವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಬೇಕು ಎಂಬ ನಿಬಂಧನೆಯನ್ನು ಈ ಆಸ್ಪತ್ರೆಗಳು ಪಾಲಿಸುತ್ತಿಲ್ಲ.
ಇನ್ನೊಂದು ಉದಾಹರಣೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆ. ಈ ಆಸ್ಪತ್ರೆಗೆ 1994ರಲ್ಲಿ ಮೂವತ್ತು ವರ್ಷಗಳ ಕಾಲಕ್ಕೆ ಮಾಸಿಕ ಒಂದು ರೂ. ಬಾಡಿಗೆಗೆ ಜಮೀನು ಲೀಸ್‌ಗೆ ನೀಡಲಾಗಿತ್ತು. ಆಗ ಮಾಡಿಕೊಂಡ ನಿಬಂಧನೆಯೆಂದರೆ ಈ ಆಸ್ಪತ್ರೆಯಲ್ಲಿ ಶೇ.40 ಹೊರರೋಗಿ ಚಿಕಿತ್ಸೆ ಮತ್ತು ಶೇ.33 ಒಳರೋಗಿ ಹಾಸಿಗೆಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗಾಗಿ ಮೀಸಲಿಡಬೇಕೆಂಬುದು. ಆದರೆ ಈ ನಿಬಂಧನೆಯನ್ನು ಆಸ್ಪತ್ರೆ ಸಂಪೂರ್ಣವಾಗಿ ನಿರ್ಲಕ್ಷಿಸಿದ ಪರಿಣಾಮ 2009ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ದಂಡವನ್ನು ಹೇರಿತ್ತು ಮತ್ತು ಬಡರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ನಿಬಂಧನೆಯನ್ನು ಪಾಲಿಸುವಂತೆ ಸರ್ವೋಚ್ಚ ನ್ಯಾಯಾಲಯ 2010ರಲ್ಲಿ ಸೂಚಿಸಿತ್ತು.
ದೇಶಾದ್ಯಂತ ಇಂಥ ಅನೇಕ ಉದಾಹರಣೆಗಳು ಸಿಗುವುದರಿಂದ ಸಾರ್ವಜನಿಕ ಆರೋಗ್ಯ ತಜ್ಞರು ಇಂಥ ಯಾವುದೇ ಯೋಜನೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.
ಕೃಪೆ: scroll.in