varthabharthi


ಭೀಮ ಚಿಂತನೆ

ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕು

ವಾರ್ತಾ ಭಾರತಿ : 25 Jan, 2019

ಜುಲೈ 1953ರಲ್ಲಿ ಮರಾಠಾವಾಡಾ ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫಡರೇಶನ್ನಿನ ವತಿಯಿಂದ ಮರಾಠಾವಾಡಾ ಭಾಗದಲ್ಲಿನ ಕಾರ್ಯಕರ್ತರ ಸಮಾವೇಶವಾಯಿತು. ಅಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಾರ್ಗದರ್ಶನ ಭಾಷಣವನ್ನು ಮಾಡಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಹೇಳಿದರು:
  ಕಾರ್ಯಕರ್ತರ ಮನಸ್ಸಿನಲ್ಲಿ ಈಗ ಮೂಡಿರುವ ಭಾವನೆಯು ಹೀಗಿದೆ, ಚುನಾವಣೆಯೇ ರಾಜಕಾರಣ. ಚುನಾವಣೆಯಲ್ಲಿ ಆರಿಸಿ ಬರದ ಹೊರತು ರಾಜಕಾರಣಕ್ಕೆ ಯಾವ ಅರ್ಥವೂ ಇರುವುದಿಲ್ಲ ಎಂಬ ಭಾವನೆ ಅವರಲ್ಲಿ ಕಂಡುಬರುತ್ತದೆ. ಎಂತಲೇ ಚುನಾವಣೆಯ ಹೊತ್ತಿನಲ್ಲಿ ಟಿಕೆಟ್ ಪಡೆಯುವುದಕ್ಕಾಗಿ ಎಲ್ಲರ ಚಡಪಡಿಕೆ ನಡೆದಿದೆ. ಇನ್ನು ಚುನಾವಣೆ ಮುಗಿಯಿತು ಎಂದರೆ ಆಯಿತು, ನಾವೆಲ್ಲರೂ ಸ್ವಸ್ಥವಾಗಿ ಸುಮ್ಮನೆ ಕುಳಿತುಕೊಂಡು ಬಿಡುತ್ತೇವೆ. ಆದರೆ ಸಾಮಾಜಿಕ ಜೀವನದಲ್ಲಿ ರಾಜಕಾರಣವು ಒಂದು ಅಲ್ಪ ಕಾರಣವಾಗಿದೆ. ರಾಜಕಾರಣವೆಂದರೆ ಎಲ್ಲವೂ ಅಲ್ಲ. ನಿಜವಾಗಿಯೂ ನೋಡಿದರೆ, ಪಾಲಿಟಿಕ್ಸ್, ರಾಜಕಾರಣ ಎಂಬುದು ಏನಿದೆಯೋ ಅದು ಶೇಷಾನ್ನವಾಗಿದೆ. ಸಮಾಜದಲ್ಲಿ ಏನೆಲ್ಲಾ ಉನ್ನತಿಯಾಗುತ್ತಿದೆಯೋ ಅದೆಲ್ಲ ಕೇವಲ ರಾಜಕಾರಣದಿಂದಲೇ ಆಗುತ್ತಿಲ್ಲ. ಸಮಾಜದ ಉನ್ನತಿಯಲ್ಲಿ ಅನೇಕ ಕಾರಣಗಳಿವೆ. ಸಮಾಜಿಕ, ಆರ್ಥಿಕಗಳಂತಹ ವಿಷಯಗಳೇನು ಕಡಿಮೆ ಮಹತ್ವದ ವಿಷಯಗಳಲ್ಲ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಎಲ್ಲಾ ಅಂಶಗಳ ಕಡೆಗೆ ಸಮಗ್ರವಾಗಿ ಕಾರ್ಯಕರ್ತರು ಗಮನ ಹರಿಸುವುದು ಅತ್ಯಗತ್ಯ.

ರಾಜಕಾರಣವು ಒಂದು ಬಹಳ ಮಹತ್ವದ ವಿಷಯವಾಗಿದೆ ಎಂಬ ಭಾವನೆಯು ಮೂಡಿರುವುದರಿಂದ ಚುನಾವಣೆಯ ಹೊತ್ತಿನಲ್ಲಿ ಟಿಕೇಟನ್ನು ಪಡೆಯುವುದಕ್ಕಾಗಿ ಚಡಪಡಿಸುತ್ತೀರಿ. ಒಂದೊಮ್ಮೆ ಟಿಕೇಟು ಸಿಗದೆ ಹೋದರೆ ಸಮಾಜದಲ್ಲಿ ಒಡಕನ್ನು ಉಂಟುಮಾಡುವುದು, ಚುನಾವಣೆಯಲ್ಲಿ ಸೋತಂತೆ ನಿರಾಶರಾಗಿ ಸ್ವಸ್ಥತೆಯಿಂದ ಸುಮ್ಮನೆ ಮನೆಯಲ್ಲಿ ಮಲಗಿಕೊಳ್ಳುವುದು ನಡೆಯುತ್ತಿದೆ. ಹಾಗೊಮ್ಮೆ ಚುನಾವಣೆಯಲ್ಲಿ ಗೆದ್ದು ಬಂದರೂ ಸಹ ಅಸೆಂಬ್ಲಿಯಲ್ಲಿ ಹೋಗಿ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವುದು ಇಷ್ಟೇ ಕಾರ್ಯವಾಗಿದೆ.

ಈ ಹೈದರಾಬಾದಿನ ವಿಭಾಗದಲ್ಲಿ ಇಂದು ಹತ್ತಿರ ಹತ್ತಿರ ಎರಡು ವರ್ಷಗಳಿಂದ ಅಸೆಂಬ್ಲಿಯ ಕಾರ್ಯ ಕಲಾಪಗಳು ನಡೆಯುತ್ತಿವೆ. ಈ ವಿಭಾಗದಲ್ಲಿ ಮೀಸಲು ಕ್ಷೇತ್ರಗಳಿಂದ ಒಟ್ಟಾರೆ 31 ಸದಸ್ಯರು ಅಸ್ಪಶ್ಯ ಸಮಾಜದ ವತಿಯಿಂದ ಗೆದ್ದು ಬಂದಿದ್ದಾರೆ. ಆದರೆ ಈ ಎರಡು ವರ್ಷಗಳಲ್ಲಿ ಅವರು ಅಲ್ಲಿ ಹೋಗಿ ಮಾಡಿರುವುದಾದರೂ ಏನು? ಅಸೆಂಬ್ಲಿಯಲ್ಲಿ ಒಟ್ಟಾರೆ ಮೂರು ಬಗೆಯ ಕೆಲಸಗಳನ್ನು ಮಾಡಬೇಕಾಗಿರುತ್ತದೆ. ಅಸೆಂಬ್ಲಿಯಲ್ಲಿ ಒಂದು ಠರಾವು ಮಂಡಿಸುವುದು, ಎರಡು ಬಿಲ್ಲು ಮಂಡಿಸುವುದು ಮತ್ತು ಮೂರು ಬಜೆಟ್ಟಿನ ಅಧ್ಯಯನ ಮಾಡಿ ಅದರ ಮೇಲೆ ಭಾಷಣ ಮಾಡುವುದು. ಈ ಮೂರು ವಿಚಾರಗಳಲ್ಲಿ ಒಂದನ್ನಾದರೂ ಈ 31 ಜನರ ಪೈಕಿ ಒಬ್ಬರಾದರೂ ಮಾಡಿದ್ದಾರೆಯೇ? ನನ್ನ ನಿದರ್ಶನಕ್ಕಂತೂ ಇವುಗಳಲ್ಲಿ ಒಂದಾದರೂ ಬಂದಿರುವುದಿಲ್ಲ. ಬಹುಶಃ ವರ್ತಮಾನ ಪತ್ರಿಕೆಯಲ್ಲಿ ಈ ವೃತ್ತಾಂತಗಳಾವುವೂ ಬರದೆ ಇರುವುದರಿಂದ ನನ್ನ ಗಮನಕ್ಕೆ ಯಾವುದೇ ಮಾಹಿತಿಯೂ ಬರದೆ ಹೋಗಿರಬಹುದು. ಹೀಗೆ ಹೇಳುತ್ತಿರುವ ಉದ್ದೇಶವಿಷ್ಟೇ, ಅಸೆಂಬ್ಲಿಗೆ ಆರಿಸಿ ಹೋದ ಮೇಲೆ ನಿಧಾನವಾಗಿಯಾದರೂ ನಮ್ಮ ಸದಸ್ಯರು ಈ ವಿಚಾರಗಳನ್ನು ಮಾಡಬೇಕು. ರಾಜಕಾರಣವೇ ಕಾರ್ಯಕರ್ತರ ಮುಂದೆ ಇರುವ ಮುಖ್ಯ ಉದ್ದೇಶವಾಗಿದ್ದರೆ ಅವರು ಆ ಕಾರ್ಯವನ್ನಾದರೂ ಸರಿಯಾದ ರೀತಿಯಲ್ಲಿ ಮಾಡಿದ್ದಾರೆಯೇ? ನನಗೆ ಇದೂ ಕೂಡಾ ಕಾಣಿಸುತ್ತಿಲ್ಲ.

ಈ 31 ಜನರು ಒಂದು ಉದ್ದೇಶದಿಂದ, ಒಂದು ನಿಶ್ಚಯದಿಂದ, ಒಂದುಗೂಡಿ ನಡೆಯಲು ನಿರ್ಧರಿಸಬೇಕು. ಹಾಗಾದಲ್ಲಿ ನನಗೆ ನಂಬಿಕೆ ಇದೆ, ಕಾಂಗ್ರೆಸ್ ಸರಕಾರವು ಮಾತ್ರವಲ್ಲ, ಕಾಂಗ್ರೆಸ್ ಮತ್ತು ಇತರ ಪಕ್ಷಗಳವರೂ ನಮ್ಮ ಜನರ ಬಗೆಗೆ ಭಯ ಪಟ್ಟುಕೊಳ್ಳದೆ ಇರಲಾರರು. ಯಾರು ಈ ಮೀಸಲು ಸ್ಥಾನಗಳನ್ನು ಪಡೆದಿದ್ದಾರೆಯೋ ಅವರು ಅಸ್ಪಶ್ಯ ಸಮಾಜದ ಹಿತಸುಧಾರಣೆಗಾಗಿಯೇ ಪಡೆದಿರುವುದು. ಯಾವ ಜನರು ತಮಗಾಗಿ ಅವರನ್ನು ಅಲ್ಲಿಗೆ ಕಳುಹಿಸಿದ್ದಾರೆಯೋ, ಯಾರ ಮೇಲೆ ನಮ್ಮ ವಿಶ್ವಾಸವಿದೆಯೋ ಅಂಥ ಚುನಾಯಿತ ಮನುಷ್ಯರು ಅಸ್ಪಶ್ಯ ಸಮಾಜದ ಹಿತಕ್ಕಾಗಿ ಹೋರಾಟ ಮಾಡಬಾರದೇ? ನಾನು ಯಾವ ವಿಚಾರವಾಗಿ ಗಾಂಧೀಜಿಯವರೊಂದಿಗೆ ವಿರೋಧಹೊಂದಿದ್ದೆನೋ ಅಥವಾ ದೇಶದ ಜನರು ಮತ್ತು ಕಾಂಗ್ರೆಸಿನ ವಿರೋಧವನ್ನು ನಾನು ಸಹಿಸಿಕೊಂಡು ಬಂದಿದ್ದೇನೆಯೋ ಅದರ ಕಾರಣವು ಒಂದೇ. ಅಸ್ಪಶ್ಯ ಸಮಾಜದ ಹಿತಕ್ಕಾಗಿ ಆ ಜನರು ಏನನ್ನೂ ಮಾಡಲಾರರು ಎಂಬುದು. ಸರಕಾರ ಅಥವಾ ಈ ದೇಶದಲ್ಲಿನ ಜನರು ನಮ್ಮ ಅಹವಾಲನ್ನು ಕೇಳಿ, ನಮ್ಮ ಬೇಡಿಕೆಗಳನ್ನು ಮಾನ್ಯ ಮಾಡಿದರೆ ಆಗ ವಿರೋಧ ಮತ್ತು ಹೋರಾಟಕ್ಕೆ ಯಾವ ಕಾರಣಗಳೂ ಇರುವುದಿಲ್ಲ. ಆದರೆ ಅದು ಸಾಧ್ಯವಾಗದ ಸ್ಥಿತಿ, ಹಾಗಾಗಿಯೇ ನಾವು ಹೋರಾಟ ಮಾಡಬೇಕಾಗಿದೆ.

ರಾಜಕಾರಣವನ್ನು ಯಾರೇ ಮಾಡುವುದಿದ್ದರೂ ಅವರು ರಾಜಕಾರಣವನ್ನು ಚೆನ್ನಾಗಿ ತಿಳಿದುಕೊಂಡಿರಬೇಕು. ಅಧ್ಯಯನವಿಲ್ಲದೆಯೇ ಜಗತ್ತಿನಲ್ಲಿ ಯಾರಿಗಾದರೂ ಸರಿ ಏನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ನಮ್ಮ ಸಮಾಜದಲ್ಲಿನ ಪ್ರತಿಯೊಬ್ಬ ಕಾರ್ಯಕರ್ತನೂ ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕಗಳಂತಹ ಎಲ್ಲಾ ಪ್ರಶ್ನೆಗಳನ್ನು ಬಹಳ ಸೂಕ್ಷ್ಮವಾಗಿ ಅಭ್ಯಾಸ ಮಾಡಬೇಕು. ಯಾರಿಗೆ ನೇತಾರರಾಗಬೇಕು ಎಂದಿದೆಯೋ ಅಂಥವರು ನೇತಾರನ ಕರ್ತವ್ಯ ನಿಷ್ಠೆ, ಆತನ ಜವಾಬ್ದಾರಿಗಳು ಯಾವುವು ಎಂಬುದನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಕಾರಣ ನಮ್ಮ ಸಮಾಜದಲ್ಲಿ ನೇತಾರರ ಮೇಲೆ ಬಹಳ ದೊಡ್ಡ ಜವಾಬ್ದಾರಿಗಳು ಇರುತ್ತವೆ. ಇತರ ಸಮಾಜಗಳ ನೇತಾರರ ಸ್ಥಿತಿಯ ಹಾಗೆ ನಮ್ಮ ಸಮಾಜದ ನೇತಾರರ ಸ್ಥಿತಿಯು ಇಲ್ಲ. ಇತರ ನೇತಾರರದ್ದಾದರೂ ಏನು? ಸಭೆಗೆ ಹೋಗುವುದು, ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವುದು. ಚಪ್ಪಾಳೆ ಗಿಟ್ಟಿಸುವುದು ಮತ್ತು ಕೊನೆಗೆ ಹಾರವನ್ನು ಕೊರಳಿಗೆ ಹಾಕಿಸಿಕೊಂಡು ಮನೆಗೆ ಬರುವುದು. ಇಷ್ಟು ಕೆಲಸ ಮಾತ್ರ ಇರುವುದು ಇತರ ನೇತಾರರಿಗೆ. ಆದರೆ ನಮ್ಮ ಸಮಾಜದಲ್ಲಿನ ನೇತಾರರು ಹೀಗೆ ಮಾಡಿದರೆ ನಡೆಯುವುದಿಲ್ಲ ಚೆನ್ನಾಗಿ ಅಧ್ಯಯನ ಮಾಡುವುದು, ವಿಚಾರ ಮಾಡುವುದು ಹಾಗೂ ಸಮಾಜದ ಉನ್ನತಿಗಾಗಿ ಸ್ವತಃ ಹಗಲುರಾತ್ರಿ ಎನ್ನದೆ ಸತತ ಮೈಮುರಿದು ದುಡಿಯಬೇಕಾಗುತ್ತದೆ. ಇದನ್ನು ನಮ್ಮ ನೇತಾರರು ಅವಶ್ಯವಾಗಿ ಮಾಡಬೇಕಾಗಿದೆ. ಆಗ ಮಾತ್ರ ಅವರು ನಮ್ಮ ಜನರಿಗೆ ಸ್ವಲ್ಪಮಟ್ಟಿಗೆ ಒಳ್ಳೆಯದನ್ನು ಮಾಡುವುದಕ್ಕೆ ಸಾಧ್ಯವಾಗಿತ್ತದೆ. ಅಂಥವರು ಮಾತ್ರ ನಮ್ಮ ನಿಜವಾದ ನೇತಾರರಾಗುತ್ತಾರೆ.

ನಿಮಗೆ ಅನ್ನಿಸಿರಬಹುದು, ನೇತಾರನಾಗುವುದು ಬಹಳ ಸುಲಭದ ಕೆಲಸ ಎಂಬುದಾಗಿ. ಆದರೆ ನನ್ನ ಅಭಿಪ್ರಾಯದಲ್ಲಿ ನೇತಾರನಾಗುವುದು ಬಹಳ ಕಠಿಣ. ನನಗಂತೂ ಈ ನೇತಾರತ್ವವು ಬಹಳ ಬಿಕ್ಕಟ್ಟಿನದ್ದಾಗಿ ಕಾಣಿಸುತ್ತದೆ. ಕಾರಣ ನಾನು ಇತರ ನೇತಾರರ ಹಾಗೆ ಅಲ್ಲ. ನಾನು ಯಾವಾಗ ಚಳವಳಿಯನ್ನು ಆರಂಭಿಸಿದೆನೋ ಆಗ ಯಾವುದೇ ರೀತಿಯ ಸಂಘಟನೆಯೂ ಇರಲಿಲ್ಲ. ಸ್ವತಃ ನಾನೇ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕಾಗಿತ್ತು. ಸಂಘಟನೆ ಮಾಡಬೇಕೆಂದರೂ ಕೂಡಾ ಸ್ವತಃ ನಾನೇ ಮುಂದುವರಿಯಬೇಕಿತ್ತು. ವರ್ತಮಾನ ಪತ್ರಿಕೆಯೊಂದನ್ನು ಆರಂಭಿಸಬೇಕು ಎಂದುಕೊಂಡಾಗಲೂ ನಾನೇ ಮಾಡಬೇಕಾಯಿತು. ಆ ಕಾರಣವಾಗಿಯೇ ‘ಮೂಕನಾಯಕ’, ‘ಬಹಿಷ್ಕೃತ ಭಾರತ’ ಮತ್ತು ‘ಜನತಾ’ ಮುಂತಾದ ವೃತ್ತ ಪತ್ರಿಕೆಗಳನ್ನು ನಾನು ಆರಂಭಿಸಿದೆ. ಇನ್ನು ಇದಕ್ಕಾಗಿ ಪ್ರೆಸ್ ನಡೆಸಬೇಕು ಎಂದರೆ ಅದರ ಏರ್ಪಾಡು ಕೂಡಾ ನನ್ನ ಮೂಲಕವೇ ಆಗಬೇಕಾಯಿತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನನಗೆ ಎಲ್ಲವನ್ನೂ ಶೂನ್ಯದಿಂದ ನಿರ್ಮಾಣ ಮಾಡುವಂತಹ ಸ್ಥಿತಿಯಲ್ಲಿತ್ತು. ಈಗ ಏನೆಲ್ಲಾ ಆಗಿರುವುದೋ ಅದೆಲ್ಲಾ ಪೂರ್ಣ ಸ್ವರೂಪದ್ದಾಗಿದೆ ಎಂದೇನು ನಾನು ಹೇಳುತ್ತಿಲ್ಲ. ಆದರೂ ನಾನು ಹೀಗೆ ಹೇಳುತ್ತೇನೆ, ನಾನು ಏನು ಮಾಡಬೇಕು ಎಂದುಕೊಂಡಿದ್ದೇನೋ ಅದರಲ್ಲಿ ಶೇಕಡಾ ನೂರರಷ್ಟು ಆಗಿಲ್ಲ. ಇನ್ನೂ ಬಹಳಷ್ಟು ಮಾಡಬೇಕಾದುದು ಹಾಗೆಯೇ ಉಳಿದಿದೆ. ನಮ್ಮ ರಸ್ತೆಯಲ್ಲಿ ನಾವು ಬಹಳಷ್ಟು ನಡೆಯುವುದಿದೆ. ಈವರೆಗೆ ಏನೆಲ್ಲ ಆಗಿರುವುದೋ ಅದು ಕೇವಲ ಸಸಿ ನೆಟ್ಟಿರುವ ಕಾರ್ಯವಷ್ಟೆ. ನಾವು ಚಳವಳಿಗಳನ್ನು ಇನ್ನು ಹೆಚ್ಚು ಹೆಚ್ಚಾಗಿ ಬೆಳೆಸಬೇಕಾಗಿದೆ. ನಾನು ಇದನ್ನೆಲ್ಲ ಹೇಳುತ್ತಿರುವ ಉದ್ದೇಶವಿಷ್ಟೇ, ನಮ್ಮಲ್ಲಿನ ನೇತಾರರ ಮೇಲೆ ನೇತೃತ್ವದ ಬಹಳ ದೊಡ್ಡ ಜವಾಬ್ದಾರಿ ಇದೆ ಎಂಬುವುದನ್ನು ಸ್ಪಷ್ಟವಾಗಿ ಅವರು ತಿಳಿದುಕೊಳ್ಳಬೇಕು.

ಜನರಲ್ಲಿ ಜಾಗೃತಿಯನ್ನು ನಿರ್ಮಾಣ ಮಾಡುವುದು, ಅವರನ್ನು ಸಂಘಟಿಸುವುದು ಇದು ಅತ್ಯಂತ ಮುಖ್ಯವಾದ ಕಾರ್ಯವಾಗಿದೆ. ಅದನ್ನು ಪ್ರತಿಯೊಬ್ಬ ನೇತಾರನೂ ಮಾಡಲೇಬೇಕಾದ ಕೆಲಸ. ನಮ್ಮ ಕಾರ್ಯಕರ್ತರ ಮೈಯಲ್ಲಿ ಬಹಳ ಉತ್ಸಾಹ ಶಕ್ತಿಯನ್ನು ತುಂಬಬೇಕು. ಯಾರಲ್ಲಿ ಧೈರ್ಯವಿಲ್ಲವೋ ಅಂಥವರು ನೇತಾರರಾಗುವುದಕ್ಕೆ ಸಾಧ್ಯವಿಲ್ಲ. ಯಾವ ಮನುಷ್ಯ ಸಾಯುವುದಕ್ಕೆ ಸಿದ್ಧನಾಗಿರುತ್ತಾನೆಯೋ ಆತ ಯಾವತ್ತೂ ಸಾಯುವುದಿಲ್ಲ. ಬದಲಾಗಿ ಯಾರು ಸಾಯಲು ಹೆದರುತ್ತಾರೆಯೋ ಅಂಥವರು ಮೊದಲೇ ಸತ್ತು ಹೋಗಿರುತ್ತಾರೆ ಎಂಬುದಾಗಿ ತಿಳಿದುಕೊಳ್ಳಿರಿ. ಈ ದೇಶದಲ್ಲಿನ ಹಿಂದೂಗಳು ನಮಗೆ ಬಹಳ ತೊಂದರೆ ಕೊಡಬಹುದು. ನಮ್ಮ ಮಾರ್ಗದಲ್ಲಿ ಹಲವಾರು ಅಡಚಣೆಗಳನ್ನೂ ನಿರ್ಮಾಣ ಮಾಡಬಹುದು. ಆದರೂ ನಾವು ಯಾವ ಮಾರ್ಗವನ್ನು ಸ್ವೀಕಾರ ಮಾಡಿದ್ದೇವೆಯೋ ಹಾಗೆಯೆ ಯಾವುದನ್ನು ನಾವು ಮನುಷ್ಯತ್ವ ಎನ್ನುತ್ತೇವೆಯೋ ಅಂಥದನ್ನು ದೊರಕಿಸಿಕೊಳ್ಳಲು ಸಾಧ್ಯವಿರುವ ಇಂಥ ಮಾರ್ಗವನ್ನು ನಾವೆಂದೂ ಕೈಬಿಡುವ ಪ್ರಶ್ನೆಯೇ ಇಲ್ಲ. ಅದಕ್ಕಾಗಿ ನಮ್ಮ ಪ್ರತಿಯೊಬ್ಬ ಕಾರ್ಯಕರ್ತರೂ ಧೈರ್ಯವಂತರು ಆಗಿರಲೇಬೇಕು. ಮಾನ-ಸನ್ಮಾನದಿಂದ ನಡೆದುಕೊಳ್ಳವುದು ನಮ್ಮ ಪರಮ ಕರ್ತವ್ಯವೇ ಹೌದು. ಅದಕ್ಕಾಗಿಯೇ ನಮ್ಮ ಚಳವಳಿಯು ನಡೆಯುತ್ತಿರುವುದು ಎಂಬುದನ್ನು ಅರಿತಿರುವುದು ಅವಶ್ಯ.

ಮತ್ತೊಂದು ವಿಚಾರವೆಂದರೆ, ನಮ್ಮ ಜನರಲ್ಲಿ ದೇವರ ಬಗೆಗೆ ಭೋಳೆತನವು ಬಹಳವಾಗಿ ಹೊಕ್ಕುಬಿಟ್ಟಿದೆ. ಎದ್ದೊಡನೆ ಹೊರಟೇ ಬಿಡುವುದು ಪಂಢರಿ, ಪೈಠಣ ಮತ್ತು ಆಳಂದಿಗಳಿಗೆ. ನನಗೆ ನಿಮ್ಮಲ್ಲಿ ಹೀಗೆ ಕೇಳುವುದಿದೆ, ಪಂಢರಿ, ಪೈಠಣ ಮತ್ತು ಆಳಂದಿಗಳಿಗೆ ಹೋಗಿ ನಾವು ಏನನ್ನು ಪಡೆದಿದ್ದೇವೆ? ಪಂಢರಾಪುರಕ್ಕೆ ಹೋಗಿ ಬಂದ ಯಾರಿಗಾದರೂ ಒಳ್ಳೆಯದಾಗಿರುವುದೇ? ಅಥವಾ ಆಳಂದಿಗೆ ಹೋಗಿ ಬಂದಿರುವ ಯಾರು ಉದ್ಧಾರವಾಗಿದ್ದಾರೆ? ನೀವು ಏಕನಾಥನನ್ನು ಬಹಳ ದೊಡ್ಡ ಸಂತನೆಂದು ನಂಬಿದ್ದೀರಿ. ಅವನು ಏನು ಮಾಡಿದ್ದಾನೆ? ಒಂದು ಭಾಗವತ ಗ್ರಂಥವನ್ನು ಬರೆದಿರುವನು. ಆದರೆ ಅದರ ಕಥೆ ಏನೆಂದು ನಾನು ನಿಮಗೆ ಇಂದು ಹೇಳುತ್ತೇನೆ. ಆತ ಸತ್ತು ಹೋದನು, ಅವನ ಪ್ರೇತಯಾತ್ರೆಯು ಒಂದು ರಸ್ತೆಯಲ್ಲಿ ಸಾಗುತ್ತಿತ್ತು. ಅದೇ ರಸ್ತೆಯಲ್ಲಿ ಒಬ್ಬ ಸೊಸೆಯು ಹೊಲೆಯನನ್ನು ಜೊತೆಗೆ ಕರೆದುಕೊಂಡು ಮಾವನ ಮನೆಗೆ ಹೋಗುತ್ತಿದ್ದಳು. ಆಗ ಅವಳು ಏಕನಾಥನ ಹೆಣವನ್ನು ನೋಡಿದಳು. ಇದು ನನಗೆ ಅಪಶಕುನವನ್ನು ತಂದಿತು ಎಂದು ಆ ಹೊಲೆಯನಲ್ಲಿ ಹೇಳಿದಳು. ಅವಳ ಆ ಮಾತನ್ನು ಕೇಳಿದೊಡನೆಯೇ ಹೆಣವಾಗಿದ್ದ ಏಕನಾಥನು ಜೀವಂತವಾಗಿ ಚಟ್ಟದ ಮೇಲೆ ಎದ್ದುಕುಳಿತು ಆ ಸೊಸೆಗೆ ಹೇಳಿದ, ‘‘ನಾನು ಇವತ್ತು ಸಾಯುವುದಿಲ್ಲ. ಕಾರಣ ನಿನಗೆ ಅಪಶಕುನವಾಗುತ್ತಿದೆ’’ ಎಂಬುದಾಗಿ ಹೇಳಿ ಅವನು ತಿರುಗಿ ಮನೆಗೆ ಹೋದನು. ನಂತರ ಮುಂದೆ ಏಕನಾಥ ಮತ್ತು ಅವನ ಹೆಂಡತಿ ಇಬ್ಬರೂ ನದಿಯಲ್ಲಿ ಹಾರಿ ಪ್ರಾಣಬಿಟ್ಟರು. ಅವರು ಹೀಗೇಕೆ ಜೀವ ಕಳೆದುಕೊಂಡರು ಎಂಬ ಬಗೆಗೆ ಇಂದಿಗೂ ಅಧ್ಯಯನವಾಗಿಲ್ಲ. ಈಗ ನೀವೇ ಹೇಳಿರಿ, ಯಾವುದಾದರೂ ಹೆಣವು ಮತ್ತೆ ಜೀವಂತವಾಗಿದ್ದನ್ನು ಕೇಳಿದ್ದೀರಾ ಅಥವಾ ನೋಡಿದ್ದೀರಾ?

ಮತ್ತೊಂದು ಜ್ಞಾನೇಶ್ವರನದು. ಆತನಾದರೂ ಮಾಡಿದ್ದೇನು? ಆತ ಭಗವದ್ಗೀತೆಯ ಮೇಲೆ ಜ್ಞಾನೇಶ್ವರಿ ಎಂಬ ಗ್ರಂಥವನ್ನು ರಚಿಸಿದ. ಆ ಗ್ರಂಥದ ಸಾರವಾದರೂ ಏನು? ಈ ಜಗತ್ತು ಬ್ರಹ್ಮಮಯವಾಗಿದೆ. ಸರ್ವಜಗತ್ತು ಹೀಗೆ ಬ್ರಹ್ಮವಾಗಿದ್ದರೆ, ಹೊಲೆಯ, ಮಾದಿಗರಲ್ಲಿಯೂ ಬ್ರಹ್ಮನು ಇರಲೇಬೇಕಲ್ಲವೆ. ಆದರೆ ಜ್ಞಾನೇಶ್ವರನು ಹೊಲೆಯ, ಮಾದಿಗರಲ್ಲಿ ಏಕೆ ನೆಲೆಸಿರಲಿಲ್ಲ? ಬ್ರಾಹ್ಮಣರಲ್ಲಿ ತಮ್ಮನ್ನು ಮತ್ತೆ ಸೇರಿಸಿಕೊಳ್ಳಬೇಕೆಂದು ಏತಕ್ಕೆ ಹಗಲಿರುಳು ಪ್ರಯತ್ನ ಮಾಡಿದ? ಬ್ರಾಹ್ಮಣರು ಅವನನ್ನು ಜಾತಿಯಿಂದ ಬಹಿಷ್ಕಾರ ಹಾಕಿದಾಗ ಆತ ಹೇಳಬಹುದಿತ್ತು, ನೀವು ನಮ್ಮನ್ನು ನಿಮ್ಮ ಜಾತಿಯಲ್ಲಿ ಸೇರಿಕೊಳ್ಳದೆ ಇದ್ದರೂ ಪರವಾಗಿಲ್ಲ. ನಾನು ಹೊಲೆಯ, ಮಾದಿಗರಲ್ಲಿ ಹೋಗಿ ಇರುತ್ತೇನೆ.

ಕಾರಣ ಈ ಜಗವೆಲ್ಲ ಬ್ರಹ್ಮಮಯವಾಗಿದೆ. ಅವರಿಗೆ ಈ ಮಾತನ್ನು ಏತಕ್ಕೆ ಹೇಳಲಿಲ್ಲ ಜ್ಞಾನೇಶ್ವರ? ಸರ್ವೇಸಾಮಾನ್ಯ ಜನತೆಗೆ ಮರುಳು ಮಾಡುವುದಕ್ಕಾಗಿ ಈ ಕೃತಕ ಆಸ್ತಿಕತೆಯನ್ನು ರಚಿಸಿದ್ದಾನೆ ಮತ್ತು ಈ ಆಸ್ತಿಕತೆಗೆ ನೀವೆಲ್ಲರೂ ಮರುಳಾಗಿದ್ದೀರಿ. ಹಾಗಾಗಿಯೇ ನೀವೆಲ್ಲರೂ ಪಂಢರಪುರ-ಆಳಂದಿ ಅಥವಾ ಜೇಜೂರಿಗೆ ಅಥವಾ ಬೇರೆ ಯಾವುದಾದರೂ ದೇವರ ನದರಿಗೆ ಹೋಗುವುದಾದರೆ ನಾನು ನಿಮ್ಮೆಲ್ಲರ ಮೇಲೆ ಬಹಿಷ್ಕಾರ ಹಾಕುವ ನಿರ್ಧಾರ ಮಾಡಬೇಕಾಗುತ್ತದೆ. ಅದನ್ನು ಬಿಟ್ಟರೆ ನಿಮ್ಮಲ್ಲಿನ ಈ ಭೋಳತನವು ಹೋಗುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ನಿಮ್ಮ ಉದ್ಧಾರ ಆಗುವುದಕ್ಕೂ ಸಾಧ್ಯವಾಗುವುದಿಲ್ಲ. ಇಂದಿನ ಯುಗವು ವಿಚಾರದ ಯುಗವಾಗಿದೆ. ಯಾರು ಎಂಥದೇ ಆಸ್ತಿಕತೆಯನ್ನು ರಚಿಸಿದರೂ ಅದು ಕೃತಕವಾದುದು ಎಂಬುದನ್ನು ಅರಿಯುವ ಸಾಮರ್ಥ್ಯವು ನಿಮ್ಮಲ್ಲಿ ಇರಬೇಕು. ಕಾರಣ ಇನ್ನು ಮುಂದೆ ಜಗತ್ತಿನಲ್ಲಿ ವ್ಯವಹರಿಸುವಾಗ ನೀವೆಲ್ಲರೂ ವಿಚಾರ ಮಾಡಿಯೇ ನಡೆಯಬೇಕು.

ನೀವು ನಿಮ್ಮ ಸಂಘಟನೆಯನ್ನು ಇನ್ನೂ ಸಶಕ್ತಗೊಳಿಸಿಕೊಳ್ಳಬೇಕು. ನಿಮ್ಮ ನಿಮ್ಮಳಗಿನ ಎಲ್ಲಾ ಮತಭೇದಗಳನ್ನು ಪಕ್ಕಕ್ಕೆ ಸರಿಸಿ ಒಮ್ಮತದಿಂದ ನೀವೆಲ್ಲರೂ ವ್ಯವಹರಿಸಬೇಕು. ಕಾರಣ ಸಂಘಟನೆಯು ಇಲ್ಲದೆ ಹೋದರೆ ಜಗತ್ತಿನಲ್ಲಿ ಯಾರೂ ನಮ್ಮನ್ನು ವಿಚಾರಿಸುವುದಿಲ್ಲ. ನನಗೆ ಗೊತ್ತಿದೆ, ಚುನಾವಣೆಯ ಸಮಯದಲ್ಲಿ ನಾವು ಯಾರೊಂದಿಗಾದರೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಒಂದೊಮ್ಮೆ ನಮ್ಮ ಸಂಘಟನೆಯೇ ಇಲ್ಲದೆ ಹೋದರೆ, ಬೇರೆಯವರು ನಮ್ಮ ಹತ್ತಿರಕ್ಕೆ ಬರುವುದೇ ಇಲ್ಲ; ನಮ್ಮನ್ನು ಯಾರೂ ಮಾತನಾಡಿಸುವುದೂ ಇಲ್ಲ. ಪಾಲಿಟಿಕ್ಸ್ ಮಾಡಬೇಕೆಂದಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಬೇಕಾಗುತ್ತದೆ. ನನಗೆ ನೇತಾರರ ಬಗ್ಗೆ ಭಯವಿಲ್ಲ. ನೇತಾರರೇನಾದರೂ ನಿಮ್ಮೆಂದಿಗೆ ಸರಿಯಾಗಿ ನಡೆದುಕೊಳ್ಳದೆ ಇದ್ದರೆ, ಅವರು ಜನರ ಪರವಾಗಿ ಕೆಲಸ ಮಾಡದೆ ಇದ್ದರೆ ಅವರನ್ನು ತೆಗೆದು ಹಾಕುವುದಕ್ಕೆ ನಾನು ಸ್ವಲ್ಪವೂ ಹೆದರುವುದಿಲ್ಲ. ಹಾಗಾಗಿ ಪ್ರತಿಯೊಂದು ವಿಭಾಗದಲ್ಲಿಯೂ ಬರುವ ವರ್ಷಗಳಲ್ಲಿ ಒಂದಾದರೂ ಪರಿಷತ್ತುಗಳನ್ನು ರಚಿಸಬೇಕು. ಅದೇ ರೀತಿಯಲ್ಲಿ ಸಭೆ, ಸ್ನೇಹ ಸಮ್ಮೇಳನಗಳು, ಚರ್ಚಾಸಭೆಗಳು, ಕ್ಯಾಂಪಸ್ ಇತ್ಯಾದಿಗಳನ್ನು ನಡೆಸಬೇಕಾಗುತ್ತದೆ. ಅಂದರೆ ಇದರಿಂದಾಗಿ ನಮ್ಮ ಕಾರ್ಯಕರ್ತರು ಕಾಲಕಾಲಕ್ಕೆ ಒಂದು ಸ್ಥಳದಲ್ಲಿ ಸೇರುತ್ತಾರೆ, ಚಳವಳಿಯ ಬಗೆಗೆ ಅಭ್ಯಾಸ ಮಾಡುತ್ತಾರೆ, ಚರ್ಚಿಸುತ್ತಾರೆ ಮತ್ತು ಕಾರ್ಯಗಳು ಸಮರ್ಥ ಹುಮ್ಮಸ್ಸಿನಲ್ಲಿ ನಡೆಯುತ್ತವೆ.

 ಕೊನೆಯಲ್ಲಿ ಇನ್ನೂ ಕೆಲವನ್ನು ನಿಮಗೆ ಹೇಳುವುದಿದೆ, ಅಂದೆಂದರೆ ನಾನು ವೈಯಕ್ತಿಕವಾಗಿ ಯಾರೇ ಕಾರ್ಯಕರ್ತನ ಬಗೆಗೆ ಪ್ರೀತಿ ತೋರಿಸುವುದಿಲ್ಲ. ನನ್ನ ಪ್ರೇಮವು ಕೇವಲ ಕಾರ್ಯಗಳ ಮೇಲಷ್ಟೇ ಇರುತ್ತದೆ. ಯಾರು ಕಾರ್ಯಗಳನ್ನು ಮಾಡುತ್ತಾರೆಯೋ ಅವರು ಮಾತ್ರವೇ ನನಗೆ ಪ್ರೀತಿಪಾತ್ರರಾಗಿರುತ್ತಾರೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)