ಫಲಿತಾಂಶಕ್ಕಾಗಿ ಮಕ್ಕಳಿಗೆ ಹಿಂಸೆ ಸರಿಯೇ?
ಮಾನ್ಯರೇ,
ರಾಜ್ಯದಾದ್ಯಂತ ಈಗಾಗಲೇ ಜಿಲ್ಲಾಮಟ್ಟದ ಎಸೆಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳು ಆರಂಭಗೊಂಡಿವೆ. ಇದರೊಂದಿಗೆ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಗಳು ಮುಂದಿನ ತಿಂಗಳ ಕೊನೆಯ ವಾರ ಜರುಗುವುದು ಸಾಮಾನ್ಯ. ಆದರೆ ಕೆಲವು ಜಿಲ್ಲೆಗಳಲ್ಲಿ ಫಲಿತಾಂಶ ಸುಧಾರಣೆ ಹಾಗೂ ಜಿಲ್ಲಾವಾರು ಸ್ಥಾನದಲ್ಲಿ ಮೇಲಿನ ಹಂತ ತಲುಪುವ ನಿಟ್ಟಿನಲ್ಲಿ ಅವೈಜ್ಞ್ಞಾನಿಕವಾಗಿ 5ರಿಂದ 6 ಪೂರ್ವಸಿದ್ಧತಾ ಪರೀಕ್ಷೆಗಳನ್ನು ಸಂಘಟಿಸಲು ಮುಂದಾಗಿರುವುದು ದುರದೃಷ್ಟಕರ.
ಉತ್ತಮ ಫಲಿತಾಂಶ ಪಡೆಯಬೇಕು ನಿಜ. ಹಾಗೆಂದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಹಿಂಸಿಸುವುದು ಸರಿಯಲ್ಲ. ಹಲವು ಶಾಲೆಗಳು ಬೆಳಗ್ಗೆ 9ರಿಂದ ಸಂಜೆ 7ರ ತನಕ ವಿದ್ಯಾರ್ಥಿಗಳಿಗೆ ನಿರಂತರ ತರಗತಿಗಳನ್ನು ನಡೆಸುತ್ತಾ ಕೇವಲ ಅಂಕಗಳಿಕೆಯನ್ನೇ ಮುಖ್ಯಗುರಿಯನ್ನಾಗಿಸುತ್ತಿರುವುದು ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಯಾವ ಅವಸ್ಥೆಯಲ್ಲಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಶಿಕ್ಷಣತಜ್ಞರು, ಮನೋವಿಜ್ಞಾನಿಗಳು ಈ ಬಗ್ಗೆ ಮೌನವಹಿಸದೆ ಎಸೆಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಉತ್ತೀರ್ಣತೆಗಾಗಿ ಅಂಕಗಳಿಕೆಯನ್ನೇ ಮಾನದಂಡವಾಗಿಸದ ಕೇವಲ ಗ್ರೇಡಿಂಗ್ ಪದ್ಧತಿಯನ್ನು ಅನುಷ್ಠಾನಗೊಳಿಸಲು ಸರಕಾರವನ್ನು ಒತ್ತಾಯಪಡಿಸುವುದು ಒಳಿತು.