ಕನ್ನಡ ರಾಷ್ಟ್ರೀಯತೆಯ ಪರಿಕಲ್ಪನೆ
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ
ಭಾರತದಂತಹ ಬಹುಭಾಷಾ ಸಾಹಿತ್ಯಗಳಿರುವ ದೇಶದಲ್ಲಿ ಒಂದೊಂದು ಭಾಷಾ ಸಾಹಿತ್ಯವೂ ತನ್ನದೇ ಆದ ಸಾಂಸ್ಕೃತಿಕ ವಿಲಕ್ಷಣಗಳನ್ನು ಪ್ರಕಟಿಸುವುದರ ಮೂಲಕವೇ ತನ್ನ ರಾಷ್ಟ್ರೀಯತೆಯನ್ನು ಕಾಯ್ದುಕೊಂಡಿದೆ.
ವಸಾಹತುಪೂರ್ವದ ಕನ್ನಡದ ನೆಲದಲ್ಲಿ ‘ರಾಷ್ಟ್ರೀಯತೆ’ ಇರಲಿಲ್ಲವೇ? ಇದ್ದರೆ, ಸೃಜನಶ್ರೀಲ ಕ್ರಿಯೆಯೊಳಗೇ ಮೈತಾಳುವ ಅದರ ಸ್ವರೂಪ ಯಾವ ಥರದ್ದು? ಅದಕ್ಕೂ, ವಸಾಹತು ಸಂದರ್ಭದಲ್ಲಿ ಪ್ರಕಟವಾದ ಸೃಜನಶ್ರೀಲ ಚಿಂತನೆಯೊಳಗೆ ಮೂಡಿದ ಕನ್ನಡ ರಾಷ್ಟ್ರೀಯತೆಯ ಲಕ್ಷಣಗಳಿಗೂ ಇರುವ ಸಂಬಂಧ ಎಂತಹದ್ದು ಎಂಬ ವಿಚಾರಗಳು ವಿಶ್ಲೇಷಣಾತ್ಮಕವಾದವು. ಏಕೆಂದರೆ ಕನ್ನಡ ಸಾಹಿತ್ಯ ಪರಂಪರೆಯಲ್ಲೇ ಇರುವ ‘ಕನ್ನಡತನ’ವನ್ನು ಗುರುತಿಸುವಲ್ಲಿ ಈ ಚರ್ಚೆ ಬಹಳ ಮುಖ್ಯವಾದದ್ದು.
ಪ್ರಾಚೀನ ಕನ್ನಡ ರಾಷ್ಟ್ರೀಯತೆಯ ಸ್ವರೂಪವನ್ನು ಖಚಿತವಾಗಿ ದಾಖಲಿಸುವ ಎರಡು ನಿದರ್ಶನಗಳು ಇವು:
ಒಂದು ಕನ್ನಡ ಜನಪದರಲ್ಲಿ ಜನಪ್ರಿಯವಾದ ‘ಗೋವಿನ ಹಾಡು’ ಕನ್ನಡ ಜನರ ಸತ್ಯನಿಷ್ಠೆಗೆ, ಪ್ರಾಮಾಣಿಕತನಕ್ಕೆ ಪ್ರತೀಕವಾದದ್ದೆಂದು ಭಾವಿಸಲಾಗಿದೆ. ಈ ಹಾಡಿನಲ್ಲಿ ‘‘ಧರಣಿ ಮಂಡಲ ಮಧ್ಯದೊಳಗೆ ನೆಲೆಸಿರುವ ಕರ್ನಾಟಕ ದೇಶದಿ’’ ಎಂಬ ಮಾತುಗಳಿವೆ. ಭೂಮಂಡಲ ಮಧ್ಯದೊಳಗೆ ‘ಕರ್ನಾಟಕ’ ಇದೆ. ಹಾಗೂ ಕರ್ನಾಟಕದ ಜೊತೆಗೆ ‘ಭೂಮಂಡಲ’ ಅಥವಾ ‘ಪ್ರಪಂಚ’ ಇದೆ ಎಂಬ ಅರಿವು ಕನ್ನಡ ರಾಷ್ಟ್ರೀಯತೆಯ ವೈಶಿಷ್ಟವಾಗಿದೆ. ‘ಕರ್ನಾಟಕ’ವನ್ನು ಭೌಗೋಳಿಕವಾಗಿ ಗುರುತಿಸುವಾಗ ಭೂಮಂಡಲದ ಜೊತೆಗೆ ಪ್ರಸ್ತಾಪಿಸುವ ವಿಚಾರದಲ್ಲೇ ಕನ್ನಡ ರಾಷ್ಟ್ರೀಯತೆ ಮೈದಾಳಿದೆ.
ಎರಡನೆಯದು ‘ಕವಿರಾಜಮಾರ್ಗ’ (ಕ್ರಿ.ಶ. 814-877) ಕನ್ನಡದ ಮೊದಲ ಅಲಂಕಾರ ಕೃತಿಯಿಂದು ಹೆಸರಾದ, ಕನ್ನಡದ ಮಹತ್ವದ ಸಾಂಸ್ಕೃತಿಕ ಪಠ್ಯವಾದ ಈ ಕಾವ್ಯದಲ್ಲಿ ಜನಪ್ರಿಯವಾದ, ಪ್ರಾಚೀನವಾದ ‘‘ಕಾವೇರಿಯಿಂದಂ ಆ ಗೋದಾವರಿವರಂ ಇರ್ದ-ನಾಡು ಅದು- ಆ ಕನ್ನಡದೊಳ್ ಭಾವಿಸಿದ ಜನಪದಂ’’ ಎಂಬ ಮಾತುಗಳಿವೆ. ಅಂದರೆ ‘‘ಕಾವೇರಿಯಿಂದ ಗೋದಾವರಿಯವರೆಗೆ ಭೌಗೋಳಿಕವಾಗಿ ಇರುವ ನಾಡು ‘ಕನ್ನಡದೊಳಗೆ ಮೈದಾಳಿದ ನಾಡು’’ ಎಂಬುದಾಗಿ ವಿವರಿಸಲ್ಪಟ್ಟಿದೆ. ‘ಕನ್ನಡ ನಾಡು-ಕನ್ನಡದಿಂದ, ಕನ್ನಡಿಗರಿಂದ, ಕನ್ನಡ ಸಂಸ್ಕೃತಿಯಿಂದ ಮೈದಾಳಿದ ನಾಡು’ ಎಂಬ ಚಿಂತನೆಯೊಳಗೆ ಕನ್ನಡ ರಾಷ್ಟ್ರೀಯತೆ ಮೊಳೆತಿದೆ. ಮೇಲಿನ ಸಾಲುಗಳು ಕನ್ನಡ ಚಿಂತನೆ ಕುರಿತದ್ದು.ಆದುದರಿಂದ ಬಹಳ ಮುಖ್ಯವಾದವು. ಮುಂದುವರಿದು ‘ವಸುಧಾ-ವಲಯ, ವಿಹೀನ, ವಿಶದ-ವಿಷಯ-ವಿಶೇಷಂ’ ಎಂಬ ಮಾತಿದೆ. ಈ ಮಾತು ಕನ್ನಡ ರಾಷ್ಟ್ರೀಯತೆಯ ಸ್ವರೂಪವನ್ನು ತಿಳಿಸುತ್ತದೆ. ‘ಅನಂತ ಬ್ರಹ್ಮಾಂಡದೊಳಗಿರುವ ಈ ನಾಡು ತನ್ನ ವ್ಯಾಪಕವಾದ, ವೈಶಿಷ್ಟಗಳ ಜೊತೆಗೇ ಬ್ರಹ್ಮಾಂಡದೊಳಗೆ ವಿಲೀನವಾಗಿದೆ’ ಇದನ್ನು ಕೆ.ವಿ. ಸುಬ್ಬಣ್ಣನವರು ‘‘ಪ್ರಪಂಚ ಕರ್ನಾಟಕದಲ್ಲಿದೆ. ಕರ್ನ್ನಾಟಕ ಪ್ರಪಂಚದಲ್ಲಿದೆ’’ ಎಂದು ಅರ್ಥೈಸುತ್ತಾರೆ. ಅಂದರೆ ಕರ್ನಾಟಕ ಕನ್ನಡವನ್ನು ಗುರುತಿಸುವಾಗ ಭೂಮಂಡಲ ಅಥವಾ ಪ್ರಪಂಚದ ಜೊತೆಗೇ ಇಟ್ಟು ಗ್ರಹಿಸುವ ಕ್ರಮ ಕನ್ನಡದ ವೈಶಿಷ್ಟವಾಗಿದೆ. ಪ್ರತ್ಯೇಕತೆಯನ್ನು ಗುರುತಿಸುವಾಗಲೂ ಸಹ ಅಸ್ತಿತ್ವದೊಂದಿಗೆ ಗುರುತಿಸಿಕೊಳ್ಳುವ ಕನ್ನಡ ರಾಷ್ಟ್ರೀಯತೆಯು ಅನ್ಯದೊಂದಿಗಿನ ಅನುಸಂಧಾನವನ್ನು ಮಾಡುತ್ತಲೇ ತನ್ನತನವನ್ನೂ ಉಳಿಸಿಕೊಂಡು ಬೆಳೆಯುವ ಪ್ರಯತ್ನಗಳನ್ನು ಮಾಡಿದೆ.
ಕನ್ನಡ ನಾಡು, ನುಡಿಗೆ ಕ್ರಿ.ಪೂರ್ವದ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೆ ಕನ್ನಡ ನಾಡು ಅನ್ಯಭಾಷೆ, ರಾಜಕೀಯ ಆಳ್ವಿಕೆ, ಜಾತಿ ಒತ್ತಡ ಹಲವಾರು ಬಿಕ್ಕಟ್ಟುಗಳ ನಡುವೆಯೂ ಈಗಾಗಲೇ ಗುರುತಿಸಿರುವ ಹಾಗೆ ಸಹಅಸ್ತಿತ್ವದಿಂದ, ಸಹಬಾಳ್ವೆಯಿಂದ - ಪರಸ್ಪರ ಅನುಸಂಧಾನದ ಮೂಲಕ, ತನ್ನ ಅಸ್ತಿತ್ವಕ್ಕೆ ಪ್ರಗತಿಗೆ ಅಡ್ಡಿ ಬಂದಾಗ ಪ್ರತಿರೋಧ ಒಡ್ಡುತ್ತಾ, ಚಲನಶ್ರೀಲವಾಗಿ, ವೃದ್ಧಿಯಾಗುತ್ತಾ ಬಂದಿದೆ.
ಪ್ರಭುತ್ವ ಶಕ್ತಿಯ ವಿರುದ್ಧ, ಅನ್ಯಾಕ್ರಮಣದ ವಿರುದ್ಧ ಕನ್ನಡ ಸಾಹಿತ್ಯ ಮೊದಲಿನಿಂದಲೂ ತನ್ನ ಪ್ರತಿರೋಧವನ್ನು, ಪ್ರತಿಭಟನೆಯನ್ನು ಸೃಜನಾತ್ಮಕ ನೆಲೆಯಲ್ಲಿ ಮಾಡುತ್ತಲೇ ಬಂದಿದೆ. ಇದಕ್ಕೆ ಕನ್ನಡದ ಮೊದಲ ಅಲಂಕಾರ ಕೃತಿಯಾದ ‘ಕವಿರಾಜಮಾರ್ಗ’ವೇ ನಿದರ್ಶನ. ‘ಕವಿರಾಜಮಾರ್ಗ’ವು ಸಂಸ್ಕೃತ ಕಾವ್ಯಮಾರ್ಗವನ್ನು ಕನ್ನಡ ಭಾಷೆಯ ನೆಲೆಯಲ್ಲಿ ಪ್ರಸ್ತುತಪಡಿಸುವುದರ ಜೊತೆಗೇ ಕನ್ನಡದ್ದೇ ಆದ ಕಾವ್ಯರೀತಿಗಳನ್ನು (ಬೆದಂಡೆ, ಚಿತ್ತಾಣ ಮೊದಲಾದ) ದಾಖಲು ಮಾಡುತ್ತದೆ. ಸಂಸ್ಕೃತಿ ಕಾವ್ಯಮಾರ್ಗದಲ್ಲಿ ದೋಷ ಎನಿಸಿಕೊಂಡದ್ದು (ಆದಿಪ್ರಾಸ ಇರಿಸಿಕೊಂಡು ಮಿತಿಯನ್ನು ಮೀರುವುದು) ಕನ್ನಡದ ವಿಶಿಷ್ಟತೆ ಎಂಬುದಾಗಿ ಕನ್ನಡತನವನ್ನು ಗುರುತಿಸುವ, ಸ್ಪಷ್ಟಪಡಿಸುವ ಕೆಲಸ ಮಾಡಿದೆ. ಅಲ್ಲದೆ, ಕನ್ನಡದಲ್ಲಿ ದೇಸಿಗಳು ಹಲವಿವೆ ಎಂದು ಕನ್ನಡದ ಪ್ರಾದೇಶಿಕ ಭಾಷಾ ಭಿನ್ನತೆಗಳ ಕಡೆಗೂ ಗಮನ ಹರಿಸಿದೆ.
ಈ ಮೇಲಿನ ನಿದರ್ಶನದಿಂದ ಕನ್ನಡವು ಸಂಸ್ಕೃತದ ಸಂಪರ್ಕದಲ್ಲಿದ್ದರೂ, ಆಶ್ರಯದಲ್ಲಿದ್ದರೂ, ಕನ್ನಡದ್ದೇ ಆದ ಒಂದು ವ್ಯಕ್ತಿತ್ವ ಇದೆ ಎಂಬುದನ್ನು, ಕನ್ನಡದ ವಿಶಿಷ್ಟತೆಯನ್ನು ಮಂಡಿಸುವ ವಿಚಾರದಿಂದಾಗಿ, ಕನ್ನಡದ ಮಟ್ಟಿಗೆ, ಈ ಕೃತಿ ಕನ್ನಡದ ಮೊದಲ ಕನ್ನಡ ರಾಷ್ಟ್ರೀಯ ಕೃತಿಯಾಗಿದೆ. ಜೊತೆಗೆ ಕನ್ನಡ ರಾಷ್ಟ್ರೀಯತೆಯ ಸ್ವರೂಪ ಎಂಥದ್ದು ಎಂಬುದನ್ನೂ ಈ ಕೃತಿ ಸೂಕ್ಷ್ಮವಾಗಿ ಬಿಂಬಿಸಿದೆ.
ನವೋದಯ ಸಂದರ್ಭದಲ್ಲಿ ಕನ್ನಡ ರಾಷ್ಟ್ರೀಯತೆ: ಕರ್ನಾಟಕ ಏಕೀಕರಣ ಚಳವಳಿಯಾಗಿ
‘ಭಾರತ ರಾಷ್ಟ್ರೀಯತೆ’ ಮತ್ತು ಭಾರತದೊಳಗಿನ ಅನೇಕ ರಾಷ್ಟ್ರೀಯತೆಗಳು ಬ್ರಿಟಿಷ್ ವಸಾಹತುಶಾಹಿ ಸಂಸ್ಕೃತಿಗೆ ಒಡ್ಡಿದ ತೀವ್ರ ರೀತಿಯ ದೇಸಿ ಪ್ರತಿರೋಧಗಳು. ಕನ್ನಡ ರಾಷ್ಟ್ರೀಯತೆಯ ಜೊತೆಗೂಡಿ ಹೋರಾಡಿದರೆ, ಮತ್ತೊಂದೆಡೆ ಕರ್ನಾಟಕ ಮಟ್ಟದಲ್ಲಿ ತನ್ನ ನುಡಿ, ನೆಲ, ಜಲ, ಸಂಸ್ಕೃತಿ, ರಾಜಕೀಯ ಹಾಗೂ ಸಾಮಾಜಿಕ ಹಕ್ಕು ಬಾಧ್ಯತೆಗಾಗಿ, ಸಾಹಿತ್ಯಕ್ಕಾಗಿ, ಸಾಂಸ್ಕೃತಿಕವಾಗಿ ಹೋರಾಡಬೇಕಾದ ಐತಿಹಾಸಿಕ ಅನಿವಾರ್ಯತೆಯಿತ್ತು. ಹೀಗಾಗಿ ರಾಷ್ಟ್ರೀಯ ರಾಷ್ಟ್ರೀಯತೆ ಮತ್ತು ಭಾರತದ ಒಳಗೇ ಇರುವ ಅನೇಕ ರಾಷ್ಟ್ರೀಯತೆಗಳು ಒಟ್ಟಿಗೇ ಹರಿದುಬಂದವು.
ಕನ್ನಡ ರಾಷ್ಟ್ರೀಯತೆಯ ಭಾಗವಾಗಿ ಮೂಡಿದ್ದ ಕರ್ನಾಟಕ ಏಕೀಕರಣ ಚಳವಳಿ ವಿವಿಧ ಆಡಳಿತ ಪ್ರಾಂತಗಳಾಗಿದ್ದ ಕನ್ನಡ ಮಾತನಾಡುವ ಪ್ರಾಂತಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿತು. ಅಂದಿನ ಕನ್ನಡಿಗರನ್ನು ಮತ್ತು ಅವರ ನೆಲವನ್ನು ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯಿಂದಾಗಿ ಪರಸ್ಪರ ಸಂಬಂಧವಿಲ್ಲದ ಹಾಗೂ ಪರಸ್ಪರ ವೈರುಧ್ಯಗಳಿಂದ ಕೂಡಿದ ಆರು ಆಡಳಿತಗಳೊಳಗೆ ಹಂಚಿಬಿಟ್ಟಿದ್ದರು. ಕರ್ನಾಟಕದ ಪಶ್ಚಿಮದ ಕರಾವಳಿಯು ವಿದೇಶಗಳೊಂದಿಗೆ ನಮ್ಮ ಸುಲಭ ಸಂಬಂಧದ ಮಾರ್ಗವಾಗಿತ್ತು. ಅದು ಉತ್ತರದಲ್ಲಿ ಮುಂಬೈಯ ರಾಜಧಾನಿಯಾಗಿದ್ದ ಪ್ರಾಂತಕ್ಕೂ, ತೆಂಕಣ ಭಾಗವು ಪೂರ್ವ ಕರಾವಳಿಯ ಮದ್ರಾಸ್ ಪ್ರಾಂತಕ್ಕೂ ಸೇರಿಸಲ್ಪಟ್ಟಿದ್ದವು. ಆ ಎರಡು ರಾಜ್ಯಗಳು ಬಹುಭಾಷಾ ರಾಜ್ಯಗಳಾಗಿದ್ದವು. ಯಾರಿಗೂ ಯಾವ ಅಧಿಕಾರವೂ ಇಲ್ಲದೆ, ಎಲ್ಲರನ್ನೂ ಬ್ರಿಟಿಷರ ಅಡಿಯಾಳುಗಳನ್ನಾಗಿ ಇರಿಸುವ ಮತ್ತು ಎಲ್ಲ ಜನರನ್ನೂ ದುರ್ಬಲರನ್ನಾಗಿ ತುಳಿದಿಡುವ ವ್ಯವಸ್ಥೆಯಾಗಿತ್ತು. ಅದು ಕೊಡಗು, ಮೈಸೂರು, ಸೊಂಡೂರು, ರಾಮದುರ್ಗ ಇತ್ಯಾದಿ ಆಶಿತ ರಾಜ್ಯಗಳಲ್ಲಿ ಹರಿದು ಹಂಚಲ್ಪಟ್ಟಿದ್ದುದಲ್ಲದೆ ನಾಲ್ಕು ಜಿಲ್ಲೆಗಳು ಮುಂಬೈ ಪ್ರಾಂತದೊಳಗೂ ಮೂರು ಜಿಲ್ಲೆಗಳು ಕನ್ನಡ ಭಾಷೆಗೆ ಪರದೇಶಿ ಎನಿಸಿದ್ದ ಹೈದರಾಬಾದ್ ಸಂಸ್ಥಾನಗೊಳಗೂ ಸೇರಿದ್ದವು.
ಹಳೆಯ ಮೈಸೂರಿನ ಕನ್ನಡಿಗರಿಗೂ ಹಾಗೂ ಉತ್ತರ ಕರ್ನಾಟಕದ ಕನ್ನಡಿಗರಿಗೂ ಕರ್ನಾಟಕತ್ವದ ವಿಕಾಸದ ನೆಲೆಗಳಲ್ಲಿ ಹೆಚ್ಚಿನ ಭಿನ್ನತೆಗಳಿವೆ. ಅಂದರೆ ನಾಡು, ನುಡಿ, ಸಂಸ್ಕೃತಗಳ ಬಗ್ಗೆ ಪ್ರತಿಕ್ರಿಯಿಸಿದವರ ಪೈಕಿ ಉತ್ತರ ಕರ್ನಾಟಕದ ಅದರಲ್ಲೂ ಮುಂಬಯಿ ಕನ್ನಡಿಗರದು ತೀವ್ರವಾದ ರೀತಿಯದು. ಇದಕ್ಕೆ ಈ ಭಾಗದವರಲ್ಲಿದ್ದಂಥ ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆ, ಒತ್ತಡಗಳು ಮುಖ್ಯವಾದ ಕಾರಣಗಳಾಗಿವೆ. ಈ ರೀತಿಯ ಒತ್ತಡಗಳು ಮೈಸೂರಿನ ಕನ್ನಡಿಗರಿಗೆ ಇರಲಿಲ್ಲ. ಮೈಸೂರು ಪ್ರಾಂತ ಕನ್ನಡ ಭಾಷಿಕರೇ ಬಹುಸಂಖ್ಯಾತರಿದ್ದ ಸಮುದಾಯವಾಗಿದ್ದು, ಪರೋಕ್ಷವಾಗಿ ಬ್ರಿಟಿಷ್ ಆಡಳಿತದಲ್ಲಿ, ಪ್ರತ್ಯಕ್ಷವಾಗಿ ಮಹಾರಾಜರ, ದಿವಾನರುಗಳ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷ್ ಕರ್ನಾಟಕದಲ್ಲಿನ ಜನರ ತುಡಿತಕ್ಕೂ, ಮೈಸೂರು ಸಂಸ್ಥಾನಿ ಜನರ ತುಡಿತಕ್ಕೂ ಬಹಳ ಭಿನ್ನತೆಗಳಿವೆ. ಮೈಸೂರು ಸಂಸ್ಥಾನ ಅನೇಕ ಕುಂದುಕೊರತೆಗಳನ್ನು ಮೀರಿ ಅಭಿವೃದ್ಧಿಯ ಕಡೆಗೆ ಮುನ್ನಡೆಯುತ್ತಿತ್ತು. ಅಲ್ಲಿ ರಾಷ್ಟ್ರೀಯ ಪ್ರಜ್ಞೆ ಎಂಬುದು ಭಾಷಾವಾರು ಪ್ರಾಂತ ರಚನೆಯ ಬೇಡಿಕೆ ಅಥವಾ ಕನ್ನಡ ಶಿಕ್ಷಣದ ಹರಡುವಿಕೆ ಎಂಬ ರೂಪಗಳನ್ನು ಪಡೆದುಕೊಳ್ಳದೆ, ‘20ನೇ ಶತಮಾನದ ಮೊದಲ ದಶಕಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಜಾತಿ ಸಮುದಾಯಗಳ ಪ್ರಾತಿನಿಧ್ಯ ಪ್ರಶ್ನೆಯಾಗಿ, ಬ್ರಾಹ್ಮಣ ವಿರೋಧಿ ಆಶಯವಾಗಿ ಕಾಣಿಸಿಕೊಂಡಿತು’. ಅದು ತನ್ನ ಸತ್ವದಲ್ಲಿ ರಾಷ್ಟ್ರೀಯತಾ ಸಮದಾಯದ ಪ್ರಜಾತಾಂತ್ರೀಕರಣ ಪ್ರಕ್ರಿಯೆಯ ಆಶೋತ್ತರವಾಗಿದ್ದರೂ, ನಿರ್ದಿಷ್ಟವಾಗಿ ಕರ್ನಾಟಕದ ರಚನೆ, ಕನ್ನಡ ಭಾಷೆಗಾಗಿ ಪ್ರಯತ್ನಗಳು ಇತರ ಭಾಗಗಳಿಗಿಂತ ತಡವಾಗಿ ರೂಪುಗೊಳ್ಳತೊಡಗಿದವು.
ಭಾರತದಲ್ಲಿ ಭಾರತೀಯರ ಹಕ್ಕು ಬಾಧ್ಯತೆಗಳಿಗಾಗಿ ಸ್ವಾತಂತ್ರಕ್ಕಾಗಿ ಹೋರಾಟ ಆರಂಭವಾದಾಗಲೇ, ಪ್ರಭುತ್ವ ಭಾಷೆಯ ವಿರುದ್ಧ, ದೇಸಿ ಭಾಷೆಯ ಪ್ರಜ್ಞೆಯು ಜಾಗೃತಗೊಂಡದ್ದು ಸಹಜವೇ ಆಗಿತ್ತು.
ತಮ್ಮ ಅನುಕೂಲಕ್ಕಾಗಿ ಬ್ರಿಟಿಷ್ ಅಧಿಕಾರಿಗಳು ಜನತೆಯ ಜೀವನಾಡಿಯಾದ ಭಾಷೆಯನ್ನು, ತಮ್ಮ ಚದುರಂಗದ ಕಾಯಿಗಳನ್ನಾಗಿ ಮಾಡಿಕೊಂಡು ದಬ್ಬಾಳಿಕೆ ನಡೆಸಿದರು. ಇದರ ವಿರುದ್ಧ ಜನತೆ ಹೋರಾಡುವುದು ಅನಿವಾರ್ಯವಾಗಿತ್ತು. ಕರ್ನಾಟಕದ ಉತ್ತರ ಭಾಗಗಳಲ್ಲೂ, ವಿಶೇಷವಾಗಿ ಮುಂಬೈ ಅಧಿಪತ್ಯಕ್ಕೆ ಸೇರಿದ ಭಾಗಗಳ ಜನರಿಗೆ ಕಳೆದು ಹೋಗುತ್ತಿರುವ ತಮ್ಮ ಭಾಷಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅರಿವಾಯಿತು. ಇವು ಅವರ ಸಂಘಟಿತ ಪ್ರಯತ್ನಕ್ಕೆ ಪ್ರೇರಣೆ ನೀಡಿದವು.
ರಾಷ್ಟ್ರೀಯ ಚಳವಳಿಯ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಭಾಷಾವಾರು ಪ್ರಾಂತ ಸಮಿತಿಗಳನ್ನು ರಚಿಸಿದ ಕ್ರಮ, ದೇಶಿಭಾಷೆ, ಸಾಹಿತ್ಯಗಳ ಬೆಳವಣಿಗೆಗೆ ಅಪಾರ ನೈತಿಕ ಬೆಂಬಲ ನೀಡಿತು. ಇದರಿಂದ ಹರಿದು ಹಂಚಿಹೋಗಿದ್ದ ಕನ್ನಡನಾಡು, ಕನ್ನಡ ರಾಷ್ಟ್ರೀಯತೆ ಒಂದುಗೂಡುವ ಭರವಸೆ ಮೂಡಿತು. ಕನ್ನಡ ರಾಷ್ಟ್ರೀಯತೆ, ಭಾರತ ರಾಷ್ಟ್ರೀಯತೆಯ ವಿರೋಧಿಯಲ್ಲ. ಅದರ ಒಂದು ಭಾಗ, ‘ಭಾರತಮಾತೆಯ ಮಗ’ಎನ್ನುವ ಭಾವನೆ ದಟ್ಟವಾಗುವುದರೊಂದಿಗೆ, ಕರ್ನಾಟಕದ ಏಕೀಕರಣ ಚಳವಳಿ ಪ್ರಯತ್ನಗಳೂ ಚುರುಕುಗೊಂಡವು. ವಸಾಹತುಶಾಹಿಯು ಒಡ್ಡಿದ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಪ್ರಭುತ್ವವನ್ನು ಕಿತ್ತೊಗೆಯಲು ಎಲ್ಲರೂ ಮುಂದಾದರು.
ಮೇಲಿನ ಚಿಂತನೆಗಳು ‘ಕನ್ನಡ ರಾಷ್ಟ್ರೀಯತೆ’ಯ ಪ್ರತೀಕಗಳು. ಕನ್ನಡ ಭಾಷೆ, ಸಾಹಿತ್ಯ ಸಮೃದ್ಧವಾಗಿ ಬೆಳೆಯಬೇಕು ಮತ್ತು ಅದಕ್ಕೆ ಕ್ರಿಯಾತ್ಮಕವಾಗಿ ತೊಡಗಿಕೊಳ್ಳುವಿಕೆ ಅಗತ್ಯವೆಂಬ ಚಿಂತನೆಯೊಳಗೇ ಕನ್ನಡ ರಾಷ್ಟ್ರೀಯತಾ ಭಾವನೆಗಳು ಕೆಲಸ ಮಾಡಿವೆ. ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಇಂತಹ ಪ್ರಯತ್ನಗಳನ್ನು ಮಾಡಿತು.
1928ರಲ್ಲಿ ನೆಹರೂ ಸಮಿತಿಯು ವ್ಯಕ್ತಪಡಿಸಿದ ಅಭಿಪ್ರಾಯವು ಭಾಷಾವಾರು ಪ್ರಾಂತಗಳ ಬಗ್ಗೆ ಬಹಳ ಮುಖ್ಯವಾದುದಾಗಿದೆ. ಆ ವರದಿಯ ಮುಖ್ಯಾಂಶದಲ್ಲಿ ಭಾಷಾವಾರು ಪ್ರಾಂತಗಳನ್ನು ಮರಳಿ ರಚಿಸುವ ಅಗತ್ಯಗಳನ್ನು ಒತ್ತಿ ಹೇಳಿದುದಲ್ಲದೆ, ಅದಕ್ಕೆ ಆಧಾರವಾಗಿ ಭಾಷಾತತ್ವ ಹಾಗೂ ಆಯಾ ಪ್ರದೇಶದ ಬಹುಸಂಖ್ಯಾತ ಜನತೆಯ ಇಚ್ಛೆಯನ್ನರಿತು ಕಾರ್ಯಕೈಗೊಳ್ಳುವುದು ಉಚಿತವೆಂದು ತಿಳಿಸಲಾಗಿದೆ.
ಅಂದಿನ ಭಾಷಿಕ ಹಿನ್ನೆಲೆಯ ಚಟುವಟಿಕೆಗಳಾದ ಒಡಿಶಾದಲ್ಲಿ ‘ಉತ್ಕಲ ಐಕ್ಯ ಪರಿಷತ್’, ಬಂಗಾಳದಲ್ಲಿ ‘ವಂಗೀಯ ಸಾಹಿತ್ಯ ಪರಿಷತ್’ಗಳಂಥ ಸಂಘಟನೆಗಳ ಸ್ಥಾಪನೆಯು, ಕನ್ನಡಿಗರನ್ನು ಕ್ರಿಯಾಶ್ರೀಲರಾಗುವಂತೆ ಮಾಡಿದವು. ಪರಿಣಾಮವಾಗಿ 1892ರಲ್ಲಿ ‘ಕರ್ನಾಟಕ ಭಾಷೋಜ್ಜೀವಿತ ಸಭಾ’ ಸ್ಥಾಪನೆಗೊಂಡಿತು. ಇದರ ಅಡಿಯಲ್ಲೂ ಕರ್ನಾಟಕತ್ವದ ಸಂಘಟನೆಯ ಪ್ರಯತ್ನಗಳು ನಡೆದವು.
ಭೌಗೋಳಿಕವಾಗಿ, ರಾಜಕೀಯವಾಗಿ ಛಿದ್ರವಾಗಿದ್ದ ಕನ್ನಡ ಪ್ರದೇಶಗಳು ಒಂದುಗೂಡಬೇಕೆಂಬ ಸದಾಶಯ ಗಳಗನಾಥರ ಕೃತಿಗಳಲ್ಲಿ, ಆಲೂರರ ಚಿಂತನೆಗಳಲ್ಲಿ, ಶಂ.ಬಾ. ಜೋಶಿಯವರ ಸಂಸ್ಕೃತಿ ಸಂಶೋಧನೆಯಲ್ಲಿ ಎದ್ದು ಕಾಣುತ್ತದೆ. ಕರ್ನಾಟಕದ ಏಕೀಕರಣಕ್ಕೆ ಇವರ ಭಾವನಾತ್ಮಕ ಹಾಗೂ ತಾತ್ವಿಕ ಚಿಂತನೆಗಳು ಮಹತ್ವದ ಪರಿಣಾಮವನ್ನುಂಟು ಮಾಡಿದವು. ಆ ಹೊತ್ತಿನ ಕನ್ನಡ, ಕರ್ನಾಟಕತ್ವದ ಜರೂರು ಬಿ.ಎಂ. ಶ್ರೀಕಂಠಯ್ಯನವರಿಂದ ಮೊದಲುಗೊಂಡು ಹಿರಿಯ ತಲೆಮಾರಿನ ಎಲ್ಲ ಲೇಖಕರಲ್ಲಿ ಸ್ಥಾಯಿಯಾಗಿ ಕೆಲಸ ಮಾಡಿದೆ.
ಹೈದರಾಬಾದ್ ಪ್ರಾಂತದ ಕನ್ನಡಿಗರು ‘ಏಕೀಕರಣ’ದ ವಿಷಯದಲ್ಲಿ ಕನಸುಗಳ ಮಹಲನ್ನೇ ಕಟ್ಟಿದರು. ಹುಯಿಲಗೋಳ ನಾರಾಯಣರಾಯರು ‘‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’’ ಈ ಹಾಡನ್ನು ಕಟ್ಟಿ ಹಾಡಿದರು. ಈ ಹಾಡು ನಾಡಿನುದ್ದಕ್ಕೂ ಮೊಳಗಿತು. ಇದೇ ಕಾಲದಲ್ಲಿ ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು ಮುಂತಾದವರು ಪತ್ರಿಕೆಗಳನ್ನು ಹೊರಡಿಸಿ, ಜನರಲ್ಲಿ ಕನ್ನಡದ ಅಭಿಮಾನ ತುಂಬಿ, ಹೊಸ ಚೈತನ್ಯ ಮೂಡಲು ಕಾರಣರಾದರು. ಮೈಸೂರಿನ ಕಡೆ ತಾತಯ್ಯ ಎಂ. ವೆಂಕಟಕೃಷ್ಣಯ್ಯನವರು ಇಂತಹದ್ದೇ ಕನ್ನಡದ ಕೆಲಸವನ್ನು ನಡೆಸಿದರು.
ಬಿ.ಎಂ. ಶ್ರೀಕಂಠಯ್ಯನವರು 1911ರಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಾಡಿದ ಭಾಷಣ ಕನ್ನಡ ಮಾತು ತಲೆಯೆತ್ತುವ ಬಗೆ ಎಂಬುದರಲ್ಲಿ ಆಗಿನ ಕನ್ನಡದ ಸ್ಥಿತಿ-ಗತಿಯನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾರೆ;
‘‘ಎಲ್ಲೋ ಸಂಸ್ಕೃತದಲ್ಲಿ ಬರೆಯುವುದಕ್ಕೆ ಹೊರಟು, ಮರೆತು, ಕನ್ನಡದ ಪ್ರತ್ಯಯಗಳನ್ನು ಹತ್ತಿಸಿದ ಹಾಗೆ ಕಾಣುತ್ತದೆ. ಪುಟ್ಟವಾಗಿಯೂ, ಇಂಪಾಗಿಯೂ ತಿರುಳುಳ್ಳವಾಗಿಯೂ ಇರುವ ಕನ್ನಡ ಮಾತುಗಳನ್ನು ಮೂಲೆಗೆ ತಳ್ಳಿ... ಸಂಸ್ಕೃತವನ್ನು ಗಿಡಗಿ, ಕನ್ನಡಕ್ಕೆ ಸಲ್ಲದ ಕರ್ಮಣಿ ಪ್ರಯೋಗಗಳನ್ನು ಮಾಡಿ, ಜನರಿಂದ ಸಾಹಿತ್ಯವು ದೂರವಾಗುವಂತೆ ಮಾಡಿದ್ದಾರೆ. ಹೀಗಾಗಿ ‘ಇಂಗ್ಲಿಷ್ ಬಲ್ಲವರು ಎಳ್ಳಷ್ಟಾದರೂ ಹರ್ಷವಿಲ್ಲ, ಲಾಭವಿಲ್ಲ, ಎಲ್ಲಾ ಕೃತ್ರಿಮ ಅಸಂಬದ್ಧ’ ಎಂದು ಕೈಬಿಟ್ಟುಬಿಟ್ಟರು. ಸಂಸ್ಕೃತ ವಿದ್ವಾಂಸರಂತೂ ‘ಕನ್ನಡದಲ್ಲೇನಿದೆ ಸ್ವಾರಸ್ಯ, ಸಂಸ್ಕೃತದ ಎಂಜಲು, ಉಗಿದ ಕಬ್ಬಿನ ಸಿಪ್ಪೆ’ ಎಂದು ಧಿಕ್ಕರಿಸುತ್ತಾರೆ’’ ಎಂದು ಕನ್ನಡ ಭಾಷೆಯ ಅಧೋಃಗತಿಯನ್ನು ಪ್ರಸ್ತಾಪಿಸುತ್ತಾರೆ.
ಇಂತಹ ಪರಿಸ್ಥಿತಿಯಿಂದ ನಾವು ಕನ್ನಡವನ್ನು ಉದ್ಧಾರ ಮಾಡಬೇಕೆಂದು ಶ್ರೀಕಂಠಯ್ಯನವರುಯವರು ಚಿಂತಿಸಿ, ಅದಕ್ಕೆ ದಾರಿಯನ್ನು ಸೂಚಿಸಿದರು. ಅವರ ‘ಕನ್ನಡ ಮಾತು ತಲೆಯೆತ್ತುವ ಬಗೆ’- ಲೇಖನ ಇಂದಿಗೂ, ಕನ್ನಡ ಭಾಷಾ ಬೆಳವಣಿಗೆಯ ಕುರಿತ ಆಲೋಚನೆಯ ದೃಷ್ಟಿಯಿಂದ ತುಂಬ ಉಪಯುಕ್ತವಾಗಿದೆ.
ಮೇಲಿನ ವಿಚಾರಗಳೆಲ್ಲ ವಸಾಹತು ಪ್ರಭುತ್ವದ ವಿರುದ್ಧ ಹೋರಾಡುವ ತುರ್ತಿನ ಜೊತೆಗೆ ಕನ್ನಡ, ಕರ್ನಾಟಕ ತನ್ನ ಅಸ್ತಿತ್ವಕ್ಕಾಗಿ, ಭಾಷೆ, ಸಾಹಿತ್ಯ, ನೆಲ, ಜಲ, ಸಂಸ್ಕೃತಿಗಾಗಿ ಹೋರಾಡಬೇಕಾದ ಅಗತ್ಯವಿತ್ತು ಮತ್ತು ಅಂಥ ಸಂದರ್ಭದಲ್ಲಿ ಕರ್ನಾಟಕದ ಜನತೆ, ಪತ್ರಿಕೆಗಳು, ಸಾಹಿತಿಗಳು ‘ಕನ್ನಡ ರಾಷ್ಟ್ರೀಯತೆ’ಗಾಗಿ ದುಡಿದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.