ಹಸಿವಿನಿಂದ ಬಳಲುವಿಕೆಯೂ ಮತ್ತು ತಪ್ಪು ಆಹಾರ ಸೇವನೆಯೂ
ಭೂಮಿಯ ಮೇಲೆ ಲಭ್ಯವಿರುವ ಸಂಪನ್ಮೂಲಗಳನ್ನು ಸರಿದೂಗಿಸುತ್ತ ವಿಶ್ವದಲ್ಲಿರುವ ಎಲ್ಲರಿಗೂ ಆರೋಗ್ಯ ಪೂರ್ಣವಾದ ಆಹಾರ ಪೂರೈಸುವುದು ನಮಗೆ ಸಾಧ್ಯವಾಗದೆ ಇರಬಹುದು. ಯಾಕೆಂದರೆ ಮಾನವನ ಅಸ್ತಿತ್ವದ 200,000 ವರ್ಷಗಳಲ್ಲಿ ಮೊದಲ ಬಾರಿಗೆ ನಾವು, ಭೂಮಿಯ ಮೇಲಿರುವ ಮಾನವರು ಮತ್ತು ಪ್ರಕೃತಿಯ ನಡುವೆ ಇರಬೇಕಾದ ಸಮತೋಲನವನ್ನು ಕಳೆದುಕೊಂಡಿದ್ದೇವೆ. 2019ರ ಜನವರಿ 19ರಂದು ಪ್ರಕಟವಾದ ‘ ಆ್ಯಂತ್ರೊಪೊಸೀನ್’ ಪತ್ರಿಕೆಯಲ್ಲಿ ಆರೋಗ್ಯ ಪೂರ್ಣ/ ಸಮತೂಕದ ಆಹಾರಗಳು ಹಾಗೂ ತಾಳಿಕೊಳ್ಳಬಲ್ಲ ಆಹಾರ ವ್ಯವಸ್ಥೆಗಳ ಕುರಿತಾದ ಇಎಟಿ- ಲಾನ್ಸೆಟ್’’ ಆಯೋಗದ ಅಧ್ಯಯನದ ವರದಿ ನೀಡಿರುವ ಎಚ್ಚರಿಕೆ ಇದು.
ಒಂದು ವಿಶಿಷ್ಟವಾದ ಭೂಗರ್ಭಶಾಸ್ತ್ರೀಯ (ಜಿಯಾಲಜಿಕಲ್) ವಯಸ್ಸು ಹೊಂದಿರುವ ಭೂಮಿಯ ಮೇಲೆ ಮಾನವನ ಚಟುವಟಿಕೆಗಳು ಪರಿಸರ ಸಂಬಂಧಿ ಪರಿಣಾಮ ಬೀರಿದ ಕಾಲವನ್ನು ‘ಆ್ಯಯ್ರಪೊಸೀನ್’ ಎಂದು ವ್ಯಾಖ್ಯಾನಿಸಲಾಗಿದೆ.
16 ದೇಶಗಳ 37 ಮಂದಿ ತಜ್ಞರು ಎರಡು ವರ್ಷಗಳ ಕಾಲ ಸಹಯೋಗದೊಂದಿಗೆ ನಡೆಸಿದ ಅಧ್ಯಯನ ಅದು. ಅದರ ಪ್ರಕಾರ ವಿಶ್ವದಲ್ಲಿ 820 ಮಿಲಿಯ ಜನರಿಗೆ ಸಾಕಷ್ಟು ಆಹಾರ ದೊರಕುತ್ತಿಲ್ಲ; ಮತ್ತು ಇದಕ್ಕಿಂತ ಹೆಚ್ಚು ಮಂದಿ ಅವಧಿಪೂರ್ವ ಸಾವಿಗೆ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಆರೋಗ್ಯಯುತವಲ್ಲದ ಆಹಾರ ಸೇವಿಸುತ್ತಿದ್ದಾರೆ. ಅಲ್ಲದೆ, ಜನರ ಆಹಾರಾಭ್ಯಾಸಗಳನ್ನಾಧರಿಸಿರುವ ಜಾಗತಿಕ ಆಹಾರೋತ್ಪಾದನೆಯೇ ಮಾನವರು ಭೂಮಿಯಮೇಲೆ ಹಾಕುತ್ತಿರುವ ಒತ್ತಡಕ್ಕೆ ಅತ್ಯಂತ ದೊಡ್ಡ ಕಾರಣವಾಗಿದೆ; ಒತ್ತಡದ ಅತ್ಯಂತ ಬೃಹತ್ ವಿಧಾನವಾಗಿದೆ. ಪರಿಣಾಮವಾಗಿ ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಹಾಗೂ ಭೂವ್ಯವಸ್ಥೆಯ ಸುಭದ್ರತೆಗೆ ಬೆದರಿಕೆ ಉಂಟಾಗಿದೆ.
ನಮ್ಮ ದೋಷ ಪೂರಿತ ಆಹಾರ ವ್ಯವಸ್ಥೆಗಳಿಂದಾಗಿ ಸುಮಾರು ಒಂದು ಬಿಲಿಯ ಜನ ಹಸಿವಿನಿಂದ ಬಳಲುತ್ತಿದ್ದಾರೆ ಹಾಗೂ ಸುಮಾರು 2 ಬಿಲಿಯ ಜನ ವಿಪರೀತ ತಪ್ಪು ಆಹಾರ, ತಿನ್ನಬಾರದ ಆಹಾರ ಸೇವಿಸುತ್ತಿದ್ದಾರೆ ಎಂದಿದೆ 47 ಪುಟಗಳ ವರದಿ. ವರದಿಯ ಪ್ರಕಾರ, ‘‘ಕಳೆದ 50 ವರ್ಷಗಳಲ್ಲಿ ವಿಶ್ವದ ಪ್ರಮುಖ ಆಹಾರ ಕ್ರಮಗಳು ಪೌಷ್ಟಿಕಾಂಶಗಳ ದೃಷ್ಟಿಯಿಂದ ದೋಷಪೂರಿತವಾಗಿವೆ ಮತ್ತು ಅವುಗಳು ಹವಾಮಾನ ಬದಲಾವಣೆಗೆ ಪ್ರಧಾನ ಕಾರಣವಾಗಿವೆಯಲ್ಲದೆ ನೈಸರ್ಗಿಕ ಜೀವ ವೈವಿಧ್ಯದ ನಾಶದ ತೀವ್ರತೆಯನ್ನು ಹೆಚ್ಚಿಸುತ್ತಿದೆ; ಈ ಆಹಾರ ಕ್ರಮಗಳು ನಮಗೂ ಒಳ್ಳೆಯದಲ್ಲ, ಭೂಮಿಗೂ ಒಳ್ಳೆಯದಲ್ಲ.
ಕೃಷಿ ಉತ್ಪಾದನೆಯಿಂದ ಹೊರಸೂಸುವ ಮಿಥೇನ್ ಮತ್ತು ನೈಟ್ರಸ್ ಆಕ್ಸೈಡ್‌ನ ಪ್ರಮಾಣವು 5.0-5.8 ಗಿಗಾಟನ್‌ನಷ್ಟು ಇಂಗಾಲಾಮ್ಲ ಅನಿಲಕ್ಕೆ ಸಮಾನವೆಂದು ಅಂದಾಜಿಸಲಾಗಿದೆ. ಹಾಗೆಯೇ, ಕಾಡುಗಳ ನಾಶದಿಂದಾಗಿ ಉಂಟಾಗುವ ಇಂಗಾಲಾಮ್ಲ ಅನಿಲದ ಪ್ರಮಾಣವು 2.2-6.6 ಗಿಗಾಟನ್‌ಗಳಷ್ಟು ಎಂದು ಅಂದಾಜಿಸಲಾಗಿದೆ.
ಕಾರ್ಖಾನೆಗಳ ಬಗ್ಗೆ ಕೂಡ ವರದಿಯು ಆಕ್ಷೇಪಗಳನ್ನು ಅನುಮಾನಗಳನ್ನು ವ್ಯಕ್ತಪಡಿಸಿದೆ: ‘‘ಉದ್ಯಮಗಳು ಕೂಡ ಹಾದಿ ತಪ್ಪಿವೆ. ವಾಣಿಜ್ಯ ಮತ್ತು ರಾಜಕೀಯ ಹಿತಾಸಕ್ತಿಗಳು ಬೀರುವ ವಿಪರೀತ ಪ್ರಭಾವದಿಂದಾಗಿ ಮಾನವನ ಆರೋಗ್ಯ ಮತ್ತು ನಮ್ಮ ಗ್ರಹ(ಭೂಮಿ) ವಿನಾಶಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿದೆ.’’
ಆಹಾರ ಕ್ರಮದಲ್ಲಿ ಬದಲಾವಣೆಯಾಗಬೇಕಾದರೆ ಕೆಂಪು ಮಾಂಸ ಮತ್ತು ಸಕ್ಕರೆಯಂತಹ ಅನಾರೋಗ್ಯಕರ ಆಹಾರಗಳ ಸೇವನೆಯನ್ನು ಕನಿಷ್ಠ ಶೇ.50ರಷ್ಟಾದರೂ ಕಡಿತಗೊಳಿಸಬೇಕು. ಅಂದರೆ ದಿನವೊಂದರ 28 ಗ್ರಾಂ ಗಿಂತ ಹೆಚ್ಚು ಮಾಂಸ ಸೇವಿಸಬಾರದು. ಅದೇ ವೇಳೆ ಸ್ಥಳೀಯ ಪ್ರದೇಶವನ್ನವಲಂಬಿಸಿ ಬೇಳೆ ಕಾಳು, ಹಣ್ಣು, ಹಾಗೂ ತರಕಾರಿಗಳ ಸೇವನೆ ಶೇ. 100ರಷ್ಟು ಹೆಚ್ಚಾಗಬೇಕು. ಇದರಿಂದಾಗಿ ವಿಶ್ವದಾದ್ಯಂತ ಸಂಭವಿಸುವ ಅಕಾಲಿಕ ಮರಣಗಳನ್ನು ಶೇ.19ರಿಂದ 23ರಷ್ಟು ಕಡಿಮೆ ಮಾಡಲು ಕೂಡ ಸಾಧ್ಯವಾಗುತ್ತದೆ.
ಸಮಸ್ಯೆಯ ಪರಿಹಾರಕ್ಕೆ ವರದಿಯು ಬಹುರೀತಿಯ ತಂತ್ರಗಳನ್ನು ಸೂಚಿಸಿದೆ. ‘‘ಹೆಚ್ಚಿನ ಪ್ರಮಾಣದ ಆಹಾರೋತ್ಪಾದನೆಯ ಬದಲು ಆರೋಗ್ಯಕರವಾದ ಆಹಾರೋತ್ಪಾದನೆಗೆ ವಿಶ್ವದ ಕೃಷಿರಂಗದ ಆದ್ಯತೆಗಳು ಬದಲಾಗಬೇಕು’’ ಎನ್ನುತ್ತದೆ ವರದಿ. ಉತ್ತಮ ಗುಣಮಟ್ಟದ ಆಹಾರೋತ್ಪಾದನೆಗೆ ಬೆಳೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಗೊಬ್ಬರದ ಬಳಕೆಯ ದಕ್ಷತೆಯಲ್ಲಿ ತೀವ್ರವಾದ ಸುಧಾರಣೆ, ಗಂಧಕದ ಮರು ಉತ್ಪಾದನೆ ಇತ್ಯಾದಿ ಪರಿಹಾರಗಳನ್ನು ವರದಿ ಸೂಚಿಸಿದೆ.
ಭೂಮಿ ಮತ್ತು ಸಾಗರಗಳ ಪರಿಣಾಮಕಾರಿಯಾದ ಹಾಗೂ ಸಮನ್ವ ಯದಿಂದ ಕೂಡಿದ ನಿಭಾವಣೆ, ಆಡಳಿತ ಕೂಡಾ ಅನಿವಾರ್ಯ. ‘‘ಅಂತಹ ಆಡಳಿತವೆಂದರೆ ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ಹಾಳುಗೆಡವಿ ಹೊಸ ಕೃಷಿಭೂಮಿಯನ್ನು ನಿರ್ಮಿಸುವ ಯೋಜನೆಗೆ, ಯೋಜನೆಯ ಅನುಷ್ಠಾನಕ್ಕೆ ಅಂತ್ಯಹಾಡುವುದು; ಜೀವ ವೈವಿಧ್ಯಗಳಿಂದ ಶ್ರೀಮಂತವಾಗಿರುವ ಕಾಡುಗಳನ್ನು ರಕ್ಷಿಸುವುದು. ಈಗಾಗಲೆ ನಾಶವಾಗಿರುವ ಅಥವಾ ಪಾಳು ಬಿದ್ದಿರುವ ಅರಣ್ಯ ಜಮೀನುಗಳನ್ನು ಮರು- ಅರಣ್ಯೀಕರಣಗೊಳಿಸುವುದು, ಪುನರುಜ್ಜೀವನಗೊಳಿಸುವುದು ಮತ್ತು ಅಂತರ್‌ರಾಷ್ಟ್ರೀಯ ಭೂಮಿ-ಬಳಕೆ ಆಡಳಿತಕ್ಕೆ ಬೇಕಾದ ವ್ಯವಸ್ಥೆಗಳನ್ನು, ಮೆಕ್ಯಾನಿಸಮ್‌ಗಳನ್ನು ಸ್ಥಾಪಿಸುವುದು.’’ ಎಂದಿದೆ ವರದಿ.
ಆಹಾರೋತ್ಪಾದನೆಯ ಕ್ರಮಗಳಲ್ಲಿ ಬದಲಾವಣೆಗಳನ್ನು ತರುವ ಮೂಲಕ ಕೃಷಿ ಹಸಿರು-ಮನೆ ಅನಿಲ ಮಾಲಿನ್ಯವನ್ನು 2050ರ ವೇಳೆಗೆ 10 ಶೇಕಡಾದಷ್ಟು ಕಡಿಮೆ ಮಾಡಬಹುದು. ಸಸ್ಯ ಆಧಾರಿತ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಈ ಮಾಲಿನ್ಯ ವನ್ನು ಶೇ. 80ರಷ್ಟು ಕಡಿಮೆ ಮಾಡಬಹುದು’’ ಎಂದೂ ವರದಿ ಹೇಳಿದೆ. ಹವಾಮಾನ ಬದಲಾವಣೆಯ ಮಿತಿಯ ಒಳಗೇ ಉಳಿಯಬೇಕಾದಲ್ಲಿ ಸಸ್ಯ-ಆಧಾರಿತ ಆಹಾರಗಳನ್ನು ನಾವು ಸೇವಿಸಬೇಕು ಎಂಬುದು ಸಂಬಂಧಿತರೆಲ್ಲರೂ ಗಮನಿಸಬೇಕಾದ ವಿಷಯ.